ಇದು ತುಷ್ಟೀಕರಣದ ಕಾಲ, ಮತದಾರ ಪ್ರಭುವಿಗೆ ಇದ್ದಕ್ಕಿದ್ದಂತೆ ಬೆಲೆ ಬರುವ ಕಾಲ; ಐದು ವರ್ಷಗಳ ಕಾಲ ದೂರವಿದ್ದ ಜನಪ್ರತಿನಿಧಿಗಳು ಈಗ ಜನರ ನೆರೆಹೊರೆಯಲ್ಲಿ ಕಾಣಿಸಿಕೊಳ್ಳುವ ಕಾಲ. ಅಧಿಕಾರಕ್ಕೆ ಬರಬೇಕು ಎನ್ನುವವರು ಬಸ್ಸುಗಳಲ್ಲಿ, ಪಾರ್ಕು ಗಳಲ್ಲಿ ಕಾಣಿಸಿಕೊಳ್ಳುವ ಕಾಲ! ಇಷ್ಟೇ ಆಗಿದ್ದರೆ ಯೋಚನೆ ಇರಲಿಲ್ಲ. ನಮಗೂ ಅದು ರೂಢಿಯಾಗಿತ್ತು. ಅವರಿಗೂ ರೂಢಿಯಾಗಿತ್ತು.

ಆದರೆ, ಅವರು ಇಷ್ಟಕ್ಕೇ ಸುಮ್ಮನಾಗುವಂತೆ ಕಾಣುವುದಿಲ್ಲ. ಮತದಾರರನ್ನು ಸಂಪ್ರೀತ ಗೊಳಿಸಲು ಏನೆಲ್ಲ ಸಾಧ್ಯವೋ ಅದನ್ನೆಲ್ಲ ಮಾಡುವಂತೆ ಕಾಣುತ್ತಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟ ಇದಕ್ಕೆ ಮೊದಲ ಮಾದರಿಯನ್ನು ಹಾಕಿಕೊಟ್ಟಿದೆ. ಕಳೆದ ತಿಂಗಳಷ್ಟೇ ಮಧ್ಯಾಂತರ ಮುಂಗಡಪತ್ರ ಮಂಡಿಸಿರುವ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮಧ್ಯಮ ವರ್ಗವನ್ನೇ ಮುಖ್ಯವಾಗಿ ದೃಷ್ಟಿಯಲ್ಲಿ ಇಟ್ಟುಕೊಂಡಿದ್ದರು. ಈ ವರ್ಗ ಮೋದಿಯ ಮೋಡಿಗೆ ಒಳಗಾದಂತೆ ಭಾಸವಾಗುತ್ತಿರುವ ಆತಂಕ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿರಬಹುದು.

ಅಡುಗೆ ಅನಿಲ ಸಿಲಿಂಡರ್ಗಳ ಮಿತಿಯನ್ನು ಒಂಬತ್ತರಿಂದ ಹನ್ನೆರಡಕ್ಕೆ ಏರಿಸಿದ್ದರಲ್ಲಿ ಕೂಡ ಮುಖ್ಯವಾಗಿ ಮಧ್ಯಮ ವರ್ಗವನ್ನು ಓಲೈಸುವ ಉದ್ದೇಶವೇ ಇತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಜಾತಿಗಳ ಮಠಗಳಿಗೆ 66 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ.

ನಮ್ಮ ದೇಶದ, ರಾಜ್ಯದ, ರಾಜಕೀಯ ಈಗ ಹೇಗಿದೆ ಎಂದರೆ ಆಡಳಿತ ಮಾಡುವ ಪಕ್ಷಗಳು ಮಾತ್ರ ಬದಲಾಗುತ್ತವೆ; ನಾಯಕರು ಬದಲಾಗುವುದಿಲ್ಲ. ಅವರ ರಾಜಕೀಯದ ಶೈಲಿಯೂ ಬದಲಾಗುವುದಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕೂಡಲೇ ಮಠ ಮಂದಿರಗಳಿಗೆ ಹೋಗಲಿಲ್ಲ, ಬದಲಿಗೆ ಸಾಹಿತಿಗಳ ಮನೆಗಳಿಗೆ ಹೋಗಿದ್ದರು. ಅದು ನಮಗೆಲ್ಲ ಒಂದು ದಿಟ್ಟ ಸಂಕೇತದಂತೆ ಕಾಣಿಸಿತ್ತು. ಈಗಲೂ ಅವರು ಮಠಗಳಿಗೆ ಹೋಗುವಂತೆ ಕಾಣುವುದಿಲ್ಲ. ಆದರೆ, ಅವರು ರಾಜಕೀಯ ಅನಿವಾರ್ಯಗಳ ಬಂದಿಯಾಗಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಮಠಗಳನ್ನು ಓಲೈಸುವ ರಾಜಕಾರಣ ಮಾಡುತ್ತಿದ್ದಾಗ ಇದೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ನಿಂತು ಮಾತನಾಡಿದ್ದು ಇನ್ನೂ ಯಾರಿಗೂ ಮರೆತು ಹೋಗಿಲ್ಲ.

ಈಗ ಸಿದ್ದರಾಮಯ್ಯನವರೂ ಬಿಜೆಪಿ ಸರ್ಕಾರ ಮಾಡಿದ್ದನ್ನೇ ಮಾಡುತ್ತಿದ್ದಾರೆ. ‘ನಾವೇನು ಮಠಗಳಿಗೆ ವಿರೋಧವಾಗಿಲ್ಲ. ಅವುಗಳಿಗೆ ದೊಡ್ಡ ಪ್ರಮಾಣದಲ್ಲಿ ಹಣ ಕೊಡುತ್ತೇವೆ’ ಎಂದು ಸಿದ್ದರಾಮಯ್ಯನವರ ಬಂಟನಂತೆಯೇ ಇರುವ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಬಹಿರಂಗವಾಗಿಯೇ ಘೋಷಿಸುತ್ತಾರೆ. ಹಿಂದೆಯೇ ಸರ್ಕಾರದ ಆದೇಶವೂ ಹೊರಬೀಳುತ್ತದೆ. ಕೇಂದ್ರ ಚುನಾವಣೆ ಆಯೋಗದ ಪ್ರಕಟಣೆ ಹೊರಗೆ ಬಿದ್ದ ದಿನವೇ ಮಠಗಳಿಗೆ ಹಣ ಬಿಡುಗಡೆ ಮಾಡಿದ ಸುದ್ದಿಯೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತದೆ. ಇದೆಲ್ಲ ಕೇವಲ ಕಾಕತಾಳೀಯ ಇರಲಾರದು.

ಸಿದ್ದರಾಮಯ್ಯ ಸರ್ಕಾರದ ಆರ್ಥಿಕ ಸ್ಥಿತಿ ಬಹಳ ಭದ್ರವಾಗಿಯೇನೂ ಇಲ್ಲ. ಅವರೇನೋ ಎಂದಿನಂತೆ ಈ ಸಾರಿಯೂ ಉಳಿತಾಯ ಬಜೆಟ್ ಮಂಡಿಸಿದ್ದಾರೆ. ಅದರ ಹಿಂದೆಯೇ ಚಾಲ್ತಿನ ಸಾಲಿನ 4,400 ಕೋಟಿ ರೂಪಾಯಿಗಳ ಪೂರಕ ಅಂದಾಜನ್ನೂ ಮಂಡಿಸಿದ್ದಾರೆ. ಅಂದರೆ ಕಳೆದ ವರ್ಷ 4,400 ಕೋಟಿ ರೂಪಾಯಿ ಹೆಚ್ಚು ಖರ್ಚು ಮಾಡಲಾಗಿದೆ ಎಂದು ಅರ್ಥ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಕೊಡುವ ತೀರ್ಮಾನ ಪ್ರಕಟಿಸಿದಾಗ ಅಂದಾಜು ಮಾಡಿದ ಹೆಚ್ಚುವರಿ ಹೊರೆ 4,000 ಕೋಟಿ ರೂಪಾಯಿಗಳ ಸುತ್ತಮುತ್ತಲೇ ಇತ್ತು. ಆ ಕೊರತೆಯನ್ನು ಅವರಿಗೆ ತುಂಬಿಸಿಕೊಳ್ಳಲು ಆಗಲಿಲ್ಲ. ಈ ವರ್ಷ ಚುನಾವಣೆ ವರ್ಷ ಎಂದು ಅವರೂ ತಮ್ಮ ಬಜೆಟ್ನಲ್ಲಿ ಸಂಪನ್ಮೂಲ ಸಂಗ್ರಹಣೆಗೆ ಒತ್ತು ನೀಡಲಿಲ್ಲ. ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರಂತೂ ಮುಂದಿನ ಹಣಕಾಸು ಸಚಿವರ ತಲೆಗೆ ಎಲ್ಲ ತಲೆನೋವನ್ನು ಕಟ್ಟಿಬಿಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಇನ್ನೂ ನಾಲ್ಕು ವರ್ಷ ಅಧಿಕಾರ ಮಾಡಬೇಕು. ಅವರು ಬರೀ ಮುಖ್ಯಮಂತ್ರಿ ಆಗಿ ಇರುವುದಿಲ್ಲ. ಹಣಕಾಸು ಸಚಿವರೂ ಆಗಿ ಇರುತ್ತಾರೆ.

ಪ್ರಧಾನಿ ಮನಮೋಹನ ಸಿಂಗ್ ಅವರು 1991ರಲ್ಲಿ ಆಗಿನ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಆರ್ಥಿಕ ಸುಧಾರಣೆಗಳಿಗೆ ಚಾಲನೆ ನೀಡುವಾಗ, ‘ಎಲ್ಲ ಸರ್ಕಾರಗಳು ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು’ ಎಂದು ಹೇಳಿದ್ದರು. ಇದನ್ನು ಅವರೇ ಹೇಳಬೇಕಾಗಿರಲಿಲ್ಲ. ನಮ್ಮ ಹಿರಿಯರು ಹೀಗೆಯೇ ಸಂಸಾರ ಮಾಡಿದ್ದರು. ತಮ್ಮ ಮಕ್ಕಳಿಗೆ ಅದೇ ಕಿವಿ ಮಾತು ಹೇಳಿದ್ದರು. ಸಿಂಗ್ ಅವರೂ ಹಾಗೆ ಹೇಳಲು ಒಂದು ಕಾರಣವಿತ್ತು. ಮುಖ್ಯವಾಗಿ ಅವರಿಗೆ ಅಂಕೆಯಿಲ್ಲದ ಸಹಾಯಧನಗಳ ಮೇಲೆ ನಿಯಂತ್ರಣ ಹಾಕಬೇಕಿತ್ತು. ಇದೀಗ ಎರಡು ಅವಧಿಗೆ ಸತತವಾಗಿ ಪ್ರಧಾನಿ ಹುದ್ದೆಯನ್ನು ಪೂರ್ಣಗೊಳಿಸಿರುವ ಸಿಂಗ್ ಅವರಿಗೆ ತಾವು ಅಂದು ಕೊಂಡುದನ್ನು ಮಾಡಲು ಆಗಲಿಲ್ಲ. ವೋಟಿನ, ಅಧಿಕಾರದ ರಾಜಕೀಯ ನಿರ್ಮಿಸಿರುವ ಅನಿವಾರ್ಯ ಸ್ಥಿತಿಯಲ್ಲಿ ಅವರೂ ಬಂದಿಯಾದರು.

ಇದು ಒಂದು ಆಕ್ಟೊಪಸ್ ಹಿಡಿತ. ಯಾರೂ ಇದರ ಹಿಡಿತದಿಂದ ಹೊರಗೆ ಬರಲು ಸಿದ್ಧರಿಲ್ಲ. ಸಾಧ್ಯವೂ ಇಲ್ಲವೇನೋ? ಅಧಿಕಾರ ಹಿಡಿಯಬೇಕು ಎಂದರೆ ಮತದಾರರನ್ನು ಹೇಗಾದರೂ ಮಾಡಿ ಸಂಪ್ರೀತಗೊಳಿಸಬೇಕು ಎಂದೇ ಎಲ್ಲರೂ ಅಂದುಕೊಂಡಂತೆ ಕಾಣುತ್ತದೆ. ಹಾಗಾದರೆ ಆಡಳಿತ ಎಂದರೆ ಏನು? ಒಂದು ಸರ್ಕಾರದ ಕೆಲಸ ಏನು? ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬರಬೇಕು ಎಂದರೆ ಹೀಗೆ ಉಚಿತ ಕಾಣಿಕೆಗಳನ್ನು ಮಾತ್ರ ಕೊಡಬೇಕೇ? ಅವು ಟಿ.ವಿ, ಲ್ಯಾಪ್ಟಾಪ್, ಮೊಬೈಲ್, ಮಿಕ್ಸಿ, ಗ್ರೈಂಡರ್ ಹೀಗೆ ಮನೆಬಳಕೆಯ ವಸ್ತುಗಳೇ ಆಗಿರಬೇಕೇ? ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಹನ್ನೊಂದನೇ ತರಗತಿಯ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ಕೊಡುತ್ತೇನೆ ಎಂಬ ಭರವಸೆ ಕೊಟ್ಟು ಅಧಿಕಾರ ಹಿಡಿದರು. ಅಧಿಕಾರಕ್ಕೆ ಬಂದ ಮೇಲೆ ಸಿದ್ದರಾಮಯ್ಯ ಅದೇ ಭರವಸೆ ಕೊಟ್ಟಿದ್ದಾರೆ.

ತಾವಷ್ಟೇ ಅಧಿಕಾರಕ್ಕೆ ಬರುವುದಲ್ಲ, ತಮ್ಮ ಪಕ್ಷವನ್ನು ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ತರುವ ಹೊಣೆಗಾರಿಕೆಯೂ ಅವರ ಮೇಲೆಯೇ ಇದೆ. ಜಯಲಲಿತಾ ಅವರು ತಮ್ಮ ರಾಜಕೀಯ ಕಡುವೈರಿ ಎಂ.ಕರುಣಾನಿಧಿ ಬಣ್ಣದ ಟಿ.ವಿ ಕೊಟ್ಟು ಅಧಿಕಾರಕ್ಕೆ ಬಂದುದನ್ನು ನೋಡಿದ್ದರು. ಅದಕ್ಕಿಂತ ದುಬಾರಿಯಾದ ಲ್ಯಾಪ್ಟಾಪ್ ಕೊಡುವ ಭರವಸೆ ಕೊಟ್ಟು ಜಯಾ ಅಧಿಕಾರದ ಏಣಿ ಏರಿದರು. ಈಗ ಅವರಿಗೆ ದೆಹಲಿಯ ಗದ್ದುಗೆಯ ಮೇಲೆ ಕಣ್ಣು. ಎಲ್ಲರಿಗಿಂತ ಮುಂಚೆ ಅವರು ಮತ್ತೆ ಮತದಾರರ ಮುಂದೆ ಆಮಿಷಗಳ ಮೂಳೆಗಳನ್ನು ಹಿಡಿದಿದ್ದಾರೆ. ಆದಾಯ ತೆರಿಗೆ ಮಿತಿ ಐದು ಲಕ್ಷಕ್ಕೆ ಏರಿಸುವುದು, ಇತ್ಯಾದಿ... ಇತ್ಯಾದಿ... ತಮ್ಮ ಜನ್ಮ ದಿನವಾದ ಫೆಬ್ರುವರಿ 24ರಂದು ಹುಟ್ಟಿದ ಎಲ್ಲ ಹೆಣ್ಣು ಶಿಶುಗಳಿಗೆ ತಲಾ ಹತ್ತು ಸಾವಿರ ರೂಪಾಯಿಗಳ ಕೊಡುಗೆಯನ್ನೂ ಅವರು ಘೋಷಿಸಿದರು. ಇತ್ತ ತಮ್ಮ ರಾಜ್ಯದ ಮೂಲ ಸೌಕರ್ಯ ಮತ್ತು ಆಡಳಿತ ಸುಧಾರಣಾ ಕ್ರಮಗಳಿಗೆ 41,000 ಕೋಟಿ ರೂಪಾಯಿ ಕೊಡಬೇಕು ಎಂದು ಕೇಂದ್ರದ 14ನೇ ಹಣಕಾಸು ಆಯೋಗದ ಮುಂದೆ ಅಹವಾಲನ್ನೂ ಮಂಡಿಸಿದರು. ನಮ್ಮ ವರಮಾನದ ಮೂಲಗಳನ್ನು ಬತ್ತಿಸಿಕೊಂಡು ಕೇಂದ್ರದ ಮುಂದೆ ಬೊಗಸೆಯೊಡ್ಡಿದರೆ ಕೊಡಲು ಅದೇನು ತನ್ನ ಹಿತ್ತಲಲ್ಲಿ ಹಣದ ಮರಗಳನ್ನು ನೆಟ್ಟಿದೆಯೇ?

ಇದು ಒಂದು ದ್ವಂದ್ವ, ಇದು ಮೀರಲಾಗದ ದ್ವಂದ್ವ. ಭಾರತದಂಥ ಬಡವರೇ ಹೆಚ್ಚು ಇರುವ ದೇಶದಲ್ಲಿ ಇಂಥ ಸಹಾಯಧನಗಳನ್ನು ಸಂಪೂರ್ಣ ನಿವಾರಣೆ ಮಾಡಲು ಆಗುವುದಿಲ್ಲ. ಸಿದ್ದರಾಮಯ್ಯನವರ ‘ಅನ್ನ ಭಾಗ್ಯ’ ಯೋಜನೆಯನ್ನು ಟೀಕಿಸುವವರ ಜತೆಗೆ ಸ್ವಾಗತಿಸುವವರೂ ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಒಂದು ರೂಪಾಯಿಗೆ ಒಂದು ಕೆ.ಜಿ ಅಕ್ಕಿ ಕೊಡುವ ಸಿದ್ದರಾಮಯ್ಯನವರು ಅದೇ ಅಕ್ಕಿಯನ್ನು ಇಪ್ಪತ್ತು ಪಟ್ಟು ಹೆಚ್ಚು ಹಣ ಕೊಟ್ಟು ಲೆವಿ ಮೂಲಕ ಸಂಗ್ರಹಿಸುತ್ತಿದ್ದಾರೆ. ಮುಂದೆ ಬರುವ ಸರ್ಕಾರ ‘ನಮಗೆ ಅಧಿಕಾರ ಕೊಟ್ಟರೆ ಎಲ್ಲ ಬಡವರಿಗೆ ಉಚಿತವಾಗಿಯೇ ಇಪ್ಪತ್ತು ಕೆ.ಜಿ ಅಕ್ಕಿ ಕೊಡುತ್ತೇವೆ’ ಎಂದು ಭರವಸೆ ಕೊಟ್ಟು ಬಿಡಬಹುದಲ್ಲ? ಅದು ನಮಗೆ ಇನ್ನೂ ಹೆಚ್ಚು ಕ್ರಾಂತಿಕಾರಿ ತೀರ್ಮಾನವಾಗಿ ಕಾಣಬಹುದಲ್ಲ? ಈಗ ನಾಲ್ಕು ಸಾವಿರ ಕೋಟಿ ಹೊರೆ ಬಿದ್ದಿದೆ. ಇನ್ನೊಂದು ಸಾವಿರ ಕೋಟಿ ಹೆಚ್ಚು ಆದರೆ ಆಗಲಿ ಬಿಡಿ ಎಂದು ಮುಂದೆ ಮುಖ್ಯಮಂತ್ರಿ ಆಗುವವರು ಹೇಳಿದರೆ ನಾವು ಅವರಿಗೆ ಏನು ಹೇಳುವುದು?

ಇಲ್ಲಿ ನಾವು ಒಂದು ಸೂಕ್ಷ್ಮವನ್ನು ಗಮನಿಸುತ್ತಿಲ್ಲ; ಅಥವಾ ಗಮನಿಸಿದರೂ ಅದನ್ನು ಒತ್ತಿ ಹೇಳುತ್ತಿಲ್ಲ. ಎಲ್ಲ ಸಹಾಯಧನಗಳ ಹೊರೆ ಅಂತಿಮವಾಗಿ ದೇಶದ ಮೇಲೆಯೇ ಬೀಳುತ್ತದೆ. ಪಕ್ಷ ಯಾವುದೇ ಇರಲಿ, ಅದು ಕೊಡುವ ಭರವಸೆಗಳನ್ನು ತನ್ನ ಮನೆಯಿಂದ ಹಣ ತಂದೇನೂ ಈಡೇರಿಸುವುದಿಲ್ಲ. ಕರುಣಾನಿಧಿಯವರು ಬಣ್ಣದ ಟಿ.ವಿಗಳನ್ನು ಸರ್ಕಾರದ ಬೊಕ್ಕಸದಿಂದ ಹಣ ತೆಗೆದೇ ಖರೀದಿಸಿ ಜನರಿಗೆ ಹಂಚುತ್ತಾರೆ. ಜಯಲಲಿತಾ ಅವರು ಲ್ಯಾಪ್ಟಾಪ್ಗಳನ್ನು ಅದೇ ಬೊಕ್ಕಸದಿಂದಲೇ ಖರೀದಿಸಿ ವಿತರಿಸುತ್ತಾರೆ. ಸಿದ್ದರಾಮಯ್ಯನವರು ಬಡವರಿಗೆ ಅಕ್ಕಿಯನ್ನೇ ಕೊಡಲಿ, ಮಠಗಳಿಗೆ ಹಣವನ್ನೇ ಕೊಡಲಿ ಈಗಾಗಲೇ ಕೊರತೆ ಎದುರಿಸುತ್ತಿರುವ ಬೊಕ್ಕಸದಿಂದಲೇ ಕೊಡಬೇಕು. ಜನರಿಗೂ ಇದು ಗೊತ್ತಿದ್ದಂತೆ ಕಾಣುತ್ತದೆ. ‘ರಾಜಕಾರಣಿಗಳೇನು ತಮ್ಮ ಮನೆಯಿಂದ ಕೊಡುತ್ತಾರೆಯೇ? ಕೊಟ್ಟರೆ ಕೊಡಲಿ, ತೆಗೆದುಕೊಂಡು ಹೋದರಾಯಿತು’ ಎಂದು ಬೊಗಸೆಯೊಡ್ಡಿ ಸಾಲಾಗಿ ನಿಂತುಕೊಳ್ಳುತ್ತಾರೆ.

ಸರ್ಕಾರ ಎಂದರೆ ಇಷ್ಟೇ ಅಲ್ಲವಲ್ಲ? ಒಂದು ರಾಜ್ಯಕ್ಕೆ ಒಳ್ಳೆಯ ರಸ್ತೆಗಳು ಬೇಕು. ಅಲ್ಲಿನ ಬಡ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು. ಬಡವರಿಗೆ ಒಳ್ಳೆಯ ಆರೋಗ್ಯ ಸೇವೆ ದೊರಕಬೇಕು. ಅಲ್ಲಿನ ರೈತರ ಹೊಲಗದ್ದೆಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಬೇಕು. ಕನಿಷ್ಠ ಹನ್ನೆರಡು ಗಂಟೆ ಕಾಲ ಹಳ್ಳಿಗಳಲ್ಲಿ ಗುಣಮಟ್ಟದ ವಿದ್ಯುತ್ ಇರಬೇಕು. ಶುದ್ಧವಾದ ಕುಡಿಯುವ ನೀರು ಸಿಗಬೇಕು. ಬಾಕಿಯದೆಲ್ಲ ಹೋಗಲಿ, ನಮ್ಮ ಎಲ್ಲ ಹಳ್ಳಿಗಳಲ್ಲಿ ಶುದ್ಧವಾದ ಕುಡಿಯುವ ನೀರಾದರೂ ಸಿಗುತ್ತಿದೆಯೇ? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಲ್ಲಿ ಅದನ್ನು ಪೂರೈಸಲು ಸರ್ಕಾರ ಸಮರ್ಥವಾಯಿತೇ? ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲರನ್ನು ಕೇಳಿ, ಉತ್ತರ ಹೇಳುತ್ತಾರೆ!

ಹಾಗಾದರೆ ರಾಜಕಾರಣಿಗಳು ನಮಗೆ ಮೋಸ ಮಾಡುತ್ತಿದ್ದಾರೆಯೇ? ಸರ್ಕಾರದ ಬೊಕ್ಕಸದಿಂದ ಮೊಗೆದು ಮೊಗೆದು ತೆಗೆದು ನಮ್ಮ ಬೊಗಸೆಗಳನ್ನು ಮಾತ್ರ ತುಂಬುವವರು ಮತ್ತೇನು ಮಾಡುತ್ತಿದ್ದಾರೆ? ಅವರು ವ್ಯಾಪಾರಿಗಳಾಗಿದ್ದಾರೆ. ನಮ್ಮನ್ನು ಗ್ರಾಹಕರು ಎಂದು ಅಂದುಕೊಂಡಿದ್ದಾರೆ. ಆದರೆ, ಇದರ ಆಚೆ ಸರ್ಕಾರ ಮತ್ತು ಜನರ ನಡುವೆ ಒಂದು ಸಂಬಂಧ ಇದೆ. ಒಂದು ಉದ್ದೇಶ ಎಂದು ಇದೆ. ಐದು ವರ್ಷಗಳ ಅವಧಿಗೆ ಚುನಾಯಿತರಾದ ಜನಪ್ರತಿನಿಧಿಗಳಿಗೆ ಅಕ್ಕಿ ಕೊಡುವುದು, ಬಣ್ಣದ ಟಿ.ವಿ ಕೊಡುವುದು, ಲ್ಯಾಪ್ಟಾಪ್ ಕೊಡುವುದು ಮಾತ್ರ ಹೊಣೆಗಾರಿಕೆಯಲ್ಲ.

ಒಟ್ಟು ನಾಡನ್ನು ಸಂಪದ್ಭರಿತ ಮಾಡುವ ಕನಸನ್ನು ಅವರು ಕಾಣಬೇಕು. ಒಂದು ನಾಡು ಶ್ರೀಮಂತವಾದರೆ ಮಾತ್ರ ಅಲ್ಲಿನ ಜನರೂ ಶ್ರೀಮಂತರಾಗುತ್ತಾರೆ. ರಾಜಕೀಯ ನಾಯಕರಿಗೆ ಶ್ರೀಮಂತ ನಾಡು ಕಾಣುತ್ತಿಲ್ಲ. ಅದನ್ನು ನಿರ್ಮಿಸಬಹುದಾದ ಸಂಸತ್ತು ಕಾಣುತ್ತಿಲ್ಲ. ಶಾಸನ ಸಭೆಗಳು ಕಾಣುತ್ತಿಲ್ಲ. ಅಧಿಕಾರದ ಕುರ್ಚಿಯೊಂದೇ ಕಾಣುತ್ತಿದೆ. ‘ಬಲಿಷ್ಠ ಭಾರತ’ವನ್ನು ನಿರ್ಮಿಸಲು ಹೊರಟಿರುವ ರಾಜಕೀಯ ಪಕ್ಷ ಮತ್ತು ಅದರ ನಾಯಕರು ನಮ್ಮ ಮುಂದೆ ಇನ್ನೇನೇನು ಬಿಸಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಯೋ ಯಾರಿಗೆ ಗೊತ್ತು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.