ಬುಧವಾರ, ಸೆಪ್ಟೆಂಬರ್ 22, 2021
21 °C
ಆ ಒಂದು ಗೊಣಗಾಟದಲ್ಲಿ ಸ್ವಾತಂತ್ರ್ಯಾನಂತರದ ಎಪ್ಪತ್ತೈದು ವರ್ಷಗಳ ಕತೆಯಿದೆ

ನಿಜ ಸ್ವಾತಂತ್ರ್ಯಕ್ಕಾಗಿ ಹೊಸ ರಾಜಕಾರಣ

ನಾರಾಯಣ ಎ. Updated:

ಅಕ್ಷರ ಗಾತ್ರ : | |

Prajavani

ಚುನಾವಣೆಯ ಸಂದರ್ಭದಲ್ಲಿ ಭಾರತೀಯರಾದ ನಾವೆಲ್ಲರೂ ಹೇಳುವ ಅಥವಾ ಇತರರು ಹೇಳಿದಾಗ ಕೇಳಿ ತಲೆಯಾಡಿಸುವ ಆ ಒಂದು ಗೊಣಗಾಟದಲ್ಲಿ, ಸ್ವಾತಂತ್ರ್ಯಾ ನಂತರದ ಎಪ್ಪತ್ತೈದು ವರ್ಷಗಳ ಕತೆಯಿದೆ. ಏನದು ಗೊಣಗಾಟ? ಅದು ಸಾರುವ ಕತೆ ಏನು?

‘ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವವರೆಲ್ಲಾ ಕೆಟ್ಟವರು ಎಂಬುದು ಮತ್ತು ಇದ್ದವರ ಪೈಕಿ ಕಡಿಮೆ ಕೆಟ್ಟವರನ್ನು ಚುನಾಯಿಸಬೇಕಾಗಿದೆ’ ಎಂಬುದೇ ಆ ಗೊಣಗಾಟ. ಸುಮ್ಮನೆ ಮಾತಿಗೆ ಮಾತು ಎಂದು ಮರೆತುಬಿಡಬಹುದಾದ ಆ ಹೇಳಿಕೆಯು ಸ್ವಾತಂತ್ರ್ಯೋತ್ತರ ರಾಜಕೀಯದ ಘೋರ ಸತ್ಯಗಳನ್ನು ತಿಳಿಸುವ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದ್ದವರಲ್ಲೇ ಕಡಿಮೆ ಕೆಟ್ಟವರು ಅಂದರೆ ಅವರು ಎಷ್ಟು ಕೆಟ್ಟವರು? ನೂರಕ್ಕೆ ನೂರರಷ್ಟು ಕೆಟ್ಟವರನ್ನು ಬಿಟ್ಟು ನೂರಕ್ಕೆ ತೊಂಬತ್ತೊಂಬತ್ತರಷ್ಟು ಕೆಟ್ಟವರನ್ನು ಆರಿಸಿಕೊಂಡರೆ ಅಲ್ಲಿಗೆ ಸಮಸ್ಯೆ ಮುಗಿದೇಹೋಯಿತು ಅಂತ ನಾವು ನಟಿಸುತ್ತಿರುವುದಾದರೂ ಯಾಕೆ?
ಹಾಗಾದರೆ ಎಪ್ಪತ್ತೈದು ವರ್ಷಗಳಲ್ಲಿ (ಮೊದಲ ತಲೆಮಾರಿನ ನಾಯಕರುಗಳಿದ್ದ ಆರಂಭದ ದಶಕಗಳ ನಂತರ) ನಾವು ದೇಶವನ್ನು ಕಟ್ಟಿದ ಕತೆ ಎಂದರೆ, ಅದು ಖಳನಾಯಕರ ಮತ್ತು ಅರೆ-ಖಳನಾಯಕರ ಕತೆಯೇ?

ಕಾಣುವ ದೃಷ್ಟಿ ಸೂಕ್ಷ್ಮಸಮರ್ಥವಾಗಿದ್ದರೆ, ಕಂಡ ದ್ದನ್ನು ಒಪ್ಪಿಕೊಳ್ಳುವಷ್ಟು ಅಪ್ಪಟ ಪ್ರಾಮಾಣಿಕತೆ ಇದ್ದರೆ ಒಂದು ಸತ್ಯ ಸ್ಪಷ್ಟವಾಗಿ ಗೋಚರಿಸುತ್ತದೆ. ಅದೇನೆಂದರೆ, 1947ರಲ್ಲಿ ದೇಶ ಪಡೆದ ಸ್ವಾತಂತ್ರ್ಯವನ್ನು ನಿಭಾಯಿಸಬಲ್ಲ ಮತ್ತು 1950ರಲ್ಲಿ ಜನರು ಒಪ್ಪಿಕೊಂಡ ಸಂವಿಧಾನವನ್ನು ಸಾಕ್ಷಾತ್ಕರಿಸಬಲ್ಲ ಒಂದು ರಾಜಕೀಯ ಪಕ್ಷ ಈ ದೇಶದಲ್ಲಿ ಈಗ ಇಲ್ಲ. ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಹೇಗಿವೆ ಎಂದರೆ, ಯಾವ ಮಾರ್ಗ ಹಿಡಿದಾದರೂ ಸರಿ ಚುನಾವಣೆ ಗೆಲ್ಲಬಲ್ಲ ತಾಕತ್ತು ಪ್ರದರ್ಶಿಸುವವರನ್ನು ಒಟ್ಟು ಸೇರಿಸಿಕೊಂಡು ಅಧಿಕಾರದ ವ್ಯವಹಾರ ನಡೆಸುವ ಅಡ್ಡೆ ಗಳು ಎಂಬಂತಿವೆ. ಆಯಾ ಪಕ್ಷದಲ್ಲಿ ಒಂದಷ್ಟು ಮಂದಿ ಇದಕ್ಕೆ ಭಿನ್ನ ಅನ್ನಿಸುವವರು ಇರಬಹುದು. ಅವರು ಪಕ್ಷರಾಜಕಾರಣದ ಒಟ್ಟು ಪತನವನ್ನು ತಡೆಯಲಾಗದ ಅಸಹಾಯಕರು.

ಈ ರಾಜಕೀಯ ವ್ಯವಸ್ಥೆಯು ದೇಶದ ಮೇಲೆ ಹೇರಿದ ಎಲ್ಲ ಮಿತಿಗಳನ್ನು ಮೀರಿ ದೇಶ ಎಷ್ಟು ಸಾಧಿಸಬಹುದೋ ಅಷ್ಟನ್ನು ಸಾಧಿಸಿದೆ. ಇನ್ನೂ ಆಗದೇ ಉಳಿದದ್ದು ಮತ್ತು ಮುಂದೆ ಆಗಬೇಕಾದದ್ದನ್ನು ಈಗಿನ ರಾಜಕೀಯ ವ್ಯವಸ್ಥೆಯನ್ನೇ ನೆಚ್ಚಿಕೊಂಡರೆ ಮುಂದಿನ ಎಪ್ಪತ್ತೈದು ವರ್ಷಗಳಲ್ಲೂ ಸಾಧಿಸಲು ಸಾಧ್ಯವಿಲ್ಲ. ಈಗ ಭಾರತದಲ್ಲಿ ಇರುವಂತಹ ಮೂರನೆಯ ದರ್ಜೆಯ ರಾಜಕಾರಣವನ್ನು ನೆಚ್ಚಿಕೊಂಡು ಮೊದಲನೆಯ ದರ್ಜೆಯ ಪ್ರಗತಿಯನ್ನು ಸಾಧಿಸಲು ಯಾವ ದೇಶಕ್ಕೂ ಸಾಧ್ಯವಾಗಿಲ್ಲ, ಈ ದೇಶಕ್ಕೂ ಸಾಧ್ಯವಿಲ್ಲ.

ಈವರೆಗೆ ನಾವು ಅನುಸರಿಸಿಕೊಂಡು ಬಂದಿರುವ ಅಸಹ್ಯ ಆಷಾಢಭೂತಿತನ ಏನೆಂದರೆ, ನಮ್ಮ ಮುಂದಿರುವ ರಾಜಕೀಯದ ಕೊಚ್ಚೆರಾಡಿಯನ್ನು ಹಾಗೆಯೇ ಉಳಿಸಿ, ಉಳಿದಂತೆ ಎಲ್ಲವೂ ಸರಿಯಿರಬೇಕು ಎಂದು ಬಯಸುತ್ತಿರುವುದು. ಹಣ ಮಾಡಲೆಂದೇ ರಾಜಕೀಯಕ್ಕೆ ಬಂದವರನ್ನು ಚುನಾಯಿಸಿ ಸಾರ್ವಜನಿಕ ಜೀವನ ಸ್ವಚ್ಛವಾಗಿರಬೇಕೆಂದು ಬಯಸುತ್ತೇವೆ. ವ್ಯವಸ್ಥೆಯ ಬಗ್ಗೆ ಕನಿಷ್ಠ ಜ್ಞಾನವೂ ಇರದವರನ್ನು ಚುನಾಯಿಸಿ ಸಾರ್ವಜನಿಕ ಸೇವೆಗಳು ದಕ್ಷವಾಗಿರಬೇಕೆಂದು ಬಯಸುತ್ತೇವೆ, ಜಾತಿಯ ಆಧಾರದ ಮತ ಚಲಾವಣೆಯನ್ನು ಒಪ್ಪಿಕೊಳ್ಳುತ್ತಾ ಅಧಿಕಾರದಲ್ಲಿದ್ದವರು ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂದು ಬಯಸುತ್ತೇವೆ. ಅತ್ಯಂತ ಕೊಳಕು ಹಾದಿ ಹಿಡಿದು ಅಧಿಕಾರ ಪಡೆದವನನ್ನು ಮಹಾನ್ ನಾಯಕ ಅಂತ ಕೊಂಡಾಡಿ ಸಂವಿಧಾನದ ಉಲ್ಲಂಘನೆ ಆಗುತ್ತಿದೆ, ಸಂಸದೀಯ ಪ್ರಜಾಸತ್ತೆ ಕುಸಿಯುತ್ತಿದೆ ಅಂತ ಹುಯಿಲೆಬ್ಬಿಸುತ್ತೇವೆ. ಬಾಯಿಬಡುಕೇಶ್ವರಪ್ಪರನ್ನು ಚುನಾಯಿಸಿ ಸಾರ್ವಜನಿಕ ಸಂವಾದದಲ್ಲಿ ಮೌಲ್ಯಗಳೇ ಮಾಯವಾಗುತ್ತಿವೆ ಅಂತ ಮರುಗುತ್ತೇವೆ. ನಮ್ಮ ಧರ್ಮಕ್ಕೆ ಅಥವಾ ನಮ್ಮ ಜಾತಿಗೆ ಯಾವುದೋ ರೀತಿಯಲ್ಲಿ ನೆರವಾಗುವವರು ಎಂದಾದರೆ ಅಂತಹವರು ಅಧಿಕಾರ ಪಡೆಯಲು ಎಂತಹ ಕೊಳಕು ಹಾದಿ ಹಿಡಿದರೂ, ಅಧಿಕಾರ ಪಡೆದುಕೊಂಡು ಎಂಥೆಂಥ ನೀಚ ಕೆಲಸ ಮಾಡಿದರೂ ಅವರನ್ನು ಸಮರ್ಥಿಸುತ್ತೇವೆ.

ಉಳಿದೆಲ್ಲಾ ರಂಗಗಳಿಗೆ ನಮಗೆ ಒಳ್ಳೆಯವರು, ಸಮರ್ಥರು, ಸಜ್ಜನರು ಬೇಕು. ಎಲ್ಲ ರಂಗಗಳನ್ನೂ ನಿಭಾಯಿಸಲು ಬೇಕಾದ ರಾಜಕೀಯ ಶಕ್ತಿ ಪಡೆಯಲು ಮಾತ್ರ ಯಾರಾದರೂ ಆದೀತು. ಸಂವಿಧಾನ ಕಾಲು ಮುರಿದು ಬೀಳುವುದು ಇಲ್ಲಿ. ಸ್ವಾತಂತ್ರ್ಯ ಅರ್ಥಕಳೆದುಕೊಳ್ಳುವುದು ಇಲ್ಲಿ. ಜನ ಕೆಟ್ಟಿರುವುದರಿಂದ ರಾಜಕೀಯ ಪಕ್ಷಗಳೂ ಕೆಟ್ಟಿವೆ ಎನ್ನುವ ಸಮಜಾಯಿಷಿ ಯನ್ನು ಸುಲಭವಾಗಿ ಮುಂದಿಡಬಹುದು. ಇದು ಪಲಾಯನವಾದ. ‘ಇದ್ದವರಲ್ಲಿ ಕಡಿಮೆ ಕೆಟ್ಟವರನ್ನು’ ಆಯ್ದುಕೊಳ್ಳುವ ಸ್ಥಿತಿ ಬದಲಾಗಿ ‘ಇದ್ದದ್ದರಲ್ಲಿ ಹೆಚ್ಚು ಒಳ್ಳೆಯವರನ್ನು’ ಆಯ್ದುಕೊಳ್ಳುವ ಸ್ಥಿತಿ ಬರುವುದು ಯಾವಾಗ ಎನ್ನುವುದು ಇಲ್ಲಿರುವ ಪ್ರಶ್ನೆ. ಇದು ಆಗುವುದು ರಾಜಕೀಯ ಪಕ್ಷಗಳು ಒಳ್ಳೆಯವರನ್ನು ಚುನಾವಣಾ ಕಣಕ್ಕಿಳಿಸಿದಾಗ. ರಾಜಕೀಯ ಪಕ್ಷಗಳಿಗೆ ಅಂತಹವರನ್ನು ಚುನಾವಣಾ ಕಣಕ್ಕಿಳಿಸಲು ಸಾಧ್ಯವಾಗುವುದು ಯಾವಾಗ ಎಂದರೆ ಒಳ್ಳೆಯವರನ್ನು ಸ್ಪರ್ಧಿಸುವಂತೆ ಮಾಡಿ ಗೆಲ್ಲಿಸಿಕೊಳ್ಳುವ ಸೂತ್ರವೊಂದನ್ನು ಆವಿಷ್ಕರಿಸಿಕೊಂಡ ರಾಜಕೀಯ ಪಕ್ಷಗಳು ಹುಟ್ಟಿಕೊಂಡಾಗ.

ಜನರು ಕೆಟ್ಟುಹೋಗಿದ್ದಾರೆ ಎನ್ನುವ ಕಾರಣಕ್ಕೆ ರಾಜಕಾರಣ ಕೆಟ್ಟಿದ್ದು ಸತ್ಯ ಎಂದಾದರೆ ಹೇಳಬಹು ದಾಗಿರುವುದು ಇಷ್ಟೇ: ಜನರ ಕೆಟ್ಟತನಗಳನ್ನೇ ಬಳಸಿ ಅಥವಾ ಅವರನ್ನು ಇನ್ನಷ್ಟು ಕೆಡಿಸಿ ಚುನಾವಣೆ ಗೆಲ್ಲುವ ಪಕ್ಷಗಳಲ್ಲ ಇಂದು ದೇಶಕ್ಕೆ ಬೇಕಿರುವುದು. ಒಂದುವೇಳೆ ಜನ ಕೆಟ್ಟಿದ್ದರೆ ಅವರನ್ನು ಪರಿವರ್ತಿಸಿ, ಸಂವಿಧಾನ ಮಾರ್ಗದಲ್ಲಲ್ಲದೆ ಇನ್ನೊಂದು ಮಾರ್ಗದಲ್ಲಿ ಅಧಿಕಾರ ಹಿಡಿಯುವುದಿಲ್ಲ ಎಂದು ಕಟಿಬದ್ಧವಾಗಿರುವ ಪಕ್ಷಗಳು ಈ ಹೊತ್ತು ದೇಶಕ್ಕೆ ಬೇಕಿರುವುದು. ಇವೆಲ್ಲಾ ಒಣ ವೇದಾಂತ ಎನ್ನುವ ಸಿನಿಕ ಪ್ರತಿಕ್ರಿಯೆಗಳನ್ನು ಲೆಕ್ಕಿಸದೆ ಮುನ್ನುಗ್ಗಿ ರಾಜಕೀಯದ ಹೊಸ ಮಾದರಿಗಳನ್ನು ರೂಪಿಸುವವರು ಇಂದು ದೇಶಕ್ಕೆ ಬೇಕಿರುವುದು. ಪ್ರಾಯೋಗಿಕವಾದದ್ದನ್ನು ಮಾಡುವುದು ಎಂದರೆ ಕೆಟ್ಟ ದಾರಿಯನ್ನೇ ಆಯ್ದುಕೊಳ್ಳುವುದು ಅಂತ ಯಾವ ಶಾಸ್ತ್ರದಲ್ಲೂ ಬರೆದಿಲ್ಲ, ಯಾವ ವಿಜ್ಞಾನದಲ್ಲೂ ರುಜುವಾಗಿಲ್ಲ. ಕೆಟ್ಟದ್ದನ್ನು ಒಪ್ಪದೆ, ಸರಿಪಡಿಸುವಲ್ಲಿ ಸೋಲಾದರೂ ಪ್ರಯತ್ನಿಸುವ ಮನಸ್ಸುಗಳು ಇಲ್ಲದೇ ಹೋಗಿದ್ದರೆ ಈ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮವೊಂದು ನಡೆಯುತ್ತಲೇ ಇರಲಿಲ್ಲ ಎನ್ನುವುದನ್ನು ಮರೆಯಬಾರದು.

ಒಂದು ಹೊಸ ಮಾದರಿಯ ರಾಜಕೀಯ ಮತ್ತು ಅದಕ್ಕಾಗಿ ಹೊಸ ಮಾದರಿಯ ರಾಜಕೀಯ ಪಕ್ಷಗಳು ಈ ಸಂದರ್ಭದಲ್ಲಿ ಭಾರತದ ತುರ್ತು ಅಗತ್ಯಗಳು. ಇದು ಸವಾಲಿನ ಕೆಲಸ. ಆದರೆ ಎಪ್ಪತ್ತೈದು ವರ್ಷ ಗಳಲ್ಲಿ ಏನೇನನ್ನೋ ಸಾಧಿಸಿದ ಭಾರತೀಯರಿಗೆ, ಎಪ್ಪತ್ತೈದು ವರ್ಷಗಳಲ್ಲಿ ಎಂಥೆಂಥ ಸಮಸ್ಯೆಗಳ
ನ್ನೆಲ್ಲಾ ಬಗೆಹರಿಸಿಕೊಂಡಿರುವ ಭಾರತೀಯರಿಗೆ ತಮ್ಮ ರಾಜಕೀಯ ಕ್ಷೇತ್ರಕ್ಕೆ ಅಂಟಿಕೊಂಡಿರುವ ಮಹಾನ್ ದುರ್ದೆಸೆಯೊಂದಕ್ಕೆ ಪರಿಹಾರ ಕಂಡುಕೊಳ್ಳಲು ಅಸಾಧ್ಯ ಎನ್ನುವುದು ಸುಳ್ಳು. ನಾವೀನ್ಯ, ಸಾಹಸೀ ನಡೆಗಳು, ಆವಿಷ್ಕಾರ ಇತ್ಯಾದಿಗಳೆಲ್ಲ ಆಗಬೇಕಿರುವುದು ಉದ್ಯಮ ಮತ್ತು ವಿಜ್ಞಾನ ರಂಗಗಳಲ್ಲಿ ಮಾತ್ರವಲ್ಲ. ರಾಜಕೀಯ ರಂಗದಲ್ಲೂ ಆಗಬೇಕಿದೆ. ಹೊಸ ರೀತಿಯ ಚಳವಳಿಗಳು, ಪ್ರತಿರೋಧಗಳು, ಸಂವಹನ ಸಾಧ್ಯತೆಗಳು ತೆರೆದುಕೊಳ್ಳದೇ ಹೋದರೆ ಹೊಸ ರಾಜಕೀಯ ಮಾದರಿಯನ್ನು ಕಟ್ಟಲು ಸಾಧ್ಯವಿಲ್ಲ.

ಸ್ವಾತಂತ್ರ್ಯ ಸಂಗ್ರಾಮವು ಆವಿಷ್ಕಾರಗಳನ್ನು ಮಾಡಿತು. ಪ್ರತಿರೋಧದ ಹೊಸ ಸಾಧ್ಯತೆಗಳನ್ನು ಕಂಡುಕೊಂಡಿತು. ಅಪೂರ್ವವಾದ ಸಂಕೇತಗಳ ಮೂಲಕ ಅನನ್ಯ ಸಂವಹನ ಸಾಧನಗಳನ್ನು ರೂಪಿಸಿಕೊಂಡಿತು. ಸ್ವಾತಂತ್ರ್ಯ ಸಂಗ್ರಾಮದ ಯಶಸ್ಸಿಗೆ ಇವೆಲ್ಲವೂ ಕಾರಣವಾದವು. ಆ ಸಂಗ್ರಾಮವು ವಿದೇಶಿ ಆಡಳಿತವನ್ನು ತಿರಸ್ಕರಿಸಿ ದಂತೆ, ಈಗಿರುವ ಎಲ್ಲ ರಾಜಕೀಯ ಪಕ್ಷಗಳನ್ನೂ ತಿರಸ್ಕರಿಸಿ ಹೊಸ ಮಾದರಿಯ ಪಕ್ಷಗಳನ್ನು ಕಟ್ಟಲು ದೇಶದಲ್ಲೀಗ ಎರಡನೆಯ ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ. ಈಗಿನ ಅನಿಷ್ಟ ರಾಜಕೀಯದ ಏಳು ಸುತ್ತಿನ ಕೋಟೆ ಅಭೇದ್ಯವೆಂದೂ ಅದನ್ನು ಮುರಿದು ಕಟ್ಟಲು ಸಾಧ್ಯವೇ ಇಲ್ಲವೆಂದೂ ಅಂದುಕೊಂಡಿರುವ ಮಾನಸಿಕ ದಾಸ್ಯದಿಂದ ಮೊದಲು ಮುಕ್ತಿ ಪಡೆಯದೇ ಹೊಸ ವ್ಯವಸ್ಥೆಯ ಕುರಿತಾದ ಯೋಚನೆ ಹುಟ್ಟಲಾರದು. ರಾಜಕೀಯದ ನಿಜ ಸ್ವಾತಂತ್ರ್ಯಕ್ಕಾಗಿ, ಈಗ ಇರುವ ಎಲ್ಲ ರಾಜಕೀಯ ಪಕ್ಷಗಳೂ ಆದಷ್ಟು ಬೇಗ ತಮ್ಮ ಅಂತ್ಯ ಕಾಣಬೇಕಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು