ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶಿಕ್ಷಾ ಭಯವಿಲ್ಲದ ಸಂಸ್ಕೃತಿ’ಯಲ್ಲಿ ದನಿ ಎತ್ತುವ ಸವಾಲು

Last Updated 2 ನವೆಂಬರ್ 2015, 19:40 IST
ಅಕ್ಷರ ಗಾತ್ರ

ಪತ್ರಕರ್ತರ ಮೇಲೆ ನಡೆಸುವ ಅಪರಾಧ ಪ್ರಕರಣಗಳಿಗೆ ಶಿಕ್ಷಾಭಯ ಇಲ್ಲದಿರುವುದನ್ನು ಅಂತ್ಯಗೊಳಿಸುವ ಅಂತರರಾಷ್ಟ್ರೀಯ ದಿನವನ್ನು (ನವೆಂಬರ್ 2) ಜಾಗತಿಕ ಮಟ್ಟದಲ್ಲಿ ನಿನ್ನೆಯಷ್ಟೇ ಆಚರಿಸಲಾಗಿದೆ. ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯಗಳನ್ನು ನಡೆಸುವಂತಹ ಅಪರಾಧಗಳು ವಿಶ್ವದಾದ್ಯಂತ ಹೆಚ್ಚಾಗುತ್ತಿವೆ. ಕಳೆದ ದಶಕದಲ್ಲಿ ವಿಶ್ವದಾದ್ಯಂತ 700 ಪತ್ರಕರ್ತರು ತಮ್ಮ ವರದಿಗಾರಿಕೆಗಾಗಿ ಹತ್ಯೆಯಾಗಿದ್ದಾರೆ ಎಂದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬಹುದು. ಎಂದರೆ ಪ್ರತಿ ಐದು ದಿನಗಳಿಗೆ ಒಂದು ಸಾವು ಸಂಭವಿಸಿದೆ. ಆದರೆ 10 ಪ್ರಕರಣಗಳಲ್ಲಿ 9ಕ್ಕೆ ಏನೂ ಶಿಕ್ಷೆಯಾಗುವುದಿಲ್ಲ. ಹೀಗಾಗಿ ಶಿಕ್ಷೆಯ ಭಯ ಇಲ್ಲದಿರುವುದು ಇನ್ನಷ್ಟು ಹತ್ಯೆಗಳಿಗೆ ಕಾರಣವಾಗುತ್ತದೆ.

ಇದರ ಗಂಭೀರತೆಯನ್ನು ವಿಶ್ವಸಂಸ್ಥೆ ಪರಿಗಣಿಸಿದೆ. ಆದರೆ ಈ ಬಗ್ಗೆ ಜಾಗೃತಿ ಮೂಡಿಸುವುದು ಹೇಗೆ? ಇದಕ್ಕಾಗಿಯೇ ನವೆಂಬರ್ 2ನ್ನು, ಪತ್ರಕರ್ತರ ಮೇಲಿನ ಅಪರಾಧಗಳಿಗೆ ಶಿಕ್ಷಾ ಭಯ ಇಲ್ಲದಿರುವುದನ್ನು ಅಂತ್ಯಗೊಳಿಸುವ ಅಂತರರಾಷ್ಟ್ರೀಯ ದಿನವಾಗಿ ಘೋಷಿಸಲಾಯಿತು. 2013ರ ನವೆಂಬರ್ 2ರಂದು ಆಫ್ರಿಕಾದ  ಮಾಲಿಯಲ್ಲಿ ಇಬ್ಬರು ಫ್ರೆಂಚ್ ಪತ್ರಕರ್ತರನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಅವರ ಸ್ಮರಣಾರ್ಥ ಈ ದಿನಾಂಕವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.

ಮಾಧ್ಯಮದಲ್ಲಿ ಕೆಲಸ ಮಾಡುವವರ ವಿರುದ್ಧದ ಎಲ್ಲಾ  ಆಕ್ರಮಣಗಳು ಹಾಗೂ ಹಿಂಸಾಚಾರವನ್ನು ವಿಶ್ವಸಂಸ್ಥೆ  ಖಂಡಿಸುತ್ತದೆ. ಯಾವುದೇ ಹಸ್ತಕ್ಷೇಪವಿಲ್ಲದೆ ತಮ್ಮ ಕೆಲಸ ಕಾರ್ಯಗಳನ್ನು ಸ್ವತಂತ್ರವಾಗಿ ಮುಂದುವರಿಸಲು ಅನುಕೂಲವಾಗುವಂತೆ ಸುರಕ್ಷಿತ ಹಾಗೂ ಅನುಕೂಲಕರ ಪರಿಸರವನ್ನು ಪತ್ರಕರ್ತರಿಗೆ ಸೃಷ್ಟಿಸಬೇಕಾದುದು ಸರ್ಕಾರಗಳ ಕರ್ತವ್ಯ ಎಂದು ವಿಶ್ವಸಂಸ್ಥೆ ಕರೆ ನೀಡಿದೆ. ಶಿಕ್ಷಾ ಭಯವೇ ಇಲ್ಲದ ಸದ್ಯದ ಸಂಸ್ಕೃತಿಯನ್ನು ಪ್ರತಿರೋಧಿಸುವ ನಿರ್ದಿಷ್ಟ ಕ್ರಮಗಳನ್ನು ಅನುಷ್ಠಾನಗೊಳಿಸಬೇಕೆಂದು ಸದಸ್ಯ ರಾಷ್ಟ್ರಗಳಿಗೆ ವಿಶ್ವಸಂಸ್ಥೆ  ಆಗ್ರಹಪಡಿಸಿದೆ.

ಪತ್ರಕರ್ತರ ಸುರಕ್ಷತೆ ಯಾಕೆ ಮುಖ್ಯ ಎಂಬುದನ್ನು ನಾವು ಗಮನಿಸಬೇಕು. ಪತ್ರಕರ್ತರ ಮೇಲಿನ ಅಪರಾಧಗಳಿಗೆ ಸಂಬಂಧಿಸಿದಂತೆ ಶಿಕ್ಷಾ ಭಯ ಇಲ್ಲದಿರುವುದು ಹೀಗೆಯೇ ಮುಂದುವರಿದಲ್ಲಿ ಜಾಗತಿಕವಾದ ಸಂಕೀರ್ಣ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಜನರ ಸಾಮರ್ಥ್ಯ ಕುಂದುತ್ತದೆ. ಹೀಗಾಗಿ ಮುಕ್ತ, ಸುರಕ್ಷಿತ ಪರಿಸರ ಅಗತ್ಯ.

ಆದರೆ ಕಷ್ಟದ ದಿನಗಳು ಇವು. ವಿಶ್ವದಾದ್ಯಂತ ದಾಖಲೆ ಸಂಖ್ಯೆಯಲ್ಲಿ ಪತ್ರಕರ್ತರ ಹತ್ಯೆಗಳಾಗುತ್ತಿವೆ, ಅನೇಕ ರಾಷ್ಟ್ರಗಳಲ್ಲಿ ಪತ್ರಕರ್ತರು ಸೆರೆಮನೆಗಳಿಗೆ ಹೋಗುತ್ತಿದ್ದಾರೆ. ದಿನನಿತ್ಯ ಬೆದರಿಕೆ, ಆಕ್ರಮಣ, ಹಸ್ತಕ್ಷೇಪ, ಸರ್ಕಾರ ಅಥವಾ ಖಾಸಗಿ ವ್ಯಕ್ತಿಗಳಿಂದ ಮಾಧ್ಯಮವನ್ನು ಮೌನವಾಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸಿರಿಯಾದಲ್ಲಿ ಐಎಸ್ ಉಗ್ರರು  ಜೇಮ್ಸ್ ಫೋಲೆ ಹಾಗೂ ಸ್ಟೀವನ್ ಸಾಟ್ಲೊಫ್ ಅವರ ತಲೆ ಕಡಿದು ಸಾಯಿಸಿದ  ಘಟನೆಗಳ ವಿಡಿಯೊ ದೃಶ್ಯಗಳು ಜಗತ್ತಿನಲ್ಲಿ ಆಘಾತ ಉಂಟುಮಾಡಿದ್ದನ್ನು ಜನ ಮರೆತಿಲ್ಲ. ಹೀಗೆ ಪತ್ರಕರ್ತರಿಗೆ ಬೆದರಿಕೆಗಳನ್ನು ಒಡ್ಡಿ ಮಾಧ್ಯಮ ಸ್ವಾತಂತ್ರ್ಯವನ್ನು ತಗ್ಗಿಸುವುದರ ವಿರುದ್ಧದ ಜಾಗತಿಕ ದನಿಯಾಗಲು ನವೆಂಬರ್ 2ರ ದಿನ ಸಾಂಕೇತಿಕವಾದುದು. ಎಲ್ಲೆಲ್ಲಿ ಏನೇನಾಗುತ್ತಿದೆ ಎಂಬುದರ ಅವಲೋಕನ ಇಲ್ಲಿ ಮುಖ್ಯವಾದುದು.

ಕರ್ನಾಟಕ ಸೇರಿದಂತೆ ಭಾರತದ  ಅನೇಕ ಭಾಗಗಳಲ್ಲಿ  ಪತ್ರಕರ್ತರ ಹತ್ಯೆ ಅಥವಾ  ಅವರ ಮೇಲಿನ ಹಲ್ಲೆ ಪ್ರಕರಣಗಳು ವರದಿಯಾಗುತ್ತಲೇ ಇವೆ. ಮಧ್ಯ ಪ್ರದೇಶದಲ್ಲಿ  ವ್ಯಾಪಂ ಹಗರಣದ ವರದಿಗಾರಿಕೆಗೆ ತೆರಳಿದ್ದ ಆಜ್‌ತಕ್  ವಿಶೇಷ ವರದಿಗಾರ ಅಕ್ಷಯ್ ಸಿಂಗ್ ಕೊಲೆ  ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ. ಜೊತೆಗೆ  ಅತ್ಯಾಚಾರ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶ ಸಚಿವರ ಪಾಲ್ಗೊಳ್ಳುವಿಕೆ ಆರೋಪದ ಬಗ್ಗೆ ಫೇಸ್ ಬುಕ್‌ನಲ್ಲಿ ಬರೆದ  ಉತ್ತರ ಪ್ರದೇಶದ ಷಹಜಹಾನ್ಪುರದ ಪತ್ರಕರ್ತ ಜಗೇಂದ್ರ ಸಿಂಗ್ ಈ ವರ್ಷ ಜೂನ್ ತಿಂಗಳಲ್ಲಿ  ಸುಟ್ಟ ಗಾಯಗಳಿಂದ ಸತ್ತಿದ್ದಾರೆ.  ಜಗೇಂದ್ರ ಸಿಂಗ್ ಸಾವಿನ ಪ್ರಕರಣದಲ್ಲಿ  ಉತ್ತರ ಪ್ರದೇಶ ಪೊಲೀಸರ ಪಾತ್ರದ  ಬಗ್ಗೆ  ಭಾರತೀಯ ಪತ್ರಿಕಾ ಮಂಡಳಿಯ ತ್ರಿಸದಸ್ಯ ಸಮಿತಿ ಟೀಕೆಯನ್ನು  ಮಾಡಿದೆ.  ಸ್ವತಂತ್ರ ತನಿಖಾ ಸಂಸ್ಥೆಯಿಂದ ಪ್ರಕರಣದ ತನಿಖೆಯನ್ನು ನಡೆಸಬೇಕೆಂಬ ಶಿಫಾರಸನ್ನೂ  ಸರ್ಕಾರಕ್ಕೆ  ಪತ್ರಿಕಾ ಮಂಡಳಿ ಮಾಡಿದೆ.

‘ಪತ್ರಕರ್ತರ ಮೇಲೆ ಹೆಚ್ಚುತ್ತಿರುವ ಹಲ್ಲೆಗಳ ಕಾರಣದಿಂದಾಗಿ ಇದನ್ನು ನಿರ್ವಹಿಸಲು ವಿಶೇಷ ಕಾನೂನು ಇರಬೇಕು.  ಇದನ್ನು ಶಿಕ್ಷಾರ್ಹ ಹಾಗೂ  ಜಾಮೀನುರಹಿತ  ಅಪರಾಧ  ಆಗಿಸಬೇಕು. ಜೊತೆಗೆ, ಪತ್ರಕರ್ತರ ಹತ್ಯೆಗೆ ಸಂಬಂಧಿಸಿದ ಪ್ರಕರಣಗಳನ್ನು ತಾನಾಗಿಯೇ ಸಿಬಿಐಗೆ ಸರ್ಕಾರ ವಹಿಸುವಂತಾಗಬೇಕು’ ಎಂಬಂತಹ ಮಾತುಗಳನ್ನು ಪತ್ರಿಕಾ  ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಸಿ.ಕೆ. ಪ್ರಸಾದ್ ಇತ್ತೀಚೆಗೆ ಹೇಳಿದ್ದರು.

ಪತ್ರಕರ್ತರ ಸುರಕ್ಷತೆ ವಿಚಾರಗಳ ಪರಿಶೀಲನೆಗಾಗಿಯೇ 2011ರಲ್ಲಿ 10 ಸದಸ್ಯರ  ಉಪಸಮಿತಿಯೊಂದನ್ನು ಭಾರತ ಪತ್ರಿಕಾ ಮಂಡಳಿ ರಚಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಸಮಿತಿ 11 ರಾಜ್ಯಗಳಿಗೆ ಭೇಟಿ ನೀಡಿತ್ತು.  ಈ ರಾಜ್ಯಗಳಲ್ಲಿನ ಸುಮಾರು 1,000 ಕಾರ್ಯನಿರತ ಪತ್ರಕರ್ತರು ಹಾಗೂ ಸಂಪಾದಕರುಗಳ ಜೊತೆ  ಈ ಸಮಿತಿ ಮಾತುಕತೆ ನಡೆಸಿತ್ತು. ಪತ್ರಕರ್ತರ ಮೇಲಿನ ಆಕ್ರಮಣಗಳ ಎಲ್ಲಾ ಪ್ರಕರಣಗಳನ್ನೂ ವಿಶೇಷ ನ್ಯಾಯಾಲಯಗಳಿಗೆ ವಹಿಸಬೇಕು ಹಾಗೂ ಆರೋಪಪಟ್ಟಿ ಸಲ್ಲಿಸಿದ ಒಂದು ವರ್ಷದೊಳಗೆ ವಿಚಾರಣೆ ಪೂರೈಸಬೇಕು ಎಂಬಂತಹ  ಶಿಫಾರಸನ್ನು ಈ ಸಮಿತಿ  ಮಾಡಿತ್ತು. 

ಕಳೆದ  ಎರಡು ದಶಕಗಳಲ್ಲಿ ರಾಷ್ಟ್ರದಲ್ಲಿ 80ಕ್ಕೂ ಹೆಚ್ಚು ಪತ್ರಕರ್ತರು ಹತ್ಯೆಯಾಗಿದ್ದಾರೆ ಎಂದರೆ ಆತಂಕಕಾರಿಯಾದ ಸಂಗತಿಯೇ. ಅಸ್ಸಾಂ, ಆಂಧ್ರ ಪ್ರದೇಶ, ಮಣಿಪುರ, ಜಮ್ಮು ಮತ್ತು ಕಾಶ್ಮೀರ, ಛತ್ತೀಸಗಡ ಹಾಗೂ ಜಾರ್ಖಂಡದಂತಹ  ರಾಜ್ಯಗಳಲ್ಲಿ 60 ಪತ್ರಕರ್ತರು ಹತ್ಯೆಯಾಗಿದ್ದಾರೆ. ಆದರೆ ಯಾರಿಗೂ ಶಿಕ್ಷೆಯಾಗಿಲ್ಲ ಎಂಬಂತಹ ಸನ್ನಿವೇಶದಲ್ಲಿ ಪತ್ರಿಕಾ ಮಂಡಳಿಯ ಶಿಫಾರಸಿನ ಪ್ರಸ್ತುತತೆ ಅರಿವಾಗುತ್ತದೆ.

ವಿಚಾರಗಳ  ಬಗ್ಗೆ ಜನಾಭಿಪ್ರಾಯ ರೂಪಿಸಲು ಮಾಧ್ಯಮಗಳು ನೆರವಾಗುತ್ತವೆ. ಆದರೆ ಈ ಪ್ರಕ್ರಿಯೆಯಲ್ಲಿ ಜೀವ ಕಳೆದುಕೊಳ್ಳುವಂತಾಗುವ ಸ್ಥಿತಿ ಸೆನ್ಸಾರ್‌ಷಿಪ್‌ನ ಪರೋಕ್ಷ ಹೇರಿಕೆಯಾಗುತ್ತದೆ. ಈಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ನಿಂದನೆಗಳಿಗೆ ಒಳಗಾಗುವಂತಹ ಸ್ಥಿತಿ, ಮತ್ತೊಂದು ಬಗೆಯ ಭಾವನಾತ್ಮಕ ರೀತಿಯ ದೌರ್ಜನ್ಯ. ಇಂತಹ ಪ್ರಕರಣಗಳೆಲ್ಲವೂ ಮಾಧ್ಯಮಗಳಲ್ಲಿ ವರದಿಯಾಗಿವೆ. ಆದರೆ ಹೆಚ್ಚಿನ ಸಂದರ್ಭದಲ್ಲಿ ಇವು ಸ್ಥಳೀಯ ಮಟ್ಟದಲ್ಲಿ ವರದಿಯಾಗಿ ಹಾಗೇ ಮರೆಯಾಗಿಬಿಡುತ್ತವೆ. 

ಹೀಗಾಗಿಯೇ ಈಗ ಮಾಧ್ಯಮ ವ್ಯಕ್ತಿಗಳು, ಆರ್‌ಟಿಐ ಕಾರ್ಯಕರ್ತರು ಹಾಗೂ ಭ್ರಷ್ಟಾಚಾರ ಹೊರಗೆಳೆಯುವ ವ್ಯಕ್ತಿಗಳ (ವಿಷಲ್ ಬ್ಲೋವರ್ಸ್) ಮೇಲಿನ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು  ಪ್ರತ್ಯೇಕವಾಗಿ ಸಂಗ್ರಹಿಸಲು ಕೇಂದ್ರ ಗೃಹ ಸಚಿವಾಲಯ ಮುಂದಾಗಿದೆ. ಈ ವಿಚಾರದಲ್ಲಿ ಈವರೆಗೆ ಕೇಂದ್ರೀಕೃತ ಅಂಕಿ ಅಂಶಗಳು ಲಭ್ಯವಿರಲಿಲ್ಲ. ಏಕೆಂದರೆ ಇಂತಹ ಪ್ರಕರಣಗಳ ತನಿಖೆಗಳನ್ನು ರಾಜ್ಯ ಪೊಲೀಸರೇ ನಿರ್ವಹಿಸುತ್ತಾರೆ. ಜೊತೆಗೆ ಈ ಮೂರು ವರ್ಗಗಳ ವಿವರಣೆ ಬಗ್ಗೆ ಸ್ಪಷ್ಟತೆಯೂ ಇರಲಿಲ್ಲ. ಈಗ ರಾಷ್ಟ್ರೀಯ  ಅಪರಾಧ ದಾಖಲೆಗಳ ಬ್ಯೂರೊ ಈ ಅಂಕಿ ಅಂಶಗಳನ್ನು ಸಂಗ್ರಹಿಸಲು ಈಗಾಗಲೇ ಆರಂಭಿಸಿದೆ.

ಇದಕ್ಕಾಗಿ ಈ ವರ್ಷ ಇದಕ್ಕೆ ಸಂಬಂಧಿಸಿದ ನಮೂನೆಗಳನ್ನು ರಾಷ್ಟ್ರದಾದ್ಯಂತ ಪೊಲೀಸ್ ಠಾಣೆಗಳಲ್ಲಿ  ವಿತರಿಸಲಾಗಿದೆ. ಸತ್ಯದ ಅನ್ವೇಷಣೆಯಲ್ಲಿ ತೊಡಗುವ ವ್ಯಕ್ತಿಗಳ ಮೇಲೆ ನಡೆಯುವ ದೌರ್ಜನ್ಯಗಳ ಕ್ರೂರ ವಾಸ್ತವಕ್ಕೆ ಸರ್ಕಾರ ಕಡೆಗೂ ಕಣ್ಣು ತೆರೆದಿದೆ ಎಂಬುದೇ ಮುಖ್ಯ ಬೆಳವಣಿಗೆ. ಈ ಹೊಸ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರ ಎದುರಿಸಬೇಕಾಗಿರುವ ಹೊಸ ಹೊಸ ಸವಾಲುಗಳೇನು? ಎಂಬ ಪ್ರಶ್ನೆ ಎದುರಾಗುತ್ತದೆ.

ಹಾಗೆಯೇ, ಪತ್ರಕರ್ತರ ಮೇಲಿನ ದಾಳಿ, ಹಲ್ಲೆ ಪ್ರಕರಣಗಳ ಜೊತೆಗೆ ನಿರ್ಬಂಧಗಳ ಹೇರಿಕೆ ಹೆಚ್ಚುತ್ತಿರುವುದು ಏಕೆ ಎಂಬ ಪ್ರಶ್ನೆಯೂ ಎದುರಾಗುತ್ತದೆ. ವೃತ್ತಿಯ ಸ್ವರೂಪವೇ ಬದಲಾಗಿದೆಯೆ? ಹೊಸ ಅಪಾಯಗಳು ಎದುರಾಗುತ್ತಿವೆಯೆ? ಸಣ್ಣ ಪಟ್ಟಣ, ನಗರಗಳಲ್ಲಿ  ಪತ್ರಿಕೋದ್ಯಮದ ರೀತಿ ನೀತಿಗಳು ಬದಲಾಗಿವೆಯೆ?  ಎಂಬ ಪ್ರಶ್ನೆಗಳೂ ಏಳುತ್ತವೆ. ಒಂದಂತೂ ನಿಜ. ಸ್ಥಳೀಯ ಉದ್ಯಮಿಗಳು, ಅಕ್ರಮ ಗಣಿಗಾರಿಕೆ, ಆಹಾರ ಧಾನ್ಯ ಮಾರಾಟ ಮತ್ತಿತರ ಅಕ್ರಮ ವ್ಯವಹಾರಗಳನ್ನು ನಿಯಂತ್ರಿಸುವ ಮಾಫಿಯಾಗಳು ಹಾಗೂ ಸ್ಥಳೀಯ ವರದಿಗಾರರ ಮಧ್ಯದ ಸಂಘರ್ಷ ಹೆಚ್ಚಾಗುತ್ತಿದೆ.

ಅನೇಕ ಮಂದಿ ಪಾರಂಪರಿಕ ಮಾಧ್ಯಮವನ್ನಷ್ಟೇ ಬಳಕೆ ಮಾಡುತ್ತಿಲ್ಲ. ಸಾಮಾಜಿಕ ಮಾಧ್ಯಮಗಳು ಅಥವಾ ಸ್ಥಳೀಯ ಟಿ.ವಿ. ಚಾನೆಲ್‌ಗಳನ್ನೂ ಬಳಕೆ ಮಾಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳು ತೀವ್ರವಾಗಿ ಬಳಕೆಯಾಗುತ್ತಿರುವ ಇಂದಿನ ದಿನಗಳಲ್ಲಿ ಪತ್ರಕರ್ತನ ವಿವರಣೆ ಬಗ್ಗೆ ಹೆಚ್ಚು ಸ್ಪಷ್ಟತೆ ಇಲ್ಲದಂತಾಗಿದೆ. ಪತ್ರಕರ್ತ ಎಂದರೆ ಯಾರು ಎಂಬುದನ್ನು ನಿರ್ಧರಿಸುವ ಮಾನದಂಡಗಳೇನು? ಎಂಬುದೂ ಸ್ಪಷ್ಟ ವ್ಯಾಖ್ಯಾನಗಳಿಗೆ ನಿಲುಕದ ಸ್ಥಿತಿಯೂ ಇದೆ.

2011ರಲ್ಲಿ  ಪತ್ರಕರ್ತರ ರಕ್ಷಣೆಗಾಗಿ ಸುಗ್ರೀವಾಜ್ಞೆಯ ಕರಡೊಂದನ್ನು ಮಹಾರಾಷ್ಟ್ರ ಸರ್ಕಾರ ಸಿದ್ಧಪಡಿಸಿತ್ತು ಎಂದು ಮಾಧ್ಯಮ ವಿಚಾರಗಳನ್ನು ಕುರಿತಾದ ‘ದಿ ಹೂಟ್’   ವೆಬ್‌ಸೈಟ್‌ನ ವರದಿಯೊಂದು ತಿಳಿಸುತ್ತದೆ. ಆದರೆ ಅನೇಕ ಶಾಸಕರು ಇದಕ್ಕೆ ವಿರೋಧ ತೋರಿದರು. ಏಕೆಂದರೆ, ಅನೇಕ ಶಾಸಕರುಗಳೇ ಸ್ವತಃ ಮಾಧ್ಯಮ ಸಂಸ್ಥೆಗಳ ಮಾಲೀಕರೂ ಆಗಿದ್ದವರಾಗಿದ್ದರು. ಪತ್ರಕರ್ತರಿಗೆ ವಿಶೇಷ ಸ್ಥಾನಮಾನ ನೀಡುವುದು ಅವರಿಗೆ ಬೇಕಿರಲಿಲ್ಲ.

ಸಿಟಿಜನ್ ಜರ್ನಲಿಸ್ಟ್‌ಗಳು, ಬ್ಲಾಗರ್‌ಗಳು ಹಾಗೂ ಸಾಮಾಜಿಕ ಮಾಧ್ಯಮವನ್ನೇ ವೇದಿಕೆಯಾಗಿ ಬಳಸಿಕೊಳ್ಳುವವರು ಅಥವಾ ಆರ್‌ಟಿಐಯನ್ನು ವಿಸ್ತೃತವಾಗಿ ಬಳಸಿ ಮಾಹಿತಿಗಳನ್ನು ಬಯಲು ಮಾಡುವವರು– ಇವರೆಲ್ಲಾ ಇಂದು ಒಂದಲ್ಲ ಒಂದು ವಿಧದಲ್ಲಿ ಮಾಹಿತಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಪತ್ರಕರ್ತ ಎಂಬುದಕ್ಕಿಂತ  ಜವಾಬ್ದಾರಿಯುತ ಪತ್ರಕರ್ತನ ಪಾತ್ರವನ್ನು ನಾಗರಿಕರು ನಿರ್ವಹಿಸುತ್ತಿದ್ದಾರೆಯೆ ಎಂಬುದು ಮುಖ್ಯವಾಗುತ್ತದೆ. ಅವರು ಕಲೆ ಹಾಕಿ ಪ್ರಸಾರ ಮಾಡಿದ ಮಾಹಿತಿ ಸಾರ್ವಜನಿಕ ಹಿತದ ದೃಷ್ಟಿಯದಾಗಿತ್ತೆ ಎಂಬುದೂ ಮುಖ್ಯ. ಏಕೆಂದರೆ, ಪಾರಂಪರಿಕ ಮಾಧ್ಯಮ ಸೇರಿದಂತೆ ಮಾಧ್ಯಮ ಕ್ಷೇತ್ರದ ವಿವಿಧ ವೇದಿಕೆಗಳಲ್ಲಿ ವಸ್ತುನಿಷ್ಠತೆ ಮರೆಯಾಗುತ್ತಿದೆ ಎಂಬಂತಹ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿರುವ ದಿನಗಳು ಇವು.

ಇಲ್ಲಿ ಸ್ಮರಿಸಬೇಕಾದ ಅಂಶ ಎಂದರೆ, ಪತ್ರಿಕಾ ಸ್ವಾತಂತ್ರ್ಯ  ಎಂಬುದು ಮೂಲಭೂತ ಹಕ್ಕುಗಳಲ್ಲಿ ಸೇರಿಲ್ಲ. ಈ ಬಗ್ಗೆ ಸಂವಿಧಾನ ರಚನೆ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಸಂದರ್ಭದಲ್ಲಿ ನೀಡಿರುವ ಉತ್ತರವೊಂದರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವ ಮಾತುಗಳಿವು: ‘ವ್ಯಕ್ತಿಗತ ಸಾಮರ್ಥ್ಯದಲ್ಲಿ ನಾಗರಿಕ ಚಲಾಯಿಸಲಾಗದ ವಿಶೇಷ ಹಕ್ಕುಗಳನ್ನೇನೂ ಮಾಧ್ಯಮಕ್ಕೆ ನೀಡಬೇಕಿಲ್ಲ. ಪತ್ರಿಕಾ ಸಂಪಾದಕ ಅಥವಾ ಮ್ಯಾನೇಜರ್ ಎಲ್ಲರೂ ನಾಗರಿಕರು.  ಹೀಗಾಗಿ ವೃತ್ತ ಪತ್ರಿಕೆಗಳಲ್ಲಿ ಅವರು ಬರೆಯಲು ಆಯ್ಕೆ ಮಾಡಿಕೊಂಡಾಗ ಅವರು ಅಭಿವ್ಯಕ್ತಿಯ ಹಕ್ಕನ್ನಷ್ಟೇ ಚಲಾಯಿಸುತ್ತಿರುತ್ತಾರೆ. ಹೀಗಾಗಿ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ವಿಶೇಷ ಪ್ರಸ್ತಾಪದ ಅಗತ್ಯವೇ ನನಗೆ ಕಂಡುಬರುತ್ತಿಲ್ಲ.’

ನಿಜ. ಪತ್ರಿಕೋದ್ಯಮ ಅವಸರದ ಸಾಹಿತ್ಯ. ಸಮಾಜದ ಕಾವಲುನಾಯಿಗಳಾಗಿ ಮಾಧ್ಯಮ ವ್ಯಕ್ತಿಗಳು ಕೆಲಸ ಮಾಡುತ್ತಾರೆ ಎಂಬುದು ನಿರೀಕ್ಷೆ. ಇದಕ್ಕೆ ಸಂಬಂಧಿಸಿದಂತೆ ಡಿ.ವಿ.ಜಿ.ಯವರು, ‘ವೃತ್ತಪತ್ರಿಕೆ’ ಎಂಬ ತಮ್ಮ ಪುಸ್ತಕದಲ್ಲಿ ಲಾರ್ಡ್ ಬ್ರೈಸ್‌ನನ್ನು ಉಲ್ಲೇಖಿಸಿ ಹೇಳುವ ಮಾತು ಇಂದಿಗೂ ಪ್ರಸ್ತುತ ಎನಿಸು ತ್ತದೆ. ‘ಪತ್ರಿಕೆಗಳು ಜಾಗರೂಕತೆ ಬಿಟ್ಟು ಒಂದೊಂದು ವೇಳೆ ನಿರಪರಾಧಿಗಳಿಗೆ ನೋವನ್ನುಂಟುಮಾಡಬಹುದು: ಆದರೆ ಪ್ರಮಾಣ ರುಜುವಾತುಗಳಿಲ್ಲದಿದ್ದರೆ ತಾವು ಮಾತನ್ನೇ ಆಡುವುದಿಲ್ಲವೆಂದು ಅವು ವ್ರತ ಮಾಡಿಕೊಂಡ ಪಕ್ಷದಲ್ಲಿ ಅನೇಕ ಮಂದಿ ಕೆಡುಕರು ತಪ್ಪಿಸಿಕೊಳ್ಳುವಂತೆ ಆಗುವುದು. ಇಂಥಾ ಕೆಟ್ಟ ಜನರನ್ನು ಬಯಲಿಗೆಳೆಯುವುದು ಅವಶ್ಯವಾಗಿ ನಡೆಯಬೇಕಾದ ದೊಡ್ಡ ಕೆಲಸ.. ವೃತ್ತಪತ್ರಿಕೆಯು ಮನೆಗಾವಲಿನ ನಾಯಿಯ ಹಾಗೆ, ಅದು ಗಟ್ಟಿಯಾಗಿ ಬೊಗಳುತ್ತಿರುವುದೇ ನಮಗೆ ಒಂದು ಉಪಕಾರ. ಹತ್ತಿರ ಬಂದವನಿಗೆ ದುರುದ್ದೇಶವೇನೂ ಇಲ್ಲದಿದ್ದರೂ ಅದರ ಬೊಗಳಿಕೆಯನ್ನು ನಾವೆಲ್ಲ ಸಹಿಸಬೇಕು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT