ಗುರುವಾರ , ಡಿಸೆಂಬರ್ 12, 2019
25 °C
ಧರ್ಮ ಅಪಾಯದಲ್ಲಿದೆ ಎನ್ನುವುದು ಧರ್ಮವಿರೋಧಿ ರಾಜಕೀಯ ಘೋಷಣೆ

ಅಯ್ಯಪ್ಪ: ಸಂಪ್ರದಾಯ ನೆಪ

ನಾರಾಯಣ ಎ
Published:
Updated:

ಮಹಿಳೆಯರ ಪ್ರವೇಶದ ವಿಚಾರದಲ್ಲಿ ವಿವಾದಗ್ರಸ್ತವಾಗಿರುವ ಶಬರಿಮಲೆ ದೇಗುಲ ಇರುವ ಕೇರಳದ ಉತ್ತರತುದಿಯ ಒಂದು ಸಣ್ಣ ದೇವಾಲಯಕ್ಕೆ ಸಂಬಂಧಿಸಿದ ಐತಿಹ್ಯವೊಂದು ಈ ಸಂದರ್ಭದಲ್ಲಿ ಪ್ರಸ್ತುತವಾಗುತ್ತದೆ. ಹಿಂದೆ ಆ ದೇವಸ್ಥಾನದ ಗರ್ಭಗುಡಿಯ ಪಕ್ಕ ಬಾಲಕನೊಬ್ಬ ಆಟವಾಡುತ್ತಿದ್ದದ್ದರಿಂದ ಪರಿಸರದ ಪಾವಿತ್ರ್ಯಕ್ಕೆ ಧಕ್ಕೆಯಾಯಿತೆಂದು ಅಲ್ಲಿನ ಅರ್ಚಕರು ಬಾಲಕನನ್ನು ಸಿಕ್ಕಾಪಟ್ಟೆ ಗದರಿಸಿದ್ದರಂತೆ. ಅರ್ಚಕರ ನಡತೆಯಿಂದ ಕೋಪಗೊಂಡ ದೇವರು ಆ ದೇವಸ್ಥಾನವನ್ನೇ ಬಿಟ್ಟು ರಾಜ್ಯದ ದಕ್ಷಿಣ ತುದಿಗೆ ಹೊರಟುಹೋದರು ಎನ್ನುತ್ತದೆ ಐತಿಹ್ಯ. ಅದಕ್ಕೆ ಕುರುಹು ಎಂಬಂತೆ ಪಕ್ಕದಲ್ಲೇ ಒಂದು ಗುಹೆ ಇದ್ದು, ಈ ಗುಹಾ ಮಾರ್ಗವಾಗಿಯೇ ದೇವರು ಹೊರಟುಹೋದದ್ದು ಎಂದು ಜನರು ಆಡಿಕೊಳ್ಳುತ್ತಾರೆ.

ಕೇರಳದ ಉತ್ತರ ಗಡಿಯಿಂದ ಸುಮಾರು 75 ಕಿ.ಮೀ.ದೂರ, ಕರಾವಳಿ ಕರ್ನಾಟಕದಲ್ಲಿರುವ ಹೆಸರಾಂತ ದೇವಾಲಯವೊಂದರಲ್ಲಿ ಜಾತಿಯ ಕಾರಣಕ್ಕೆ ಪ್ರವೇಶ ನಿರಾಕರಿಸಲ್ಪಟ್ಟ ಭಕ್ತನೊಬ್ಬನಿಗೆ ದರ್ಶನ ನೀಡುವ ಸಲುವಾಗಿ ಅಲ್ಲಿನ ದೇವರ ವಿಗ್ರಹವೇ ಸಂಪ್ರದಾಯ ಮುರಿದು ಪಶ್ಚಿಮಕ್ಕೆ ಮುಖ ಮಾಡಿ ನಿಂತ ಐತಿಹ್ಯ ಎಲ್ಲರಿಗೂ ತಿಳಿದೇ ಇದೆ.

ಇಂತಹ ಐತಿಹ್ಯಗಳು ಹುಡುಕಿದರೆ ದೇಶದಾದ್ಯಂತ ಹಲವಾರು ಇರಬಹುದು. ಇವೆಲ್ಲವೂ ಆಯಾ ಕಾಲದ ಆಯಾ ಸ್ಥಳದ ಪಾವಿತ್ರ್ಯದ ಕುರಿತ ಸಂಕುಚಿತ ಸಂಪ್ರದಾಯಗಳಿಗೆ ಪ್ರತಿಯಾಗಿ ಹುಟ್ಟಿಕೊಂಡ ಸಂಕಥನಗಳು. ಈ ಐತಿಹ್ಯಗಳ ಹಿಂದೆ ಇರುವುದು ಕೂಡಾ ನಂಬಿಕೆಗಳೇ. ಅವುಗಳಿಗೆ ವಾಸ್ತವಿಕ ನೆಲೆಗಟ್ಟುಗಳೇನೂ ಇಲ್ಲ. ಆದರೆ ಅವುಗಳು ಒಂದು ರೀತಿಯ ಪ್ರತಿಭಟನೆಯ ಸಂಕೇತಗ
ಳಾಗಿ ರೂಪುಗೊಂಡ ನಂಬಿಕೆಗಳು. ಜತೆಗೆ ದೇವರನ್ನು ಮಾನವ ನಿರ್ಮಿತ ಸಂಪ್ರದಾಯಗಳ ಬಂಧನದಿಂದ ಬಿಡಿಸಿ ಪಾರಮಾರ್ಥಿಕ ಎತ್ತರಕ್ಕೇರಿಸುವ ಪುರೋಗಾಮಿ ಪ್ರತಿರೋಧಗಳು. ಇನ್ನೊಂದು ಅರ್ಥದಲ್ಲಿ ಶಿಷ್ಟತೆಯಿಂದ ಭ್ರಷ್ಟಗೊಳ್ಳದ ಬಲಹೀನ ಮಂದಿಯ ಪ್ರತಿಭಟನೆಯ ಅಸ್ತ್ರಗಳು. ಮಾನವಶಾಸ್ತ್ರಜ್ಞ ಜೇಮ್ಸ್ ಸಿ. ಕಾಟ್ ಈ ಪ್ರತಿಸಂಕಥನಗಳನ್ನು ದುರ್ಬಲರ ಅಸ್ತ್ರಗಳು (weapons of the weak) ಅಂತ ಕರೆದಿದ್ದಾನೆ.

ಈಗ ಶಬರಿಮಲೆಯ ವಿಚಾರಕ್ಕೆ ಬರೋಣ. ಆ ದೇಗುಲದ ಮೂಲನಂಬಿಕೆ ಎನ್ನಲಾದ ಸ್ತ್ರೀ ಪ್ರವೇಶ ನಿರ್ಬಂಧವನ್ನು ಉಳಿಸುವ ನೆವನ ಹೇಳಿ ಅಲ್ಲಿ ನಡೆಯುತ್ತಿರುವ ಅಪ್ಪಟ ಹಿಂಸಾತ್ಮಕ ಮತ್ತು ತೀರಾ ಕೀಳು ಮಟ್ಟದ ಪ್ರತಿಭಟನೆ ಒಂದು ವೇಳೆ ಆಧುನಿಕ ಸಂಪರ್ಕ ಸಾಧನಗಳಾದ ಟಿ.ವಿ, ಇಂಟರ್ನೆಟ್, ಮೊಬೈಲ್ ಫೋನ್ ಇತ್ಯಾದಿಗಳು ಮತ್ತು ಪ್ರಜಾತಾಂತ್ರಿಕ ರಾಜಕೀಯ ತಂತ್ರಗಾರಿಕೆ ಇಲ್ಲದ ಒಂದು ಕಾಲಘಟ್ಟದಲ್ಲಿ ನಡೆಯುತ್ತಿದ್ದರೆ ಆಗ ಅಲ್ಲೂ ಒಂದು ರೀತಿಯ ಪ್ರತಿರೋಧಾತ್ಮಕ ಐತಿಹ್ಯವೋ ಸಂಕಥನವೋ ಹುಟ್ಟಿಕೊಳ್ಳುತ್ತಿತ್ತು. ಆ ಸಂಕಥನದ ಮೂಲಕ ಹೇಳಿ ಕೇಳಿ ಮಲೆವಾಸಿಗಳ ದೈವವಾದ ಅಯ್ಯಪ್ಪ ಸ್ವಾಮಿಯು ಕೇರಳದ ವಿದ್ಯಾವಂತ, ನಾಗರಿಕ ಮತ್ತು ಸುಸಂಸ್ಕೃತ ಮಂದಿಯ ನಡವಳಿಕೆಗೆ ಬೇಸತ್ತು ಶಬರಿಮಲೆ ಬಿಟ್ಟು ಇನ್ಯಾವುದೋ ಮಲೆಗೆ ಹೊರಟುಹೋದ ಮತ್ತು ಅಲ್ಲಿ ದಿನನಿತ್ಯವೂ ತನಗೆ ಒಬ್ಬ ಸ್ತ್ರೀಯಿಂದಲೇ, (ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಓರ್ವ ಮಲೆವಾಸಿ ಹೆಣ್ಣುಮಗಳಿಂದಲೇ) ಪೂಜೆ ಸಲ್ಲಬೇಕು ಎಂದು ವಿಧಿಸಿದ ಎಂಬಿತ್ಯಾದಿ ನಂಬಿಕೆಗಳು ನೆಲೆಗೊಳ್ಳುತ್ತಿದ್ದವೋ ಏನೋ? ನಮ್ಮ ಕಾಲದ ಆಧುನಿಕತೆಯ ಕರಾಳ ಮತ್ತು ಆಷಾಢಭೂತಿ ಮುಖ ಏನು ಅಂದರೆ ಅದು ಪ್ರಬಲರ ಸ್ವಾರ್ಥಪ್ರೇರಿತ, ಸಂಕುಚಿತ ಮನೋಸ್ಥಿತಿ ಮತ್ತು ಮಾರ್ಗಗಳನ್ನು ಅಲುಗಾಡಿಸುವುದಿಲ್ಲ. ಜತೆಗೆ ಇವುಗಳನ್ನೆಲ್ಲಾ ಪ್ರತಿಭಟಿಸಲು ಇರುವ ಎಲ್ಲಾ ಸರಳ, ಜನಪದೀಯ ಅಸ್ತ್ರಗಳನ್ನು ಅದು ಕಸಿದುಕೊಳ್ಳುತ್ತದೆ ಕೂಡಾ.

ಇಷ್ಟೆಲ್ಲದರ ಮಧ್ಯೆ ಶಬರಿಮಲೆ ದೇಗುಲದ ಬಾಗಿಲು ಒಮ್ಮೆ ಮುಚ್ಚಿ, ಮತ್ತೆ ತೆರೆದು ಮುಚ್ಚಿದೆ. ಆದರೆ ಶಬರಿಮಲೆಯ ವಿವಾದದ ಸುತ್ತ ವ್ಯಗ್ರವಾಗಿಯೂ, ಉಗ್ರವಾಗಿಯೂ, ಅಸಮಗ್ರವಾಗಿಯೂ ಆಡುವ ಬಾಯಿಗಳು ಮುಚ್ಚಿಯೇ ಇಲ್ಲ. ಪರಿಣಾಮವಾಗಿ ಇನ್ನೊಮ್ಮೆ ಬಾಗಿಲು ತೆರೆದಾಗ ಏನೇನೆಲ್ಲಾ ಕಾಣಬೇಕೋ ಗೊತ್ತಿಲ್ಲ. ಸಂಪ್ರದಾಯ, ನಂಬಿಕೆ ಇತ್ಯಾದಿಗಳೆಲ್ಲಾ ಏನಿದ್ದರೂ ಸಂಪ್ರದಾಯಗಳು ಮತ್ತು ನಂಬಿಕೆಗಳೇ ಆಗಿರುತ್ತವೆ. ಅವುಗಳ ಹಿಂದೆ ತರ್ಕ, ವಿಜ್ಞಾನ, ವೈಚಾರಿಕತೆ, ನೈತಿಕತೆ ಇತ್ಯಾದಿಗಳೆಲ್ಲಾ ಇರುವುದಿಲ್ಲ ಮತ್ತು
ಅವುಗಳನ್ನು ಅಪೇಕ್ಷಿಸುವುದೂ ಸರಿಯಲ್ಲ. ಮಾತ್ರವಲ್ಲ ಇಂತಹ ವಿಚಾರಗಳಲ್ಲಿ ಸರ್ಕಾರ, ಕೋರ್ಟು ಇತ್ಯಾದಿಗಳು ಎಷ್ಟರಮಟ್ಟಿಗೆ ಹಸ್ತಕ್ಷೇಪ ನಡೆಸಬಹುದು ಮತ್ತು ನಂಬಿಕೆಗಳ ಮೇಲೆ ಸಾಂವಿಧಾನಿಕ ನೈತಿಕತೆಯನ್ನು ಎಷ್ಟರಮಟ್ಟಿಗೆ ಹೇರಬಹುದು ಎನ್ನುವುದು ಕೂಡಾ ಗಣತಂತ್ರ ಭಾರತದಲ್ಲಿ ಇನ್ನೂ ಪೂರ್ತಿ ಇತ್ಯರ್ಥವಾಗದ ವಿಚಾರ.

ಈ ವಿಷಯದಲ್ಲಿರುವ ಅಸ್ಪಷ್ಟತೆ ಮತ್ತು ಸ್ನಿಗ್ಧತೆಯನ್ನು ಒಪ್ಪಿಕೊಳ್ಳಬಹುದು. ಸುಪ್ರೀಂ ಕೋರ್ಟ್ ನ್ಯಾಯಪೀಠ ನೀಡಿದ ಬಹುಮತದ ತೀರ್ಪಿಗೆ ವಿರುದ್ಧವಾಗಿ ಶಬರಿಮಲೆಯ ಸಂಪ್ರದಾಯವನ್ನು ಎತ್ತಿಹಿಡಿದ ಅದೇ ನ್ಯಾಯಪೀಠದ ಮಹಿಳಾ ನ್ಯಾಯಮೂರ್ತಿಯವರ ತೀರ್ಪಿನ ಹಿಂದಿನ ತರ್ಕವನ್ನು ಓದುವ ಸಂಯಮ ಕೂಡಾ ಇರಬೇಕಾದದ್ದೇ. ಅಂದ ಮಾತ್ರಕ್ಕೆ ಒಂದು ಸಂಪ್ರದಾಯವನ್ನು, ಒಂದು ನಂಬಿಕೆಯನ್ನು ಸ್ವೀಕೃತ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಉಳಿಸಿಕೊಳ್ಳಬೇಕು ಎಂಬ ಭರಾಟೆಯಲ್ಲಿ ಹಿಂಸೆಗಿಳಿದು, ಸುಳ್ಳುಗಳ ಸರಮಾಲೆ ಸೃಷ್ಟಿಸಿ, ಮುಗ್ಧ ಜನರನ್ನು ಧರ್ಮದ ಹೆಸರಲ್ಲಿ ಕೆರಳಿಸಿ ಕೇರಳದಲ್ಲೊಂದು ರಾಜಕೀಯ ನೆಲೆಯನ್ನು ಕಂಡುಕೊಳ್ಳಲು ಇಡೀ ಪ್ರಕರಣವನ್ನು ಒಂದು ಅವಕಾಶವಾಗಿ ಬಳಸಿಕೊಳ್ಳುತ್ತಿರುವ ಪಕ್ಷವೊಂದರ ಹುನ್ನಾರವಿದೆಯಲ್ಲಾ, ಅದನ್ನೀಗ ಪ್ರಜ್ಞಾವಂತ ಸಮೂಹ ಖಂಡಿಸಬೇಕಿರುವುದು.

ಶಬರಿಮಲೆಯ ಪ್ರತಿಭಟನಾ ರಾಜಕೀಯದ ಅತ್ಯಂತ ಹೇಯ ಮುಖ ಎಂದರೆ ಈ ಪ್ರಕರಣವನ್ನು ಬಳಸಿಕೊಂಡು ಹಿಂದೂ ಧರ್ಮ ಅಪಾಯದಲ್ಲಿದೆ ಎನ್ನುವ ಆತಂಕ ಸೃಷ್ಟಿಸುವ ಹುನ್ನಾರ ನಡೆಯುತ್ತಿರುವುದು. ನಮ್ಮ ಧರ್ಮ ಅಪಾಯದಲ್ಲಿದೆ ಎಂದು ಭಾವಿಸುವುದು ಒಂದು ರೋಗಗ್ರಸ್ತ ಮನಸ್ಥಿತಿ. ಧರ್ಮ ಎಂಬುದು, ಸಾಂಸ್ಥಿಕ ಸ್ವರೂಪದಲ್ಲಿರಲಿ ಅಥವಾ ತಾತ್ವಿಕ ಸ್ವರೂಪದಲ್ಲಿರಲಿ, ಅದು ಅಪಾಯದಲ್ಲಿರುವುದು ಅಂತ ಇಲ್ಲ. ಸತ್ವಯುತವಾಗಿರುವುದನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಾಗುವುದಿಲ್ಲ.

ಸತ್ವಯುತವಲ್ಲದನ್ನು ಯಾರಿಂದಲೂ ಉಳಿಸಿಕೊಳ್ಳಲೂ ಆಗುವುದಿಲ್ಲ. ಆದುದರಿಂದ ಧರ್ಮ ಅಪಾಯದಲ್ಲಿದೆ ಎಂದು ಹೇಳುವುದು ಒಂದು ರಾಜಕೀಯ ಘೋಷಣೆ. ಈ ಘೋಷಣೆ ವಿಪರೀತ ಮೊಳಗುತ್ತಿರುವ ಈ ಹೊತ್ತಿನಲ್ಲಿ ಧರ್ಮದ ಬಗ್ಗೆ ನೈಜ ಕಾಳಜಿ ಉಳ್ಳವರು ಒಂದು ವಿಷಯವನ್ನು ನೆನಪಿಟ್ಟುಕೊಂಡರೆ ಒಳ್ಳೆಯದು. ಅದು ಏನೆಂದರೆ ‘ನಮ್ಮ ಧರ್ಮ ಅಪಾಯದಲ್ಲಿದೆ, ನಾವೆಲ್ಲಾ ಒಂದಾಗಬೇಕು’ ಎಂದು ಹೇಳುವ ಮಂದಿ ಒಂದು ಧರ್ಮದಲ್ಲಿ ಹೆಚ್ಚಾದಾಗ ಆ ಧರ್ಮ ಸತ್ವಹೀನವಾಗುತ್ತದೆ, ಆತ್ಮಸ್ಥೈರ್ಯ ಕಳೆದುಕೊಂಡು ನಿಸ್ತೇಜವಾಗುತ್ತದೆ. ಮಾತ್ರವಲ್ಲದೆ ಅದು ಭಯೋತ್ಪಾದನೆಯೂ ಸೇರಿದಂತೆ ಹಲವು ಜೀವವಿರೋಧಿ, ದೈವವಿರೋಧಿ ಚಟುವಟಿಕೆಗಳಿಗೆ ನೆವನವಾಗುತ್ತದೆ.

ತನ್ನ ಅಂತಃಸತ್ವದಿಂದ ಬದುಕಲಾರದ ಧರ್ಮವೊಂದನ್ನು ಅಧಿಕಾರದಾಹಿಗಳಾಗಲೀ ಅಥವಾ ಅವರ ಬೀದಿ ಪುಢಾರಿಗಳಾಗಲೀ ರಕ್ಷಿಸಲಾರರು. ಯಾವುದಾದರೂ ಧರ್ಮಕ್ಕೆ ತನ್ನ ಉಳಿವಿಗಾಗಿ ರಾಜಕೀಯದ ರಕ್ಷಣೆ ಬೇಕು ಅಂತ ಅನ್ನಿಸಿದರೆ ಅದು ಧರ್ಮವಲ್ಲ. ಹಿಂದೂ ಧರ್ಮ ಅಂತ ಕರೆಯಲಾಗುವ ವ್ಯವಸ್ಥೆಯೊಂದು ಭಾರತದಲ್ಲಿ ಶತಶತಮಾನಗಳ ಕಾಲ ಉಳಿದದ್ದು ರಾಜಕೀಯ ರಕ್ಷಣೆಯಿಂದಲ್ಲ. ರಾಜಕೀಯ ಅಧಿಕಾರ ಸುಮಾರು ಐನೂರು ವರ್ಷಗಳ ಕಾಲ ಇಸ್ಲಾಂ ಧರ್ಮೀಯರ ಕೈಯ್ಯಲ್ಲಿದ್ದಾಗ ಅದಕ್ಕೆ ಅಪಾಯ ಬರಲಿಲ್ಲ. ಸುಮಾರು ಇನ್ನೂರು ವರ್ಷಗಳ ಕಾಲ ಕ್ರೈಸ್ತ ಧರ್ಮೀಯರಾದ ಬ್ರಿಟಿಷರ ಕೈಯಲ್ಲಿ ರಾಜಕೀಯ ಅಧಿಕಾರ ಕೇಂದ್ರೀಕೃತವಾಗಿದ್ದಾಗ ಅದಕ್ಕೆ ಅಪಾಯ ಬರಲಿಲ್ಲ. ಈಗ ಧರ್ಮಕ್ಕೆ ಅಪಾಯವಿದೆ ಅಂತ ಹೇಳುವುದು, ಧರ್ಮಕ್ಕೆ ಅವಮಾನವಾಗಿದೆ ಅಂತ ತರ್ಕಿಸುವುದು ಇತ್ಯಾದಿಗಳೆಲ್ಲ ಧರ್ಮವಿರೋಧಿ ರಾಜಕೀಯದ ಭಾಗ. ಇಂತಹದ್ದೊಂದು ರಾಜಕೀಯ ಕಾರ್ಯತಂತ್ರವು ದೇಶದಲ್ಲೇ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯಂತ ಮುಂದುವರಿದಿದೆ ಅಂತ ಭಾವಿಸಲಾದ ಕೇರಳದಲ್ಲಿ ಕಾರ್ಯರೂಪಗೊಳ್ಳುತ್ತಿದೆ ಎನ್ನುವುದು ಆಧುನಿಕ ಭಾರತದ ಅತ್ಯಂತ ಕ್ರೂರ ವ್ಯಂಗ್ಯ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು