ಶುಕ್ರವಾರ, ಜೂನ್ 25, 2021
26 °C

ನಿಕಾನ್ ಡಿಎಫ್ ಹಳೇ ರೂಪಿಗೆ ಹೊಸ ಛಾಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಮಾರು ಮೂರು ದಶಕಗಳಿಂದ ನಿಕಾನ್ ಫಿಲ್ಮ್ ಎಸ್‌ಎಲ್‌ಆರ್ ಕ್ಯಾಮೆರಾ ಬಳಸುತ್ತಿದ್ದವರಿಗೆ ತುಂಬ ಇಷ್ಟವಾಗಿದ್ದುದು ನಿಕಾನ್ ಎಫ್1, ಎಫ್‌ಇ, ಎಫ್‌ಎಂ ಇತ್ಯಾದಿ ಮಾದರಿಗಳು. ಇವುಗಳು ಆ ಕಾಲದಲ್ಲಿ ಅತ್ಯುತ್ತಮ ಕ್ಯಾಮೆರಾ ಎಂದೆನಿಸಿಕೊಂಡಿದ್ದವು. ಅವುಗಳು ವೃತ್ತಿನಿರತರಿಗೆ ತುಂಬ ಇಷ್ಟವಾಗಿದ್ದವು. ನಿಕಾನ್‌ನವರು ಇತ್ತೀಚೆಗೆ ಅಂಥವರಿಗಾಗಿಯೇ ಹೊರತಂದಿರುವ ಕ್ಯಾಮೆರಾ ನಿಕಾನ್ ಡಿಎಫ್ (Nikon Df). ಇಲ್ಲಿ ಎಫ್ ಎಂದರೆ ಫ್ಯೂಶನ್, ಅಂದರೆ ಹಳೆದು ಹೊಸದರ ಸಂಗಮ.ಗುಣವೈಶಿಷ್ಟ್ಯಗಳು

ಡಿಜಿಟಲ್ ಎಸ್‌ಎಲ್‌ಆರ್, 16 ಮೆಗಾಪಿಕ್ಸೆಲ್, ನಿಕಾನ್ ಎಫ್ ಮೌಂಟ್, 36.0 x 23.9 ಮಿ.ಮೀ. ಗಾತ್ರದ ಸಿಮೋಸ್ (CMOS) ಸಂವೇದಕ (sensor), ಸಂಪೂರ್ಣ ಮ್ಯಾನ್ಯುಯಲ್ ಆಯ್ಕೆಗಳು, 1/4000 ರಿಂದ 4 ಸೆಕೆಂಡ್ ಷಟರ್ ವೇಗ, 100 ರಿಂದ 12800 ಐಎಸ್‌ಓ ಆಯ್ಕೆಗಳು, ಹೊರಗಡೆಯಿಂದ ಫ್ಲಾಶ್ ಜೋಡಿಸಲು ಹಾಟ್ ಶೂ, ಹಲವು ಡಯಲ್‌ಗಳು, 50 ಮಿ.ಮೀ. ಲೆನ್ಸ್ ಜೊತೆ ಸುಮಾರು 800 ಗ್ರಾಂ ತೂಕ, ಇತ್ಯಾದಿ. 50 ಮಿ.ಮೀ (f/1.8) ಲೆನ್ಸ್ ಜೊತೆ ಬೆಲೆ ₨ 1,95,000!ಇದೊಂದು  ಪರಿಣತರಿಗಾಗಿರುವ ಕ್ಯಾಮೆರಾ. ಶುದ್ಧ ಛಾಯಾಗ್ರಾಹಕರಿಗಾಗಿ ಮಾತ್ರವೇ ತಯಾರಾದ ಕ್ಯಾಮೆರಾ. ಕಡಿಮೆ ಮತ್ತು ಮಧ್ಯಮ ಬೆಲೆಯ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಕಾಣಬರುವ ಕೆಲವು ಸೌಲಭ್ಯಗಳು ಇದರಲ್ಲಿಲ್ಲ. ಅವುಗಳಲ್ಲಿ ಗಮನಾರ್ಹವಾದುವೆಂದರೆ ಪೂರ್ತಿ ಆಟೊಮ್ಯಾಟಿಕ್, ವಿಡಿಯೊ ಚಿತ್ರೀಕರಣ ಸೌಲಭ್ಯ ಮತ್ತು ಫ್ಲಾಶ್. ಹೊರಗಡೆಯಿಂದ ಫ್ಲಾಶ್ ಜೋಡಿಸುವ ಸೌಲಭ್ಯ ಎಲ್ಲ ಎಸ್‌ಎಲ್‌ಆರ್ ಕ್ಯಾಮೆರಾಗಳಂತೆ ಇದರಲ್ಲೂ ಇದೆ.  

 

ಇದರ ರಚನೆ ಮತ್ತು ವಿನ್ಯಾಸ ಹಳೆಯ ಕ್ಯಾಮೆರಾ ಬಳಸುತ್ತಿರುವವರನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಇದರ ದೇಹ ಶುದ್ಧ ಲೋಹದ್ದು. ಆದ್ದರಿಂದ ಬರಿಯ ಕ್ಯಾಮೆರಾವೇ ತುಂಬ ತೂಕದ್ದಾಗಿದೆ. ಷಟರ್ ವೇಗದ ಆಯ್ಕೆ, ಐಎಸ್‌ಓ ಆಯ್ಕೆ, ಎಕ್ಸ್‌ಪೋಷರ್ ಹೆಚ್ಚು ಕಡಿಮೆ ಮಾಡುವುದು –ಹೀಗೆ ಪ್ರತಿಯೊಂದಕ್ಕೂ ಪ್ರತ್ಯೇಕ ಡಯಲ್‌ಗಳಿವೆ. ಅಷ್ಟು ಮಾತ್ರವಲ್ಲ ಈ ಡಯಲ್‌ಗಳನ್ನು ಸುಮ್ಮನೆ ತಿರುಗಿಸುವ ಹಾಗಿಲ್ಲ. ಅವುಗಳನ್ನು ತಿರುಗಿಸಬೇಕಾದರೆ ಆಯಾ ಡಯಲ್‌ಗಳ ಪಕ್ಕದಲ್ಲೇ ನೀಡಿರುವ ಒತ್ತುಗುಂಡಿಯನ್ನು ಒತ್ತಿ ಹಿಡಿದು ತಿರುಗಿಸಬೇಕು.ಅತಿ ವೇಗವಾಗಿ ಆಯ್ಕೆಗಳನ್ನು ಬೇಗ ಬೇಗನೆ ಬದಲಾಯಿಸಿ ಹಲವು ಫೋಟೊಗಳನ್ನು ತೆಗೆಯಲು ಇದರಲ್ಲಿ ಸಾಧ್ಯವಿಲ್ಲ. ಉದಾಹರಣೆಗೆ ಷಟರ್ ಪ್ರಿಯಾರಿಟಿಯಿಂದ ಅಪೆರ್ಚರ್ ಪ್ರಿಯಾರಿಟಿಗೆ ಬದಲಾಯಿಸಬೇಕಾದರೆ ಅದಕ್ಕಾಗಿಯೇ ಇರುವ ಡಯಲನ್ನು ಸ್ವಲ್ಪ ಮೇಲಕ್ಕೆ ಎಳೆದು ತಿರುಗಿಸಬೇಕು. ಇದಕ್ಕೆ ಎರಡು ಕೈ ಬಳಸಬೇಕಾಗುತ್ತದೆ. ಕ್ಯಾಮೆರಾ ವ್ಯೂಫೈಂಡರ್‌ನಲ್ಲಿ ನೋಡಿಕೊಂಡು ಆಯ್ಕೆಗಳನ್ನು ಬೇಗ ಬೇಗನೆ ಬದಲಾಯಿಸಿ ಫೋಟೊ ತೆಗೆಯುವವರಿಗೆ ಈ ಕ್ಯಾಮೆರಾ ಸಲ್ಲದು. ಇದರ ಬೆಲೆ ಕಡೆ ಸ್ವಲ್ಪ ಗಮನ ನೀಡಿ. ಅದು ಹತ್ತಿರ ಹತ್ತಿರ ಎರಡು ಲಕ್ಷ ರೂ. ಅಷ್ಟು ಯಾಕೆ? ಇದರಲ್ಲಿರುವ ಸಂವೇದಕವು ಇನ್ನೂ ದುಬಾರಿಯಾದ, ಸುಮಾರು 4 ಲಕ್ಷ ರೂ. ಬೆಲೆಬಾಳುವ,  ನಿಕಾನ್ ಡಿ4 ಕ್ಯಾಮೆರಾದಲ್ಲಿ ಬಳಕೆಯಾಗಿರುವಂಥದ್ದು. ಇದನ್ನು ಫುಲ್ ಫ್ರೇಂ ಡಿಎಸ್‌ಎಲ್‌ಆರ್ ಕ್ಯಾಮೆರಾ ಎನ್ನುತ್ತಾರೆ. ಸಾಮಾನ್ಯವಾಗಿ ಕಡಿಮೆ ಮತ್ತು ಮಧ್ಯಮ ಬೆಲೆಯ ಡಿಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿ ಅದರ ಸಂವೇದಕವು ಫಿಲ್ಮ್ ಎಸ್‌ಎಲ್‌ಆರ್ ಕ್ಯಾಮೆರಾಗಳಲ್ಲಿಯ ಫಿಲ್ಮಿನ ಗಾತ್ರ, ಅಂದರೆ 34x24 ಮಿ.ಮೀ. ಗಿಂತ ಕಡಿಮೆ ಇರುತ್ತದೆ. ಆದರೆ ಫುಲ್ ಫ್ರೇಂ ಕ್ಯಾಮೆರಾಗಳಲ್ಲಿ ಇದು ಅಷ್ಟೇ ಇರುತ್ತದೆ.ಸಂವೇದಕದ ಗಾತ್ರ ದೊಡ್ಡದಾಗಿರುವುದರಿಂದ ಪ್ರತಿ ಪಿಕ್ಸೆಲ್ ದೊಡ್ಡದಾಗುತ್ತದೆ. ಅದರಿಂದಾಗಿ ಪ್ರತಿಯೊಂದು ಪಿಕ್ಸೆಲ್ ಗ್ರಹಿಸುವ ಬಣ್ಣದ ಗುಣಮಟ್ಟ ಚೆನ್ನಾಗಿರುತ್ತದೆ. ಇದು ಹೆಚ್ಚು ವೇದ್ಯವಾಗುವುದು ಅತಿ ಹೆಚ್ಚಿನ ಐಎಸ್‌ಓ ಆಯ್ಕೆಗಳಲ್ಲಿ. ಫುಲ್ ಫ್ರೇಂ ಕ್ಯಾಮೆರಾ ಆಗಿರುವುದರಿಂದ ಇದರ ಡೆಪ್ತ್‌ ಆಫ್ ಫೀಲ್ಡ್ ಉತ್ತಮವಾಗಿರುತ್ತದೆ. ಅಂದರೆ ಒಂದು ವಸ್ತುವನ್ನು ಅದರ ಹಿನ್ನೆಲೆಯಿಂದ ಸ್ಪಷ್ಟವಾಗಿ ಬೇರ್ಪಡಿಸಬಹುದು.ಈ ಕ್ಯಾಮೆರಾದಲ್ಲಿ ಹಳೆಯ ನಿಕಾನ್ ಎಫ್ ಮೌಂಟ್ ಲೆನ್ಸ್‌ಗಳನ್ನು ಜೋಡಿಸಬಹುದು. ಇದು ಫುಲ್ ಫ್ರೇಂ ಕ್ಯಾಮೆರಾ ಆಗಿರುವುದರಿಂದ ಹಳೆಯ ಲೆನ್ಸ್‌ನಲ್ಲೂ ವ್ಯೂಫೈಂಡರ್‌ನಲ್ಲಿ ಕಂಡುಬರುವ ಚಿತ್ರಕ್ಕೂ ಮೂಡಿಬರುವ ಚಿತ್ರಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ. ಅಲ್ಲಿ ಕ್ರಾಪ್ ಫ್ಯಾಕ್ಟರ್ ಇರುವುದಿಲ್ಲ. ಅಂದರೆ ಹಳೆಯ ಲೆನ್ಸ್ ಜೋಡಿಸಿದಾಗ ಚಿತ್ರವು ಕತ್ತರಿಸಲ್ಪಡುವುದಿಲ್ಲ.ನಿಕಾನ್ ಡಿಎಫ್ ಕ್ಯಾಮೆರಾ ಜೊತೆ 50 ಮಿ.ಮೀ., F/1.8 G ಲೆನ್ಸ್ ನೀಡುತ್ತಿದ್ದಾರೆ. ಇತರೆ ಕ್ಯಾಮೆರಾಗಳಂತೆ 18–55.ಮಿ.ಮೀ. ಲೆನ್ಸ್ ಅಲ್ಲ. ಈ 50 ಮಿ.ಮೀ. ಲೆನ್ಸ್ ಅನ್ನು ಸಾಮಾನ್ಯವಾಗಿ ಪ್ರೈಮ್ ಲೆನ್ಸ್ ಎನ್ನುತ್ತಾರೆ. ಈ ಕ್ಯಾಮೆರಾ ಮತ್ತು ಈ ಲೆನ್ಸ್ ಎರಡೂ ಅತ್ಯುತ್ತಮವಾಗಿವೆ. ಫೋಟೊ ಗುಣಮಟ್ಟ ಅತ್ಯುತ್ತಮವಾಗಿದೆ. ಈ ಕ್ಯಾಮೆರಾದ ನಿಜವಾದ ಹೆಚ್ಚುಗಾರಿಕೆ ಗೊತ್ತಾಗಬೇಕಾದರೆ ಅತಿ ಕಡಿಮೆ ಬೆಳಕಿನಲ್ಲಿ ಅತಿ ಹೆಚ್ಚು ಐಎಸ್‌ಓ ಬಳಸಿ ಫೋಟೊ ತೆಗೆಯಬೇಕು.ಇತರೆ ಕಡಿಮೆ ಬೆಲೆಯ ಕ್ಯಾಮೆರಾಗಳಲ್ಲಿ ಇಂತಹ ಸಂದರ್ಭದಲ್ಲಿ ತೆಗೆದ ಫೋಟೊ ಕಾಳುಕಾಳಾಗಿ (grainy) ಮೂಡಿಬರುತ್ತದೆ. ಆದರೆ ಈ ಕ್ಯಾಮೆರಾದಲ್ಲಿ ಅಂತಹ ಸಂದರ್ಭದಲ್ಲೂ ಫೋಟೊ ಅತ್ಯುತ್ತಮವಾಗಿಯೇ ಮೂಡಿಬರುತ್ತದೆ. ಇದರ ಜೊತೆ ನೀಡಿರುವ 50 ಮಿ.ಮೀ. ಪ್ರೈಮ್ ಲೆನ್ಸ್ ಪೋರ್ಟ್ರೇಟ್ ಫೋಟಿಗ್ರಫಿಗೆ (ವ್ಯಕ್ತಿಚಿತ್ರಗಳು) ಹೇಳಿ ಮಾಡಿಸಿದಂತಹುದು. ವಾರದ ಆಪ್

ಟೆಲಿಗ್ರಾಂ


ಇದು ಇತ್ತೀಚೆಗೆ ನಿಲ್ಲಿಸಲ್ಪಟ್ಟ ಭಾರತ ಸರ್ಕಾರದ ಟೆಲಿಗ್ರಾಂ (Telegram) ಸೇವೆಯ ಕಿರುತಂತ್ರಾಂಶ (ಆಪ್) ಅಲ್ಲ. ಆದರೆ ಅದೇ ಹೆಸರನ್ನಿಟ್ಟುಕೊಂಡಿರುವ ವಾಟ್ಸ್‌ಆಪ್ ಮಾದರಿಯ ಸಂದೇಶ ಮತ್ತು ಮಾತುಕತೆ (ಚಾಟ್) ಮಾಡಲು ಅನುವು ಮಾಡಿಕೊಡುವ ಕಿರುತಂತ್ರಾಂಶ. ಇದನ್ನು ಹಾಕಿಕೊಂಡರೆ ಟೆಲಿಗ್ರಾಂ ಬಳಸುವ ನಿಮ್ಮ ಇತರೆ ಸ್ನೇಹಿತರ ಜೊತೆ ಸಂದೇಶ ವಿನಿಮಯ, ಫೈಲ್ ವಿನಿಮಯ, ಮಾತುಕತೆ (ಚಾಟ್) ಎಲ್ಲ ಮಾಡಬಹುದು. ಇಂತಹ ಸೌಲಭ್ಯ ನೀಡುವ ಕಿರುತಂತ್ರಾಂಶಗಳು ಹಲವಾರಿವೆ.ಇದರಲ್ಲೇನು ವಿಶೇಷ? ನಾವು ವಾಟ್ಸ್‌ಆಪ್ ಅನ್ನೇ ಬಳಸುತ್ತೇವೆ, ನಮಗೆ ಅದೇ ಸಾಕು ಎನ್ನುತ್ತೀರಾ? ಇದರ ಹೆಚ್ಚುಗಾರಿಕೆಗಳು –ಇದು ಸಂಪೂರ್ಣ ಮುಕ್ತ ತಂತ್ರಾಂಶ ಆಗಿದೆ. ಇದರಲ್ಲಿ ಪ್ರೋಗ್ರಾಮರ್‌ಗಳಿಗೆ ಎಪಿಐ ಸೌಲಭ್ಯ ಇದೆ. ಅಂದರೆ ಇದನ್ನು ಬಳಸಲು ನೀವು ನಿಮ್ಮದೇ ಆಪ್ ಅಥವಾ ತಂತ್ರಾಂಶ ತಯಾರಿ ಮಾಡಿಕೊಳ್ಳಬಹುದು. ಇದು ನಿಮ್ಮ ಆಂಡ್ರಾಯಿಡ್, ಐಫೋನ್ ಮಾತ್ರವಲ್ಲ ಗಣಕಕ್ಕೂ ಲಭ್ಯವಿದೆ (telegram.org/apps). ಇನ್ನೂ ಒಂದು ವಿಷಯ ನಿಮಗೆ ತಿಳಿದಿರಬಹುದು –ವಾಟ್ಸ್‌ಆಪ್ ಅನ್ನು ಫೇಸ್‌ಬುಕ್ ಕೊಂಡುಕೊಂಡಿದೆ.ಗ್ಯಾಜೆಟ್ ಸುದ್ದಿ

ಎಲ್ಲ ಸಿಗ್ನಲ್‌ನಲ್ಲೂ ಹಸಿರು ದೀಪ ಬೇಕೆ?

ನಗರಗಳಲ್ಲಿ ಕಾರು ಚಲಾಯಿಸುವಾಗ ಹಲವು ಸಲ ಅನ್ನಿಸುವುದಿದೆ. ಎಲ್ಲ ಸಿಗ್ನಲ್ ದೀಪಗಳೂ ಹಸಿರಾಗಿದ್ದರೆ ಎಷ್ಟು ಚೆನ್ನ ಎಂದು. ಒಂದು ಕಡೆ ಹಸಿರು ದೀಪ ಸಿಕ್ಕಿದರೆ ಮುಂದಿನ ಸಿಗ್ನಲ್‌ನಲ್ಲೂ ಹಸಿರು ದೀಪ ಸಿಗಬೇಕಿದ್ದರೆ ಕಾರನ್ನು ಎಷ್ಟು ವೇಗವಾಗಿ ಓಡಿಸಬೇಕು ಎಂದು ಗೊತ್ತಾದರೆ ಒಳ್ಳೆಯದಲ್ಲವೇ? ಜರ್ಮನಿಯ ಆಡಿ ಕಾರು ತಯಾರಕರು ಅಂತಹ ಒಂದು ಸೌಲಭ್ಯವನ್ನು ವಿನ್ಯಾಸಗೊಳಿಸಿದ್ದಾರೆ.ಅವರು ಏನು ಮಾಡಿದ್ದಾರೆಂದರೆ ಎಲ್ಲ ಟ್ರಾಫಿಕ್ ಸಿಗ್ನಲ್‌ಗಳನ್ನೂ ವೈಫೈ ಜಾಲಕ್ಕೊಳಪಡಿಸಿ ಅದನ್ನು ಕಾರಿನಲ್ಲಿರುವ ಗ್ಯಾಜೆಟ್ ಪತ್ತೆ ಹಚ್ಚಿ ಮುಂದಿನ ಟ್ರಾಫಿಕ್ ಸಿಗ್ನಲ್ ಎಷ್ಟು ದೂರ ಇದೆ, ಅಲ್ಲಿಗೆ ತಲುಪಲು ಎಷ್ಟು ಸಮಯ ಬೇಕು, ಎಷ್ಟು ವೇಗವಾಗಿ ಹೋದರೆ ಅಲ್ಲೂ ಹಸಿರು ದೀಪ ಸಿಗುತ್ತದೆ ಎಂದು ಕರಾರುವಾಕ್ಕಾಗಿ ಲೆಕ್ಕ ಹಾಕಿ ಚಾಲಕನಿಗೆ ಸೂಚನೆ ನೀಡುತ್ತದೆ.ಗ್ಯಾಜೆಟ್ ತರ್ಲೆ

ಆಡಿ ಗ್ಯಾಜೆಟ್ ನಮಗೆ ಬೇಡ!


ಆಡಿ ತಯಾರಿಸುತ್ತಿರುವ ಗ್ಯಾಜೆಟ್ ಬಗ್ಗೆ ಬೆಂಗಳೂರಿನ ವಾಹನ ಚಾಲಕರ ಜೊತೆ ಸಂದರ್ಶನ ನಡೆಸಿ ಅವರ ಅಭಿಪ್ರಾಯ ಕೇಳಲಾಯಿತು. ಆ ಗ್ಯಾಜೆಟ್ ನಮಗೆ ಬೇಕಾಗಿಲ್ಲ. ನಮಗೆ ಬೇಕಾಗಿರುವುದು ಟ್ರಾಫಿಕ್ ಸಿಗ್ನಲ್‌ನ ನಂತರ ಟ್ರಾಫಿಕ್ ಪೋಲೀಸ್ ಇದ್ದಾರೋ ಇಲ್ಲವೋ ಎಂದು ಸೂಚನೆ ನೀಡುವ ಸೌಲಭ್ಯ ಎಂದು ಬೆಂಗಳೂರಿನ ವಾಹನ ಚಾಲಕರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.ಗ್ಯಾಜೆಟ್ ಸಲಹೆ

ವಾದಿರಾಜರ ಪ್ರಶ್ನೆ
: ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಮೊಬೈಲ್‌ನಲ್ಲಿ ಕನ್ನಡದ ಸಂದೇಶಗಳನ್ನು ಓದಬಹುದು. ಹಾಗೆಯೇ ನಾವೂ ಕನ್ನಡದಲ್ಲಿ ಸಂದೇಶ ರಚಿಸಬಹುದೇ, ಯುನಿಕೋಡ್ ಇದೆಯೇ,  ಜಾಲಾಡಬಹುದೇ, ಸಂಪರ್ಕಗಳನ್ನು ಕನ್ನಡದಲ್ಲೇ ಉಳಿಸಲು ಸಾಧ್ಯವೇ ದಯವಿಟ್ಟು ತಿಳಿಸಿ.

ಉ: ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ –ಹೌದು, ಸಾಧ್ಯವಿದೆ. ಕನ್ನಡದಲ್ಲಿ ಪಠ್ಯ ಊಡಿಸಲು ನೀವು ಪ್ಲೇ ಸ್ಟೋರ್‌ನಿಂದ ನಿಮಗಿಷ್ಟವಾದ ಕನ್ನಡದ ಕೀಲಿಮಣೆ ಆಪ್ ಹಾಕಿಕೊಳ್ಳಬೇಕು. Anysoftkeyboard ಮತ್ತು Kannada for Anysoftkeyboard ಅಥವಾ JustKannada ಬಳಸಬಹುದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.