ಸಿಕ್ಕಿಮ್ ಮತ್ತು ಸುತ್ತಲಿನ ಪ್ರಾಂತಗಳು ಭೂಕಂಪನದ ಪರಿಣಾಮಗಳಿಂದ ತತ್ತರಿಸುತ್ತಿವೆ. ಸಿಕ್ಕಿಮ್ ರಾಜಧಾನಿ ಗ್ಯಾಂಗ್ಟಕ್ ನಗರವೆಲ್ಲ ಅಸ್ತವ್ಯಸ್ತವಾಗಿದೆ. ನೀರು, ವಿದ್ಯುತ್ ಪೂರೈಕೆಗೆ ಅಡ್ಡಿಯಾಗಿದೆ; ರಸ್ತೆಗಳೂ ಮೊಬೈಲ್ ಟವರ್ಗಳೂ ಕುಸಿದಿವೆ. ಹೆದ್ದಾರಿಗಳೇ ಬಿರುಕು ಬಿಟ್ಟು ಸಂತ್ರಸ್ತರ ನೆರವಿಗೆ ಮಿಲಿಟರಿ ಧಾವಿಸುವುದೂ ದುಸ್ತರವಾಗುತ್ತಿದೆ.

ಮುಖ್ಯಮಂತ್ರಿ ಕಚೇರಿಯೇ ಹೊರಜಗತ್ತಿನ ಸಂಪರ್ಕ ಕಳೆದುಕೊಂಡು ಅತಂತ್ರವಾಗಿ ಏನೂ ಮಾಡಲಾಗದೆ ಕೈಕಟ್ಟಿ ಕೂತಿದೆ. ಒಂದು ಲಕ್ಷಕ್ಕೂ ಹೆಚ್ಚು ಮನೆಗಳು, ಮುಖ್ಯವಾಗಿ ಜೋಪಡಿಗಳು ಕುಸಿದಿವೆ. ಇದುವರೆಗಿನ ವರದಿಯ ಪ್ರಕಾರ ಸುಮಾರು 92 ಜನರು ಸಾವಪ್ಪಿದ್ದಾರೆ, ಸಾವಿರಾರು ಜನರು ವೈದ್ಯಕೀಯ ನೆರವಿಗಾಗಿ ಕಾದು ಕೂತಿದ್ದಾರೆ.

ಭೂಕಂಪನದ ನಾಭಿಕೇಂದ್ರವೆನಿಸಿದ ಮಂಗನ್ ಎಂಬಲ್ಲಿ ಈಗಲೂ ಕುಸಿತ ಸಂಭವಿಸುತ್ತಿದೆ. ಅಕ್ಕಪಕ್ಕದ ಬಿಹಾರ, ಪಶ್ಚಿಮ ಬಂಗಾಳ, ನೇಪಾಳ, ಟಿಬೆಟ್ ಭಾಗದಲ್ಲಿ ಅಲ್ಲಲ್ಲಿ ಕುಸಿತದ, ಸಾವಿನ ವರದಿಗಳು ಕಂತುಕಂತಿನಲ್ಲಿ ಬರುತ್ತಿವೆ.

ಯಾಕೆ ಹೀಗಾಗಬೇಕು? ವಿಜ್ಞಾನ ತಂತ್ರಜ್ಞಾನ ಇಷ್ಟೆಲ್ಲ ಮುಂದುವರೆದಿದೆ. ಆಳ ಸಾಗರದಿಂದ ಹಿಡಿದು ಬಾಹ್ಯಾಕಾಶದವರೆಗೆ ನಾನಾ ಬಗೆಯ ತಾಂತ್ರಿಕ ಸಲಕರಣೆಗಳು ಗಸ್ತು ಹೊಡೆಯುತ್ತಿವೆ.

ವಿಜ್ಞಾನಿಗಳು ಸರಿಯಾಗಿ ಭೂಕಂಪನದ ಮುನ್ಸೂಚನೆ ಕೊಟ್ಟಿದ್ದಿದ್ದರೆ ಈ ಎಲ್ಲ ಅನಾಹುತಗಳನ್ನು ತಡೆಯಲು ಸಾಧ್ಯವಿತ್ತಲ್ಲವೆ? ಭೂಕುಸಿತ, ಮನೆಮಠ ಕುಸಿತಗಳನ್ನು ತಡೆಯಲು ಸಾಧ್ಯವಿರಲಿಲ್ಲ, ನಿಜ; ಆದರೆ ಜನರಿಗೆ ಎಚ್ಚರಿಕೆ ನೀಡಿದ್ದಿದ್ದರೆ ಅವರೆಲ್ಲ ತಂತಮ್ಮ ಮನೆಗಳಿಂದ ಹೊರಕ್ಕೆ ಧಾವಿಸಿ ತಮ್ಮ ಜೀವವನ್ನು ರಕ್ಷಿಸಿಕೊಳ್ಳಲು ಸಾಧ್ಯವಿತ್ತು ತಾನೆ?

ದುರಂತ ಸಂಭವಿಸಿದ ನಂತರ ಇದೀಗ `ಭೂಕಂಪನದ ಪೂರ್ವ ಸೂಚನೆಯ ಸಾಧನಗಳನ್ನು ಅಳವಡಿಸುವ ಯೋಜನೆ ಇದೆ~ ಎಂದು ನಮ್ಮ ಅಧಿಕಾರಿಗಳು ಹೇಳುತ್ತಿದ್ದಾರೆ. ಹಿಮಾಲಯದ ಪರ್ವತಶ್ರೇಣಿಯೆಂದರೆ ಪದೇಪದೇ ನೆಲ ನಡುಗುವ ಸ್ಥಳವೆಂದು ಶತಮಾನಗಳಿಂದ ಗೊತ್ತಿದೆ.

ಈಗ ಇವರು ಮುನ್ಸೂಚನಾ ಸಾಧನ ಅಳವಡಿಸುತ್ತಾರೆಯೆ? ಅದನ್ನು ನಂಬಬಹುದೆ? ನಮ್ಮಲ್ಲೊಂದೇ ಅಲ್ಲ, ಅಮೆರಿಕ, ಯುರೋಪ್, ರಷ್ಯ, ಜಪಾನ್ ಸೇರಿದಂತೆ ಜಗತ್ತಿನ ಎಲ್ಲೂ ಭೂಕಂಪನದ ಮುನ್ಸೂಚನೆ ನೀಡಿ ಯಾರನ್ನೂ ಬಚಾವು ಮಾಡಿದ ಉದಾಹರಣೆ ಇದುವರೆಗೆ ಇಲ್ಲ. ಯಾಕೆ ವಿಜ್ಞಾನಿಗಳು ಎಚ್ಚರಿಕೆ ನೀಡುತ್ತಿಲ್ಲ?

ಈ ಪ್ರಶ್ನೆಯನ್ನು ಎತ್ತಿಕೊಂಡು ಇದೇ ಸಂದರ್ಭದಲ್ಲಿ ಇಟಲಿಯಲ್ಲಿ ಒಂದು ವಿಶಿಷ್ಟ ಕೋರ್ಟ್ ಖಟ್ಲೆ ನಡೆಯುತ್ತಿದೆ. ಎರಡೂವರೆ ವರ್ಷಗಳ ಹಿಂದೆ ಅಲ್ಲಿನ ಲಾ~ಕಿಲಾ (I’Aquila ಅಂದರೆ `ಗರುಡ~) ನಗರದಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿದಾಗ ನಗರದ ಜನರಿಗೆ ಸರಿಯಾದ ಮಾಹಿತಿ ನೀಡಿಲ್ಲವೆಂದು ಏಳು ವಿಜ್ಞಾನಿಗಳ/ತಂತ್ರಜ್ಞರ ಮೇಲೆ ಇಟಲಿಯ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.

ಇಲ್ಲಿ ಸಿಕ್ಕಿಮ್ನಲ್ಲಿ 6.3 ತೀವ್ರತೆಯ ಭೂಕಂಪನದಿಂದಾಗಿ ನೆಲ ನಡುಗುತ್ತಿದ್ದಾಗಲೇ ಮೊನ್ನೆ ಮಂಗಳವಾರ ಅಲ್ಲಿ ಭೂಕಂಪನ ತಜ್ಞರ ವಿರುದ್ಧದ ಖಟ್ಲೆಯ ಮೊದಲ ಹಿಯರಿಂಗ್ ಇತ್ತು. ಜಗತ್ತಿನ ಬಹುತೇಕ ಭೂಕಂಪನ ತಜ್ಞರ ಗಮನ ಅಲ್ಲಿನ ಕೋರ್ಟ್ ವಿಚಾರಣೆಯ ಮೇಲಿತ್ತು.

ಇಟಲಿಯ ಲಾ~ಕಿಲಾ ಪಟ್ಟಣವೆಂದರೆ ನಮ್ಮ ಹಂಪಿಯ ಹಾಗೆ ಇತಿಹಾಸದ ದೃಷ್ಟಿಯಿಂದ ಮಹತ್ವದ ಪಟ್ಟಣ. ಎಪ್ಪತ್ತು ಸಾವಿರ ಜನವಸತಿ ಇರುವ ಮಧ್ಯಕಾಲೀನ ಕಲಾತ್ಮಕ ವಾಸ್ತುಶಿಲ್ಪಗಳ ಆಗರ.

ಅಮೃತಶಿಲೆಯ ಕಟ್ಟಡಗಳು, ಶಿಲ್ಪಗಳು, ಕಾರಂಜಿಗಳು, ವೈಭವದ ಸ್ನಾನಗೃಹಗಳು ಎಲ್ಲವಕ್ಕೂ ಬಿರುಕು ಬೀಳಿಸುವಂತೆ, ಕೆಲವನ್ನು ಕೆಡವಿ ಹಾಕುವಂತೆ 2009ರ ಏಪ್ರಿಲ್ ಆರರಂದು ಭೂಕಂಪನ ಸಂಭವಿಸಿತು.

ಅದಕ್ಕೂ ಮುಂಚೆ ಸುಮಾರು ಮೂರು-ನಾಲ್ಕು ವಾರಗಳಿಂದ ನೆಲ ಆಗಾಗ ನಡುಗುತ್ತಿತ್ತು. ಆತಂಕಗೊಂಡಿದ್ದ ಸರ್ಕಾರ ನಿಸರ್ಗ ವಿಕೋಪ ಅಧ್ಯಯನಕ್ಕೆಂದು `ನಾಗರಿಕ ರಕ್ಷಣಾ ತಂಡ~ವನ್ನು ರಚಿಸಿತ್ತು.

ಅಂದು ಮಾರ್ಚ್ 31ರಂದು ನಾಗರಿಕ ರಕ್ಷಣಾ ತಂಡದ ಮುಖ್ಯಸ್ಥ ಬರ್ನಾರ್ಡೊ ಡಿ ಬರ್ನಾರ್ಡಿನಿಸ್ ಆರು ಮಂದಿ ನಿಸರ್ಗ ವಿಕೋಪ ತಜ್ಞರ ಸಭೆ ಕರೆದಿದ್ದ.

ಸಭೆ ಮುಗಿಯುತ್ತಲೇ ಸ್ಥಳೀಯ ಸುದ್ದಿಗಾರರು `ಸದ್ಯದಲ್ಲೇ ದೊಡ್ಡ ಭೂಕಂಪವೇನಾದರೂ ಸಂಭವಿಸೀತೆ?~ ಎಂದು ಕೇಳಿದ್ದರು. ಬರ್ನಾರ್ಡಿನಿಸ್ ಸಹಜವೆಂಬಂತೆ ಉತ್ತರಿಸಿದ್ದ: `ನೋಡಿ, ಒಮ್ಮೆಲೇ ತೀರಾ ಜಾಸ್ತಿ ಶಕ್ತಿ ಬಿಡುಗಡೆಯಾದರೆ ದೊಡ್ಡ ಅನಾಹುತವಾಗುತ್ತದೆ.

ಆದರೆ ದಿನವೂ ಹೀಗೆ ತುಸು ತುಸು ಕಂಪಿಸುವುದು ಒಳ್ಳೆಯದು, ಅದರಿಂದ ದಿನವೂ ಸ್ವಲ್ಪ ಸ್ವಲ್ಪ ಭೂಶಕ್ತಿ ಬಿಡುಗಡೆ ಆಗುತ್ತಿರುತ್ತದೆ. ಯಾರೂ ಆತಂಕ ಪಡಬೇಕಾಗಿಲ್ಲ~ ಎಂದಿದ್ದ.
ಅಷ್ಟು ಹೇಳಿದ ಆರನೆಯ ದಿನವೇ ಭಾರೀ ಭೂಕಂಪನ ಸಂಭವಿಸಿತು. ದೊಡ್ಡ ಅನಾಹುತವೇ ಆಯಿತು.

ಪುರಾತನ ಕಟ್ಟಡಗಳು ಕುಸಿದು ಬಿದ್ದು ಸಾಕಷ್ಟು ಆಸ್ತಿಪಾಸ್ತಿ ಧ್ವಂಸವಾದವು. 309 ಜನರು ಅಸು ನೀಗಿದರು. ಸಾವಿರಾರು ಜನರು ಆಸ್ಪತ್ರೆ ಸೇರಿದರು. ನೆರವಿಗೆ ಧಾವಿಸುವುದೂ ಕಷ್ಟವಾಗುವಂತೆ ಇಕ್ಕಟ್ಟಿನ ಬೀದಿಗಳೆಲ್ಲ ಕಲ್ಲು ಇಟ್ಟಿಗೆಗಳಿಂದ ತುಂಬಿ ಹೋದವು. ಸಹಜವಾಗಿ ವಿಜ್ಞಾನಿಗಳ ಮೇಲೆ ಜನರಿಗೆ ಕೋಪ ಬಂತು.

`ಯಾರೂ ಆತಂಕಪಡಬೇಕಾಗಿಲ್ಲ~ ಎಂಬ ಭರವಸೆಯ ಮಾತುಗಳನ್ನು ನಂಬಿ ಮನೆಯಲ್ಲಿ ಹಾಯಾಗಿ ಉಳಿದಿದ್ದರಿಂದ ಇಷ್ಟೆಲ್ಲ ಅನಾಹುತವಾಯಿತು ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರು. `ಭೂಕಂಪನ ಕುರಿತು ತಜ್ಞರ ಸಮಿತಿ ನಿಖರವಾಗಿ ಮುನ್ಸೂಚನೆ ನೀಡಿಲ್ಲ~ ಎಂದು ಆಪಾದಿಸಿ ಏಳು ವಿಜ್ಞಾನಿಗಳ ಮೇಲೆ ಸರ್ಕಾರವೇ ದಾವೆ ಹೂಡಲು ನಿರ್ಧರಿಸಿತು.

`ದೊಡ್ಡ ಭೂಕಂಪನ ಸಂಭವಿಸಲಿಕ್ಕಿಲ್ಲ~ ಎಂದು ಬರ್ನಾರ್ಡಿನಿಸ್ ಸುದ್ದಿಗಾರರೆದುರು ಹೇಳಿದ್ದೇ ತಪ್ಪಾಯಿತು. ಅಂಥ ಅಭಯವಚನ ನೀಡದೇ ಇದ್ದಿದ್ದರೆ, `ಏಪ್ರಿಲ್ 5ರ ರಾತ್ರಿ ಭೂಮಿ ತುಸು ಜೋರಾಗಿ ಕಂಪಿಸಿದಾಗ ಸಾಕಷ್ಟು ಕುಟುಂಬಗಳು ಮನೆ ಬಿಟ್ಟು ದೂರ ಹೋಗಿರುತ್ತಿದ್ದರು. ತಮ್ಮನ್ನು ತಾವು ಬಚಾವು ಮಾಡಿಕೊಳ್ಳುತ್ತಿದ್ದರು~ ಎಂದು ಇಟಲಿ ಸರ್ಕಾರಿ ವಕೀಲರು ಆ ಏಳೂ ತಜ್ಞರ ಮೇಲೆ ಜನಸ್ತೋಮಹತ್ಯೆಯ ಖಟ್ಲೆ ಹಾಕಿದರು.

ಲಾ~ಕಿಲಾದ ಪುರಸಭೆಯೂ ಸೇರಿದಂತೆ 70 ವ್ಯಕ್ತಿಗಳು/ ಸಂಘಟನೆಗಳು ಒಟ್ಟಾಗಿ ತಜ್ಞರ ಸಮಿತಿಯ ಆರು ವಿಜ್ಞಾನಿಗಳು ಮತ್ತು ಸರ್ಕಾರಿ ಮುಖ್ಯಸ್ಥ ಬರ್ನಾರ್ಡಿನಿಸ್ ಮೇಲೆ ದಾವೆ ಹೂಡಿದವು. ತಮಗಾದ ನಷ್ಟಕ್ಕೆ ಈ ಏಳೂ ಮಂದಿ ಒಟ್ಟೂ 430 ಲಕ್ಷ ಪೌಂಡ್ ದಂಡ ಕೊಡಬೇಕೆಂದು ಪರಿಹಾರ ಕೋರಲಾಯಿತು.

ಈ ತಜ್ಞರು ತಪ್ಪಿತಸ್ಥರೆಂದು ನ್ಯಾಯಾಲಯ ನಿರ್ಧರಿಸಿದರೆ ಪ್ರತಿಯೊಬ್ಬ ವಿಜ್ಞಾನಿಯೂ 15 ವರ್ಷಗಳ ಶಿಕ್ಷೆ ಅನುಭವಿಸಬೇಕಾಗುತ್ತದೆ. ಖಟ್ಲೆಯ ವಿಚಾರಣೆ ಆರಂಭವಾಗುತ್ತಲೇ ಜಗತ್ತಿನ ಭೂಕಂಪನ ತಜ್ಞರೆಲ್ಲ ಕೋಪದಿಂದ ಕಂಪಿಸಿದರು.

ಶಾಂತಸಾಗರದ ಅಂಚಿನಗುಂಟ ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಹಿಡಿದು ಜಪಾನಿನವರೆಗೆ `ಬೆಂಕಿಯ ಬಳೆ~ ಎಂದೇ ಖ್ಯಾತಿ ಪಡೆದ ತಾಣಗಳಲ್ಲಿ ಜ್ವಾಲಾಮುಖಿ, ಭೂಕಂಪನ- ಸುನಾಮಿಗಳೇಳುವ ಅತ್ಯಾಧುನಿಕ ನಗರಗಳಿವೆ; ಅಲ್ಲೆಲ್ಲ ಭೂಕಂಪನ ಮುನ್ಸೂಚನೆ ಪಡೆಯಲು ನೂರಾರು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

ವಿಶೇಷವಾಗಿ ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತದಲ್ಲಿ ಭೂಕಂಪನದ ವಿಷಯದಲ್ಲಿ ಅತ್ಯಂತ ಗಂಭೀರ ಸಂಶೋಧನೆ ನಡೆಯುತ್ತಿದೆ. ಏಕೆಂದರೆ, ಅಲ್ಲಿನ ಕಡಲಂಚಿನಗುಂಟ ಆಳವಾದ ಪುರಾತನ ಬಿರುಕು (ಶಿಲಾ ಸ್ತರಭಂಗ) ಇದೆ. ಅಲ್ಲಿನ ನೆಲ ಆಗಾಗ ತುಸು ಸರಿಯುತ್ತಲೇ ಇರುತ್ತದೆ.

ಅಲ್ಲೇನಾದರೂ ತೀವ್ರ ಭೂಕಂಪನ ಸಂಭವಿಸಿದರೆ ಲಾಸ್ ಏಂಜಲೀಸ್ ನಗರ, ಹಾಲಿವುಡ್ ಸೇರಿದಂತೆ, ಸ್ಯಾನ್ಫ್ರಾನ್ಸಿಸ್ಕೊ ಮುಂತಾದ ನಗರಗಳ ಬಹುದೊಡ್ಡ ಭಾಗ ಭೂಗತವಾಗುತ್ತದೆ; ಇಲ್ಲವೆ ಶಾಂತಸಾಗರದಲ್ಲಿ ಕಣ್ಮರೆಯಾಗುತ್ತದೆ. ಅಲ್ಲಿ ಮಹಾದುರಂತ ತರಬಲ್ಲ ಭೂಕಂಪನ ಮುನ್ಸೂಚನೆಯ ಅತ್ಯಂತ ಆಳವಾದ ಅಧ್ಯಯನ- ಸಂಶೋಧನೆ ನಡೆಯುತ್ತಿದೆ.

`ಪ್ರಳಯದ ಅಂಚಿನಲ್ಲಿ ನಿಂತ ನಮಗೇ ಭೂಕಂಪನದ ಮುನ್ಸೂಚನೆ ನೀಡುವ ವಿದ್ಯೆ ಕರಗತವಾಗಿಲ್ಲ. ಇಟಲಿಯಲ್ಲಿ ದೊಡ್ಡ ಭೂಕಂಪನ ಸಂಭವಿಸುತ್ತದೊ ಇಲ್ಲವೊ ಎಂಬ ಖಚಿತ ಉತ್ತರವನ್ನು ವಿಜ್ಞಾನಿಗಳಿಂದ ನಿರೀಕ್ಷಿಸುವುದು ಸರಿಯಲ್ಲ~ ಎಂದು ಅಮೆರಿಕನ್ ವಿಜ್ಞಾನಿಗಳು ಖಾರವಾಗಿ ಹೇಳಿದ್ದರು.

ಈಚೆಗೆ ವಿವಿಧ ದೇಶಗಳ 5200 ಮಂದಿ ಭೂಕಂಪನ ತಜ್ಞರು ಇಟಲಿಯ ರಾಷ್ಟ್ರಪತಿಗೆ ಒಂದು ಮನವಿ ಸಲ್ಲಿಸಿದ್ದರು: `ನಿಮ್ಮ ದೇಶ ವಿಜ್ಞಾನದ ಮೇಲೆಯೇ ಕಾನೂನಿನ ದಾಳಿ ನಡೆಸಿದೆ. ಇದು ಸರಿಯಲ್ಲ~ ಎಂದು ಹೇಳಿ, ತಜ್ಞರ ಮೇಲಿನ ಆಪಾದನೆಗಳನ್ನು ಕೈಬಿಡುವಂತೆ ಒತ್ತಾಯಿಸಿದ್ದರು.

ಭೂಕಂಪನದ ಮುನ್ಸೂಚನೆ ಸಾಕಷ್ಟು ಸಂಕೀರ್ಣ ವಿಷಯ. ಆಳದಲ್ಲಿರುವ ಶಿಲೆಗಳು ಒತ್ತಡಕ್ಕೆ ಸಿಲುಕಿ ಬಾಗುತ್ತ ಬಾಗುತ್ತ, ಅನೇಕ ವರ್ಷಗಳ ನಂತರ ಹಠಾತ್ತಾಗಿ ಭಗ್ನವಾದಾಗ ಭೂಮಿ ಕಂಪಿಸುತ್ತದೆ; ಕುಸಿಯುತ್ತದೆ. ಕೆಲವು ಸಂದರ್ಭಗಳಲ್ಲಿ ದೊಡ್ಡ ಭೂಕಂಪನ ಸಂಭವಿಸುವ ಮೊದಲು ಚಿಕ್ಕಪುಟ್ಟ ಕಂಪನಗಳು ಏಳುತ್ತವೆ.

ಎಷ್ಟೊ ಬಾರಿ, ದೊಡ್ಡದು ಸಂಭವಿಸುವುದೇ ಇಲ್ಲ. ತೀರ ಆಳದಲ್ಲಿ ಶಿಲೆಯ ಮೇಲೆ ಒತ್ತಡ ಹೆಚ್ಚಾದಾಗ ರೇಡಾನ್ ಎಂಬ ಅನಿಲ ಬಿಡುಗಡೆಯಾಗುತ್ತದೆ. ಪ್ರಾಣಿಗಳಿಗೆ ಅದು ಗೊತ್ತಾಗುತ್ತದೆ; ಬಂಧನದಲ್ಲಿದ್ದರೆ ಅವು ಚಡಪಡಿಸುತ್ತವೆ ಎಂಬುದು ಗೊತ್ತಾಗಿದೆ.

ಆದರೆ ನೆಲದಾಳದ ಶಿಲೆಗಳ ರಚನೆ ಹೇಗಿದೆ, ಎಷ್ಟು ಒತ್ತಡದಲ್ಲಿ ಅವು ಬಾಗುತ್ತಿವೆ ಎಂಬ ಚಿತ್ರಣ ಗೊತ್ತಿಲ್ಲದಿದ್ದರೆ ಭೂಕಂಪನ ಎಲ್ಲಿ ಸಂಭವಿಸಲಿದೆ, ಎಷ್ಟು ತೀವ್ರವಾಗಿ ನೆಲವು ಕಂಪಿಸಲಿದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ನಿಖರವಾಗಿ ಗೊತ್ತಿಲ್ಲದೆ, ಜನರಲ್ಲಿ ಭಯದ ಬೀಜ ಬಿತ್ತಿ, ಅವರು ವಿನಾಕಾರಣ ಎದ್ದುಬಿದ್ದು ಓಡುವಂತೆ ಮಾಡುವುದು ವಿಜ್ಞಾನವಲ್ಲ.

ಅದೇ ಲಾ~ಕಿಲಾ ಪಕ್ಕದ ಸುಲ್ಮೊನಾ ಪಟ್ಟಣದ ಪರಮಾಣು ಭೌತವಿಜ್ಞಾನ ಸಂಸ್ಥೆಯ ತಾಂತ್ರಿಕ ಸಹಾಯಕ ಗ್ಯಾಂಪಾಲೊ ಗ್ಯೂಲಿಯಾನಿ ಇಂಥದೊಂದು ಭಾನಗಡಿ ಮಾಡಿದ್ದ. ತಾನಿರುವ ಪ್ರದೇಶದಲ್ಲಿ ಎರಡು ವಾರಗಳಿಂದ ಮೆಲ್ಲಗೆ ನೆಲ ಕಂಪಿಸುವುದನ್ನು ನೋಡಿ ಆತ ರೇಡಾನ್ ಅನಿಲ ನೆಲದಿಂದ ಹೊಮ್ಮುತ್ತಿದೆ ಎಂದು ಘೋಷಿಸಿದ.

ಮಾರ್ಚ್ 24ರಂದೇ ದೊಡ್ಡ ಭೂಕಂಪನ ಆಗಲಿಕ್ಕಿದೆ ಎಂದು ಟಿವಿ ವಾಹಿನಿಗೆ ಹೇಳಿದ. ಸುಲ್ಮೊನಾ ಪಟ್ಟಣದ ಸಾವಿರಾರು ಕುಟುಂಬಗಳು ಗುಳೆ ಎದ್ದು ಓಡಿದವು. ಒಂದು ವಾರದ ನಂತರ ಮರಳಿ ಮನೆ ಸೇರಿದರು.

ನಾಲ್ಕು ದಿನಗಳ ನಂತರ ದೂರದ ಲಾ~ಕಿಲಾ ನಗರದಲ್ಲಿ ದೊಡ್ಡ ಭೂಕಂಪನ ಸಂಭವಿಸಿತ್ತು. ಸುಲ್ಮೊನಾ ಪಟ್ಟಣದ ಜನರನ್ನು ಅಂದು ಅನಗತ್ಯವಾಗಿ ಹೆದರಿಸಿದ್ದಕ್ಕೆ ಗ್ಯೂಲಿಯಾನಿಗೆ ಭೂಕಂಪನ ತಜ್ಞರು ಛೀಮಾರಿ ಹಾಕಿದ್ದ ಕತೆ ಇದೇ ಅಂಕಣದಲ್ಲಿ (ಏಪ್ರಿಲ್ 9, 2009) ಬಂದಿತ್ತು.

ಜನರಿಗೆ ಏಕೆ ಮುನ್ಸೂಚನೆ ನೀಡಿಲ್ಲವೆಂದು ಸರ್ಕಾರ ಲಾ~ಕಿಲಾ ತಜ್ಞರ ಮೇಲೆ ಆಗಿನ್ನೂ ಖಟ್ಲೆ ಹಾಕಿರಲಿಲ್ಲ. ವಿಜ್ಞಾನ ಎಂದೂ ಕಣಿ ಹೇಳುವುದಿಲ್ಲ. ಹೇಳಿದರೆ ವಿಜ್ಞಾನಕ್ಕೂ ಫಲಜ್ಯೋತಿಷಕ್ಕೂ ವ್ಯತ್ಯಾಸವೇ ಇರುವುದಿಲ್ಲ.

`ದೊಡ್ಡ ಭೂಕಂಪನ ಸಂಭವಿಸಲಿದೆ~ ಎಂದು ಗ್ಯೂಲಿಯಾನಿ ಹೇಳಬಾರದಿತ್ತು. `ದೊಡ್ಡದು ಸಂಭವಿಸಲಿಕ್ಕಿಲ್ಲ~ ಎಂದು ಬರ್ನಾರ್ಡಿನಿಸ್ ಹೇಳಿದ್ದು ಸರಿಯೊ ತಪ್ಪೊ ಪ್ರಶ್ನೆ ರೋಮ್ ನ್ಯಾಯಾಲಯದ ಮುಂದಿದೆ. ಭೂಕಂಪನದ ಮಟ್ಟಿಗೆ 6.3 ಅಷ್ಟೇನೂ ದೊಡ್ಡದಲ್ಲ ನಿಜ.

ಭದ್ರ ಬುನಾದಿಯ ಮೇಲೆ ನಿಂತ ದೊಡ್ಡವರ ಕಟ್ಟಡಕ್ಕೆ ಯಾವುದೂ ದೊಡ್ಡದಲ್ಲ. ಅಭದ್ರರಿಗೆ ಚಿಕ್ಕ ಕಂಪನವೂ ದೊಡ್ಡ ಪರಿಣಾಮ ಬೀರುತ್ತದೆ. ವಿಜ್ಞಾನ ಈ ಅಳತೆಗೋಲನ್ನು ಬಳಸುವುದಿಲ್ಲ. ಅದನ್ನು ಬಳಸಬೇಕಾದ ಆಡಳಿತ ತಜ್ಞರ ಮೇಲೆ ಸರ್ಕಾರ ಖಟ್ಲೆ ಹಾಕುವುದಿಲ್ಲ.

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.