ಶುಕ್ರವಾರ, ಮಾರ್ಚ್ 5, 2021
21 °C

ಶಂಕರ್‌ನಾಗ್ ಇಂದಿಗೆ ಹೇಗೆ ಪ್ರಸ್ತುತ?

ಗಂಗಾಧರ ಮೊದಲಿಯಾರ್ Updated:

ಅಕ್ಷರ ಗಾತ್ರ : | |

ಶಂಕರ್‌ನಾಗ್ ಇಂದಿಗೆ ಹೇಗೆ ಪ್ರಸ್ತುತ?

ಶಂಕರ್‌ನಾಗ್ ಅಭಿನಯದ `ಆಟೋರಾಜ' ಚಿತ್ರ ಬಿಡುಗಡೆಯಾಗಿ 33 ವರ್ಷವಾಗಿದೆ. ಶಂಕರ್‌ನಾಗ್ ಅಪಘಾತದಲ್ಲಿ ಕೊನೆಯುಸಿರೆಳೆದೇ 23 ವರ್ಷವಾಗಿದೆ. ಆದರೂ ಇಂದಿಗೂ ಶಂಕರ್‌ನಾಗ್ ಅವರ ವರ್ಚಸ್ಸನ್ನು ಬಳಸಿಕೊಂಡು ಬಾಕ್ಸ್‌ಆಫೀಸ್ ಕೊಳ್ಳೆ ಹೊಡೆಯುವ ವ್ಯಾವಹಾರಿಕ ತಂತ್ರಗಾರಿಕೆ ಚಿತ್ರರಂಗದಲ್ಲಿ ನಡೆಯುತ್ತಿದೆ. ಆದರೆ ಶಂಕರ್‌ನಾಗ್ ಇಂದಿನ ಚಲನಚಿತ್ರ ವಾತಾವರಣಕ್ಕೆ ಎಷ್ಟು ಪ್ರಸ್ತುತ?ಹಾಗೆ ನೋಡಿದರೆ ಯಾರೂ ಯಾವ ಕಾಲಕ್ಕೂ ಪ್ರಸ್ತುತವಾಗುವುದಿಲ್ಲ. ಒಟ್ಟು ಚಿತ್ರರಂಗದ ನಡೆಯಲ್ಲಿ ಅವರು ಬಿಟ್ಟು ಹೋದ ಕಾಣಿಕೆ, ಅವರ ಕೊಡುಗೆ ಹೆಚ್ಚು ಕಾಲ ಚಿತ್ರರಂಗದಲ್ಲಿ ಛಾಪನ್ನು ಉಳಿಸಿರುತ್ತದೆ. ಇತ್ತೀಚಿನ ವರ್ಷಗಳಲ್ಲಂತೂ ಅತಿವೇಗದ ಬೆಳವಣಿಗೆಯನ್ನು ಕಾಣುತ್ತಿರುವ ಚಿತ್ರರಂಗದಲ್ಲಿ ನಟ, ನಟಿ, ನಿರ್ದೇಶಕರು ಎಷ್ಟು ಶೀಘ್ರವಾಗಿ ಮೇಲೇರುತ್ತಾರೋ ಅಷ್ಟೇ ವೇಗವಾಗಿ ತೆರೆಮರೆಗೆ ಸರಿಯುತ್ತಿದ್ದಾರೆ.ಇಂತಹ ಸನ್ನಿವೇಶದಲ್ಲಿ ಶಂಕರ್‌ನಾಗ್ ಅವರನ್ನು ಮತ್ತೆ ಮತ್ತೆ ತೆರೆಯ ಮೇಲೆ ತರುವ ವೃಥಾ ಸಾಹಸವನ್ನು ಚಿತ್ರರಂಗದವರು ಮಾಡುತ್ತಿರುವುದು ಆಶ್ಚರ್ಯವೆನಿಸುತ್ತದೆ. ಗಣೇಶ್ ಅಭಿನಯದ `ಆಟೋರಾಜ' ಚಿತ್ರದಲ್ಲಿ ಶಂಕರ್‌ನಾಗ್ ಅವರೇ ಗಣೇಶ್ ಮೈಮೇಲೆ ಆವಾಹನೆಯಾಗಿದ್ದಾರೆ ಎನ್ನುವ ಭಾವನೆ ಮೂಡಿಸುವ ಪ್ರಯತ್ನ ಮಾಡಲಾಗಿದೆ. ಅವರ ನಡಿಗೆಯ ಶೈಲಿ, ಅವರ ಧ್ವನಿಯನ್ನು ಅನುಕರಣೆ ಮಾಡುವ ಮೂಲಕ ನಿರ್ದೇಶಕರು ಯಾವ ರೀತಿಯ ಅರ್ಥವಂತಿಕೆಯನ್ನು ಮಾಡಿಸಲೆತ್ನಿಸುತ್ತಿದ್ದಾರೆ ಎನ್ನುವುದು ಅರ್ಥವಾಗದ ಪ್ರಶ್ನೆಯಾಗಿಯೇ ಉಳಿಯುತ್ತದೆ.ಶಂಕರ್‌ನಾಗ್ ಅವರ ಅಭಿನಯದ `ಆಟೋರಾಜ' ಚಿತ್ರ ಆ ಕಾಲದಲ್ಲಿ ಭರ್ಜರಿ ಯಶಸ್ಸು ಪಡೆದಿದ್ದ ಚಿತ್ರವೇನೂ ಆಗಿರಲಿಲ್ಲ. ಅವರ ಚಿತ್ರಗಳನ್ನು ಆ ದಶಕದಲ್ಲಿ ವೀಕ್ಷಿಸುತ್ತಿದ್ದವರಿಗೆ ಈಗಲೂ ಚಲನಚಿತ್ರಗಳ ಬಗ್ಗೆ ಆಸಕ್ತಿ ಉಳಿದಿದೆ ಎನ್ನುವುದೇ ಅನುಮಾನ. ಅಲ್ಲದೆ, ಶಂಕರ್‌ನಾಗ್ ಅಭಿನಯವನ್ನು ಈಗಲೂ ನೋಡಬೇಕೆಂಬ ಹಂಬಲವಂತೂ ಇರಲು ಸಾಧ್ಯವೇ ಇಲ್ಲ. ಈಗ ಗಣೇಶ್ ಅವರನ್ನು ಆಟೋರಾಜನನ್ನಾಗಿ ನೋಡುತ್ತಿರುವವರು, ಶಂಕರ್‌ನಾಗ್ ಅಭಿನಯದ ಆಟೋರಾಜ ಚಿತ್ರವನ್ನು ನೋಡಿರುವುದು, ಅಥವಾ ಶಂಕರ್‌ನಾಗ್ ಅವರ ಇನ್ಯಾವುದೇ ಚಿತ್ರವನ್ನು ಮೆಚ್ಚಿ ನೋಡಿರಲಾರರು. ಈ ರೀತಿಯ ಸಮ್ಮಿಶ್ರಣದಿಂದ ಚಿತ್ರರಂಗದವರು ಏನನ್ನು ಸಾಧಿಸ ಹೊರಟಿದ್ದಾರೋ ಅದು ಪ್ರಸ್ತುತ ಎನಿಸುವುದಿಲ್ಲ.ಶಂಕರ್‌ನಾಗ್ ಅವರನ್ನು ಹೆಚ್ಚು ಜೀವಂತವಾಗಿಟ್ಟಿರುವುದು ಆಟೋ ಚಾಲಕರು ಎಂದರೆ ಅತಿಶಯೋಕ್ತಿ ಎನಿಸುವುದಿಲ್ಲ. ಶಂಕರ್‌ನಾಗ್ ಆಟೋ ನಿಲ್ದಾಣಗಳು ಎಲ್ಲ ಕಡೆ ಇವೆ. ಬಹುತೇಕ ಆಟೋಗಳ ಹಿಂದೆಯೋ ಮುಂದೆಯೋ ಶಂಕರ್‌ನಾಗ್ ಸ್ಟಿಕರ್ಸ್‌ಗಳಿರುತ್ತವೆ. ಇತ್ತೀಚೆಗೆ ಹೊಸ ಆಟೋವೊಂದನ್ನು ಕೊಳ್ಳುವ ಯುವ ಚಾಲಕನೂ ಶಂಕರ್‌ನಾಗ್ ಸ್ಟಿಕರ್ಸ್‌ಗಳನ್ನು ಯಾಂತ್ರಿಕವಾಗಿ ಆಟೋಗೆ ಅಂಟಿಸಿಕೊಳ್ಳುತ್ತಾನೆ.ಆಟೋದವರ ಪಾಲಿಗೆ ಶಂಕರ್‌ನಾಗ್ ಅವರ ಸ್ಟಿಕರ್‌ಗಳು `ಅದೃಷ್ಟದ ಸಂಕೇತ'ವಾಗಿರುವಂತೆ ಕಾಣುತ್ತದೆ. ಇಂಥದೊಂದು ಮೂಢನಂಬಿಕೆಗೆ, ಉತ್ಸಾಹಿ ನಟ, ನಿರ್ದೇಶಕನೊಬ್ಬನನ್ನು ಒಳಪಡಿಸಿರುವುದು ವಿಷಾದದ ಸಂಗತಿಯೇ ಹೌದು. ಆಟೋಚಾಲಕ ವರ್ಗದಲ್ಲಿ ಮೂಡಿರುವ ಇಂಥ ಭಾವನೆಗಳನ್ನು ಬಳಸಿಕೊಂಡು ಹಣ ಮಾಡುವ ತಂತ್ರ ಹಾಗೂ ನಾಯಕ ನಟನ ಅಭಿಮಾನಿವರ್ಗವನ್ನು ಬೆಳೆಸುವ ತಂತ್ರವನ್ನು ಚಿತ್ರರಂಗ ಪ್ರಯೋಗಿಸುತ್ತಿದೆ. ಹೀಗಾಗಿ ಬಹುತೇಕ ನಾಯಕನಟರು ಆಟೋ ಡ್ರೈವರ್‌ಗಳಾಗಿ ಅಭಿನಯಿಸಿದ್ದಾರೆ.ಅಭಿನಯಿಸಲು ಹಾತೊರೆಯುತ್ತಾರೆ. ಉಪೇಂದ್ರ, ದರ್ಶನ್, ಶಿವರಾಜ್‌ಕುಮಾರ್, ರವಿಚಂದ್ರನ್ ಹೀಗೆ ಎಲ್ಲರೂ ಆಟೋ ಚಾಲಕರಾಗಿ ಅಭಿನಯಿಸಿದ್ದಾರೆ. ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಇದು ಜನಪ್ರಿಯ ಸೂತ್ರ. ಒಂದು ಕಾಲದಲ್ಲಿ ಹೋಟೆಲ್ ಮಾಣಿಗಳು ಚಲನಚಿತ್ರಗಳ ಪರಮ ಭಕ್ತರೆನಿಸಿದ್ದರು. ಆ ಸಮಯದಲ್ಲಿ ಹೋಟೆಲ್ ಮಾಣಿಗಳೇ ಚಿತ್ರಕಥೆಯಲ್ಲಿ ಪ್ರಧಾನವಾಗಿರುತ್ತಿದ್ದರು. ಈಗ ಆಟೋ ಚಾಲಕರು ಚಿತ್ರರಂಗದ ಬೆನ್ನಿಗಿದ್ದಾರೆ.ಆಟೋ ಚಾಲಕರಿಗೆ ಸಿನಿಮಾ ಮಂದಿ ನ್ಯಾಯ ಒದಗಿಸುತ್ತಿದ್ದಾರೆಯೇ ಎಂಬ ಪ್ರಶ್ನೆ ಕೇಳಿದರೆ, ಖಂಡಿತಾ ಇಲ್ಲ ಎನ್ನಬೇಕಾಗುತ್ತದೆ. ದುರಂತದ ವಿಷಯವೆಂದರೆ ಸಿನಿಮಾಗಳಲ್ಲಿ ಘಟಿಸುವ ಅನಾಹುತಗಳು, ಅತ್ಯಾಚಾರಗಳು, ಕೊಲೆ, ಗೂಂಡಾಗಿರಿ ಎಲ್ಲವೂ ಆಟೋದವರಿಂದಲೇ ನಡೆಯುತ್ತವೆ.ನಾಯಕರ ಪಾತ್ರ ವಹಿಸಿರುವ ಒಬ್ಬ ಆಟೋ ಚಾಲಕನ ಪಾತ್ರವನ್ನು ವೈಭವೀಕರಿಸಲು, ಉದಾತ್ತೀಕರಿಸಲು ಬೇರೆ ಆಟೋ ಚಾಲಕರೆಲ್ಲಾ ಗೂಂಡಾಗಳು ಎಂದು ಬಿಂಬಿಸುವ ಕೆಲಸ ಚಲನಚಿತ್ರಗಳಲ್ಲಿ ನಡೆಯುತ್ತಿರುವುದರಿಂದ ಜನಸಾಮಾನ್ಯರಿಗೆ ಆಟೋ ಚಾಲಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲು ಸಾಧ್ಯವಿಲ್ಲ. ಮಣಿಪಾಲದಲ್ಲಿ ವೈದ್ಯಕೀಯ ವಿದ್ಯಾರ್ಥಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ ಆಟೋ ಚಾಲಕರ ಕೃತ್ಯ ಇತ್ತೀಚಿನ ಉದಾಹರಣೆಯಾಗಿ ಜನರ ಕಣ್ಣ ಮುಂದೆ ಇದೆ.ಇಂಥ ಸಮಯದಲ್ಲಿ ಬಿಡುಗಡೆಯಾಗಿರುವ `ಕಡ್ಡಿಪುಡಿ' ಚಿತ್ರದಲ್ಲಿ ಆಟೋ ಚಾಲಕರು ಕಾಲೇಜು ಹುಡುಗಿಯರನ್ನು ಬಲವಂತವಾಗಿ ಆಟೋದಲ್ಲಿ ಎಳೆದೊಯ್ದು, ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿ, ಕೊಲ್ಲುವ ದೃಶ್ಯಗಳನ್ನು `ದಂಡುಪಾಳ್ಯ'ದಷ್ಟೇ ರೋಚಕವಾಗಿ ಚಿತ್ರೀಕರಿಸಲಾಗಿದೆ. ಆಟೋ ಚಾಲಕರು ಯುವತಿಯರನ್ನು ಹೇಗೆ ಅಪಹರಿಸಬಹುದು ಎಂಬ ಟಿಪ್ಸ್‌ಗಳನ್ನು ನೀಡಿರುವುದನ್ನು ಗಮನಿಸಿದರೆ ಸೆನ್ಸಾರ್ ಮಂಡಳಿಯವರು ಸಂಪೂರ್ಣವಾಗಿ ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ಎನ್ನುವುದು ಖಚಿತವಾಗುತ್ತದೆ.`ಆಟೋ ರಾಜ' ಚಿತ್ರ ಆಟೋ ಚಾಲಕರ ಪರವಾಗಿದೆ ಎಂದು ಭಾವಿಸಿದ್ದರೆ ಅದು ತಪ್ಪು ಕಲ್ಪನೆ. ಬೆಂಗಳೂರಿಗೆ ಬರುವ ಒಂಟಿ ಯುವತಿಯರನ್ನು ಅಪಹರಿಸುವುದೇ ಇಲ್ಲಿನ ಆಟೋ ಚಾಲಕರ ಕೆಲಸ ಎಂದು ನಿರ್ದೇಶಕರು ಭಾವಿಸಿದಂತಿದೆ.ಬೆಂಗಳೂರು ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಬಸ್ ಬರುವುದನ್ನೇ, ರೈಲು ಬರುವುದನ್ನೇ ಕಾಯುತ್ತಾ ನಿಂತಿರುವ ಆಟೋ ಚಾಲಕರ ಪೈಕಿ ಕೆಲವು ಗೂಂಡಾ, ಕ್ರಿಮಿನಲ್ ಚಟುವಟಿಕೆಯಿರುವ ಆಟೋ ಚಾಲಕರು ಒಂಟಿ ಯುವತಿಯರು ಬಂದಾಗ ಅಪಹರಿಸಿ ಮುಂಬೈ ವ್ಯಕ್ತಿಗೆ ಮಾರುವ ಜಾಲವನ್ನು ಹೊಂದಿರುವುದು ಬೆಂಗಳೂರು ಆಟೋ ಚಾಲಕರ ಬಗ್ಗೆ ಭಯಾನಕ ಭಾವನೆಯನ್ನು ಮೂಡಿಸುತ್ತದೆ. ನಿರ್ದೇಶಕರು ಒಂದು ಕಡೆ ನಾಯಕನನ್ನು ವೈಭವೀಕರಿಸುತ್ತಾ, ಆತ ಆಟೋ ರಾಜನಾದರೂ ಹೃದಯವಂತ ಎಂಬುದನ್ನು ಪ್ರತಿಪಾದಿಸುತ್ತಾರೆ.ಮತ್ತೊಂದು ಕಡೆ ಆಟೋ ಚಾಲಕರ ಕುಕೃತ್ಯಗಳನ್ನು ಹೇಳುತ್ತಾ, ಅವರು ಎಷ್ಟೊಂದು ಅಪಾಯಕಾರಿ ಎನ್ನುವುದನ್ನು ಹೇಳುತ್ತಾರೆ. ನಾಯಕ ಆಟೋ ದೂರ ಇಟ್ಟು ಇಬ್ಬರು ಯುವತಿಯರ ನಡುವೆ ಸಿಕ್ಕಿಹಾಕಿಕೊಂಡು ಪ್ರೇಮರಾಗ ಹಾಡುತ್ತಾ, ದಾರಿ ತಪ್ಪುವಾಗ ಪ್ರೇಕ್ಷಕರ ಕಣ್ಣಿಗೆ ಅದು ಮಾಮೂಲು ಕತೆ. ಆದರೆ ಈ ಸಿಕ್ಕಲುಗಳ ನಡುವೆ ಮೂಡಿ ಬರುವ ಋಣಾತ್ಮಕ ಸಂದೇಶಗಳು ಆಟೋ ಚಾಲಕರನ್ನು ಖಳರನ್ನಾಗಿ ಮಾಡಿಬಿಡುತ್ತವೆ. ರಜನೀಕಾಂತ್ `ಭಾಷಾ' ಚಿತ್ರದಲ್ಲಿ ಆಟೋ ಚಾಲಕರಾಗಿದ್ದರು. ಚಿತ್ರ ಜನಪ್ರಿಯ.ಆದರೆ ಆಟೋ ಚಾಲಕರೆಲ್ಲಾ ಭೂಗತಲೋಕದಿಂದ ಹೊರಬಂದು ಮುಖವಾಡ ಧರಿಸಿ ಆಟೋ ಚಾಲಕ ವೃತ್ತಿ ಮಾಡುತ್ತಿರುತ್ತಾರೆ ಎನ್ನುವ ಅಂಶವೇ ಭಯಾನಕವಾದದ್ದು. ಹೀಗೆ ಸಿನಿಮಾರಂಗದವರ ಪಾಲಿಗೆ ಆಟೋ ಚಾಲಕರು ಸುಲಭವಾಗಿ ಸಿಗುವ ವಿಲನ್‌ಗಳು. ನಾಯಕ ನಟರ ವರ್ಚಸ್ಸು ಬೆಳೆಸಲು ಆಟೋ ಸಂಗ ಬೇಕು. ಈ ಭರದಲ್ಲಿ ಆಟೋ ಚಾಲಕರ ಬಗ್ಗೆ ಮೂಡುತ್ತಿರುವ `ಕೆಟ್ಟ' ಭಾವನೆಗಳಿಗೆ ಪರೋಕ್ಷವಾಗಿ ಸಿನಿಮಾರಂಗದವರೇ ಕಾರಣಕರ್ತರಾಗಿದ್ದಾರೆ.ಬಹುತೇಕ ನಾಯಕ ನಟರು ಆಟೋ ಡ್ರೈವರ್‌ಗಳಾಗಿ ಅಭಿನಯಿಸಿದ್ದರೂ ಶಂಕರ್‌ನಾಗ್ ಅವರನ್ನೇ ಇಂದಿಗೂ ಆಟೋ ಚಾಲಕರು ಆರಾಧಿಸುತ್ತಿರುವುದಕ್ಕೆ ನಾನಾ ಕಾರಣಗಳಿವೆ. ಇದಕ್ಕೆ `ಆಟೋ ರಾಜ' ಚಿತ್ರ ಮೂಲವಾಯಿತು. ಆದರೆ ಒಬ್ಬ ಕ್ರಿಯಾಶೀಲ ನಟ, ನಿರ್ದೇಶಕನನ್ನು ಅಷ್ಟಕ್ಕೇ ಸೀಮಿತಗೊಳಿಸುವುದೂ ಅಪಚಾರವಾಗುತ್ತದೆ.ಗಿರೀಶ್‌ಕಾರ್ನಾಡರ `ಒಂದಾನೊಂದು ಕಾಲದಲ್ಲಿ' (1978) ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ರಂಗಭೂಮಿ ಹಿನ್ನೆಲೆಯ ಶಂಕರ್‌ನಾಗ್, ಶೀಘ್ರಗತಿಯಲ್ಲಿ ಕನ್ನಡ ಚಿತ್ರರಂಗದ ಆ್ಯಕ್ಷನ್ ಹೀರೊ ಆದರು. ಆ ಸಮಯದಲ್ಲಿ ರಾಜ್‌ಕುಮಾರ್ ಸೂಪರ್‌ಸ್ಟಾರ್ ಎನಿಸಿದ್ದರು. ವಿಷ್ಣುವರ್ಧನ್, ಚಿತ್ರರಂಗ ಪ್ರವೇಶಿಸಿ ಆರು ವರ್ಷಗಳಾಗಿತ್ತು. ವಿಷ್ಣು, ಶ್ರೀನಾಥ್ ಜನಪ್ರಿಯ ನಾಯಕ ನಟರೆನಿಸಿದ್ದರು.ಮಿಂಚಿನ ಓಟ (1980) ಚಿತ್ರವನ್ನು, ಚಿತ್ರರಂಗ ಪ್ರವೇಶಿಸಿದ ಎರಡೇ ವರ್ಷದಲ್ಲಿ ನಿರ್ದೇಶಿಸಿ ತಮ್ಮ ಒಲವನ್ನು ಅಭಿವ್ಯಕ್ತಿಸಿದ್ದರು. `ಆಕ್ಸಿಡೆಂಟ್' ಮೂಲಕ ರಾಜಕೀಯ ಚರ್ಚೆಗೆ ಒಳಪಡುವ, ಪಾನ ನಿಷೇಧ, ಮಾದಕ ದ್ರವ್ಯ ತಡೆ ಕುರಿತ ವಸ್ತುವನ್ನು ತೆರೆಗೆ ತಂದರು. `ಆಕ್ಸಿಡೆಂಟ್' ವಿಭಿನ್ನ ನಿರೂಪಣೆಯ ಮೂಲಕ ವಾಣಿಜ್ಯ ಚಿತ್ರಗಳ ಏಕತಾನತೆಯನ್ನು ಮುರಿಯಿತು.`ಒಂದು ಮುತ್ತಿನ ಕಥೆ' ಚಿತ್ರದಲ್ಲಿ ರಾಜಕುಮಾರ್ ಅವರಿಗೆ ವಿಭಿನ್ನ ಇಮೇಜ್ ಸೃಷ್ಟಿಸಿದರು. ಸಂಕೇತ್ ಧ್ವನಿಮುದ್ರಣ ಸಂಸ್ಥೆ ಸ್ಥಾಪನೆ ಕೂಡ ಅವರ ಉದ್ಯಮಶೀಲತೆಗೆ ಸಾಕ್ಷಿ. ಆಟೋ ರಾಜ, ಮೂಗನ ಸೇಡು, ಗೀತಾ ಮೊದಲಾದ ಚಿತ್ರಗಳ ಯಶಸ್ಸಿನ ನಂತರ ಚಿತ್ರಜೀವನದಲ್ಲಿ ಏರಿಳಿತವಾಯಿತು. 1981ರಲ್ಲಿ ಅಂಬರೀಷ್ `ಅಂತ'ದ ಮೂಲಕ ಆ್ಯಕ್ಷನ್ ಹೀರೊ ಆದ ನಂತರ ಶಂಕರ್‌ನಾಗ್ ಮತ್ತಷ್ಟು ಪ್ರಯೋಗಗಳಿಗೆ ತೊಡಗಿಸಿಕೊಳ್ಳಬೇಕಾಯಿತು.`ಸಾಂಗ್ಲಿಯಾನ' ಬರುವವರೆಗೆ ಶಂಕರ್‌ನಾಗ್ ಸೋಲಿನ ಸುಳಿಯಲ್ಲಿದ್ದರು. ಚಿತ್ರರಂಗದಲ್ಲಿ ನಾಯಕ ನಟರಿಗೆ ಇವೆಲ್ಲಾ ಸಹಜ. ಈ ವಾಸ್ತವ ಸ್ಥಿತಿಯನ್ನು ಮನಗಂಡೇ ಶಂಕರ್‌ನಾಗ್, ಸಂಕೇತ್, ಕಿರುತೆರೆ, ಕಂಟ್ರಿಕ್ಲಬ್, ರಾಜಕೀಯ ಹೀಗೆ ತಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳಲಾರಂಭಿಸಿದ್ದರು. ಇಷ್ಟೆಲ್ಲಾ ಪ್ರತಿಭೆ ಇದ್ದ ನಟನೊಬ್ಬನನ್ನು `ಆಟೋರಾಜ' ಅಷ್ಟಕ್ಕೇ ಸೀಮಿತಗೊಳಿಸಿರುವುದೂ ದುರಂತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.