ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲಾದ ಯುವ ನಾಯಕತ್ವದ ಬಣ್ಣ | ರಾಜಕೀಯ ಬಿಕ್ಕಟ್ಟಿನ ಒಳಸುಳಿಗಳು

ನಾಯಕತ್ವದ ಬರಗಾಲವೂ ಇಂಗ್ಲಿಷ್‌ ಮಾಧ್ಯಮ ಸೃಷ್ಟಿಸುವ ಭವಿಷ್ಯದ ನಾಯಕರೂ
Last Updated 21 ಜುಲೈ 2020, 1:36 IST
ಅಕ್ಷರ ಗಾತ್ರ

ಮಧ್ಯಪ್ರದೇಶದ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್‌ ಬಿಟ್ಟು, ಆ ಪಕ್ಷದ ಸರ್ಕಾರವನ್ನು ಉರುಳಿಸಿ, ಬಿಜೆಪಿ ಸೇರಿದ್ದು ಮತ್ತು ರಾಜಸ್ಥಾನದ ಯುವ ನಾಯಕ ಸಚಿನ್ ಪೈಲಟ್ ಬಿಜೆಪಿ ಸೇರುವುದಿಲ್ಲ ಎನ್ನುತ್ತಲೇ ಅದೇ ಹಾದಿ ಹಿಡಿದದ್ದನ್ನು ಕಾಂಗ್ರೆಸ್ಸಿಗಾದ ದೊಡ್ಡ ನಷ್ಟ ಅಂತಲೂ ಕಾಂಗ್ರೆಸ್‌ನ ಉನ್ನತ ನಾಯಕತ್ವದ ಸ್ವಯಂಕೃತಾಪರಾಧದ ಫಲ ಅಂತಲೂ ವ್ಯಾಖ್ಯಾನಗಳು ನಡೆಯುತ್ತಿವೆ. ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಸಿಂಧಿಯಾ ಸಂಚು ಹೂಡುತ್ತಿದ್ದ ಕಾಲಕ್ಕೆ ಇಡೀ ದೇಶಕ್ಕೆ ದೇಶವೇ ಸಿಎಎ ಮತ್ತು ಎನ್ಆರ್‌ಸಿ ಸುತ್ತ ನಡೆಯುತ್ತಿದ್ದ ಚಳವಳಿಯ ಕಾವಿನಲ್ಲಿತ್ತು. ಆ ಚಳವಳಿ ದೇಶದ ಮುಂದೆ ಇಟ್ಟದ್ದು ಅಂತಿಂತಹ ಪ್ರಶ್ನೆಗಳನ್ನಲ್ಲ. ಅತ್ಯಂತ ಮಹತ್ವದ ಸಾಂವಿಧಾನಿಕ ಮತ್ತು ರಾಷ್ಟ್ರೀಯ ಸಮಗ್ರತೆಯ ಪ್ರಶ್ನೆಗಳನ್ನು.

ಸಚಿನ್ ಪೈಲಟ್, ಸರ್ಕಾರವನ್ನು ಉರುಳಿಸಿ ತಮ್ಮ ನಾಯಕತ್ವ ಮೆರೆಸಲು ಹೊರಟಿದ್ದು ಕೊರೊನಾ ವೈರಸ್‌ ದಾಳಿಯಿಂದ ದೇಶ ಮಾತ್ರವಲ್ಲ, ಇಡೀ ವಿಶ್ವದ ಜನತೆಯೇ ಕಂಡು ಕೇಳರಿಯದ ದಯನೀಯ ಸ್ಥಿತಿಯಲ್ಲಿ ದಿನ ದೂಡುತ್ತಿರುವ ಹಂತದಲ್ಲಿ. ಇವರಿಬ್ಬರನ್ನು ಮತ್ತು ಇವರಂತಹ ಇನ್ನಿತರ ಯುವ ನಾಯಕರನ್ನು ಆಯಕಟ್ಟಿನ ಸ್ಥಳಕ್ಕೆ ನೇಮಿಸದ ಕಾರಣಕ್ಕೆ ಕಾಂಗ್ರೆಸ್ ತನಗೆ ತಾನೇ ದ್ರೋಹವೆಸಗಿಕೊಂಡಿತೋ ಕೇಡು ತಂದುಕೊಂಡಿತೋ ಇತ್ಯಾದಿಗಳೆಲ್ಲಾ ಆ ಪಕ್ಷ ತಲೆಕೆಡಿಸಿಕೊಳ್ಳಬೇಕಾದ ವಿಚಾರಗಳು.

ಒಂದಂತೂ ಸತ್ಯ. ಹೀಗೆ ಮಾಡುವ ಮೂಲಕ ಕಾಂಗ್ರೆಸ್, ದೇಶದ ಹಿತರಕ್ಷಣೆ ಮಾಡಿದೆ. ಇಡೀ ದೇಶ ಮತ್ತು ಪ್ರಪಂಚ ಇನ್ನಿಲ್ಲ ಎಂಬಂತಹ ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿರುವ ವೇಳೆಯಲ್ಲಿ, ತನಗೆ ಸ್ಥಾನಮಾನ ಸಿಗಲಿಲ್ಲ ಅಂತಲೋ ಅಥವಾ ತನಗೆ ಪ್ರತಿಸ್ಪರ್ಧಿ ನಾಯಕನಿಂದ ಅವಮಾನವಾಯಿತು ಎಂದೋ ಬಂಡೇಳುವ, ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸಕ್ಕೆ ಮುಂದಾಗುವ ಯಾರನ್ನೇ ಆಗಲಿ ನಾಯಕ ಅಂತ ಪರಿಗಣಿಸುವುದು ಬಿಡಿ, ಕನಿಷ್ಠ ಮನುಷ್ಯ ಅಂತ ಪರಿಗಣಿಸಲು ಕೂಡಾ ಸಾಧ್ಯವಿಲ್ಲ. ಇಂತಹ ‘ಅಮನುಷ್ಯ’ರನ್ನು ನಾಯಕರನ್ನಾಗಿ ಬೆಳೆಸದ ಕಾರಣಕ್ಕೆ ಕಾಂಗ್ರೆಸ್ ಅಭಿನಂದನಾರ್ಹ. ಈ ಕಾರಣಕ್ಕೆ ಕಾಂಗ್ರೆಸ್ ಅಳಿದೇ ಹೋದರೂ ಅದು ಅರ್ಥಪೂರ್ಣ ಅಳಿವೇ ಆಗುತ್ತದೆ.

ಕಾಂಗ್ರೆಸ್ಸಿನ ಹೊರಗಿನವರೂ ಈ ಯುವ ನಾಯಕರ ಬಗ್ಗೆ ಭರವಸೆ ಇರಿಸಿದ್ದರು. ಅದು ಅಪಾತ್ರರ ಬಗ್ಗೆ ಇರಿಸಿದ ಭರವಸೆ ಅಂತ ಈಗ ವೇದ್ಯವಾಗುತ್ತಿದೆ. ಜತೆಗೆ ಈ ಬೆಳವಣಿಗೆಗಳು ದೇಶ ಎದುರಿಸುತ್ತಿರುವ ತೀವ್ರ ನಾಯಕತ್ವದ ಬರಗಾಲದ ಕತೆಯನ್ನೂ ಸಾರುತ್ತಿವೆ. ಅಧಿಕಾರ ಸಿಗದೇ ತಾನು ನಾಯಕನಾಗಲು ಸಾಧ್ಯವಿಲ್ಲ ಅಂತ ಭಾವಿಸಿದ ಯಾವನೂ ನಾಯಕನಲ್ಲ. ಅದೇನಿದ್ದರೂ ಕುಣಿಯಲು ಬಾರದವ ರಂಗಸ್ಥಳ ಸರಿ ಇಲ್ಲ ಎಂದವನ ಕತೆಯಂತೆ. ಈಗಿನ ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಜೆಪಿಯು 2002ರಲ್ಲಿ ಗುಜರಾತಿನ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಅವರನ್ನು ನಂತರದ ಹಂತಕ್ಕೆ ಬೆಳೆಸಿದ್ದು ಪಕ್ಷವಲ್ಲ. ಪಕ್ಷ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡುವ ಅನಿವಾರ್ಯ ಸ್ಥಿತಿ ಉಂಟಾಗುವಷ್ಟರ ಮಟ್ಟಿಗೆ ಅವರೇ ಅವರನ್ನು ಬೆಳೆಸಿಕೊಂಡದ್ದು. ಮೋದಿಯವರ ಆಗಿನ ವಯಸ್ಸಿಗಿಂತಲೂ ಕಿರಿಯ ವಯಸ್ಸಿಗೆ ಕೇಂದ್ರ ಮಂತ್ರಿ, ಉಪ ಮುಖ್ಯಮಂತ್ರಿ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಇತ್ಯಾದಿ ಎಲ್ಲವನ್ನೂ ಪಡೆದುಕೊಂಡ ನಾಯಕರೀರ್ವರು ತಾವು ಅವಕಾಶ ವಂಚಿತರು ಎಂಬಂತೆ ದೇಶವನ್ನು ನಂಬಿಸ ಹೊರಟಿದ್ದು ನಾಯಕತನವಲ್ಲ, ಅಪ್ಪಟ ಬಾಲಿಶತನ.

ಒಂದು ಹಂತಕ್ಕೆ ಬೆಳೆದು ನಿಂತಿರುವ ನಾಯಕರಿಗೆ ದೇಶವ್ಯಾಪಿಯಾಗಿ ಬೆಳೆಯಲು ಈ ಕಾಲ ಹೇಳಿ ಮಾಡಿಸಿದಂತಿದೆ. ಯಾಕೆಂದರೆ, ಇಡೀ ದೇಶ ಒಂದು ನಿಜ ನಾಯಕತ್ವದ ಧ್ವನಿಗಾಗಿ ಕಾದು ದಣಿದಿದೆ. ನಾಯಕರು ಎಂದು ಕರೆಸಿಕೊಳ್ಳುವವರಿಂದ ಸುಳ್ಳು ಭರವಸೆ
ಗಳನ್ನೂ ದ್ವೇಷಪೂರಿತ ಮಾತುಗಳನ್ನೂ ಉತ್ಪ್ರೇಕ್ಷಿತ ಅರ್ಧಸತ್ಯಗಳನ್ನೂ ಅಸಂಬದ್ಧ ನುಡಿಗಟ್ಟುಗಳನ್ನೂ ಕೇಳಿ ರೋಸಿ ಹೋಗಿರುವ ದೇಶದ ಪ್ರಜ್ಞಾವಂತ ಜನತೆ ಒಂದು ಗಟ್ಟಿಯಾದ ಪರ್ಯಾಯ ನಾಯಕತ್ವಕ್ಕಾಗಿ ಎದುರು ನೋಡುತ್ತಿದೆ. ಬೇರೇನೂ ಇಲ್ಲದೆ ಹೋದರೂ ಎಡೆಬಿಡದೆ ಹರಿಯಬಿಡುವ ಸುಳ್ಳುಗಳನ್ನು ಸತ್ಯಯುತ ಮತ್ತು ಸತ್ವಯುತವಾದ ಮಾತುಗಾರಿಕೆಯಿಂದ ಎದುರಿಸಬಲ್ಲ ಒಂದು ಸಶಕ್ತ ನಾಯಕತ್ವವನ್ನು ದೇಶ ಬಯಸುತ್ತಿದೆ. ನಾಯಕತ್ವದ ಕುರಿತಂತೆ ಇಂತಹ ಶೂನ್ಯವೊಂದು ಆವರಿಸಿಕೊಂಡಿರುವ ಈ ಹೊತ್ತಿನಲ್ಲಿ, ತಮಗೆ ಅನಾಯಾಸವಾಗಿ ಒದಗಿಬಂದಿರುವ ‘ಯುವ ನಾಯಕರು’ ಎಂಬ ವರ್ಚಸ್ಸನ್ನು ಬಳಸಿಕೊಂಡು ದೇಶಕ್ಕೆ ಅಂತಹದ್ದೊಂದು ಧ್ವನಿಯಾಗುವುದನ್ನು ಬಿಟ್ಟು, ಇವರೂ ಅದೇ ಹಳೆಯ ನಾಯಕರ ಚಾಳಿಯನ್ನು ಮುಂದುವರಿಸಿದ್ದಾರೆ.

ತನಗೆ ಸ್ಥಾನಮಾನ ಸಿಕ್ಕಿಲ್ಲ ಅರ್ಥಾತ್ ಅಧಿಕಾರದ ಕುರ್ಚಿ ಸಿಕ್ಕಿಲ್ಲ ಎನ್ನುವುದನ್ನೇ ಜನರ ಸಮಸ್ಯೆ ಮತ್ತು ದೇಶದ ಸಮಸ್ಯೆ ಎಂಬಂತೆ ಬಿಂಬಿಸಿ ಸರ್ಕಾರವನ್ನು ಉರುಳಿಸುವುದು, ಪಕ್ಷಾಂತರ ಮಾಡುವುದು, ಯಾವುದೋ ಒಂದು ಅಧಿಕಾರದ ಸ್ಥಾನ ಸಿಕ್ಕಿಬಿಟ್ಟರೆ ಅಲ್ಲಿ ಹಾಯಾಗಿರುವುದು, ಇದು ಭಾರತದ ರಾಜಕೀಯದ ಹಳೆಯ ನಾಯಕತ್ವದ ಮಾದರಿ. ಇದನ್ನು ಇವರೂ ಮುಂದುವರಿಸುವುದಾದರೆ ಇವರ ನಾಯಕತ್ವದಲ್ಲಿ ಹೊಸತನ ಏನು ಬಂತು?

ಒಂದರ್ಥದಲ್ಲಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದು ಸರಿಯಾಗಿಯೇ ಇದೆ. ಇಂಗ್ಲಿಷ್ ಮಾತನಾಡಲು ಬರುತ್ತದೆ ಎನ್ನುವ ಕಾರಣಕ್ಕೆ, ಟಿ.ವಿ ಸ್ಟುಡಿಯೊದಲ್ಲಿ ಸ್ಮಾರ್ಟ್ ಆಗಿ ವಾದ ಮಂಡಿಸಲು ಬರುತ್ತದೆ ಎನ್ನುವ ಕಾರಣಕ್ಕೆ ಯಾರೂ ನಾಯಕರಾಗುವುದಿಲ್ಲ
ಎನ್ನುವ ಗೆಹ್ಲೋಟ್ ಅವರ ಮಾತು ಸುಮ್ಮನೆ ಕೇಳಿ ಮರೆತು ಬಿಡಬಹುದಾದ ಟಿ.ವಿ ಬೈಟ್ ಅಲ್ಲ. ಅದರ ಹಿಂದೆ ದೇಶದ ರಾಜಕೀಯ ಸತ್ಯವೊಂದು ಅಡಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತು, ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಓದಿ ಹಿಂದಿರುಗಿದ (ಅದರಲ್ಲೂ ಹೆಚ್ಚಿನವರು ಎಂಬಿಎ ಅಂತಹ ವ್ಯಾವಹಾರಿಕ- ತಾಂತ್ರಿಕ ಪದವಿಗಳನ್ನೇ ಓದುತ್ತಾರೆ ಎನ್ನುವುದು ಮುಖ್ಯ) ತಲೆಮಾರೊಂದು ದೇಶದ ರಾಜಕೀಯದಲ್ಲಿ ನಿಧಾನಕ್ಕೆ ತಲೆ ಎತ್ತುತ್ತಿದೆ. ಇವರಲ್ಲಿ ಕೆಲವರು ತಮ್ಮ ಕೌಟುಂಬಿಕ ರಾಜಕೀಯದ ಹಿನ್ನೆಲೆಯ ಕಾರಣಕ್ಕೆ ಅಥವಾ ಜಾತಿಯ ಕಾರಣಕ್ಕೆ ಚುನಾವಣೆಯಲ್ಲಿ ಗೆಲ್ಲಬಹುದು; ಒಂದಷ್ಟು ಶಾಸಕರನ್ನು ಸುತ್ತ ಸೇರಿಸಬಹುದು. ಇಂಗ್ಲಿಷ್ ಮಾಧ್ಯಮದವರನ್ನು ಬುಟ್ಟಿಗೆ ಹಾಕಿಕೊಳ್ಳಬಲ್ಲ ಭಾಷಾ ಚಾಕಚಕ್ಯತೆ ಇದೆ ಎನ್ನುವ ಕಾರಣಕ್ಕೆ ಇವರ ಹೆಸರು ಪರಿಚಿತ ಇರಬಹುದು. ಇದರಾಚೆಗೆ, ಇವರ ಪೈಕಿ ಯಾರೊಬ್ಬರೂ ಈ ದೇಶದ ಮಣ್ಣಿನ ವಾಸನೆಯನ್ನು ಅರಿಯಬಲ್ಲರು ಮತ್ತು ಈ ದೇಶದ ಜನಸಮೂಹದ ಧ್ವನಿಯನ್ನು ಗುರುತಿಸಬಲ್ಲರು ಎನ್ನುವ ಭರವಸೆಯನ್ನು ಮೂಡಿಸಿಲ್ಲ.

ಅದೇ ವೇಳೆಗೆ, ದೇಶದ ಒಳಗೇ ಉಳಿದು ಬೆಳೆದ ದೇಸಿ ಯುವ ರಾಜಕೀಯ ನಾಯಕತ್ವ ಕೂಡ ಅಷ್ಟೇ ನಿರಾಸೆ ಮೂಡಿಸುತ್ತದೆ. 2019ರ ಲೋಕಸಭಾ ಚುನಾವಣೆಯಲ್ಲಿ 40 ವರ್ಷಗಳಿಗಿಂತ ಕೆಳಗಿನ 64 ಮಂದಿ, 41ರಿಂದ 50 ವರ್ಷ ವಯಸ್ಸಿನ 224 ಮಂದಿ ಆಯ್ಕೆಯಾಗಿದ್ದಾರೆ. ಚುನಾವಣೆಯ ನಂತರ ದೇಶ ತೀವ್ರ ಆರ್ಥಿಕ ಹಿನ್ನಡೆ, ನಿರುದ್ಯೋಗ ಹೆಚ್ಚಳ, ಸಿಎಎ-ಎನ್ಆರ್‌ಸಿ ಚಳವಳಿ, ಆನಂತರ ಕೊರೊನಾ ವೈರಸ್ ತಂದ ವಿಪತ್ತು ಇತ್ಯಾದಿ ಸಂಕಷ್ಟಗಳನ್ನೇ ಕಂಡದ್ದು. ಇವ್ಯಾವುದರ ಕುರಿತಾಗಲೀ ಅಥವಾ ಇನ್ಯಾವುದೇ ಜನಪರ ವಿಚಾರದ ಕುರಿತಾಗಲೀ ಈ ಹೊಸ ನಾಯಕತ್ವದ ಕಡೆಯಿಂದ (ಒಂದಿಬ್ಬರನ್ನು ಹೊರತುಪಡಿಸಿ) ದೇಶ ತಲೆದೂಗುವಂತಹ ಒಂದೇ ಒಂದು ಹೇಳಿಕೆ, ಖಂಡನೆ, ಮಂಡನೆ ಬಂದಿದ್ದರೆ ಹೇಳಿ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಈ ಪ್ರಾಯದ ಚುನಾಯಿತ ಪ್ರತಿನಿಧಿಗಳಲ್ಲಿ ಒಂದು ದೊಡ್ಡ ಸಂಖ್ಯೆಯ ಮಂದಿ ಬಾಯಿಬಿಟ್ಟರೆ ಸಾಕು, ಅದು ಅವರವರ ಪಕ್ಷಕ್ಕೂ ದೇಶಕ್ಕೂ ಮುಜುಗರ ಉಂಟುಮಾಡುವ
ರೀತಿಯಲ್ಲಿರುತ್ತದೆ.

ಯಾರು ಏನು ಮಾಡಿದರೂ ಏನೇ ಹೇಳಿದರೂ ನಾಚಿಕೆ- ಮುಜುಗರ ಇತ್ಯಾದಿ ಆಗದ ಒಂದು ಸಂವೇದನಾರಹಿತ ಸ್ಥಿತಿಗೆ ಪಕ್ಷಗಳು ಮತ್ತು ದೇಶ ಬಂದು ತಲುಪಿವೆ ಎನ್ನುವುದೇ ಈ ರೀತಿಯ ನಾಳೆಯ ನಾಯಕರನ್ನು ಉಳಿಯಗೊಡುವ ಮತ್ತು ಬೆಳೆಸುವ ಮುಖ್ಯವಾದ ಪೋಷಕಾಂಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT