ಶುಕ್ರವಾರ, ಏಪ್ರಿಲ್ 23, 2021
21 °C

ಶಾಶ್ವತ ಸತ್ಯದ ಹುಡುಕಾಟ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಪ್ರಪಂಚವನ್ನೇ ಗೆಲ್ಲಬೇಕೆಂಬ ಮಹತ್ವಾಕಾಂಕ್ಷೆಯಿಂದ ಅಲೆಗ್ಸಾಂಡರ್ ತನ್ನ ಅಪಾರವಾದ ಸೈನ್ಯವನ್ನು ಕಟ್ಟಿಕೊಂಡು ಹೊರಟ. ದೊಡ್ಡ, ಸಣ್ಣ ದೇಶಗಳು ಇವನ ಶಕ್ತಿಗೆ ಆಹಾರವಾಗಿ ಹೋದವು. ತಾನು ಗೆದ್ದ ದೇಶಗಳ ಸಂಪತ್ತನ್ನು ಸೂರೆಗೊಂಡು ಮದಿಸಿದ ಈ ತರುಣ ಶೂರನಿಗೆ ಅಹಂಕಾರ ಹೆಚ್ಚುತ್ತಿತ್ತು.

ಈ ಬಾರಿ ಭಾರತದ ಮೇಲೆ ದಾಳಿ ಮಾಡಬೇಕೆಂದು ನಿರ್ಧರಿಸಿ ಹೊರಟ. ಹೊರಡುವಾಗ ತನ್ನ ಗುರು ಅರಿಸ್ಟಾಟಲ್‌ನನ್ನು ಭೆಟ್ಟಿಯಾದನಂತೆ. ಅರಿಸ್ಟಾಟಲ್ ಜ್ಞಾನಿ. ಅವನಿಗೆ ಭಾರತದ ಆಧ್ಯಾತ್ಮಿಕ ಶಕ್ತಿಯ ಪರಿಚಯವಿತ್ತು. ಅಲೆಗ್ಸಾಂಡರ್ ತನ್ನ ಗುರುವಿಗೆ ಕೇಳಿದ, ‘ಗುರುಗಳೇ ನಾನು ಭಾರತದಿಂದ ಮರಳಿ ಬರುವಾಗ ನಿಮಗೆ ಏನನ್ನು ತರಲಿ? ಯಾವ ಕಾಣಿಕೆ ನಿಮಗೆ ಪ್ರಿಯವಾದೀತು?’ ಅದಕ್ಕೆ ನಕ್ಕು ಅರಿಸ್ಟಾಟಲ್ ಹೇಳಿದ, ‘ಭಾರತವನ್ನು ಗೆಲ್ಲಬೇಕೆಂಬ ಆಸೆ ನಿನಗೇಕೆ? ಆ ದೇಶವನ್ನು ಗೆಲ್ಲುವುದು ಸುಲಭವಲ್ಲ. ಕೆಲ ರಾಜರನ್ನು ಗೆಲ್ಲಬಹುದು, ಒಂದಿಷ್ಟು ಸಂಪತ್ತನ್ನು ಪಡೆಯಬಹುದು. ಆದರೆ ಅದಾವುದೂ ಭಾರತವಲ್ಲ. ಅದರ ನಿಜವಾದ ಶಕ್ತಿ ಇರುವುದು ಅಧ್ಯಾತ್ಮದಲ್ಲಿ. ನಿನಗೆ ಸಾಧ್ಯವಾದರೆ ಭಾರತದಿಂದ ಒಬ್ಬ ಋಷಿಯನ್ನೋ, ಸಾಧಕನನ್ನೋ ಕರೆದು ತಾ. ಅವನಿಂದ ನಮಗೆಲ್ಲ ಪ್ರಯೋಜನವಿದೆ.’

ಅಲೆಗ್ಸಾಂಡರ್ ತನ್ನ ಯುದ್ಧಯಾತ್ರೆಯನ್ನು ನಡೆಸಿದ. ತನ್ನ ಅನೇಕ ಸಂಗಾತಿಗಳಿಗೆ ಮೈಯೆಲ್ಲ ಕಣ್ಣಾಗಿ ಅಂತಹ ದಾರ್ಶನಿಕನೊಬ್ಬನನ್ನು ಹುಡುಕಲು ಹೇಳಿ ಇಟ್ಟಿದ್ದ. ಒಂದು ದಿನ ಅವನ ಅಮಾತ್ಯರು ಬಂದು ಅಂತಹ ಒಬ್ಬ ವ್ಯಕ್ತಿ ಊರ ಹೊರಗಿನ ಆಶ್ರಮದಲ್ಲಿ ಇರುವುದಾಗಿಯೂ ಅವನನ್ನು ಒಲಿಸಲು ಪ್ರಯತ್ನಿಸುತ್ತಿರುವುದಾಗಿಯೂ ಹೇಳಿದರು. ಆಗ ಅಲೆಗ್ಸಾಂಡರ್, ‘ಆ ಮನುಷ್ಯನಿಗೆ ಏನು ಬೇಕೋ ಅದನ್ನು ಕೊಡಿ. ನನ್ನ ಅಪ್ಪಣೆಯ ಅವಶ್ಯಕತೆ ಇಲ್ಲ. ಅದೆಷ್ಟೇ ಸಂಪತ್ತು ಖರ್ಚಾದರೂ ಚಿಂತೆಯಿಲ್ಲ’ ಎಂದ.

ಹತ್ತು ದಿನಗಳ ಪ್ರಯತ್ನದ ನಂತರ ಮಂತ್ರಿಗಳು ಬಂದು ತಮ್ಮ ಎಲ್ಲ ಪ್ರಯತ್ನಗಳು ವಿಫಲಗೊಂಡವೆಂದೂ ಆ ಸನ್ಯಾಸಿ ಯಾವ ಮಾತಿಗೂ, ಆಮಿಷಕ್ಕೂ ಒಪ್ಪುತ್ತಿಲ್ಲವೆಂದೂ ವರದಿ ಒಪ್ಪಿಸಿದರು. ಅಲೆಗ್ಸಾಂಡರ್‌ನಿಗೆ ಕೋಪ ಬಂತು. ತನ್ನಂತಹ ಚಕ್ರವರ್ತಿಯ ಮಾತನ್ನು ಒಪ್ಪದಿದ್ದ ಈ ಸನ್ಯಾಸಿಯ ಅಹಂಕಾರ ಎಷ್ಟಿರಬೇಕು ಎಂದುಕೊಂಡು. ತಾನೇ ಆಶ್ರಮಕ್ಕೆ ನಡೆದ. ಒಂದು ಆಲದ ಮರದ ಕೆಳಗೆ ಈ ಸನ್ಯಾಸಿ ಧ್ಯಾನದಲ್ಲಿ ಕುಳಿತಿದ್ದ. ಆಗ ತಾನೇ ಸೂರ್ಯೋದಯವಾಗಿತ್ತು. ಆತ ಸೂರ್ಯನಿಗೆ ಮುಖಮಾಡಿ ಕುಳಿತಿದ್ದಾನೆ. ಅವನ ಮುಖದ ಮೇಲೆ ಅಪೂರ್ವವಾದ. ಕಾಂತಿ, ಶಾಂತಿ. ಅಲೆಗ್ಸಾಂಡರ್, ‘ತಾವು ಮಹಾತ್ಮರು. ತಾವು ನನ್ನೊಡನೆ ನಮ್ಮ ದೇಶಕ್ಕೆ ಬರಬೇಕು. ತಮ್ಮ ಚಿಂತನೆಯ ಬೆಳಕನ್ನು ನಮ್ಮ ಜನರಿಗೂ ನೀಡಬೇಕು’ ಎಂದು ಕೇಳಿಕೊಂಡ. ಸನ್ಯಾಸಿ, ‘ತಮ್ಮ ಆಮಂತ್ರಣಕ್ಕೆ ಧನ್ಯವಾದಗಳು. ಆದರೆ ನಾನು ಈ ಪುಣ್ಯಭೂಮಿಯನ್ನು ಬಿಟ್ಟು ಬರಲಾರೆ’ ಎಂದ. ಚಕ್ರವರ್ತಿಗೆ ಇಲ್ಲ ಎಂಬ ಉತ್ತರವನ್ನು ಕೇಳಿ ಅಭ್ಯಾಸವಿಲ್ಲ. ತಾನು ತಂದಿದ್ದ ಮುತ್ತು ರತ್ನಗಳ ರಾಶಿಯನ್ನು ಸನ್ಯಾಸಿಯ ಮುಂದೆ ಹಾಕಿ ಹೇಳಿದ, ‘ಇದೆಲ್ಲ ನಿಮ್ಮದೇ. ಇಷ್ಟೇ ಅಲ್ಲ ತಾವು ಏನು ಅಪೇಕ್ಷೆ ಪಟ್ಟರೂ ಅದು ನಿಮ್ಮದಾಗುತ್ತದೆ.’ ಸನ್ಯಾಸಿಯ ಹಣೆಯ ಮೇಲೆ ಗೆರೆಗಳು ಮೂಡಿದವು. ಕಣ್ಣಂಚಿನಲ್ಲಿ ಕೆಂಪು ಕಾಣಿಸಿತು. ‘ದಯವಿಟ್ಟು ಆಶ್ರಮದಲ್ಲಿ ಈ ಕೊಳಕನ್ನು ಹಾಕಿ ಅಪವಿತ್ರ ಮಾಡಬೇಡಿ. ಇದನ್ನು ತಕ್ಷಣ ತೆಗೆದುಬಿಟ್ಟು ಇಲ್ಲಿಂದ ಹೊರಡಿ’ ಎಂದ ಸನ್ಯಾಸಿ.

ತರುಣ ಚಕ್ರವರ್ತಿಗೂ ಕೋಪ ಉಕ್ಕಿತು, ‘ನೀವು ಯಾರೊಂದಿಗೆ ಮಾತನಾಡುತ್ತಿದ್ದೀರಿ ಎಂಬ ಎಚ್ಚರ ಇದೆಯೇ? ನಿಮ್ಮ ಮುಂದಿರುವವನು ಸಾಮ್ರಾಟ್ ಅಲೆಗ್ಸಾಂಡರ್ ಚಕ್ರವರ್ತಿ. ನಿಮ್ಮ ಉದ್ಧಟತನಕ್ಕೆ ಯಾವ ಶಿಕ್ಷೆ ದೊರೆತೀತು ಎಂಬ ಕಲ್ಪನೆ ಉಂಟೇ?’ ಎಂದು ಗುಡುಗಿದ. ಅದಕ್ಕೆ ಸನ್ಯಾಸಿ, ‘ಅಯ್ಯೋ ಮಗು ಯಾಕೆ ನಮ್ಮನ್ನು ಹೆದರಿಸಲು ನೋಡುತ್ತೀಯಾ? ನೀನು ಹೆಚ್ಚೆಂದರೆ ಏನು ಮಾಡಬಹುದು? ಈ ದೇಹವನ್ನು ನಾಶ ಮಾಡಬಹುದು. ಅದು ಹೇಗಿದ್ದರೂ ನಾಶವಾಗಲೆಂದೇ ಬಂದದ್ದು. ಆದರೆ ಒಳಗಿನ ಆತ್ಮವನ್ನು ನಿನಗೆ ಮುಟ್ಟಲೂ ಸಾಧ್ಯವಿಲ್ಲ. ನಿನ್ನ ಕೆಲಸ ಮುಗಿಸಿ ಹೊರಡು ಆಶ್ರಮದ ಶಾಂತಿಗೆ ಭಂಗ ತರಬೇಡ’ ಎಂದ. ಆಗ ಅಲೆಗ್ಸಾಂಡರ್‌ನಿಗೆ ಅರ್ಥವಾಯಿತು. ತಾನು ಐಹಿಕ ಭೋಗದ ವಸ್ತುಗಳನ್ನು ಗೆಲ್ಲಬಹುದು ಆದರೆ ಆಧ್ಯಾತ್ಮಿಕ ಸತ್ಯವನ್ನು ಅರಿಯುವುದು ಸಾಧ್ಯವಿಲ್ಲ. ಆತ ವಿನೀತನಾಗಿ ಕೇಳಿದ. ‘ನನ್ನೊಂದಿಗೆ ಬರುವುದು ಬೇಡ. ನನ್ನಿಂದ ಯಾವುದಾದರೂ ಸೇವೆಗೆ ಅವಕಾಶವಿದೆಯೋ?’ ಸನ್ಯಾಸಿ ನಕ್ಕು ಹೇಳಿದ, ‘ನನಗೆ ಯಾವ ಸೇವೆಯೂ ಬೇಕಿಲ್ಲ. ಮಾಡುವುದೇ ಆದರೆ ದಯವಿಟ್ಟು ನನ್ನ ಮುಂದಿನಿಂದ ಪಕ್ಕಕ್ಕೆ ಸರಿದುಬಿಡು. ನೀನು ನನ್ನ ಮೇಲೆ ಬೀಳುವ ಸೂರ್ಯಕಿರಣಗಳಿಗೆ ಅಡ್ಡಲಾಗಿ ನಿಂತಿದ್ದೀಯಾ.’ ಅಲೆಗ್ಸಾಂಡರ್ ಸರಿದು ಹೋದ.

ಇದು ನಮ್ಮ ಹಿಂದಿನ ಜನ ಕಂಡರಿಸಿದ ಸತ್ಯ. ದಿನ ನಿತ್ಯದ ಐಹಿಕ ಆವಶ್ಯಕತೆಗಳಿಗೆ ಮಿತಿಯುಂಟು, ಸಾವೂ ಉಂಟು. ಇವುಗಳನ್ನು ದಾಟಿಯೂ ಅನುಭವಿಸಬಹುದಾದ, ಶಾಶ್ವತವಾದ ಆಧ್ಯಾತ್ಮಿಕ ಸತ್ಯದ ಹುಡುಕಾಟ, ಪ್ರಾಪ್ತಿ ನಮ್ಮ ದೇಶದ ಹಿಂದಿನ ಸಾಧಕರ ಗುರಿಯಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.