ಶನಿವಾರ, ಆಗಸ್ಟ್ 8, 2020
26 °C
ಬೆಂಬಲಿಗರಿಗೆ ಕೊಟ್ಟ ಮಾತನ್ನೇನೋ ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಆದರೆ...

ಅನುಸಂಧಾನ | ಬೇಕು, ಮಾತು ತಪ್ಪದ ಮಗ

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

BSY

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒಂದು ವರ್ಷದ ಆಡಳಿತವನ್ನು ಪೂರ್ಣಗೊಳಿಸಿದ್ದಾರೆ. ಈ ಒಂದು ವರ್ಷದಲ್ಲಿ ಅವರು ಅನುಭವಿಸಿದ ಕಷ್ಟ ನಷ್ಟಗಳು ಏನೇ ಇರಬಹುದು. ಆದರೆ ಅವರು ‘ಮಾತಿಗೆ ತಪ್ಪದ ಮಗ’ ಎಂಬ ಹೆಸರನ್ನು ಗಳಿಸಿಕೊಂಡಿದ್ದಾರೆ. ಕೆಟ್ಟ ಯೋಚನೆ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಕೊಟ್ಟ ಮಾತಿಗೆ ತಪ್ಪಲಿಲ್ಲ ಎಂಬ ಶಹಬ್ಬಾಸ್‌ಗಿರಿ ಅವರ ಅನುಯಾಯಿಗಳಿಂದ ಅವರಿಗೆ ಲಭ್ಯವಾಗಿದೆ. ಕೆಲವರಿಗಂತೂ ಅವರು ಅಧಿಕಾರದ ಋಣ ತೀರಿಸಿದ್ದಾರೆ.

‘ಕೊಟ್ಟ ಮಾತಿಗೆ ತಪ್ಪಲಾರೆನು, ಕೆಟ್ಟ ಯೋಚನೆ ಮಾಡಲಾರೆನು, ನಿಷ್ಠೆಯಿಂದಲೆ ಪೋಪೆನಲ್ಲಿಗೆ’ ಎಂದು ಹೇಳುವಂತಹ ಪುಣ್ಯಕೋಟಿ ಇವರಲ್ಲ. ಅಂತಹ ಮಹಾನ್ ನಾಯಕರೊಬ್ಬರನ್ನು ಪಡೆಯುವ ಕೋಟಿ ಪುಣ್ಯವನ್ನು ಕರ್ನಾಟಕದ ಜನರೂ ಮಾಡಿಲ್ಲ. ಇಷ್ಟಾದರೂ ಯಡಿಯೂರಪ್ಪ ಅವರಿಗೆ ‘ಕೊಟ್ಟ ಮಾತಿಗೆ ತಪ್ಪಲಾರದ ವ್ಯಕ್ತಿ’ ಎಂಬ ಬಿರುದು ಬಂದಿದ್ದು ನಿಜ. ಹೌದು, ಅವರು ಕೊಟ್ಟ ಮಾತಿಗೆ ತಪ್ಪಿಲ್ಲ. ಆದರೆ ಅವರು ಮಾತು ಕೊಟ್ಟಿದ್ದು ಯಾರಿಗೆ?

ಯಡಿಯೂರಪ್ಪ ಯಾರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎನ್ನುವುದನ್ನು ಒಮ್ಮೆ ನೋಡಿಕೊಂಡು ಬರೋಣ. ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪದಂತೆ ನಡೆದುಕೊಂಡಿದ್ದಾರೆ ಎಂದು ಹೇಳುತ್ತಿರುವವರು ಕರ್ನಾಟಕದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ ಮುಖ್ಯವಾಗಿ 16 ಮಂದಿ ಮಾತ್ರ. ಇನ್ನೂ ಕೆಲವು ಮಂದಿ ಹೇಳುತ್ತಿದ್ದಾರೆ. ಅವರ ಸಂಖ್ಯೆ ಕೂಡ ಬೆರಳೆಣಿಕೆಯಷ್ಟು ಇದೆ. 16 ಮಂದಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿತ್ತು. ಯಾಕೆಂದರೆ ಈ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದೇ ಈ 16 ಮಂದಿಯ ಋಣದಿಂದ. ಅವರಲ್ಲಿ 11 ಮಂದಿಯನ್ನು ಸಚಿವರನ್ನಾಗಿ ಮಾಡಲಾಗಿದೆ. ಉಳಿದವರಿಗೂ ಸಚಿವ ಸ್ಥಾನ ನೀಡುವ ಭರವಸೆ ಇದೆ. ಇದಕ್ಕೆ ಅಡ್ಡಿಯಾಗುವ ಕೆಲವು ಮಂದಿಗೆ ಈಗಾಗಲೇ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನವನ್ನೂ ಕೊಡಲಾಗಿದೆ.

ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಪದೇ ಪದೇ ‘ನಾನು ಕಾಂಗ್ರೆಸ್ ಋಣದಲ್ಲಿರುವ ಮುಖ್ಯಮಂತ್ರಿ’ ಎಂದು ಹೇಳುತ್ತಿದ್ದರು. ಈಗ ಯಡಿಯೂರಪ್ಪ ಅಂತಹ ಮಾತನ್ನು ಬಹಿರಂಗವಾಗಿ ಹೇಳುತ್ತಿಲ್ಲ. ಆದರೆ ಅವರ ನಡವಳಿಕೆ, ಅವರು ಈ 16 ಮಂದಿಯ ಋಣದಲ್ಲಿದ್ದಾರೆ ಎನ್ನುವುದನ್ನು ಪದೇ ಪದೇ ತೋರಿಸುತ್ತಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಅನರ್ಹತೆಯ ಪಟ್ಟವನ್ನು ಕಟ್ಟಿಕೊಂಡ ಶಾಸಕರಲ್ಲಿ 11 ಮಂದಿ ಮತ್ತೆ ಚುನಾವಣೆಯಲ್ಲಿ ಗೆದ್ದರು. ಎಂ.ಟಿ.ಬಿ. ನಾಗರಾಜ್, ಎಚ್.ವಿಶ್ವನಾಥ್ ಚುನಾವಣೆಯಲ್ಲಿ ಸೋತರು. ರಾಣೆಬೆನ್ನೂರಿನ ಶಂಕರ್ ಅವರಿಗೆ ವಿಧಾನಸಭೆಯ ಟಿಕೆಟ್ ನೀಡಿರಲಿಲ್ಲ. ಮುನಿರತ್ನ ಮತ್ತು ಪ್ರತಾಪ ಗೌಡ ಇನ್ನೂ ಚುನಾವಣೆ ಎದುರಿಸಲು ಸಾಧ್ಯ
ವಾಗಿಲ್ಲ. ಚುನಾವಣೆಯಲ್ಲಿ ಗೆದ್ದ 11 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಎಂ.ಟಿ.ಬಿ. ನಾಗರಾಜ್ ಮತ್ತು ಶಂಕರ್ ಈಗ ವಿಧಾನ ಪರಿಷತ್ ಸದಸ್ಯರಾಗಿ ಮಂತ್ರಿಯಾಗುವ ಅರ್ಹತೆ ಗಳಿಸಿದ್ದಾರೆ. ಸಾಹಿತ್ಯದ ಕೋಟಾದಲ್ಲಿ ಮೇಲ್ಮನೆಗೆ
ಎಚ್.ವಿಶ್ವನಾಥ್ ಅವರ ನಾಮಕರಣವೂ ಆಗಿದೆ. ಜನರಿಂದ ನೇರವಾಗಿ ಆಯ್ಕೆಯಾಗುವ ತನಕ ಅಧಿಕಾರದ ಗದ್ದುಗೆ ಏರಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವಿದ್ದರೂ ಅಧಿಕಾರದ ಕನಸು ನನಸು ಮಾಡಿಕೊಳ್ಳುವಂತಹ ಹಂತಕ್ಕೆ ಅವರನ್ನು ಯಡಿಯೂರಪ್ಪ ತಂದಿದ್ದಾರೆ. ಈ ಹಂತದಲ್ಲಿಯೇ ಯಡಿಯೂರಪ್ಪ ಕೊಟ್ಟ ಮಾತು ಕುಲಕ್ಕೆ ಕೊಳ್ಳಿಯಾದರೆ ಅಚ್ಚರಿಯಿಲ್ಲ.

ಯಡಿಯೂರಪ್ಪ ಇಷ್ಟೇ ಜನರ ಋಣ ತೀರಿಸಿದ್ದಾರಾ ಎಂದು ಕೇಳಿದರೆ ಇಲ್ಲ, ಇನ್ನೂ ಕೆಲವರಿದ್ದಾರೆ. ಅವರಲ್ಲಿ ಮುಖ್ಯವಾಗಿ ಮೂವರು. ಸಿ.ಪಿ.ಯೋಗೀಶ್ವರ್, ಎಂ.ಬಿ.ಮರಂಕಲ್ ಮತ್ತು ಎನ್.ಆರ್.ಸಂತೋಷ್. 2018ರ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದ್ದರೂ ಸರ್ಕಾರ ರಚಿಸಲು ಸಾಧ್ಯವಾಗದೇ ಯಡಿಯೂರಪ್ಪ ರಾಜೀನಾಮೆ ನೀಡಿದ ಕ್ಷಣದಿಂದ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಈ ಮೂವರೂ ಸಾಕಷ್ಟು ಶ್ರಮಿಸಿದ್ದರು. ಅವರ ಶ್ರಮ ಸಾರ್ಥಕವಾಗಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಯಾಗಿದ್ದಾರೆ. ಆ ಮಟ್ಟಿಗೆ ಅವರೂ ಮಾತು ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿ ಅವರೂ ಯೋಗೀಶ್ವರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ. ಮಂತ್ರಿಯನ್ನಾಗಿಯೂ ಮಾಡುವ ಅವಕಾಶ ಇದೆ. ಸಂತೋಷ್ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾದರೆ, ಮರಂಕಲ್ ರಾಜಕೀಯ ಸಲಹೆಗಾರರು. ಅಲ್ಲಿಗೆ ಇಲ್ಲಿಯೂ ಮಾತು ಉಳಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಗಳಾಗಿ ಶಂಕರಗೌಡ ಪಾಟೀಲ, ಎಂ.ಪಿ.ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್ ಅವರೂ ಇದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎಂ.ಲಕ್ಷ್ಮಿನಾರಾಯಣ ಅವರೂ ಮುಖ್ಯಮಂತ್ರಿ ಅವರ ಸಲಹೆಗಾರರಾಗಿದ್ದಾರೆ. ಇನ್ನೂ ಕೆಲವು ಮಂದಿ ಸಲಹೆಗಾರರಿದ್ದಾರೆ. ಮುಖ್ಯಮಂತ್ರಿ ಅವರಿಗೆ ಇಷ್ಟೊಂದು ಸಂಖ್ಯೆಯ ಸಲಹೆಗಾರರು ಯಾಕೆ ಬೇಕು ಎನ್ನುವುದು ಒಂದು ಪ್ರಶ್ನೆ. ಜೊತೆಗೆ ಆಯಾ ಇಲಾಖೆಯ ಐಎಎಸ್ ಅಧಿಕಾರಿಗಳು ಏನು ಮಾಡುತ್ತಾರೆ? ಪ್ರತೀ ಇಲಾಖೆಗೂ ಅನುಭವಿ ಅಧಿಕಾರಿಗಳು ಕಾರ್ಯದರ್ಶಿಗಳಾಗಿರುತ್ತಾರೆ.
ಅವರು ಯಾರಿಗೆ ಸಲಹೆ ನೀಡುತ್ತಾರೆ ಎನ್ನುವುದು ಇನ್ನೊಂದು ಪ್ರಶ್ನೆ. ಇದರಲ್ಲಿ ಮೂರನೇ ಪ್ರಶ್ನೆಯೂ ಇದೆ. ಸುಮಾರು 40 ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿರುವ ಯಡಿಯೂರಪ್ಪ ಅವರು ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್ ಅವರಿಂದ ಯಾವ ಸಲಹೆಗಳನ್ನು ಕೇಳುತ್ತಿರಬಹುದು ಎನ್ನುವುದು.

ಇದಿಷ್ಟೇ ಅಲ್ಲ. ಯಡಿಯೂರಪ್ಪ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ಪಕ್ಷದ ಕಚೇರಿಯಲ್ಲಿ ಒಂದಿಷ್ಟು ಜನ ಇದ್ದರು. ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷರಾಗಿ ಬಂದ ನಂತರ ಈ ನಿಷ್ಠಾವಂತರನ್ನು ಬಿಜೆಪಿ ಕಚೇರಿಯಿಂದ ಹೊರಕ್ಕೆ ಹಾಕಲಾಯಿತು. ಅವರ ಕೈಯನ್ನೂ ಯಡಿಯೂರಪ್ಪ ಬಿಡಲಿಲ್ಲ. ಅವರಿಗೂ ಸೂಕ್ತ ಸ್ಥಾನಮಾನ ನೀಡಿದ್ದಾರೆ. ಇಷ್ಟೆಲ್ಲಾ ಮಾಡಿದ ನಂತರವೂ ಯಡಿಯೂರಪ್ಪ ಅವರನ್ನು ‘ಕೊಟ್ಟ ಮಾತಿಗೆ ತಪ್ಪದ ಸರದಾರ’ ಎಂದು ಕರೆಯುವುದರಲ್ಲಿ ತಪ್ಪೇನಿದೆ?

ಇದೆಲ್ಲಾ ಹೌದು ಸ್ವಾಮಿ. 2018ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಕೊಟ್ಟ ಮಾತಿನ ಕತೆ ಏನು? ಅಧಿಕಾರಕ್ಕೆ ಬಂದ ತಕ್ಷಣವೇ ಎಸಿಬಿ ರದ್ದು ಮಾಡಿ ಲೋಕಾಯುಕ್ತಕ್ಕೆ ಮತ್ತೆ ಪರಮಾಧಿಕಾರ ಕೊಡುತ್ತೇನೆ ಎಂದಿದ್ದಿರಿ. ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ₹ 1.5 ಲಕ್ಷ ಕೋಟಿ ಹಣ ಒದಗಿಸುತ್ತೇವೆ ಎಂದು ಹೇಳಿದ್ದಿರಿ. ಎಲ್ಲ ಜಿಲ್ಲೆಗಳನ್ನೂ ಸಂಪರ್ಕಿಸುವ ಷಟ್ಪಥ ‘ಕರ್ನಾಟಕ ಮಾಲಾ’ ಹೆದ್ದಾರಿ ನಿರ್ಮಾಣ ಮಾಡುತ್ತೇವೆ, ರೈತರ ಪಂಪ್‌ಸೆಟ್‌ಗಳಿಗೆ ನಿತ್ಯ 10 ಗಂಟೆ ತ್ರಿ ಫೇಸ್ ವಿದ್ಯುತ್ ಪೂರೈಕೆ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಸ್ಮಾರ್ಟ್ ಫೋನ್, ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್, ಭಾಗ್ಯಲಕ್ಷ್ಮಿ ಯೋಜನೆಯಡಿ ಹೆಣ್ಣು ಮಕ್ಕಳಿಗೆ ನೀಡುವ ಮೊತ್ತ ₹ 2 ಲಕ್ಷಕ್ಕೆ ಏರಿಕೆ, 2 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ತಲಾ ₹ 10 ಸಾವಿರ ನೆರವು, ರೈತಬಂಧು ವಿದ್ಯಾರ್ಥಿ ವೇತನ, ಕರ್ನಾಟಕ ರಾಜ್ಯ ಶಾಲಾ ಕಾಲೇಜು ಶುಲ್ಕ ನಿಯಂತ್ರಣ ಪ್ರಾಧಿಕಾರ ರಚನೆ, ಮಾಫಿಯಾರಾಜ್ ಕೊನೆಗೊಳಿಸಲು ವಿಶೇಷ ಕಾರ್ಯಪಡೆ... ಹೀಗೆ ಸಾವಿರ ಸಾವಿರ ಭರವಸೆಗಳನ್ನು ಮತದಾರರಿಗೆ ನೀಡಿದ್ದೀರಿ. ನಿಮ್ಮ ಬೆಂಬಲಿಗರಿಗೆ ಕೊಟ್ಟ ಮಾತು ಉಳಿಸಿಕೊಂಡಂತೆ, ಮತದಾರರಿಗೂ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಕಾಲ ಈಗ ಬಂದಿದೆ.

ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣವೇ ಪ್ರವಾಹದ ಹಾವಳಿ ಇತ್ತು. ಈಗಂತೂ ಕೊರೊನಾ ವೈರಸ್ ವಿಜೃಂಭಿಸುತ್ತಿದೆ. ರಾಜ್ಯ ಸಂಕಷ್ಟದಲ್ಲಿದೆ. ನಿಮ್ಮ ಬೆಂಬಲಿಗರಿಗೆ ಕೊಟ್ಟ ಮಾತನ್ನು ಇವೆಲ್ಲ ಸಂಕಷ್ಟಗಳ ನಡುವೆಯೂ ಉಳಿಸಿಕೊಂಡಿದ್ದೀರಿ. ಅದೇ ರೀತಿ ಮತದಾರರಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳಿ. ಆಗ ನೀವು ನಿಜವಾಗಿಯೂ ಕೊಟ್ಟ ಮಾತು ಉಳಿಸಿಕೊಂಡ ಧೀರರಾಗುತ್ತೀರಿ. ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವ ನಾಯಕನಿಗಾಗಿ ಕರ್ನಾಟಕ ಈಗ ನಿಜವಾಗಿಯೂ ಕಾಯುತ್ತಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು