ಶನಿವಾರ, ಜೂನ್ 6, 2020
27 °C
ಕೊರೊನಾ ವೈರಾಣುವಿನ ಗುರಿ ಸದ್ಯಕ್ಕೆ ಮನುಷ್ಯ ಮಾತ್ರ, ಯಾಕೆ ಹೀಗೆ?

ನೆನೆವುದೆನ್ನ ಮನಂ ಪ್ರಕೃತಿ ದೇವಿಯಂ

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಆದಿಕವಿ ಪಂಪ ಹೇಳುತ್ತಾನೆ. ವಿಶ್ವದ ತುಂಬೆಲ್ಲಾ ಕೊರೊನಾ ವೈರಸ್ ಆರ್ಭಟ ಆರಂಭವಾಗಿ ಎಲ್ಲ ದೇವರು, ಮನುಷ್ಯರೂ ಮನೆಯಲ್ಲಿ ಬಂದಿಯಾಗಿರುವಾಗ ಈಗ ಎಲ್ಲರೂ ‘ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಪ್ರಕೃತಿ ದೇವಿಯಂ’ ಎಂದು ಹೇಳಬೇಕು ಅನ್ನಿಸುತ್ತೆ ಅಲ್ವಾ? ರಾಷ್ಟ್ರಕವಿ ಕುವೆಂಪು ಅವರು ‘ನೂರು ದೇವರನೆಲ್ಲ ನೂಕಾಚೆ ದೂರ, ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ’ ಎಂದು ಕರೆದರು. ನಾವು ಈಗ ಅದನ್ನೂ ಬದಲಿಸಿ ‘ನೂರು ದೇವರನೆಲ್ಲ ನೂಕಾಚೆ ದೂರ, ಪ್ರಕೃತಿಯೇ ದೇವಿ ನಮಗಿಂದು ಪೂಜಿಸುವ ಬಾರಾ’ ಎಂದು ಹೇಳಲೇಬೇಕಿದೆ.

ಕೊರೊನಾ ಸೋಂಕು ಹರಡಲು ಆರಂಭವಾದ ನಂತರ ವಿಶ್ವದ ಬಹುತೇಕ ದೇವಾಲಯಗಳು ಬಾಗಿಲು ಮುಚ್ಚಿವೆ. ವ್ಯಾಟಿಕನ್ ಸಿಟಿಯಿಂದ ಹಿಡಿದು ಮೆಕ್ಕಾದವರೆಗೆ, ತಿರುಪತಿ ತಿಮ್ಮಪ್ಪನಿಂದ ಹಿಡಿದು, ಧರ್ಮಸ್ಥಳದ ಮಂಜುನಾಥನವರೆಗೆ, ಮಾರಮ್ಮನಿಂದ ಹಿಡಿದು ಕೊಲ್ಲೂರು ಮೂಕಮ್ಮನವರೆಗೆ ಎಲ್ಲ ದೇವರುಗಳೂ ಬಂದಿಯಾಗಿವೆ. ಎಲ್ಲ ಕಡೆ ಭವಿಷ್ಯ ಹೇಳುತ್ತಿದ್ದ ಭಯಂಕರ ಜ್ಯೋತಿಷಿಗಳ ಗಂಟಲಪಸೆಯೂ ಆರಿದೆ. ದೇವಮಾನವರೂ ಸುಮ್ಮನಾಗಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಪ್ರಕೃತಿ ಮಾತೆಯನ್ನು ಪೂಜಿಸುವುದೊಂದೇ ಈಗಿರುವ ಮಂತ್ರ ಎಂದು ಎಲ್ಲ ದೇವರೂ ಸೂಕ್ಷ್ಮವಾಗಿ ಹೇಳುತ್ತಿರುವಂತಿದೆ. ಈಗಲೂ ಮನುಷ್ಯ ಅದನ್ನು ಅರ್ಥ ಮಾಡಿಕೊಳ್ಳದೇ ಹೋದರೆ ಆತನಿಗೆ ಕೊನೆಗಾಲ ಬಂದಿದೆ ಎಂದೇ ಅರ್ಥ.

ಕೊರೊನಾ ವೈರಸ್ ವಿಶ್ವದ ಇಷ್ಟೊಂದು ದೇಶಗಳಲ್ಲಿ ಕಾಟ ಕೊಡುತ್ತಿದೆಯಲ್ಲ. ಎಲ್ಲ ಕಡೆಯೂ ಅದರ ಆಕ್ರಮಣ ಏನಿದ್ದರೂ ಮನುಷ್ಯನ ಮೇಲೆಯೇ ವಿನಾ ಯಾವುದೇ ಪ್ರಾಣಿ, ಪಕ್ಷಿಗಳಿಗೆ, ಇತರ ಜೀವರಾಶಿಗಳಿಗೆ ಕೊರೊನಾ ತಗುಲಿದ್ದು ವರದಿಯಾದಂತಿಲ್ಲ. ಕೊರೊನಾ ಗುರಿ ಸದ್ಯಕ್ಕೆ ಮನುಷ್ಯ ಮಾತ್ರ. ಯಾಕೆ ಹೀಗೆ? ಉತ್ತರ ಸುಲಭ. ಮನುಷ್ಯನಷ್ಟು ಪ್ರಕೃತಿ ಮೇಲೆ ದಾಳಿ ಮಾಡುವವರು ಯಾರೂ ಇಲ್ಲ. ಉಳಿದೆಲ್ಲ ಜೀವಿಗಳೂ ಪ್ರಕೃತಿಯ ಜೊತೆಗೆ ಹೊಂದಾಣಿಕೆಯಿಂದ ಬದುಕುತ್ತಿವೆ.

ಮನುಷ್ಯ ಮಾತ್ರ ಪ್ರಕೃತಿಯನ್ನು ಧಿಕ್ಕರಿಸಿ ಬದುಕಲು ಯತ್ನಿಸುತ್ತಿದ್ದಾನೆ. ಅದಕ್ಕೇ ಈಗ ಆ ಪ್ರಕೃತಿ ಮಾತೆ ಸ್ವಲ್ಪ ದಿನ ಮನೆಯಲ್ಲಿಯೇ ಇರಪ್ಪ ಎಂದು ಕೂರಿಸಿದ್ದಾಳೆ. ಅದರ ಪರಿಣಾಮ ನೋಡಿ. ನಮ್ಮ ನದಿಗಳು ನಿಧಾನಕ್ಕೆ ಸ್ವಚ್ಛವಾಗುತ್ತಿವೆ. ಗಾಳಿ ಶುದ್ಧವಾಗಿದೆ. ಪ್ರಾಣಿಗಳು ಸ್ವಚ್ಛಂದವಾಗಿ ನಲಿಯುತ್ತಿವೆ.

ಬೆಂಗಳೂರೆಂಬ ಕಾಂಕ್ರೀಟ್ ಕಾಡಿನ ರಾಜಧಾನಿಯ ನಡುವೆಯೂ ನವಿಲುಗಳು ನರ್ತನ ಮಾಡತೊಡಗಿವೆ. ಜಿಂಕೆಗಳು ಕುಣಿಯುತ್ತಿವೆ. ಕೊಯಮತ್ತೂರಿನಲ್ಲಿ ಪುನುಗು ಬೆಕ್ಕು ಸರ್ಕಲ್ ದಾಟುತ್ತಿದೆ. ಅಬ್ಬಾ ಎಂಥಾ ಕಾಲ ಬಂತು ನೋಡಿ. ಪ್ರಾಣಿಗಳನ್ನು ಕೂಡಿ ಹಾಕಿ ನಾವು ಹೊರಗೆ ನಿಂತು ನೋಡುತ್ತಿದ್ದೆವು. ಈಗ ಪ್ರಾಣಿಗಳು ಹೊರಗಿವೆ. ನಾವು ಒಳಗೆ ನಿಂತು ನೋಡುವಂತಾಗಿದೆ.

ಪ್ರಕೃತಿ ಯಾವಾಗಲೂ ಮನುಷ್ಯನಿಗೆ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಶತಮಾನಗಳಿಂದಲೂ ಇಂತಹ ಮಾರಕ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಪ್ಲೇಗ್, ಕಾಲರಾ, ಸಿಡುಬು, ಮೈಲಿ ಮುಂತಾದ ರೋಗಗಳ ಮೂಲಕ ನಮಗೆ ಎಚ್ಚರಿಕೆ ಸಿಗುತ್ತಲೇ ಇತ್ತು. ಏಡ್ಸ್ ಎಂಬ ಮಹಾಮಾರಿ ನಮ್ಮ ಮನೆಯ ಬಾಗಿಲಿಗೇ ಬಂದಿತ್ತು. ಕ್ಯಾನ್ಸರ್ ನಮ್ಮ ಮನೆಯಲ್ಲಿಯೇ ಉಳಿದುಕೊಂಡು ಬಿಟ್ಟಿದೆ. ಇದಕ್ಕೆಲ್ಲವೂ ನಾವು ಏನೇನೋ ಔಷಧಿ ಕಂಡುಕೊಂಡು ಮತ್ತೆ ನಮ್ಮ ಬೇಕಾಬಿಟ್ಟಿ ಬದುಕನ್ನು ಮುಂದುವರಿಸಿದೆವು. ಈಗ ಕೊರೊನಾ ವೈರಸ್ ಬಂದು ನಮ್ಮನ್ನು ಮನೆಯಿಂದ ಹೊರಕ್ಕೆ ಬರದಂತೆ ತಡೆಯುತ್ತಿದೆ. ಇದಕ್ಕೂ ಇನ್ನು ಕೆಲವೇ ದಿನಗಳಲ್ಲಿ ಲಸಿಕೆ ಬರಬಹುದು. ಆದರೆ ಇದಕ್ಕಿಂತ ಭೀಕರವಾದ, ಮನುಷ್ಯನ ಅತಿ ಆಸೆ ಎಂಬ ವೈರಸ್‌ಗೆ ಔಷಧ ಕಂಡುಕೊಳ್ಳದೇ ಇದ್ದರೆ ನಮಗೆ ಉಳಿಗಾಲವಿಲ್ಲ.

ಮನುಷ್ಯನ ಅತಿ ಆಸೆಗೆ ಸಿಲುಕಿ ಭೂಮಿ ಬಿಸಿಯಾಗಿದೆ. ಪಾತಾಳದಲ್ಲಿದ್ದ ಕಲ್ಲಿದ್ದಲು, ಪೆಟ್ರೋಲ್ ಮೇಲಕ್ಕೆತ್ತಿ ಸುಡುತ್ತಿದ್ದೇವೆ. ವಿದ್ಯುತ್ ಉತ್ಪಾದಿಸಿ ಜಗತ್ತನ್ನು ಬೆಳಗಲು ಭೂಮಿಯನ್ನು ಇನ್ನಷ್ಟು ಬಿಸಿ ಮಾಡುತ್ತಿದ್ದೇವೆ. ದೊಡ್ಡ ದೊಡ್ಡ ಅಣೆಕಟ್ಟು ಕಟ್ಟಿ, ಫಾಸಿಲ್ ಇಂಧನಗಳನ್ನು ಬಳಸಿ, ಸಿಮೆಂಟ್ ಉಕ್ಕು ತಯಾರಿಸಿ ಭೂಮಿಯನ್ನು ಕೆಂಡ ಮಾಡಿದ್ದೇವೆ. ಅರಣ್ಯ ನಾಶ ಮಾಡಿ ವಾಯು ಮಂಡಲ ಸ್ವಚ್ಛವಾಗದ ಹಾಗೆ ನೋಡಿಕೊಂಡಿದ್ದೇವೆ. ನಿರ್ಮಾಣ ಚಟುವಟಿಕೆಯನ್ನು ವಿಪರೀತ ಪ್ರಮಾಣದಲ್ಲಿ ಹೆಚ್ಚಿಸಿ ಪಾತಾಳ ಖಾಲಿ ಮಾಡುತ್ತಿದ್ದೇವೆ. ಆಕಾಶ ಬಿಸಿ ಮಾಡುತ್ತಿದ್ದೇವೆ. ಕೊರೊನಾ ಬಂದ ಈ ಗಳಿಗೆಯಲ್ಲಿ ನಾವು ನಮ್ಮ ಅಭಿವೃದ್ಧಿಯ ಚಿಂತನೆಯನ್ನು ಬದಲಾಯಿಸಿಕೊಳ್ಳಬೇಕಿದೆ. ಕೊರೊನಾ ನಂತರದ ದಿನಗಳಲ್ಲಿ ನಮ್ಮ ಜೀವನಶೈಲಿಯೂ ಬದಲಾಗಲೇ ಬೇಕಿದೆ.

ಭೂಮಿ ಬಿಸಿಯಾಗದ ಹಾಗೆ ನಮ್ಮ ಅಭಿವೃದ್ಧಿ ಹೇಗೆ? ಇದ್ದ ಅರಣ್ಯವನ್ನು ಉಳಿಸಿಕೊಂಡು, ಇನ್ನಷ್ಟು ಹೆಚ್ಚಿಸಿ ಮುಂದುವರಿಯುವುದು ಹೇಗೆ? ನದಿಯೊಂದು ವರ್ಷಪೂರ್ತಿ ಜೀವಂತವಾಗಿ ಹರಿಯುವಂತೆ ನೋಡಿಕೊಳ್ಳುವುದು ಹೇಗೆ? ಪ್ರಾಣಿ, ಪಕ್ಷಿಗಳಿಗೂ ಈ ಭೂಮಿ ಮೇಲೆ ಬದುಕುವ ಹಕ್ಕು ಇದೆ. ಅದನ್ನು ಗೌರವಿಸುವುದು ಹೇಗೆ? ಈ ಬಗ್ಗೆ ಚಿಂತಿಸಲು ಇದು ಸಕಾಲ. ಸುಸ್ಥಿರ ಅಭಿವೃದ್ಧಿಯತ್ತಲೇ ನಮ್ಮ ಗಮನ ಇರಬೇಕು. ಇದು ಎಷ್ಟು ಮನುಷ್ಯರಿಗೆ ಅರ್ಥವಾಗುತ್ತದೆ? ನಮ್ಮನ್ನು ಆಳುವ ಮಹಾಪ್ರಭುಗಳು ಇದನ್ನು ತಿಳಿದುಕೊಂಡಾರೆಯೇ?

ಪರಿಸರವಾದಿಗಳ ಮಾತನ್ನು ಕೇಳುವುದು ಎಂದರೆ, ವ್ಯಾಕರಣ ಪಂಡಿತರ ಕತೆಯಂತೆ ಆಗಿದೆ. ಒಮ್ಮೆ ಒಬ್ಬ ವ್ಯಾಕರಣ ಪಂಡಿತರು ಹಾಳುಬಾವಿಯಲ್ಲಿ ಬಿದ್ದುಬಿಟ್ಟಿದ್ದರು. ಯಾರಾದರೂ ಸಹಾಯ ಮಾಡಿ ಎಂದು ಕೂಗುತ್ತಿದ್ದರು. ಆ ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ಸಾಮಾನ್ಯ ಮನುಷ್ಯ ಅವರನ್ನು ನೋಡಿ ‘ಹೇಗೆ ಬಿದ್ದಿರಿ’ ಎಂದು ತನ್ನ ಹಳ್ಳಿ ಭಾಷೆಯಲ್ಲಿ ಕೇಳಿದ. ಅದನ್ನು ಕೇಳಿ ವ್ಯಾಕರಣ ಪಂಡಿತರಿಗೆ ಸಿಟ್ಟು ಬಂತು. ‘ಯಾರಯ್ಯಾ ನಿನಗೆ ವ್ಯಾಕರಣ ಕಲಿಸಿದ್ದು. ಸರಿಯಾಗಿ ಭಾಷೆ ಬರಲ್ಲ. ಮೊದಲು ಯಾರ ಬಳಿಯಾದರೂ ವ್ಯಾಕರಣ ಕಲಿತುಕೊ’ ಎಂದ. ಪಂಡಿತರ ಮಾತು ಕೇಳಿದ ಆ ವ್ಯಕ್ತಿ ‘ಆಯ್ತು ಸ್ವಾಮಿ, ವ್ಯಾಕರಣ ಕಲಿತುಕೊಂಡು ಬಂದು ನಿಮ್ಮನ್ನು ಬದುಕಿಸುತ್ತೇನೆ’ ಎಂದು ಹೊರಟು ಹೋದ. ನಮ್ಮ ಅಧಿಕಾರಸ್ಥರೂ ವ್ಯಾಕರಣ ಪಂಡಿತರಂತೆಯೇ ನಡೆದುಕೊಳ್ಳುತ್ತಿದ್ದಾರೆ.

ಕೊರೊನಾ ಸೃಷ್ಟಿಸಿದ ಈ ಸಂದರ್ಭದಲ್ಲಿ ಮತ್ತೊಂದು ವ್ಯಾಕರಣದ ಕತೆ ನಮಗೆ ಮಾದರಿಯಾಗಬೇಕು. ಅದು ಹೀಗಿದೆ. ಒಮ್ಮೆ ಬಾಲಕನೊಬ್ಬ ಅಗ್ನಿ ದುರಂತಕ್ಕೆ ಸಿಕ್ಕಿ ತೀವ್ರವಾಗಿ ಮೈ ಸುಟ್ಟುಕೊಂಡ. ಅವನ ಸ್ಥಿತಿ ಚಿಂತಾಜನಕವಾಗಿತ್ತು. ಚಿಕಿತ್ಸೆ ಎಲ್ಲಾ ನೀಡಿದ ನಂತರ ಆತನ ಅಪ್ಪ ಅವನಿಗೆ ಪಾಠ ಮಾಡಲು ಒಬ್ಬ ಶಿಕ್ಷಕಿಯನ್ನು ನೇಮಿಸಿದ. ಆ ಶಿಕ್ಷಕಿ ಆತನಿಗೆ ವ್ಯಾಕರಣದ ಪಾಠ ಮಾಡುತ್ತಿದ್ದಳು. ಸಾಯಲು ಬಿದ್ದವನ ಮುಂದೆ ವ್ಯಾಕರಣದ ಪಾಠ. ಆದರೆ ಆ ಬಾಲಕ ದಿನದಿಂದ ದಿನಕ್ಕೆ ಚೇತರಿಸಿಕೊಂಡ.

ಸಂಪೂರ್ಣ ಚೇತರಿಸಿಕೊಂಡ ನಂತರ ಆತ ಶಿಕ್ಷಕಿಗೆ ಧನ್ಯವಾದ ಹೇಳಿದ. ಯಾಕೆ ಗೊತ್ತೆ? ‘ಸಾಯಲು ಬಿದ್ದವನ ಮುಂದೆ ಯಾರು ವ್ಯಾಕರಣ ಪಾಠ ಮಾಡುತ್ತಾರೆ? ನಾನು ಬದುಕುತ್ತೇನೆ ಎಂದು ಇವರು ಪಾಠ ಮಾಡುತ್ತಿದ್ದಾರೆ ಎಂದೇ ನಾನು ಭಾವಿಸಿದೆ. ಅದೇ ನನ್ನನ್ನು ಬದುಕಿಸಿತು’ ಎಂದ. ಕೊರೊನಾ– 2 ವೈರಸ್ ಕಾರಣಕ್ಕೆ ಮನೆಯಲ್ಲಿ ಕುಳಿತ ನಾವೂ ಹೀಗೆಯೇ ಸಕಾರಾತ್ಮಕವಾಗಿ ಯೋಚಿಸಬೇಕಲ್ಲವೇ?

ನಾವು ಈಗ ಸಕಾರಾತ್ಮಕವಾಗದಿದ್ದರೆ ಪ್ರಕೃತಿ ಸುಮ್ಮನಿರದು. ಅದಕ್ಕೆ ಮನುಷ್ಯ ಅನಿವಾರ್ಯ ಅಲ್ಲ. ಆದರೆ ಮನುಷ್ಯನಿಗೆ ಪ್ರಕೃತಿ ಅನಿವಾರ್ಯ. ಇದನ್ನು ತಿಳಿದುಕೊಂಡರೆ ನಮಗೆ ಒಳ್ಳೆಯದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು