ಶುಕ್ರವಾರ, ಏಪ್ರಿಲ್ 16, 2021
22 °C

ಹೊಸ ಅರುಣೋದಯದ ಪ್ರತೀಕ್ಷೆಯಲ್ಲಿ...

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಹೊಸ ಅರುಣೋದಯದ ಪ್ರತೀಕ್ಷೆಯಲ್ಲಿ...

ಭಾರತದ ಪ್ರಜಾಪ್ರಭುತ್ವ ಹೆಚ್ಚು ಕೇಂದ್ರೀಕೃತ ಹಾಗೂ ಪರಿಣಾಮಕಾರಿಯಾಗಬೇಕಾದಲ್ಲಿ ನಾಲ್ಕು ವಿಚಾರಗಳು ಮುಖ್ಯವಾಗುತ್ತವೆ ಎಂದು 2009ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚೆ ಪ್ರಕಟಿಸಲಾದ ನನ್ನ ಪ್ರಬಂಧವೊಂದರಲ್ಲಿ ನಾನು ವಾದಿಸಿದ್ದೆ.ಮೊದಲನೆಯದು, ಏಕೈಕ ಕುಟುಂಬದ ಮೇಲಿನ ಅವಲಂಬನೆಯಿಂದ ಕಾಂಗ್ರೆಸ್ ಹೊರಬರಬೇಕು. ರಾಜಕೀಯದಲ್ಲಿರಲು ರಾಹುಲ್ ಗಾಂಧಿಗೆ ಅರ್ಹತೆ ಇದೆ. ಆದರೆ ಅವರು ಅಥವಾ ಅವರ ತಾಯಿ ಮಾತ್ರ ತಮ್ಮ ಪಕ್ಷದಲ್ಲಿ ಹೆಚ್ಚು ಸಶಕ್ತರಾದ ವ್ಯಕ್ತಿಗಳು ಎಂದು ಭಾವಿಸಿಕೊಳ್ಳುವುದು ತಪ್ಪು.ಎರಡನೆಯದು, ಭಾರತೀಯ ಜನತಾ ಪಕ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲಿನ ಅವಲಂಬನೆಯಿಂದ ಹೊರಬರಬೇಕು.  ಧರ್ಮದ ಕುರಿತಂತೆ ಸೂಚ್ಯವಾದ (ಉಗ್ರವಲ್ಲದ) ದೃಷ್ಟಿಕೋನಗಳಿರುವ  ಸಂಪ್ರದಾಯಪ್ರೀತಿಯ ಪಕ್ಷವಾಗಿ ತನ್ನನ್ನು ತಾನು  ಮರುಕಂಡುಕೊಳ್ಳಬೇಕು. ಆ ಮೂಲಕ  ಅದು ಇಸ್ಲಾಮಿಕ್ ಜಿಹಾದಿಗಳಂತಾಗದೆ ಜರ್ಮನ್ ಕ್ರಿಶ್ಚಿಯನ್ ಡೆಮಾಕ್ರಟ್‌ಗಳಂತಾಗಬೇಕು.ಮೂರನೆಯದು, ಉದ್ಯಮಶೀಲತೆಯ ಆವಿಷ್ಕಾರಗಳು  ಹಾಗೂ ಆಧುನಿಕ ತಂತ್ರಜ್ಞಾನಗಳ ಭರವಸೆ ಬಗ್ಗೆ  ಕಮ್ಯುನಿಸ್ಟ್ ಪಕ್ಷಗಳು ಹೆಚ್ಚು ಜಾಗೃತಗೊಳ್ಳಬೇಕು. ಲೆನಿನ್ ಹಾಗೂ ಸ್ಟಾಲಿನ್‌ರ ತೀವ್ರತರ ಪ್ರಜಾಪ್ರಭುತ್ವ ವಿರೋಧಿ ತತ್ವಗಳಿಗೆ ಋಣಿಯಾಗಿರುವುದನ್ನು ಅವು ಕಡಿಮೆ ಮಾಡಬೇಕು. ಇದರ ಜೊತೆಗೇ ಏಕೈಕ ಪಕ್ಷವಾಗಿ ಸಿಪಿಎಂ ಹಾಗೂ ಸಿಪಿಐ ವಿಲೀನಗೊಳ್ಳುತ್ತವೆ ಹಾಗೂ ಸಶಸ್ತ್ರ ಹೋರಾಟಗಳನ್ನು ತೊರೆದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಪ್ರವೇಶ ಪಡೆಯುವಂತೆ ಮಾವೊವಾದಿಗಳ ಮನ ಒಲಿಸಲಾಗುತ್ತದೆ ಎಂಬುದೂ ನನ್ನ ಆಶಯವಾಗಿತ್ತು.ನಾಲ್ಕನೆಯದು ಸಂಖ್ಯೆಯಲ್ಲಿ ಹಾಗೂ ಪ್ರಭಾವದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವಂತಹ ಮಧ್ಯಮವರ್ಗ ತನ್ನದೇ ರಾಷ್ಟ್ರೀಯ ಪಕ್ಷವೊಂದನ್ನು ಆರಂಭಿಸಬಹುದು. ಇದು ಜಾತಿ, ಧರ್ಮ ಅಥವಾ ಜನಾಂಗವನ್ನು ಹೊರತು ಪಡಿಸಿ ಎಲ್ಲರಿಗೂ ಮುಕ್ತವಾಗಿದ್ದು ರಾಷ್ಟ್ರಕ್ಕೆ ಪ್ರಗತಿ ಪರ ಕಾರ್ಯಸೂಚಿ ಹೊಂದಿರುವಂತಹದ್ದಾಗಿರಬೇಕು.ಈ `ಅಪೇಕ್ಷೆಗಳ ಪಟ್ಟಿ~ಯನ್ನು ಸಹಜವಾಗಿ ನಿರೀಕ್ಷೆಗಳು ಎನ್ನುವುದಕ್ಕಿಂತ ಅಭಿಲಾಷೆಗಳೆಂಬ ಅರ್ಥದಲ್ಲಿ ಆಗ ನೀಡಲಾಗಿತ್ತು. ಮೂರು ವರ್ಷಗಳ ನಂತರ, ಆಗಿನಂತೆಯೇ ಈಗಲೂ ಈ ಅಭಿಲಾಷೆಗಳು ಅವಾಸ್ತವವಾಗಿಯೇ ಕಾಣಿಸುತ್ತಿವೆಯೆ? ಮೊದಲಿಗೆ, ಕಾಂಗ್ರೆಸ್‌ನ ಸ್ಥಿತಿಗತಿ ಪರಿಗಣಿಸಿ. ಗಾಂಧಿ- ನೆಹರೂ ಬಿಗಿಮುಷ್ಟಿ ಅದಕ್ಕೆ ಹೆಚ್ಚು ತೀವ್ರವಾಗಿ  ಹಾನಿ ಮಾಡಿದೆ ಎಂಬುದು  ಈ ಹಿಂದೆಂದೆಗಿಂತಲೂ ಈಗ ಸ್ಪಷ್ಟ.  ಪ್ರತಿ ಪೀಳಿಗೆಯಲ್ಲಿ ಮೊದಲ ಕುಟುಂಬದ ದಿವ್ಯಶಕ್ತಿಯ ಆಕರ್ಷಣೆ ಕುಂದುತ್ತಾ ಸಾಗಿದೆ. 2004 ಹಾಗೂ 2009ರಲ್ಲಿ ವ್ಯಕ್ತವಾದಂತೆ, ಸೋನಿಯಾ ಗಾಂಧಿ ರಾಷ್ಟ್ರದಾದ್ಯಂತ ಚುನಾವಣೆಗಳಲ್ಲಿ ಮತಗಳನ್ನು ಸೆಳೆಯುವ ಆಕರ್ಷಣೆ ಹೊಂದಿದ್ದರು. ಆದರೆ ಒಂದಾನೊಂದು ಕಾಲದಲ್ಲಿ ಅವರ ಪತಿ ಹಾಗೂ ಅತ್ತೆ ಹೊಂದಿದ್ದಂತಹ ಆಕರ್ಷಣೆಗೆ ಹೋಲಿಸಿದರೆ ಇದು ಕಡಿಮೆಯೇ. ಉತ್ತರ ಪ್ರದೇಶದ ಚುನಾವಣಾ ಫಲಿತಾಂಶಗಳು ತೋರಿಸಿದಂತೆ, ಮತಗಳನ್ನು ಸೆಳೆಯುವಲ್ಲಿ ಆಕೆಯ ಪುತ್ರನ ಆಕರ್ಷಣೆ ತಾಯಿಗಿಂತ ಇನ್ನೂ ಕಡಿಮೆ.ಎಂದರೆ, ಚುನಾವಣೆಗಳನ್ನು ಗೆಲ್ಲಲು ಕಾಂಗ್ರೆಸ್‌ಗೆ  ನೆಹರೂ-ಗಾಂಧಿ ಅಗತ್ಯ ಎಂಬಂತಹ ವಿಚಾರವೇ ಮಿಥ್ಯೆ ಎಂದಾಗುತ್ತದೆ. ಇದರ ಜೊತೆಗೇ,  ಪರಿಣಾಮಕಾರಿಯಾಗಿ ಆಡಳಿತ ನಡೆಸುವಂತಹ ಪಕ್ಷದ ಸಾಮರ್ಥ್ಯಕ್ಕೂ ಕುಟುಂಬದ ಸಾರ್ವಭೌಮತ್ವ ಹಾನಿ ಮಾಡಿದೆ.  ಭಾರತ ಯುವ ರಾಷ್ಟ್ರ. ಈಗ ಐವತ್ತು ವರ್ಷಕ್ಕಿಂತ ಕಡಿಮೆ ಇರುವವರ ಮೂಲಕ ಅದರ ಭವಿಷ್ಯ ನಿರ್ಧರಿತವಾಗಬೇಕು. ಕೇಂದ್ರದಲ್ಲಿ   ಕೆಲವು ಸಮರ್ಥ ಕಾಂಗ್ರೆಸ್ ನಾಯಕರಿದ್ದಾರೆ.ಆದರೆ ಈ ವ್ಯಕ್ತಿಗಳಿಗೆ ಉನ್ನತ ಸ್ಥಾನಗಳನ್ನು ನೀಡುವುದು ಸಾಧ್ಯವಾಗುತ್ತಿಲ್ಲ. ಏಕೆಂದರೆ  ಇವರು ರಾಹುಲ್‌ಗಾಂಧಿಯನ್ನು ಮೀರಿಸಬಹುದೆಂಬ ಭೀತಿ ಆವರಿಸಿದೆ. ರಾಜ್ಯಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ, ವಿಧಾನಸಭಾ ಚುನಾವಣೆಗಳಿಗೆ ಮುಂಚೆ ಏಕ ನಾಯಕನನ್ನು ಬಿಂಬಿಸುವುದು ಕಾಂಗ್ರೆಸ್‌ಗೆ  ಚುನಾವಣೆ ದೃಷ್ಟಿಯಿಂದ ಒಳ್ಳೆಯದಾಗಿರುತ್ತದೆ. ಆದರೆ ಕಾಂಗ್ರೆಸ್ ಇದನ್ನು ಮಾಡುವುದಿಲ್ಲ. ಏಕೆಂದರೆ  ಇದು,  `ಮೊದಲ ಕುಟುಂಬ~ದ ಪ್ರತಿಷ್ಠೆಯನ್ನು ಕಡಿಮೆ ಮಾಡುವಂತಹದ್ದು. ಇದರಿಂದ ನಿಜಕ್ಕೂ ಗೆಲ್ಲಬೇಕಾಗಿದ್ದ ಅನೇಕ ರಾಜ್ಯ ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿದೆ.ಹೀಗಾಗಿ, ದೀರ್ಘಾವಧಿಯಲ್ಲಿ ತನ್ನ ಒಳ್ಳೆಯದಕ್ಕಾಗಿಯೇ  ನೆಹರೂ - ಗಾಂಧಿ ಕುಟುಂಬದಾಚೆಗೆ  (ಹಾಗೂ ಸ್ವತಂತ್ರವಾಗಿ)  ಪಕ್ಷದ ಭವಿಷ್ಯವನ್ನು ಕುರಿತು ಕಾಂಗ್ರೆಸ್  ಆಲೋಚಿಸಬೇಕಿದೆ.ಮುಂದೆ ಬಿಜೆಪಿ ವಿಚಾರಕ್ಕೆ ಬರುವುದಾದರೆ, ಪಕ್ಷದಲ್ಲಿ ಆರ್ ಎಸ್ ಎಸ್  ಪ್ರಭಾವ ಒಂದಿಷ್ಟು ಕಡಿಮೆಯಾಗಿರಬಹುದು. ನಿಜ ಹೇಳಬೇಕೆಂದರೆ, ಆರ್ ಎಸ್ ಎಸ್ ಬೆಂಬಲದಿಂದಲೇ ನಿತಿನ್ ಗಡ್ಕರಿ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ. ಕಳೆದ ದಶಕದಲ್ಲಿ ಬಿಜೆಪಿಯಲ್ಲಿ ನಿಜವಾದ ಬದಲಾವಣೆ ಎಂದರೆ ಬಲಶಾಲಿಗಳಾಗುತ್ತಿರುವ ಅವರ ಮುಖ್ಯಮಂತ್ರಿಗಳು.1980 ಹಾಗೂ 1990ರ ದಶಕಗಳಲ್ಲಿ  ಬಿಜೆಪಿಯ ಬಲಿಷ್ಠ  ನಾಯಕರುಗಳಾದ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಹಾಗೂ ಮುರಳಿ ಮನೋಹರ ಜೋಷಿ ಅಂತಹವರು ದೆಹಲಿಯಿಂದ ಕಾರ್ಯ ನಿರ್ವಹಿಸುತ್ತಿದ್ದರು. ಅಭ್ಯಾಸಬಲದಿಂದ ಅಥವಾ ಸೋಮಾರಿತನದಿಂದ ಈಗಲೂ ದೆಹಲಿ ಮಾಧ್ಯಮ, ಅರುಣ್ ಜೇಟ್ಲಿ ಹಾಗೂ ಸುಷ್ಮಾ ಸ್ವರಾಜ್‌ರಂತಹ ದೆಹಲಿ ಮೂಲದ ಬಿಜೆಪಿ ನಾಯಕರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ. ಆದರೆ ಮುಂದಿನ ಸಾರ್ವತ್ರಿಕ ಚುನಾವಣೆ ಬರಲಿ. ಬಿಜೆಪಿ ಹಣೆಬರಹವನ್ನು ಅವರು ನಿರ್ಧರಿಸುವುದಿಲ್ಲ. ಶಿವರಾಜ್ ಸಿಂಗ್ ಚೌಹಾಣ್, ರಮಣಸಿಂಗ್ ಹಾಗೂ ನರೇಂದ್ರ ಮೋದಿಯಂತಹ ದೆಹಲಿ ಹೊರಗಿರುವ ನಾಯಕರುಗಳೇ ನಿರ್ಣಾಯಕರಾಗುತ್ತಾರೆ.ಈ ಬಿಜೆಪಿ ಮುಖ್ಯಮಂತ್ರಿಗಳು ಆರ್ ಎಸ್ ಎಸ್‌ಗೆ  ಹೇಗೆ ಮುಖಾಮುಖಿಯಾಗುತ್ತಾರೆ? ನನಗೆ ಅನಿಸುವುದೆಂದರೆ ಶಿವರಾಜ್ ಸಿಂಗ್ ಚೌಹಾಣ್ ಸಂಘದಿಂದ ಭಾರಿಯಾಗಿಯೇ ಉಪಕೃತರಾಗಿದ್ದಾರೆ.  ರಮಣ್ ಸಿಂಗ್ ಸ್ವಲ್ಪ ಕಡಿಮೆ.  ನರೇಂದ್ರ ಮೋದಿ ಆರ್ ಎಸ್ ಎಸ್‌ನಿಂದ ಸ್ವತಂತ್ರವಾಗಿರಲು ಬಯಸಿದ್ದಾರೆ. ಹೀಗಿದ್ದೂ, ಆರ್ ಎಸ್ ಎಸ್ ಜೊತೆಗಿನ ಸಂಬಂಧಗಳಲ್ಲಿ ವ್ಯತ್ಯಾಸಗಳು ಎಂದರೆ, ಭಾರತದ  ಎಲ್ಲಾ ಧಾರ್ಮಿಕತೆಗಳನ್ನೂ ಒಳಗೊಳ್ಳುವಿಕೆಯ ದೃಷ್ಟಿಯಲ್ಲಿ ಈ ನಾಯಕರು ನಂಬಿಕೆ ಇರಿಸಿದ್ದಾರೆ ಎಂದೇನಿಲ್ಲ. ಈ ಎಲ್ಲಾ ಮೂವರಿಗೂ ರಾಷ್ಟ್ರದ ತಿರುಳನ್ನು ವಿವರಿಸುವುದೇ ಹಿಂದೂವಾದ.  ಈ ಅರ್ಥದಲ್ಲಿ ಬಿಜೆಪಿ ಯ ಮೇಲೆ ಆರ್ ಎಸ್ ಎಸ್‌ನ  ಪ್ರಭಾವ  ಸ್ವಲ್ಪ ಮಟ್ಟಿಗೆ ಕ್ಷೀಣಿಸಿದ್ದರೂ,  ಮೃದು ಹಿಂದುತ್ವಕ್ಕಿಂತಲೂ ಉಗ್ರ ಹಿಂದೂತ್ವದತ್ತಲೇ ಪಕ್ಷ ಈಗಲೂ ವಾಲಿಕೊಂಡಿದೆ.2009ರ ಸಾರ್ವತ್ರಿಕ ಚುನಾವಣೆಗಳಲ್ಲಿ, ಎಡ ಪಕ್ಷಗಳ ಕಾರ್ಯ ನಿರ್ವಹಣೆ ಚೆನ್ನಾಗಿರಲಿಲ್ಲ. ಎರಡು ವರ್ಷಗಳ ನಂತರ ಕೇರಳ ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳಲ್ಲೂ ಅಧಿಕಾರ ಕಳೆದುಕೊಂಡರು. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿನ ಸೋಲು, ಪಕ್ಷದ ನಾಯಕರ ಒಳಗೇ  ಆತ್ಮಾವಲೋಕನಕ್ಕೆ ದಾರಿ ಮಾಡಿಕೊಟ್ಟಿದೆ. ಪಶ್ಚಿಮ ಬಂಗಾಳದಲ್ಲಿನ ಸೋಲಿನ ನಂತರ,  `ಕಾರವಾನ್~ ಮ್ಯಾಗ್‌ಜಿನ್‌ನಲ್ಲಿ ಪ್ರಕಾಶ್ ಕಾರಟ್ ಆತ್ಮಾವಲೋಕನದ ಲೇಖನ ಪ್ರಕಟಿಸಿದರು. ಎರಡು ವಿಚಾರಗಳಿಗಾಗಿ ಅದು ತೀರಾ ಮುಖ್ಯವಾದುದಾಗಿತ್ತು. ಕಮ್ಯುನಿಸ್ಟ್ ಪಕ್ಷದ ಪ್ರಮುಖ ನಾಯಕ ತಮ್ಮ ಪಕ್ಷ ಮಾಡಿದ ತಪ್ಪುಗಳನ್ನು  ಒಪ್ಪಿಕೊಳ್ಳುವಂತಹದ್ದು. (ಈ ವಿಚಾರದಲ್ಲಿ  ಮಹಿಳೆ ಹಾಗೂ ಪರಿಸರ ಸುಸ್ಥಿರತೆಯ ಕಾಳಜಿಗಳನ್ನು ಗಮನಕ್ಕೆ ತೆಗೆದುಕೊಳ್ಳುವಲ್ಲಿನ ವೈಫಲ್ಯ).  ಎರಡನೆಯದು  ಕಟ್ಟಾ ಕಮ್ಯುನಿಸ್ಟರು ತಿರಸ್ಕಾರದಿಂದ ಕಾಣುವಂತಹ ಬೂರ್ಜ್ವಾ  ಮ್ಯಾಗಜಿನ್‌ನಲ್ಲಿ  ಈ ವಿಚಾರ ಪ್ರಕಟವಾಗಿರುವಂತಹದ್ದು.ಕಮ್ಯುನಿಸ್ಟರು ತಮ್ಮಳಗೆ ಭಾರತದಲ್ಲಿನ ಅತಿ ಹೆಚ್ಚಿನ ಬುದ್ಧಿವಂತ ರಾಜಕಾರಣಿಗಳನ್ನು ಹೊಂದಿದ್ದಾರೆ. ಹಾಗೆಯೇ ಅವರಲ್ಲಿರುವವರು ಕಡಿಮೆ ಭ್ರಷ್ಟರು. 21ನೇ ಶತಮಾನದ ಭಾರತಕ್ಕೆ ಅಪ್ರಸ್ತುತವಾಗಿದ್ದರೂ, ಈವರೆಗೆ ಸಿಪಿಎಂ ಗೆ ಮಾರ್ಗದರ್ಶನ ನೀಡಿರುವಂತಹ 19, 20ನೇ ಶತಮಾನದ ಯೂರೋಪ್‌ನ ಅನುಭವಗಳಿಂದ ರೂಪುಗೊಂಡ ಆರ್ಥಿಕ - ರಾಜಕೀಯ ತತ್ವಗಳ ಕುರಿತ ಮರು ಅವಲೋಕನದ ಜೊತೆಗೇ ಕಾರಟ್‌ರ ತಪ್ಪೊಪ್ಪಿಗೆಯ ಕ್ರಿಯೆಯನ್ನು (ಭಾಗಶಃ ಎಂದಾಗಿದ್ದರೂ) ಪಕ್ಷದ ವಲಯಗಳಲ್ಲಿ  ಅನುಸರಿಸುವಂತಾಗಲಿ ಎಂಬುದು ಜನರ ನಿರೀಕ್ಷೆ.ಕಡೆಯದಾಗಿ ನನ್ನ ನಾಲ್ಕನೇ ಆಶಯವಾಗಿದ್ದ ಒಟ್ಟಾರೆಯಾಗಿ ಹೊಸ ರಾಷ್ಟ್ರೀಯ ಪಕ್ಷವೊಂದರ ಉದಯದ ವಿಚಾರವೇನಾಗಿದೆ?  2009ರಲ್ಲಿ ನಾನು ಇದನ್ನು  ಪ್ರಸ್ತಾಪಿಸಿದ್ದಾಗ ಅಣ್ಣಾ ಹಜಾರೆ ಅವರು ಮಹಾರಾಷ್ಟ್ರದ ತಮ್ಮ ಗ್ರಾಮಕ್ಕಷ್ಟೇ ಸೀಮಿತವಾಗಿದ್ದರು. ಬಹುತೇಕ ಭಾರತೀಯರ ದಿನ ನಿತ್ಯದ ಬದುಕಿನಲ್ಲಿ ಭ್ರಷ್ಟಾಚಾರ ಎಂಬ ಸಮಸ್ಯೆ ಕಾಡುತ್ತಿದ್ದರೂ ಅದು ನಿಜಕ್ಕೂ ರಾಷ್ಟ್ರವ್ಯಾಪಿ ಚರ್ಚೆ ಹಾಗೂ ವಿವಾದಗಳ ಕೇಂದ್ರಬಿಂದುವಾಗಿರಲಿಲ್ಲ. ಆದರೆ 2011ರ ಏಪ್ರಿಲ್ ಹಾಗೂ ಆಗಸ್ಟ್‌ನಲ್ಲಿ ನವದೆಹಲಿಯಲ್ಲಿ ಹಜಾರೆಯವರ ಉಪವಾಸ ಸತ್ಯಾಗ್ರಹಗಳು, ಸ್ಪೆಕ್ಟ್ರಮ್ ಹಾಗೂ ಕಾಮನ್‌ವೆಲ್ತ್ ಕ್ರೀಡಾ ಹಗರಣಗಳ ಕುರಿತಂತೆ ಮಾಧ್ಯಮ ವರದಿಗಳು ಹಾಗೂ ಸಿಎಜಿ ಬಯಲುಗೊಳಿಸಿದ ಅಂಶಗಳು - ಈ ಎಲ್ಲವನ್ನೂ ಈಗ ಬದಲಿಸಿವೆ.ಆ ಉಪವಾಸ ಸತ್ಯಾಗ್ರಹಗಳಿಂದ ಹುಟ್ಟಿದ ಆಂದೋಲನ ಈಗ ರಾಜಕೀಯ ಪಕ್ಷವಾಗಲು ಹೊರಟಿದೆ. ಅದಕ್ಕಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವೊಂದು (ಎಷ್ಟೆಂಬುದು ಸ್ಪಷ್ಟವಾಗಿಲ್ಲ) ಸೀಟುಗಳಿಗಾಗಿ ಸ್ಪರ್ಧಿಸುವುದಾಗಿಯೂ ಹೇಳಿಕೊಳ್ಳಲಾಗಿದೆ. ನಿಜಕ್ಕೂ ಅಗತ್ಯವಾದಂತಹ ಈ ಕ್ರಮ,  ಕಾಂಗ್ರೆಸ್ ಹಾಗೂ ಬಿಜೆಪಿ ಇನ್ನು ಸ್ವಸಂತೃಪ್ತಿಯಲ್ಲಿ ತೇಲಾಡಿಕೊಂಡಿರುವುದಕ್ಕೆ ಬಿಡುವುದಿಲ್ಲ. ಹೀಗಿದ್ದೂ, ಏನಾದರೂ ಮುಖ್ಯವಾದ ಪರಿಣಾಮವನ್ನು ಬೀರುವುದಕ್ಕಾಗಿ, ಒಬ್ಬೊಬ್ಬರೇ ರಾಜಕಾರಣಿಗಳ ವಿರುದ್ಧ ಆರೋಪಗಳನ್ನು ಮಾಡುತ್ತಾ ಕೂರುವುದಕ್ಕಿಂತ ಹೆಚ್ಚಿನ ಕ್ರಮಗಳತ್ತ ಈ ಹೊಸ ಪಕ್ಷದ ನಾಯಕರು ಆಲೋಚಿಸಬೇಕು. ನಕಾರಾತ್ಮಕತೆಯ ಅಂಶಗಳನ್ನೇ ಆಧರಿಸಿದ ಆಂದೋಲನ ಹೆಚ್ಚು ಕಾಲ ಬಾಳದು.ವ್ಯಾಪಕವಾದ ಚುನಾವಣಾ ಕ್ಷೇತ್ರವನ್ನು ಆಕರ್ಷಿಸಲು ಹೊಸ ಪಕ್ಷ ಕೆಲವೊಂದು ಸ್ಪಷ್ಟ, ವಾಸ್ತವಿಕ ನೀತಿಗಳನ್ನು ನೀಡುವುದು ಅಗತ್ಯ. ಇವು ಬಡತನ ಹಾಗೂ ಭೀತಿಯಿಂದ ಮುಕ್ತವಾದ ಘನತೆಯುಕ್ತ ಬದುಕಿಗಾಗಿ ನಾಗರಿಕರ ಹೆಚ್ಚುತ್ತಿರುವ ಆಶಯಗಳಿಗೆ ಉತ್ತರವಾಗಬೇಕು. ಸದ್ಯಕ್ಕೆ, ಅದರ ನಾಯಕರು ವ್ಯಕ್ತಪಡಿಸುತ್ತಿರುವ ನೀತಿಗಳು ಅಪಾಯಕಾರಿಯಾದ ಅಗ್ಗದ ಜನಪ್ರಿಯತೆಯ ಕ್ರಮಗಳತ್ತ ವಾಲುವಂಥಹವು (ವಿದ್ಯುತ್ ಬಿಲ್‌ಗಳನ್ನು ಸುಟ್ಟು ಹಾಕುವಂತಹ ರೀತಿಯದು). ಚುನಾವಣಾ ಕ್ಷೇತ್ರಕ್ಕೆ ತಮ್ಮದೇ ರೀತಿಯಲ್ಲಿ ಪ್ರವೇಶಿಸಿರುವ `ಲೋಕ್‌ಸತ್ತಾ~ದಂತಹ ಗುಂಪುಗಳತ್ತ ಈ ಪಕ್ಷ  ನೋಡಬಹುದು. ದೆಹಲಿ ಕೇಂದ್ರಿತ ಹಾಗೂ ವ್ಯಕ್ತಿ ಕೇಂದ್ರಿತ ಆಂದೋಲನಗಳು ಅಲ್ಪಾವಧಿಯಲ್ಲಿ ಮಾಧ್ಯಮ ಗಮನವನ್ನೇನೊ ಸೆಳೆದುಕೊಳ್ಳಬಹುದು. ಆದರೆ ಇದು ಧನ ಸಂಗ್ರಹ,  ಮೈತ್ರಿ ನಿರ್ಮಾಣ,  ರಾಜಕಾರಣಿಗಳತ್ತ ಕೆಸರೆರಚಾಟಕ್ಕಿಂತ (ಭ್ರಷ್ಟರ ವಿರುದ್ಧ) ಮನೆಮನೆಗಳಲ್ಲಿ ಪ್ರಚಾರಾಂದೋಲನದಂತಹ ಚುನಾವಣಾ ರಾಜಕಾರಣದ ಕಟು ವಾಸ್ತವಗಳಿಗೆ ಪಕ್ಷವನ್ನು ಸಜ್ಜುಗೊಳಿಸದೇ ಹೋಗಬಹುದು.ಒಟ್ಟಾರೆಯಾಗಿ ನನ್ನ ಈ ಆಶಯಗಳ ಪಟ್ಟಿ 2009ರ ಮೇನಲ್ಲಿ ಮೊದಲು ಮಂಡಿಸಿದ್ದಾಗ ಇದ್ದದ್ದಕ್ಕಿಂತ  ಅಕ್ಟೋಬರ್ 2012ರಲ್ಲಿ ಒಂದಿಷ್ಟು ಕಡಿಮೆ ಅವಾಸ್ತವಿಕವಾಗಿ ಕಾಣುತ್ತಿದೆ. ವಂಶಪಾರಂಪರ್ಯ ಆಡಳಿತ ಹಿನ್ನೆಲೆಗೆ ಸರಿದಿದೆ. ಆರ್‌ಎಸ್‌ಎಸ್ ನಿಷ್ಕ್ರಿಯವಾಗಿದೆ, ಎಡಪಕ್ಷಗಳು ಆತ್ಮನಿರೀಕ್ಷಣೆಯಲ್ಲಿ ತೊಡಗಿವೆ. ಹಾಗೂ ಹೊಸ ಮಧ್ಯಮವರ್ಗದ, ಜಾತಿಗಳನ್ನು ಮೀರಿದ ಪಕ್ಷ ಉದಯವಾಗಿದೆ. ನಿಜ ಹೇಳಬೇಕೆಂದರೆ ಹೊಸ ಅರುಣೋದಯದ ಭರವಸೆ ಕಾಣಿಸುತ್ತಿಲ್ಲ.  ಬಿಡುಗಡೆಯ ಭವಿಷ್ಯವೂ ಇಲ್ಲ. ಆದರೆ ಭಾರತದ ಪ್ರಜಾಪ್ರಭುತ್ವವಾದಿಗಳು  ಪ್ರತೀಕ್ಷೆಯನ್ನು ಕಡಿಮೆ ಮಟ್ಟದಲ್ಲೇ ಇಟ್ಟುಕೊಳ್ಳುವುದನ್ನು ಕಲಿತಿದ್ದಾರೆ.  ಮಹಾತ್ಮಾಗಾಂಧಿಯವರು ಒಮ್ಮೆ ಹೇಳಿದಂತೆ, ಒಂದು  ಸಲಕ್ಕೆ ಒಂದೇ ಹೆಜ್ಜೆ  ಇಡೋಣ. 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.