ಲೋಕಸಭೆಗೆ ಮುಂದಿನ ಸೆಪ್ಟೆಂಬರ್ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕಳೆದ ತಿಂಗಳು ಹೇಳಿದ್ದರು. ತಾವು ಇಂತಹ ಸುದ್ದಿ ಹೇಳಿದರೆ ಅದು ಹೆಚ್ಚು ರೋಚಕವಾಗಿದ್ದು ಜನರ ಮತ್ತು ಮಾಧ್ಯಮದ ಗಮನವನ್ನು ಬೇಗ ಸೆಳೆಯುತ್ತದೆ ಎಂಬ ಉದ್ದೇಶದಿಂದ ಅವರು ಅಂತಹ ಹೇಳಿಕೆ ನೀಡಿದ್ದಾರೆಂದು ನಾನು ನಂಬುವುದಿಲ್ಲ.

ತಮಿಳುನಾಡಿನ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕರುಣಾನಿಧಿ ಅವರು ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನೀಡಿರುವ ತಮ್ಮ ಪಕ್ಷದ ಬೆಂಬಲವನ್ನು ವಾಪಸು ಪಡೆಯುವುದಾಗಿ ಹೇಳಿದ ಬೆನ್ನಲ್ಲೇ ಮುಲಾಯಂ ಸಿಂಗ್ ಆ ಹೇಳಿಕೆ ನೀಡಿದ್ದರು. ಡಿಎಂಕೆ ಮುಖ್ಯಸ್ಥರು ಆ ರೀತಿ ಕಡ್ಡಿ ಮುರಿದಂತೆ ತಮ್ಮ ನಿಲುವು ಸ್ಪಷ್ಟ ಪಡಿಸಿ ಯುಪಿಎ ಸರ್ಕಾರದ ಭವಿಷ್ಯವನ್ನು ಊಹಾಪೋಹಗಳ ಗೋಪುರದ ಮೇಲಿಟ್ಟುಬಿಟ್ಟರು.

ಯುಪಿಎ ಸರ್ಕಾರ ಕೂಡಾ ಸುಮ್ಮನಿರಲಿಲ್ಲ. ಕರುಣಾನಿಧಿಯವರನ್ನು ಮೆಚ್ಚಿಸಲು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಶ್ರೀಲಂಕಾ ವಿರುದ್ಧ ನಿರ್ಣಯಕ್ಕೆ ಬೆಂಬಲಿಸುವುದಾಗಿಯೂ ಒಪ್ಪಿಕೊಂಡಿತು, ನಿಜ. ಆದರೂ ಕರುಣಾನಿಧಿ ನಿಲುವಿನಲ್ಲಿ ಬದಲಾವಣೆ ಕಾಣಲಿಲ್ಲ. ಮುಲಾಯಂ ಸಿಂಗ್ ಮಾತನಾಡಿರುವ ಹಿನ್ನಲೆಯನ್ನು ಯೋಚಿಸತೊಡಗಿದಾಗ `ಕರುಣಾ' ಮಾತುಗಳು ಗುಯ್ಗುಡತೊಡಗುತ್ತವೆ.

ಮುಲಾಯಂ ಸಿಂಗ್ ಅವರನ್ನೂ ನಾವು ಲಘುವಾಗಿ ಕಾಣುವಂತಿಲ್ಲ. ಯುಪಿಎ ಅಳಿವು ಉಳಿವು ಪ್ರಶ್ನೆ ಬಂದಾಗ ಮುಲಾಯಂ ಅವರ ನಿಲುವೂ ನಿರ್ಣಾಯಕ ಎನಿಸುತ್ತದೆ. ಪ್ರಸಕ್ತ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರಿಗೆ 277 ಸಂಸದರ ಬೆಂಬಲವಿರುವುದು ನಿಜ ತಾನೆ. ಬಹುಮತಕ್ಕೆ ಅಗತ್ಯ ಸಂಖ್ಯೆ 273. ಮುಲಾಯಂ ಇವತ್ತು ಮನಸ್ಸು ಮಾಡಿದರೆ ಯುಪಿಎಗೆ ತಾವು ಕೊಟ್ಟಿರುವ ಬೆಂಬಲವನ್ನು ವಾಪಸು ಪಡೆಯಬಹುದು. ಆದರೆ ಆ ನಂತರ ಅವರು ಮಾಡುವುದಾದರೂ ಏನು ?

ಇವತ್ತಿನ ಸ್ಥಿತಿಯಲ್ಲಿ ಯಾವುದೇ ರಾಜಕೀಯ ಪಕ್ಷವೂ ಈಗಲೇ ಚುನಾವಣೆಗೆ ಹೋಗಲು ಸಿದ್ಧವಿಲ್ಲ. ಪ್ರಬಲ ಎಂದುಕೊಂಡಿರುವ ಕೆಲವು ರಾಜಕೀಯ ಪಕ್ಷಗಳೂ ಚುನಾವಣೆಗೆ ಅಗತ್ಯವಾದ ಸಿದ್ಧತೆ ಮಾಡಿಕೊಳ್ಳುವಲ್ಲಿ ಹೆಣಗಾಡುತ್ತಿವೆ. ಈ ನಡುವೆ ಮುಲಾಯಂ ಸಿಂಗ್ ಅವರು ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಬಹಳ ಎತ್ತರದ ವ್ಯಕ್ತಿತ್ವ ಹೊಂದಿರುವವರು ಇತ್ಯಾದಿ ಹೇಳಿಕೆಗಳ ಮೂಲಕ ಬಾಯಿ ತುಂಬಾ ಹೊಗಳಿದ್ದಾರೆ. ಚುನಾವಣೋತ್ತರ `ಚದುರಂಗ' ವನ್ನು ಮನಸ್ಸಿನಲ್ಲಿಟ್ಟುಕೊಂಡೇ ಮುಲಾಯಂ ಇಂತಹ ಹೇಳಿಕೆ ನೀಡಿದ್ದಾರೆನ್ನುವುದು ನಿಚ್ಚಳ. ಹಾಗಿದ್ದರೆ ಸಾರ್ವತ್ರಿಕ ಚುನಾವಣೆಯ ನಂತರ ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆ ಇದೆಯೇ ?

ಇಂತಹ ಪ್ರಶ್ನೆಗೆ ಈಗಲೇ ಕರಾರುವಾಕ್ಕಾದ ಉತ್ತರ ಕೊಡಲು ಸಾಧ್ಯವಿಲ್ಲ. ಆದರೂ ಒಂದಂತೂ ನಿಜ. ತಾವೇ ಹಿಂದೆ `ಕೋಮುವಾದಿಗಳು, ರಾಷ್ಟ್ರ ವಿರೋಧಿ ಶಕ್ತಿಗಳು' ಎಂದೆಲ್ಲಾ ಜರೆದಿದ್ದ ವ್ಯಕ್ತಿಗಳೊಂದಿಗೂ ಮುಲಾಯಂ ರಾಜಿ ಮಾಡಿಕೊಳ್ಳಲು ಸಿದ್ಧರಿದ್ದಾರೆ ಎಂಬುದಂತೂ ಗೊತ್ತಾಗುತ್ತದೆ.

ಒಟ್ಟಾರೆ, ಇಡೀ ರಾಜಕೀಯ ವಾತಾವರಣವೇ ಕೆಟ್ಟು ಹೋದಂತೆ ಕಾಣಿಸುತ್ತಿದೆ. ಪ್ರಸಕ್ತ ಕೇಂದ್ರ ಸರ್ಕಾರ ತನ್ನ ನಿಷ್ಕ್ರಿಯತೆಯಿಂದಲೇ ಸುದ್ದಿಯಾಗಿದೆ. ತಾವು ಇನ್ನೆಷ್ಟು ಸಮಯ ಅಧಿಕಾರದ ಕೀಲಿಕೈ ಹಿಡಿದು ಕೊಂಡಿರುತ್ತೇವೆ ಎಂಬ ಸಂಗತಿ ಗದ್ದುಗೆ ಮೇಲೆ ಕುಳಿತ್ತಿರುವವರಿಗೇ ಗೊತ್ತಿಲ್ಲ. ಹೀಗಾಗಿ ಈ ಅಧಿಕಾರಸ್ಥರು ಯಾವುದೇ ದೀರ್ಘಾವಧಿ ಯೋಜನೆಗಳಿಗೆ ಸಂಬಂಧಿಸಿದಂತೆ ದಿಟ್ಟ ಹೆಜ್ಜೆಗಳನ್ನು ಇಡಲು ಆಸಕ್ತಿ ತೋರುತ್ತಿಲ್ಲ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಧ್ಯಕ್ಷತೆಯ ಯುಪಿಎ ಮನಮೋಹನ ಸಿಂಗ್ ಅವರನ್ನು ಎದುರಿಗೆ ನಿಲ್ಲಿಸಿಕೊಂಡು ಜತೆಗಿರುವ ಸುಮಾರು ಇಪ್ಪತ್ತು ಮಿತ್ರ ಪಕ್ಷಗಳೊಂದಿಗೆ ವ್ಯವಹರಿಸುತ್ತಿದೆ. ಕೇವಲ ಇಬ್ಬರು ಅಥವಾ ಮೂರು ಮಂದಿ ಸಂಸದರನ್ನು ಒಳಗೊಂಡಿರುವ ಪಕ್ಷಗಳನ್ನೂ ಇಂತಹ ಸಂದಿಗ್ಧದಲ್ಲಿ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಅಂತಹ ಪಕ್ಷಗಳೂ ಪ್ರಸ್ತುತ ಸಂದರ್ಭದಲ್ಲಿ ಸರ್ಕಾರದ ಅಳಿವು ಉಳಿವಿನಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇವೆ.

ಯುಪಿಎ ಸಾಹಸ ಕಡಿಮೆ ಏನಲ್ಲ. ಕಳೆದ ಒಂಬತ್ತು ವರ್ಷಗಳಿಂದ ಮನಮೋಹನ ಸಿಂಗ್ ನೇತೃತ್ವದ ಸರ್ಕಾರವನ್ನು ಉಳಿಸಿಕೊಂಡು ಬರುವಲ್ಲಿ ಯುಪಿಎ ಹಗ್ಗದ ಮೇಲಿನ ನಡಿಗೆಯಂತಹ ಸಮರ್ಥ `ಸಾಹಸ' ವನ್ನೇ ಮಾಡುತ್ತಾ ಬಂದಿದೆ. ಪ್ರಸಕ್ತ ಯುಪಿಎನಲ್ಲಿನ ಗೊಂದಲಗಳನ್ನು ಕಂಡಾಗ ಯುಪಿಎ ನೇತೃತ್ವ ವಹಿಸಿದವರಿಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಸರಿತೂಗಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎಂದೆನಿಸುವುದು ಸಹಜ. ಆದರೆ ಹಿಂದೆ ಬಿಜೆಪಿ ನೇತೃತ್ವದ ಎನ್ಡಿಎ ಎರಡು ಡಜನ್ ಪಕ್ಷಗಳನ್ನು ತಕ್ಕಡಿಯಲ್ಲಿಟ್ಟುಕೊಂಡು ಸಮತೂಕ ಕಾಯ್ದುಕೊಳ್ಳುತ್ತಾ ಆಡಳಿತ ನಡೆಸಲು ಸಾಧ್ಯವಾಗಿದ್ದು ಎಂಟು ವರ್ಷಗಳನ್ನಷ್ಟೇ ಎಂಬುದನ್ನೂ ನಾವು ಮರೆಯುವಂತಿಲ್ಲ.

ಅದೇನೇ ಇರಲಿ, ಯುಪಿಎ ತನ್ನ ಮೊದಲ ಅವಧಿಯಲ್ಲಿ ಉತ್ತಮ ಕೆಲಸವನ್ನೇ ಮಾಡಿತ್ತು. ಆಗ ಪರಸ್ಪರ ಸೌಹಾರ್ದ ಸಂಬಂಧಕ್ಕಾಗಿ ಸಂಚಾಲನಾ ಸಮಿತಿಯೊಂದನ್ನು ರಚಿಸಿಕೊಂಡು, ಅದರ ಮೂಲಕ ಮಿತ್ರ ಪಕ್ಷಗಳೆಲ್ಲದರ ಜತೆಗೆ ನಿರಂತರ ಸಂಪರ್ಕ ಇರಿಸಿಕೊಂಡಿತ್ತು. ಅಂತಹ ಪಕ್ಷಗಳೆಲ್ಲವನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು.

ಆದರೆ ಈ ಎರಡನೇ ಅವಧಿಯಲ್ಲಿ `ಕಾಂಗ್ರೆಸ್ ನೇತೃತ್ವದ ಸರ್ಕಾರ' ಮಿತ್ರ ಪಕ್ಷಗಳೊಡನೆ `ಸಂವಾದ' ನಡೆಸಿದ್ದೇ ಕಡಿಮೆ. ಹೊರಗೇ ನಿಂತು ಸರ್ಕಾರಕ್ಕೆ ಬೆಂಬಲ ನೀಡಿದ ದೊಡ್ಡ ಪಕ್ಷಗಳನ್ನೂ `ಕಾಂಗ್ರೆಸ್' ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎನ್ನುವುದಂತೂ ನಿಜ. ಈ ರೀತಿ ಮಿತ್ರಪಕ್ಷಗಳನ್ನು ಕಡೆಗಣಿಸದೇ ಇದ್ದಿದ್ದರೆ ಕೇಂದ್ರದ ಅಧಿಕಾರಸ್ಥರು ಇವತ್ತು ಈ ತೆರನಾಗಿ ಕತ್ತಿಯ ಅಲುಗಿನ ಮೇಲೆ ಸದಾ ನಿಂತಿರುವಂತಹ ಪರಿಸ್ಥತಿ ಉಂಟಾಗುತ್ತಿರಲಿಲ್ಲ. ಇನ್ನೂ ಕಾಲ ಮಿಂಚಿಲ್ಲ. ಜತೆಗಿರುವ ಮಿತ್ರ ಪಕ್ಷಗಳೊಂದಿಗೆ ಸಂಬಂಧವನ್ನು ಇನ್ನಷ್ಟೂ ಸುಧಾರಿಸಿಕೊಂಡು ಮುಂದಡಿ ಇಡಬಹುದು.

ಇಂತಹ ಅನಿಶ್ಚಿತತೆಯು ಆಡಳಿತದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಸ್ಥಿತಿಯು ನಮ್ಮ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡಿದೆ. ಭಾರತದ ಆರ್ಥಿಕ ಸ್ಥಿತಿಯನ್ನು ವಿದೇಶದ ಮಂದಿ ಎಚ್ಚರಿಕೆಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇನ್ನೂ ಒಂದು ವಿಚಾರವೆಂದರೆ, ಸದಾ ತನ್ನ ಆಂತರಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಕೊಂಡಿರುವ ಕೇಂದ್ರ ಸರ್ಕಾರ ವಿದೇಶ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೌಲ್ಯಯುತವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಶ್ರೀಲಂಕಾದಲ್ಲಿ ಎಲ್ಟಿಟಿಇ ವಿರುದ್ಧದ ಸಮರದ ಕೊನೆಯ ದಿನಗಳಲ್ಲಿ ಲಂಕಾ ಸೈನಿಕರು ದೊಡ್ಡ ಪ್ರಮಾಣದಲ್ಲಿಯೇ ದೌರ್ಜನ್ಯ ನಡೆಸಿದ್ದರು. ಇದರಿಂದ ಅಲ್ಲಿನ ತಮಿಳರು ಅಪಾರ ಸಾವು ನೋವು ಅನುಭವಿಸಿದ್ದಾರೆ. ಅದರಿಂದ ಭಾರತದಲ್ಲಿರುವ ತಮಿಳರೂ ತೀವ್ರ ಅಸಮಾಧಾನಗೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಡಿಎಂಕೆಯನ್ನು ಸಮಾಧಾನಗೊಳಿಸಲು ಇನ್ನಿಲ್ಲದಂತೆ ಪ್ರಯತ್ನಿಸಿತು. ಆದರೆ ಅಷ್ಟ್ರರಲ್ಲೇ ಕಾಲ ಮಿಂಚಿತ್ತು. ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸು ಪಡೆಯಲು ಕರುಣಾನಿಧಿ ಅವರು ತೀರ್ಮಾನಿಸಿ ಬಿಟ್ಟಿದ್ದರು. ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಸ್ವಲ್ಪ ಬೇಗನೆ ಸ್ಪಂದಿಸಬೇಕಿತ್ತೇನೊ.

ಅದೇನೇ ಇದ್ದರೂ, ಯುಪಿಎ ತಾನು ಉಳಿದು ಕೊಳ್ಳುವ ನಿಟ್ಟಿನಲ್ಲಿ ತಂತ್ರಗಳನ್ನು ನಡೆಸುತ್ತಿದೆ. ನಾಡಿನ ಈ ತೆರನಾದ ಅಸ್ವಸ್ಥ ಸ್ಥಿತಿ ಇದೇ ರೀತಿ ಮುಂದುವರಿಯುತ್ತಲೇ ಇರುತ್ತದೆ. ಇಂತಹದರ ನಡುವೆ ಯಾರಾದರೂ ದಿಟ್ಟ ನಿಲುವು ತಳೆದು ಯುಪಿಎಗೆ ಪಾಠ ಕಲಿಸಬೇಕು. ಅದನ್ನು ಯಾರು ಮಾಡಲು ಸಾಧ್ಯ ಹೇಳಿ. ಮುಲಾಯಂ ಸಿಂಗ್ ಯಾದವ್, ಮಾಯಾವತಿ ಅವರು ಕೇಂದ್ರದಿಂದ ತಮಗೆಷ್ಟು ಲಾಭ ಮಾಡಿಕೊಳ್ಳಲು ಸಾಧ್ಯವೋ ಅದನ್ನು ಮಾಡಿಕೊಳ್ಳುವುದರಲ್ಲಿ ತಲ್ಲೆನರಾಗಿದ್ದಾರೆ. ಕೇಂದ್ರ ಸರ್ಕಾರ ಕೂಡಾ ಒಂದು ಹಂತದವರೆಗೆ ಇಂತಹವರಿಗೆಲ್ಲಾ ತಲೆಬಾಗುತ್ತಲೇ ಹೋಗುತ್ತದೆ, ಅದಕ್ಕಿಂತ ಹೆಚ್ಚು ಬಾಗುವುದಿಲ್ಲ. ಆ ನಂತರ ಇದ್ದೇ ಇದೆಯಲ್ಲಾ ಸಿಬಿಐ ಎಂಬ ಅಸ್ತ್ರ. ಅಂತಹವರು ನಡೆಸಿದ್ದಾರೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಕೇಂದ್ರ ಸಿಬಿಐ ಮೂಲಕ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿಟ್ಟುಕೊಂಡಿದೆ. ಅಗತ್ಯ ಬಿದ್ದಾಗ ಸಿಬಿಐ ಎಂಬ `ಮೂಗುದಾರ'ವನ್ನು ಕೇಂದ್ರ ಎಳೆಯುತ್ತಲೇ ಇರುತ್ತದೆ.

ಸಚಿವ ಬೇನಿ ಪ್ರಸಾದ್ ಅವರ ವಿರುದ್ಧ ಮುಲಾಯಂ ಸಿಂಗ್ ಅವರ ವಾಗ್ದಾಳಿ ಸರಿಯೇ ಇರಬಹುದೆಂದಿಟ್ಟುಕೊಳ್ಳಿ. ಬೇನಿ ಪ್ರಸಾದ್ ಅವರು ಮುಲಾಯಂ ಕುರಿತು ತೀರಾ ಅಪಮಾನಕಾರಿಯಾಗಿ ಮಾತನಾಡಿದ್ದರು, ನಿಜ. ಆದರೆ ಪ್ರಧಾನಿ ಮನಮೋಹನ ಸಿಂಗ್ ಅವರು ಬೇನಿ ಅವರನ್ನು ಸಂಪುಟದಿಂದ ಕೈಬಿಡುವಷ್ಟು ಧೈರ್ಯ ತೋರಲಿಲ್ಲ. ಏಕೆಂದರೆ ಬೇನಿ ಅವರ ಬೆನ್ನಿಗೆ ನಿಂತಿರುವ ಕೆಲವು ಸಂಸದರು ಲೋಕಸಭೆಯಲ್ಲಿದ್ದಾರಲ್ಲಾ.

ಈ ನಡುವೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎತ್ತಿರುವ ಅಪಸ್ವರ `ಎನ್ಡಿಎ' ಒಳಗೇ ತಲ್ಲಣ ಉಂಟು ಮಾಡಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು `ಎನ್ಡಿಎ ಪ್ರಧಾನಿ ಅಭ್ಯರ್ಥಿ' ಎಂಬುದಾಗಿ ಬಿಂಬಿಸುವುದಕ್ಕೆ ಸಾಧ್ಯವೇ ಇಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಈಗಾಗಲೇ ಇಂತಹ ಹಲವು ರಾಜಕೀಯ ವಿವಾದಗಳು ಸುದ್ದಿ ಮಾಡುತ್ತಲೇ ಇವೆ. ಇಂತಹ ವಿವಾದಗಳೆಲ್ಲವೂ ಮುಂಬರುವ ಸಾರ್ವತ್ರಿಕ ಚುನಾವಣೆ ಮತ್ತು ಚುನಾವಣೋತ್ತರ `ತಂತ್ರಗಾರಿಕೆ'ಗಳ ಸುತ್ತಲೇ ಹೆಣೆದುಕೊಂಡಿರುವುದೊಂದು ವಿಶೇಷವೇ ಹೌದು. ಇಂತಹ ಸಂದರ್ಭದಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರು ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದರೆ ಅದೊಂದು ಉತ್ತಮ ನಡೆಯಾಗುತ್ತದೆ. ಪ್ರಧಾನಿ ಸಿಂಗ್ ಅವರು ಸೀದಾ ರಾಷ್ಟ್ರಪತಿ ಭವನಕ್ಕೆ ತೆರಳಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಲ್ಲದೆ, ಚುನಾವಣೆಗೆ ಶಿಫಾರಸು ಮಾಡಲಿ. ಈಗಿನ ಸ್ಥಿತಿಯಲ್ಲಿ ಯಾವುದೇ ಒಂದು ರಾಜಕೀಯ ಪಕ್ಷವೂ `ಸರ್ಕಾರ ರಚಿಸುತ್ತೇವೆ' ಎಂದು ರಾಷ್ಟ್ರಪತಿಗಳ ಮುಂದೆ ಮನವಿ ಸಲ್ಲಿಸಲು ಸಾಧ್ಯವೇ ಇಲ್ಲ ಬಿಡಿ. ಆಗ ಸಹಜವಾಗಿಯೇ ಚುನಾವಣೆ ಅನಿವಾರ್ಯವಾಗುತ್ತದೆ.

ಅಂತಹದ್ದೊಂದು ಚುನಾವಣೆಯು ಮುಂದಿನ ದಿನಗಳಲ್ಲಿ ಈ ದೇಶಕ್ಕೆ ಬಲಿಷ್ಠ ಸರ್ಕಾರವೊಂದನ್ನು ನೀಡುತ್ತದೆ ಎಂಬುದನ್ನು ನಾವು ಈಗಲೇ ಹೇಳಲು ಸಾಧ್ಯವಿಲ್ಲ. ಕಾದು ನೋಡಬೇಕಷ್ಟೇ. ಈಗಿರುವಂತೆಯೇ ಮತ್ತೆ ಹತ್ತಿಪ್ಪತ್ತು ಪಕ್ಷಗಳೆಲ್ಲಾ ಒಗ್ಗೂಡಿ ತಮ್ಮ ತಮ್ಮ ಗುರಿ ಉದ್ದೇಶಗಳನ್ನು ಒಡಲಲ್ಲಿಟ್ಟುಕೊಂಡು ಎದ್ದು ನಿಂತರೆ ಅಚ್ಚರಿ ಪಡುವಂತಹದ್ದೂ ಇಲ್ಲ. ಇವುಗಳ ನಡುವೆ ಪಕ್ಷವೊಂದು ಇನ್ನೂರರಷ್ಟು ಸ್ಥಾನ ಗಳಿಸಿದರೆ, ಅಂತಹ ಪಕ್ಷದ ಸುತ್ತಲೇ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಕೇಂದ್ರೀಕರಣಗೊಳ್ಳತ್ತದೆ. ಇಂತಹ ಆಗುಹೋಗುಗಳೆಲ್ಲವೂ, ಈ ನಾಡಿನ ಮತದಾರರ ಭಾವನೆ, ನಿಲುವುಗಳ ಮೇಲೆಯೇ ಅವಲಂಬಿಸಿದೆ. ಮತದಾರರನ್ನು ಯಾವುದೇ ಪಕ್ಷದವರು ಲಘುವಾಗಿ ಪರಿಗಣಿಸಲಾಗದಂತಹ ಸ್ಥಿತಿ ಇದೆ. ಇದು ಈ ನಾಡಿನ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆಯೂ ಹೌದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.