ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುರಣನ: ಹೀಗೆಯೇ ಆದಲ್ಲಿ ಈ ಸಂವಿಧಾನ ಉಳಿಯದು

ಹರಿದ್ವಾರದಲ್ಲಿ ನರಮೇಧಕ್ಕೆ ಕರೆ, ಉಡುಪಿಯಲ್ಲಿ ದ್ವೇಷಭಾಷಣ...
Last Updated 13 ಜನವರಿ 2022, 19:30 IST
ಅಕ್ಷರ ಗಾತ್ರ

ಕಾಣುವ ಕಣ್ಣಿದ್ದವರಿಗೆ, ಮಾನವೀಯವಾಗಿ ಮಿಡಿಯಬಲ್ಲ ಹೃದಯವಿದ್ದವರಿಗೆ ಎಲ್ಲವೂ ಸ್ಪಷ್ಟವಾಗಿ ಅನುಭವಕ್ಕೆ ಬರಲೇಬೇಕು. ಈ ದೇಶದಲ್ಲಿ ಸಂವಿಧಾನ ವಿರೋಧಿ ಶಕ್ತಿಗಳು ದಿನದಿಂದ ದಿನಕ್ಕೆ ಬಲ ವೃದ್ಧಿಸಿಕೊಂಡು ವಿಜೃಂಭಿಸುತ್ತಿದ್ದರೆ, ಸಂವಿಧಾನದ ರಕ್ಷಣೆಗೆ ನಿಂತಿದ್ದೇವೆ ಅಂತ ಹೇಳುತ್ತಿರುವವರೆಲ್ಲಾ ಘೋರ ಆತ್ಮವಂಚನೆಯಲ್ಲಿ ನಿರತರಾಗಿದ್ದಾರೆ ಅನ್ನಿಸುತ್ತಿದೆ. ಈ ದೇಶವನ್ನು ಸಂವಿಧಾನದ ಮೂಲಕ ಆಳುವ ಬದಲಿಗೆ ಹಿಂಸೆಯ ಮೂಲಕ ಆಳುವ ಸನ್ನಾಹ ಒಂದೆಡೆ ನಡೆಯುತ್ತಿದ್ದರೂ ಸಂವಿಧಾನದ ಪರವಾಗಿ ದೊಡ್ಡ ಧ್ವನಿಗಳೇನೂ ಕೇಳಿಸುತ್ತಿಲ್ಲ. ಅಲ್ಲೊಂದು ಇಲ್ಲೊಂದು ಎಂಬಂತೆ ಕೇಳಿದ ಪ್ರತಿರೋಧದ ಧ್ವನಿಗಳು ಹಿಂಸಾವಾದಿಗಳ ರಣಕೇಕೆಯ ಮಧ್ಯೆ ಉಡುಗಿ ಹೋಗುತ್ತಿವೆ.

ಡಿಸೆಂಬರ್ ತಿಂಗಳ ಕೊನೆಗೆ ಹರಿದ್ವಾರದ ಪ್ರಾಂಗಣದಲ್ಲಿ ಧರ್ಮಸಂಸತ್ತು ನಡೆಸಿದ ಕೆಲ ಹಿಂದೂ ‘ಸಂತ’ರು ಅಕ್ಷರಶಃ ನರಮೇಧಕ್ಕೆ ಕರೆ ನೀಡಿದರು. ಭಾರತವನ್ನು ‘ಹಿಂದೂರಾಷ್ಟ್ರ’ವನ್ನಾಗಿ ಪರಿವರ್ತಿಸಲು ಮುಸ್ಲಿಮರ ಹತ್ಯೆಗೆ ಆಯುಧ ಕೈಗೆತ್ತಿಕೊಳ್ಳಿ ಅಂತ ಯಾವುದೇ ಅಳುಕಿಲ್ಲದೆ ಹೇಳಿದರು. ಇದು ನಿಜಕ್ಕೂ ಎಪ್ಪತ್ತು ವರ್ಷಗಳಲ್ಲಿ ಈ ದೇಶ ಕಾಣದ ಮತ್ತು ಕೇಳದ ವಿದ್ಯಮಾನ. ಕ್ಯಾಮೆರಾದ ಮುಂದೆ ನಿಂತು ಈ ರೀತಿ ಸಾಮೂಹಿಕ ಕಗ್ಗೊಲೆಗೆ ಕರೆ ನೀಡಿದ ಉದಾಹರಣೆ ಹಿಂದೆಂದೂ ನಡೆದ ಹಾಗಿಲ್ಲ.

ಇದೇನೂ ಯಾರೋ ಎಲ್ಲೋ ಆವೇಶದಿಂದ ಬಾಯಿತಪ್ಪಿ ಹೇಳಿದ್ದು ಅಂತ ಉಪೇಕ್ಷಿಸಬಹುದಾದ ಒಂದು ಬಿಡಿ ಘಟನೆಯಲ್ಲ. ಹೆಚ್ಚುಕಡಿಮೆ ಇಂತಹದ್ದೇ ಕರೆ, ಅದೇ ರೀತಿಯ ಮಾತುಗಳು ಛತ್ತೀಸಗಡ ಮತ್ತು ದೆಹಲಿಯಲ್ಲಿ ನಡೆದ ಧರ್ಮಸಂಸತ್ತುಗಳಲ್ಲೂ ಪುನರುಚ್ಚಾರಗೊಂಡವು. ಅದೇ ವೇಳೆಗೆ ಕರ್ನಾಟಕದ ಉಡುಪಿಯ ಮಠದಲ್ಲಿ ಏರ್ಪಾಡಾದ ಸಮಾವೇಶವೊಂದರಲ್ಲಿ ಮಾತನಾಡಿದ ಕೆಲವರು ಅದ್ಭುತ ದ್ವೇಷಭಾಷಣ ಮಾಡಿದರು. ಅಲ್ಲಿ ನೆಹರೂ ಅವರ ಅಪಹಾಸ್ಯ, ಇತರ ಧರ್ಮಗಳ ನಿಂದನೆ, ಸತ್ಯಮೇವ ಜಯತೆ ಕಾರ್ಯಕ್ರಮ ಮಾಡಿದ್ದಕ್ಕಾಗಿ ಅಮೀರ್ ಖಾನ್ ಅವರನ್ನು ಜಿಹಾದ್ ಖಾನ್ ಅಂತ ಹಂಗಿಸಿದ್ದು ಇತ್ಯಾದಿಗಳೆಲ್ಲಾ ಆಯಿತು. ಅಲ್ಲಿ ಮಾತನಾಡಿದವರ ಪೈಕಿ ಓರ್ವ ವ್ಯಕ್ತಿ ತನ್ನ ಮಾತುಗಳನ್ನು ಹಿಂತೆಗೆದುಕೊಂಡೆ ಅಂತ ಘೋಷಿಸಬೇಕಾಯಿತು. ಕಳಪೆ ರಾಜಕೀಯ ಸಭೆಗಳಲ್ಲೂ ಕೇಳಲು ಸಿಗದ, ‘ಅನ್ಯರಿಗೆ ಅಸಹ್ಯಪಡುವ, ತನ್ನ ಬಣ್ಣಿಸುವ, ಇದಿರ ಹಳಿಯುವ’ ಪದಪುಂಜಗಳನ್ನು ಧರ್ಮಪ್ರವಚನದ ಭಾಗವಾಗಿ, ಮಠದ ಮುಖ್ಯಸ್ಥರ ‘ದಿವ್ಯ ಸಾನ್ನಿಧ್ಯದಲ್ಲಿ’ ಕೇಳಿಸಿಕೊಂಡು ಪುಳಕಿತಾನಂದರಾದ ಭಕ್ತಾದಿಗಳು ಎಂಥವರೋ ಗೊತ್ತಿಲ್ಲ. ‘ದ್ವೇಷ ಮನುಷ್ಯನೊಳಗೋ ಮನುಷ್ಯ ದ್ವೇಷದೊಳಗೋ’ ಎಂಬ ಪ್ರಶ್ನೆ ಇದನ್ನೆಲ್ಲಾ ಕೇಳಿಸಿಕೊಂಡ ಕೆಲವರ ಮನಸ್ಸಿನಲ್ಲಾದರೂ ಮೂಡಿರಬಹುದು ಎಂದು ಭಾವಿಸೋಣ.

ಯಾರನ್ನೋ ಕೊಲ್ಲಲು ಕರೆ ನೀಡುವುದು, ಒಂದು ಸಮುದಾಯದ ಬಗ್ಗೆ ಅರ್ಧಸತ್ಯ ಲೇಪಿತ ಸುಳ್ಳುಗಳನ್ನು ಹರಡಿ ಇನ್ನೊಂದು ಸಮುದಾಯದವರ ಮಧ್ಯೆ ಅಭದ್ರತೆಯನ್ನು ಸೃಷ್ಟಿಸುವುದು ಇತ್ಯಾದಿಗಳೆಲ್ಲಾ ಅಧಿಕಾರದಾಟದ ಭಾಗವಾಗಿ ನಡೆಯುವುದುಂಟು. ರಾಜಕೀಯವು ರಕ್ತಪಿಪಾಸಿ ಮಾರ್ಗ ಹಿಡಿದಾಗ ಧರ್ಮದ ಮರ್ಮ ತಿಳಿದವರು ದ್ವೇಷ ತಣಿಸುವುದಕ್ಕೆ ಮುಂದಾದರೆ ಅದು ಮನುಷ್ಯ ಸಮಾಜದ ಲಕ್ಷಣ. ಅಧಿಕಾರಕ್ಕಾಗಿ ಯಾವ ಆಟವನ್ನಾದರೂ ಆಡಲು ಸಿದ್ಧವಿರುವ ಮಂದಿಯ ಜತೆಗೆ ಧರ್ಮದ ಪೋಷಾಕು ಹಾಕಿಕೊಂಡ ಮಂದಿ ಕೂಡಾ ಸೇರಿಕೊಂಡು ನರಮೇಧಕ್ಕೆ ಮುಹೂರ್ತ ನಿಗದಿಪಡಿಸಲು ಹೊರಟರೆ ಅದು ಘೋರ ದುರಂತಕ್ಕೆ ದಾರಿಯಾಗುತ್ತದೆ. ಹಾಗಂತ ಚರಿತ್ರೆ ಮತ್ತೆ ಮತ್ತೆ ದಾಖಲಿಸಿದೆ. ಯಾರು ಯಾವ ಪಕ್ಷದ ಬೆಂಬಲಿಗರು ಎನ್ನುವುದಕ್ಕಿಂತಾಚೆಗೆ, ಯಾರು ಯಾವ ಐಡಿಯಾಲಜಿಗೆ ಬದ್ಧರಾಗಿರುವವರು ಎಂಬುದಕ್ಕಿಂತ ಆಚೆಗೆ, ಯಾರು ಸಂಪ್ರದಾಯವಾದಿಗಳು, ಯಾರು ಉದಾರವಾದಿಗಳು ಎನ್ನುವುದಕ್ಕಿಂತಾಚೆಗೆ, ಯಾರು ಎಡ, ಯಾರು ಬಲ ಎನ್ನುವುದರಾಚೆಗೆ ಇಲ್ಲಿರುವುದು ಮನುಷ್ಯತ್ವದ ಪ್ರಶ್ನೆ. ಮನುಷ್ಯ ಸಮುದಾಯಗಳ ಬಗ್ಗೆ ಸಾವಿರಾರು ಕಗ್ಗಂಟುಗಳು ಉಂಟಾಗುತ್ತವೆ. ಪ್ರಶ್ನೆ ಏನೇ ಇರಲಿ, ಮನುಷ್ಯರಾದವರು ನರಮೇಧಕ್ಕೆ ಕರೆ ನೀಡುವುದಿಲ್ಲ.

ಖ್ಯಾತ ಸಮಾಜಶಾಸ್ತ್ರಜ್ಞ ಅರ್ಜುನ್ ಅಪ್ಪಾದೊರೈ ಈ ಕುರಿತು ಎಚ್ಚರಿಕೆಯ ರೂಪದಲ್ಲಿ ಬರೆದಿರುವ ಒಂದು ಅವಲೋಕನವನ್ನು ಗಮನಿಸಬೇಕು. ಅವರ ಪ್ರಕಾರ, ಭಾರತದಲ್ಲಿ ರಾಷ್ಟ್ರೀಯವಾದ ಎನ್ನುವುದು ಈಗ ಹಿಂಸಾವಾದದ ಹಂತವನ್ನೂ ದಾಟಿ ‘ನರಮೇಧವಾದ’ದ (genocidism) ಘಟ್ಟವನ್ನು ಪ್ರವೇಶಿಸುತ್ತಿದೆ. ರಾಜಕೀಯದಲ್ಲಿ ಹಿಂಸೆಯ ಭಾಷೆಯನ್ನು ಒಮ್ಮೆ ಬಳಸಲು ಪ್ರಾರಂಭಿಸಿದರೆ ಮರುಬಳಕೆಯಲ್ಲಿ ಅದನ್ನು ಮತ್ತೂ ತೀವ್ರಗೊಳಿಸಬೇಕಾಗುತ್ತದೆ. ಹಿಂದೆ ಮಾತನಾಡಿದ್ದಕ್ಕಿಂತ ಹೆಚ್ಚು ವ್ಯಗ್ರವಾಗಿ ಈಗ ಮಾತನಾಡಬೇಕಾಗುತ್ತದೆ, ಈಗ ಮಾತನಾಡಿದ್ದಕ್ಕಿಂತ ಉಗ್ರವಾಗಿಯೂ ಮುಂದೆ ಮಾತನಾಡಬೇಕಾಗುತ್ತದೆ. ಭಾಷೆಯ
ವ್ಯಗ್ರತೆಯನ್ನು ಇನ್ನಷ್ಟೂ ಹರಿತಗೊಳಿಸಲು ಸಾಧ್ಯವಾಗುವುದಿಲ್ಲ ಎನ್ನುವ ಹಂತದಲ್ಲಿ ಆಡಿದ್ದನ್ನು ಕೃತಿಗಿಳಿಸಿ ತೋರಿಸಬೇಕಾಗುತ್ತದೆ. ಹಿಂಸೆಯನ್ನು ಮೆಟ್ಟಲಾಗಿ ಬಳಸುವ ರಾಜಕೀಯ ಸಾಗುವ ಮಾಮೂಲಿ ಹಾದಿ ಇದು. ಈ ಹಾದಿ ಹಿಡಿದು ಭಾರತದಲ್ಲಿ ರಾಜಕೀಯ ಮಾಡುತ್ತಿರುವವರು ನಮ್ಮ ಧರ್ಮದಲ್ಲೇ ಮತನಿರಪೇಕ್ಷತೆ ಇದೆ, ನಮ್ಮ ಸಂಸ್ಕೃತಿಯಲ್ಲೇ ಸೌಹಾರ್ದ ಇದೆ ಎನ್ನುತ್ತಾರೆ. ಸಂವಿಧಾನ ಸಾರುವ ಮತನಿರಪೇಕ್ಷತೆ ಅಪ್ರಸ್ತುತ ಎನ್ನುತ್ತಾರೆ. ಅವರು ನಿಜಕ್ಕೂ ಏನು ಹೇಳುತ್ತಿದ್ದಾರೆ ಎನ್ನುವುದನ್ನು ಹರಿದ್ವಾರದಲ್ಲಿ, ಉಡುಪಿಯಲ್ಲಿ ಕೇಳಿಸಿದ ಮಾತುಗಳು ಸ್ಪಷ್ಟಪಡಿಸುತ್ತವೆ.

ಈ ಬೆಳವಣಿಗೆಗಳ ಕುರಿತಾಗಿ ಬಂದ ಪ್ರತಿಕ್ರಿಯೆ ನೋಡಿ. ಮತ್ತೆ ಅದೇ ಒಂದಷ್ಟು ಪ್ರಗತಿಪರ ಸಂಘಟನೆಗಳು ಮತ್ತು ಚಿಂತಕರು ಮಾತ್ರ ಜೋರಾಗಿ ಧ್ವನಿ ಎತ್ತಿದ್ದಾರೆ. ಒಂದೇ ವ್ಯತ್ಯಾಸವೆಂದರೆ, ಈ ಬಾರಿ ನಾಲ್ಕೈದು ಮಂದಿ ಸೇನಾಪಡೆಗಳ ಮಾಜಿ ಮುಖ್ಯಸ್ಥರು, ಒಂದಷ್ಟು ಮಂದಿ ಸುಪ್ರೀಂ ಕೋರ್ಟ್ ನ್ಯಾಯವಾದಿಗಳು ಸೇರಿ ‘ದೇಶದಲ್ಲಿ ನಡೆಯಬಾರದೆಲ್ಲಾ ನಡೆಯುತ್ತಿದೆ ಅಂತ ಹೇಳುವ ಧೈರ್ಯ ತೋರಿದ್ದಾರೆ. ಸೇನಾಪಡೆಗಳ ಈ ಮಾಜಿ ಮುಖ್ಯಸ್ಥರುಗಳಂತೂ ಪ್ರಧಾನಿಯವರಿಗೆ ಪತ್ರ ಬರೆದು, ಇವೆಲ್ಲವೂ ಹೀಗೇ ಮುಂದುವರಿದರೆ ಈ ದೇಶದ ಸೇನಾಪಡೆಗಳನ್ನು ಒಗ್ಗಟ್ಟಿನಿಂದ ಉಳಿಸಿಕೊಳ್ಳುವುದು ಕಷ್ಟ ಅಂತಲೂ, ಸೇನಾಪಡೆಗಳಲ್ಲಿ ಸಾಮಾಜಿಕ ಒಡಕು ಕಾಣಿಸಿಕೊಂಡದ್ದೇ ಆದರೆ ಒದಗಬಹುದಾದ ಗಂಡಾಂತರವನ್ನು ಊಹಿಸಲೂ ಸಾಧ್ಯವಿಲ್ಲ ಅಂತಲೂ ತಿಳಿಹೇಳಿದ್ದಾರೆ. ಸರ್ಕಾರ ಇಂತಹ ಗಂಡಾಂತರಕಾರಿ ಶಕ್ತಿಗಳ ಜೊತೆಗೆ ಇಲ್ಲ ಎನ್ನುವ ಸ್ಪಷ್ಟನೆ ಅತ್ಯುನ್ನತ ಸ್ಥಾನದಲ್ಲಿ ಇರುವವರಿಂದಲೇ ಬರಬೇಕು ಅಂತಲೂ ಅವರು ಹೇಳಿದ್ದಾರೆ. ದ್ವೇಷ ರಾಜಕೀಯ ಮತ್ತು ಈಗ ಮೇಲೇಳುತ್ತಿರುವ ದ್ವೇಷೋತ್ತರ ರಾಜಕೀಯವು ಸರ್ಕಾರದ ಅಘೋಷಿತ ಯೋಜನೆಯ ಭಾಗವೇ (undeclared state project) ಆಗಿರುವಾಗ ಅಂತಹದ್ದೊಂದು ಸ್ಪಷ್ಟನೆ ಎಲ್ಲಿಂದ ಬರಬೇಕು?

ದೇಶದ ಪ್ರಮುಖ ವಿರೋಧ ಪಕ್ಷಗಳೆಲ್ಲಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಔಪಚಾರಿಕವಾಗಿ ಒಂದೆರಡು ಖಂಡನೆಯ ನುಡಿಗಳನ್ನಾಡಿ ಮೌನಕ್ಕೆ ಜಾರಿವೆ. ಎಲ್ಲಿ ತಮಗೆ ಹಿಂದೂ ವೋಟುಗಳು ನಷ್ಟವಾಗಿ ಬಿಡುವವೋ ಎಂಬ ಆತಂಕವು ವಿರೋಧ ಪಕ್ಷಗಳನ್ನು ಕಾಡಿರಬೇಕು. ವೋಟುಗಳ ಲೆಕ್ಕಾಚಾರ ಬದಿಗಿಟ್ಟು ಸಂವಿಧಾನ ಮತ್ತು ಮನುಷ್ಯತ್ವದ ರಕ್ಷಣೆಗೆ ನಿಲ್ಲುವ ಪ್ರಮುಖ ರಾಜಕೀಯ ಪಕ್ಷಗಳು ಈ ದೇಶದಲ್ಲಿ ಇಲ್ಲ ಎಂದು ಮತ್ತೊಮ್ಮೆ ಸಾಬೀತಾಗಿ ಹೋಯಿತು. ನ್ಯಾಯಾಂಗವು ಪ್ರಕರಣವೊಂದನ್ನು ದಾಖಲಿಸಿಕೊಂಡಿದೆ.

ನಾರಾಯಣ ಎ.
ನಾರಾಯಣ ಎ.

ಈ ದೇಶದ ಸಂವಿಧಾನವನ್ನು ಇನ್ನೂ ಉಳಿಸಬೇಕು ಎಂದರೆ ಅದು ಜನದನಿಯಿಂದ ಸಾಧ್ಯ. ಅಂತಹ ಜನದನಿಯೊಂದು ಗಟ್ಟಿಯಾಗಿ ಮೊಳಗುವುದರ ಮೂಲಕ ನಿರ್ಣಾಯಕ ಮುಖಾಮುಖಿಯೊಂದು ನಡೆಯದೇ ಹೋದರೆ ದೇಶದಲ್ಲಿ ಅನಪೇಕ್ಷಿತ ಸಂಘರ್ಷವೊಂದು ಉಂಟಾಗಬಹುದು. ಆ ಮುಖಾಮುಖಿಯಲ್ಲಿ ಸಂವಿಧಾನದ ಮೌಲ್ಯಗಳಿಗೆ ಬದ್ಧರಾಗಿರುವವರು ಒಂದೆಡೆ ಇರುತ್ತಾರೆ. ಸಂವಿಧಾನವನ್ನು ಬಹಿರಂಗವಾಗಿ ಕೊಂಡಾಡುತ್ತಾ ಅದನ್ನು ಒಳಗಿಂದಲೇ ಶಿಥಿಲಗೊಳಿಸಿ, ಅದು ನಾಶವಾಗುವ ಕ್ಷಣಕ್ಕಾಗಿ ಕಾಯುತ್ತಿರುವ ಕುತಂತ್ರೀ ಶಕ್ತಿಗಳೆಲ್ಲಾ ಇನ್ನೊಂದೆಡೆ ಇರುತ್ತವೆ. ಒಂದು ಕಡೆ ಮನುಷ್ಯರಿರುತ್ತಾರೆ, ಇನ್ನೊಂದು ಕಡೆ ಇರುವವರನ್ನು ಏನೆಂದು ಕರೆಯುವುದು ಗೊತ್ತಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT