ನಾಳಿನ ಅನಿಷ್ಟಗಳಿಗೆಲ್ಲ ಕಾರಣ ಇಂದಿನ ಗರಿಷ್ಠ

ಕಳೆದ ಒಂದು ವಾರದಲ್ಲಿ ಎಷ್ಟೊಂದು ಬಗೆಯ ಕುಸಿತಗಳು ಸಂಭವಿಸಿವೆ ಗಮನಿಸಿದಿರಾ? ಉತ್ತರ ಭಾರತದಲ್ಲಿ ಗ್ರಿಡ್ ಕುಸಿತದಿಂದಾಗಿ 20 ರಾಜ್ಯಗಳ 60 ಕೋಟಿ ಜನರ ಬದುಕೆಲ್ಲ ಅಸ್ತವ್ಯಸ್ತ. ರಸ್ತೆ, ರೈಲು, ವಾಯುಯಾನ ಅಸ್ತವ್ಯಸ್ತ; ಗಣಿಯಲ್ಲಿರುವವರು, ಎತ್ತರದ ಕಟ್ಟಡವಾಸಿಗಳು ಮೇಲಕ್ಕೇರಲಾರದೆ ಫಜೀತಿ.
ನೆರವಿನ ಹಸ್ತ ಚಾಚಿದವರಿಗೆ ಕೆಳಕ್ಕಿಳಿಯಲಾರದ ಸಂದಿಗ್ಧ. ಉತ್ತರ ಕಾಶಿಯಲ್ಲಿ ವಾಯುಭಾರ ಕುಸಿತದಿಂದ ಗುಡ್ಡ ಕುಸಿತ, ರಸ್ತೆ-ಸೇತುವೆ ಕುಸಿತ, ಬಹುಮಹಡಿ ಕಟ್ಟಡ ಕುಸಿತ. ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಆಡಳಿತ ಕುಸಿತ, ಸಾಮಾಜಿಕ ಭದ್ರತೆಯ ಕುಸಿತ. `ಕ್ಯೂರಿಯಾಸಿಟಿ~ ಶೋಧನೌಕೆ ಮಂಗಳನ ನೆಲಕ್ಕಿಳಿಯುವ ಸಂದರ್ಭದಲ್ಲಿ ಅಸಂಖ್ಯ ಕುತೂಹಲಿಗಳಿಂದಾಗಿ `ನಾಸಾ~ ಸಂಸ್ಥೆಯ ಜಾಲತಾಣವೇ ಕುಸಿತ.
ಹಠಾತ್ ಕುಸಿತವೆಂದು ನಾವು ಹಣೆಪಟ್ಟಿ ಕಟ್ಟುವ ಯಾವ ಕುಸಿತವೂ ಹಠಾತ್ತಾಗಿರುವುದಿಲ್ಲ. ಕುಸಿತದ ಪೂರ್ವ ಸಿದ್ಧತೆ ನಿಧಾನವಾಗಿಯೇ ಆಗುತ್ತಿರುತ್ತದೆ. ಅದನ್ನು ಗಮನಿಸಲು, ಪ್ರತಿಬಂಧಿಸಲು ನಮಗೆ ಪುರುಸೊತ್ತಿರುವುದಿಲ್ಲ ಅಷ್ಟೆ. ಉತ್ತರ ಭಾರತದ ಗ್ರಿಡ್ ಕುಸಿತವನ್ನೇ ನೋಡೋಣ: ರಾಜ್ಯಗಳು ತಂತಮ್ಮ ನಿಗದಿತ ಮಿತಿಗಿಂತ ಹೆಚ್ಚಿನ ವಿದ್ಯುತ್ತನ್ನು ಸೆಳೆದಿದ್ದರಿಂದಲೇ ಕುಸಿತ ಆಗಿದೆಯೆಂದು ಎಲ್ಲ ನಾಯಕರೂ ಗಿಣಿಪಾಠ ಒಪ್ಪಿಸಿದ್ದಾರೆ.
ಹಾಗೆ ಹೆಚ್ಚುವರಿ ವಿದ್ಯುತ್ತನ್ನು ಸೆಳೆದವರು ಯಾರೂ ಅಬ್ಬೇಪಾರಿಗಳಲ್ಲ. ಎಲ್ಲ ಗೊತ್ತಿ(ರಬೇಕಿ)ದ್ದ ಇಲೆಕ್ಟ್ರಿಕಲ್ ಎಂಜಿನಿಯರುಗಳೇ ತಾನೆ? ಅವರಿಗೆ ಪೀಕ್‌ಲೋಡ್ ಎಂದರೆ ಏನೆಂದು ಗೊತ್ತಿರಲಿಲ್ಲವೆ?
ವಿದ್ಯುತ್ ವಿತರಣೆಯಲ್ಲಿ `ಮಾಮೂಲು ಒತ್ತಡ~ (ಬೇಸ್ ಲೋಡ್) ಮತ್ತು `ಗರಿಷ್ಠ ಒತ್ತಡ~ (ಪೀಕ್ ಲೋಡ್) ಎಂಬ ಎರಡು ವಿಧಗಳಿವೆ. ನಗರದ ರಸ್ತೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ವಿಪರೀತ ವಾಹನ ದಟ್ಟಣೆ ಇರುವ ಹಾಗೆ ವಿದ್ಯುತ್ ಸಂಚಾರದಲ್ಲೂ ನಿಗದಿತ ಸಮಯದ ಏರಿಳಿತ ಇರುತ್ತದೆ.
ಬೆಳಗಿನ ಹೊತ್ತಿನಲ್ಲಿ ಮನೆಮನೆಯಲ್ಲಿ ಬಿಸಿನೀರಿನ ಸ್ನಾನಕ್ಕೆಂದು ಗೀಸರ್ ಚಾಲನೆ, ಮಿಕ್ಸಿ-ಗ್ರೈಂಡರ್‌ಗಳಿಗೆ ಚಾಲನೆ, ಇಸ್ತ್ರಿಪೆಟ್ಟಿಗೆಗಳಿಗೆ ಕಾವು ಇವೆಲ್ಲವುಗಳಿಂದಾಗಿ ವಿದ್ಯುತ್ತಿಗೆ ಅತಿ ಬೇಡಿಕೆ ಉಂಟಾಗುತ್ತದೆ. ಹಾಗೆಯೇ ಸಂಜೆ ಏಳರಿಂದ ರಾತ್ರಿ ಹತ್ತರವರೆಗೆ ಬೆಳಕು, ಟಿವಿ, ಅಡುಗೆಗೆ ವಿದ್ಯುತ್ತಿನ ಅತಿ ಬೇಡಿಕೆ ಇರುತ್ತದೆ.
ದಿನದ ಇನ್ನುಳಿದ ಸಮಯದಲ್ಲಿ ಮಾಮೂಲು ಒತ್ತಡದಲ್ಲಿ ಕರೆಂಟ್ ಹರಿಯುತ್ತಿದ್ದರೆ ಸಾಕು. ಅತಿ ಒತ್ತಡದ (ಪೀಕ್ ಲೋಡ್) ಬೇಡಿಕೆಯ ಸಮಯದಲ್ಲಿ ಅದಕ್ಕೆಂದೇ ಹೆಚ್ಚುವರಿ ವಿದ್ಯುತ್ ಉತ್ಪಾದಿಸಬಲ್ಲ ವ್ಯವಸ್ಥೆ ಇರಬೇಕು. ಕಲ್ಲಿದ್ದಲು, ಲಿಗ್ನೈಟ್ ಅಥವಾ ಪರಮಾಣು ಸ್ಥಾವರಗಳಲ್ಲಿ ಬೇಕೆಂದಾಗ ಹಾಗೆಲ್ಲ ಜಾಸ್ತಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುವುದಿಲ್ಲ.
ಏಕೆಂದರೆ ಬೆಂಕಿ ಉರಿಸಿ, ಭಾರೀ ಹಂಡೆಗಳಲ್ಲಿ ನೀರು ಕುದಿಸಿ, ಉಗಿಚಕ್ರಗಳನ್ನು ತಿರುಗಿಸಲು ದಿನಗಟ್ಟಲೆ ಸಿದ್ಧತೆ ಬೇಕಾಗುತ್ತದೆ. ಒಮ್ಮೆ ಚಾಲೂ ಮಾಡಿದರೆ ಅವು ಒಂದೇ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿರುತ್ತವೆ. ಮೊದಲೇ ಜಾಸ್ತಿ ಉತ್ಪಾದನೆ ಮಾಡಿ ಇಟ್ಟುಕೊಳ್ಳಲೂ ಸಾಧ್ಯವಿಲ್ಲ; ಹೊರಹಾಕುತ್ತಲೇ ಇರಬೇಕಾಗುತ್ತದೆ.
ಇವೆಲ್ಲ ಅನಿಷ್ಟಗಳುಳ್ಳ ಕಲ್ಲಿದ್ದಲೇ ನಮ್ಮ ದೇಶದ ಶೇಕಡಾ 80ರಷ್ಟು `ಬೇಸ್ ಲೋಡ್~ ವಿದ್ಯುತ್ತನ್ನು ಉತ್ಪಾದಿಸುತ್ತಿದೆ. ತನ್ನ ಉರಿಯ ಜತೆ ವಿಪರೀತ ಹೊಗೆಮಸಿ ಮತ್ತು ವಿಷಾನಿಲಗಳನ್ನು ಉತ್ಪಾದಿಸುತ್ತ ಭೂಮಂಡಲವನ್ನು ಬಿಸಿ ಮಾಡುತ್ತ ಋತುಮಾನಗಳ ಏರುಪೇರಿಗೂ ಕಾರಣವಾಗುತ್ತಿದೆ.
ದಿನದ ಗರಿಷ್ಠ ಬೇಡಿಕೆಗೆ ಸರಿಯಾಗಿ ವಿದ್ಯುತ್ ಉತ್ಪಾದನೆ ಹೆಚ್ಚಿಸಬೇಕೆಂದರೆ ಅದು ಜಲವಿದ್ಯುತ್ತಿನಿಂದ ಸಾಧ್ಯವಿದೆ. ಅಥವಾ ನೈಸರ್ಗಿಕ ಅನಿಲದಿಂದ ಸಾಧ್ಯವಿದೆ. ಸೌರವಿದ್ಯುತ್ತಿನಿಂದಲೂ ಸಾಧ್ಯವಿದೆ. ಜಲವಿದ್ಯುತ್ತಿನ ಚಮತ್ಕಾರ ಏನೆಂದರೆ ನೀರಿನ ಕವಾಟ ತೆರೆದರೆ ಚಕ್ರ ತಿರುಗುತ್ತದೆ.
ಬೇಕೆಂದಾಗ ಗ್ರಿಡ್‌ಗೆ ಹೆಚ್ಚುವರಿ ವಿದ್ಯುತ್ ಹರಿಸಿ ಸಾಕೆನಿಸಿದ ತಕ್ಷಣ ಚಕ್ರವನ್ನು ನಿಲ್ಲಿಸಬಹುದು. ಆದರೆ ನಮ್ಮ ದುರದೃಷ್ಟಕ್ಕೆ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ತೀರ ಜಾಸ್ತಿ ಇದ್ದಾಗಲೇ ಜಲಾಶಯಗಳು ಖಾಲಿಯಾಗಿರುತ್ತವೆ. ಸ್ವಿತ್ಸರ್ಲೆಂಡಿನಂಥ ಸುಧಾರಿತ ದೇಶಗಳಲ್ಲಿ ವಿದ್ಯುತ್ತಿಗೆ ಗರಿಷ್ಠ ಬೇಡಿಕೆ ಇರುವಾಗ ಮಾತ್ರ ಜಲಾಶಯದಿಂದ ನೀರನ್ನು ಧುಮುಕಿಸಿ ವಿದ್ಯುತ್ ಉತ್ಪಾದನೆ ಮಾಡುತ್ತಾರೆ.
ಮತ್ತೆ ಅದೇ ನೀರನ್ನು ಬೇಸ್ ಲೋಡ್‌ನಿಂದ ಮೇಲಕ್ಕೆತ್ತಿ ಜಲಾಶಯವನ್ನು ತುಂಬಿಸುತ್ತಾರೆ. ನಮ್ಮಲ್ಲಿ ಅಂಥ ವ್ಯವಸ್ಥೆ ಇಲ್ಲ. ಇನ್ನು ನೈಸರ್ಗಿಕ ಅನಿಲದಿಂದ ವಿದ್ಯುತ್ ಉತ್ಪಾದನೆಗೆಂದು ಇದೀಗ ಕೊಳವೆ ಜಾಲವನ್ನು ನಿರ್ಮಿಸಲಾಗುತ್ತಿದೆ. ಅದೂ ದೇಶಕ್ಕೆಲ್ಲ ಸಾಲುವಷ್ಟು ಸಾಧ್ಯವಿಲ್ಲ.
ಓಮನ್ ದೇಶದಿಂದ ದೊಡ್ಡ ಪ್ರಮಾಣದಲ್ಲಿ ಅನಿಲವನ್ನು ತರಿಸುವ ಯೋಜನೆಯೊಂದು ಇನ್ನೇನು ಜಾರಿಗೆ ಬಂತೆನ್ನುವಾಗ ಅಮೆರಿಕ ಅಡ್ಡಗಾಲು ಹಾಕಿದೆ. ಸುರಕ್ಷಿತ, ಅಗ್ಗದ ಅನಿಲದ ಬದಲು ದುಬಾರಿಯ, ಅಪಾಯಕಾರಿ ಪರಮಾಣು ಜಾಲದಲ್ಲಿ ನಮ್ಮನ್ನೆಲ್ಲ ಸಿಲುಕಿಸಿ ಒಬಾಮಾ ಕೈಕುಲುಕಿ ಹೋಗಿದ್ದಾರೆ.
ವಿದ್ಯುತ್ ಸ್ಥಾವರಗಳ ಗಾತ್ರ ದೊಡ್ಡದಾದಷ್ಟೂ ಗ್ರಿಡ್ ಕುಸಿತ ಸಂಭವ ಹೆಚ್ಚುತ್ತ ಹೋಗುತ್ತದೆ. ನಮ್ಮ ಮುಂದಿರುವ ಬೃಹತ್ ಯೋಜನೆಗಳೆಲ್ಲವೂ ಸೂಪರ್, ಅಲ್ಟ್ರಾ ಸೂಪರ್‌ಸ್ಥಾವರಗಳವೇ ಆಗಿವೆ. ಇದುವರೆಗೆ ಸುರಕ್ಷಿತವಾಗಿದ್ದ ದಕ್ಷಿಣದ ಗ್ರಿಡ್‌ನಲ್ಲೂ ನಾಳೆ ಕುಸಿತ ಸಂಭವಿಸಬಹುದು.
ನಮ್ಮ ಬದುಕಿನ ಸಣ್ಣಸಣ್ಣ ಅಗತ್ಯಗಳಿಗೂ ಗ್ರಿಡ್‌ಗಳ ವಿದ್ಯುತ್ತನ್ನೇ ಅವಲಂಬಿಸುತ್ತ ಹೋದಂತೆ ರಾಷ್ಟ್ರಮಟ್ಟದ ಕುಸಿತವೆಂಬುದು ಬೇರುಮಟ್ಟದ ಕುಸಿತವೇ ಆಗುತ್ತದೆ. ಕಳೆದ ವಾರ ದಿಲ್ಲಿಯಲ್ಲಿ ಗ್ರಿಡ್ ಕುಸಿತದಿಂದಾಗಿ ರಸ್ತೆ ಸಿಗ್ನಲ್‌ಗಳೆಲ್ಲ ಕೈಕೊಟ್ಟಾಗ ಲಕ್ಷುರಿ ಕಾರಿನಲ್ಲಿದ್ದ ಕೋಟ್ಯಧೀಶನೂ ಉಚ್ಚೆ ಹೊಯ್ಯುವ ಸ್ವಾತಂತ್ರ್ಯವನ್ನು ಕಳೆದುಕೊಂಡಿರಲಿಲ್ಲವೆ? ಮುಂಬರುವ ದಿನಗಳಲ್ಲಿ ನಮ್ಮ ಸವಲತ್ತುಗಳೇ ನಮ್ಮನ್ನು ಕೈದಿಗಳನ್ನಾಗಿ ಮಾಡುತ್ತವೆ.
ನಮ್ಮ ಸ್ವಾತಂತ್ರ್ಯಹರಣಕ್ಕೆ ನಾವೆಲ್ಲ ಅಮೆರಿಕದ ಅಧ್ಯಕ್ಷರನ್ನೊ ಜರ್ಮನಿಯ ಚಾನ್ಸಲರರನ್ನೊ ದೂರುವ ಸಂದರ್ಭ ಬರುತ್ತದೆ.ಸಂಜೆ-ಮುಂಜಾನೆಯ ವಿದ್ಯುತ್ ಹಸಿವೆಯನ್ನು ಹಿಂಗಿಸಲು ಒಂದು ಉಪಾಯ ಇದೆ: ಅದೇನೆಂದರೆ ಸಂಜೆ- ಮುಂಜಾನೆಗಳ ವೇಳಾಪಟ್ಟಿಯನ್ನೇ ಬದಲಿಸುವುದು! ಇಡೀ ಈ ವಿಶಾಲ ದೇಶಕ್ಕೆ ಒಂದೇ ಗಡಿಯಾರ ಇದ್ದುದರಿಂದಲೇ ಏಕಕಾಲಕ್ಕೆ ವಿದ್ಯುತ್ ಬೇಡಿಕೆ ಗರಿಷ್ಠಕ್ಕೇರುತ್ತದೆ.
ಅರುಣಾಚಲ ಪ್ರದೇಶದಲ್ಲಿ ಅರುಣೋದಯಕ್ಕೆ ಮುನ್ನವೇ ಸ್ನಾನಕ್ಕೆ ಹೋಗಬೇಕು. ರಾಜಸ್ತಾನದ ಜೈಸಾಲ್ಮೇರ್‌ನಲ್ಲಿ ಇಳಿಬಿಸಿಲಿರುವಾಗಲೇ `ಸೀತಾ~ ಧಾರಾವಾಹಿಗೆ ಟಿವಿ ಹಚ್ಚಬೇಕು. ಏಕೆಂದರೆ ಶಾಲೆ, ರೈಲು, ಟಿವಿ ಧಾರಾವಾಹಿ ಹಾಗೂ ಕಚೇರಿಯ ವೇಳಾಪಟ್ಟಿಯೆಲ್ಲ ಇಡೀ ದೇಶಕ್ಕೆ ಒಂದೇರೀತಿ ಇದೆ.
ಪೂರ್ವ ಮತ್ತು ಪಶ್ಚಿಮ ಭಾರತದ ಪ್ರಜೆಗಳ ಪಾಲಿಗೆ ದೇಹದ ಗಡಿಯಾರಕ್ಕೂ ದೇಶದ ಗಡಿಯಾರಕ್ಕೂ ಹೊಂದಾಣಿಕೆಯೇ ಇಲ್ಲದಂತಾಗಿದೆ. ದೇಶದ ಪೂರ್ವಾರ್ಧದ ಗಡಿಯಾರವನ್ನು ಈಗಿಗಿಂತ ಒಂದು ಗಂಟೆ ಮುಂದಕ್ಕೆ ಹಾಕಿ, ಪಶ್ಚಿಮದ ಗಡಿಯಾರವನ್ನು ಒಂದು ಗಂಟೆ ಹಿಂದಕ್ಕೆ ಚಲಿಸುವಂತೆ ಮಾಡಿದರೆ ವಿದ್ಯುತ್ತಿನ ಗರಿಷ್ಠ ಬೇಡಿಕೆಯನ್ನೂ ಮಿತಗೊಳಿಸಬಹುದಿತ್ತು. ಅಮೆರಿಕದಲ್ಲಿ ನಾಲ್ಕು ವೇಳಾವಲಯಗಳಿವೆ.
ನಾವು ಎರಡು ವಲಯಗಳನ್ನಾದರೂ ಮಾಡಿಕೊಳ್ಳಬಹುದಲ್ಲವೆ? ಅಥವಾ ಶಾಲೆ ಮತ್ತು ಕಚೇರಿ ವೇಳೆಯಲ್ಲೇ ಬದಲಾವಣೆ (ಅಂದರೆ ಮೇಘಾಲಯದಲ್ಲಿ ಎಂಟು ಗಂಟೆಗೆ, ಗುಜರಾತಿನ ಭಾವನಗರದಲ್ಲಿ ಹನ್ನೊಂದು ಗಂಟೆಗೆ) ಮಾಡಿಕೊಂಡರೂ ಗ್ರಿಡ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಬಹುದು. ಆದರೆ ವೇಳೆಯ ಬಗ್ಗೆ ಚರ್ಚಿಸಲು ಸಂಸತ್ ಸದಸ್ಯರಿಗೆ ವೇಳೆ ಎಲ್ಲಿದೆ?
ನಮ್ಮ ದೇಶದ ಈಚೀಚಿನ ದೌರ್ಭಾಗ್ಯ ಏನೆಂದರೆ, ಬೇಸಿಗೆಯಲ್ಲಿ ಪೀಕ್ ಲೋಡ್ ಅಗತ್ಯ ಇಡೀ ದಿನಕ್ಕೆ ವಿಸ್ತರಿಸುತ್ತಿದೆ.ಮಳೆಬಾರದೆ ಸೆಕೆ ಹೆಚ್ಚಾದಷ್ಟೂ ಕಚೇರಿಗಳಲ್ಲಿ ಏರ್ ಕಂಡೀಶನರ್‌ಗಳು ಹೆಚ್ಚು ಹೆಚ್ಚು ಓಡುತ್ತ ನಗರದ ಗಾಳಿಯನ್ನು ಇನ್ನಷ್ಟು ಬಿಸಿ ಮಾಡುತ್ತವೆ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾದಷ್ಟೂ ಪಂಪ್‌ಸೆಟ್‌ಗಳು ಜೋರಾಗಿ ಓಡುತ್ತವೆ.ಒಂದು ಸಂಕಷ್ಟವನ್ನೇ ಇನ್ನೊಂದು ಸಂಕಷ್ಟದ ಸೋಪಾನವಾಗಿ ಮಾಡುವಲ್ಲಿ ನಾವು ನಿಸ್ಸೀಮರಾಗುತ್ತಿದ್ದೇವೆ.
ಬರಲಿರುವ ಪೀಕ್ ಲೋಡ್ ಪೀಕಲಾಟಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೆಂದರೆ ಸಣ್ಣ ಸಣ್ಣ, ವಿಕೇಂದ್ರೀಕೃತ ಶಕ್ತಿಮೂಲಗಳಿಗೆ ಶರಣು ಹೋಗಬೇಕು. ಗಾಳಿಶಕ್ತಿ, ಸೌರಶಕ್ತಿ, ಜೈವಿಕ ಇಂಧನಗಳೇ ಪೀಕ್‌ಲೋಡ್ ನೀಡಬೇಕು. ಉತ್ತರದ ಅಷ್ಟೊಂದು ರಾಜ್ಯಗಳು ಗ್ರಿಡ್ ಕುಸಿತದಲ್ಲಿ ಪರದಾಡುತ್ತಿದ್ದಾಗ ಮಧ್ಯಪ್ರದೇಶದ ಮೀರ್ವಾಡಾ ಸೌರಗ್ರಾಮದಲ್ಲಿ ಫ್ಯಾನ್‌ಗಳು ಚಲಿಸುತ್ತಲೇ ಇದ್ದವು.
ನಿಮ್ಮ ಮನೆಯಲ್ಲಿ ಸ್ನಾನಕ್ಕೆ ನೀರು ಕಾಯಿಸಲು ಗೀಸರ್ ಬದಲು ಬಿಸಿಲನ್ನೇ ಅವಲಂಬಿಸಿದ್ದರೆ ನಿಮಗೆ ನೀವೇ ಶಾಭಾಸ್ ಹೇಳಿಕೊಳ್ಳಿ. ದೇಶದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ ಸೋಲಾರ್ ವಾಟರ್ ಹೀಟರ್ ದಟ್ಟಣೆ ಇರುವುದರಿಂದಲೇ ಬೆಂಗಳೂರಿನಲ್ಲಿ ಪೀಕ್ ಲೋಡ್ ಒತ್ತಡ ಸಾಕಷ್ಟು ಕಡಿಮೆಯಿದೆ.
ಸೋಲಾರ್ ಪ್ಯಾನೆಲ್‌ಗಳನ್ನು ಬಳಸಿ ಸೂರ್ಯನಿಂದಲೇ ಸಣ್ಣ ಪ್ರಮಾಣದಲ್ಲಾದರೂ ನೀವು ವಿದ್ಯುತ್ತನ್ನು ಪಡೆಯುತ್ತಿದ್ದರೆ ಮತ್ತೊಮ್ಮೆ ಶಾಭಾಸ್ ಹೇಳಿಕೊಳ್ಳಿ. ಪ್ಯಾನೆಲ್‌ಗಳ ಉತ್ಪಾದಕರಿಗೆ ಪ್ರೋತ್ಸಾಹ ನೀಡಿದ ಪುಣ್ಯ ನಿಮಗೆ ಬರುತ್ತದೆ (ಆದರೆ ಹುಷಾರಾಗಿರಿ, ಚೀನಾ ಮತ್ತು ಅಮೆರಿಕದ ಸೋಲಾರ್ ಸಲಕರಣೆಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಹಾಕುತ್ತಿದ್ದು, ದೇಸೀ ಉತ್ಪಾದಕರ ಗೋಣು ಮುರಿಯುತ್ತಿವೆ ಎಂದು `ಡೌನ್ ಟು ಅರ್ಥ್~ ಪತ್ರಿಕೆ ಎಚ್ಚರಿಸಿದೆ).
ನಿಮ್ಮ ಛಾವಣಿಯ ನೀರನ್ನೇ ನೀವು ಸಂಗ್ರಹಿಸಿ ಬಳಸುತ್ತಿದ್ದರೆ ಜಲಮಂಡಳಿಯ ವಿದ್ಯುತ್ ವೆಚ್ಚವನ್ನು ತಗ್ಗಿಸಿದ ಶ್ರೇಯ ನಿಮ್ಮದು.ಛಾವಣಿಯ ಬಿಸಿಲನ್ನು ಹಾಗೂ ನೀರನ್ನು ತ್ಯಾಗ ಮಾಡುವವರಿಂದಾಗಿಯೇ ದೇಶ ಈ ದುಸ್ಥಿತಿಗೆ ಬಂದಿದೆ. ಅಂಥ ತ್ಯಾಗ ಮಾಡಿ ದೇಶ ಕಟ್ಟುವವರು ನಮಗೆ ಬೇಕಾಗಿಲ್ಲ.
ಆದರೆ ಇಂಧನದ ವಿಷಯದಲ್ಲಿ ಸಂಪೂರ್ಣ ಸ್ವಾವಲಂಬಿ ಆಗಿರುವ ಕುಟುಂಬಕ್ಕೆ ಒಂದಾದರೂ ಪ್ರಶಸ್ತಿ, ಬಹುಮಾನವನ್ನು ನಮ್ಮ ಇಂಧನ ಸಚಿವೆ ಘೋಷಣೆ ಮಾಡಿಲ್ಲ. ವಿದ್ಯುತ್ ಕಳ್ಳತನ ಮಾಡಿದ ಒಂದೇ ಒಂದು ದೊಡ್ಡ ತಿಮಿಂಗಿಲವನ್ನೂ ಅವರು ಜೈಲಿಗೆ ಹಾಕಿಸಿಲ್ಲ. ಉದ್ಯಮದ ಹೆಸರಿನಲ್ಲಿ ನೂರಿನ್ನೂರು ಎಕರೆಗಳನ್ನು ಸ್ವಯಂಭಾರೆ ಮಾಡಿಕೊಂಡ ದೊಡ್ಡವರು ತಮ್ಮ ಬರಡು ಜಮೀನಿನಲ್ಲಿ ಎಕರೆಗೆ ಕನಿಷ್ಠ ಹತ್ತು ಲೀಟರ್ ಜೈವಿಕ ಇಂಧನವನ್ನು ಉತ್ಪಾದಿಸಬೇಕೆಂದು ಶರತ್ತು ಹಾಕಿಲ್ಲ.
ಮಾತೆತ್ತಿದರೆ ಉತ್ತರ ಭಾರತದಿಂದ ಇನ್ನಷ್ಟು ಮತ್ತಷ್ಟು ಸಾವಿರ ಮೆಗಾವಾಟ್ ವಿದ್ಯುತ್ತನ್ನು ತರಿಸುವುದಾಗಿ, ಅಲ್ಲಿನ ಗ್ರಿಡ್ ಜತೆ ನಮ್ಮದನ್ನು ಜೋಡಿಸುವುದಾಗಿ ಸಚಿವೆಯ ಬಾಯಿಂದ ಹೇಳಿಸುವ ತಜ್ಞರು ಗುಜರಾತಿನ ಚರಾಂಕಾ ಮಾದರಿಯ ಒಂದಾದರೂ ಸೋಲಾರ್ ಪಾರ್ಕ್ ಯೋಜನೆಯನ್ನು ಜನತೆಯ ಮುಂದಿಟ್ಟಿಲ್ಲ.
ಇಂದು ನಾಡಿನ ಎಲ್ಲ ಜಲಾಶಯಗಳೂ ತುಂಬಿ ತುಳುಕುತ್ತಿವೆ. ಒಳಹರಿವು 10 ಸಾವಿರ, 15 ಸಾವಿರ ಕ್ಯೂಸೆಕ್‌ಎಂದೆಲ್ಲ ಮಾಧ್ಯಮಗಳು ಹೇಳುತ್ತಿವೆ. ಸಾವಿರ ಕ್ಯೂಸೆಕ್‌ಗಳ ಪ್ರಳಯಾಂತಕ ಒಳಹರಿವಿನ ಬದಲಿಗೆ ಒಂದೇ ಕ್ಯೂಸೆಕ್ ಜಲಧಾರೆಯನ್ನು ಹಿಡಿದಿಟ್ಟುಕೊಳ್ಳಬಲ್ಲ ಹತ್ತಾರು ಸಾವಿರ ಚಿಕ್ಕ ಚಿಕ್ಕ ಅಣೆಕಟ್ಟುಗಳು ಇದ್ದಿದ್ದರೆ ಈ ಪ್ರವಾಹಭಯವೂ ಇರುತ್ತಿರಲಿಲ್ಲ, ಹೂಳಿನ ಸಮಸ್ಯೆಯೂ ಇರುತ್ತಿರಲಿಲ್ಲ, ಬರದ ಭಯವೂ ಇರುತ್ತಿರಲಿಲ್ಲ, ಮೇಲಾಗಿ ಅಷ್ಟೆಲ್ಲ ಜಲಶಕ್ತಿ ಪೋಲಾಗುವ ಪ್ರಶ್ನೆಯೇ ಇರುತ್ತಿರಲಿಲ್ಲ.
ನೀರು ಮತ್ತು ಶಕ್ತಿಗಾಗಿ ಕಾರ್ಪೊರೇಟ್ ಕಂಪನಿಗಳಿಗೆ ಜೈಕಾರ ಹಾಕುವವರೇ ಕಾಣುತ್ತಾರೆ ವಿನಾ ಜನರನ್ನು ಸ್ವಾವಲಂಬಿಯಾಗುವಂತೆ ಪ್ರೇರೇಪಿಸಬಲ್ಲ ನಾಯಕರೇ ಕಾಣುತ್ತಿಲ್ಲ.
ಇವೊತ್ತಿನ ಕಷ್ಟಗಳ ತುರ್ತು ಪರಿಹಾರಕ್ಕೆಂದು ನಾಳಿನ ನೆಮ್ಮದಿಯನ್ನೇ ಬಲಿಕೊಡುವ ಅನಿವಾರ್ಯತೆಗೆ ನಾವು ಸಿಲುಕಿದ್ದೇವೆ. ಈ ಸಂದಿಗ್ಧವೇ ಎಲ್ಲ ಸಜ್ಜನರ ವಿವೇಕಕ್ಕೂ ಮಸಿ ಹಿಡಿಸಿಬಿಡುತ್ತದೆ.
ಅದಕ್ಕೇ ಇರಬೇಕು, ಸೋಲಾರ್ ತಂತ್ರಜ್ಞಾನಕ್ಕೊ ಜೈವಿಕ ಇಂಧನಕ್ಕೊ ಒತ್ತುಕೊಡಬೇಕಾದ ಇಂಧನ ಸಚಿವರಿಗೆ ಕಲ್ಲಿದ್ದಲ ಮಸಿಯೇ ಮುಖ್ಯವಾಗುತ್ತದೆ. ನೀರಿನ ಸಂಗ್ರಹಕ್ಕೆ, ಸದ್ಬಳಕೆಗೆ ಒತ್ತು ಕೊಡಬಹುದಾಗಿದ್ದ ಎಚ್‌ಕೆ ಪಾಟೀಲರಿಗೆ ಮೋಡಕ್ಕೆ ಮಸಿ ಎರಚುವುದೇ ಅನಿವಾರ್ಯವೆನಿಸುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.