ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಅಯ್ಯೋ ರಾಮ ಮತ್ತೆ ಆಯಾರಾಮ!

ಮತದಾರರು ಎಚ್ಚೆತ್ತುಕೊಳ್ಳದಿದ್ದರೆ ಆಯಾರಾಂ ಭಕ್ತರೇ ನಮ್ಮನ್ನು ಆಳುತ್ತಾರೆ
Last Updated 28 ಜನವರಿ 2022, 19:31 IST
ಅಕ್ಷರ ಗಾತ್ರ

ಇತ್ತೀಚೆಗೆ ನಮ್ಮನ್ನು ಅಗಲಿದ ಬಂಡಾಯ ಸಾಹಿತಿ ಚಂದ್ರಶೇಖರ ಪಾಟೀಲರು ಯಾವಾಗಲೂ ‘ಕನ್ನಡ, ಕನ್ನಡ ಬನ್ರಿ ನಮ್ ಸಂಗಡ’ ಎನ್ನುತ್ತಿದ್ದರು. ಎಲ್ಲ ಕನ್ನಡಿಗರನ್ನೂ ಒಟ್ಟಿಗೆ ಸೇರಿಸಿಕೊಂಡು ಹೋಗುವ ಹಂಬಲ ಅವರದ್ದು. ಇದನ್ನು ತಪ್ಪಾಗಿ ಕೇಳಿಸಿಕೊಂಡ ನಮ್ಮ ರಾಜಕಾರಣಿಗಳು ಬೇರೆ ಬೇರೆ ಪಕ್ಷಗಳ ಮುಖಂಡರನ್ನು ‘ಬನ್ರಿ ನಮ್ ಸಂಗಡ’ ಎಂದು ಕರೆಯುತ್ತಿದ್ದಾರೆ. ಇದು ಒಟ್ಟಿಗೆ ತೆಗೆದುಕೊಂಡು ಹೋಗುವ ನಡೆಯಂತೆ ಕಾಣುತ್ತಿಲ್ಲ.

ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇರುವಾಗಲೇ ರಾಜ್ಯದಲ್ಲಿ ಪಕ್ಷಾಂತರದ ಗುಲ್ಲು ಆರಂಭವಾಗಿದೆ. ಇವರು ‘ಬನ್ರಿ ಬನ್ರಿ’ ಅನ್ನುವುದು, ಅವರು ‘ಇಲ್ಲ, ಬರಲ್ಲ ಬರಲ್ಲ’ ಅನ್ನುವುದು ನಡೆಯುತ್ತಿದೆ. ಅವರು ಇವರಿಗೆ ಬುದ್ಧಿ ನೆಟ್ಟಗಿಲ್ಲ ಅನ್ನುವುದು, ಇವರು ಅವರಿಗೆ ನಿಮ್ಹಾನ್ಸ್‌ನಿಂದ ಹೊರಬಂದವರು ಎಂದು ಟೀಕಿಸುವುದು ಆರಂಭವಾಗಿದೆ. ರಾಜಕೀಯ ಹವಾಮಾನ ವೈಪರೀತ್ಯ ಹೆಚ್ಚಾಗಿದ್ದು ಅಕಾಲದಲ್ಲಿ ಗಾಳಿ ಬಿರುಗಾಳಿ ಶುರುವಾಗಿಬಿಟ್ಟಿದೆ. ಗುಡುಗು ಸಿಡಿಲು ಇದೆ. ಮಳೆ ಜೋರು ಬರುವ ಲಕ್ಷಣಗಳೂ ಕಾಣುತ್ತಿವೆ. ಈ ಅಕಾಲ ರಾಜಕೀಯ ಮಳೆಯಿಂದ ಮತದಾರರಿಗೆ ಅನು ಕೂಲವಾಗುವ ಲಕ್ಷಣವಂತೂ ಇಲ್ಲ. ಅಕಾಲ ಮಳೆ ಯಾವಾಗಲೂ ನಷ್ಟವನ್ನೇ ತರುವುದು.

ಸಾಮಾನ್ಯವಾಗಿ ಆಯಾರಾಂ ಗಯಾರಾಂ ಶುರು ವಾಗುವುದು ಚುನಾವಣೆ ಇನ್ನೇನು ಬಂದೇಬಿಟ್ಟಿತು ಎಂಬ ಕಾಲಘಟ್ಟದಲ್ಲಿ. ಅಂದರೆ ವಿಧಾನಸಭೆ ಚುನಾವಣೆಗೆ ಮೂರು ಅಥವಾ ಆರು ತಿಂಗಳು ಇರುವಾಗ ಇಂತಹ ನೆಗೆದಾಟಗಳು ನಡೆಯುತ್ತವೆ. ಈಗ ಉತ್ತರಪ್ರದೇಶ, ಪಂಜಾಬ್, ಗೋವಾಗಳಲ್ಲಿ ಅಂತಹ ವಿದ್ಯಮಾನಗಳು ನಡೆಯುತ್ತಿವೆ. ಅದೊಂದು ಮಾಮೂಲು ಎಂದುಮತದಾರರೂ ಅಂದುಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ ಈಗಲೇ ಅಂತಹ ಚರ್ಚೆಯೊಂದು ಆರಂಭವಾಗಿರುವುದು ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ನೆಲೆಯನ್ನು ಗಟ್ಟಿ ಮಾಡಿಕೊಳ್ಳುವುದಕ್ಕೆ ಹಾಗೂ ಮತ್ತೊಂದು ಪಕ್ಷದಲ್ಲಿ ಬಿರುಕು ಹುಟ್ಟಿಸುವುದಕ್ಕೆ ನಡೆಸಿದ ಯತ್ನದಂತೆ ಕಾಣುತ್ತಿದೆ. ಇದರಲ್ಲಿ ಸಾರ್ವಜನಿಕ ಹಿತವಂತೂ ಕಾಣುತ್ತಿಲ್ಲ. ಸ್ವಾರ್ಥ ಕಣ್ಣಿಗೆ ರಾಚುತ್ತಿದೆ.

‘ಬಿಜೆಪಿಯ ಹಲವಾರು ಸಚಿವರು ಮತ್ತು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ ಬಿಜೆಪಿಗೆ ಹೋಗಿ ಸಚಿವರಾಗಿರುವವರ ಭವಿಷ್ಯವನ್ನು ಮಂಕು ಮಾಡುವುದೇ ಈ ಹೇಳಿಕೆಯ ಉದ್ದೇಶ ಇರುವಂತಿದೆ. ಜೊತೆಗೆ ಆಡಳಿತ ಪಕ್ಷದಲ್ಲಿ ಒಂದಿಷ್ಟು ತಲ್ಲಣ ಉಂಟು ಮಾಡಲು ಅವರ ಬಾಣ ಪ್ರಯೋಗ. ಅದು ಯಶಸ್ವಿಯಾದಂತೆಯೂ ಕಾಣುತ್ತಿದೆ. ಸರ್ಕಾರವನ್ನು ಕೆಡವಿ ಬಿಜೆಪಿಗೆ ಹೋದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದೂ ಕಾಂಗ್ರೆಸ್ ಮುಖಂಡರು ಹೇಳುತ್ತಿದ್ದಾರೆ. ಬಿಜೆಪಿ ನಾಯಕರಿಗೂ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಶಾಸಕರ ಬಗ್ಗೆಯೇ ಅನುಮಾನ. ಮತ್ತೆ ಅವರು ಕಾಂಗ್ರೆಸ್‌ಗೆ ಹೋಗಬಹುದು ಎಂಬ ಶಂಕೆ ಇದ್ದೇ ಇದೆ. ಆದರೂ ಬಹಿರಂಗವಾಗಿ ‘ಯಾರೂ ಪಕ್ಷ ಬಿಡಲ್ಲ’ ಎಂದು ತಮಗೇ ತಾವು ಹೇಳಿಕೊಳ್ಳುತ್ತಿದ್ದಾರೆ. ಪಕ್ಷ ಬಿಟ್ಟುಬಂದು ಇಲ್ಲಿ ಮಂತ್ರಿಯಾದವರಂತೂ ತಾವು ಅತ್ಯಂತ ಪವಿತ್ರರು ಎಂಬಂತೆ ಮಾತನಾಡುತ್ತಿದ್ದಾರೆ. ಅವರ ಮಾತುಗಳಲ್ಲಿ ಅವರಿಗೂ ನಂಬಿಕೆ ಇಲ್ಲ, ಅವರ ಪಕ್ಷದ ಮುಖಂಡರಿಗೂ ಇಲ್ಲ, ಮತದಾರರಿಗಂತೂ ಮೊದಲೇ ಇಲ್ಲ. ಇದೊಂದು ನಾಟಕದಂತೆಯೇ ಕಾಣುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರವು ಲಾಗಾಯ್ತಿ ನಿಂದಲೂ ಇತ್ತು. ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸ್ಥಿರತೆ ಕಾಪಾಡಿಕೊಳ್ಳಲು ವಿರೋಧ ಪಕ್ಷಗಳ ಶಾಸಕರ ರಾಜೀನಾಮೆ ಕೊಡಿಸಿ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ‘ಆಪರೇಷನ್ ಕಮಲ’ದ ಹೆಸರಿನಲ್ಲಿ ಹೊಸ ಪಕ್ಷಾಂತರ ಪರ್ವವನ್ನು ಆರಂಭಿಸಿದ್ದು ಬಿಜೆಪಿ. ಆ ಮಟ್ಟಿಗೆ ರಾಜಕೀಯ ರಂಗದಲ್ಲಿ ಬಿಜೆಪಿಯದ್ದು ನವ ಶೋಧ. ಬಹಳ ಕಾಲದವರೆಗೆ ಚುನಾವಣೆ ಹೊಸ್ತಿಲಲ್ಲಿ ರಾಮ ಜಪ ಮಾಡುತ್ತಿದ್ದ ಬಿಜೆಪಿಗೆ ಅಧಿಕಾರಕ್ಕೆ ಬರಲು ಮತ್ತು ಅಧಿಕಾರದಲ್ಲಿ ಉಳಿಯಲು ರಾಮ ಜಪ ಸಾಕಾಗದು, ಆಯಾರಾಮ ಜಪ ಬೇಕು ಎಂಬ ಜ್ಞಾನೋದಯ ಆಗಿದೆ. ಅದು ಉತ್ತರಪ್ರದೇಶವಾಗಲಿ, ಗೋವಾ ಆಗಲಿ, ಕರ್ನಾಟಕ ಆಗಲಿ ಎಲ್ಲ ಕಡೆ ರಾಮನಿಗಿಂತ ಆಯಾ ರಾಮಗಳೇ ಅವರಿಗೆ ಹೆಚ್ಚು ಪ್ರಿಯವಾದಂತೆ ಕಾಣುತ್ತಿದೆ. ‌

ದೇಶದ ರಾಜಕೀಯದಲ್ಲಿ ಕೊಂಚ ಭರವಸೆ ಮೂಡಿಸಿದ್ದ ಎಎಪಿಯವರು ಕೂಡಾ ಆಯಾರಾಂ ಭಕ್ತರಾದಂತಿದೆ. ಗೋವಾದಲ್ಲಿ ಮಾಜಿ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್‌ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ ತಕ್ಷಣ ಎಎಪಿ ನಾಯಕರು ತಮ್ಮ ಪಕ್ಷಕ್ಕೆ ಬರುವಂತೆ ಕರೆದಿದ್ದಾರೆ. ಅಂದರೆ ಚುನಾವಣೆ ಹೊತ್ತಿನಲ್ಲಿ ಎಲ್ಲರೂ ಆಯಾರಾಂ ಭಕ್ತರೇ ಆಗಿರುತ್ತಾರೆ. ಈ ರೋಗ ಯಾವ ಪಕ್ಷವನ್ನೂ ಬಿಡುವಂತೆ ಕಾಣುತ್ತಿಲ್ಲ. ಕೊರೊನಾಕ್ಕಿಂತ ಕೆಟ್ಟ ವೈರಸ್ ಇದು. ಸಾಂಕ್ರಾಮಿಕವೂ ಹೌದು. ಮತದಾರರು ಬೇಗ ವ್ಯಾಕ್ಸಿನ್ ಕಂಡುಕೊಂಡರೆ ಸಮಾಜಕ್ಕೆ ಒಳ್ಳೆಯದು.

ದೇವನೂರ ಮಹಾದೇವ ಅವರು ‘ಎದೆಗೆ ಬಿದ್ದ ಅಕ್ಷರ’ ಪುಸ್ತಕದಲ್ಲಿ ಒಂದು ಘಟನೆಯನ್ನು ಪ್ರಸ್ತಾಪಿಸುತ್ತಾರೆ. ಈ ಘಟನೆ ಮೈಸೂರಿನ ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿತ್ತು ಎಂದೂ ಅವರು ಬರೆಯುತ್ತಾರೆ. ಘಟನೆ ಹೀಗಿದೆ: ವೃದ್ಧರೊಬ್ಬರು ಪೇಪರ್ ಓದುತ್ತಾ ಸಾಗುತ್ತಿದ್ದರು. ಬಿಜೆಪಿ ಶಾಸಕ ಎ.ರಾಮದಾಸ್ ಆ ವೃದ್ಧರಲ್ಲಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. ಒಡನೆಯೇ ಕಿಡಿಕಿಡಿಯಾದ, ನಿವೃತ್ತ ಸರ್ಕಾರಿ ನೌಕರರೂ ಆಗಿರುವ ಆ ವೃದ್ಧರು ‘ಯಾವ ಬಿಜೆಪಿ? ನಾನೂ ಬಿಜೆಪಿಯವನೆ, ತುಂಬಾ ನೋವಾಗುತ್ತಿದೆ. ಮೊದಲು ಆಪರೇಷನ್ ಕಮಲ ನಿಲ್ಸಿ. ಇಲ್ಲದಿದ್ದರೆ ಬಿಜೆಪಿ ಸರ್ವನಾಶವಾಗುತ್ತದೆ’ ಎಂದು ಕೋಪದಿಂದ ನುಡಿದಾಗ, ಅವರನ್ನು ಮುಟ್ಟಿ ಸಮಾಧಾನ ಪಡಿಸಲು ರಾಮದಾಸ್ ಮುಂದಾದರು. ಆಗ ಆ ವೃದ್ಧರು ‘ದೂರ ಸರಿಯಿರಿ, ನನ್ನ ಮುಟ್ಟಬೇಡಿ ಮೈಲಿಗೆ ಯಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಮದಾಸ್ ಅವರ ಜೊತೆಗೆ ಇದ್ದ ಆರ್‌ಎಸ್ಎಸ್ ಕಾರ್ಯಕರ್ತ ದಾಮೋದರ ಬಾಳಿಗ ಅವರು ‘ಕೋಪ ಮಾಡ್ಕೊಬೇಡಿ’ ಎಂದು ಸಮಾಧಾನಿಸಲು ಮುಂದಾದಾಗ ಆ ವೃದ್ಧರು ‘ನೀನೂ ಹೊಲಸಾಗಿದ್ದೀಯ, ದೂರ ಸರಿ. ಆಪರೇಷನ್ ಕಮಲ ಬೇಡ ಎಂದು ಬಿಜೆಪಿಯವರಿಗೆ ಬುದ್ಧಿ ಕಲಿಸಲಾಗುವುದಿಲ್ಲವೇ? ನನ್ನ ಮುಟ್ಟಬೇಡ’ ಎಂದು ಬಿರಬಿರನೆ ಹೊರಟುಹೋದರು.

ರಾಜ್ಯ ರಾಜಕಾರಣವನ್ನು ಆಪರೇಷನ್ ಕಮಲದಿಂದ ಕೊಳಕು ಮಾಡಿದ ಬಿಜೆಪಿಗೆ ಶಾಪ ಕೊಡುವ ಋಷಿಮುನಿಯಂತೆ ಆ ವೃದ್ಧರು ಕಂಡರು ಎಂದು ದೇವನೂರ ಹೇಳುತ್ತಾರೆ. ಈ ಶಾಪ ಕೇವಲ ಬಿಜೆಪಿಗೆ ತಟ್ಟುವುದಿಲ್ಲ, ಇಂತಹ ಕೃತ್ಯ ಮಾಡುವ ಎಲ್ಲ ಪಕ್ಷಗಳಿಗೂ ತಟ್ಟುತ್ತದೆ. ಆಪರೇಷನ್ ಕಮಲ ಕಮಲವ್ಯಾಧಿಯಾಗಿ ಆವೃದ್ಧರಿಗೆ ಕಂಡಿರಬೇಕು. ಇಂತಹ ಪಕ್ಷವು ಸಂಸಾರಸ್ಥರ ಮನೆಯಂತೆ ಕಂಡಿರಲಾರದು. ಯಾರೋ ಬರ್ತಾನೆ, ರಾತ್ರಿ ಮಲಗಿರ್ತಾನೆ, ಬೆಳಿಗ್ಗೆ ಎದ್ದು ಇನ್ನೊಂದು ಮನೆಗೆ ಹೋಗ್ತಾನೆ, ನಾಳೆ ಇನ್ನೊಬ್ಬ ಬರ್ತಾನೆ, ಮನೆಯ ಯಜಮಾನ ಹಲ್ಲುಗಿಂಜುತ್ತಾ ಕೈಹೊಸಕುತ್ತಾ ಬರುವವ ರನ್ನೆಲ್ಲಾ ಸಂಭ್ರಮದಿಂದ ಸ್ವಾಗತಿಸುತ್ತಾ ಇರುತ್ತಾನೆ. ಹೀಗೆ ಕಂಡಿದ್ದರಿಂದಲೇ ಆ ವೃದ್ಧರಿಗೆ ಅಸಹ್ಯ ಹುಟ್ಟಿದೆ.

ಇನ್ನೇನು ಹುಟ್ಟಲು ಸಾಧ್ಯ? ಇಂತಹ ಸಾತ್ವಿಕರು ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರು ಈಗಲಾದರೂ ತಮ್ಮ ಸಿಟ್ಟನ್ನು ತೋರಿಸಬೇಕು ಎಂದು ದೇವನೂರಮಹಾದೇವ ಹೇಳುತ್ತಾರೆ. ಇದು ಅವರೊಬ್ಬರ ಅನಿಸಿಕೆ ಅಲ್ಲ. ಎಲ್ಲ ಪ್ರಜ್ಞಾವಂತ ಮತದಾರರ ಅಭಿಪ್ರಾಯವೂ ಹೌದು.

ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ರಾಮಭಕ್ತರು, ದೇಶಭಕ್ತರು, ಸಂವಿಧಾನ ಭಕ್ತರು ನಮ್ಮನ್ನು ಆಳುವುದಿಲ್ಲ, ಆಯಾರಾಂ ಭಕ್ತರೇ ಆಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT