ಮಂಗಳವಾರ, ಜೂನ್ 22, 2021
29 °C

ವೈಷ್ಣೋದೇವಿಯ ಮುಂದೆ ಪ್ರಪಾತವೂ ಇದೆ!

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಇದು ಕ್ಷಣಗಣನೆ. ಬಹುದಿನಗಳಿಂದ ನಡೆದಿದೆ. ಅಂತಿಮ ಘಟ್ಟ ಹೊಸ್ತಿಲಲ್ಲಿಯೇ ಇದ್ದಂತೆ ಕಾಣುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಕ್ಷ ಬಿಡುತ್ತಾರಾ? ಅಲ್ಲಿಯೇ ಇರುತ್ತಾರಾ? ಅವರು ಕಾರಾಗೃಹದಿಂದ ಬಿಡುಗಡೆಯಾಗಿ ಬಂದ ದಿನದಿಂದ ಈ ಪ್ರಶ್ನೆ ಕೇಳಿ ಬರುತ್ತಿದೆ. ಈ ಪ್ರಶ್ನೆ ಎಳೆದಾಡುತ್ತಿರುವುದಕ್ಕೆ ಯಡಿಯೂರಪ್ಪ ಅವರ ಮನಃಸ್ಥಿತಿಯೂ ಕಾರಣವಾಗಿರಬಹುದು. ಅವರು ಹೈಕಮಾಂಡಿಗೆ ದಿನಕ್ಕೊಂದು ಗಡುವು ವಿಧಿಸುತ್ತಿದ್ದಾರೆ.ತಾವೇ ಅದನ್ನು ವಿಸ್ತರಿಸುತ್ತಿದ್ದಾರೆ. ತಾನೇ ಕಟ್ಟಿದ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಮತ್ತೆ ಸ್ಪಷ್ಟನೆ ಕೊಡುತ್ತಿದ್ದಾರೆ. ಗಡುವು ವಿಧಿಸುವುದನ್ನು ಬೇರೆಯವರ ಬಾಯಿಯಲ್ಲಿ ಹೇಳಿಸುತ್ತಾರೆ. ಸ್ಪಷ್ಟನೆಯನ್ನು ತಾವೇ ಕೊಡುತ್ತಿದ್ದಾರೆ. ಈ ನಡುವೆ ಪಕ್ಷ ಬಿಟ್ಟು ಹೋಗಲು ಏನೇನು ಸಿದ್ಧತೆ ಮಾಡಿಕೊಳ್ಳಬೇಕೋ ಅದನ್ನೆಲ್ಲ ಮಾಡಿಕೊಳ್ಳುತ್ತಿದ್ದಾರೆ!ಯಡಿಯೂರಪ್ಪ ಒಂದು ಕಡೆ ಬೆಂಬಲಿಗರ ಸಭೆ ನಡೆಸಿ ತಮ್ಮ ಬಲವನ್ನು ಲೆಕ್ಕ ಹಾಕುತ್ತಿದ್ದಾರೆ. ಇನ್ನೊಂದು ಕಡೆ ದೇವರ `ಪ್ರಸಾದ~ ಕೇಳುತ್ತಿದ್ದಾರೆ. ವೈಷ್ಣೋದೇವಿ ಈಗಾಗಲೇ `ಪಕ್ಷ ಬಿಟ್ಟರೆ ಒಳ್ಳೆಯದಾಗುತ್ತದೆ~ ಎಂದು `ಪ್ರಸಾದ~ ಕೊಟ್ಟಿದ್ದಾಳೆ. ಕಾಶಿ ವಿಶ್ವನಾಥನೂ ಅದನ್ನೇ  ಹೇಳಿದ್ದಾನೆ! ತಮ್ಮ ಆಪ್ತರ ಜತೆಗೆ ವೇಷ್ಣೋದೇವಿ ಮುಂದೆ, `ಪಕ್ಷ ಬಿಟ್ಟರೆ ಒಳ್ಳೆಯದಾಗುತ್ತದೆಯೇ~, `ಬಿಡದಿದ್ದರೆ ಒಳ್ಳೆಯದಾಗುತ್ತದೆಯೇ~ ಎಂದು ಯಡಿಯೂರಪ್ಪ ಚೀಟಿ ಹಾಕಿ ಒಂದು ಚೀಟಿಯನ್ನು ದೇವಿಯ ಅರ್ಚಕನಿಂದ ಎತ್ತಿಸಿದ್ದಾರೆ.`ಪಕ್ಷ ಬಿಟ್ಟರೇ ಒಳ್ಳೆಯದಾಗುತ್ತದೆ~ ಎಂಬ ಚೀಟಿಯನ್ನು ಅರ್ಚಕ ಎತ್ತಿ ಕೊಟ್ಟಿದ್ದಾನೆ. ಕಾಶಿ ವಿಶ್ವನಾಥನ ಸಮ್ಮುಖದಲ್ಲಿಯೂ ಇದೇ `ಪ್ರಯೋಗ~ ಆಗಿದೆ. ಅಲ್ಲಿಯೂ, `ಪಕ್ಷ ಬಿಟ್ಟರೇ ಒಳ್ಳೆಯದಾಗುತ್ತದೆ~ ಎಂಬ ಚೀಟಿಯನ್ನೇ ಅಲ್ಲಿಯ ಅರ್ಚಕ ಎತ್ತಿ ಕೊಟ್ಟಿದ್ದಾನೆ! ದೇವರು ದಿಂಡರಲ್ಲಿ ಅಪಾರ ನಂಬಿಕೆ ಇರುವ ಯಡಿಯೂರಪ್ಪ ಅವರಿಗೆ ಈಗ ಹೆಚ್ಚು ಆಯ್ಕೆಗಳು ಉಳಿದಿಲ್ಲ. ಅವರು ಯಾವಾಗ ಪಕ್ಷ ಬಿಡುವ ತೀರ್ಮಾನ ಪ್ರಕಟಿಸುತ್ತಾರೆ ಎಂಬುದು ಮಾತ್ರ ಬಾಕಿ ಉಳಿದಿದೆ. ತಾವು ಪಕ್ಷ ಬಿಡುವ ದಿನವನ್ನು ಅವರು ತಮ್ಮ ಆಪ್ತರ ಮುಂದೆ ಹೇಳಿಯೂ ಬಿಟ್ಟಿದ್ದಾರೆ. ಅದೇ ದಿನ ಆ ತೀರ್ಮಾನ ಪ್ರಕಟಿಸುತ್ತಾರೆಯೇ ಇಲ್ಲವೇ ಗೊತ್ತಿಲ್ಲ.ಕಾಶಿಗೆ ಹೋಗಿ ಬಂದ ನಂತರ ಸಿಹಿ ಸುದ್ದಿ ಕೊಡುತ್ತೇನೆ ಎಂದಿದ್ದ ಯಡಿಯೂರಪ್ಪ ಮನಸ್ಸಿನಲ್ಲಿ ಪಕ್ಷ ಬಿಡುವ ತೀರ್ಮಾನವೇ `ಸಿಹಿ ಸುದ್ದಿ~ ಎಂಬ ಅಭಿಪ್ರಾಯ ಇದ್ದಿರಬಹುದು.

ಈಗ ಅವರು ಪಕ್ಷದಲ್ಲಿ ಇದ್ದಾರೆ. ದೇಹ ಮಾತ್ರ ಅಲ್ಲಿ ಇದೆ. ಮನಸ್ಸಿನಲ್ಲಿ ಬರೀ ಕಹಿ ತುಂಬಿದೆ. ಹೈಕಮಾಂಡ್ ತಮ್ಮನ್ನು ಅವಮಾನಿಸುತ್ತಿದೆ ಎಂದು ಅವರಿಗೆ ಅನಿಸುತ್ತಿದೆ. ಅಧಿಕಾರ ಕೊಡದೇ ಇರುವುದೇ ಆ ಅವಮಾನ ಎಂಬುದೂ ಅವರ ಭಾವನೆ. ತಾವೇ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂಡ್ರಿಸಿದ ಡಿ.ವಿ.ಸದಾನಂದಗೌಡರು, ತಮ್ಮನ್ನು `ಜೈಲಿಗೆ ಕಳುಹಿಸಿದ ಗೌಡರ~ ಜತೆಗೆ ಹೋಗಿ ಬಿಟ್ಟಿದ್ದಾರೆ! ಯಡಿಯೂರಪ್ಪನವರು ಸದಾನಂದಗೌಡರನ್ನು ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂಡ್ರಿಸಲು ಮಾಡಿದ ಹರಸಾಹಸ ಸಣ್ಣದಲ್ಲ.

 

ಆದರೆ, ಈಗ ಸದಾನಂದಗೌಡರು ತಾವು ಹೈಕಮಾಂಡಿನ ಆಯ್ಕೆ ಎನ್ನುತ್ತಿದ್ದಾರೆ. ಯಡಿಯೂರಪ್ಪನವರಿಗೆ ಅದಕ್ಕಿಂತ ದೊಡ್ಡ ಅವಮಾನ ಮತ್ತೊಂದು ಇರಲಾರದು. ತಮ್ಮನ್ನು ನಾಲ್ಕು ತಿಂಗಳಲ್ಲಿ ಮುಖ್ಯಮಂತ್ರಿ ಗದ್ದುಗೆ ಮೇಲೆ ಕೂಡ್ರಿಸುವ ಭರವಸೆ ಕೊಟ್ಟಿದ್ದ ಹೈಕಮಾಂಡ್ ಈಗ, `ನಾಳೆ ಹೋಗುವವರು ಇಂದೇ ಹೋಗಲಿ~ ಎನ್ನುತ್ತಿದೆ. ಯಡಿಯೂರಪ್ಪನವರಿಗೆ ಇನ್ನೇನು ಉಳಿದಿದೆ?ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಸರಿದಾರಿಗೆ ತರಲು ಹೈಕಮಾಂಡ್ ಎಂದೋ ಹೇಳಬೇಕಿದ್ದ ಮಾತನ್ನು ಈಗ ಹೇಳಿದೆ. ರೆಡ್ಡಿ ಸೋದರರಿಂದ ಬಳ್ಳಾರಿಯಲ್ಲಿಯೇ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ಸ್ವೀಕರಿಸಿದ್ದ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿಯವರಿಗೆ ಗಣಿ ಅಕ್ರಮದಿಂದ ಬಿಜೆಪಿಗೆ ಕೆಟ್ಟ ಹೆಸರು ಬಂತು ಎಂದು ಈಗ ಅನಿಸತೊಡಗಿದೆ.ದಕ್ಷಿಣ ಭಾರತದ ತನ್ನ ಮೊದಲ ಸರ್ಕಾರದಿಂದ ತಾನು ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಬೆಲೆ ತೆರಬೇಕಾಗಿ ಬಂತು ಎಂದು ಬಿಜೆಪಿಗೆ ಈಗ ಅನಿಸತೊಡಗಿರುವುದಕ್ಕೆ ಗಡ್ಕರಿ ಮಾತು ಒಂದು ತಾಜಾ ಉದಾಹರಣೆ. ಗಡ್ಕರಿಯವರು ಈಗ ಹೀಗೆ ಹೇಳುತ್ತಿರುವುದಕ್ಕೆ ಒಂದು ಕಾರಣವೂ ಇದ್ದಂತೆ ಇದೆ. ಮುಂದಿನ ಲೋಕಸಭೆ ಚುನಾವಣೆ ವೇಳೆಗೆ ಅದು ಕರ್ನಾಟಕದ `ಕಳಂಕ~ವನ್ನು ತೊಳೆದುಕೊಳ್ಳಬೇಕಾಗಿದೆ. ಕುತ್ತಿಗೆಗೆ ಕಲ್ಲು ಕಟ್ಟಿಕೊಂಡಂಥ ಈ ಸರ್ಕಾರದ ಮುಖ್ಯಸ್ಥನ ಹುದ್ದೆಯಲ್ಲಿ ಅದು ಮತ್ತೆ ಯಡಿಯೂರಪ್ಪ ಅವರನ್ನು ಕೂಡ್ರಿಸುವುದು ಕನಸಿನ ಮಾತು.ಯಡಿಯೂರಪ್ಪ ಅಂಥ ಕನಸನ್ನು ಕಾಣುತ್ತಿದ್ದರೆ ಅದು ಹಗಲುಗನಸು ಮಾತ್ರ. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಹುದ್ದೆ ಮಾತ್ರ ಬೇಕಾಗಿದೆ; ಅಧ್ಯಕ್ಷ ಹುದ್ದೆ ಕೊನೆಯ ಆಯ್ಕೆಯಿದ್ದಂತೆ ಕಾಣುತ್ತದೆ. ಆದರೆ, ಅವರಿಗೆ ಅಧ್ಯಕ್ಷ ಪದವಿಯೂ ಸಿಗುವುದಿಲ್ಲ. ಸುಪ್ರೀಂ ಕೋರ್ಟ್ ಈಗಷ್ಟೇ ಸಿಬಿಐನಿಂದ ಗಣಿ ಅಕ್ರಮದ ತನಿಖೆ ಮಾಡಿಸಬೇಕೇ ಹೇಗೆ ಎಂಬ ಅಭಿಪ್ರಾಯವನ್ನು ಸಿಇಸಿಯಿಂದ ಕೇಳಿದೆ. ಸಿಇಸಿ `ಹೌದು~ ಎಂದು ಹೇಳಿದರೆ ಸಿಬಿಐ ಅಧಿಕಾರಿಗಳು ಯಡಿಯೂರಪ್ಪ ಮನೆ ಬಾಗಿಲು ತಟ್ಟದೆ ಬಿಡುವುದಿಲ್ಲ.ಆಗ ಅವರು ಪಕ್ಷದ ಅಧ್ಯಕ್ಷರಾಗಿದ್ದರೆ ಹೈಕಮಾಂಡ್‌ಗೆ ಅದು ಹೆಮ್ಮೆಯೇ? ಆ ಭಯ ಹೈಕಮಾಂಡಿಗೆ ಇದ್ದಂತೆ ಕಾಣುತ್ತದೆ. ಅಲ್ಲಿಗೆ ಯಡಿಯೂರಪ್ಪ ಪಕ್ಷಕ್ಕೆ ಒಂದು ಹೊರೆ ಎಂದೇ ಅರ್ಥ. ಅವರು ಪಕ್ಷದಲ್ಲಿ ತೆಪ್ಪಗೆ ಇದ್ದರೆ, `ಅನಿವಾರ್ಯ ಕರ್ಮ~ ಎಂದು ಹೈಕಮಾಂಡ್ ಕೂಡ ಸುಮ್ಮನಿರಬಹುದು. ಅದೇ ಒಂದು ಉಪಕಾರ ಎಂದು ಯಡಿಯೂರಪ್ಪ ಭಾವಿಸಬೇಕು!ಆದರೆ, ಯಡಿಯೂರಪ್ಪ ಅವರು ದುರ್ದಾನ ಬಂದವರಂತೆ ನಡೆದುಕೊಳ್ಳುತ್ತಿದ್ದಾರೆ. ದಿನಕ್ಕೊಬ್ಬ ದೇವರ ಬಳಿ ಹೋಗುತ್ತಿದ್ದಾರೆ. ಹೋದಲ್ಲೆಲ್ಲ ಪರ್ಯಾಯದ ಹುಡುಕಾಟದಲ್ಲಿ ಇದ್ದಾರೆ. ಮೊನ್ನೆ ತುಮಕೂರು ಜಿಲ್ಲೆಯ ಜನತಾದಳ (ಯು) ನಾಯಕ ಜೆ.ಸಿ.ಮಾಧುಸ್ವಾಮಿ ಅವರ ಮನೆಗೆ ಹೋಗಿದ್ದು ಈ ಪರ್ಯಾಯದ ಹುಡುಕಾಟದಲ್ಲಿಯೇ.ಚಾಮರಾಜನಗರದಲ್ಲಿಯೂ ಇಂಥ ಒಬ್ಬ ನಾಯಕನ ಜತೆಗೆ ಅವರು ಸಂಪರ್ಕದಲ್ಲಿ ಇದ್ದಾರೆ. ಇವರೆಲ್ಲ ದೊಡ್ಡ ನಾಯಕರಲ್ಲ, ಆದರೆ, ಯಡಿಯೂರಪ್ಪ ಅವರಿಗೆ ಹುಲ್ಲು ಕಡ್ಡಿಯ ಆಸರೆಯೂ ದೊಡ್ಡ ಹಗ್ಗದಂತೆ ಕಾಣತೊಡಗಿದೆ. ತಮ್ಮನ್ನು ಬೆಳೆಸಿದ, ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂಡ್ರಿಸಿದ ಪಕ್ಷ ಅವರಿಗೆ ಉರುಲು ಹಾಕುವ ನೇಣಿನಂತೆ ಭಾಸವಾಗುತ್ತಿದೆ.ತಾವು ಈಗಲೇ ಪಕ್ಷ ಬಿಟ್ಟರೆ ತಮ್ಮ ಜತೆಗೆ ದೊಡ್ಡ ಸಂಖ್ಯೆಯಲ್ಲಿ ಶಾಸಕರು ಬರುವುದಿಲ್ಲ ಎಂದು ಅವರಿಗೆ ಗೊತ್ತಿದೆ. ಒಬ್ಬಿಬ್ಬರು ಮಾತ್ರ ಬರಬಹುದು. ಈಗಲೇ ಸರ್ಕಾರ ಬಿದ್ದು ಬಿಟ್ಟರೆ ಇನ್ನೂ 14-15 ತಿಂಗಳು ಇರುವ ಶಾಸಕ ಸ್ಥಾನಕ್ಕೆ ಕಂಟಕ ಬರುತ್ತದೆ ಎಂಬ ಭಯವೇ ಇದಕ್ಕೆ ಕಾರಣ. ಗಡ್ಕರಿಯವರು ಬೇರೆ ಮೊನ್ನೆ ಬೆಂಗಳೂರಿಗೆ ಬಂದಾಗ ಚುನಾವಣೆಯ ಗುಮ್ಮನನ್ನು ತೋರಿಸಿ ಹೋಗಿದ್ದಾರೆ. ಸರ್ಕಾರ ಹೋದರೆ ಹೋಗಲಿ ಎಂದು ಅವರು ಯಡಿಯೂರಪ್ಪ ಅವರ ಜತೆಗೆ ಇರುವ ಶಾಸಕರನ್ನು ಬೆದರಿಸುವುದಕ್ಕಾಗಿಯೇ ಹೇಳಿದ್ದು.ಇದನ್ನು ಸದಾನಂದಗೌಡರು ನಿತ್ಯ ಮಾಡುತ್ತಿದ್ದಾರೆ! ಮತ್ತೆ ಚುನಾವಣೆ ಬಂದರೆ ಗೆಲ್ಲುವ ಭರವಸೆ ಯಾರಿಗೂ ಇಲ್ಲ. ಸಚಿವರಾಗಿರುವವರಿಗೆ ಮೊದಲೇ ಇಲ್ಲ. ಎಸ್.ಎಂ.ಕೃಷ್ಣಅವರು ಮುಖ್ಯಮಂತ್ರಿಯಾಗಿ 2004ರಲ್ಲಿ ಚುನಾವಣೆ ಎದುರಿಸಿದ್ದಾಗ ಅವರ ಸಂಪುಟದಲ್ಲಿದ್ದ 32 ಜನ ಸಚಿವರು ಸೋತು ಬಿಟ್ಟಿದ್ದರು. ಅವರಲ್ಲಿ ಯಾರೂ ಈಗಿನ ಬಹುತೇಕ ಸಚಿವರಷ್ಟು ಅದಕ್ಷರಾಗಿರಲಿಲ್ಲ, ಭ್ರಷ್ಟರಾಗಿರಲಿಲ್ಲ; ಜನವಿರೋಧಿಯಾಗಿರಲಿಲ್ಲ! ಇದು ಇವರಿಗೂ ಗೊತ್ತಿಲ್ಲ ಎಂದು ಅಲ್ಲ.

 

ಇವರು ಯಡಿಯೂರಪ್ಪ ಜತೆಗೆ ಹೋಗಲಾರರು. ಬಿಟ್ಟೂ ಇರಲಾರರು. ಹೋದರೆ ಈಗಲೇ ಚುನಾವಣೆ ಎದುರಿಸಬೇಕು. ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಹೋಗದಿದ್ದರೆ ಯಡಿಯೂರಪ್ಪ ಸೇಡಿನಿಂದ ಸೋಲಿಸಿ ಬಿಡಬಹುದು! ತಮ್ಮ ತಮ್ಮ ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಎಷ್ಟು ಎಂದು ಅವರಿಗೆ ಈಗಲೇ ಲೆಕ್ಕ ಗೊತ್ತು!ಯಡಿಯೂರಪ್ಪ ಇಂದಲ್ಲ, ನಾಳೆ ಆಡುವುದು ಇದೇ ಲಿಂಗಾಯತ ಕಾರ್ಡನ್ನು. ನಾಳೆ ಏಕೆ, ತಮ್ಮ 70ನೇ ಜನ್ಮದಿನ ಅವರು ವಿವಿಧ ಮಠಾಧೀಶರನ್ನು ಕರೆಸಿ ಮಾಡಿದ್ದು ಅದನ್ನೇ. ಮುರುಘಾ ಶರಣರಂಥ `ಪ್ರಗತಿಪರ~ ಸ್ವಾಮಿಗಳೇ `ಸಮುದಾಯ ಹಿತ~ದ ಮಾತು ಆಡಿದ್ದಾರೆ. ಉಳಿದವರ ಮಾತು ಇನ್ನೇನು? `ಕಾಂಗ್ರೆಸ್ಸಿನಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿತ್ತು. ಬಿಜೆಪಿಯಲ್ಲಿಯೂ ಆಯಿತು~ ಎಂದೇ ಯಡಿಯೂರಪ್ಪ ಹೇಳಲು ಹೊರಟಿದ್ದಾರೆ.

 

ಆ ಮಾತನ್ನು ಅವರು ಇನ್ನೂ ಆಡಿಲ್ಲ. ಪಕ್ಷ ಬಿಟ್ಟ ದಿನ ಅವರು ಮೊದಲು ಹೇಳುವುದು ಇದೇ ಮಾತನ್ನು. ಅದೇ ಅವರ ಚುನಾವಣೆಯ `ಪ್ರಣಾಳಿಕೆ~ ಕೂಡ. ತಮ್ಮ ಕಾಲದಲ್ಲಿ ಆದ ಅಭಿವೃದ್ಧಿಯನ್ನೂ ಯಡಿಯೂರಪ್ಪ ಹೇಳಬಹುದು. ತಮ್ಮ ಕಾಲದಲ್ಲಿ ಮಾತ್ರ ಅಭಿವೃದ್ಧಿ ಆಯಿತು. ಈಗ ಆಗುತ್ತಿಲ್ಲ ಎಂದೇ ಅವರಿಗೆ ಅನಿಸುತ್ತಿದೆ! ಇಲ್ಲವಾದರೆ ಒಂದು ಲಕ್ಷ ಕೋಟಿ ರೂಪಾಯಿಯ ಬಜೆಟ್ಟನ್ನು ಮಂಡಿಸಬೇಕು ಎಂದುಕೊಂಡಿದ್ದೆ ಎಂದು ಅವರೇಕೇ ಈಗ ಹೇಳಬೇಕು? ಸದಾನಂದಗೌಡರಿಗೆ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಲು ಆಗುವುದಿಲ್ಲವೇ? ಅವರೇನು ಕಾಂಗ್ರೆಸ್ ಮುಖ್ಯಮಂತ್ರಿ ಅಲ್ಲವಲ್ಲ! ಅಧಿಕಾರವೇ ಹಾಗೆ.ಅದು ಅಹಂಕಾರವನ್ನು ತುಂಬುತ್ತದೆ. ನಾನು ಇಲ್ಲದಿದ್ದರೆ ಏನೂ ಇಲ್ಲ ಎಂದೇ ಹೇಳುತ್ತದೆ. ಯಡಿಯೂರಪ್ಪ ಅವರು ಹೇಳುತ್ತಿರುವುದೂ ಅದನ್ನೇ. ಅಧಿಕಾರದಲ್ಲಿ ತಾನು ಇರಬೇಕು. ತಾನು ಇಲ್ಲದಿದ್ದರೆ ಪಕ್ಷಕ್ಕೆ ಅಧಿಕಾರವಿದ್ದರೆಷ್ಟು ಬಿಟ್ಟರೆಷ್ಟು ಎಂದೇ ಅವರ ಧೋರಣೆ.

ಯಡಿಯೂರಪ್ಪ ಅವರ ಈ ಧೋರಣೆ ವಿರೋಧ ಪಕ್ಷಗಳ ಕೆಲಸವನ್ನು ಹಗುರ ಮಾಡಿದೆ. ಬಿಜೆಪಿ ಸರ್ಕಾರ ಬೀಳಿಸಲು ಈಗ ವಿರೋಧ ಪಕ್ಷಗಳು ಪ್ರಯತ್ನ ಮಾಡುವುದೇ ಬೇಡ. ಅದು ಇಂದೇ ಬೀಳಲಿ, ನಾಳೆಯೇ ಬೀಳಲಿ ಅದಕ್ಕೆ ಪಕ್ಷದ ಒಳಗಿನವರೇ ಕಾರಣರಾಗಿರುತ್ತಾರೆ.ಯಡಿಯೂರಪ್ಪ ಪಕ್ಷದಲ್ಲಿ ಇರುವ ಈ ಗಳಿಗೆಯಲ್ಲಿಯೇ ಸದಾನಂದಗೌಡರು ಬೇಕಾದಷ್ಟು ಅಸಹಾಯಕರಾಗಿದ್ದಾರೆ. ಒಬ್ಬ ಇನ್ಸ್‌ಪೆಕ್ಟರ್ ವರ್ಗಾವಣೆಯಂಥ ಜುಜುಬಿ ಕೆಲಸ ಮಾಡಲೂ ಅವರಿಗೆ ಸಾಕು ಬೇಕಾಗುತ್ತದೆ. ಇನ್ನು ಖಾಲಿ ಇರುವ 16 ಖಾತೆಗಳನ್ನು ತುಂಬಲು ಆಗುತ್ತದೆಯೇ? ಇಷ್ಟೊಂದು ಖಾತೆಗಳ ಹೊಣೆಯನ್ನು ಒಬ್ಬ ಮುಖ್ಯಮಂತ್ರಿ ಅಥವಾ ಒಬ್ಬ ವ್ಯಕ್ತಿ  ಸಮರ್ಥವಾಗಿ ನಿರ್ವಹಿಸಲು ಆಗುತ್ತದೆಯೇ? ಹಾಗೆ ಮಾಡಲು ಆತ ಅತಿಮಾನುಷನೇ ಆಗಿರಬೇಕು. ಈ ಸರ್ಕಾರ ಹೇಗೆ ನಡೆದಿದೆ ಎಂಬುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆ ಇರಲಾರದು. ಒಂದು ಹಣಕಾಸು ಖಾತೆಯನ್ನು ನಿಭಾಯಿಸುವುದಕ್ಕೇ ಬ್ರಹ್ಮ ವಿದ್ಯೆ ಬೇಕಾಗುತ್ತದೆ.ಈಗ ಖಾಲಿ ಇರುವ ಖಾತೆಗಳು ಸಣ್ಣಪುಟ್ಟ ಖಾತೆಗಳೇನೂ ಅಲ್ಲ. ಆದರೂ ಅವುಗಳೆಲ್ಲ ಮುಖ್ಯಮಂತ್ರಿಯ ಬಳಿಯೇ ಇವೆ. ಯಡಿಯೂರಪ್ಪನವರ ಸಲಹೆ ಕೇಳದೆ ಸದಾನಂದಗೌಡರು ಸಂಪುಟ ವಿಸ್ತರಣೆ ಮಾಡುತ್ತಾರೆಯೇ? ಮಾಡಿಯಾರೇ?

ಇದು ಸದಾನಂದಗೌಡರ ಅಥವಾ ಬಿಜೆಪಿ ಸಮಸ್ಯೆ ಮಾತ್ರವಲ್ಲ. ಅಂತಿಮವಾಗಿ ಕರ್ನಾಟಕದ ಜನರ ಸಮಸ್ಯೆ. ಅವರಿಗೆ ಉತ್ತಮ ಆಡಳಿತ ಸಿಕ್ಕು ಎಷ್ಟು ವರ್ಷವಾಯಿತು? ಅವರು ಮಾಡಿದ ತಪ್ಪು ಏನು? ಕಳೆದ ಎರಡು ಮೂರು ದಶಕಗಳಲ್ಲಿ ಕರ್ನಾಟಕದ ಜನರು ಉತ್ತಮ ಆಡಳಿತಕ್ಕಾಗಿ ಏನೆಲ್ಲ ಮಾಡಿದ್ದಾರೆ.ಪರ್ಯಾಯ ಪಕ್ಷಗಳಿಗೆ ಅವಕಾಶ ಕೊಟ್ಟು ನೋಡಿದ್ದಾರೆ. ಒಂದು ಸಾರಿ ಕಾಂಗ್ರೆಸ್ಸಿಗೆ ಅಧಿಕಾರ ಕೊಟ್ಟರೆ ಇನ್ನೊಂದು ಸಾರಿ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಮಣೆ ಹಾಕಿದ್ದಾರೆ. ಅವರ ಪ್ರಯತ್ನಕ್ಕೆ ಒಂದೊಂದು ಸಾರಿ ಫಲ ಸಿಕ್ಕಿದೆ. ಇನ್ನು ಹಲವು ಸಾರಿ ನಿರಾಶೆಯೇ ಆಗಿದೆ. ಕಾಂಗ್ರೆಸ್ಸೇತರ ಸರ್ಕಾರಗಳು ಅಧಿಕಾರಕ್ಕೆ ಬಂದಾಗಲೆಲ್ಲ ಕಚ್ಚಾಡಿ ಚೂರು ಚೂರಾಗಿ ಹೋಗಿವೆ.ಕಚ್ಚಾಡುವುದು, ಚೂರು ಚೂರಾಗುವುದು ಜನತಾ ಪರಿವಾರದ ಪಕ್ಷಗಳ ಹುಟ್ಟು ಗುಣವಾಗಿತ್ತು. ಬಿಜೆಪಿಗೂ ಅದೇ ಗುಣ ಹೇಗೆ ಅಂಟಿಕೊಂಡಿತು? ಬಿಜೆಪಿಯೂ ಚೂರು ಚೂರಾಗುವ ಹಂತಕ್ಕೆ ಬಂದು ನಿಂತಿದೆ. ಕ್ಷಣಗಣನೆ ಶುರುವಾಗಿದೆ... ಯಡಿಯೂರಪ್ಪ ಯಾವಾಗ ಸ್ಫೋಟಿಸುತ್ತಾರೆ? ವೈಷ್ಣೋದೇವಿಯ ಮುಂದೆ ಪ್ರಪಾತವೂ ಇದೆ. ಅದು ಅವರ ಬೆಂಬಲಿಗರಿಗೆ ಕಾಣುತ್ತಿದೆ. ಯಡಿಯೂರಪ್ಪನವರಿಗೆ ಇಲ್ಲ! 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.