ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ಫೋನ್ ಲೋಕಕ್ಕೆ ಫಿಲಿಪ್ಸ್

Last Updated 16 ಜೂನ್ 2018, 8:57 IST
ಅಕ್ಷರ ಗಾತ್ರ

ಮೊಬೈಲ್ ಫೋನ್ ತಯಾರಿಕಾ ಕ್ಷೇತ್ರದಲ್ಲಿ ಹಿಂದೊಮ್ಮೆ ಫಿಲಿಪ್ಸ್ ಕಂಪೆನಿಯೂ ಇತ್ತು. ಕೆಲವು ವರ್ಷಗಳಿಂದ ಅದು ಈ ಕ್ಷೇತ್ರದಿಂದ ಹಿಂದೆ ಸರಿದಿತ್ತು. 2007ರಲ್ಲಿ ಫಿಲಿಪ್ಸ್ ಕಂಪೆನಿಯ ಮೊಬೈಲ್ ಫೋನ್ ವಿಭಾಗವನ್ನು ಚೈನಾ ದೇಶದ ಸಂಗ್ ಫೈ ಕಂಪೆನಿ ಕೊಂಡುಕೊಂಡಿತ್ತು. ಹಲವು ವರ್ಷಗಳ ನಂತರ ಇದೀಗ ಈ ಕಂಪೆನಿ ಮೊಬೈಲ್ ಫೋನ್ ಕ್ಷೇತ್ರವನ್ನು ಮತ್ತೊಮ್ಮೆ ಪ್ರವೇಶಿಸುತ್ತಿದೆ. ಒಂದು ಸಾಮಾನ್ಯ ಫೋನ್ ಮತ್ತು ಮೂರು ಸ್ಮಾರ್ಟ್‌ಫೋನ್‌ಗಳನ್ನು ಅದು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವುಗಳಲ್ಲಿ ಮಧ್ಯಮ ದರ್ಜೆಯ ಡಬ್ಲ್ಯು 3500 (Philips W3500) ಸ್ಮಾರ್ಟ್‌ಫೋನ್ ನಮ್ಮ ಈ ವಾರದ ಗ್ಯಾಜೆಟ್.   

ಗುಣವೈಶಿಷ್ಟ್ಯಗಳು
1.3 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್, 1 + 4 ಗಿಗಾಬೈಟ್ ಮೆಮೊರಿ, 32 ಗಿಗಾಬೈಟ್ ತನಕ ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕುವ ಸೌಲಭ್ಯ, ಒಂದು ಜಿಎಸ್‌ಎಂ 2ಜಿ ಮತ್ತು ಇನ್ನೊಂದು 3ಜಿ ಸಿಮ್ ಹಾಕಬಹುದು, 5 ಇಂಚು ಗಾತ್ರದ 480 x 854 ಪಿಕ್ಸೆಲ್ ರೆಸೊಲ್ಯೂಶನ್‌ನ ಸ್ಪರ್ಶಸಂವೇದಿ ಪರದೆ, 5 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 2 ಮೆಗಾಪಿಕ್ಸೆಲ್‌ನ ಇನ್ನೊಂದು (ಎದುರುಗಡೆಯ) ಕ್ಯಾಮೆರಾ, ಕ್ಯಾಮೆರಾಗೆ ಫ್ಲಾಶ್, ವಿಡಿಯೊ ಚಿತ್ರೀಕರಣ ಸೌಲಭ್ಯ, ಎಫ್‌ಎಂ ರೇಡಿಯೊ, ಜಿಪಿಎಸ್, ವೈಫೈ, ಬ್ಲೂಟೂತ್, 142.2 X 73.6 X 9.65 ಮಿ.ಮೀ. ಗಾತ್ರ, 170 ಗ್ರಾಂ ತೂಕ, 2200 mAh ಶಕ್ತಿಯ ತೆಗೆಯಬಹುದಾದ ಬ್ಯಾಟರಿ, ಆಂಡ್ರಾಯಿಡ್ 4.2, ಇತ್ಯಾದಿ. ನಿಗದಿತ ಬೆಲೆ ₹14,650, ಮಾರುಕಟ್ಟೆ ಬೆಲೆ ಸುಮಾರು ₹ 13,500.

ರಚನೆ ಮತ್ತು ವಿನ್ಯಾಸದಲ್ಲಿ ವಿಶೇಷವೇನಿಲ್ಲ. ಬಹುತೇಕ ಸ್ಯಾಮ್‌ಸಂಗ್ ಫೋನ್‌ಗಳಂತೆ ಇದರ ದೇಹವೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ನಿಂದ ತಯಾರಾಗಿದೆ. ಹಿಂದುಗಡೆಯ ಕವಚವನ್ನು ತೆಗೆದಾಗ ಇದು ವೇದ್ಯವಾಗುತ್ತದೆ. ಹಲವು ಸಲ ತೆಗೆದು ಹಾಕಿದರೆ ಮುರಿದುಹೋಗುತ್ತದೇನೋ ಎಂಬ ಭಾವನೆ ಬರುತ್ತದೆ. ಸಿಮ್ ‌ಮತ್ತು ಮೆಮೊರಿ ಕಾರ್ಡ್ ಹಾಕಬೇಕಾದರೆ ಈ ಕವಚವನ್ನು ತೆಗೆಯಬೇಕು. ಕವಚವು ಎರಡು ಹಂತಗಳಲ್ಲಿ ಚೌಕಾಕಾರದ ಬದಿಗಳನ್ನು ಒಳಗೊಂಡಿದೆ. ಹಿಂಬದಿಯ ಕವಚ ಸ್ವಲ್ಪ ಉಬ್ಬಿದ ಮಾದರಿಯಲ್ಲಿದೆ. ಒಂದು ಬದಿಯಲ್ಲಿ ವಾಲ್ಯೂಮ್ ಹೆಚ್ಚು ಕಡಿಮೆ ಮಾಡುವ ಬಟನ್, ಇನ್ನೊಂದು ಬದಿಯಲ್ಲಿ ಆನ್/ಆಫ್ ಬಟನ್ ಇದೆ. ಫೋನಿನ ಎದುರುಗಡೆ ಕೆಳಭಾಗದಲ್ಲಿ ಮೂರು ಸಾಫ್ಟ್‌ ಬಟನ್‌ಗಳಿವೆ. ಯುಎಸ್‌ಬಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿಗಳು ಮೇಲ್ಭಾಗದಲ್ಲಿವೆ. ಒಟ್ಟಿನಲ್ಲಿ ಹೇಳುವುದಾದರೆ ಕೈಯಲ್ಲಿ ಹಿಡಿದುಕೊಂಡು ಬಳಸುವ ಅನುಭವ ಚೆನ್ನಾಗಿಯೇ ಇದೆ. ಆದರೆ ಇದರಲ್ಲಿ ವಿಶೇಷವೇನೂ ಇಲ್ಲ.

5 ಮೆಗಾಪಿಕ್ಸೆಲ್ ರೆಸೊಲ್ಯೂಶನ್‌ನ ಕ್ಯಾಮೆರಾ ಇದೆ. ಕ್ಯಾಮೆರಾಗೆ ಫ್ಲಾಶ್ ಕೂಡ ಇದೆ. ಕ್ಯಾಮೆರಾ ಗುಣಮಟ್ಟದಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲ. ತೀರಾ ಕಳಪೆ ಎನ್ನುವಂತೆಯೂ ಇಲ್ಲ. ವಿಡಿಯೊ ಚಿತ್ರೀಕರಣ ಪರವಾಗಿಲ್ಲ. ಕಡಿಮೆ ಬೆಳಕಿನಲ್ಲಿ ಚಿತ್ರೀಕರಣ ಅಷ್ಟಕ್ಕಷ್ಟೆ. ಉತ್ತಮ ಬೆಳಕಿದ್ದಲ್ಲಿ ಚಿತ್ರಗಳು ಚೆನ್ನಾಗಿ ಮೂಡಿಬರುತ್ತವೆ. ಇದರ ಕ್ಯಾಮೆರಾದ್ದು ಸ್ಥಿರ ಫೋಕಸ್. ಆಟೊ ಫೋಕಸ್ ಇಲ್ಲ. ವಿಡಿಯೊ ಗುಣಮಟ್ಟವೂ ಹೇಳಿಕೊಳ್ಳುವಂತೇನೂ ಇಲ್ಲ. ಒಟ್ಟಿನಲ್ಲಿ ನೀವು ಒಂದು ಉತ್ತಮ ಕ್ಯಾಮೆರಾಗಾಗಿ ಸ್ಮಾರ್ಟ್‌ಫೋನ್ ಕೊಳ್ಳುವವರಾದರೆ ಇದು ನಿಮಗಲ್ಲ.

ನಾಲ್ಕು ಹೃದಯಗಳ ಪ್ರೊಸೆಸರ್ ಇರುವ ಕಾರಣ ಇದು ವೇಗವಾಗಿ ಕೆಲಸ ಮಾಡುತ್ತದೆ. ಆಟ ಆಡುವಾಗ ಎಲ್ಲಿಯೂ ಅಡೆತಡೆ ಅನ್ನಿಸಲಿಲ್ಲ. ವಿಡಿಯೊ ವೀಕ್ಷಣೆ ಅನುಭವವೂ ಚೆನ್ನಾಗಿದೆ. ಇದರ ಪರದೆಗೆ ಹೈಡೆಫೆನಿಶನ್ ರೆಸೊಲ್ಯೂಶನ್ ಇಲ್ಲದಿದ್ದರೂ ಇದರಲ್ಲಿ ಹೈಡೆಫೆನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು. ಆ ಅನುಭವ ಚೆನ್ನಾಗಿಯೇ ಇದೆ. 3ಡಿ ಆಟಗಳನ್ನು ಆಡುವ ಅನುಭವ ಚೆನ್ನಾಗಿಯೇ ಇದೆ. ಕಡಿಮೆ ಶಕ್ತಿಯ ಫೋನ್‌ಗಳಲ್ಲಿ ಹಲವು ಆಪ್‌ಗಳನ್ನು ಒಂದರ ನಂತರ ಒಂದರಂತೆ ಬಳಸುತ್ತ ಹೋದಾಗ ಮೆಮೊರಿ ತುಂಬಿ ನಿಧಾನವಾಗಿ ಕೆಲಸ ಮಾಡುತ್ತವೆ. ಈ ಫೋನಿನಲ್ಲಿ ಅಂತಹ ಅನುಭವ ಆಗಲಿಲ್ಲ. ಆದರೆ ಇದರಲ್ಲೇ ಅಡಕವಾಗಿರುವ ಮೆಮೊರಿ ಮಾತ್ರ ತುಂಬ ಕಡಿಮೆಯಾಯಿತು. ಹೆಚ್ಚಿಗೆ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕಿಕೊಳ್ಳುವ ಸವಲತ್ತು ನೀಡಿದ್ದಾರೆಂಬುದೇನೋ ಒಂದು ಸಮಾಧಾನದ ವಿಷಯ.

ಈ ಫೋನಿನ ಆಡಿಯೊ ಚೆನ್ನಾಗಿದೆ. ಸಂಗೀತ ಆಲಿಸುವ ಅನುಭವ ತೃಪ್ತಿದಾಯಕವಾಗಿದೆ. ಈ ಫೋನಿನ ಜೊತೆ ಎಂತಹ ಇಯರ್‌ಫೋನ್ ನೀಡಿದ್ದಾರೆಂಬುದು ಗೊತ್ತಿಲ್ಲ. ನನಗೆ ವಿಮರ್ಶೆಗೆ ಕೇವಲ ಫೋನ್ ಮತ್ತು ಚಾರ್ಜರ್ ಕಳುಹಿಸಿದ್ದರು. ಪೂರ್ತಿ ಪೆಟ್ಟಿಗೆ ಬಂದಿರಲಿಲ್ಲ. ನನ್ನಲ್ಲಿರುವ ಉತ್ತಮ ಗುಣಮಟ್ಟದ ಇಯರ್‌ಫೋನ್ ಜೋಡಿಸಿ ಆಲಿಸಿದಾಗ ಧ್ವನಿ ಚೆನ್ನಾಗಿ ಕೇಳಿಬಂತು. ಸಿನಿಮಾ ನೋಡಲು ಈ ಫೋನ್ ಚೆನ್ನಾಗಿದೆ.

ಆಂಡ್ರಾಯಿಡ್‌ನ ಆವೃತ್ತಿ 4.4, ಅಂದರೆ ಕಿಟ್‌ಕ್ಯಾಟ್ ಮಾರುಕಟ್ಟೆಗೆ ಬಂದು ಹಲವು ತಿಂಗಳುಗಳೇ ಆಗಿವೆ. ಆದರೆ ಈ ಫೋನಿನಲ್ಲಿ ಇರುವುದು ಹಳೆಯ ಜೆಲ್ಲಿಬೀನ್ ಅಂದರೆ ಆವೃತ್ತಿ 4.2. ಹೊಸ ಆವೃತ್ತಿಗೆ ನವೀಕರಣ ಆಗುತ್ತದೆಯೇ ಎಂದು ಪರಿಶೀಲಿಸಿದೆ. ಆಗಲಿಲ್ಲ. ಕನ್ನಡದ ತೋರಿಕೆ (ರೆಂಡರಿಂಗ್) ಸರಿಯಾಗಿದೆ. ಕನ್ನಡದ ಕೀಲಿಮಣೆ (ಎನಿಸಾಫ್ಟ್‌, ಜಸ್ಟ್‌ಕನ್ನಡ, ಕಾನ್‌ನೋಟ್, ಇತ್ಯಾದಿ ಯಾವುದೂ ಆಗಬಹುದು) ಹಾಕಿಕೊಂಡರೆ ಕನ್ನಡದಲ್ಲೇ ಪಠ್ಯ ಊಡಿಕೆ ಮಾಡಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT