ಶನಿವಾರ, ಜೂನ್ 19, 2021
23 °C

ಭಾರತ ಪದಕ ಗೆದ್ದರೆ ಮಾತ್ರ ಹಾಕಿ ಚಿಗುರುತ್ತದೆ

ಗೋಪಾಲ ಹೆಗಡೆ Updated:

ಅಕ್ಷರ ಗಾತ್ರ : | |

ಲಂಡನ್ ಒಲಿಂಪಿಕ್ಸ್ ಕ್ರೀಡೆಗಳು ಇನ್ನು ಹೆಚ್ಚು ದೂರ ಇಲ್ಲ. ಜುಲೈ 27 ರಂದು ಕ್ರೀಡೆಗಳು ಆರಂಭ. ಹೆಚ್ಚೇನೂ ಗಲಾಟೆ ಇಲ್ಲದಿದ್ದರೂ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಒಲಿಂಪಿಕ್ಸ್ ಎಂದೂ ರಾಜಕೀಯದಿಂದ ಮುಕ್ತವಾಗಿಯೇ ಇಲ್ಲ. ಒಂದಲ್ಲ ಒಂದು ವಿವಾದ ಕಾಡುತ್ತಲೇ ಇರುತ್ತದೆ. ಲಂಡನ್ ಒಲಿಂಪಿಕ್ ಕ್ರೀಡೆಗಳ ಪ್ರಾಯೋಜಕತ್ವ ವಹಿಸಿಕೊಂಡಿರುವ ಡೌ ಕಂಪೆನಿಯನ್ನು ಕೈಬಿಡಬೇಕೆಂಬ ಭಾರತದ ಒತ್ತಾಯಕ್ಕೆ ಅಂತರರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಮಣಿಯುತ್ತಿಲ್ಲ. 1984 ರ ಭೋಪಾಲ್ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಖರೀದಿಸಿರುವ ಡೌ ಕೆಮಿಕಲ್ಸ್ ಸಂಸ್ಥೆ ದುರಂತದಲ್ಲಿ ನೊಂದವರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಲೂ ನಿರಾಕರಿಸುತ್ತಿದೆ. ಅದು ಈಗ ಒಲಿಂಪಿಕ್ ಕ್ರೀಡೆಗಳಿಗೆ ಆರ್ಥಿಕ ನೆರವು ನೀಡುತ್ತಿರುವುದರ ವಿರುದ್ಧ ಸಹಜವಾಗಿಯೇ ಭಾರತ ಪ್ರತಿಭಟಿಸುತ್ತಿದೆ.

ಭಾರತಕ್ಕೆ ಬೇರೆ ರಾಷ್ಟ್ರಗಳ ಬೆಂಬಲ ಸಿಗಲಿಕ್ಕಿಲ್ಲ. ಕ್ರೀಡೆಗಳನ್ನು ಬಹಿಷ್ಕರಿಸುವುದು ಕ್ರೀಡಾಪಟುಗಳಿಗೆ ಅನ್ಯಾಯ ಮಾಡಿದಂತಾಗುವುದರಿಂದ ಒಲಿಂಪಿಕ್ ಕ್ರೀಡೆಗಳ ಆರಂಭ ಮತ್ತು ಮುಕ್ತಾಯ ಸಮಾರಂಭಗಳನ್ನು ಬಹಿಷ್ಕರಿಸುವ ಸೂಚನೆಯನ್ನು ಭಾರತ ನೀಡಿದೆ. ಇದರ ಪರಿಣಾಮ ಸ್ವಲ್ಪ ಮಟ್ಟಿಗಾದರೂ ಆಗುವ ಸಾಧ್ಯತೆ ಇದೆ.

ಹಾಕಿ ರಂಗದಲ್ಲಿ ಒಲಿಂಪಿಕ್ಸ್ ಟೂರ್ನಿಯೇ ಬಹು ದೊಡ್ಡದು. ವಿಶ್ವ ಕಪ್ ಹಾಕಿ ಟೂರ್ನಿಗಿಂತ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವುದೇ ಬಹು ದೊಡ್ಡ ಮರ್ಯಾದೆ. ಐದು ದಶಕಗಳ ಹಿಂದೆ ಭಾರತವನ್ನು ಸೋಲಿಸುವ ರಾಷ್ಟ್ರ ಮತ್ತೊಂದಿರಲಿಲ್ಲ. ಮೊದಲು ಪಾಕಿಸ್ತಾನ, ನಂತರ ಆಸ್ಟ್ರೇಲಿಯ, ಜರ್ಮನಿ, ಹಾಲೆಂಡ್ ತಂಡಗಳು ಭಾರತವನ್ನು ಮೆಟ್ಟಿ ನಿಂತವು. 1980 ರ ಮಾಸ್ಕೊ ಒಲಿಂಪಿಕ್ ಕ್ರೀಡೆಗಳನ್ನು ಬಹಳಷ್ಟು ರಾಷ್ಟ್ರಗಳು ಬಹಿಷ್ಕರಿಸಿದ್ದರಿಂದ ಭಾರತ ಚಿನ್ನದ ಪದಕ ಗೆದ್ದಿತ್ತು. ಆದರೆ ನಂತರ ಇದುವರೆಗೆ ಚಿನ್ನದ ಪದಕ ಹೋಗಲಿ ಕಂಚಿನ ಪದಕವೂ ಸಿಕ್ಕಿಲ್ಲ. ಅದಕ್ಕಿಂತ ಹೆಚ್ಚಾಗಿ, ಹಿಂದಿನ ಅಂದರೆ 2008 ರ ಒಲಿಂಪಿಕ್ಸ್‌ನಲ್ಲಿ ಆಡಲು ಭಾರತ ಅರ್ಹತೆಯನ್ನೇ ಗಳಿಸಲಿಲ್ಲ. ಒಲಿಂಪಿಕ್ಸ್ ಇತಿಹಾಸದಲ್ಲಿ ಒಟ್ಟು ಎಂಟು ಸಲ ಚಿನ್ನದ ಪದಕ ಗೆದ್ದಿರುವ ಭಾರತ ಈಗ ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆಯುವುದು ನಾಚಿಕೆಗೇಡು. ರಾಷ್ಟ್ರದಲ್ಲಿ ಹಾಕಿ ಆಟವನ್ನು ಆ ಸ್ಥಿತಿಗೆ ತಂದವರು ಭಾರತ ಹಾಕಿ ಫೆಡರೇಷನ್ ಪದಾಧಿಕಾರಿಗಳು. ಬಾಯಲ್ಲಿ ಮಾತ್ರ ಹಾಕಿ ಮರ್ಯಾದೆ ಬಗ್ಗೆ ಮಾತನಾಡುವ ಇವರು ಆಟ ಮತ್ತು ಆಟಗಾರರ ಹಿತವನ್ನು ಎಂದೂ ಗಣನೆಗೆ ತೆಗೆದುಕೊಂಡವರಲ್ಲ. ಆಟವನ್ನು ಉಳಿಸಲು ಹಾಕಿ ಇಂಡಿಯಾ ಸಂಸ್ಥೆ ಸ್ಥಾಪನೆಗೊಂಡರೂ ಹೆಚ್ಚು ಪ್ರಯೋಜನವೇನೂ ಆಗಿಲ್ಲ.

ಇಂಥ ಒಂದು ಅನಿಶ್ಚಿತ ವಾತಾವರಣದಲ್ಲಿ ಆಟಗಾರರು, ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದು ದೊಡ್ಡ ಸಾಧನೆ. ಭಾರತ ಹಾಕಿ ತಂಡ ಈ ಸಲ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವುದು ಕಷ್ಟ ಎಂಬ ಅನುಮಾನಗಳಿದ್ದವು. ಕಾಮನ್‌ವೆಲ್ತ್ ಮತ್ತು ಏಷ್ಯನ್ ಕ್ರೀಡೆಗಳಲ್ಲಿ ಅಗ್ರಸ್ಥಾನ ಪಡೆಯಲು ವಿಫಲವಾದ ಭಾರತ, ಕೆಲವು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದ ಅರ್ಹತಾ ಟೂರ್ನಿಯಲ್ಲಿ ಸೋತಿದ್ದರೆ, ಒಲಿಂಪಿಕ್ಸ್ ಬಾಗಿಲು ಮತ್ತೆ ಮುಚ್ಚಿದಂತಾಗುತ್ತಿತ್ತು. ಆದರೆ ಆಟಗಾರರು ಛಲದಿಂದ ಆಡಿದರು. ರಾಷ್ಟ್ರದ ಮರ್ಯಾದೆ ಉಳಿಸಿದರು. ಆದರೆ ಜವಾಬ್ದಾರಿ ಇನ್ನೂ ಮುಗಿದಿಲ್ಲ. ಲಂಡನ್‌ನಿಂದ ಬರಿಗೈಯಲ್ಲಿ ಮರಳಿ ಬಂದರೆ ಆಟದ ಸ್ಥಿತಿ ಮೊದಲಿದ್ದಂತೆಯೇ ಉಳಿಯುವುದು. ಹಾಕಿ ಬೆಳೆಯಬೇಕಾದರೆ ಭಾರತ ಮೂರರಲ್ಲಿ ಒಂದಾದರೂ ಪದಕ ಗೆಲ್ಲಲೇಬೇಕು.

ಭಾರತ ಚಿನ್ನದ ಪದಕ ಗೆಲ್ಲುವುದೆಂದು ಬಾಜಿ ಕಟ್ಟಲು ಬಹುಶಃ ಯಾರಿಗೂ ಧೈರ್ಯ ಇಲ್ಲ.   1983 ರ ವಿಶ್ವ ಕಪ್ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ನಾಯಕತ್ವದ ಭಾರತ ತಂಡದ ಸ್ಥಿತಿಯೂ ಹೀಗೆಯೇ ಇತ್ತು. ಆದರೆ ಭಾರತ ತಂಡದ ಕೆಲವು ಮಂದಿ ಕಟ್ಟಾ ಅಭಿಮಾನಿಗಳು ಪಣ ಕಟ್ಟಿದರಲ್ಲದೇ ಚೆನ್ನಾಗಿ ದುಡ್ಡೂ ಮಾಡಿದರು. ಭಾರತ ವಿಶ್ವ ಕಪ್ ಗೆದ್ದ ಮೇಲೆ ದೇಶದ ಕ್ರಿಕೆಟ್ ರಂಗದ ಚಿತ್ರವೇ ಬದಲಾಗಿಹೋಯಿತು. ಕ್ರಿಕೆಟ್‌ಪಟುಗಳು ಇಂದು ಹಣದ ಹೊಳೆಯಲ್ಲಿ ತೇಲುತ್ತಿದ್ದಾರೆ. ಕಳೆದ ವರ್ಷ ಮುಂಬೈನಲ್ಲಿ ಎರಡನೇ ಬಾರಿಗೆ ವಿಶ್ವ ಕಪ್ ಗೆದ್ದ ಮೇಲಂತೂ ಕ್ರಿಕೆಟ್ ಹುಚ್ಚು ವಿಪರೀತವಾಯಿತು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯದಲ್ಲಿ ದನ ಬಡಿಸಿಕೊಂಡಂತೆ ಬಡಿಸಿಕೊಂಡರೂ ಜನರಿಗೆ ಕ್ರಿಕೆಟಿಗರ ಮೇಲಿನ ಪ್ರೀತಿಯೇನೂ ಕಡಿಮೆಯಾದಂತಿಲ್ಲ. ಕಳೆದ ವಾರ ಶ್ರೀಲಂಕಾ ವಿರುದ್ಧ 37 ಓವರುಗಳ ಒಳಗೆ 321 ರನ್ ಹೊಡೆದು ಗೆದ್ದದ್ದು, ಸತ್ತುಹೋಗಿದ್ದ ದೋನಿಪಡೆಗೆ ಜೀವ ತುಂಬಿದೆ. ಜೂಜುಕೋರ ತಾನು ಹತ್ತು ಸಲ ಕಳೆದುಕೊಂಡಿದ್ದಕ್ಕಿಂತ ಒಮ್ಮೆ ಗೆದ್ದದ್ದನ್ನು ಮಾತ್ರ ನೆನಪಿಟ್ಟುಕೊಳ್ಳುವಂತೆ ಕ್ರಿಕೆಟ್ ತಂಡದ ಸೋಲನ್ನು ಜನ ಮರೆತುಬಿಡುತ್ತಾರೆ. ಭಾರತ ಹಾಕಿ ತಂಡಕ್ಕೂ ಇಂಥ ಅದೃಷ್ಟ ಒಲಿಯಬೇಕಿದೆ. 

ಭಾರತ ಹಾಕಿ ತಂಡ ಚಿನ್ನದ ಪದಕ ಗೆದ್ದರೆ, ಅವರಿಗೆ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಕೋಟಿಗಟ್ಟಲೆ ಬಹುಮಾನ ಕೊಟ್ಟರೆ, ಕ್ರಿಕೆಟ್‌ನಂತೆಯೇ ಹಾಕಿಯಲ್ಲೂ ಭವಿಷ್ಯ ಇದೆ ಎಂದು ಹುಡುಗರು ಹಾಕಿ ಸ್ಟಿಕ್ ಎತ್ತಿಕೊಳ್ಳಬಹುದು. ಆಟದ ಮೇಲಿನ ಪ್ರೀತಿಗಾಗಿ ಆಡುವ ಜನರೇ ಬೇರೆ. ಆದರೆ ಆಟ ಬೆಳೆಯಬೇಕಾದರೆ ಅಲ್ಲಿ ಹಣ ಇರಲೇಬೇಕಾಗುತ್ತದೆ. ಆಟಗಾರನಿಗೆ ಆಡುವ ದಿನಗಳು ಮುಗಿದ ಮೇಲೆ ಆರ್ಥಿಕ ಭದ್ರತೆ ಸಿಗಬೇಕಾಗುತ್ತದೆ. ದೇಶಕ್ಕಾಗಿ ಆಡುವ ಆಟಗಾರನಿಗೆ ದೇಶ ಮತ್ತು ಜನತೆ ಸೂಕ್ತ ಹಣ ಮತ್ತು ಗೌರವ ಕೊಡಲೇಬೇಕಾಗುತ್ತದೆ. ಕ್ರಿಕೆಟ್‌ನಲ್ಲಿ ಅಪಾರ ಹಣ ಇದೆ. ಎಲ್ಲರೂ ಅಸೂಯೆಪಡುವಷ್ಟು ಹಣವನ್ನು ಆಟಗಾರರು ಪಡೆಯುತ್ತಿದ್ದಾರೆ. ಇವರಿಗೆ ಸಿಗುವ ಸೌಲಭ್ಯಗಳಿಗೆ ಲೆಕ್ಕ ಇಲ್ಲ. ಆದರೆ ಹಾಕಿ ಆಟಗಾರರು ಇನ್ನೂ ಬಡವರಾಗಿಯೇ ಉಳಿದಿದ್ದಾರೆ. ಅವರಿಗೆ ಸಿಗುವ ಬಹುಮಾನ ಹೆಚ್ಚೆಂದರೆ ಒಂದೆರಡು ಲಕ್ಷ ಅಷ್ಟೇ. ಕ್ರಿಕೆಟ್ ಲೆಕ್ಕ ಕೋಟಿಗಳಲ್ಲಿ. ಸಾವಿರದಲ್ಲಿ ಇದ್ದ ಹಾಕಿ ಲೆಕ್ಕ ಈಗ ಸ್ವಲ್ಪ ಸುಧಾರಿಸಿ ಲಕ್ಷಕ್ಕೇರಿದೆ.

ಇದು ಆಟದ ಮೈದಾನದ ಹೊರಗಿನ ವಿಷಯವಾಯಿತು. ಮೈದಾನದೊಳಗೆ ಭಾರತದ ಆಟದ ಮಟ್ಟ ಖಂಡಿತವಾಗಿಯೂ ಮೇಲೇರಬೇಕಾಗಿದೆ. ಭಾರತದ ಆಟಗಾರರನ್ನು ಮೊದಲಿನಿಂದಲೂ ಕಾಡುವ ಸಮಸ್ಯೆ ದೈಹಿಕ ಅರ್ಹತೆ. ವಿದೇಶಿ ತಂಡಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಕೃತಕ ಮೈದಾನಗಳನ್ನು ರೂಪಿಸಿಕೊಂಡು ಆಟದ ಸ್ವರೂಪವನ್ನೇ ಬದಲಿಸಿಬಿಟ್ಟರು. ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಅವರನ್ನು ಸರಿಗಟ್ಟಲು ಭಾರತದ ಆಟಗಾರರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಆಸ್ಟ್ರೇಲಿಯ, ಜರ್ಮನಿ, ಹಾಲೆಂಡ್ ತಂಡಗಳ ವೇಗವನ್ನು ಹಿಮ್ಮೆಟ್ಟಿಸಲು ಭಾರತದ ಆಟಗಾರರಿಗೆ ಆಗುತ್ತಿಲ್ಲ. ಭಾರತ ತಯಾರಿ ನಡೆಸಬೇಕಾಗಿರುವುದು ಈ ಅಂಶಗಳಲ್ಲಿ. ಸಂದೀಪ್ ಸಿಂಗ್ ಚುರುಕಾದ ಆಟಗಾರ. ಆತನ ಹಿಂದೆ ಮುಂದೆ ಸೂಕ್ತ ಹೊಂದಾಣಿಕೆ ಇರುವ ಆಟಗಾರರೇ ಇರಬೇಕಾಗುತ್ತದೆ. ಎಲ್ಲ ಹನ್ನೊಂದು ಮಂದಿ ಒಂದಾಗಿ ಆಡಿದಾಗ ಮಾತ್ರ ಯಶಸ್ಸು ಸಿಗುತ್ತದೆ. ತಂಡದ ತರಬೇತುದಾರ, ಆಸ್ಟ್ರೇಲಿಯದ ಮಾಜಿ ಆಟಗಾರ ಮೈಕೆಲ್ ನಾಬ್ಸ್ ಅವರಿಗೆ ವಿದೇಶಿ ತಂಡಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳೆರಡೂ ಚೆನ್ನಾಗಿ ಗೊತ್ತು. ಇವುಗಳ ಆಧಾರದ ಮೇಲೆಯೇ ಆಟಗಾರರ ತಯಾರಿ ನಡೆಯಬೇಕಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಆತ್ಮವಿಶ್ವಾಸ ಮುಖ್ಯವಾದದ್ದು. ಆಟಗಾರರು ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ನಾವು ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸದಿಂದ ಆಡಿದಲ್ಲಿ ಕಂಚಿನ ಪದಕವಾದರೂ ಗ್ಯಾರಂಟಿ. ಬಹಳ ವರ್ಷಗಳಾಗಿ ಹೋಗಿವೆ. ಭಾರತ ಹಾಕಿ ತಂಡ ಈ ಸಲ ಪದಕ ಗೆಲ್ಲಲೇಬೇಕು. ಇಡೀ ದೇಶ ಅದನ್ನು ನಿರೀಕ್ಷಿಸುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.