ಶನಿವಾರ, ಮೇ 15, 2021
24 °C

ಸಮಗ್ರ ದೃಷ್ಟಿ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಭುವನೇಶ್ವರದ ಬಳಿ ಒಂದು ಗುಹೆ ಇದೆ. ಅದಕ್ಕೆ ಆನೆಗುಹೆ ಎನ್ನುತ್ತಾರೆ. ಆ ಗುಹೆಯಲ್ಲಿ ಒಂದು ಶಿಲಾಶಾಸನವಿದೆ. ಅದು ಪ್ರಾಕೃತ ಭಾಷೆಯಲ್ಲಿದೆ. ಅದು ಒಬ್ಬ ರಾಜನ ಬಗ್ಗೆ ತಿಳಿಸುತ್ತದೆ. ಅದರ ಕೊನೆಯ ಸಾಲಿನ ಅನುವಾದ ಹೀಗಿದೆ, ಮಹಾ ಪರಾಕ್ರಮಿಯಾದ ಶ್ರಿಮಂತ ರಾಜ ಖಾರವೇಲ.ಆತ ಸನ್ಯಾಸಿಗಳ ಚಕ್ರವರ್ತಿ, ಅಸಾಮಾನ್ಯ ಸದ್ಗುಣಗಳನ್ನು ಹೊಂದಿದವನು, ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವವನು, ಎಲ್ಲ ದೇವಸ್ಥಾನಗಳನ್ನು ಪುನರ್‌ನಿರ್ಮಾಣ ಮಾಡಿದವನು, ಅಜೇಯವಾದ ಸೈನ್ಯವನ್ನು ಹೊಂದಿದವನು, ಧರ್ಮಚಕ್ರವನ್ನು ರಕ್ಷಿಸಿದವನು, ರಾಜರ್ಷಿ ವಸುವಿನ ವಂಶದಲ್ಲಿ ಹುಟ್ಟಿದವನು .ಹೀಗೆ ಶಿಲಾಶಾಸನ ಹೊಗಳುವ ಚಕ್ರವರ್ತಿ ಖಾರವೇಲ. ಬದುಕಿದ್ದುದು 2300 ವರ್ಷಗಳ ಹಿಂದೆ. ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಮೊಮ್ಮಗ ಅಶೋಕ ಅತ್ಯಂತ ಪ್ರಬಲವಾದ ಮಗಧ ದೇಶದ ದೊರೆ. ಆತ ಪಕ್ಕದ ರಾಜ್ಯ ಕಳಿಂಗದ ಮೇಲೆ ದಾಳಿ ಮಾಡಿದ.ಸ್ವಾತಂತ್ರ್ಯಪ್ರಿಯರಾದ ಕಳಿಂಗ ದೇಶದವರು ಪ್ರಾಣ ಪಣವಿಟ್ಟು ಹೋರಾಡಿದರೂ ಜಯ ದೊರಕಲಿಲ್ಲ. ಮಾರಣ ಹೋಮ ನಡೆಯಿತು, ನಗರ ಸ್ಮಶಾನವಾಯಿತು. ತಾನೇ ನಡೆಸಿದ ಈ ಕಾರ್ಯವನ್ನು ಕಂಡು ಅಶೋಕನ ಮನಃಪರಿವರ್ತನೆಯಾಗಿ, ಬೌದ್ಧನಾಗಿ ಅಹಿಂಸಾ ಪ್ರಿಯನಾದ. ಕಳಿಂಗವನ್ನು ನೋಡಿಕೊಳ್ಳುವುದಕ್ಕೆ ಒಬ್ಬ ಚೇದಿ ಸರ್ದಾರನನ್ನು ನಿಯಮಿಸಿದ.ಅಶೋಕನ ನಂತರ ರಾಜ್ಯ ಅನಾಯಕವಾಯಿತು. ಸಣ್ಣ ಸಣ್ಣ ಸರ್ದಾರರೇ ತಾವೇ ರಾಜರೆಂದು ಘೋಷಿಸಿಕೊಂಡು ಬಿಟ್ಟರು. ಅಂತೆಯೇ ಕಳಿಂಗದಲ್ಲಿ ಚೇದಿ ಮನೆತನವೇ ರಾಜಮನೆತನವಾಯಿತು. ಸರ್ದಾರನ ಮಗನ ಹೆಸರು ಮಹಾಮೇಘವಾಹನ. ಅವನು ಒಳ್ಳೆಯವನೇ. ಆದರೆ ಅವನ ಕಾಲದಲ್ಲಿ ನಿಸರ್ಗದ ವಿಕೋಪ ಹೆಚ್ಚಾಯಿತು.ಕೋಟೆ ಕುಸಿಯಿತು, ಬಿರುಗಾಳಿ, ಮಳೆಯಿಂದಾಗಿ ಪ್ರಜೆಗಳ ಮನೆಗಳು ಬಿದ್ದುಹೋದವು. ನಾಲೆಗಳ ಕಟ್ಟೆ ಒಡೆದವು, ನದಿ, ಕೆರೆಗಳ ನೀರು ಪಟ್ಟಣಗಳಲ್ಲಿ ನುಗ್ಗಿ ಬಂದಿತು. ಎಲ್ಲೆಡೆಗೆ ಅತೃಪ್ತಿ, ಕೊರಗು, ದುಃಖ ಮನೆಮಾಡಿತ್ತು. ಈ ಸಂದರ್ಭದಲ್ಲಿ ಮಹಾಮೇಘವಾಹನಿಗೆ ಒಬ್ಬ ಮಗ ಜನಿಸಿದ. ಜ್ಯೋತಿಷಿಗಳು ಇವನಿಂದ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ನುಡಿದರು. ಅವನಿಗೆ ಖಾರವೇಲ ಎಂದು ಹೆಸರಿಟ್ಟರು. ಖಾರವೇಲ ಎಂದರೆ ಪ್ರಚಂಡಶಕ್ತಿಯ ಬಿರುಗಾಳಿ.ಹುಡುಗ ಬಲಶಾಲಿಯಾಗಿ, ಧೈರ್ಯಶಾಲಿಯಾಗಿ, ಧರ್ಮದ ಆದರ್ಶಗಳನ್ನು ಕಟ್ಟಿಕೊಂಡು ಬೆಳೆದ. ತಂದೆಯ ನಂತರ ರಾಜನಾದ. ಪ್ರಜೆಗಳಿಂದ ಯಾವ ಕರವನ್ನೂ ಪಡೆಯದೇ ರಾಜ ಬೊಕ್ಕಸದ ಹಣದಿಂದ, ತಮ್ಮ ಐಶ್ವರ್ಯದಿಂದ ಕೋಟೆ ಕಟ್ಟಿಸಿದ, ಬಿದ್ದು ಹೋದ ಮನೆಗಳನ್ನು ಕಟ್ಟಿಸಿದ, ನೀರಿನ ಕಾಲುವೆಗಳನ್ನು ಸರಿಮಾಡಿದ, ಶ್ರದ್ಧಾಕೇಂದ್ರಗಳಾದ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಿಸಿದ.

 

ಇವೆಲ್ಲವುಗಳಿಗೂ ಮಿಗಿಲಾಗಿ ತರುಣರನ್ನು ಸೇರಿಸಿ ಕಳಿಂಗ ಅಶಕ್ತವಾದ ದೇಶವಲ್ಲ, ಅದೊಂದು ಪ್ರಬಲ ರಾಷ್ಟ್ರ ಎಂದು ಅವರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿದ. ಪಕ್ಕದಲ್ಲಿ ತಲೆ ಎತ್ತಿ ನಿಂತಿದ್ದ ಸಣ್ಣ ಪುಟ್ಟ ರಾಜರುಗಳನ್ನು ಸೋಲಿಸಿ ರಾಜ್ಯ ವಿಸ್ತರಿಸಿದ. ಸೈನ್ಯದ ಬಲ ಹೆಚ್ಚಿಸಿದ. ಕೆಲವು ಯುದ್ಧಗಳನ್ನು ಗೆದ್ದ ಮೇಲೆ ಸೈನ್ಯದ ಮನೋಬಲ ವೃದ್ಧಿಸಿತು.ಮಗಧರು ತಮ್ಮನ್ನು ಸೋಲಿಸಿದ ಅಪಮಾನವನ್ನು ಖಾರವೇಲ ಮರೆತಿರಲಿಲ್ಲ. ಅದಲ್ಲದೇ ತಮ್ಮ ದೇಶದ ಆಧ್ಯಾತ್ಮಿಕ ಶಕ್ತಿಯ ದ್ಯೋತಕವಾಗಿದ್ದ ಜೈನ ತೀರ್ಥಂಕರ ಶೀತಲನಾಥ ಸ್ವಾಮಿಯ ಸುಂದರ ವಿಗ್ರಹವನ್ನು ಮಗಧರು ತೆಗೆದುಕೊಂಡು ಹೋಗಿದ್ದನ್ನು ಮರಳಿ ತರಲೇಬೇಕೆಂದು ತೀರ್ಮಾನಮಾಡಿ ಮಗಧ ದೇಶದ ಮೇಲೆ ದಾಳಿ ಮಾಡಲು ಯೋಜನೆ ಮಾಡಿದ. ಮಗಧ ರಾಜ ಬ್ರಹಸ್ಪತಿಮಿತ್ರ ಗಾಬರಿಯಾದ.

 

ಇದೇ ಸಮಯದಲ್ಲಿ ಗ್ರೀಕ್ ದೊರೆ ಡೆಮಿಟ್ರಿಯಸ್ ಕೂಡ ದೊಡ್ಡ ಸೈನ್ಯದೊಡನೆ ಮಗಧದ ಮೇಲೆ ಪಶ್ಚಿಮದಿಂದ ದಾಳಿ ಮಾಡಲು ನುಗ್ಗಿ ಬರುತ್ತಿದ್ದ. ಇದು ಖಾರವೇಲನಿಗೆ ಒಳ್ಳೆಯ ಸುದ್ಧಿಯಾಗಬೇಕಿತ್ತು. ಆದರೆ ಆತ ಚಿಂತಿಸಿದ್ದೂ ಬೇರೆಯೇ. ಎಷ್ಟಿದ್ದರೂ ಮಗಧ ನಮ್ಮ ದೇಶದ ಭಾಗ, ಡೆಮಿಟ್ರಿಯಸ್ ಪರ ರಾಷ್ಟ್ರದವನು. ಆತ ರಾಜ್ಯ ವೃದ್ಧಿಗೆ ಬಂದವನಲ್ಲ, ಕೇವಲ ಲೂಟಿ ಮಾಡಲು ಹೊಂಚು ಹಾಕಿದ್ದಾನೆ.ಹೊರಗಿನವರು ಬಂದಾಗ ನಾವು ಒಂದಾಗಿ ಅವನನ್ನು ಎದುರಿಸಬೇಕು. ನಂತರ ನಮ್ಮ ನಮ್ಮಳಗಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಹೀಗೆಂದು ಅಪಾರ ಸೈನ್ಯವನ್ನು ತೆಗೆದುಕೊಂಡು ಗ್ರೀಕ್ ರಾಜನ ವಿರುದ್ದ ಹೊರಟ.

 

ಪರಾಕ್ರಮಶಾಲಿಯಾದ ಖಾರವೇಲ ತನ್ನ ವಿರುದ್ಧ ಬರುತ್ತಿರುವುದನ್ನು ತಿಳಿದು ಡೆಮಿಟ್ರಿಯಸ್‌ಗೆ ಅಶ್ಚರ್ಯವೂ ಆಯಿತು, ಗಾಬರಿಯೂ ಆಯಿತು. ಆತ ಹೆದರಿ ಪಲಾಯನ ಮಾಡಿದ. ನಂತರ ಮಗಧ ರಾಜ ಬ್ರಹಸ್ಪತಿಮಿತ್ರ ಖಾರವೇಲನನ್ನು ಭೆಟ್ಟಿಯಾಗಿ ಕ್ಷಮೆಕೋರಿ, ತನ್ನ ಕೃತಜ್ಞತೆಯನ್ನು ತಿಳಿಸಿ ಸಕಲ ಗೌರವಗಳೊಡನೆ ಶೀತಲನಾಥ ಸ್ವಾಮಿಯ ವಿಗ್ರಹವನ್ನು ಕಳಿಂಗರಾಜ್ಯಕ್ಕೆ ಮರಳಿ ಕೊಟ್ಟ.

 

ಖಾರವೇಲ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಿ ಅತ್ಯಂತ ಜನಪ್ರಿಯ ಚಕ್ರವರ್ತಿಯಾಗಿ ನೆನಪಿನಲ್ಲಿ ಉಳಿದ.ಅವನ ದೃಷ್ಟಿ ನಮಗೆ ಮಾದರಿಯಾಗುತ್ತದೆ. ನಮ್ಮ ನಮ್ಮಲ್ಲೇ ಹೋರಾಡಿ ಶಕ್ತಿ ವ್ಯಯ ಮಾಡುವುದಕ್ಕಿಂತ ಎಲ್ಲರೂ ಸೇರಿ ಹೊರಗಿನವರು ನಮ್ಮನ್ನು ಆಳಾಗಿಸುವುದನ್ನು ತಪ್ಪಿಸಲು ನಮ್ಮ ಹಿಂದಿನ ಹಿರಿಯರು ಪ್ರಯತ್ನಿಸಿದ್ದರೆ ನಾವು ದಾಸ್ಯಕ್ಕೆ ಹೋಗುತ್ತಿರಲಿಲ್ಲ.ಇಂದಿಗೂ ರಾಜ್ಯ-ರಾಜ್ಯಗಳ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ಹೋರಾಡುವುದಕ್ಕಿಂತ ರಾಷ್ಟ್ರ ದೊಡ್ಡದು, ನಾವೆಲ್ಲ ಅದರ ಅಂಗಸಂಸ್ಥೆಗಳು ಎಂದು ಸಹಕಾರದಿಂದ ಬಾಳಿದರೆ ಖಾರವೇಲನ ನೆನಪಿಗೆ ಸರಿಯಾದ ಶ್ರದ್ಧಾಂಜಲಿ ನೀಡಿದಂತಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.