ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು, ವೈರಸ್ಸು, ಪೊಲೀಸು: ಹಸಿದು ಬೀದಿಗೆ ಬಂದವರಿಗೆ ಬಡಿದರೆ ಕೊರೊನಾ ಸಾಯುವುದೇ?

ಹಸಿದು ಬೀದಿಗೆ ಬಂದವರಿಗೆ ಬಡಿದರೆ ಕೊರೊನಾ ಸಾಯುವುದೇ?
Last Updated 30 ಮಾರ್ಚ್ 2020, 1:59 IST
ಅಕ್ಷರ ಗಾತ್ರ

ಮೊದಲಿಗೆ ಕೆಲವು ಪ್ರಕಟಣೆಗಳು:

ಮಹಾದುರಂತವೊಂದು ಜನಜೀವನವನ್ನು ಇನ್ನಿಲ್ಲ ಎಂಬಂತೆ ಕಾಡುವ ಕಾಲದಲ್ಲೂ ಬೀದಿಬೀದಿಗಳಲ್ಲಿ ಹಿಂಸಾರತಿ ಮೆರೆದ ಪೊಲೀಸರ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ ವಕೀಲ ಅಮೃತೇಶ ಅವರಿಗೆ ಮನದಾಳದ ಧನ್ಯವಾದಗಳು...

ಕನಿಷ್ಠ ಸೌಲಭ್ಯಗಳೇ ಸಿಗದೇಹೋದರೂ ಸಿಡುಕದೆ, ಅಂಜದೆ, ಅಳುಕದೆ ಪ್ರಾಣ ಪಣಕ್ಕಿಟ್ಟುಕೊಂಡು, ಸೋಂಕಿತರ ಪ್ರಾಣ ಉಳಿಸಲು ಹೋರಾಡುತ್ತಿರುವ ವೈದ್ಯಕೀಯ ಸೇವಾ ಸಮಸ್ತರಿಗೆ ಕೃತಜ್ಞತೆಯ ಪ್ರಣಾಮಗಳು...

ಪ್ರಕಟಣೆ ಮುಗಿಯಿತು.

ಸೂಕ್ಷ್ಮಾಣು ಜೀವಿಗಳು. ಅಗೋಚರ ಕ್ರಿಮಿಗಳು. ಈ ‘ಕ್ರಿಮಿ’ಗಳೇ ಹಾಗೆ. ಅವುಗಳ ಮುಂದೆ ತಮ್ಮಷ್ಟು ಪ್ರಬಲರು ಯಾರೂ ಇಲ್ಲ ಅಂತ ಬೀಗುವ ಮಹಾನ್ಮಹಾ ನವನಾಯಕರೆಲ್ಲಾ ಅಸಹಾಯಕರಾಗಿಬಿಡುತ್ತಾರೆ. ಮಾನವನ ಜತೆ ಈ ಕ್ರಿಮಿಗಳನ್ನೂ ಜಗತ್ತಿಗೆ ತಂದಿರುವ ಮಹಾಚೇತನ, ತಾನೇ ನಿರ್ದೇಶಿಸಿದ ಕ್ರಿಮಿನಾಟಕದಲ್ಲಿ ತಟಸ್ಥ ಪಾತ್ರ ವಹಿಸಿಕೊಳ್ಳುತ್ತದೆ.

ಇನ್ನು ಕಷ್ಟಕಾಲದಲ್ಲಿ ನೆರವಿಗೆ ಬೇಕೆಂದು ಮಾನವನೇ ಸೃಷ್ಟಿಸಿಕೊಂಡಿರುವ ಅಸಂಖ್ಯ ದೇವರುಗಳೆಲ್ಲಾ ಈ ಕ್ರಿಮಿಗಳೆದುರು ನಿಷ್ಪ್ರಯೋಜಕವಾಗಿಬಿಡುತ್ತವೆ. ತಾನು ಅಗಾಧವಾಗಿ ನಂಬುವ ಈ ದೇವಾದಿದೇವರುಗಳೆಲ್ಲಾ ಮಾನವಕೋಟಿಯನ್ನು ಕಷ್ಟಕ್ಕೆ ನೂಕಿ ಸುಮ್ಮನಿರುವುದನ್ನು ಸ್ವೀಕರಿಸಲಾಗದ ಮನುಷ್ಯನ ಮನಸ್ಸು, ಯಾವುದೋ ಗರ್ಭಗುಡಿಯಲ್ಲಿ ‘ನಂದಾದೀಪ ನಂದಿದ’ ಕತೆ ಹೆಣೆಯುತ್ತದೆ. ಈ ಕತೆಗಳೆಲ್ಲಾ ಕುಚೇಷ್ಟೆಗಳಲ್ಲ. ಗಾಳಿಸುದ್ದಿ ಹಬ್ಬಿಸುವ ಹಪಹಪಿಯಿಂದ ಹುಟ್ಟಿಕೊಂಡವುಗಳಲ್ಲ. ದೈವವೂ ಅಸಹಾಯಕವಾಯಿತೇನೋ ಎನ್ನುವ ಯೋಚನೆಯಲ್ಲಿ ಮನುಷ್ಯನ ಮನಸ್ಸು ಅನುಭವಿಸುವ ಸ್ವಮರುಕದ ಪ್ರಕಟಣೆಗಳು ಇವೆಲ್ಲ. ಇದಕ್ಕೆ ಪ್ರತಿಕ್ರಿಯೆಯಾಗಿ

‘ಇಲ್ಲ ಏನೂ ನಂದಿಲ್ಲ, ಏನೂ ನಂದುವುದೂ ಇಲ್ಲ, ಪ್ರಾರ್ಥಿಸಿಕೊಳ್ಳಿ’ ಎನ್ನುವ ಸಮಜಾಯಿಷಿ ಕೇಳಿಸುತ್ತದೆ. ಎಡವಿಬಿದ್ದ ಭೂಮಿಯನ್ನೇ ಪುನಃ ಎದ್ದು ನಿಂತುಕೊಳ್ಳುವುದಕ್ಕೂ ಆಧರಿಸಿಕೊಳ್ಳಬೇಕಾದ ಸ್ಥಿತಿಯಿಂದ ಮನುಷ್ಯನಿಗೆ ಬಿಡುಗಡೆ ಎಂಬುದಿಲ್ಲ. ಈ ಅನಿವಾರ್ಯವನ್ನು ಲಾಭಕ್ಕಾಗಿ ಹೇಗೆ ಬಳಸಿಕೊಳ್ಳಬೇಕೆಂಬುದು ಕೆಲವರಿಗೆ ಚೆನ್ನಾಗಿ ಗೊತ್ತಿದೆ. ಇನ್ನೊಂದು ನೂರು ಕೊರೊನಾಗಳು ಬಂದುಹೋದರೂ ಹೊಸ ದೇವರುಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಹಳೆಯ ದೇವರುಗಳ ಸುತ್ತ ಹೊಸ ಕತೆಗಳು ಕೇಳಿಸುತ್ತಲೇ ಇರುತ್ತವೆ.

ಇತಿಹಾಸದುದ್ದಕ್ಕೂ ಮಾನವನ ದುರಹಂಕಾರಕ್ಕೆ ತಿರುಗೇಟು ನೀಡಲು ಸಾಧ್ಯವಾದದ್ದು ಕ್ರಿಮಿಗಳಿಗೆ ಮಾತ್ರ. ತಾನೆಷ್ಟು ಸಣ್ಣವನು ಎನ್ನುವ ಪ್ರಜ್ಞೆ ಸದಾ ಜಾಗೃತವಾಗಿರಲಿ ಎನ್ನುವುದು ಈ ಕ್ರಿಮಿಗಳನ್ನು ಛೂ ಬಿಟ್ಟಿರುವ ಪ್ರಕೃತಿಯ ಉದ್ದೇಶವಿರಬೇಕು. ಆದರೇನು? ಕ್ರಿಮಿಸೇನೆಯನ್ನು ಕಳುಹಿಸಿ ಮಾನವನನ್ನು ಹೈರಾಣಾಗಿಸುವಲ್ಲಿ ಪ್ರಕೃತಿಯು ಆಗಾಗ ಗೆದ್ದು ನಗೆ ಬೀರುತ್ತಿರಬಹುದು. ಮಾನವನಿಗೆ ಆತನ ಸಣ್ಣತನವನ್ನು ಮನದಟ್ಟು ಮಾಡಿಸುವಲ್ಲಿ ಮಾತ್ರ ಪ್ರಕೃತಿ ಎಂದಾದರೂ ಗೆದ್ದದ್ದುಂಟೇ? ಕೊರೊನಾ- ಸಮಾನ ದುರಂತವನ್ನು ಚಿತ್ರಿಸುವ ಆಲ್‌ಫ್ರೆಡ್‌ ಕಾಮುವಿನ ‘ದ ಪ್ಲೇಗ್’ ಕಾದಂಬರಿಯ ಕೊನೆಯಲ್ಲಿ ಪ್ಲೇಗ್‌ ಮಾರಿ ಹೊರಟುಹೋದದ್ದು ಖಾತರಿಯಾದಾಗ ಜನ ಸಂಭ್ರಮಾಚರಣೆ ಮಾಡುತ್ತಾರೆ. ತಮ್ಮ ನಡುವೆ ನಿನ್ನೆ ಮೊನ್ನೆಯವರೆಗೆ ಜೀವಿಸುತ್ತಿದ್ದ ಅರ್ಧಕ್ಕರ್ಧ ಜನರನ್ನು ಪ್ಲೇಗ್‌ ಕೊಂದು ಹೋಗಿದೆ ಎನ್ನುವ ಸತ್ಯ, ಸಂಭ್ರಮಾಚರಣೆಗೆ ಅಡ್ಡಿ ಬರುವುದಿಲ್ಲ. ಕಾದಂಬರಿಯ ನಾಯಕ ಡಾ. ರಿಯು ಆಚರಣೆಯಲ್ಲಿ ಪಾಲ್ಗೊಳ್ಳುವುದಿಲ್ಲ.

ಪ್ಲೇಗ್‌ ಮರಣನರ್ತನದ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಅಸಂಖ್ಯ ಮಂದಿಯನ್ನು ಸಾವಿನ ದವಡೆಯಿಂದ ಪಾರು ಮಾಡುವ ಕೆಲಸವನ್ನು ಪವಿತ್ರ ಮಾನವೀಯವ್ರತ ಎನ್ನುವ ರೀತಿಯಲ್ಲಿ ಮಾಡಿದ್ದ ಡಾ. ರಿಯುಗೆ ಮಾತ್ರ ಪ್ರಕೃತಿಯ ವಿರುದ್ಧ ಗೆದ್ದ ಯಾವ ಗೆಲುವೂ ಶಾಶ್ವತವಲ್ಲ ಎನ್ನುವ ಸತ್ಯ ಗೋಚರವಾಗಿರುತ್ತದೆ.

ಭಾರತದಲ್ಲಿ ಕೊರೊನಾ ಉಪಟಳ ವಿಪರೀತಕ್ಕೆ ಹೋದ ನಂತರ ನಮ್ಮ ಮುಂದೆ ಹಾದುಹೋದ ದೃಶ್ಯಾವಳಿಗಳನ್ನು ಗಮನಿಸುತ್ತಿದ್ದರೆ, ನಮ್ಮ ಈ ಕ್ಷಣದ ಅಸಹಾಯಕತೆಯ ಬಗ್ಗೆ ಕೆಲ ಸತ್ಯಗಳು ಅನಾವರಣಗೊಳ್ಳುತ್ತವೆ. ಮುಖ್ಯವಾಗಿ, ಇಲ್ಲಿ ಕೊರೊನಾದ ಭೀಕರತೆ ಕಾಣಿಸಿದ್ದು ಅದು ತರುವ ಮತ್ತು ತರಬಹುದಾದ ರೋಗರುಜಿನ, ಸಾವಿನ ಕಾರಣಕ್ಕಾಗಿ ಅಲ್ಲ. ಕೊರೊನಾ ಭೀಕರ ಅಂತ ಅನ್ನಿಸಿದ್ದು ಜನಸಾಮಾನ್ಯರು ಬೀದಿಗೆ ಬರುವುದರ ಅವಶ್ಯಕತೆ ಮತ್ತು ಅನವಶ್ಯಕತೆಯನ್ನು ಪೊಲೀಸರು ನಿರ್ಧರಿಸುವ ಅನಿವಾರ್ಯವನ್ನು ಅದು ತಂದೊಡ್ಡಿತು ಎನ್ನುವ ಕಾರಣಕ್ಕಾಗಿ.

ರಾತ್ರಿ ಎಂಟು ಗಂಟೆಗೆ ಟಿ.ವಿ ಪರದೆಯ ಮೇಲೆ ಕಾಣಿಸಿಕೊಂಡ ನಾಯಕ, ಹನ್ನೆರಡು ಗಂಟೆಯ ನಂತರ ದೇಶದಲ್ಲಿ ಎಲ್ಲವೂ ಸ್ತಬ್ಧ ಎಂದಾಕ್ಷಣ, ಮರುದಿನ ಬೆಳಗಾತ 130 ಕೋಟಿ ಜನ, ಇಲಿಗಳು ಬಿಲ ಸೇರಿದಂತೆ ಬೀದಿಯಿಂದ ಕಣ್ಮರೆಯಾಗಿಬಿಡಲು ವಾಸ್ತವಿಕವಾಗಿ ಸಾಧ್ಯವಿರಲಿಲ್ಲ. ಇಷ್ಟೊಂದು ದೊಡ್ಡ ಬದಲಾವಣೆಗೆ ಒಂದಷ್ಟು ಸಮಯ ತಗುಲಿಯೇ ತಗುಲುತ್ತದೆ ಅಂತ ಅರ್ಥ ಮಾಡಿಕೊಳ್ಳಲು ಯುಪಿಎಸ್‌ಸಿ ಪರೀಕ್ಷೆ ಬಿಡಿ, ಕನಿಷ್ಠ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆ ಕೂಡಾ ಪಾಸು ಮಾಡುವ ಅಗತ್ಯವೇನೂ ಇಲ್ಲ. ಆದರೂ ಮರುದಿನ ಕರ್ನಾಟಕದ ಬೀದಿಬೀದಿಗಳಲ್ಲಿ ಕಂಡ ‘ಭಾರತೀಯ ಪೊಲೀಸ್‌ ಸೇವೆ’ಯನ್ನು ಈ ದೇಶ ಮರೆಯಬಾರದು.

ಅವಶ್ಯಕ ಸೇವೆ ಗಾಳಿಯಲ್ಲಿ ತೇಲಿ ಬರದು ತಾನೇ? ಅವುಗಳನ್ನು ಪೂರೈಸಲು ಒಂದಷ್ಟು ಜನ ಬೀದಿಗೆ ಬರಲೇಬೇಕಿತ್ತಲ್ಲ. ಓಡಾಟ ನಿಯಂತ್ರಿಸುವ ವ್ಯವಸ್ಥೆ ಜಾರಿಗೆ ಬರುವ ಮೊದಲೇ, ಯಾಕೆ, ಏನು, ಯಾರು ಅಂತ ಪ್ರಶ್ನಿಸುವ ಮುನ್ನವೇ, ಆರೋಗ್ಯ ಸೇವೆ ನೀಡಲು ಹೋಗುವವರನ್ನೂ ಸೇರಿ ಎಲ್ಲರನ್ನೂ ಪೊಲೀಸರು ಮನಸೋಇಚ್ಛೆ ಬಡಿದ, ಅವಶ್ಯಕ ಸಾಮಗ್ರಿಗಳನ್ನು ಬೀದಿಗೆಸೆದ, ಮಾಸ್ಕ್‌ ಹಾಕಿಲ್ಲ ಅಂತ ಮುಖಕ್ಕೆ ಹೊಡೆದ ಅಸಂಗತತೆಯನ್ನು ಹೇಗೆ ಅರ್ಥೈಸಿಕೊಳ್ಳುವುದು?

ಪೊಲೀಸರ ರಣಕೇಕೆಯನ್ನು ಪ್ರಶ್ನಿಸಬೇಕಾದ ಮಾಧ್ಯಮಗಳು ನಡೆದುಕೊಂಡ ರೀತಿ ಇನ್ನೂ ಅಸಂಗತವಾಗಿತ್ತು. ಟಿ.ವಿ. ಚಾನೆಲ್‌ ಮಂದಿ ಪೊಲೀಸರ ಆರ್ಡರ್ಲಿಗಳಂತೆ ವರ್ತಿಸಿದರೆ, ಬಹುತೇಕ ಮುಖ್ಯವಾಹಿನಿ ಪತ್ರಿಕೆಗಳು ಜನರ ಅಸಹಾಯಕತೆಗೆ ಒದಗುವುದಕ್ಕಿಂತ, ಪೊಲೀಸರ ಮುಖವಾಣಿಗಳಾಗುವುದೇ ಪತ್ರಿಕಾಧರ್ಮ ಎಂಬಂತೆ ಪ್ರತಿಕ್ರಿಯಿಸಿದವು. ಯಾರೋ ಕೋರ್ಟಿನಲ್ಲಿ ಪ್ರಶ್ನಿಸಲು ಮುಂದಾಗಿ, ಚುನಾಯಿತ ನಾಯಕತ್ವದ ಮುಖಕ್ಕೆ ಜನ ಮಂಗಳಾರತಿ ಮಾಡಲು ಪ್ರಾರಂಭಿಸಿದ ನಂತರ ‘ಲಾಠಿ ಬೇಡ’ ಎನ್ನುವ ಸಂದೇಶ ಬಂತು!

ಪರಿಸ್ಥಿತಿ ನಿಭಾಯಿಸುವಲ್ಲಿ ಕರ್ನಾಟಕದ ರಾಜಕೀಯ ನಾಯಕತ್ವ ನಡೆದುಕೊಂಡ ರೀತಿ ‘ದ ಸ್ಟ್ರೇಂಜ್‌ ಕೇಸ್ ಆಫ್‌ ಬಿಲ್ಲಿ ಬಿಸ್ವಾಸ್’ ಎನ್ನುವ ಇಂಗ್ಲಿಷ್‌ ಕಾದಂಬರಿಯನ್ನು ನೆನಪಿಸುತ್ತದೆ. ಅದರಲ್ಲಿ ಐಎಎಸ್‌ಗೆ ಆಯ್ಕೆಯಾದ ಒಬ್ಬಾತನಿಗೆ ನಿವೃತ್ತ ನ್ಯಾಯಾಧೀಶನೋರ್ವ ಎರಡು ಸಲಹೆಗಳನ್ನು ನೀಡುತ್ತಾನೆ. ಮೊದಲನೆಯದ್ದು, ನೀನು ತೆಗೆದುಕೊಳ್ಳಬೇಕಾದ ನಿರ್ಣಯಗಳನ್ನು ತೆಗೆದುಕೊಳ್ಳಲು ಇನ್ನೊಬ್ಬರಿಗೆ ಯಾವತ್ತೂ ಅವಕಾಶ ನೀಡಬೇಡ. ಎರಡನೆಯದ್ದು, ಸಂದಿಗ್ಧದ ಸಮಯದಲ್ಲಿ ಪೊಲೀಸರ ಕೈ ಮೇಲಾಗುವ ಪರಿಸ್ಥಿತಿಯನ್ನು ಸೃಷ್ಟಿಸಿಕೊಳ್ಳಬೇಡ. ಆತ ಈ ಎರಡೂ ಸಲಹೆಗಳನ್ನು ಉಪೇಕ್ಷಿಸಬೇಕಾಗುತ್ತದೆ.

ಪರಿಣಾಮವಾಗಿ, ಕಥಾನಾಯಕ ದುರಂತ ಸಾವಿಗೆ ಈಡಾಗುತ್ತಾನೆ. ದೇಶದ ಮುಂದಿರುವುದು ಒಂದು ಮಾನವೀಯ ಬಿಕ್ಕಟ್ಟು. ಇದು ಒಣಬುದ್ಧಿವಂತಿಕೆ ಮತ್ತು ತಾಂತ್ರಿಕ ಅಹಮಿಕೆಯಿಂದ ಮಾತ್ರ ನಿಭಾಯಿಸಬಹುದಾದದ್ದಲ್ಲ. ರಾಜಕೀಯ ನಾಯಕರು ಪೊಲೀಸರಿಗೆ ಎಲ್ಲವನ್ನೂ ಒಪ್ಪಿಸಿಬಿಟ್ಟರೆ ಮುಂದಿನ ದಿನಗಳು ಭೀಕರವಾಗಬಹುದು. ಇದರರ್ಥ ರಾಜಕೀಯ ಹಸ್ತಕ್ಷೇಪ ನಡೆಸಬೇಕೆಂದಲ್ಲ.

ಕೊರೊನಾ ವೈರಸ್ ಒಂದು ದಿನ ಸಾಯಲಿದೆ. ಆದರೆ, ಅದು ಅನಾವರಣಗೊಳಿಸುತ್ತಿರುವ ಇತರ ಅಪಾಯಕಾರಿ ವೈರಸ್‌ಗಳೆಲ್ಲಾ ಬದಲಾಗುವ ಲಕ್ಷಣ ಇಲ್ಲ. ಕೊರೊನೋತ್ತರ ಭಾರತದಲ್ಲಿ ರಾಜಕೀಯ ನಾಯಕತ್ವವು ‘ಭಾರತೀಯ ಪೊಲೀಸ್‌ ಸೇವೆ’ಯನ್ನು ಕೆಲಕಾಲ
ಕ್ವಾರಂಟೈನ್‌ನಲ್ಲಿಟ್ಟು ಪರೀಕ್ಷಿಸಿ ಚಿಕಿತ್ಸೆ ನೀಡದೇ ಹೋದರೆ ಈ ದೇಶ ಅಂತರ್ಯುದ್ಧವೊಂದಕ್ಕೆ ಸನ್ನದ್ಧವಾಗಿ ಇರಬೇಕಾಗುತ್ತದೆ. ಆದರೆ ರಾಜಕೀಯ ನಾಯಕತ್ವವೇ ನಿರಂತರವಾಗಿ ವಿವಿಧ ರೀತಿಯ ಸೋಂಕುಗಳನ್ನು ತಗುಲಿಸಿಕೊಂಡ ಸ್ಥಿತಿಯಲ್ಲಿ ಇದೆ ಎನ್ನುವುದು ನಿಜವಾದ ಸಮಸ್ಯೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT