ಗುರುವಾರ , ಜನವರಿ 28, 2021
14 °C
ಯಡಿಯೂರಪ್ಪ ಮತ್ತೊಂದು ಹೋರಾಟಕ್ಕೆ ಅಣಿಯಾಗುತ್ತಿದ್ದಾರೆಯೇ?

ಅನುಸಂಧಾನ: ಆರುವ ಮುನ್ನ ಏರುವ ಬೆಂಕಿ

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಯಾವ ಜಾತಿಯ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೋ ಆ ಜಾತಿ ವಿಜೃಂಭಿಸುವುದು ಸಂಪ್ರದಾಯವೇ ಆಗಿದೆ. ಲಿಂಗಾಯತರೊಬ್ಬರು ಮುಖ್ಯಮಂತ್ರಿಯಾದಾಗ ಒಬ್ಬ ದಲಿತ, ಒಬ್ಬ ಹಿಂದುಳಿದ ವರ್ಗದ ವ್ಯಕ್ತಿ ಅಥವಾ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ‘ಇದು ನನ್ನ ಸರ್ಕಾರ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸುವುದಕ್ಕೆ ಯಾಕೆ ಇನ್ನೂ ಸಾಧ್ಯವಾಗಿಲ್ಲ?

***

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ಸಿಕ್ಕಾಪಟ್ಟೆ ಚಟುವಟಿಕೆಯಿಂದ ಇದ್ದಾರೆ. ವಯಸ್ಸಿನ ಆಯಾಸ ಕಾಣುತ್ತಿಲ್ಲ. ರಾಜ್ಯದ ಆರ್ಥಿಕ ಸಂಕಷ್ಟವೂ ಅವರಿಗೆ ಕಾಡಿದ ಹಾಗೆ ಇಲ್ಲ. ಜಾತಿಗೊಂದು ನಿಗಮ ಮಾಡುತ್ತಿದ್ದಾರೆ. ಈಗಾಗಲೇ ಇರುವ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುತ್ತಿದ್ದಾರೆ. ಉದ್ಘಾಟನೆ, ಶಂಕುಸ್ಥಾಪನೆ ಜೋರಾಗಿ ನಡೆಯುತ್ತಿವೆ. ಮುಂದಿನ ಎರಡೂವರೆ ವರ್ಷ ತಾವೇ ಮುಖ್ಯಮಂತ್ರಿ ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದೇ ಮಾತನ್ನು ಅವರ ಹಿಂಬಾಲಕರೂ ಹೇಳುತ್ತಿದ್ದಾರೆ. ಪುತ್ರ ವಿಜಯೇಂದ್ರ ಅವರ ನಾಯಕತ್ವದ ಗುಣವನ್ನೂ ಅವರು ಕೊಂಡಾಡುತ್ತಿದ್ದಾರೆ. ಈ ಕ್ರಿಯೆಗಳು ‘ಆರುವ ಮುನ್ನ ಪ್ರಜ್ವಲಿಸುವ ದೀಪ’ದಂತೆ ಕಾಣುತ್ತವೆ. ರಾಜಕೀಯ ನೇಮಕಾತಿ ಮತ್ತು ರಾಜಕೀಯ ಪ್ರೇರಿತ ತೀರ್ಮಾನಗಳು ರಾಜಕೀಯ ವಲಯದಲ್ಲಿ ಬೇರೆಯದ್ದೇ ವಾಸನೆ ಹರಡಲು ಕಾರಣವಾಗಿವೆ.

ಬಿ.ಎಸ್.ಯಡಿಯೂರಪ್ಪ ಹೋರಾಟಗಾರ. ಅದರಲ್ಲಿ ಅನುಮಾನವೇ ಇಲ್ಲ. ಹೋರಾಟದ ಹಾದಿಯಲ್ಲಿ ಕಲ್ಲು ಮುಳ್ಳುಗಳಿದ್ದರೂ ಅವನ್ನೆಲ್ಲಾ ಸರಿಸಿ ಗುರಿ ಮುಟ್ಟಿದವರು ಅವರು. ಈಗಲೂ ಅವರು ಮತ್ತೊಂದು ಹೋರಾಟಕ್ಕೆ ಸಿದ್ಧವಾದ ಹಾಗೆ ಕಾಣುತ್ತಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರದ ಅವಧಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆಯೇ? ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆಯಾಗದೆ ಯಡಿಯೂರಪ್ಪ ಅವರೇ ಅಧಿಕಾರ ಕಳೆದುಕೊಳ್ಳುತ್ತಾರಾ? ಬಿಜೆಪಿ ಒಳಮನೆಯ ಮಾಹಿತಿ ಪ್ರಕಾರ, ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ, ಅದಕ್ಕೇ ಈ ಜೋರು.

ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನಗೊಂಡು ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಯಡಿಯೂರಪ್ಪ ಕೇವಲ ಒಂದು ವರ್ಷ ಮುಖ್ಯಮಂತ್ರಿಯಾಗಿ ಇರಬೇಕು, ನಂತರ ಅಧಿಕಾರ ಹಸ್ತಾಂತರ ಮಾಡಬೇಕು ಎಂಬ ಷರತ್ತು ಇತ್ತು ಎಂಬ ವಾದವನ್ನೂ ಕೆಲವರು ಮಂಡಿಸುತ್ತಾರೆ. ಅದರ ಸತ್ಯಾಸತ್ಯತೆ ಇನ್ನೂ ಬಹಿರಂಗವಾಗಿಲ್ಲ. ಆದರೆ ಈಗಿನ ಪರಿಸ್ಥಿತಿ ನೋಡಿದರೆ, ಯಡಿಯೂರಪ್ಪ ಮುಂದುವರಿಯುವುದು ಬಿಜೆಪಿ ಹೈಕಮಾಂಡ್‌ಗೆ ಬೇಕಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ನೀಡಿ ಎಂದು ಯಡಿಯೂರಪ್ಪ ಅವರು ಎರಡು ಬಾರಿ ಹೈಕಮಾಂಡ್ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆದರೆ ವಿಸ್ತರಣೆ ಅಥವಾ ಪುನರ್‌ರಚನೆಗೆ ಅವಕಾಶವೇ ಸಿಗಲಿಲ್ಲ. ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮೊದಲು ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯತ್ನಿಸಿದಾಗಲೂ ಅದಕ್ಕೆ ಬ್ರೇಕ್ ಹಾಕಲಾಗಿತ್ತು. ಆಗಲೂ ಯಡಿಯೂರಪ್ಪ ಒಂದಿಷ್ಟು ಶಾಸಕರನ್ನು ನಿಗಮ– ಮಂಡಳಿಗಳಿಗೆ ನೇಮಿಸಿದ್ದರು. ತಮ್ಮ ನೆಲೆಯನ್ನು ಗಟ್ಟಿ ಮಾಡಿಕೊಳ್ಳಲು ಹಾಗೂ ತಮ್ಮ ಹಿಂಬಾಲಕರಿಗೆ ಅಧಿಕಾರ ನೀಡಲು ಅವಕಾಶವನ್ನು ಬಳಸಿಕೊಂಡಿದ್ದರು. ಉಪಚುನಾವಣೆ ವಿಜಯದ ನಂತರ ಮತ್ತೆ ಅವರು ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಗೆ ಅವಕಾಶ ಕೋರಿದಾಗಲೂ ನಿರಾಶಾದಾಯಕ ಪ್ರತಿಕ್ರಿಯೆಯೇ ಬಂದಿದೆ.

ಮುಖ್ಯಮಂತ್ರಿ ಇತ್ತೀಚೆಗೆ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಿದಾಗ ಸಚಿವರ ಪಟ್ಟಿಯನ್ನು ಅವರು ತೆಗೆದುಕೊಳ್ಳಲೂ ಇಲ್ಲ. ಯಡಿಯೂರಪ್ಪ ನೀಡಿದ ಪಟ್ಟಿಯ ಮೇಲೆ ಒಮ್ಮೆ ಕಣ್ಣು ಹಾಯಿಸಿ ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಿ ನಿಮಗೆ ತಿಳಿಸುತ್ತೇನೆ’ ಎಂದು ಪಟ್ಟಿಯನ್ನು ವಾಪಸು ನೀಡಿದರು. ಕೇವಲ ಕಾಫಿ ಕುಡಿಯಲು ಮತ್ತು ಕ್ಷೇಮ ಸಮಾಚಾರ ವಿನಿಮಯ ಮಾಡಿಕೊಳ್ಳುವುದಕ್ಕಷ್ಟೇ ಈ ಭೇಟಿ ಸೀಮಿತವಾಗಿತ್ತು. ಮುಖ್ಯಮಂತ್ರಿ ಅಲ್ಲಿಂದ ವಾಪಸು ಬಂದ ಮೇಲೆ ಮರಾಠಾ ನಿಗಮ, ವೀರಶೈವ– ಲಿಂಗಾಯತ ಅಭಿವೃದ್ಧಿ ನಿಗಮಗಳನ್ನು ರಚಿಸಿದರು. ವೀರಶೈವ ನಿಗಮಕ್ಕೆ ₹ 500 ಕೋಟಿ ಅನುದಾನವನ್ನೂ ಘೋಷಿಸಿದರು.

ಇದಾದ ನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿದ್ದರು. ಜೊತೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೂ ಇದ್ದರು. ಕಟೀಲ್ ಅವರನ್ನು ಹೊರಗೆ ಕಳಿಸಿ ಯಡಿಯೂರಪ್ಪ ಮತ್ತು ಸಂತೋಷ್ ಇಬ್ಬರೇ ಮಾತುಕತೆ ನಡೆಸಿದ್ದರು. ತಮ್ಮ ಸ್ಥಾನ ತೊರೆಯುವಂತೆ ಮುಖ್ಯಮಂತ್ರಿ ಅವರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎಂದೂ ಕೆಲವರು ವಾದಿಸುತ್ತಾರೆ. ಮುಖ್ಯಮಂತ್ರಿ ಅವರು ಒಂದು ತಿಂಗಳ ಅವಧಿ ಕೇಳಿದರೆಂದೂ ಈ ಮೂಲಗಳು ಮಾಹಿತಿ ನೀಡುತ್ತವೆ. ಈ ಎಲ್ಲ ವಿದ್ಯಮಾನದ ನಂತರವೇ ನಿಗಮ– ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಒಂದೆರಡು ದಿನಗಳಲ್ಲಿ ಸಂಪುಟ ವಿಸ್ತರಿಸುವುದಾಗಿಯೂ ಮುಖ್ಯಮಂತ್ರಿ ಪದೇ ಪದೇ ಹೇಳುತ್ತಿದ್ದಾರೆ. ಇದೆಲ್ಲ ಹೈಕಮಾಂಡ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಎಂದೂ ಭಾವಿಸಲಾಗಿದೆ.


ರವೀಂದ್ರ ಭಟ್ಟ

ಮುಖ್ಯಮಂತ್ರಿ ಬದಲಾವಣೆಗೆ ಇದು ಸಕಾಲ. ಯಾಕೆಂದರೆ ಯಾವುದೇ ವ್ಯಕ್ತಿಗೆ ಮುಖ್ಯಮಂತ್ರಿಯಾಗಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಕನಿಷ್ಠ ಎರಡು ವರ್ಷ ಬೇಕು. 2021ನೇ ಸಾಲನ್ನು ಚುನಾವಣೆಯ ವರ್ಷ ಎಂದೇ ಬಿಜೆಪಿ ಗುರುತಿಸಿದೆ. ರಾಜ್ಯದಲ್ಲಿ ಗ್ರಾಮ ಪಂಚಾಯಿತಿ, ಇತರ ಸ್ಥಳೀಯ ಸಂಸ್ಥೆಗಳು ಹಾಗೂ ಬಿಬಿಎಂಪಿ ಚುನಾವಣೆಗಳನ್ನು ನಡೆಸಬೇಕಾಗಿದೆ. ಚುನಾವಣೆ ಪ್ರಕ್ರಿಯೆ ಆರಂಭವಾದರೆ ಆಗ ಮುಖ್ಯಮಂತ್ರಿ ಬದಲಾವಣೆ ಸಾಧ್ಯವಿಲ್ಲ. ಇದು ಯಡಿಯೂರಪ್ಪ ಅವರಿಗೂ ಗೊತ್ತು, ಬಿಜೆಪಿ ಹೈಕಮಾಂಡ್‌ಗೂ ಗೊತ್ತು. ಅದಕ್ಕೇ ಯಡಿಯೂರಪ್ಪ ತಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ವಾತಾವರಣವನ್ನು ತಮ್ಮ ಪರ ಮಾಡಿಕೊಳ್ಳುವ ತವಕ ಯಡಿಯೂರಪ್ಪ ಅವರಿಗೆ.

ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾದರೆ ಅಥವಾ ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳಿಗೆ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾದರೆ ಮುಖ್ಯಮಂತ್ರಿ ಸ್ಥಾನ ಗಟ್ಟಿ ಎಂದು ಅವರು ಭಾವಿಸಿದಂತೆ ಇದೆ. ಅದಕ್ಕೆ ತಕ್ಕಂತೆ ಅವರು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಅದರ ಭಾಗವಾಗಿಯೇ ರೇಣುಕಾಚಾರ್ಯ ಮುಂತಾದ ಬೆಂಬಲಿಗರು ಮಾತನಾಡಲು ಆರಂಭಿಸಿದ್ದಾರೆ.

ಇದೆಲ್ಲ ಹೈಕಮಾಂಡ್‌ಗೆ ಗೊತ್ತಿಲ್ಲ ಎಂದಲ್ಲ. ಯಡಿಯೂರಪ್ಪ ಅವರನ್ನು ಏಕಾಏಕಿ ಅಧಿಕಾರದಿಂದ ಕೆಳಕ್ಕೆ ಇಳಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತದೆ. ಅಲ್ಲದೆ ಪರ್ಯಾಯ ನಾಯಕತ್ವ ಇನ್ನೂ ಸಿದ್ಧವಾಗಿಲ್ಲ. ಅದಕ್ಕೇ ಬಿಜೆಪಿ ವರಿಷ್ಠರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಅದನ್ನೇ ಯಡಿಯೂರಪ್ಪ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಬೆನ್ನಿಗೆ ಲಿಂಗಾಯತ ಸಮುದಾಯ ನಿಂತಿದೆ. ಈಗ ಅವರು ತೆಗೆದುಕೊಂಡಿರುವ ಕೆಲವು ಕ್ರಮಗಳಿಂದ ಅದು ಇನ್ನಷ್ಟು ಗಟ್ಟಿಯಾಗಿದೆ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಠಗಳಿಗೆ ಹಣ ನೀಡಿದ್ದರು. ನಂತರ ಬಂದ ಸರ್ಕಾರಗಳೂ ಅದನ್ನು ಮುಂದುವರಿಸುವ ಅನಿವಾರ್ಯ ಸೃಷ್ಟಿಯಾಯಿತು. ಈಗ ಜಾತಿಗೊಂದು ನಿಗಮ ಮಾಡಿದ್ದಾರೆ. ಅದನ್ನು ರದ್ದು ಮಾಡುವ ಧೈರ್ಯ ತೋರುವ ಮುಖ್ಯಮಂತ್ರಿ ಮುಂದೆ ಬರುತ್ತಾರೆ ಎಂದು ನಿರೀಕ್ಷಿಸುವ ಸ್ಥಿತಿಯಲ್ಲಿ ರಾಜ್ಯದ ಮತದಾರರು ಇಲ್ಲ.

ಯಾವ ಜಾತಿಯ ವ್ಯಕ್ತಿ ಮುಖ್ಯಮಂತ್ರಿಯಾಗುತ್ತಾರೋ ಆ ಜಾತಿ ವಿಜೃಂಭಿಸುವುದು ಸಂಪ್ರದಾಯವೇ ಆಗಿದೆ. ಲಿಂಗಾಯತರೊಬ್ಬರು ಮುಖ್ಯಮಂತ್ರಿಯಾದಾಗ ಒಬ್ಬ ದಲಿತ, ಒಬ್ಬ ಹಿಂದುಳಿದ ವರ್ಗದ ವ್ಯಕ್ತಿ ಅಥವಾ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ‘ಇದು ನನ್ನ ಸರ್ಕಾರ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸುವುದಕ್ಕೆ ಯಾಕೆ ಇನ್ನೂ ಸಾಧ್ಯವಾಗಿಲ್ಲ? 1983ರಲ್ಲಿ ಜನತಾ ಪಕ್ಷ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಅಂತಹ ವಾತಾವರಣ ಸೃಷ್ಟಿಯಾಗಿತ್ತು. ಆದರೆ 1985ರ ನಂತರ ಅದು ಮಣ್ಣುಪಾಲಾಯಿತು.

ಮತ ಹಾಕಿದ ಪ್ರತಿಯೊಬ್ಬ ಮತದಾರನೂ ‘ಇದು ನಮ್ಮ ಸರ್ಕಾರ’ ಎಂದು ಎದೆಯುಬ್ಬಿಸಿ ಹೇಳುವಂತಹ ಆಡಳಿತವನ್ನು ಕೊಡುವ ನಾಯಕನಿಗಾಗಿ ಕರ್ನಾಟಕ ಕಾಯುತ್ತಿದೆ. ಕೆಲವರು ಪ್ರಜ್ವಲಿಸುವುದು, ಇನ್ನು ಕೆಲವರು ‘ವಿಜಯ’ಮಾಲೆ ಹಾಕಿಕೊಳ್ಳುವುದು ನಡೆಯುತ್ತಿದ್ದರೆ, ಮತದಾರನ ಮನೆಯ ದೀಪ ಬೆಳಗುವುದಿಲ್ಲ. ರಾಜ್ಯ ಕೂಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು