ಭಾನುವಾರ, ಆಗಸ್ಟ್ 14, 2022
20 °C

ಸ್ವಾರ್ಥದ ಮಳೆಗೆ ಹಗೆಯ ಬೆಳೆ ಒಡಕಿಗೆ ಎಪ್ಪತ್ತು

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಸ್ವಾರ್ಥದ ಮಳೆಗೆ ಹಗೆಯ ಬೆಳೆ ಒಡಕಿಗೆ ಎಪ್ಪತ್ತು

ಚರ್ಚಿಲ್ ಆಣತಿಯ ಮೇರೆಗೆ ಭಾರತಕ್ಕೆ ಬಂದಿದ್ದ ಸರ್ ಸ್ಟಾಫರ್ಡ್ ಕ್ರಿಪ್ಸ್ ಮುಂದಿಟ್ಟ ಪ್ರಸ್ತಾಪಕ್ಕೆ ಗಾಂಧೀಜಿ ತೀಕ್ಷವಾಗಿ ಪ್ರತಿಕ್ರಿಯಿಸಿದ್ದರು. ‘It is a postdated check on a fast crashing bank. ಇಂತಹ ಪ್ರಸ್ತಾಪ ಹೊತ್ತು ನೀವು ಬರುವ ಅಗತ್ಯವಿರಲಿಲ್ಲ. ಲಭ್ಯವಿರುವ ಮೊದಲ ವಿಮಾನದಲ್ಲಿ ನಿಮ್ಮ ದೇಶಕ್ಕೆ ಪ್ರಯಾಣ ಬೆಳೆಸಿ’. ಗಾಂಧೀಜಿ ಕಟುವಾಗಿ ಮಾತನಾಡಲು ಕಾರಣವಿತ್ತು. ಭಾರತವನ್ನು ಮೂರು ತುಂಡು ಮಾಡುವ ಯೋಜನೆಯೊಂದಿಗೆ ಕ್ರಿಪ್ಸ್ ಭಾರತಕ್ಕೆ ಬಂದಿದ್ದರು. ಆ ಹೊತ್ತಿಗಾಗಲೇ ಭಾರತವನ್ನು ಇಡಿಯಾಗಿ ಆಳುವ ಶಕ್ತಿಯನ್ನು ಬ್ರಿಟನ್ ಕಳೆದುಕೊಂಡಿತ್ತು. ಕಾರಣ ಎರಡನೇ ವಿಶ್ವಯುದ್ಧ. 1942ರ ಹೊತ್ತಿಗೆ ಡೆನ್ಮಾರ್ಕ್, ಹಾಲೆಂಡ್, ಬೆಲ್ಜಿಯಂ ಮತ್ತು ಫ್ರಾನ್ಸ್, ಜರ್ಮನಿ ಸೇನೆಯ ಮುಂದೆ ಮಂಡಿಯೂರಿದ್ದವು. ಯುದ್ಧ ನಿರ್ಣಾಯಕ ಹಂತಕ್ಕೆ ತಲುಪಿತ್ತು. ತನ್ನ ರಾಷ್ಟ್ರವನ್ನು ಸಂಭಾಳಿಸುವುದರಲ್ಲೇ ಬ್ರಿಟನ್ ಹೆಣಗುತ್ತಿತ್ತು. ಇತ್ತ ಜಪಾನ್ ಯುದ್ಧರಂಗಕ್ಕೆ ಧುಮುಕಿ ಸಿಂಗಪುರ ವಶಮಾಡಿಕೊಂಡ ಮೇಲೆ, ಅಮೆರಿಕ ಅಧ್ಯಕ್ಷ ರೂಸ್ವೆಲ್ಟ್ ಮತ್ತು ಚೀನಾದ ಚಿಯಾಂಗ್ ಕೈಶೇಕ್ ಭಾರತದ ಕುರಿತು ಸೂಕ್ತ ನಿರ್ಧಾರ ತಳೆಯಲು ಚರ್ಚಿಲ್ ಮೇಲೆ ಒತ್ತಡ ತಂದರು. ಚರ್ಚಿಲ್ ಒಬ್ಬರ ನಂತರ ಮತ್ತೊಬ್ಬರನ್ನು ಮಾತುಕತೆ ಕುದುರಿಸಲು ಭಾರತಕ್ಕೆ ಕಳುಹಿಸಿದರು.

ಆದರೆ ಭಾರತದಲ್ಲಿ ಕೋಮು ದಳ್ಳುರಿ ಬುಗಿಲೆದ್ದಿತ್ತು. ಶಿಮ್ಲಾ ನಿಯೋಗ ಹೊರಡಿಸಿದ ಪ್ರತ್ಯೇಕತೆಯ ಕೂಗು, ಬೀದಿ ಮಾರಿಯಾಗಿ ಬದಲಾಗಿತ್ತು. ಲಾಹೋರ್ ಅಧಿವೇಶನದಲ್ಲಿ ಜಿನ್ನಾ ‘ಮುಸಲ್ಮಾನರು ಕೇವಲ ಒಂದು ಸಮುದಾಯವಲ್ಲ, ಒಂದು ರಾಷ್ಟ್ರ. ಹಿಂದೂ ಮತ್ತು ಮುಸಲ್ಮಾನರು ಏಕರಾಷ್ಟ್ರವಾಗಿ ಬದುಕಲು ಸಾಧ್ಯವೇ ಇಲ್ಲ. ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ತತ್ವ, ಸಾಮಾಜಿಕ ಕಟ್ಟುಪಾಡು, ಸಂಸ್ಕೃತಿ, ಸಭ್ಯತೆ, ಸಾಹಿತ್ಯ, ಸ್ಫೂರ್ತಿಗಳು ಭಿನ್ನ. ಧರ್ಮಗ್ರಂಥಗಳು, ಆದರ್ಶ ಪುರುಷರು ಬೇರೆಬೇರೆ. ಒಂದು ಸಮುದಾಯದ ನಾಯಕ ಮತ್ತೊಂದು ಸಮುದಾಯದ ದೃಷ್ಟಿಯಲ್ಲಿ ಖಳನಾಯಕ. ಅವರ ವಿಜಯ, ನಮ್ಮ ಸೋಲು. ನಮ್ಮ ಗೆಲುವು ಅವರ ದೃಷ್ಟಿಯಲ್ಲಿ ಆಕ್ರಮಣ. ಹೀಗಿದ್ದಾಗ ಏಕ ರಾಷ್ಟ್ರ ಪ್ರತಿಪಾದನೆ ಅವಾಸ್ತವಿಕ’ ಎಂದು ನುಡಿದಿದ್ದರು. ದ್ವಿರಾಷ್ಟ್ರ ಸಿದ್ಧಾಂತದ ಪರ ಮತ್ತು ವಿರೋಧವಾಗಿ ಬೌದ್ಧಿಕ ವಲಯದಲ್ಲಿ ಚರ್ಚೆ ಆರಂಭವಾಯಿತು. ಈ ಬಗ್ಗೆ ವಿಸ್ತೃತವಾಗಿ ಡಾ.ರಾಜೇಂದ್ರ ಪ್ರಸಾದ್ ‘ಇಂಡಿಯಾ ಡಿವೈಡೆಡ್’ ಕೃತಿಯಲ್ಲಿ ಉಲ್ಲೇಖಿಸುತ್ತಾರೆ.

ಡಾ. ಬೇನಿ ಪ್ರಸಾದ್, ‘ಜಗತ್ತಿನ ಯಾವುದೇ ದೇಶಕ್ಕೂ ಇಂತಹ ಸ್ಪಷ್ಟ ಭೌಗೋಳಿಕ ಗುರುತುಗಳಿಲ್ಲ. ಅತ್ತ ಸುಲೇಮಾನ್ ಪರ್ವತ ಶ್ರೇಣಿಯಿಂದ ಇತ್ತ ಅಸ್ಸಾಂ ಗುಡ್ಡಗಳವರೆಗೆ, ಉತ್ತರದ ಹಿಮಾಲಯದಿಂದ ದಕ್ಷಿಣದ ಸಮುದ್ರದವರೆಗಿನ ಈ ಭೂ ಪ್ರದೇಶ ಒಂದು ರಾಷ್ಟ್ರ’ ಎಂದಿದ್ದರು. ಅದಕ್ಕೆ ಪ್ರತಿಯಾಗಿ ಲೇಖಕ ಎಫ್.ಕೆ. ಖಾನ್ ದುರಾನಿ, ‘ಮೀನಿಂಗ್ ಆಫ್ ಪಾಕಿಸ್ತಾನ್’ ಕೃತಿಯಲ್ಲಿ ‘ಬೇನಿ ಪ್ರಸಾದರ ವಾದ ಒಪ್ಪುತ್ತೇನೆ. ಆದರೆ ಒಂದು ರಾಷ್ಟ್ರ ಎನ್ನಲು ಭೌಗೋಳಿಕ ಅಂಶಗಳನ್ನಷ್ಟೇ ತೆಗೆದುಕೊಳ್ಳಲಾಗುವುದಿಲ್ಲ. ಅಲ್ಲಿನ ಜನರು ಏಕ ಭಾವನೆ ಹೊಂದಿದ್ದಾರೆಯೇ ಎನ್ನುವುದು ಮುಖ್ಯ’ ಎನ್ನುತ್ತಾ, ಸಿಡ್ವಿಕ್ ಅವರನ್ನು ಉಲ್ಲೇಖಿಸಿ ‘What is really essential to the modern concept of nation is merely consciousness of belonging to one another, of being members of one body. ಕೇವಲ ಒಂದು ಸರ್ಕಾರ ಅಥವಾ ಆಡಳಿತದ ಅಧೀನದಲ್ಲಿ ಬಾಳುವ ಜನಸಮೂಹ ರಾಷ್ಟ್ರವಾಗುವುದಿಲ್ಲ. ಒಂದೊಮ್ಮೆ ಪರಕೀಯ ಆಕ್ರಮಣ ನಡೆದಾಗಲೂ, ಸರ್ಕಾರ ಪತನಗೊಂಡಾಗಲೂ, ‘ನಾವೆಲ್ಲ ಒಂದು’ ಎಂಬ ಭಾವ ಇದ್ದಾಗಲಷ್ಟೇ ಆ ಜನಸಮೂಹ ಏಕದನಿಯಲ್ಲಿ ಪ್ರತಿಭಟಿಸುತ್ತದೆ. ಹಾಗಾಗಿ ರಾಷ್ಟ್ರೀಯತೆ ಎನ್ನುವುದು ಒಂದು ಮನಸ್ಥಿತಿ. ಈ ಮನಸ್ಥಿತಿ ಭಾರತದ ಹಿಂದೂ ಮುತ್ತು ಮುಸ್ಲಿಮರ ನಡುವೆ ಸಾಧ್ಯವೇ ಇಲ್ಲ’ ಎಂದಿದ್ದರು.

ಈ ಎಲ್ಲಾ ಚರ್ಚೆ, ವಾಕ್ಸಮರ, ಬೀದಿ ಘರ್ಷಣೆಗಳ ನಡುವೆ ಪ್ರತ್ಯೇಕ ವಾದ ಬಲಗೊಂಡಿದ್ದು ಹೇಗೆ ಎಂಬುದನ್ನು ಅರಿಯಲು ಜಿನ್ನಾಭಾಯಿ, ಕ್ವೈದ್-ಇ-ಅಸಮ್ ಆಗಿ ಬದಲಾದ ಪ್ರಕ್ರಿಯೆಯನ್ನು ನೋಡಬೇಕು. ಬ್ಯಾರಿಸ್ಟರ್ ಆಗಿ ಬಾಂಬೆಗೆ ಬಂದಾಗ ಜಿನ್ನಾರನ್ನು ಬರಸೆಳೆದುಕೊಂಡವರು, ಬಾಂಬೆ ಉಚ್ಚನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದ, ನಂತರ ಅಂಜುಮಾನ್-ಇ-ಇಸ್ಲಾಮ್ ಸಂಘಟನೆಯ ನಾಯಕರಾದ ಬದ್ರುದ್ದೀನ್ ತ್ಯಾಬ್ಜಿ. ಬಳಿಕ ದಾದಾಭಾಯಿ ನವರೋಜಿ ಅವರ ಕಾರ್ಯದರ್ಶಿಯಾಗಿ ಜಿನ್ನಾ ಕಾಂಗ್ರೆಸ್ ಅಂಗಳಕ್ಕೆ ಬಂದರು. 1906ರಲ್ಲಿ ಮುಸ್ಲಿಮರ ಶಿಮ್ಲಾ ನಿಯೋಗ ವೈಸರಾಯ್ ಅವರನ್ನು ಭೇಟಿ ಮಾಡಿದಾಗ ಅದನ್ನು ಜಿನ್ನಾ ವಿರೋಧಿಸಿದ್ದರು. ಮುಸಲ್ಮಾನರಿಗೆ ಪ್ರತ್ಯೇಕ ಚುನಾವಣೆ ಬೇಕೆಂಬ ಆಗ್ರಹಕ್ಕೆ ಜಿನ್ನಾ ಬೆಂಬಲವಿರಲಿಲ್ಲ.

ಇತ್ತ ಬಾಂಬೆ ಕಾಂಗ್ರೆಸ್ಸಿನಲ್ಲಿ ತಿಲಕರ ಪ್ರಭಾವ ತಗ್ಗಿಸಲು ಗೋಖಲೆ ಪ್ರಯತ್ನಿಸುತ್ತಿದ್ದರು ಮತ್ತು ಜಿನ್ನಾರನ್ನು ಬಳಸಿಕೊಂಡರು. 1904ರಲ್ಲಿ ಬಾಂಬೆ ಕಾಂಗ್ರೆಸ್, ದ್ವಿಸದಸ್ಯ ನಿಯೋಗವನ್ನು ಇಂಗ್ಲೆಂಡಿಗೆ ಕಳುಹಿಸಿ ಸ್ವರಾಜ್ಯ ಕುರಿತು ರಾಜಕೀಯ ಒತ್ತಡ ಹೇರಲು ಪ್ರಯತ್ನಿಸಿತು. ಆಗ ಪ್ರತಿನಿಧಿಗಳಾಗಿ ಆಯ್ಕೆಯಾದವರು ಗೋಖಲೆ ಮತ್ತು ಜಿನ್ನಾ. ತಿಲಕರು ಜಿನ್ನಾ ಹೆಸರನ್ನು ವಿರೋಧಿಸಿದರು. ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ಎರಡು ಗುಂಪಾಗಿ ಒಡೆಯಿತು. ಆದರೆ ಜಿನ್ನಾ ತಿಲಕರೊಂದಿಗಿನ ವೈಮನಸ್ಯವನ್ನು ಬೆಳೆಸಲಿಲ್ಲ. 1908ರಲ್ಲಿ ರಾಜದ್ರೋಹದ ಆರೋಪದಲ್ಲಿ ತಿಲಕರನ್ನು ಸರ್ಕಾರ ಬಂಧಿಸಿ ಜೈಲಿಗಟ್ಟಿತು. ಆಗ ತಿಲಕರ ಪರವಾಗಿ ಜಿನ್ನಾ ಜಾಮೀನು ಅರ್ಜಿ ಹಾಕಿದರು. ಆದರೆ ನ್ಯಾಯಾಧೀಶ ಡಿ.ಡಿ. ದಾವುರ್, ವಿಚಾರಣೆಯನ್ನು ಮುಂದಕ್ಕೆ ಹಾಕುತ್ತಲೇ ಬಂದರು. ಕೊನೆಗೆ ವಿಚಾರಣೆ ನಡೆದಾಗ ಕಾನೂನು ಅಭ್ಯಾಸ ಮಾಡಿದ್ದ ತಿಲಕರೇ ತಮ್ಮ ಪರ ವಾದ ಮಂಡಿಸಿದರು. ತಿಲಕರ ವಾದಕ್ಕೆ ಕಿವಿಗೊಡದ ಜಸ್ಟಿಸ್ ದಾವುರ್, ಆರು ವರ್ಷಗಳ ಕಠಿಣ ಸಜೆಯನ್ನು ತಿಲಕರಿಗೆ ನೀಡಿದರು. ಆ ತೀರ್ಪಿಗೆ ಬಳುವಳಿಯಾಗಿ ‘ನೈಟ್ ಹುಡ್’ ಗೌರವ ಜಸ್ಟಿಸ್ ದಾವುರ್ ಪಾಲಾಯಿತು!

1913ರ ಮಾರ್ಚ್ 11ರಂದು ಪಬ್ಲಿಕ್ ಸರ್ವಿಸ್ ಕಮಿಷನ್ ಎದುರು ಹಾಜರಾಗಿದ್ದ ಜಿನ್ನಾ, ಲಾರ್ಡ್ ಇಸ್ಲಿಂಗ್ಟನ್ ಅವರಿಗೆ ‘ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಜಿಲ್ಲೆಯೊಂದು ಹಿಂದೂ ಅಧಿಕಾರಿಯ ಪ್ರಭಾರದಲ್ಲಿದ್ದರೆ ಮುಸಲ್ಮಾನರಿಗೆ ಅನ್ಯಾಯವಾಗುತ್ತದೆ ಎಂದು ನನಗೆ ಅನಿಸುವುದಿಲ್ಲ’ ಎಂದಿದ್ದರು. ಜಿನ್ನಾರ ಇಂತಹ ನಿಲುವುಗಳೇ ಅವರನ್ನು ಕಾಂಗ್ರೆಸ್ ಸದಸ್ಯರನ್ನಾಗಿಸಿತ್ತು ಮತ್ತು ಮುಸ್ಲಿಂ ಲೀಗ್ ನಿಂದ ದೂರ ನಿಲ್ಲುವಂತೆ ಮಾಡಿತ್ತು. ಆದರೆ, ರಾಷ್ಟ್ರೀಯತೆ ಎನ್ನುವುದು ಸಂಖ್ಯೆಯಿಂದ ಅಳೆಯುವಂತಹದ್ದಲ್ಲ ಬದಲಾಗಿ ಅದೊಂದು ಮನಸ್ಥಿತಿ, ರಾಷ್ಟ್ರ ಹಿತ ಮತ್ತು ಮೌಲ್ಯಗಳ ಬಗೆಗಿನ ಬದ್ಧತೆ ಎಂಬುದನ್ನು ಕಾಂಗ್ರೆಸ್ ಮರೆಯಿತು. ತಾನು ಇಡೀ ದೇಶವನ್ನು ಪ್ರತಿನಿಧಿಸುವ ಸಂಸ್ಥೆ ಎಂದು ತೋರಿಸಿಕೊಳ್ಳಲು, ಪ್ರತ್ಯೇಕತೆಯ ಕೂಗು ಎಬ್ಬಿಸಿದ್ದ ಮುಸ್ಲಿಂ ಸಮುದಾಯದ ಮನಗೆಲ್ಲಲು ಓಲೈಕೆ ನೀತಿ ಅಳವಡಿಸಿಕೊಂಡಿತು. ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಳ್ಳುವವರಿಗೆ ವಿಧಿಸುತ್ತಿದ್ದ 10 ರೂಪಾಯಿ ಶುಲ್ಕದಿಂದ ಮುಸ್ಲಿಂ ಪ್ರತಿನಿಧಿಗಳಿಗೆ ವಿನಾಯಿತಿ ದೊರೆಯಿತು. ನಿರ್ಣಯಗಳನ್ನು ಉರ್ದುವಿನಲ್ಲಿ ಮತ್ತೊಮ್ಮೆ ಘೋಷಿಸುವ ನೀತಿ ಅಳವಡಿಸಿಕೊಂಡಿತು.

ಕಾಂಗ್ರೆಸ್ ಮತ್ತು ಲೀಗ್ ಜಂಟಿ ಅಧಿವೇಶನ 1916ರಲ್ಲಿ ಲಖನೌದಲ್ಲಿ ನಡೆಯಿತು. ಕಾಂಗ್ರೆಸ್ಸಿನ ದಿಗ್ಗಜ ನಾಯಕರಾದ ತಿಲಕ್, ಸುರೇಂದ್ರನಾಥ ಬ್ಯಾನರ್ಜಿ, ಆನಿ ಬೆಸೆಂಟ್ ಮುಂತಾದವರು ಪಾಲ್ಗೊಂಡಿದ್ದ ಸಭೆ ಅದು. ಆ ಸಭೆಯಲ್ಲಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಚರ್ಚೆಗೆ ತೆಗೆದುಕೊಳ್ಳುವ ಮೂಲಕ ಬೇಡಿಕೆಗೆ ಅಧಿಕೃತ ಮುದ್ರೆ ಒತ್ತಲಾಯಿತು. ಅಲ್ಲಿಂದ ಕಾಂಗ್ರೆಸ್ ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಯಾಗಿ, ಲೀಗ್ ಮುಸ್ಲಿಮರ ಪ್ರಾತಿನಿಧಿಕ ಸಂಸ್ಥೆಯಾಗಿ ಬಿಂಬಿತವಾಯಿತು. ಅದುವರೆಗೂ ಕಾಂಗ್ರೆಸ್ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಜಿನ್ನಾ. ಮುಸ್ಲಿಂ ಲೀಗ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆರಂಭಿಸಿದರು.

ಮುಸ್ಲಿಮರ ಹಿತರಕ್ಷಣೆಗೆಂದು ಲೀಗ್ ಆರಂಭವಾದ ಬೆನ್ನ ಹಿಂದೆಯೇ, 1907ರಲ್ಲಿ ಪಂಜಾಬಿನಲ್ಲಿ ಹಿಂದೂ ಸಭಾ ಆರಂಭವಾಗಿತ್ತು. ನಂತರ ಬಂಗಾಲದಿಂದ ಮದ್ರಾಸ್‌ವರೆಗೂ ವಿಸ್ತರಿಸಿತು. ಮುಸ್ಲಿಂ ಪ್ರತ್ಯೇಕತಾವಾದ ಬಲಗೊಳ್ಳುತ್ತ, ಕೋಮು ಘರ್ಷಣೆ ಮುಂದುವರೆದಂತೆ ಸ್ವಾಮಿ ಶ್ರದ್ಧಾನಂದ ಮತ್ತು ಮಾಲವೀಯ, ಹಿಂದೂ ಸಭಾವನ್ನು ಬಲಗೊಳಿಸಲು ಮುಂದಾದರು. 1923ರಲ್ಲಿ ಅಖಿಲ ಭಾರತ ಹಿಂದೂ ಸಮಾವೇಶ ನಡೆಯಿತು. ಮೂರು ನಿರ್ಣಯಗಳನ್ನು ಹಿಂದೂ ಸಭಾ ಕೈಗೊಂಡಿತು. ಹಿಂದೂ ಸಂಘಟನೆ, ಹಿಂದೂ ಸರ್ಕಾರ ಸ್ಥಾಪನೆಗೆ ರಾಜಕೀಯ ಪ್ರಯತ್ನ, ಮತಾಂತರವಾದವರನ್ನು ವಾಪಸು ಮಾತೃಧರ್ಮಕ್ಕೆ ಕರೆತರುವ ‘ಶುದ್ಧಿ’ ಕಾರ್ಯಕ್ರಮ.

ಖಿಲಾಫತ್ ಚಳವಳಿಯ ಅವಧಿಯಲ್ಲಿ ಮುಸ್ಲಿಮರ ವಿಶ್ವಾಸಗಳಿಸಿದ್ದ ಸ್ವಾಮಿ ಶ್ರದ್ಧಾನಂದ, ದೆಹಲಿಯ ಜಾಮಾ ಮಸೀದಿಯ ವೇದಿಕೆಯಲ್ಲಿ ನಿಂತು ಭಾಷಣ ಮಾಡಿ ಬಂದಿದ್ದರು. ಆದರೆ ನಂತರ ಅವರು ಕೈಗೊಂಡ ‘ಶುದ್ಧಿ’ ಕಾರ್ಯಕ್ರಮದಿಂದ ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರು. 1923ರ ಪ್ರತಮಾರ್ಧದಲ್ಲಿ 18 ಸಾವಿರ ಮುಸ್ಲಿಮರನ್ನು ಹಿಂದೂ ಧರ್ಮದ ಒಳಗೆ ಕರೆತರಲಾಗಿತ್ತು. ಈ ಸಿಟ್ಟು ಹಗೆಯಾಗಿ ಹತ್ಯೆಗೆ ಕಾರಣವಾಯಿತು. 1926ರಲ್ಲಿ ಶ್ರದ್ಧಾನಂದರ ದೆಹಲಿ ನಿವಾಸಕ್ಕೆ ಸಂದರ್ಶನಕ್ಕೆಂದು ಬಂದ ಅಬ್ದುಲ್ ರಶೀದ್, ಶ್ರದ್ಧಾನಂದರನ್ನು ಗುಂಡಿಟ್ಟು ಕೊಂದ. ಅಬ್ದುಲ್ ರಶೀದ್‌ನನ್ನು ಬಂಧಿಸಿ, ಗಲ್ಲು ಶಿಕ್ಷೆ ವಿಧಿಸಿದಾಗ, ಆತನ ಶವಯಾತ್ರೆಯಲ್ಲಿ 50 ಸಾವಿರ ಮುಸ್ಲಿಮರು ಪಾಲ್ಗೊಂಡಿದ್ದರು!

ಇತ್ತ ಅದಾಗಲೇ ಮುಸ್ಲಿಂ ಲೀಗ್ ಜೊತೆ ಗುರುತಿಸಿಕೊಳ್ಳಲು ಆರಂಭಿಸಿದ್ದ ಜಿನ್ನಾ, ತಮ್ಮದೇ ಹಿಂಬಾಲಕರನ್ನು ಹೊಂದಿದ್ದರು. ಹಾಗಾಗಿ ಪ್ರತ್ಯೇಕತಾವಾದಿಗಳ ಗುಂಪು, ರಾಷ್ಟ್ರೀಯವಾದಿಗಳ ಗುಂಪು ಎಂದು ಲೀಗ್ ಒಡೆಯಿತು. ಆದರೆ ಪ್ರತ್ಯೇಕತಾವಾದಕ್ಕೆ ಹೆಚ್ಚಿನ ಬೆಂಬಲ ಇತ್ತು. ಜಿನ್ನಾ ಕೆಲವು ದಿನ ಗೊಂದಲದಲ್ಲೇ ಇದ್ದರು. ಗೊಂದಲ ನಿವಾರಣೆಗೆ ಇಂಗ್ಲೆಂಡಿಗೆ ತೆರಳಿ ಅಜ್ಞಾತರಾದರು. 1934ರ ಏಪ್ರಿಲ್‌ನಲ್ಲಿ ಭಾರತಕ್ಕೆ ಮರಳಿದ ಜಿನ್ನಾಗೆ ಮುಂದಿನ ಹಾದಿಯ ಬಗ್ಗೆ ಸ್ಪಷ್ಟತೆ ಇತ್ತು. ಪ್ರತ್ಯೇಕತಾವಾದವನ್ನು ಬೆಂಬಲಿಸಲು ನಿಂತರು. ಮತೀಯ ಆಚರಣೆಗಳ ಬಗ್ಗೆ ಮೊದಲು ನಿರಾಸಕ್ತಿ ಹೊಂದಿದ್ದ ಜಿನ್ನಾ, ಮಸೀದಿಯಲ್ಲಿ ಪ್ರಾರ್ಥಿಸುವುದು, ಈದ್‌ನಂತಹ ಸಾಮೂಹಿಕ ಆಚರಣೆಗಳಲ್ಲಿ ಭಾಗಿಯಾಗುವುದು ಸಾಮಾನ್ಯವಾಯಿತು. ಈ ಮೊದಲು ಕೇಂದ್ರ ಜನಪ್ರತಿನಿಧಿ ಸಭೆಯಲ್ಲಿ ‘I am a Nationalist first, nationalist second and nationalist last' ಎಂದು ಉದ್ಘೋಷ ಮಾಡಿದ್ದ ಜಿನ್ನಾ, 1934ರ ಹೊತ್ತಿಗೆ ‘ಶತಮಾನಗಳ ಹಿಂದೆ ಹಿಂದೂ ಒಬ್ಬನನ್ನು ಮುಸಲ್ಮಾನನ್ನಾಗಿ ಮತಾಂತರಿಸಿದ ದಿನವೇ ಪಾಕಿಸ್ತಾನ ಉದಯವಾಯಿತು’ ಎನ್ನುವಷ್ಟು ಬದಲಾಗಿದ್ದರು. ಲೀಗ್ ಬೆನ್ನೆಲುಬಾದರು.

ಜೊತೆಯಲ್ಲೇ ಹಿಂದೂ– ಮುಸ್ಲಿಂ ಸಮುದಾಯಗಳ ನಡುವೆ ಒಡಕು ಹಿರಿದಾಗುತ್ತಾ ಸಾಗಿತು. ವಂದೇ ಮಾತರಂ ಬಗ್ಗೆ ಅಪಸ್ವರ ಮೊಳಗಿತು. ರಘುಪತಿ ರಾಘವ ರಾಜಾರಾಮ್ ಪಾರ್ಥನೆಗೆ ಈಶ್ವರ ಅಲ್ಲಾ ತೇರೇನಾಮ್ ಸೇರಿಸಿದರೂ ಪ್ರಯೋಜನವಾಗಲಿಲ್ಲ. ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ರೂಪಿಸಲಾಗಿದ್ದ ‘ವಿದ್ಯಾಮಂದಿರ ಯೋಜನೆ’ಯನ್ನು ಆ ಹೆಸರಿನ ಕಾರಣಕ್ಕೆ ಲೀಗ್ ವಿರೋಧಿಸಿತು. ಭಾಷೆ, ಭಾವನೆಗಳು ಒಡೆದವು. ಹಿಂದೂ ಸಭಾ, ಅರೇಬಿಕ್ ಬದಲಿಗೆ ದೇವನಾಗರಿ ಬಳಸುವಂತೆ ಕರೆಕೊಟ್ಟಿತು. ಶುದ್ಧಿ ಕಾರ್ಯಕ್ರಮವನ್ನು ಆರ್ಯ ಸಮಾಜ ಮುಂದುವರೆಸಿತು. ಇ.ವಿ. ರಾಮಸ್ವಾಮಿ ನಾಯ್ಕರ್, ಎಂ.ಸಿ. ರಾಜಾ, ಆರ್.ಕೆ. ಶಣ್ಮುಕನ್ ಚೆಟ್ಟಿ ಮುಂತಾದವರನ್ನು ಮದ್ರಾಸಿನಲ್ಲಿ ಭೇಟಿಯಾದ ಜಿನ್ನಾ, ಪ್ರತ್ಯೇಕ ‘ದ್ರಾವಿಡಸ್ತಾನ್’ ಬೇಡಿಕೆ ಇಡುವಂತೆ ಮನವೊಲಿಸಲು ನೋಡಿದರು. ಇತ್ತ 1937ರಲ್ಲಿ ಕಾರಾಗೃಹದಿಂದ ಹೊರಬಂದ ಸಾವರ್ಕರ್, ಹಿಂದೂ ಮಹಾಸಭಾದ ಅಧಿವೇಶನ ಉದ್ದೇಶಿಸಿ ಮಾತನಾಡುತ್ತಾ, ವಿಭಜನೆ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದದ್ದು ಅನೇಕ ರಾಷ್ಟ್ರೀಯವಾದಿಗಳಿಗೆ ಅಚ್ಚರಿಯಾಗಿ ಕಂಡಿತು. ಅಲ್ಲಿಗೆ ದೇಶ ವಿಭಜನೆಗೆ ರಂಗ ಸಜ್ಜಾಗಿತ್ತು.

ಹಾಗಾದರೆ ಮೌಂಟ್ ಬ್ಯಾಟನ್ ಅವರನ್ನೇ ವೈಸ್‌ರಾಯ್ ಆಗಿ ಭಾರತಕ್ಕೆ ಕಳುಹಿಸಿ ಎಂದು ಕ್ಲೆಮೆಂಟ್ ಆಟ್ಲಿ ಮೇಲೆ ಕೃಷ್ಣ ಮೆನನ್ ಒತ್ತಡ ತಂದಿದ್ದೇಕೆ? ಲೇಡಿ ಮಿಂಟೊ ಬಳಿ ‘ಕೆಲವೊಮ್ಮೆ ಒಳ್ಳೆಯವರೂ ತಪ್ಪು ಮಾಡುತ್ತಾರೆ’ ಎಂದು ಗೋಖಲೆ ಕುರಿತು ಗಾಂಧೀಜಿ ಆಡಿದ ಮಾತಿನ ಹಿನ್ನಲೆ ಏನು? ವಿಭಜನೆಯ ಕತೆಯಲ್ಲಿ ವರ್ತಮಾನಕ್ಕೆ ಪಾಠವಿದೆಯೇ? ಊಹು, ಮೂರು ದಶಕದ ವಿಭಜನೆಯ ತಾಲೀಮನ್ನು ಎರಡು ಲೇಖನದಲ್ಲಿ ಮುಗಿಸುವುದು ಕಷ್ಟ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.