ಗುರುವಾರ , ಮೇ 19, 2022
20 °C

ಬನ್ನಿ ಮೈಸೂರಿಗೆ ಹೋಗೋಣ...

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

ಬನ್ನಿ ಮೈಸೂರಿಗೆ ಹೋಗೋಣ...

ಫಿಲಂ ಸಿಟಿ ವಿಷಯಕ್ಕೆ ಮತ್ತೆ ಚಾಲನೆ ದೊರಕಿದೆ. ಮೈಸೂರು ದಸರಾ ಸಮಯದಲ್ಲಿ ನಡೆಸುವ ಚಿತ್ರೋತ್ಸವದ ಸಂದರ್ಭದಲ್ಲಿ ನಡೆದ ವಿಚಾರಸಂಕಿರಣದಲ್ಲಿ ಇಂತಹ ಒಂದು ವಿಷಯಕ್ಕೆ ಚಾಲನೆ ದೊರಕಿರುವುದು, ಸರಿಯಾದ ಸಂದರ್ಭದ ಸೂಕ್ತವಾದ ತೀರ್ಮಾನ.ಕನ್ನಡ ಚಿತ್ರೋದ್ಯಮ ಇಂದು ವ್ಯಾವಹಾರಿಕವಾಗಿ ಬೆಳೆದಿದೆ. ಇಂತಹ ಸಮಯದಲ್ಲಿ ಸರ್ಕಾರವೂ ಕೈ ಜೋಡಿಸಿ ಚಿತ್ರೋದ್ಯಮವನ್ನು ಮತ್ತಷ್ಟು ಬಲಪಡಿಸಲು ಏನು ಮಾಡಬೇಕೆಂಬ ಚಿಂತನೆಗೆ ತೊಡಗಬೇಕು, ಚಿತ್ರನಗರಿ ರಚನೆಗೆ ಇದು ಸಕಾಲ.ಚಲನಚಿತ್ರ ಅಕಾಡೆಮಿ ಈ ನಿಟ್ಟಿನಲ್ಲಿ ಮುಂದಾಗಿರುವುದು ಕೂಡ ಸ್ವಾಗತಾರ್ಹ.

ಚಿತ್ರನಗರಿಯನ್ನು ನಿರ್ಮಿಸುವ ಪ್ರಶ್ನೆ ಬಂದಾಗಲೆಲ್ಲ ಕೆಲವು ಪಟ್ಟಭದ್ರರು ಬೆಂಗಳೂರೇ ಸರಿ ಎನ್ನುತ್ತಾರೆ. ಬೆಂಗಳೂರು ಬಿಟ್ಟು ಕರ್ನಾಟಕದಲ್ಲಿ ಇನ್ನೂ ಹಲವು ಮುಖ್ಯ ಕೇಂದ್ರಗಳಿವೆ ಎನ್ನುವುದೇ ಅವರಿಗೆ ಗೊತ್ತಿಲ್ಲ.

 

ಅರವತ್ತರ ದಶಕದಲ್ಲಿ ಮದ್ರಾಸಿನಿಂದ ಚಿತ್ರರಂಗ ಹಂತಹಂತವಾಗಿ ಕರ್ನಾಟಕಕ್ಕೆ ಸ್ಥಳಾಂತರವಾದಾಗ ಎಲ್ಲರೂ ಬೆಂಗಳೂರಿಗೆ ಬಂದು ತಳಊರಲು ಇಷ್ಟಪಟ್ಟರೇ ಹೊರತು ಮೈಸೂರಿಗಾಗಲಿ, ಹುಬ್ಬಳ್ಳಿಗಾಗಲಿ, ಗುಲ್ಬರ್ಗಕ್ಕಾಗಲಿ ಹೋಗಿ ನೆಲೆಸಬೇಕು ಎಂದು ಬಯಸಲಿಲ್ಲ.ಚಿತ್ರೋದ್ಯಮದಲ್ಲಿ ಅಂದು ಇದ್ದ ಮನೋಭಾವವೇ ಇಂದೂ ಇದೆ. ಫಿಲಂಸಿಟಿ ಸ್ಥಾಪನೆ ವಿಷಯ ಬಂದಾಗ ಅವರು ಬೆಂಗಳೂರೇ ಸರಿ, ಬೆಂಗಳೂರಿನಲ್ಲೇ ಸ್ಥಾಪನೆಯಾಗಲಿ ಎಂದು ಬಡಬಡಿಸುತ್ತಾರೆ. ಇಂತಹ ಒಂದು ವಿವೇಚನಾರಹಿತ ಬಡಬಡಿಕೆಯಿಂದಾಗಿ ಕನ್ನಡ ಚಿತ್ರರಂಗ ಬೆಂಗಳೂರಿನ ಮೆಜೆಸ್ಟಿಕ್ ಏರಿಯಾ ಬಿಟ್ಟು ಮುನ್ನುಗ್ಗುತ್ತಲೇ ಇಲ್ಲ.ಬೆಂಗಳೂರು ನಗರದಲ್ಲಾದರೂ ಚಿತ್ರನಗರಿ ಸ್ಥಾಪನೆ ಉದ್ದೇಶ ನೆರವೇರಿದೆಯೇ? ಅದೂ ಕೂಡ ಹಗಲುಗನಸಾಗಿದೆ. ಚಾಮುಂಡೇಶ್ವರಿ ಸ್ಟುಡಿಯೋ ನಷ್ಟದ ಉದ್ದೇಶದಿಂದ ಮುಚ್ಚಿತು. ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋ, ದೂರ ಎನ್ನುವ ಕಾರಣದಿಂದ ಚಿತ್ರರಂಗದವರು ಅಲ್ಲಿಗೆ ಹೋಗಲಿಲ್ಲ.ಸ್ಟುಡಿಯೋ ಅವನತಿ ಕಂಡಿತು. ಈಗ ಬೆಂಗಳೂರಿನಲ್ಲಿರುವುದು ಕಂಠೀರವ ಸ್ಟುಡಿಯೋ ಒಂದೇ. ರಾಕ್‌ಲೈನ್, ಅಬ್ಬಯ್ಯನಾಯ್ಡು ಸ್ಟುಡಿಯೋಗಳು ಕೂಡ ಸೀಮಿತವಾಗಿವೆ.ಹೆಸರಘಟ್ಟ ಬಳಿ ಚಿತ್ರರಂಗಕ್ಕೆಂದು ಮೀಸಲಿಟ್ಟಿದ್ದ 400 ಎಕರೆ ಜಾಗ ಪಡೆದುಕೊಳ್ಳಲು ಚಿತ್ರರಂಗದವರು ಮೀನ ಮೇಷ ಎಣಿಸಿದ ಫಲವಾಗಿ ಅದೂ ಈಗ ಕೈತಪ್ಪಿದೆ. ಈ ಪ್ರದೇಶ ಪಶುಸಂಗೋಪನಾ ಇಲಾಖೆಗೆ ಸೇರಿದ್ದು.

 

ಕೆ.ಎಫ್.ಡಿ.ಸಿ. ಜತೆ ಇಲಾಖೆ ಒಪ್ಪಂದ ಮಾಡಿಕೊಂಡಿತ್ತು. ಕೆ.ಎಫ್.ಡಿ.ಸಿ. ಈಗ ರದ್ದಾಗಿರುವುದರಿಂದ ಜಮೀನನ್ನು ಇಲಾಖೆಯ ವಶಕ್ಕೇ ವಾಪಸು ಕೊಡಬೇಕೆಂಬ ಒತ್ತಾಯವನ್ನು ಹೇರಲಾಗಿದೆ. ಹೀಗಾಗಿ ಈ ಪ್ರದೇಶವೂ ಚಿತ್ರೋದ್ಯಮದ ಕೈತಪ್ಪಿದಂತಾಗಿದೆ. ಇಂತಹ ಸಮಯದಲ್ಲಿ ಚಿತ್ರನಗರಿ ಸ್ಥಾಪನೆಗೆ ಮೈಸೂರೇ ಸೂಕ್ತವಾದ ಸ್ಥಳ ಎಂದು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ, ಟಿ.ಎಸ್. ನಾಗಾಭರಣ ಹಾಗೂ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ತೀರ್ಮಾನ ತೆಗೆದುಕೊಂಡು, ವಿಚಾರಸಂಕಿರಣದ ಒಟ್ಟು ತೀರ್ಮಾನವನ್ನು ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಸೂಕ್ತವೆನಿಸುತ್ತದೆ.ಚಿತ್ರನಗರ ಕಡೇ ಪಕ್ಷ ಮೈಸೂರಿನಲ್ಲಾದರೂ ಆರಂಭವಾಗಲಿ, ಆ ಮೂಲಕ ನಂತರದ ಹೆಜ್ಜೆಗಳಾದ ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ಗುಲ್ಬರ್ಗ, ದಾವಣಗೆರೆಗಳಲ್ಲೂ ಚಿತ್ರನಗರಿ ಕೇಂದ್ರಗಳು ಆರಂಭವಾಗಲಿ, ರಷ್ಯಾದಲ್ಲಿ ಹತ್ತು ಕೇಂದ್ರಗಳಲ್ಲಿ ಫಿಲಂಸಿಟಿಗಳು ಇರಬಹುದಾದರೆ, ಇಷ್ಟು ದೊಡ್ಡ ರಾಜ್ಯವಾದ ಕರ್ನಾಟಕದಲ್ಲಿ ಹಲವು ಚಿತ್ರನಗರಗಳು ತಲೆ ಎತ್ತಬಾರದೇಕೆ? ಕರ್ನಾಟಕ ಅಷ್ಟೊಂದು ಸಮೃದ್ಧವಾಗಿದೆ.ಜನಸಂದಣಿಯ ಒತ್ತಡ, ಇಡಿಕಿರಿದ ರಸ್ತೆಗಳು, ವಾಹನಗಳ ದಟ್ಟಣೆಯ ನಡುವೆ ಜೀವನವೇ ದುರ್ಬರವಾಗಿರುವ ಬೆಂಗಳೂರಿನಲ್ಲಿ ಫಿಲಂಸಿಟಿ ಮಾಡುವ ಆಲೋಚನೆಗಳನ್ನು ಕೈಬಿಟ್ಟು, ಪ್ರಶಾಂತವಾದ, ರಾಜಸಂಸ್ಕೃತಿಗಳ ಬೆಡಗು ಇರುವ ಮೈಸೂರು ನಗರದಲ್ಲಿ ಫಿಲಂಸಿಟಿ ಸ್ಥಾಪನೆಗೆ ಇದು ಸಕಾಲ, ಸರ್ಕಾರ ಅಂತಹ ಒಂದು ನಿರ್ಧಾರಕ್ಕೆ ಬದ್ಧವಾಗಲು ಕೂಡ ಇದು ಸೂಕ್ತ ಸಮಯ. ಮೈಸೂರು ಚಿತ್ರರಂಗಕ್ಕೆ ಗಟ್ಟಿ ತಳಪಾಯ ಒದಗಿಸಿದ ಕೇಂದ್ರ ಎನ್ನುವುದನ್ನು ಮರೆಯಬಾರದು.1932ರಲ್ಲಿ ಕನ್ನಡದ ಮೊದಲ ಮಾತಿನ ಚಿತ್ರ ಬಿಡುಗಡೆಯಾಯಿತು. 1946ರ ವೇಳೆಗೆ  `ರಾಜ ಸೂಯ ಯಾಗ~ ಎಂಬ ಚಿತ್ರವೊಂದನ್ನು ಹೊರತುಪಡಿಸಿದರೆ, ಉಳಿದ ಎಲ್ಲ 15 ಕನ್ನಡ ಚಿತ್ರಗಳೂ ಕೊಲ್ಹಾಪುರ, ಮುಂಬೈ, ಮದರಾಸಿನ ಸ್ಟುಡಿಯೋಗಳಲ್ಲಿಯೇ ಚಿತ್ರೀಕರಣಗೊಂಡಿದ್ದವು.ಕನ್ನಡ ಚಿತ್ರ ನಿರ್ಮಾಪಕರು ಇದರಿಂದ ಅಪಾರ ನಷ್ಟಕ್ಕೊಳಗಾಗಿದ್ದರು.  ಇದರಿಂದಾಗಿ ಕನ್ನಡ ಚಿತ್ರೋದ್ಯಮವೇ ಸ್ಥಗಿತವಾಗುವ ಸ್ಥಿತಿ ಬಂದಿತ್ತು. ಇಂತಹ ಸಮಯದಲ್ಲಿ 1946ರಲ್ಲಿ ಮೈಸೂರು ನಗರದಲ್ಲಿ `ನವಜ್ಯೋತಿ ಸ್ಟುಡಿಯೋ~ ಆರಂಭವಾಗಿ ಕನ್ನಡ ಚಿತ್ರರಂಗ ಚೇತರಿಸಿಕೊಂಡಿತು.ಬೇಸತ್ತಿದ್ದ ನಿರ್ಮಾಪಕರಿಗೆ ಉಸಿರು ಬಂತು. ಈ ಸ್ಟುಡಿಯೋದಲ್ಲಿ 30ಕ್ಕೂ ಹೆಚ್ಚು ಕನ್ನಡ ಚಿತ್ರಗಳು ತಯಾರಾಗಿ, ಕನ್ನಡ ಚಿತ್ರರಂಗದ ಪತನವನ್ನು ತಡೆಗಟ್ಟಲು ಈ ಸ್ಟುಡಿಯೋ ಸ್ಥಾಪನೆ ನೆರವಾಯಿತು.ನವಜ್ಯೋತಿ ಸ್ಟುಡಿಯೋ ಆರಂಭವಾದ ನಂತರ ಮದರಾಸನ್ನೇ ನಂಬಿ ಅಲ್ಲೇ ನೆಲೆ ಊರಿದ್ದ ಕನ್ನಡ ಚಿತ್ರರಂಗದ ಚಟುವಟಿಕೆಗಳು ಮೈಸೂರಿಗೆ ವಾಪಸ್ಸಾದವು. ಮೈಸೂರಿನ ಖಾಸಗಿ ಬಸ್‌ಗಳ ಮಾಲೀಕ ಜಿ.ಆರ್. ರಾಮಯ್ಯ ಮತ್ತು ಇತರ ಎಂಟು ಮಂದಿ ಸೇರಿ ಆರಂಭಿಸಿದ ನವಜ್ಯೋತಿ ಸ್ಟುಡಿಯೋ ಕನ್ನಡ ಚಿತ್ರರಂಗದ ನಿರ್ಮಾಣ ಚಟುವಟಿಕೆಗಳಿಗೆ ಸ್ಫೂರ್ತಿ ತುಂಬಿತು.

 

ಕನ್ನಡ ಚಿತ್ರಗಳ ನಿರ್ಮಾಣದ ದೊಡ್ಡ ಕೇಂದ್ರವಾಗಿ ಮೈಸೂರು ಮಾರ್ಪಾಡಾಯಿತು. ಮಹಾತ್ಮ ಪಿಕ್ಚರ್ಸ್ ಈ ಸ್ಟುಡಿಯೋ ಮೂಲಕವೇ ಅಸ್ತಿತ್ವಕ್ಕೆ ಬಂದ ಚಿತ್ರಸಂಸ್ಥೆ. ಡಿ. ಶಂಕರ್‌ಸಿಂಗ್, ಬಿ. ವಿಠಲಾಚಾರ್ಯ, ಜಿ.ಎನ್. ವಿಶ್ವನಾಥಶೆಟ್ಟಿ, ಡಿ. ರಾಮಸ್ವಾಮಿ ಮತ್ತು ಇತರ ಅರಸೀಕೆರೆಯ ಗೆಳೆಯರು ಸೇರಿ ಆರಂಭಿಸಿದ `ಮಹಾತ್ಮ ಪಿಕ್ಚರ್ಸ್~ ಸತತವಾಗಿ ಈ ಸ್ಟುಡಿಯೋದಲ್ಲಿ ಚಿತ್ರಗಳನ್ನು ತಯಾರಿಸುತ್ತಾ ಕನ್ನಡ ಪ್ರೇಕ್ಷಕರ ಸಿನಿಮಾ ಅಭಿರುಚಿಯನ್ನು ಬೆಳೆಸಿ ಉಳಿಸಿತು.ಮೈಸೂರಿನ ವ್ಯಾಪಾರಿ ಟಿ.ಎಸ್. ಶಿವಬಸವಯ್ಯನವರು 1943ರಲ್ಲಿ ತಮ್ಮ ಮಿತ್ರರೊಂದಿಗೆ ಸೇರಿ `ವಾಣಿ~ ಎಂಬ ಸಂಗೀತ ಪ್ರಧಾನ ಚಿತ್ರವೊಂದನ್ನು ತಯಾರಿಸುವ ಯೋಜನೆ ಹಾಕಿದರು.ಮೈಸೂರಿನಲ್ಲಿ ಪ್ರಥಮ ಸ್ಟುಡಿಯೋ ಒಂದರ ಉದಯಕ್ಕೆ ಬೀಜಾಂಕುರವಾದದ್ದು ಈ ಸಂದರ್ಭದಲ್ಲಿಯೇ. ಶಿವಬಸವಯ್ಯನವರು ಈ ಚಿತ್ರದ ಪಾಲುದಾರರನ್ನಾಗಿ ಹಾಸ್ಯನಟ, ನಾಟಕ ಕಲಾವಿದ ಕೆ. ಹಿರಣ್ಣಯ್ಯ, ಮೈಸೂರಿನ ಖಾಸಗಿ ಬಸ್ಸುಗಳ ಮಾಲೀಕ ಜಿ.ಆರ್. ರಾಮಯ್ಯ, ಸ್ಥಿರ ಚಿತ್ರಗ್ರಾಹಕ ಗೋಪಾಲ್, ಸಂಗೀತ ವಿದ್ವಾನ್ ಪಿಟೀಲು ಟಿ. ಚೌಡಯ್ಯ ಅವರುಗಳನ್ನು ಸೇರಿಸಿಕೊಂಡಿದ್ದರು.

 

ಈ ಐವರ ಹೆಸರಿನ ಮೊದಲ ಅಕ್ಷರಗಳನ್ನು ತೆಗೆದು ಚಿತ್ರ ಲಾಂಛನಕ್ಕೆ ಎಚ್.ಆರ್.ಜಿ.ಸಿ. ಶ್ರಿ ಪಿಕ್ಚರ್ಸ್ ಎಂದು ಹೆಸರಿಡಲಾಗಿತ್ತು. ಕೊಯಮತ್ತೂರಿನ ಪಕ್ಷಿರಾಜಾ ಸ್ಟುಡಿಯೋದಲ್ಲಿ ಚಿತ್ರೀಕರಣ ನಡೆಯಿತು.`ವಾಣಿ~ ಚಿತ್ರದ ಚಿತ್ರೀಕರಣಕ್ಕಾಗಿ ಸ್ಟುಡಿಯೋ ವ್ಯವಸ್ಥೆ ನೋಡಲು ಕೊಯಮತ್ತೂರಿಗೆ ಹೋಗಿದ್ದ ಜಿ.ಆರ್. ರಾಮಯ್ಯ ಹಾಗೂ ಅವರ ಮಿತ್ರರಿಗೆ ನಾವೂ ಮೈಸೂರಿನಲ್ಲಿ ಸ್ಟುಡಿಯೋ ಒಂದನ್ನು ಏಕೆ ಸ್ಥಾಪಿಸಬಾರದು ಎನ್ನುವ ಆಲೋಚನೆ ಬಂತು. ಆ ಸಮಯದಲ್ಲೇ ಮದರಾಸಿನ ಪ್ರಾಗ್ಜೋತಿ ಸ್ಟುಡಿಯೋ ಮುಚ್ಚಿತ್ತು.

 

ಅಲ್ಲಿನ ಕೆಲವು ಉಪಕರಣಗಳನ್ನು ಹರಾಜಿನಲ್ಲಿ ತಾವು ಪಡೆದುಕೊಂಡರೆ ಮೈಸೂರಿನಲ್ಲಿ ಸ್ಟುಡಿಯೋ ಸ್ಥಾಪಿಸಬಹುದು. ಅಲ್ಲದೆ, ತಮ್ಮ ಮುಂದಿನ ಚಿತ್ರಗಳನ್ನು ಅಲ್ಲೇ ತಯಾರಿಸಬಹುದು ಎಂಬ ಆಲೋಚನೆಯೂ ಜಿ.ಆರ್. ರಾಮಯ್ಯನವರ ತಲೆಯಲ್ಲಿ ಮೂಡಿತು. ನಿರ್ದೇಶಕ ಸಿ.ವಿ. ರಾಜು, ರಾಮಯ್ಯನವರ ಆಲೋಚನೆಗೆ ಹೂಂಗುಟ್ಟಿದರಲ್ಲದೆ, ಉಪಕರಣಗಳನ್ನು ಕೊಳ್ಳಲು ಪ್ರೇರೇಪಿಸಿದರು.

 

ಹೀಗಾಗಿ ರಾಮಯ್ಯ ಮತ್ತು ಗೆಳೆಯರು, ಹರಾಜಿನಲ್ಲಿ ಸ್ಟುಡಿಯೋ ಪರಿಕರಗಳನ್ನು ಕೊಂಡು ತಂದರು. ಮೈಸೂರಿನ ಸರಸ್ವತಿಪುರಂನಲ್ಲಿರುವ ದಳವಾಯಿ ತೋಟದಲ್ಲಿ, ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಕಟ್ಟಡವೊಂದನ್ನು ನಿರ್ಮಿಸಲಾಯಿತು.ಉಪಕರಣಗಳನ್ನು ಅಲ್ಲಿಟ್ಟು, ಅದಕ್ಕೆ ನವಜ್ಯೋತಿ ಸ್ಟುಡಿಯೋ ಎಂದು ನಾಮಕರಣ ಮಾಡಲಾಯಿತು. ಒಂಬತ್ತು ಮಂದಿ ಸ್ನೇಹಿತರು ಸೇರಿ ಈ ಸಾಹಸಕಾರ‌್ಯ ಮಾಡಿದ್ದರಿಂದ ಸ್ಟುಡಿಯೋಗೆ ನವಜ್ಯೋತಿ ಎಂದು ಹೆಸರಿಡಲಾಗಿತ್ತು. ಆರಂಭದಲ್ಲಿ ಮೂರು ಫ್ಲೋರ್‌ಗಳನ್ನು ಹೊಂದಿದ್ದ ಮೈಸೂರಿನ ನವಜ್ಯೋತಿ, ಕಾಲಾನುಕ್ರಮದಲ್ಲಿ ದಕ್ಷಿಣ ಭಾರತದ ಸುಸಜ್ಜಿತ ಸ್ಟುಡಿಯೋ ಎಂದು ಹೆಸರಾಯಿತು.ದ್ವಿತೀಯ ಮಹಾಯುದ್ಧದ ಕಾಲದಲ್ಲಿ ಕಚ್ಚಾ ಫಿಲಂಗಳು ದೊರೆಯದೆ ರೇಷನಿಂಗ್ ಪದ್ಧತಿ ಜಾರಿಗೆ ಬಂದಿತು. ಆಗ ಎಚ್.ಆರ್.ಜಿ.ಸಿ. ಶ್ರಿ ಪಿಕ್ಚರ್ಸ್‌ನಲ್ಲಿ `ವಾಣಿ~ ಚಿತ್ರದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಜಿ.ಆರ್. ರಾಮಯ್ಯನವರು ಚಿತ್ರ ತಯಾರಿಸಲು, ಕಚ್ಚಾ ಫಿಲಂ ಕೋರಿ ಅರ್ಜಿ ಸಲ್ಲಿಸಿದ್ದರು.ಅವರಿಗೆ ಆಗ ಚಿತ್ರ ನಿರ್ಮಿಸಲು ಫಿಲಂ ಕೋಟಾ ದೊರಕಿತು. ನವಜ್ಯೋತಿಯ ನಿರ್ಮಾಣ ಸಾರ್ಥಕವಾಯಿತು. ಮಹಾತ್ಮ ಪಿಕ್ಚರ್ಸ್ ಲಾಂಛನದಲ್ಲಿ ಎಲ್ಲ ಗೆಳೆಯರು ಸೇರಿ `ಕೃಷ್ಣಲೀಲ~ (1947) ಚಿತ್ರವನ್ನು ನವಜ್ಯೋತಿ ಸ್ಟುಡಿಯೋದಲ್ಲಿ ತಯಾರಿಸಿದರು. ಈ ಸ್ಟುಡಿಯೋದಲ್ಲಿ ತಯಾರಾದ ಮೊದಲ ಕನ್ನಡ ಚಿತ್ರ ಇದು. `ಶ್ರಿ ಕೃಷ್ಣಲೀಲ~ ಕನ್ನಡ ಚಿತ್ರರಂಗಕ್ಕೆ ಸ್ವದೇಶಿ ಕಳೆ ತಂದಿತು.  `ನಾಗಕನ್ನಿಕೆ~, `ಜಗನ್ಮೋಹಿನಿ~, `ಭಕ್ತ ರಾಮದಾಸ್~, `ದಲ್ಲಾಳಿ~, `ಭಾರತಿ~, `ಕಲಾವಿದ~ ಹಾಗೂ ಮುಂಬೈನ ರಾಮ್‌ಜಿ ಆರ್ಯ ತಯಾರಿಸಿದ ಎರಡು ಹಿಂದಿ ಚಿತ್ರಗಳು ಇಲ್ಲಿ ತಯಾರಾದವು.ಎಂ.ಜಿ. ರಾಮಚಂದ್ರನ್, ವಿ.ಎನ್. ಜಾನಕಿ ಅಭಿನಯಿಸಿದ `ವರದ್ದು ನಾಟ್ಟು ಇಳವರಸಿ~ ಚಿತ್ರ ಇಲ್ಲಿ ತಯಾರಾದ ಮುಖ್ಯ ಚಿತ್ರ. 1953 ನವಜ್ಯೋತಿಗೆ ಅತಿ ಉಚ್ಫ್ರಾಯದ ಕಾಲ. ಈ ಸಮಯದಲ್ಲಿ ಸ್ಟುಡಿಯೋ ಚಟುವಟಿಕೆಗಳು ಅತಿ ಬಿರುಸಾಗಿತ್ತು. ಈ ಸಮಯದಲ್ಲೇ ಅಮೆರಿಕದ ನಿರ್ದೇಶಕ ಮೆಕಲ್‌ಡೇ ಎನ್ನುವವರು ನವಜ್ಯೋತಿಯ ಉಪಕರಣಗಳನ್ನು ಬಳಸಿಕೊಂಡು ಆಂಗ್ಲ ಬಣ್ಣದ ಚಿತ್ರವೊಂದನ್ನು ತಯಾರಿಸಿದರು.ಈ ಸ್ಟುಡಿಯೋದಲ್ಲಿ ಒಟ್ಟು 30 ಚಿತ್ರಗಳು ತಯಾರಾಗಿವೆ. ಶಂಕರ್‌ಸಿಂಗ್ ಅವರು ಮೈಸೂರಿನಲ್ಲೇ ಚಿತ್ರರಂಗವನ್ನು ಬೆಳೆಸಬೇಕು ಎನ್ನುವ ಚಳವಳಿಯನ್ನು ಏಕಾಂಗಿಯಾಗಿ ನಡೆಸಿದರು. ವಿಠಲಾಚಾರ್ಯರು ಮೈಸೂರು ತೊರೆದು, ಮದರಾಸಿಗೆ ಹೋದರೂ ಜಗ್ಗದೆ, ಮೈಸೂರಿನಲ್ಲೇ ಕುಳಿತು ಯಶಸ್ವಿ ಚಲನಚಿತ್ರಗಳನ್ನು ತಯಾರಿಸಬಹುದೆಂದು ಅವರು ನಿರೂಪಿಸಿದರು.ಕನ್ನಡ ಚಿತ್ರರಂಗದ ಕುಸಿತವನ್ನು ಒಂದು ಕಾಲದಲ್ಲಿ ತಡೆದು, ತಯಾರಿಕೆಗೆ ಭದ್ರ ಬುನಾದಿ ಹಾಕಿದ್ದ ನವಜ್ಯೋತಿ ಸ್ಟುಡಿಯೋವನ್ನು ಆರ್ಥಿಕ ಮುಗ್ಗಟ್ಟಿನಿಂದಾಗಿ 1963ರಲ್ಲಿ  ಹರಾಜು ಹಾಕಲಾಯಿತು.ಪ್ರೀಮಿಯರ್ ಇನ್‌ಶ್ಯೂರೆನ್ಸ್ ಕಂಪನಿಯಲ್ಲಿ ನೌಕರರಾಗಿದ್ದ ಎಂ.ಎನ್. ಬಸವರಾಜಯ್ಯ ಪ್ರೀಮಿಯರ್ ಸ್ಟುಡಿಯೋ ಸ್ಥಾಪಿಸಿದ್ದು ಕೂಡ ಮುಖ್ಯವಾದ ಘಟನೆ.  ಮೈಸೂರು ಅರಮನೆಗೆ ಸೇರಿದ ಚಿತ್ತರಂಜನ್ ಮಹಲ್‌ನಲ್ಲಿ ಪ್ರೀಮಿಯರ್ ಸ್ಟುಡಿಯೋ 1954ರಂದು ಕಾರ‌್ಯಾರಂಭ ಮಾಡಿತು.ಕನ್ನಡ ಚಿತ್ರರಂಗ ಕನ್ನಡ ನೆಲದಲ್ಲಿಯೇ ಉಳಿದು ಬೆಳೆಯಲು ಪ್ರೀಮಿಯರ್ ಸ್ಟುಡಿಯೋ ನೀಡಿದ ಕಾಣಿಕೆಯನ್ನು ಕಡೆಗಣಿಸುವಂತಿಲ್ಲ. ರಾಜ್ಯ ಸರ್ಕಾರ ಕರ್ನಾಟಕದಲ್ಲಿಯೇ ತಯಾರಾದ ಕನ್ನಡ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಪ್ರಕಟಿಸಿದ ನಂತರವಂತೂ ಈ ಸ್ಟುಡಿಯೋ ಚಟುವಟಿಕೆ ಹೆಚ್ಚಾಯಿತು.ಆರಂಭದಲ್ಲಿ ಒಂದೇ ಫ್ಲೋರ್ ಹೊಂದಿದ್ದ ಈ ಸ್ಟುಡಿಯೋ ಹತ್ತು ವರ್ಷಗಳಲ್ಲಿ ಐದು ಫ್ಲೋರ್‌ಗಳ ಸ್ಟುಡಿಯೋ ಆಗಿ ಪರಿವರ್ತನೆಗೊಂಡಿತು. ಹೊರಾಂಗಣ ಚಿತ್ರೀಕರಣ ಘಟಕ, ಒಂದೇ ಬಾರಿಗೆ ಏಳು ಚಿತ್ರಗಳ ಚಿತ್ರೀಕರಣಕ್ಕೆ ಬೇಕಾಗುವ ಸೌಲಭ್ಯ, ಡೆವಲಪಿಂಗ್, ಪ್ರಿಂಟಿಂಗ್, ಸಂಕಲನ, ಪ್ರದರ್ಶನ ಮಂದಿರ, ಆಧುನಿಕ ಮೂರು ಮಿಚೆಲ್ ಹಾಗೂ ಎರಡು ಏರಿಫ್ಲೆಕ್ಸ್ ಕ್ಯಾಮೆರಾ ಹೀಗೆ ಎಲ್ಲ ಸೌಲಭ್ಯ ಹೊಂದಿದ್ದ ಪ್ರೀಮಿಯರ್ ಸ್ಟುಡಿಯೋದಲ್ಲಿ ತಯಾರಾಗಿ ಹೊರಬಂದ ಮೊದಲ ಚಿತ್ರ `ಸ್ತ್ರೀ ರತ್ನ~.ಹಲವಾರು ವಿದೇಶಿ ನಿರ್ಮಾಪಕರೂ ಈ ಸ್ಟುಡಿಯೋ ಉಪಕರಣಗಳನ್ನು ಬಳಸಿಕೊಂಡು ಮೈಸೂರಿನ ಸುತ್ತಮುತ್ತ ಶೂಟಿಂಗ್ ನಡೆಸಿದ್ದಾರೆ. ಅಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಲವಾರು ಭಾಷೆಗಳ ಸುಮಾರು 350ಕ್ಕೂ ಹೆಚ್ಚು ಚಿತ್ರಗಳು ಈ ಸ್ಟುಡಿಯೋದಿಂದ ತಯಾರಾಗಿ ಹೊರಬಂದಿವೆ.ಮೈಸೂರು ಚಿತ್ರೀಕರಣ ತಾಣಗಳ ಸ್ವರ್ಗ. ಸುತ್ತಮುತ್ತ ಎತ್ತ ನೋಡಿದರೂ ಪ್ರಕೃತಿ ವೈಭವ. ಹಾಲಿವುಡ್‌ಗಿಂತಲೂ ರಮ್ಯ ನಮ್ಮ ಮೈಸೂರು. ಫಿಲಂ ಸಿಟಿ ಮಾಡುವುದಾದರೆ ನನ್ನ ಓಟು ಮೈಸೂರಿಗೇ.             

           

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.