ಶನಿವಾರ, ಜೂನ್ 12, 2021
23 °C

ಮಧ್ಯಮ ಶ್ರೇಣಿ ಷೇರುಗಳಲ್ಲಿ ಏರಿಕೆ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಮುಂಬೈ ಷೇರು ವಿನಿಮಯ ಕೇಂದ್ರದ (ಬಿಎಸ್‌ಇ) ಸಂವೇದಿ ಸೂಚ್ಯಂಕವು ಕಳೆದ ವಾರಾಂತ್ಯದಲ್ಲಿ ಮತ್ತೊಮ್ಮೆ 21,000 ಅಂಶಗಳ ಗಡಿದಾಟಿ 21,120 ಅಂಶಗಳಲ್ಲಿ ಅಂತ್ಯಗೊಂಡಿದೆ.ಕೇವಲ ನಾಲ್ಕು ದಿನಗಳ ವಾರವಾದರೂ ವಾರದುದ್ದಕ್ಕೂ ಏಕಮುಖವಾದ ಏರಿಕೆಯನ್ನು ಸಂವೇದಿ ಸೂಚ್ಯಂಕ ಪಡೆದುಕೊಂಡಿದೆ.

ಈಗಿನ ಪರಿಸ್ಥಿತಿಯಲ್ಲಿ, ಸಣ್ಣ ಹೂಡಿಕೆದಾರರು ಪೇಟೆಯಿಂದ, ಅನಿಶ್ಚಿತತೆಯ ಕಾರಣ, ನಿರ್ಗಮಿಸು­ತ್ತಿರುವಾಗ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಹಲವಾರು ಷೇರುಗಳು ಚುರುಕಾದ ಏರಿಕೆ ಕಾಣುತ್ತಿವೆ.ಎಂದಿನಂತೆ ಷೇರುಪೇಟೆ ಉತ್ತುಂ­ಗದಲ್ಲಿದ್ದಾಗ ಸಣ್ಣ ಹೂಡಿಕೆದಾರರು ಪ್ರವೇಶಿಸುವ ಪ್ರಯತ್ನ ಮಾಡದೇ ಇಳಿಮುಖವಾ­ಗಿದ್ದಾಗಲೇ ಹಣ ಹೂಡಬೇಕು. ಉತ್ತಮ ಕಂಪೆನಿ ಷೇರುಗಳು ಕೆಳಮಟ್ಟದಲ್ಲಿದ್ದಾಗ ಕೊಂಡು ಪೇಟೆ ಏರುಮುಖವಾಗಿದ್ದಾಗ ಪರಿಸ್ಥಿತಿಯನ್ನು ಲಾಭದ ನಗದೀಕರಣಕ್ಕೆ ಉಪಯೋಗಿಸಿಕೊಳ್ಳುವುದು ಸೂಕ್ತ. ವಿಶೇಷವಾಗಿ ಈ ವಾರಾಂತ್ಯದಲ್ಲಿ ತಾಂತ್ರಿಕ ವಲಯದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌­(ಟಿಸಿಎಸ್‌), ಇನ್ಫೊಸಿಸ್‌, ಟೆಕ್‌ ಮಹೀಂದ್ರ ಕಂಪೆನಿಗಳು ಹೆಚ್ಚಿನ ಏರಿಕೆ ಕಂಡವು.ಮಧ್ಯಮ ಶ್ರೇಣಿಯ ಕಂಪೆನಿಗಳಾದ ಹೆಕ್ಸಾವೇರ್‌ ಟೆಕ್ನಾಲಜೀಸ್‌, ಟಾಟಾ ಎಲಾಕ್ಸಿಗಳು ಆಕರ್ಷಕ ಏರಿಕೆಯ ಪಡೆದವು ಥಿಂಕ್‌ ಸಾಫ್ಟ್ ಗ್ಲೋಬಲ್‌ ಈ ವಾರದಲ್ಲಿ ರೂ.255ರಿಂದ ರೂ.312ರ ವಾರ್ಷಿಕ ಗರಿಷ್ಠ ತಲುಪಿ ವಾರಾಂತ್ಯದಲ್ಲಿ ರೂ.292.95 ಕೆಳ ಆವರಣ ಮಿತಿಯಲ್ಲಿತ್ತು. ಫಾರ್ಮಾ ವಲಯದ ಸನ್‌ಫಾರ್ಮಾ, ಲುಪಿನ್‌, ಇಪ್ಕಾ ಲ್ಯಾಬ್‌, ವೊಕಾರ್ಡ್, ಇಂಡ್‌ಕೊ ರೆಮಿಡೀಸ್‌, ಅಸ್ಟ್ರಾಜನಕ್‌ ಬಯೋಕಾನ್‌ ಕಂಪೆನಿಗಳ ಷೇರುಗಳು ಉತ್ತಮ ಚಟುವಟಿಕೆ­ಯಿಂದ ಏರಿಕೆ ಪ್ರದರ್ಶಿಸಿವೆ.ಲೋಹ ವಲಯದ ಅಗ್ರಮಾನ್ಯ ಕಂಪೆನಿಗಳಾದ ಟಾಟಾ ಸ್ಟೀಲ್‌, ಜಿಂದಾಲ್‌ ಸ್ಟೀಲ್‌ ಅಂಡ್‌ ಪವರ್‌, ಸ್ಟೀಲ್‌ ಅಥಾರಿಟೀಸ್‌, ಸೀಸಾ ಸ್ಟರ್ಲೈಟ್‌ ಇಳಿಕೆ ಹಾದಿಯಲ್ಲಿದ್ದರೆ, ಟಾಟಾ ಮೋಟಾರ್ಸ್ ಏರಿಕೆ ಕಂಡಿದೆ. ಬ್ಯಾಂಕಿಂಗ್‌ ಷೇರುಗಳು ವಾರಾಂತ್ಯದಲ್ಲಿ ಚುರುಕುತನ ಪ್ರದರ್ಶಿಸಿದವು.ಒಟ್ಟಾರೆ 419 ಅಂಶಗಳ ಸಂವೇದಿ ಸೂಚ್ಯಂಕದ ಏರಿಕೆಯ ಹಿಂದೆ ಎಂದಿನಂತೆ ವಿದೇಶೀ ವಿತ್ತೀಯ ಸಂಸ್ಥೆಗಳು ರೂ.1,793 ಕೋಟಿ ಹೂಡಿಕೆಯೇ ಸ್ಫೂರ್ತಿಯಾಗಿದೆ. ಸ್ವದೇಶಿ ಸಂಸ್ಥೆಗಳು ರೂ.777 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಷೇರುಪೇಟೆ ಬಂಡವಾಳೀಕರಣ ಮೌಲ್ಯವು ಹಿಂದಿನ ವಾರದ ರೂ.68.02 ಲಕ್ಷ ಕೋಟಿಯಿಂದ ರೂ.68.93 ಲಕ್ಷ ಕೋಟಿಗೆ ಏರಿಕೆ ಕಂಡಿದೆ.ಹೊಸ ಷೇರಿನ ವಿಚಾರ

* ‘ಎಸ್‌ಎಂಇ’ ವಿಭಾಗದ ಪೊಲಿಮ್ಯಾಕ್‌ ಥರ್ಮೊಫಾರ್ಮರ್ಸ್ ಲಿಮಿಟೆಡ್‌ ಕಂಪೆನಿಯು ಪ್ರತಿ ಷೇರಿಗೆ ರೂ.35ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು, 26ರಿಂದ ‘ಎಂಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ವಹಿವಾಟು ಗುಚ್ಛ 4 ಸಾವಿರ ಷೇರುಗಳಾಗಿದೆ.* ಯುನಿಷೈರ್‌ ಅರ್ಬನ್‌ ಇನ್‌ಫ್ರಾ ಲಿ., ಕಂಪೆನಿಯು ಪ್ರತಿ ಷೇರಿಗೆ ರೂ.10 ರಂತೆ ಮುಖಬೆಲೆಯಲ್ಲಿ ಇತ್ತೀಚೆಗೆ ಸಾರ್ವಜನಿಕ ವಿತರಣೆ ಮಾಡಿದೆ. 28 ರಿಂದ ‘ಎಂಟಿ’ ವಿಭಾಗದಲ್ಲಿ 10 ಸಾವಿರ ಷೇರುಗಳ ವಹಿವಾಟು ಗುಚ್ಛದೊಂದಿಗೆ ವಹಿವಾಟಿಗೆ ಬಿಡುಗಡೆಯಾಗಿದೆ.* ದೆಹಲಿಯ ಗ್ರೇಶಿಯಸ್‌ ಸಾಫ್‌್ಟವೇರ್‌ ಲಿ., ಕಂಪೆನಿಯು ಫೆ. 28 ರಿಂದ ಬಾಂಬೆ ಷೇರು ವಿನಿಮಯ ಕೇಂದ್ರದ ಐಪಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ಈ ಕಂಪೆನಿಯು ‘ಎಸ್‌ಎಂಇ’ ವಿತ್ತೀಯ ಸಂಸ್ಥೆಗಳ ವಹಿವಾಟು ವೇದಿಕೆಯಲ್ಲಿ ರೂ.10 ಲಕ್ಷ ವಹಿವಾಟು ಮೌಲ್ಯದ ಗುಚ್ಛದಲ್ಲಿ ವಹಿವಾಟಾಗಲಿದೆ.ಸೂಚ್ಯಂಕಗಳಲ್ಲಿ ಬದಲಾವಣೆ

ಕ್ಯಾಸ್ಟ್ರಾಲ್‌ ಇಂಡಿಯಾ ಕಂಪೆನಿಯು ತನ್ನ ಷೇರು ಬಂಡವಾಳವನ್ನು, ಪ್ರತಿ ಷೇರಿಗೆ ರೂ.5ರಂತೆ ಹಿಂದಿರುಗಿಸುವ ಮೂಲಕ ಅರ್ಧಕ್ಕಿಳಿಸಿದೆ. ಈ ಕಂಪೆನಿಯನ್ನು ಬಾಂಬೆ ಷೇರು ವಿನಿಮಯ ಕೇಂದ್ರದ ‘ಬಿಎಸ್‌ಇ’ 500, 200 ಮತ್ತು ತೈಲ ಮತ್ತು ಅನಿಲ ಸೂಚ್ಯಂಕಗಳಿಂದ ಹೊರಗಿಡಲಾ­ಗಿದ್ದು ಇದರ ಬದಲಿಗೆ ಕ್ರಮವಾಗಿ ಮಾತ್ರ ಕೌಶಲ್‌ ಎಂಟರ್‌ಪ್ರೈಸಸ್‌ ಲಿ., ಅರವಿಂದ್‌ ಲಿ., ಇಂದ್ರಪ್ರಸ್ತ ಗ್ಯಾಸ್‌ ಕಂಪೆನಿಗಳನ್ನು ಫೆ. 28ರಿಂದ ಜಾರಿಯಾಗುವಂತೆ ಬದಲಿಸಲಾಗಿದೆ.ತೆರೆದ ಕರೆ

* ಭಾರತೀಯ ರೇಟಿಂಗ್‌ ಕಂಪೆನಿ ಇಕ್ರಾ ಲಿ., ಕಂಪೆನಿಯ ಶೇ 26.5 ರಷ್ಟರ ಭಾಗಿತ್ವವನ್ನು ಪ್ರತಿ ಷೇರಿಗೆ ರೂ.2,000 ದಂತೆ ಸಾರ್ವಜನಿಕರಿಂದ ಕೊಳ್ಳಲು ಮುಕ್ತ ಆಹ್ವಾನವನ್ನು ನೀಡಲು ಅಂತರರಾಷ್ಟ್ರೀಯ ರೇಟಿಂಗ್‌ ಕಂಪೆನಿಯಾದ ಮೂಡೀಸ್‌ ಸಮೂಹದ ಮೂಡೀಸ್‌ ಸಿಂಗಪುರ್‌ ಪ್ರೈ.ಲಿ.ನ ಕ್ರಮವನ್ನು ಇಕ್ರಾ ಕಂಪೆನಿಯು ಗಮನಿಸಿದ್ದು ಇದರ ಬಗ್ಗೆ ಸಕಾರಣವಾದ ಶಿಫಾರಸು ಷೇರುದಾರರಿಗೆ ನೀಡಲು ಸಮಿತಿಯನ್ನು ರಚಿಸಿದೆ.* ಥಾಮಸ್‌ ಕುಕ್‌ ಸಮೂಹ ಕಂಪೆನಿಗಳಾದ ಥಾಮಸ್‌ ಕುಕ್‌ ಇನ್ಷೂರೆನ್‌್ಸ ಸರ್ವಿಸಸ್ (ಇಂಡಿಯಾ), ಟ್ರಾವೆಲ್‌ ಕಾರ್ಪೊರೇಷನ್‌ (ಇಂಡಿಯಾ) ಲಿ.ಗಳೊಂದಿಗೆ ಸ್ಟರ್ಲಿಂಗ್‌ ಹಾಲಿಡೆ ರಿಸಾರ್ಟ್‌್ಸ (ಇಂಡಿಯಾ) ಲಿ.ನ ಶೇ 26ರ ಭಾಗಿತ್ವವನ್ನು ಪಡೆಯಲು ಸಾರ್ವಜನಿಕ ಷೇರುದಾರರಿಗೆ ಪ್ರತಿ ಷೇರಿಗೆ ರೂ.58ರಂತೆ, ಕೊಳ್ಳಲು ತೆರೆದ ಕರೆ ನೀಡಲಿದೆ ಈ ಯೋಜನೆಯು ಏಪ್ರಿಲ್‌ 7 ರಿಂದ 23ರವರೆಗೆ ತೆರೆದಿರುತ್ತದೆ.ವಹಿವಾಟಿನಿಂದ ಹಿಂದಕ್ಕೆ

* ರೋಡಿಯಾ ಸ್ಪೆಷಾಲಿಟಿ ಕೆಮಿಕಲ್ಸ್ ಇಂಡಿಯಾ ಲಿ., ಕಂಪೆನಿ ಪ್ರವರ್ತಕರಾದ ಸಾಲ್ಪೆ ಎಸ್‌ಎ ಸಾರ್ವಜನಿಕರಿಂದ ಅವರ ಭಾಗಿತ್ವದ ಷೇರುಗಳನ್ನು, ಪ್ರತಿ ಷೇರಿಗೆ ರೂ. 675ರಂತೆ ಕೊಂಡು ನಂತರ ಷೇರುಗಳನ್ನು ಷೇರು ವಿನಿಮಯ ಕೇಂದ್ರದ ಲೀಸ್ಟಿಂಗ್‌ನಿಂದ ಹಿಂದೆ ಸರಿಯಲಿದೆ. ಈ ಕಂಪೆನಿಯ ಪ್ರವರ್ತಕರು ಶೇ 91.33ರಷ್ಟರ ಭಾಗಿತ್ವ ಹೊಂದಿದ್ದು, ಶೇ 8.67ರಷ್ಟನ್ನು ಹಿಂಪಡೆಯಲು ಸಾರ್ವಜನಿಕರಿಂದ ಪಡೆಯಲು ಮುಂದಾಗಿದೆ.ಲಾಭಾಂಶ ವಿಚಾರ

ಬ್ಯಾಂಕ್‌ ಬೀಸ್‌, ಪ್ರತಿ ಷೇರಿಗೆ ರೂ.11 (ನಿ.ದಿ. ಮಾ.11) ನಿಫ್ಟಿ ಬೀಸ್‌ ಪ್ರತಿ ಷೇರಿಗೆ ರೂ.7 (ನಿ.ದಿ. ಮಾ.11) ಕ್ಲಾರಿಯಂಟ್‌ ಕೆಮಿಕಲ್ಸ್ ಪ್ರತಿ ಷೇರಿಗೆ ರೂ. 20 (ನಿ.ದಿ. 22ನೇ ಏಪ್ರಿಲ್‌), ನ್ಯಾಷನಲ್‌ ಅಲ್ಯುಮಿನಿಯಂ ಪ್ರತಿ ರೂ.5ರ ಮುಖಬೆಲೆ ಷೇರಿಗೆ ರೂ.1.10, ಸನೋಫ ಇಂಡಿಯಾ ಪ್ರತಿ ಷೇರಿಗೆ ರೂ.35, ಸ್ಟೊವೆಕ್‌ ಇಂಡಸ್ಟ್ರೀಸ್‌ ಪ್ರತಿ ಷೇರಿಗೆ ರೂ.15, ವೆಸುವಿಯಸ್‌ ಪ್ರತಿ ಷೇರಿಗೆ ರೂ.4.75 (ನಿ.ದಿ. ಮಾರ್ಚ್, 8) ಗುಡ್‌ರಿಕ್‌ ಗ್ರೂಪ್‌ ಪ್ರತಿ ಷೇರಿಗೆ ರೂ.4.50 (ನಿ.ದಿ. ಏಪ್ರಿಲ್‌, 3) ನೊಯ್ಡ ಟಾಲ್‌ ಬ್ರಿಡ್ಜ್ ಪ್ರತಿ ಷೇರಿಗೆ ರೂ.1.50.ಹಕ್ಕಿನ ಷೇರಿನ ವಿಚಾರ

* ಟಾಟಾ ಪವರ್‌ ಕಂಪೆನಿಯು ರೂ.2,000 ಕೋಟಿ ಮೌಲ್ಯದ ಹಕ್ಕಿನ ಷೇರನ್ನು ವಿತರಿಸಲು ನಿರ್ಧರಿಸಿದೆ. ವಿತರಣೆ ಬೆಲೆ ಅನುಪಾತ, ವಿತರಣೆ ಗಾತ್ರವನ್ನು ಸಮಿತಿ ನಿರ್ಧರಿಸಲಿದೆ.* ರೇಣುಕಾ ಷುಗರ್ಸ್ ಕಂಪೆನಿಯು ಪ್ರತಿ ಷೇರಿಗೆ ರೂ.16 ಮೀರದಂತೆ, ಷೇರುದಾರರಿಗೆ ಹಕ್ಕಿನ ಷೇರು ವಿತರಿಸಲಿದೆ. ವಿತರಣೆ ಅನುಪಾತ, ದರ ಮುಂತಾದವನ್ನು ಸಮಿತಿ ನಿರ್ಧರಿಸಲಿದೆ.ವಾರದ ವಿಶೇಷ

ಆಧುನಿಕ ಮಾದರಿಯ ವ್ಯವಹಾರಗಳು ಸುಲಭವಾಗಿ ಕಂಡರೂ ಆಂತರಿಕವಾಗಿ ಅಡಕವಾಗಿರುವ ಗುಣಗಳನ್ನು ಪೂರ್ಣವಾಗಿ ಅರಿತುಕೊಳ್ಳುವುದು ತೀರಾ ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಪಥಚಾಲಿತ ವಹಿವಾಟು (ಆನ್‌ಲೈನ್‌ ಟ್ರೇಡಿಂಗ್‌) ಹೆಚ್ಚು ಪ್ರಚಲಿತದಲ್ಲಿದೆ. ಫ್ಲಿಪ್‌ಕಾರ್ಟ್, ಸ್ನ್ಯಾಪ್‌ ಡೀಲ್‌, ಇ–ಬೇ, ಅಮೆಜಾನ್‌ ಮುಂತಾದ ಕಂಪೆನಿಗಳು ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಪಥ ಚಾಲಿತ ವಹಿವಾಟು ನಡೆಸುತ್ತಿರುವ ಪ್ರಮುಖ ಕಂಪೆನಿಗಳಾದರೆ ಉಡುಪು, ವಾಚ್‌, ಪಾದರಕ್ಷೆಗಳಂತಹ ಸಾಮಗ್ರಿಗಳಿಗೆ ಯೆಭಿ ಡಾಟ್‌ಕಾಂ, ಝಬಂಗ್‌ ಡಾಟ್‌ಕಾಂ, ದಿನಸಿ ಸಾಮಗ್ರಿಗಳಿಗೆ ಝೊಪ್‌ನೌ ಡಾಟ್‌ಕಾಂ... ಹೀಗೆ ಬಟ್ಟೆ, ಫ್ಯಾಷನ್‌ ಸಂಬಂಧಿತ ಸಾಮಗ್ರಿಗಳಿಗೆ ವಿವಿಧ ವಹಿವಾಟು ಜಾಲಗಳು ಕಾರ್ಯ ನಿರ್ವಹಿಸುತ್ತಿವೆ.ಈ ವಲಯವು ಸುಮಾರು ಶೇ 35ರಿಂದ ಶೇ 45ರಷ್ಟರ ಪ್ರಗತಿ ಕಾಣುತ್ತಿರುವುದು, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳಕ್ಕಿಂತ ಹೆಚ್ಚು ಅಪಾಯಕಾರಿ ಎಂದೆನಿಸಿದರೂ ಹಲವಾರು ಸಣ್ಣ ವ್ಯಾಪಾರಿಗಳು ಈ ಪಥಚಾಲಿತ ವಹಿವಾಟು ತಾಣಗಳಿಂದ ಸಾಮಗ್ರಿ ಪಡೆದು ತಮ್ಮ ವ್ಯಾಪಾರ ವೃದ್ಧಿಸಿಕೊಂಡಿದ್ದಾರೆ. ಪಥಚಾಲಿತ ವಹಿವಾಟು ಎಷ್ಟು ಅಗಾಧವಾಗಿ ಬೆಳೆದಿದೆ ಎಂದರೆ ಈಗ ಕಂಪೆನಿಗಳ ಅಧಿಕೃತ ಷೋರೂಂಗಳ ವಹಿವಾಟಿಗೆ ಧಕ್ಕೆಯಾಗುತ್ತಿರುವುದು ಎದ್ದು ಕಾಣುತ್ತಿದೆ. ಪಥಚಾಲಿತ ವಹಿವಾಟಿನ ಮಾದರಿಯಲ್ಲಿ ಸಾಮಗ್ರಿಗಳು ಷೋರೂಂಗಳಲ್ಲಿನ ಬೆಲೆಗಳಿಗಿಂತ ಕಡಿಮೆ ದರದಲ್ಲಿ ಲಭ್ಯವಾಗುವುದು ಎಂಬ ಅಂಶವು ಆತಂಕಕ್ಕೀಡು ಮಾಡಿದೆ.ಮಾಧ್ಯಮದ ವರದಿ ಪ್ರಕಾರ ಈಗ ಅಂತರರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಷೋರೂಂಗಳಲ್ಲಿ ಮಾರಾಟ ಮಾಡುವ ಪದಾರ್ಥಗಳಿಗೆ ಹೆಚ್ಚು ಅವಧಿಯ ವಾರಂಟಿಯನ್ನು ನೀಡುತ್ತಿವೆ. ಹಾಗೂ ಅನಧಿಕೃತ ವಹಿವಾಟು ಜಾಲಗಳ ಮೂಲಕ ವಹಿವಾಟು ನಡೆಸದಿರಲು ಸಹ ಪ್ರಯತ್ನಿಸುತ್ತಿವೆ. ಈ ರೀತಿಯ ವಹಿವಾಟು ಹೆಚ್ಚು ಪ್ರಚಲಿತವಾಗಲು ಕಾರಣ ಬೆಳೆಯುತ್ತಿರುವ ತಾಂತ್ರಿಕ ವ್ಯಾಮೋಹ ಹಾಗೂ ನಮ್ಮ ದೇಶದಲ್ಲಿರುವ ಶೇ 65ಕ್ಕೂ ಹೆಚ್ಚಿನ ಯುವಶಕ್ತಿಯಲ್ಲಿನ ಆಸಕ್ತಿಯಾಗಿದೆ. ಪಥಚಾಲಿತ ವಹಿವಾಟಿನ ಕಂಪೆನಿಗಳಿಗೆ ಈಗ ಸ್ಪರ್ಧಾತ್ಮಕ ಯುಗ ಪ್ರಮುಖ ಕಂಪೆನಿಗಳು ಸಣ್ಣ ಪುಟ್ಟ ಕಂಪೆನಿಗಳು, ವಿಭಾಗಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗುತ್ತಿವೆ. ಈ ಸಂದರ್ಭದಲ್ಲಿ ಗ್ರಾಹಕರು ಎಚ್ಚರಿಕೆಯನ್ನು ವಹಿಸುವುದು ಅತ್ಯಗತ್ಯ. ಷೇರುಪೇಟೆಯ ಪಥಚಾಲಿತ ವಹಿವಾಟು ವಲಯದಲ್ಲಿ ವಿವರಗಳನ್ನರಿತು ಚಟುವಟಿಕೆ ನಡೆಸಿದರೆ ಕ್ಷೇಮ.ಕರ್ಣಾಟಕ ಬ್ಯಾಂಕ್‌ ಲಿ.

ಕರ್ಣಾಟಕ ಬ್ಯಾಂಕ್‌ ಮತ್ತು ಕ್ರೆಡಿಟ್‌ ಅನಾಲಿಸಿಸ್‌ ಅಂಡ್‌ ರಿಸರ್ಚ್ ಲಿ. (ಕೇರ್‌) ಸಂಸ್ಥೆ ಜಂಟಿಯಾಗಿ ಮೈಕ್ರೊ, ಸ್ಮಾಲ್‌, ಮೀಡಿಯಂ ಎಂಟರ್‌ಪ್ರೈಸಸ್‌ ವಲಯದ ಕಂಪೆನಿಗಳಿಗೆ ಅಗತ್ಯವಿರುವ ಆರ್ಥಿಕ ಸೌಲಭ್ಯ ಪಡೆಯಲು ಅನುಕೂಲವಾಗಲೆಂಬ ದೃಷ್ಟಿಯಿಂದ ಅವುಗಳಿಗೆ ಬೇಕಾದ ಅರ್ಹತೆಯ ಮಟ್ಟವನ್ನು ಗೊತ್ತು ಮಾಡುವ ಡ್ಯು ಡೆಲಿಜನ್‌್ಸ ಸರ್ವಿಸಸನ್ನು ರಿಯಾಯ್ತಿ ದರದಲ್ಲಿ ಒದಗಿಸಲು ಒಪ್ಪಂದ ಮಾಡಿಕೊಂಡಿವೆ. ಕೇರ್‌ ಸಂಸ್ಥೆಯ ರೇಟಿಂಗ್‌ ಸ್ವತಂತ್ರ ಹಾಗೂ ಥರ್ಡ್ ಪಾರ್ಟಿ ಅಸೆಸ್‌ಮೆಂಟ್‌ ಆಗಿರುತ್ತದೆ. ಈ ಒಪ್ಪಂದದಿಂದ ಬ್ಯಾಂಕಿನ ಈಗಿನ ಗ್ರಾಹಕರು ಹಾಗೂ ಮುಂದಿನ ಹೊಸ ಗ್ರಾಹಕರಿಗೂ ಅನುಕೂಲಕರವಾಗಲಿದೆ.ಕೈನೆಟಿಕ್‌ ಎಂಜಿನಿಯರಿಂಗ್‌ ಲಿ.

ಕೈನೆಟಿಕ್‌ ಎಂಜಿನಿಯರಿಂಗ್‌ ಲಿ. ಕಂಪೆನಿಯು ತನ್ನಲ್ಲಿರುವ ಮಹೀಂದ್ರ ಟು ವೀಲರ್ಸ್ ಲಿ.ನ ಸಂಪೂರ್ಣ ಸ್ಟೇಕನ್ನು ಸಮೇನಾ ಕ್ಯಾಪಿಟಲ್‌ ಸಂಸ್ಥೆಗೆ ಮಾರಾಟ ಮಾಡಿದೆ. ಈ ಮಾರಾಟದಿಂದ ರೂ.182 ಕೋಟಿ ಹಣ ದೊರೆಯಲಿದ್ದು, ಇದರಲ್ಲಿ ಎನ್‌ಸಿಡಿಗಳ ಹಣ, ಫೈನಾನ್‌್ಸ ಚಾರ್ಜುಗಳ ನಂತರ ದೊರೆಯಲಿರುವ ಸುಮಾರು 109 ಕೋಟಿ ರೂಪಾಯಿಯನ್ನು ಎಫ್‌ಸಿಸಿಬಿ, ಸಾಲ ಹಿಂದಿರುಗಿಸುವಿಕೆಗೆ ವಿನಿಯೋಗಿಸಲಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.