ಬುಧವಾರ, ಮೇ 18, 2022
28 °C

ಹರಶರಣ ದೆನಿಲೋನ ಹಾದಿಯಲ್ಲಿ...

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಹರಶರಣ ದೆನಿಲೋನ ಹಾದಿಯಲ್ಲಿ...

ವಾರಣಾಸಿಯ ಹೆಸರಾಂತ ಗುರು ಕರಪಾತ್ರಿ ಮಹಾರಾಜರಿಂದ ಶಿವದೀಕ್ಷೆ ಪಡೆದುಕೊಂಡಾಗ ಹರಶರಣನೆಂದು ಮರುನಾಮಕರಣಗೊಂಡ ಫ್ರಾನ್ಸಿನ ಘನವಿದ್ವಾಂಸನ ಮೂಲ ಹೆಸರು ಆಲೆನ್ ದೆನಿಲೋ. ಆತ ಯೂರೋಪಿನ ಭಾರತೀಯ ತಜ್ಞರಲ್ಲಿ ದೊಡ್ಡ ಹೆಸರು. ಮಾತ್ರವಲ್ಲ, ಹಲವು ರೀತಿಗಳಲ್ಲಿ ವಿಶಿಷ್ಟ ಕೂಡ. ಆತನ ಸಂಸ್ಕೃತ ಜ್ಞಾನ ಗಾಢವಾದುದು. ಆದರೆ ಸಂಸ್ಕೃತದಷ್ಟೇ ಆಳವಾಗಿ ತಮಿಳು ವಿದ್ವತ್ತಿನಲ್ಲೂ ಮುಳುಗೆದ್ದವನು. ತಮಿಳಿನ ಮೊದಲಿನೆರಡು ಮಹಾಕಾವ್ಯಗಳಾದ `ಶಿಲಪ್ಪದಿಕಾರಂ'  ಮತ್ತು `ಮಣಿಮೇಕಲೈ'ಗಳನ್ನು ಸಮರ್ಥವಾಗಿ ಇಂಗ್ಲಿಷಿಗೆ ತರ್ಜುಮೆ ಮಾಡಿದವನು. ಸಂಗೀತದಲ್ಲಿ ವಿಶೇಷ ಆಸಕ್ತಿಯಿದ್ದ ದೆನಿಲೋ ಸಂಗೀತ ಶಾಸ್ತ್ರಕ್ಕೆ ನೀಡಿದ ಕೊಡುಗೆಯೂ ಮಹತ್ತರವಾದುದು. ಬರ್ಲಿನ್ನಿನ ಎಥ್ನೊಲಾಜಿಕಲ್ ಸಂಗ್ರಹಾಲಯದಲ್ಲಿ ಇಡೀ ವಿಶ್ವದ ಸಂಗೀತಶೈಲಿಗಳ ಬಹು ದೊಡ್ಡ ಸಂಗ್ರಹ ಮತ್ತು ಸಂರಕ್ಷಣೆಗೆ ಭದ್ರವಾದ ಬುನಾದಿ ಹಾಕಿದವನು. ಭಾರತವನ್ನು ಕುರಿತ ಆತನ ಕೃತಿಗಳಲ್ಲಿರುವ ಚಿಂತನೆ ಆಂಗ್ಲೋ-ಅಮೆರಿಕ್-ಜರ್ಮನ್ ವಿದ್ವಾಂಸರಿಗಿಂತಾ ಬೇರೆಯೇ ಬಗೆಯದು.ಕನಿಕರ ಹುಟ್ಟಿಸುವ ಮುಖಮುದ್ರೆಯ ವೇದಾಂತವನ್ನೇ ಭಾರತದ ಸಾರ ಸರ್ವಸ್ವವೆನ್ನುವರು ಆ ಕಾಲದ ಬಹಳ ಮಂದಿ ವಿದ್ವಾಂಸರು. ಅವರಲ್ಲಿ ಬಹುತೇಕ ಪ್ರಭೃತಿಗಳು ಭಾರತೀಯರೆಂದರೆ ಜೀವನೋತ್ಸಾಹ, ರಾಗರತಿಗಳಿಲ್ಲದ ಓಡುಗಾಲ ಯೋಗಿಗಳೆಂದು ಬಗೆದಿದ್ದರು. ಆದರೆ ವಿದ್ವತ್ತು, ರಸಗ್ರಾಹಿತ್ವ ಮತ್ತು ವ್ಯಕ್ತಿಗತ ಆಧ್ಯಾತ್ಮಿಕ ಸಾಧನೆಗಳ ತ್ರಿವೇಣಿಸಂಗಮವಾಗಿದ್ದ ದೆನಿಲೋ ಒತ್ತು ನೀಡಿದ್ದು ಭಾರತೀಯರ ರಸವಿಮುಖಿಯಾದ ಸಮಣಪಂಥೀಯ ಅಧ್ಯಾತ್ಮವಾದಕ್ಕಲ್ಲ, ಐಂದ್ರಿಕ ಜಗತ್ತಿಗೆ ತನ್ನನ್ನು ಪೂರ್ಣವಾಗಿ ತೆರೆದುಕೊಂಡು ಹಾಕುವ ಪ್ರತಿಯೊಂದು ತುತ್ತನ್ನೂ ಬಿಂದುವಾಗಿ ಮಾಡಿಕೊಂಡ ಶೈವ-ಶಾಕ್ತರ ಪೂರ್ಣಾದ್ವೈತಕ್ಕೆ. ಈ ದೃಷ್ಟಿಯಲ್ಲಿ ಇಹಪರಗಳೆರಡೂ ಶಿವಶಕ್ತಿಮಯ. ದೆನಿಲೋ ತನಗಾಗಿ ಆಯ್ದುಕೊಂಡ ಕಾಳಾಮುಖ ಶೈವಪಂಥ, ಸಮಣಪರಂಪರೆಗಳಿಗೆ ತ್ಯಾಜ್ಯವಾದ ಮದ್ಯ-ಮಾಂಸ-ಮೈಥುನಗಳಲ್ಲೂ ಶಿವಶಕ್ತಿಯರ ನಿರಂತರ ಸಂಭೋಗವನ್ನು ಕಾಣುವ ತವಕವುಳ್ಳದ್ದು. ಭಾರತೀಯ ಪರಂಪರೆಗಳ ರಸಪ್ರಾಧಾನ್ಯವನ್ನು ಸಂಸ್ಕೃತದ ಜೊತೆಗೆ ಸಂಸ್ಕೃತೇತರ ಮಗ್ಗುಲುಗಳನ್ನು ಎತ್ತಿ ಹಿಡಿಯುವಲ್ಲಿ ದೆನಿಲೋ ಯೂರೋಪಿನ ಭಾರತೀಯ ವಿದ್ವಾಂಸರುಗಳಲ್ಲಿ ವಿಶಿಷ್ಟ. ಇಂದು ಯಥೋಚಿತವಾಗಿ ಟೀಕೆಗೊಳಗಾಗುತ್ತಿರುವ ಪೌರ್ವಾತ್ಯವಾದದ ಮುಖ್ಯಧಾರೆಗೆ ಹೊರಗಿನವನು ಈತ.ಪೌರ್ವಾತ್ಯವಾದದ ಮಿತಿಗಳಿಂದ ವಿಮುಕ್ತಿ ಪಡೆಯಲೆಳೆಸುತ್ತಿರುವ ಇಂದಿನ ಬೌದ್ಧಿಕ ಜಗತ್ತಿಗೆ ದೆನಿಲೋನ ಬದುಕು ಮತ್ತು ಬರಹಗಳ ಮರುಚಿಂತನೆಯ ಅಗತ್ಯವಿದೆ.ರವೀಂದ್ರನಾಥ ಟ್ಯಾಗೋರರ ಜೊತೆಗೆ ನಿಕಟ ಸ್ನೇಹವನ್ನಿಟ್ಟುಕೊಂಡಿದ್ದ ದೆನಿಲೋನಿಂದ ಪ್ರೇರಿತರಾದ ಯೂರೋಪಿನ ಭಾರತೀಯ ತಜ್ಞರೂ ಭಾರತದ ಸ್ನೇಹಿತರೂ, ಆತ ಮುವ್ವತ್ತರ ಸುಮಾರಿನಲ್ಲಿ ಆರಂಭಿಸಿದ ಹರಶರಣ ಪ್ರತಿಷ್ಠಾನಕ್ಕೆ ಈಚಿನ ದಿನಗಳಲ್ಲಿ ಹೊಸ ಕಾಯಕಲ್ಪ ಮಾಡುತ್ತಿದ್ದಾರೆ. ಆ ಸಂಸ್ಥೆಗೆ ಭಾರತ ಮತ್ತು ಯೂರೋಪಿನ ಹೊಸ ಸಂವಾದ ಪ್ರತಿಷ್ಠಾನವೆಂಬ (ಇಂಡಿಯಾ ಯೂರೋಪ್ ನ್ಯೂ ಡಯಲಾಗ್ ಫೌಂಡೇಷನ್) ಹೆಸರು ಕೊಟ್ಟಿದ್ದಾರೆ. ಸ್ವಿಟ್ಜರ್ಲೆಂಡ್‌ನ ಲುಸಾನ್ನೆಯಲ್ಲಿ ಈ ಸಂಸ್ಥೆಯ ಮೂಲ ಕಚೇರಿಯಿದ್ದು ಪ್ಯಾರಿಸ್ಸಿನಲ್ಲಿ ಒಂದು ಶಾಖೆಯೂ ಇದೆ. ಸದರಿ ಸಂಸ್ಥೆಯವರು 22ನೇ ತಾರೀಕು ಇತಾಲಿಯಾದ ಪೊಲಿಸ್ತ್ರೀನಾದಲ್ಲಿರುವ ದೆನಿಲೋನ ನಿವಾಸದಲ್ಲಿ ದೇವತೆ ಶಿವ ಮತ್ತು ಅದಕ್ಕೆ ಸಂವಾದಿಯಾದ ಗ್ರೀಕ್ ದೇವತೆ ದಯೋನಿಸೂಸ್ ಕುರಿತ ಸಂಗೀತ ಮತ್ತು ಕಥಕಳಿ ಕಾರ್ಯಕ್ರಮಗಳನ್ನೂ ಏರ್ಪಡಿಸಿದ್ದರು. ಈ ಸಂದರ್ಭದಲ್ಲಿ ದೆನಿಲೋನ ವಿಚಾರಗಳ ಬಗ್ಗೆ ನನ್ನಲ್ಲಿ ಮರುಚಿಂತನೆ ಶುರುವಾಯಿತು.ಪೂರ್ವ ಬೇರೆ ಪಶ್ಚಿಮ ಬೇರೆ ಎಂಬ ತೌಡನ್ನು ನಾವು ಕುಟ್ಟುತ್ತಲೇ ಬಂದಿದ್ದೇವೆ. ಪೌರ್ವಾತ್ಯವಾದಿಗಳು ಆತುರಾತುರವಾಗಿ ನಡುಗೆರೆಯನ್ನು ಹಾಕಿಬಿಟ್ಟರು. ಭಾರತೀಯರೆಂದರೆ ಪರಲೋಕವಾದಿಗಳು; ಅವರ ಚರಿತ್ರೆ ಚಲನಶೀಲತೆಯಿಲ್ಲದ್ದು; ವೇದಪ್ರಣೀತವಾದ ಹಿಂದೂ ಧರ್ಮ ಭಾರತೀಯ ನಾಗರಿಕತೆಯ ಸಾರ ಮತ್ತು ಬುನಾದಿ ಇತ್ಯಾದಿ ನಂಬಿಕೆಗಳು ಪೌರ್ವಾತ್ಯವಾದದಲ್ಲಿ ಪ್ರಧಾನವಾಗಿದ್ದವು. (ಹಿಂದೂ ಧರ್ಮವನ್ನು `ಪ್ರವಾಹ ಪತಿತರ ಕರ್ಮ ಹಿಂದೂ ಎಂಬ ಧರ್ಮ' ಎಂದು ಕರೆದಿದ್ದರು ಶಂ.ಬಾ. ಜೋಷಿಯವರು) ಅಂದರೆ ಭೌತಿಕತೆ, ಬೌದ್ಧಿಕತೆ, ವೈಚಾರಿಕತೆ ಮತ್ತು ಚಲನಶೀಲತೆಗಳು ಪಶ್ಚಿಮದ ಸಾಧನೆಗಳು. ನಾಸಾಗ್ರದಲ್ಲಿ ದೃಷ್ಟಿ ನೆಟ್ಟ ಯೋಗಿಗಳಿಂದ ಪ್ರೇರಿತವಾದ ಭಾರತೀಯ ನಾಗರಿಕತೆ ನಿಂತ ನೀರಾಗಿ ಕೊಳೆಯತೊಡಗಿತು. ಆದ್ದರಿಂದ ಬಿಳಿತೊಗಲಿನವರು ಬಂದು ನಮ್ಮನ್ನು ಉದ್ಧರಿಸಬೇಕಾಯಿತು. ಇಂತಹ ವಿಚಾರಗಳು ಎಷ್ಟು ಪ್ರಭಾವಿಯಾಗಿಬಿಟ್ಟವೆಂದರೆ ಕಾರ್ಲ್‌ಮಾರ್ಕ್ಸ್‌ನಂಥ ಕ್ರಾಂತಿದ್ರಷ್ಟಾರರೂ ವೀರಸನ್ಯಾಸಿ ವಿವೇಕಾನಂದರಂಥ ಸುಧಾರಣಾವಾದಿಗಳೂ ಇದನ್ನೇ ನಿಜವೆಂದು ನಂಬಿದ್ದರು. ವಸಾಹತುಯುಗದ ಬಹುತೇಕ ಕವಿಗಳು, ಬುದ್ಧಿಜೀವಿಗಳು, ಸಮಾಜ ನಿರ್ಮಾತೃಗಳು, ಧರ್ಮಸುಧಾರಕರು, ಯೋಗಪ್ರಚಾರಕರು ತಮ್ಮ ವಿಚಾರ-ಪ್ರಚಾರಗಳಿಗೆ ಇಂಥ ನಂಬಿಕೆಗಳನ್ನೇ ಅಡಿಪಾಯ ಮಾಡಿಕೊಂಡು ಹಾದಿ ತಪ್ಪಿಸಿದರು, ತಪ್ಪಿದರು. ಇಂದಿನ ವಸಾಹತೋತ್ತರ ಚಿಂತನೆ ಯಥೋಚಿತವಾಗಿ ಈ ದೃಷ್ಟಿವಿಪರ್ಯಾಸವನ್ನು ಖಂಡಿಸುತ್ತಿದೆ. ಆದರೆ ಈ ಹೊಸ ಚಿಂತನೆಯೂ ವಸಾಹತುಶಾಹಿ ಮಾಡಿದ ವಿಪರ್ಯಾಸಗಳನ್ನು `ಸದಾಶಿವನಿಗೆ ಅದೇ ಗ್ಯಾನ' ಅನ್ನೋ ರೀತಿಯಲ್ಲಿ ಚಿಂತಿಸುತ್ತಾ ವಸಾಹತುಪೂರ್ವ ಮತ್ತು ವಸಾಹತು ಯುಗಗಳ ಇತ್ಯಾತ್ಮಕ ಗುಣಗಳನ್ನು ಗುರುತಿಸುವುದರಲ್ಲಿ ಸೋಲುತ್ತಿದೆ. ನನಗೆ ಗೊತ್ತಿದ್ದಂತೆ ರವೀಂದ್ರನಾಥರಂಥ ಕವಿದೃಷ್ಟಾರರು ಮತ್ತು ನಮ್ಮವರೇ ಆದ ಶಂ.ಬಾ. ಜೋಷಿಯವರಂಥ ಕೆಲವೇ ಮಂದಿ ಈ ಇತ್ಯಾದಿಗಳಿಂದ ಹೊರಬಂದು ವಿಭಿನ್ನ ಕಲ್ಪನೆ, ಚಿಂತನೆಗಳನ್ನು ಮಂಡಿಸಿದರು.ಇಂದಿಗೂ ನಮ್ಮ ಕಲ್ಪನೆ, ಚಿಂತನೆಗಳ ಧಾರಣೆಗಳು ಅಯಯಥಾರ್ಥವಾಗಿರುವ ಪೌರ್ವಾತ್ಯವಾದದ ಆಚೆಗೆ ಬರುತ್ತಿಲ್ಲ. ನಾವು ನಮ್ಮ ಸಾಮೂಹಿಕ ಸ್ವಯದ ನಿಚ್ಚಳ ತಿಳಿವಳಿಕೆ ಪಡೆಯಬೇಕೆಂದರೆ ಈ ಇತ್ಯಾದಿಗಳಿಂದ ಹೊರಬರುವುದು ಅಗತ್ಯ ಮತ್ತು ಅನಿವಾರ್ಯ. ಈ ತೆರನ ಮರುಚಿಂತನೆಗೆ ದೆನಿಲೋನ ಬದುಕು-ಬರಹಗಳು ಸ್ಫೂರ್ತಿ ನೀಡಬಲ್ಲವು.ಮೇಲ್ಕಂಡ ಚಿಂತನೆ ನಮಗೆ ನಮ್ಮ ಜಗತ್ತಿನ ಭೂಗೋಳದ ಬಗ್ಗೆಯೇ ತಪ್ಪು ಕಲ್ಪನೆ ನೀಡಿದೆ ಅನ್ನುತ್ತಾನೆ ಆಫ್ರಿಕಾದ ಮಹಾನ್ ಕವಿ ಮತ್ತು ಚಿಂತಕ ಆಯ್ಮೀ ಸೀಜರ್. ಗ್ಲೋಬು, ಭೂಪಟಗಳನ್ನು ಯಾವ ರೀತಿಯಲ್ಲಿ ಪರಿಕಲ್ಪಿಸಲಾಯಿತೆಂದರೆ ಯೂರೋಪು ಖಂಡ ಗ್ಲೋಬಿನ ಕೇಂದ್ರವೆಂಬ ಹಾಗೆಯೂ ಇತರ ಖಂಡಗಳು ಎಲ್ಲೋ ಅಂಚಿನಲ್ಲಿರುವಂತೆಯೂ ಆಯೋಜಿಸಲಾಯಿತು. ವಸಾಹತುಶಾಹಿ ಯುಗದಲ್ಲಿ ಘಟಿಸಿದ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ವಹಿವಾಟುಗಳೆಲ್ಲ ಗ್ಲೋಬಿನ ಈ ಮಾದರಿಯ ನಕಲು. ಕೇಂದ್ರದಲ್ಲಿರುವ ಯೂರೋಪು ಪರಿಧಿಯಲ್ಲಿರುವ ಇತರ ಖಂಡಗಳನ್ನು ನಿಯಂತ್ರಿಸಬಲ್ಲುದಾಗಿದೆ. ಈ ಭೌಗೋಳಿಕ ಪರಿಕಲ್ಪನೆಯಲ್ಲಿ ಐರೋಪ್ಯ ಶಿಕ್ಷಣದ ಮೂಲಕ ನಾವೆಲ್ಲರೂ ಯೂರೋಪಿನ ಜೊತೆಗೆ ಅಸಮಾನ ಕೊಡುಕೊಳೆಗೆ ತಯಾರು ಮಾಡಲ್ಪಟ್ಟೆವು. ಯೂರೋಪಿಗನುಕೂಲವಾದ ಈ ಲೋಕದೃಷ್ಟಿಯಲ್ಲಿ ನಮ್ಮ ಒಳಿತೂ ಇದೆ ಎಂದು ನಂಬಿ ಕೆಟ್ಟೆವು.ಐರೋಪ್ಯ ಇತಿಹಾಸ ಕಲ್ಪನೆಯೂ ಈ ಭೂಗೋಳಕ್ಕೇ ಅಂಟಿಕೊಂಡದ್ದು. ನವವಿಕಾಸದ ಯುಗದಲ್ಲಿ ಪರಿಪುಷ್ಟವಾದ ತಮ್ಮ ನಾಗರಿಕತೆಯ ಉಗಮವನ್ನು ಸನಾತನ ಗ್ರೀಕ್ ನಾಗರಿಕತೆಯಲ್ಲಿ ಅವರು ಕಂಡುಕೊಂಡರು. ಇದನ್ನು ಸಮರ್ಥಿಸಲು ಗ್ರೀಸ್ ಅನ್ನು ಯೂರೋಪಿನ ಭಾಗವೆಂಬಂತೆ ಭೂಪಟಗಳಲ್ಲಿ ಅಳವಡಿಸಲಾಯಿತು. ಪರಿಣಾಮವಾಗಿ ಯೂರೋಪೇತರ ಖಂಡಗಳಿಂದ ಪ್ರಾಚೀನ ಗ್ರೀಸ್ ಸ್ವೀಕರಿಸಿದ್ದ ಕೊಡುಗೆಗಳನ್ನು ಉದಾಸೀನ ಮಾಡಲಾಯಿತು. ಆಫ್ರಿಕಾ ಖಂಡದ ಈಜಿಪ್ಟಿನಿಂದ, ಏಷ್ಯಾದಿಂದ ಗ್ರೀಕ್ ನಾಗರಿಕತೆ  ಶ್ರೀಮಂತವಾದ ತಥ್ಯವನ್ನು ಮರೆಮಾಚಲಾಯಿತು. ಆದರೆ ಸೀಜರ್ ಹೇಳುವ ಹಾಗೆ ಗ್ರೀಸ್ ಯೂರೋಪಿನ ಭಾಗವಲ್ಲ. ಅದು ಏಷ್ಯಾದ ಭಾಗವಾಗಿದ್ದು ಆಫ್ರಿಕನ್ ನಾಗರಿಕತೆಗಳಿಂದ ಪ್ರಭಾವಿತವಾಗಿತ್ತು. ಅದೇ ರೀತಿ ಸುಮೇರಿಯಾ, ಬ್ಯಾಬಿಲೋನಿಯಾಗಳಿಂದಲೂ ಪ್ರಭಾವಿತವಾಗಿತ್ತು. ಸುಮೇರಿಯಾ ನಾಗರಿಕತೆಗೂ ಸಿಂಧುಕೊಳ್ಳದ ನಾಗರಿಕತೆಗೂ ಹಲವು ಸಾಮ್ಯಗಳಿದ್ದು ಅವು ಪರಸ್ಪರ ಪ್ರಭಾವಿತವಾಗಿದ್ದವು. ಹೀಗೆ ಸಮಾನ ಸಾಂಸ್ಕೃತಿಕ ಕೊಡುಕೊಳೆಗಳಿಂದ ನಿರ್ಮಿತವಾದ ಇತಿಹಾಸವನ್ನು ವಸಾಹತು ಯುಗವು ಅಸಮಾನ ಕೊಡುಕೊಳೆಗಳ ಬುನಾದಿಯ ಮೇಲೆ ಪುನಾ ಕಟ್ಟಿತು.ಗ್ರೀಸ್‌ನ ಸಾಂಸ್ಕೃತಿಕ ಪರಂಪರೆಯನ್ನು ಪಶ್ಚಿಮದ ಸೊತ್ತನ್ನಾಗಿ ಮಾಡಿಕೊಂಡ ಸಂಚಿನ ಬಗ್ಗೆ  ಸೀಜರನ ತಗಾದೆ. ಇದೇ ರೀತಿ ನೊಬೆಲ್ ಬಹುಮಾನ ಪಡೆದ ಕೆರೀಬಿಯಾದ ಮಹಾಕವಿ ಡೆರಿಕ್ ವೆಲ್ಕಾಟ್ ಕೂಡ ಈ ಸಂಚನ್ನು ವಿರೋಧಿಸಿದ. ಗ್ರೀಕ್ ಕವಿ ಹೋಮರನ ಮೂಲ ಗ್ರೀಕ್ ಹೆಸರು ಒಮೆರೊಸ್. ಈ ಹೆಸರಿನಲ್ಲಿ ಮಹಾಕಾವ್ಯ ಬರೆದ ವೆಲ್ಕಾಟ್ ಪ್ರಾಚೀನ ಗ್ರೀಕ್ ಮತ್ತು ಕೆರೀಬಿಯನ್ ಸಂಸ್ಕೃತಿಗಳ ಸಾಮಾನ್ಯ ಅಂಶಗಳ ಬಗ್ಗೆ ಒತ್ತು ನೀಡಿ ಕಪ್ಪುಜನರ ಜೊತೆ ಗ್ರೀಸ್‌ಗೆ ಇದ್ದ ಸಂಬಂಧಗಳನ್ನು ಸೂಚಿಸಿದ. ವಸಾಹತುಶಾಹಿ ನಿರ್ಮಾಣವಾದ ಯೂರೋಪಿನ ಗ್ರೀಕ್ ಕೇಂದ್ರಿತ ಪರಿಕಲ್ಪನೆಗೆ ಆಮೀ ಸೀಜರ್‌ನ ಹಾಗೆಯೇ ಸವಾಲೆಸೆದ. ಇವತ್ತು ಆರ್ಥಿಕವಾಗಿ ದಿವಾಳಿಯಾಗಿರುವ ಗ್ರೀಸ್ ದೇಶವನ್ನು ಯೂರೋಪಿಯನ್ ಒಕ್ಕೂಟದ ಭಾಗವನ್ನಾಗಿ ಇಟ್ಟುಕೊಳ್ಳಲು ನಡೆಸಲಾಗುತ್ತಿರುವ ಸರ್ಕಸ್ಸು ವಸಾಹತು ಕಾಲದ ಕಲ್ಪನೆಯ ಒಂದು ಮುಂಚಾಚು. ಯೂರೋಪು ತನ್ನ ಸ್ವತ್ತೆಂದುಕೊಂಡಿರುವ ವೈಜ್ಞಾನಿಕ ಸಂಸ್ಕೃತಿ ಉಗಮಸ್ಥಾನವೆಂದು ಬಗೆಯಲಾಗಿರುವ ಗ್ರೀಸನ್ನು ಹೇಗೆ ತಾನೇ ಬಿಟ್ಟುಕೊಡಲು ಸಾಧ್ಯ?ಗ್ರೀಸನ್ನು ಯೂರೋಪಿನ ಭಾಗವನ್ನಾಗಿಸಿ ಅದರ ವಿಕಾಸಶೀಲ ಇತಿಹಾಸವನ್ನು ವಿಕಾಸರಹಿತವೆಂದು ಬಗೆಯಲಾದ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕಾದ ನಾಗರಿಕತೆಗಳಿಗಿಂತ ಶ್ರೇಷ್ಠವೆಂದು ತಿಳಿಯುವ ದೃಷ್ಟಿಯನ್ನು ವಸಾಹತೋತ್ತರ ಯುಗದಲ್ಲಿ ಪ್ರಶ್ನಿಸಲೇಬೇಕಾಗಿದೆ. ಯೂರೋಪಿ ನ ಪುನರುತ್ಥಾನಕ್ಕೆ ಕಾರಣವಾದ ಗ್ರೀಕ್ ಜ್ಞಾನಪರಂಪರೆಯನ್ನು ಮಧ್ಯಯುಗದಲ್ಲಿ ಜೋಪಾನವಾಗುಳಿಸಿದವರು ಅರೇಬಿಯಾದ ಮಂದಿ. ಗ್ರೀಕ್ ನಾಗರಿಕತೆ ತನ್ನ ಎರಡನೆ ವಸಂತವನ್ನು ಕಂಡುಕೊಂಡದ್ದು ಈಜಿಪ್ತಿನ ಅಲೆಕ್ಸಾಂಡ್ರಿಯಾದಲ್ಲಿ. ಎಲ್ಲ ನಾಗರಿಕತೆಗಳೂ ವಸಾಹತುಪೂರ್ವ ಯುಗದಲ್ಲಿ ಸಮಾನ ವಿನಿಮಯದ ಮೂಲಕ ಬಾಳಿದವು, ಬೆಳೆದವು. ವಿಶ್ವಸಂಸ್ಕೃತಿಯ ಮಹಾಯಜ್ಞಕ್ಕೆ ಎಲ್ಲ ನಾಗರಿಕತೆಗಳೂ ತಮ್ಮ ಸಮಿತ್ತನ್ನು ನೀಡಿವೆ. ಈಗಿನ ವಿಜ್ಞಾನ ತಂತ್ರಜ್ಞಾನಗಳು ಯೂರೋಪಿನ ಸಾಧನೆಯೆಂಬ ಮಾತೇ ರೇಸಿಸ್ಟ್ ಅಹಂಕಾರಭೂಯಿಷ್ಟ.ನಾಗರಿಕತೆಗಳ ಭಿನ್ನತೆಗಳ ನಡುವಿನ ಏಕರಸತ್ವವನ್ನರಸುವ ಮೂಲಕ ದೆನಿಲೋ ಕೂಡ ವಸಾಹತುಶಾಹಿ ಪರಿಕಲ್ಪನೆಗಳ ಬುಡ ಅಲುಗಿಸಿದ. ಆತನ ಕೃತಿಯಾದ  `ಶಿವ ಅಂಡ್ ದಯೋನಿಸುಸ್: ಗಾಡ್ಸ್ ಆಫ್ ಲವ್ ಅಂಡ್ ಎಕ್ಸ್ಟಸಿ' ಗ್ರೀಸ್ ಮತ್ತು ಭಾರತದ ಅಂತಃಸಂಬಂಧದ ಬಗ್ಗೆ ವಿಚಾರಪ್ರಚೋದಕ ಬೆಳಕು ಚೆಲ್ಲಬಲ್ಲುದಾಗಿದೆ. ಅವನ ದೃಷ್ಟಿಯಲ್ಲಿ ಭಾರತ ಮತ್ತು ಗ್ರೀಸ್‌ಗಳ ಸಾಮಾನ್ಯಾಂಶಗಳು ಮುಖ್ಯವಾಗುತ್ತವೆ. ಇದಕ್ಕೆ ನಿದರ್ಶನವೆಂದರೆ ಶಿವ ಮತ್ತು ದಯೋನಿಸ್ ಕಲ್ಪನೆಗಳು. ಈ ಇಬ್ಬರೂ ಲಿಂಗಾಕಾರದಲ್ಲಿ ಪೂಜಿತರಾದವರು. ನೃತ್ಯ-ನಾಟಕಗಳ ಕಾರಣಕರ್ತರು. ಉನ್ಮತ್ತತೆಯ ಮೂಲಕ ಒಳತಿಳಿವನ್ನು ಪಡೆಯುವವರ ಗುರುಗಳು. ನಾದ-ಲಯಗಳ ಜೊತೆಗಾರರು. ಗ್ರೀಕ್ ಮತ್ತು ಸಂಸ್ಕೃತಗಳೆರಡೂ ಮೂಲತಃ ಇಂಡೋ-ಯೂರೋಪಿಯನ್ ಭಾಷೆಗಳೆಂಬುದರ ಹಿನ್ನೆಲೆಯಲ್ಲಿ ಶಿವ-ದಯೋನಿಸುಸ್‌ರ ಐಕ್ಯತೆಯ ಆಧಾರದ ಮೇಲೆ ಸನಾತನ ಗ್ರೀಕ್ ಮತ್ತು ಸಂಸ್ಕೃತ ನಾಟ್ಯ ಪರಂಪರೆಗಳನ್ನು ಪಾಶ್ಚಿಮಾತ್ಯ ಮತ್ತು ಪೌರ್ವಾತ್ಯ ರಂಗಸಂಸ್ಕೃತಿಗಳೆಂದು ಬಗೆಯದೆ ಇವೆರಡನ್ನೂ ಆರ್ಯ ರಂಗಭೂಮಿಯ ಎರಡು ಕವಲುಗಳೆಂದು ತಿಳಿಯಬಹುದು. ಈ ತೆರನ ದೃಷ್ಟಿಯಿಂದ ಪೂರ್ವ-ಪಶ್ಚಿಮಗಳ ಯಾದೃಚ್ಛಿಕ  ಪರಸ್ಪರ ವಿರೋಧಿ ಪರಿಕಲ್ಪನೆಯ ಜಾಗದಲ್ಲಿ ಭಿನ್ನ ನಾಗರಿಕತೆಗಳ ಏಕರಸತ್ವವನ್ನರಿತು ನಾಗರಿಕತೆಗಳ ಸಮಾನತೆಯನ್ನು ಸ್ಥಾಪಿಸಬಹುದು.ದೆನಿಲೋನ ಶಿವ-ದಯೋನಿಸುಸ್ ಏಕರಸತ್ವ ದ ದೃಷ್ಟಿಗೆ ನೈಜೀರಿಯಾದ ನಾಟಕಕಾರ, ಚಿಂತಕ ವೊಲೆ ಷೊಯಿಂಕಾ ಇನ್ನೊಂದು ಕುತೂಹಲಕಾರಿಯಾದ ಆಯಾಮ ನೀಡಿದ್ದಾನೆ. ಆತ ತನ್ನ ಯೊರೂಬಾ ಬುಡಕಟ್ಟಿನ ದೇವತೆ ಓಗನ್ನನಿಗೂ ಗ್ರೀಕರ ದಯೋನಿಸಸ್ಸಿಗೂ ಇರುವ ಸಾಮ್ಯತೆಗಳನ್ನು ತನ್ನ `ಬ್ಯಾಕ್ಕೇ' ಗ್ರೀಕ್ ನಾಟಕದ ರೂಪಾಂತರದಲ್ಲಿ ಮತ್ತು ತನ್ನ ವಿಮರ್ಶಾ ಬರಹಗಳಲ್ಲಿ ಗುರುತಿಸಿದ್ದಾನೆ.ಶಿವ ಮತ್ತು ಓಗನ್ನರ ಸಾಮ್ಯತೆಯ ಅರಿವೂ ಅವನಿಗಿದೆ. ಏಷಿಯಾ ಮತ್ತು ಆಫ್ರಿಕಾದ ಪ್ರಾಚೀನ ನಾಗರಿಕತೆಗಳನ್ನು ಪೃಥ್ವಿ ಸಂಸ್ಕೃತಿಯೆನ್ನುವ ಆತ, ಹೇಗೆ ಆಕಾಶಗಾಮಿಯಾದ ಯಹೂದಿ ಧರ್ಮಗಳು, ಪರಂಪರೆಗಳು ಪೃಥ್ವಿಸಂಸ್ಕೃತಿಗಳನ್ನು ಭ್ರಷ್ಟಗೊಳಿಸಿದವೆಂಬುದನ್ನು ಚರ್ಚಿಸಿದ್ದಾನೆ. ಮೆಕ್ಸಿಕೋದ ಕವಿ, ಚಿಂತಕ ಆಕ್ತೇವಿಯೋ ಪಾಜ್ ತನ್ನ ಬರಹಗಳಲ್ಲಿ ಇದೇ ರೀತಿಯ ಧ್ವನಿಗಳನ್ನು ಹೊರಡಿಸಿ ಗತ ಮತ್ತು ಸದ್ಯದ ಯೂರೋಕೇಂದ್ರಿತ ಲೋಕದೃಷ್ಟಿಯನ್ನು ಪ್ರಶ್ನಿಸಿದ್ದಾನೆ.ಅರ್ಧ ಭಾರತೀಯ ಆರ್ಧ ಯೂರೋಪಿಗನಾದ ದೆನಿಲೋನಿಂದ ಹೊರಟು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಮಹಾನ್ ಚಿಂತಕರ ಮೂಲಕ ಮುಂದುವರಿದರೆ ಯೂರೋಕೇಂದ್ರಿತ ಲೋಕದೃಷ್ಟಿಗೆ ಇತಿಶ್ರೀ ಹಾಡಬಹುದು. ಅಸಮಾನ ವಿನಿಮಯದ ಗತವನ್ನು ಸಮಾನವಿನಿಮಯದ ವರ್ತಮಾನವಾಗಿ ಬದಲಿಸುವುದು ಯೂರೋಪು ಮತ್ತು ಭಾರತಗಳ ಸಮಕಾಲೀನ ಸಂವಾದಕ್ಕೆ ಪ್ರಸ್ತಾವನೆಯಾಗಬೇಕಿದೆ.ಈ ಆಲೋಚನೆಗಳ ಹರಿಕಾರನಾದ ಹರಶರಣ ದೆನಿಲೋಗೆ ನಾವೆಲ್ಲಾ ಋಣಿಗಳು.ಗೋಳೀಕರಣದ ವಂದಿಮಾಗಧರ ಬಾಯಿಗಳು ಒಂದುಕಡೆ ಏಕರೂಪತೆಯನ್ನು ಇನ್ನೊಂದು ಕಡೆ ಪ್ರತಿಸಂಸ್ಕೃತಿಯ ಅನನ್ಯತೆಯನ್ನು ಕೀರ್ತಿಸುತ್ತಿವೆ. ಮಾನವಸಂಸ್ಕೃತಿಗಳ ಜೀವಾಳವಾದ ವೈವಿಧ್ಯಕ್ಕೆ ಮಾರಕವಾಗಿದೆ ಮಾರ್ಕೆಟ್ಟಿನ ಏಕರೂಪತೆ. ಹಾಗೆಯೇ ಅನನ್ಯತೆಯ ಕಲ್ಪನೆ ಸಂಸ್ಕೃತಿಸಂಸ್ಕೃತಿಗಳ ಕರುಳುಸಂಬಂಧದ ವೈರಿ. ಎಲ್ಲ ಸಂಸ್ಕೃತಿಗಳೂ ಪೂರ್ತಿ ಅನನ್ಯವಾಗಿಬಿಟ್ಟರೆ ಅವುಗಳ ನಡುವೆ ಯಾವ ಸಂಬಂಧಸೂತ್ರವೂ ಉಳಿಯುವುದಿಲ್ಲ. ಹಾಗಿದ್ದರೆ ಭಿನ್ನತೆಗಳನ್ನುಳಿಸಿಕೊಂಡು ನಾಗರಿಕತೆಗಳ ಪರಸ್ಪರ ಆತ್ಮೀಯತೆಯನ್ನು, ಸಮಾನ ವಿನಿಮಯವನ್ನು ಕಾಯ್ದುಕೊಳ್ಳುವ ಉಪಾಯ ಯಾವುದು?ಕಾಶ್ಮೀರ ಶೈವದರ್ಶನದಲ್ಲಿ ಏಕರಸತ್ವವೆಂಬೊಂದು ಪರಿಕಲ್ಪನೆಯುಂಟು. ಸತ್ವದಲ್ಲಿ ಒಂದಾಗಿರುವ ಹಲವು ನಾಗರಿಕತೆಗಳು ಬೇರೆಯೂ ಆಗಿ ವೈವಿಧ್ಯ ಮತ್ತು ವಿಶಿಷ್ಟ ಸೊಬಗುಗಳನ್ನು ಸಾಧಿಸಿವೆ. ಅವುಗಳ ನಡುವೆ ಏಕತೆಯಿಲ್ಲ; ಅಥವಾ ಅವುಗಳಿಗೆ ಪರಿಪೂರ್ಣ ಅನನ್ಯತೆಯೂ ಇಲ್ಲ. ಅವುಗಳ ಸಂಬಂಧ ಏಕರಸತ್ವದಿಂದ ಕೂಡಿದ್ದು. ಇಂಥಾ ಏಕರಸತ್ವವನ್ನು ತಾನೇ ದೆನಿಲೋ ತನ್ನ ಶಿವ ಮತ್ತು ದಯೋನಿಸಸ್‌ರ ಪರಸ್ಪರ ನೆಂಟಸ್ತಿಕೆಯ ಮೂಲಕ ಗುರುತಿಸಲೆಳೆಸಿದ್ದು?

   ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.