ಬುಧವಾರ, ಜೂನ್ 16, 2021
21 °C

ಭೀತಿ ಹುಟ್ಟಿಸಬಲ್ಲ ಬಿಟಿ ಹತ್ತಿ ಪಿತೂರಿ

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ಈ ದಿನಗಳಲ್ಲಿ ಗುಲಬರ್ಗಾ, ಯಾದಗಿರಿ ಜಿಲ್ಲೆಗಳಲ್ಲಿ ಸಂಚರಿಸಿದರೆ ಕಪ್ಪು ಬಿಳಿ, ಕಪ್ಪು ಬಿಳಿ ದೃಶ್ಯಗಳೇ ಕಂಡು ಬರುತ್ತವೆ. ಕರಿಮಣ್ಣಿನ ಹೊಲದಲ್ಲಿ ಒಣಗಿ ನಿಂತ ಗೇಣುದ್ದ, ಮೊಳ ಉದ್ದದ ಕಂದು-ಕಪ್ಪು ಹತ್ತಿಯ ಒಣ ಗಿಡಗಳು: ಅವುಗಳಲ್ಲಿ ಅಲ್ಲೊಂದು ಇಲ್ಲೊಂದು ಬಿಳಿ ಬಿಳೀ ಹತ್ತಿ ಉಂಡೆಗಳು. ಹೊಲದಂಚಿನಲ್ಲೂ ಅಷ್ಟೆ: ಕಂದು-ಕಪ್ಪು ಬಣ್ಣದ ಒಣಮುಖದ ರೈತರು. ಅವರ ತಲೆಯ ಮೇಲೆ ಬಿಳಿ ಬಿಳೀ ಟೋಪಿ. ಬಸವರಾಜ, ಬಸವಣ್ಣ, ಬಸಪ್ಪ, ಚನ್ನಬಸವ.... ಬಸವಳಿದ ಮುಖ; ಬಸವಳಿದ ನೆಲ.ಯಾರನ್ನೇ ಕೇಳಿದರೂ `ಬಿಟಿ ಹತ್ತಿ ಹಾಕಿನ್ರಿ, ಬೆಳೆನೇ ಹಿಂಗೈತಿ ನೋಡ್ರಿ~ ಎನ್ನುತ್ತಾರೆ. ಬೇಗುದಿ, ನಿರಾಸೆಯನ್ನೇ ಮೈಯುಂಡು ಬೆಳೆದ ರೈತಸಮುದಾಯ ಇದು. ಎಂಟು-ಹತ್ತು ಕ್ವಿಂಟಲ್ ಹತ್ತಿ ನಿರೀಕ್ಷಿಸಿ ದುಡಿದವರಿಗೆ ಎರಡು ಮೂರು ಕ್ವಿಂಟಲ್‌ನಷ್ಟೇ ಬೆಳೆ ಬಂದಾಗ ಭಾವನೆಗಳೇ ಬತ್ತಿ ಹೋಗುತ್ತವೆ.

 

ಬಿಟಿಯ ಬದಲು ಸ್ಥಳೀಯ (ಜವಾರಿ) ತಳಿಯ ಹತ್ತಿಯ ಬೀಜದ ಬಿತ್ತನೆ ಮಾಡಿದ್ದಿದ್ದರೆ ನಾಲ್ಕಾರು ಕ್ವಿಂಟಲ್‌ಆದರೂ ಬೆಳೆ ಸಿಗುತ್ತಿತ್ತು. ಆದರೆ ಜವಾರಿ ತಳಿಯ ಬೀಜಗಳೇ ಸಿಗುತ್ತಿಲ್ಲ. ಎಲ್ಲವೂ ಮಾಯವಾಗಿವೆ; ಸ್ಥಳೀಯ ತಳಿಗಳ ಹೆಸರೇ ಮರೆತು ಹೋಗುತ್ತಿವೆ. ರೈತರಿಗಷ್ಟೇ ಅಲ್ಲ, ಕೃಷಿ ವಿಜ್ಞಾನಿಗಳಿಗೂ ಸರ್ಕಾರಿ ಕೃಷಿ ಅಧಿಕಾರಿಗಳಿಗೂ ಮರೆತು ಹೋಗುತ್ತಿವೆ. ಇಡೀ ದೇಶದಲ್ಲೆಲ್ಲ (ಶೇಕಡಾ 93 ಪಾಲು) ಒಂದೇ ಕಂಪೆನಿಯ ಬಿಟಿ ಹತ್ತಿ ಬೆಳೆ ವ್ಯಾಪಿಸಿದೆ.ಹತ್ತು ವರ್ಷಗಳ ಹಿಂದೆ ದೇಶದ ಉದ್ದಗಲಕ್ಕೆ ನೂರಕ್ಕೂ ಹೆಚ್ಚು ಹತ್ತಿಯ ತಳಿಗಳು ಬಳಕೆಯಲ್ಲಿದ್ದವು. ಆಯಾ ಪ್ರಾಂತದ ಹವಾಗುಣಕ್ಕೆ ತಕ್ಕಂತೆ ಅವು ಎಕರೆಗೆ ನಾಲ್ಕಾರು ಕ್ವಿಂಟಲ್, ನೀರಾವರಿ ಇದ್ದಲ್ಲಿ ಹತ್ತು-ಹದಿನೈದು ಕ್ವಿಂಟಲ್ ಫಸಲನ್ನು ಕೊಡುತ್ತಿದ್ದವು. ಆಮೇಲೆ ಬಂತು ಮಾನ್ಸಾಂಟೊ ಕಂಪೆನಿಯ ಬಿಟಿ ಹತ್ತಿ. ರೈತರೂ ಮುಗಿಬಿದ್ದು ಬಿತ್ತನೆ ಮಾಡಿದರು- ಎಕರೆಗೆ ಇಪ್ಪತ್ತು ಕ್ವಿಂಟಲ್ ಇಳುವರಿ ಪಡೆಯುವ ಕನಸಿನ ಬೆನ್ನು ಹತ್ತಿ.ಈಗಂತೂ ಬಿಟಿ ತಳಿ ಹತ್ತಿಯನ್ನು ಮಾರುವ ಅನೇಕ ಕಂಪೆನಿಗಳು ಪೈಪೋಟಿಯಲ್ಲಿ ರೈತರನ್ನು ಹಿಂಡುತ್ತಿವೆ. ಸರ್ಕಾರದ ಯಾವ ನಿಯಂತ್ರಣವೂ ಈ ಕಂಪೆನಿಗಳ ಮೇಲೆ ಇಲ್ಲ. ಬೀಜದ ಪೂರೈಕೆಯ ಮೇಲೆ ನಿಯಂತ್ರಣ ಇಲ್ಲ; ಗುಣಮಟ್ಟದ ಮೇಲೆ ನಿಯಂತ್ರಣ ಇಲ್ಲ; ಬೆಲೆಯ ಮೇಲೆಯೂ ನಿಯಂತ್ರಣ ಇಲ್ಲ.ಖಾಸಗಿ ಕಂಪೆನಿಗಳ ಹಿಕ್ಮತ್ತಿಗೆ ಸಿಕ್ಕು ರೈತರು ಬೀಜಕ್ಕಾಗಿ ಮೈಲುದ್ದ ಕ್ಯೂ ನಿಲ್ಲಬೇಕು; ಲಾಠಿ, ಗುಂಡೇಟು ಎದುರಿಸಬೇಕು; ನಕಲಿ ಪ್ಯಾಕೆಟ್ ಪಡೆದು.. ಸಂಕಷ್ಟಗಳು ಒಂದೇ ಎರಡೆ? ಇತರೆಲ್ಲ ಹತ್ತಿ ತಳಿಗಳನ್ನೂ ಮೂಲೆಗೊತ್ತಿದ ಕಂಪೆನಿ ಹತ್ತಿ ಇಡೀ ರಾಷ್ಟ್ರವನ್ನೇ ವ್ಯಾಪಿಸಿ ರೈತ ಸಮುದಾಯವನ್ನು ತನ್ನ ಮುಷ್ಟಿಯಲ್ಲಿ ಹಿಡಿದಿರುವುದೇ ಈ ಯುಗದ ಒಂದು ದೊಡ್ಡ ಅವಘಡ.ಅದಕ್ಕಿಂತ ದೊಡ್ಡ ಅವಘಡವೊಂದು ಇದೀಗ ಪತ್ತೆಯಾಗಿದೆ. ಇದರಲ್ಲಿ ನಮ್ಮ ವಿಜ್ಞಾನಿಗಳು, ಎತ್ತರದ ಹುದ್ದೆಗೇರಿದವರು ಶಾಮೀಲಾಗಿದ್ದಾರೆ. ಅವರು ತಪ್ಪಿತಸ್ಥರೆ, ವಂಚಕರೆ, ವಂಚಿತರೆ, ಅಮಾಯಕರೆ, ಅಥವಾ ಕಂಪೆನಿಯೇ ಹೆಣೆದ ಬಲೆಯಲ್ಲಿ ಸಿಲುಕಿದರೆ ಎಂಬುದರ ತನಿಖೆ ನಡೆಯುತ್ತಿದೆ. ಜಾಗತಿಕ ಮಟ್ಟದಲ್ಲಿ ಸರ್ಕಾರದ ಮಾನ ಹರಾಜಾಗಿದೆ.ಆ ಪಿತೂರಿಯ ವ್ಯಾಪ್ತಿ ಅರ್ಥವಾಗುವ ಮುನ್ನ `ಬಿಟಿ ಹತ್ತಿ~ ಎಂದರೆ ಏನೆಂಬುದನ್ನು ನೋಡೋಣ. ಮಣ್ಣಿನಲ್ಲಿರುವ ಒಂದು ಜಾತಿಯ ಏಕಾಣುಜೀವಿಯ ಶರೀರದ ತುಂಬೆಲ್ಲ ವಿಷವಿದೆ ಎಂಬುದನ್ನು ಜರ್ಮನಿಯ ವಿಜ್ಞಾನಿಗಳು 1920ರಲ್ಲೇ ಪತ್ತೆ ಹಚ್ಚಿದ್ದರು.ಥುರಿಂಜೆನ್ ಪಟ್ಟಣದ ವಿಶ್ವವಿದ್ಯಾಲಯದ ಆವರಣದ ಮಣ್ಣಿನಿಂದ ಆ ಜೀವಿಯನ್ನು ಎತ್ತಿದ್ದರಿಂದ ಅದಕ್ಕೆ `ಬ್ಯಾಕ್ಟೀರಿಯಂ ಥುರಿಂಜೆನ್ಸಿಸ್~ (ಬಿಟಿ) ಎಂದು ಹೆಸರಿಟ್ಟರು. ಅದನ್ನು ಪೀಪಾಯಿಗಳಲ್ಲಿ ಬೆಳೆಸಿ, ಒಣಗಿಸಿ ಪುಡಿಮಾಡಿ ಕಾಯಿಕೊರಕ ಹುಳಗಳ ಹಾವಳಿ ಇರುವ ಸಸ್ಯಗಳಿಗೆ ಎರಚಿದರೆ ಹುಳ ಸಾಯುತ್ತದೆ. ಕೃತಕ ರಸಾಯನಗಳನ್ನು ಬಳಸದೆ ತಯಾರಾದ ಈ ಕೀಟನಾಶಕ 50 ವರ್ಷಗಳ ಹಿಂದೆ `ಸೀಗೆಪುಡಿ~ ಹೆಸರಿನಲ್ಲಿ ನಮ್ಮ ಕೋಲಾರದಲ್ಲೂ ಬಳಕೆಯಲ್ಲಿತ್ತು.ಬೆಲ್ಜಿಯಂ ವಿಜ್ಞಾನಿಗಳು 1985ರಲ್ಲಿ ಈ ಏಕಾಣುಜೀವಿಯ ಶರೀರದಿಂದ ವಿಷಕಾರಿ ಗುಣಾಣುವನ್ನು (ಜೀನ್) ಬೇರ್ಪಡಿಸಿದರು. ಜೀನ್ ಎಂದರೇನೆಂದು ನಮಗೆಲ್ಲ ಗೊತ್ತೇ ಇದೆ: ಜೀವಿಗಳ ತಳಿ ನಕ್ಷೆಯನ್ನು (ಡಿಎನ್‌ಎ) ಒಂದು ಉದ್ದನ್ನ ರೈಲುಮಾರ್ಗ ಎಂದು ಊಹಿಸಿದರೆ, ಅಲ್ಲಲ್ಲಿ ಬರುವ ನಿಲ್ದಾಣಗಳನ್ನು `ಜೀನ್~ ಎನ್ನುತ್ತಾರೆ. ಜೀವಿಯ ಒಂದೊಂದು ಗುಣಲಕ್ಷಣವನ್ನು ಕೆಲವು ಜೀನ್ ಪ್ರತಿನಿಧಿಸುತ್ತವೆ ಅಥವಾ ನಿಯಂತ್ರಿಸುತ್ತವೆ.

 

ವಿಜ್ಞಾನಿಗಳು ವಿಷಕಾರಿ ಜೀನನ್ನು ಬೇರ್ಪಡಿಸಿ ಅದನ್ನು ಆಲೂಗಡ್ಡೆಯ ಜೀವಕೋಶದೊಳಕ್ಕೆ ಬಲಾತ್ಕಾರವಾಗಿ ನುಗ್ಗಿಸಿದರು. ಅಂಥ ಸಸ್ಯದ ಬೀಜದಿಂದ ಇಲ್ಲವೆ ಗೆಡ್ಡೆಯಿಂದ ಹೊಸ ಬಟಾಟೆ ಗಿಡವನ್ನು ಬೆಳೆಸಿದರು. ಆ ಗಿಡದ ಪ್ರತಿಯೊಂದು ಅಂಗದಲ್ಲೂ ವಿಷಕಾರಿ ಗುಣಗಳು ಸೇರ್ಪಡೆಯಾಗಿವೆ ಎಂದು ತೋರಿಸಿ, ಅದಕ್ಕೆ `ಬಿಟಿ ಪೊಟ್ಯಾಟೊ~ ಎಂದರು.ಮಾನ್ಸಾಂಟೊ ಕಂಪೆನಿಯ ವಿಜ್ಞಾನಿಗಳೂ ಅದನ್ನೇ ಮಾಡಿದರು. ಹತ್ತಿಯ ತಳಿಸೂತ್ರದಲ್ಲಿ ಬಿಟಿ ಜೀನನ್ನು ಸೇರಿಸುವಾಗ, ಬರೀ ಜೀನನ್ನಷ್ಟೇ ಅಲ್ಲ,  ಅದರ ಪಕ್ಕದ ಇನ್ನೊಂದಿಷ್ಟು ಡಿಎನ್‌ಎ ತುಣುಕುಗಳನ್ನೂ ಸೇರಿಸಿದರು. ಹಳಿಯ ನಡುವಣ ರೈಲು ನಿಲ್ದಾಣವನ್ನು ಎತ್ತಿಕೊಳ್ಳುವಾಗ ಅದಕ್ಕೆ ಹೊಂದಿಕೊಂಡ ನಿಗದಿತ ದೂರದ ಒಂದಿಷ್ಟು ಹಳಿಗಳನ್ನೂ ಎತ್ತಿಕೊಂಡರೆ `ಇದು ನನ್ನದು~ ಎಂದು ಗುರುತಿಸಲು ಸಾಧ್ಯವಾಗುತ್ತದೆ ತಾನೆ? ಆ ಗುರುತಿನ ಚೀಟಿಯ ಸಮೇತ ಮೊನ್ಸಾಂಟೊ ಕಂಪೆನಿ ತನ್ನ ಬಿಟಿ ಜೀನ್‌ಗೆ `ಎಂಒಎನ್531~ಎಂದು ಹೆಸರಿಟ್ಟು ಪೇಟೆಂಟ್ ಪಡೆಯಿತು.ಬೇರೆ ಯಾರಾದರೂ ಅದೇ ಜೀವಿಯಿಂದ ಅದೇ ಜೀನನ್ನು ಎತ್ತಿಕೊಳ್ಳುವಾಗ ನಿಲ್ದಾಣದ ಜತೆಗೆ ಇನ್ನಷ್ಟು ದೂರದ ಅಥವಾ ಇನ್ನಷ್ಟು ಸಮೀಪದ ಹಳಿಗಳನ್ನು ಸೇರಿಸಿಕೊಳ್ಳಬೇಕು. ಇಲ್ಲಾಂದರೆ ಅದು ಮೊನ್ಸಾಂಟೊ ಕಂಪೆನಿಯ ಬಿಟಿ ಜೀನ್‌ನ ನಕಲು ಎನಿಸುತ್ತದೆ.

ಹೀಗೆ ಏಕಸ್ವಾಮ್ಯವನ್ನು ಪಡೆದ ನಂತರ, ಆ ಜೀನನ್ನು ಯಾವ ತಳಿಯ ಹತ್ತಿಗಾದರೂ ಸೇರಿಸಬಹುದಿತ್ತು. ಸಹಜವಾಗಿ, ಅತಿ ಹೆಚ್ಚು ಇಳುವರಿ ನೀಡಬಲ್ಲ ಹತ್ತಿಯ ತಳಿಗೇ ಹೊಸ ಬಿಟಿ ಗುಣವನ್ನು ಅಂಟಿಸಿತು.  ಅನೇಕ ಖಾಸಗಿ ಕಂಪೆನಿಗಳೂ ತಂತಮ್ಮ ಬಿಟಿ ಹತ್ತಿಯನ್ನು ಸೃಷ್ಟಿಸಿ ಕಣಕ್ಕಿಳಿದರು. ಮುಗ್ಧ ರೈತರ ಮುಂದೆ ತಳಿ ತಂತ್ರಜ್ಞಾನದ ಥಕಥೈ ನಡೆಯಿತು.ಅದು ಅಷ್ಟು ಸುಲಭದ್ದೇ ಅದರೆ ಸರ್ಕಾರಿ ಸಂಬಳ ಪಡೆಯುವ ನಮ್ಮ ಕೃಷಿ ವಿಜ್ಞಾನಿಗಳು ಏಕೆ ಸುಮ್ಮನಿರಬೇಕು? ಅವರೂ `ಸರ್ಕಾರಿ ಬಿಟಿ~ಯನ್ನು ಸೃಷ್ಟಿಸಿ ರೈತರಿಗೆ ಕಡಿಮೆ ಬೆಲೆಯಲ್ಲಿ ವಿತರಿಸಬೇಕು ತಾನೆ?ಹತ್ತು ವರ್ಷಗಳ ಹಿಂದೆಯೇ ನಾಗಪುರದಲ್ಲಿರುವ ಕೇಂದ್ರ ಹತ್ತಿ ಸಂಶೋಧನಾ ಸಂಸ್ಥೆಯವರು ನಮ್ಮ ಧಾರವಾಡದ ವಿಜ್ಞಾನಿಗಳಿಗೆ ಇಂಥದೊಂದು ತಳಿಯನ್ನು ಸೃಷ್ಟಿಸಲು ಸಲಹೆ ನೀಡಿದರು. ಧಾರವಾಡದ ಡಾ. ಬಸವರಾಜ ಖಾದಿ ಎಂಬ ವಿಜ್ಞಾನಿ ಆಗಲೇ ಬಣ್ಣಬಣ್ಣದ ಹತ್ತಿಯನ್ನು ಅರಳಿಸಬಲ್ಲ ತಳಿಯನ್ನು ಸೃಷ್ಟಿಸಿ ಖ್ಯಾತಿ ಪಡೆದಿದ್ದರು. ಹೆಸರೇ ಖಾದಿ! ಇವರ ತಂಡ ಈಗ ಬಿಟಿ ಹತ್ತಿಯನ್ನು ಸೃಷ್ಟಿಸಬೇಕೆಂದೂ, ನಾಗಪುರದ ವಿಜ್ಞಾನಿಗಳು ಅದನ್ನು ಹೊಲಕ್ಕಿಳಿಸಿ ಪರೀಕ್ಷಿಸಬೇಕೆಂದೂ ನಿರ್ಣಯಿಸಲಾಯಿತು.

 

`ಬಿಕಾನೇರಿ ನಾರ್ಮಾ~ ಹೆಸರಿನ ಉತ್ತಮ ಇಳುವರಿ ನೀಡಬಲ್ಲ ಬೀಜಗಳಿಗೇ ಬಿಟಿ ಜೀನ್ ತೂರಿಸುವಂತೆ  ದಿಲ್ಲಿಯ ಕೃಷಿ ಮಂಡಲಿಯ ನಿರ್ದೇಶನ ಪಡೆದು ವಿಜ್ಞಾನಿ ಆನಂದ್ ಕುಮಾರ್ ಎಂಬವರು ಬಿಟಿ ಏಕಾಣುಜೀವಿಯಿಂದ ವಿಷದ ಗುಣಾಣುಗಳನ್ನು ಪ್ರತ್ಯೇಕಿಸಿ, ಸರ್ಕಾರದ್ದೇ ಲೇಬಲ್ ತಗುಲಿಸಿ ಧಾರವಾಡಕ್ಕೆ ರವಾನಿಸಿದರು.ಧಾರವಾಡದ ಖಾದಿ ತಂಡದ ಇನ್ನೊಬ್ಬ ವಿಜ್ಞಾನಿ ಈಶ್ವರಪ್ಪ ಕಟಗೇರಿ ಎಂಬುವರ ನೇತೃತ್ವದಲ್ಲಿ `ಬಿಕಾನೇರಿ ನಾರ್ಮಾ~ ತಳಿಯ ಹತ್ತಿ ಬೀಜಗಳಿಗೆ ಸರ್ಜರಿ ಮಾಡಿ ಬಿಟಿ ವಿಷಾಣುಗಳನ್ನು ತೂರಿಸುವ ಕೆಲಸ ಆರಂಭವಾಯಿತು. ಹಾಗೆ ಸರ್ಜರಿ ಮಾಡಿಸಿಕೊಂಡ ಬೀಜಗಳನ್ನು ಮೊಳಕೆ ಬರಿಸಿ ಪರೀಕ್ಷಿಸಿ ಅದರ ಚಿಗುರೆಲೆಗಳಲ್ಲಿ ಬಿಟಿ ವಿಷದ ಅಂಶ ಬಂತೇ ಇಲ್ಲವೇ ನೋಡಬೇಕು. ಬಾರದಿದ್ದರೆ ಇನ್ನಷ್ಟು ಬೀಜಗಳಿಗೆ ಮತ್ತೆ ಸರ್ಜರಿ ಮಾಡಬೇಕು. ಬೇಸರಿಸದೆ ಗುರಿ ತಲುಪುವವರೆಗೂ ಬಿಟಿ ಬಾಣ ಪ್ರಯೋಗಮಾಡುತ್ತಲೇ ಇರಬೇಕು. ಒಂದೇ ವರ್ಷದಲ್ಲಿ ಕಟಗೇರಿ ತಂಡಕ್ಕೆ ಯಶಸ್ಸು ಸಿಕ್ಕಿತು. ಹೊಸ ಸಸ್ಯದ ಹೊಸ ಚಿಗುರಿನಲ್ಲಿ ವಿಷ ಒಸರಿತು.ಆದರೆ ಅದು ಆರಂಭ ಮಾತ್ರ. ಆ ಸಸ್ಯ ದೊಡ್ಡದಾಗಿ ಬೆಳೆದು, ಹೂ ಕಾಯಿ ಬಿಡಬೇಕು. ಕಾಯಿಕೊರಕ ಹುಳಗಳು ಕಾಯಿ ತಿಂದು ಸಾಯಬೇಕು. ನಂತರ ಅರಳಿದ ಹತ್ತಿಯ ಗುಣಮಟ್ಟ ಪರೀಕ್ಷಿಸಬೇಕು. ಅದರೊಳಗಿನ ಬೀಜವನ್ನು ತೆಗೆದು ಮೊಳಕೆ ಬರಿಸಿ, ಮುಂದಿನ ಸಂತಾನದಲ್ಲೂ ವಿಷ ಇರುತ್ತದೊ ಇಲ್ಲವೊ ನೋಡಬೇಕು.ಅಷ್ಟೆಲ್ಲ ಮಾಡಿ ಕೊನೆಗೂ 2005ರಲ್ಲಿ ಹೊಸ ಬಿಟಿ ತಳಿ ಹೊರಬರುವ ವೇಳೆಗೆ ಖಾದಿಯವರಿಗೆ ಪದೋನ್ನತಿ ಸಿಕ್ಕು ಅವರು ನಾಗಪುರದ ಸಂಸ್ಥೆಯ ನಿರ್ದೇಶಕರಾದರು. ತಮ್ಮಂದಿಗೆ ಈ ಹೊಸ ತಳಿಯ ಬೀಜವನ್ನು ಹೆಮ್ಮೆಯಿಂದ ಒಯ್ದು ಹೊಲಗಳಲ್ಲಿ ಬಿತ್ತನೆ ಮಾಡಲು ಆದೇಶಿಸಿದರು. ಮುಂದಿನ ಮೂರು ವರ್ಷಗಳ ಕಾಲ ಈ ಹೊಸಹತ್ತಿಯ ಹೊಲ ಪರೀಕ್ಷೆ ನಡೆದು, `ಜಿಇಎಸಿ~ಯ ಅನುಮತಿಯೂ ಸಿಕ್ಕು, ಭಾರೀ ಪ್ರಮಾಣದಲ್ಲಿ ಬೀಜಗಳನ್ನು ಉತ್ಪಾದಿಸಿ 2009ರಲ್ಲಿ ಮೂರು ರಾಜ್ಯಗಳಲ್ಲಿ ಅದ್ಧೂರಿ ಪ್ರಚಾರದೊಂದಿಗೆ ಕಿಲೊಕ್ಕೆ ಕೇವಲ 50 ರೂಪಾಯಿ ಬೆಲೆಗೆ ರೈತರಿಗೆ ವಿತರಣೆ ನಡೆಯಿತು.

 

ಆಗ ದೊಡ್ಡದೊಂದು ಭಾನಗಡಿ ಬೆಳಕಿಗೆ ಬಂತು. ಅವಸರದಲ್ಲಿ ಎಲ್ಲ ಸರ್ಕಾರಿ ಬಿಟಿ ಹತ್ತಿಬೀಜಗಳನ್ನೂ ದಫನ ಮಾಡಲಾಯಿತು. ಆದದ್ದೇನು? ಈ ಹತ್ತಿಯಲ್ಲಿರುವುದು ಸರ್ಕಾರಿ ಬಿಟಿ ಅಲ್ಲ, ಅದು ಮಾನ್ಸಾಂಟೊ ಬಿಟಿ ಎಂಬುದು ಗೊತ್ತಾಯಿತು. ಅರ್ಥಾತ್, ಯಾವುದೋ ಹಂತದಲ್ಲಿ ಮಾನ್ಸಾಂಟೊ ಕಂಪೆನಿಯ ಬಿಟಿ ಜೀನ್ ಈ ಹತ್ತಿಯಲ್ಲಿ ನುಗ್ಗಿತ್ತು. ಇದು ಕೃತಿಚೌರ್ಯ ಎಂದು ಹೇಳಿ ಮಾನ್ಸಾಂಟೊ ಕಂಪೆನಿ ಕೇಂದ್ರ ಸರ್ಕಾರದ ಮೇಲೆ ದಾವೆ ಹೂಡಿ(ದ್ದಿದ್ದರೆ) ಸಾವಿರಾರು ಕೋಟಿ ರೂ ದಂಡ ಕಕ್ಕಿಸಿ, ವಿಜ್ಞಾನಿಗಳು ಜೈಲು ಕಂಬಿ ಎಣಿಸುವಂತೆ ಮಾಡಬಹುದಿತ್ತು. ಹತ್ತಿಯ ಪರ್ವತಕ್ಕೇ ಬೆಂಕಿ ಹತ್ತಿಬಿಡುತ್ತಿತ್ತು.ಎರಡೇ ವರ್ಷಗಳಲ್ಲಿ ಅವತಾರವೆತ್ತಿಬರಬೇಕಿದ್ದ ಸರ್ಕಾರಿ ಬಿಟಿ ಹತ್ತಿ, ಎಂಟು ವರ್ಷಗಳ ನಂತರ ಕೊನೆಗೂ ಹೊರಕ್ಕೆ ಬಂತು. ಎಲ್ಲ ಸುಸೂತ್ರ ನಡೆದಿದ್ದರೆ ಲಕ್ಷಾಂತರವಲ್ಲ, ಕೋಟ್ಯಂತರ ರೈತರನ್ನು ಬಹುರಾಷ್ಟ್ರೀಯ ಬಿಗಿಮುಷ್ಟಿಯಿಂದ ಬಿಡಿಸಬಹುದಿತ್ತು. ಎಲ್ಲವೂ ನಿಷ್ಫಲವಾಯಿತು. ಇನ್ನೊಮ್ಮೆ ಇಂಥದ್ದೊಂದನ್ನು ಸೃಷ್ಟಿ ಮಾಡಬೇಕೆಂದರೆ ಸರ್ಕಾರಿ ವ್ಯವಸ್ಥೆಯಲ್ಲಿ ಮತ್ತೆ ಹತ್ತು ವರ್ಷಗಳೇ ಬೇಕೇನೊ.ಅಧ್ವಾನ ಯಾವ ಹಂತದಲ್ಲಿ ನಡೆಯಿತು? ಇದು ವಿಜ್ಞಾನಿಗಳ ಅಲಕ್ಷ್ಯವೆ? ಅಥವಾ ಉದ್ದೇಶಿತ ಪಿತೂರಿಯೆ? ರೈತಕಲ್ಯಾಣದ ಈ ಸರ್ಕಾರಿ ಯತ್ನವನ್ನು ವಿಫಲಗೊಳಿಸಲು ಮಾನ್ಸಾಂಟೊ ಕೈವಾಡವಿತ್ತೆ? ಅದು ತಾನೇ ರಹಸ್ಯವಾಗಿ ತನ್ನದೇ ಪೇಟೆಂಟ್ ಇದ್ದ ಬಿಟಿಯನ್ನು ಸರ್ಕಾರಿ ಬೀಜದಲ್ಲಿ ನುಗ್ಗಿಸಿತೆ? ಅಥವಾ ಬೇರೆ ಕಂಪೆನಿಯೊಂದು ಧಾರವಾಡದ ಪ್ರಯೋಗಶಾಲೆಗೆ ನುಗ್ಗಿತ್ತೆ?ತನಿಖೆಗೆ ಸಮಿತಿಯೇನೊ ನೇಮಕವಾಗಿದೆ. ಸತ್ಯ ಮಾತ್ರ ಎಂದೂ ಹೊರಬರಲಿಕ್ಕಿಲ್ಲ. ದೇಶದ ವಿಜ್ಞಾನವೃಂದಕ್ಕೇ ಅಪಮಾನ ಮಾಡಿ, ಖಾಸಗಿ ಕಂಪೆನಿಗಳ ಲಾಭಕ್ಕೆ ಲಗಾಮಿಲ್ಲದಂತೆ ಮಾಡಿದ ವಿಜ್ಞಾನಿಗಳಿಗೆ ಶಿಕ್ಷೆಯೂ ಆಗಲಿಕ್ಕಿಲ್ಲ.

(ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.