ಗುರುವಾರ , ಸೆಪ್ಟೆಂಬರ್ 24, 2020
21 °C
ರಾಜಕೀಯವನ್ನು ರಾಜಕೀಯವಾಗಿ ಎದುರಿಸಬೇಕೇ ವಿನಾ ಜಾತಿಯ ಮೂಲಕ ಅಲ್ಲ

ಕಷ್ಟ ಬಂದಾಗ ಜಾತಿಯೇ ಗುರಾಣಿ!

ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

‘ಸಂಕಟ ಬಂದಾಗ ವೆಂಕಟರಮಣ’ ಎಂಬ ಮಾತಿದೆ. ಆದರೆ, ಸದ್ಯ ನಮ್ಮ ರಾಜ್ಯ ಮತ್ತು ದೇಶದಲ್ಲಿ ಆ ವೆಂಕಟರಮಣನ ಜಾಗದಲ್ಲಿ ಜಾತಿ ಸೇರಿಕೊಂಡುಬಿಟ್ಟಿದೆ. ಕಷ್ಟ ಬಂದವರು ಈಗ ವೆಂಕಟರಮಣನನ್ನು ನೆನೆಯುವುದಕ್ಕಿಂತ ಹೆಚ್ಚಾಗಿ ಜಾತಿಯನ್ನೇ ನೆನೆಯುತ್ತಾರೆ. ತಕ್ಷಣವೇ ಜಾತಿ ಸಂಘಟನೆಗಳು, ಆಯಾ ಜಾತಿಯ ರಾಜಕಾರಣಿಗಳು, ಮುಖಂಡರು, ಕೊನೆಗೆ ಮಠಾಧೀಶರೂ ಎದ್ದುನಿಂತು ಬಿಡುತ್ತಾರೆ. ಈ ರೋಗ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ, ದಲಿತ ಸೇರಿದಂತೆ ಎಲ್ಲ ಜನಾಂಗಗಳಲ್ಲಿಯೂ ವ್ಯಾಪಕವಾಗಿದೆ. ಜಾತಿ ಎಂಬುದು ಈಗ ಗುರಾಣಿಯಾಗಿಬಿಟ್ಟಿದೆ.

ಯಾವುದೇ ವ್ಯಕ್ತಿ ಮುಖ್ಯಮಂತ್ರಿಯೋ, ಪ್ರಧಾನ ಮಂತ್ರಿಯೋ ಆದರೆ ಆ ವ್ಯಕ್ತಿಯ ಜಾತಿಗೆ ಸೇರಿದ ಜನ ಹೆಮ್ಮೆಪಡುವುದರಲ್ಲಿ ಅರ್ಥ ಇದೆ. ‘ನಮ್ಮ ಜಾತಿಯವನೊಬ್ಬ ಈ ಸ್ಥಾನಕ್ಕೆ ಏರಿದನಲ್ಲ’ ಎಂದು ಸಂತೋಷಗೊಂಡರೆ ತಪ್ಪಲ್ಲ. ಆದರೆ ವ್ಯಕ್ತಿಯೊಬ್ಬ ಹಣವನ್ನು ಲೂಟಿ ಮಾಡಿ, ಜನರಿಗೆ ಮೋಸ ಮಾಡಿ ಜೈಲು ಸೇರಿದಾಗ ಆ ಜಾತಿಯ ಜನರಿಗೆ ನಿಜವಾಗಿಯೂ ನಾಚಿಕೆಯಾಗಬೇಕು. ‘ಅಯ್ಯೋ ನಮ್ಮ ಜಾತಿಯ ಮನುಷ್ಯನೊಬ್ಬ ಹೀಗೆ ಅನಾಚಾರ ಮಾಡಿ ಜೈಲು ಸೇರಿದನಲ್ಲ. ನಾವೆಲ್ಲ ತಲೆ ತಗ್ಗಿಸುವಂತಾಯಿತಲ್ಲ’ ಎಂದು ಮರುಗಬೇಕು. ಆದರೆ ಈಗಿನ ಕಾಲದಲ್ಲಿ ಹಾಗೆ ನಾಚಿಕೆ ಪಡುವವರೇ ಇಲ್ಲ. ನಾವು ಈಗ ಅಂತಹ ಸೂಕ್ಷ್ಮತೆಯನ್ನು ಕಳೆದುಕೊಂಡುಬಿಟ್ಟಿದ್ದೇವೆ. ಈ ಮಾತು ಜಾತಿ ವಿಚಾರಕ್ಕಷ್ಟೇ ಸೀಮಿತವಲ್ಲ. ರಾಜಕೀಯ ಪಕ್ಷಗಳಿಗೂ ಅನ್ವಯವಾಗುತ್ತದೆ. ಪಕ್ಷದ ಮುಖಂಡನೊಬ್ಬ ಅನಾಚಾರದಿಂದ, ಭ್ರಷ್ಟಾಚಾರದ ಕಾರಣಕ್ಕೆ ಅಥವಾ ಇನ್ಯಾವುದೋ ಅನೈತಿಕ ಕಾರಣಕ್ಕೆ ಜೈಲು ಪಾಲಾದರೆ ಆ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮುಜುಗರವಾಗಬೇಕು. ಈಗ ಅಂತಹ ಯಾವುದೇ ದೃಶ್ಯ ಕಾಣುವುದಿಲ್ಲ. ಜೈಲಿಗೆ ಹೋದವನು ಪ್ರಬಲನಾಗಿದ್ದರೆ ಅವನನ್ನು ಸಮರ್ಥಿಸಿಕೊಳ್ಳಲು ಎಲ್ಲರೂ ಮುಂದಾಗಿ ಬಿಡುತ್ತಾರೆ. ಲೈಂಗಿಕ ಹಗರಣದಲ್ಲಿ ಸಿಲುಕಿದ ವ್ಯಕ್ತಿಯನ್ನೂ ಸಮರ್ಥಿಸಿಕೊಂಡು ಬೆತ್ತಲಾಗಿ ಬಿಡುತ್ತಾರೆ.

ರಾಜಕಾರಣಿಗಳು, ರಾಜಕೀಯ ಕಾರ್ಯಕರ್ತರು ಬಿಡಿ. ಸಮರ್ಥನೆಗೆ ಅವರಿಗೆ ಏನೇನೋ ಕಾರಣಗಳು ಇರಬಹುದು. ಆದರೆ ಮಠಾಧೀಶರು, ಜಗದ್ಗುರುಗಳು ಎಂದುಕೊಂಡವರಿಗೂ ಇಂತಹ ಸೂಕ್ಷ್ಮಗಳು ಅರ್ಥವಾಗುವುದಿಲ್ಲ ಎಂದರೆ ಅಚ್ಚರಿಯಾಗುತ್ತದೆ. ನಮ್ಮ ಸಮಾಜ ಎಷ್ಟೊಂದು ಅಸೂಕ್ಷ್ಮವಾಗಿದೆ ಎಂದು ಭಯವಾಗುತ್ತದೆ. ಬಡವರಿಗೆ ನೆರವಾಗಲು, ಬಡ ವಿದ್ಯಾರ್ಥಿಯ ಶಿಕ್ಷಣಕ್ಕೆ ಸಹಾಯ ಮಾಡಲು, ಚಿಕಿತ್ಸೆಗೆ ನೆರವಾಗಲು, ಬಡ ಮಕ್ಕಳ ಮದುವೆಗೆ ನೆರವಾಗಲು ಜಾತಿ ಸಂಘಟನೆಗಳು ಮುಂದಾದರೆ ಅದು ಸರಿ. ಆ ಕಾರಣಕ್ಕೆ ಜಾತಿ ಸಂಘಟನೆಗಳನ್ನು ಒಪ್ಪಬಹುದು. ಸಮಾಜದ ಒಳಿತಿಗಾಗಿ ಮುಂದಾದರೆ ಅದನ್ನು ತಪ್ಪು ಎನ್ನಲಾಗದು. ಜಾತಿಯ ಹಂಗನ್ನು ತೊರೆದು ಎಲ್ಲ ಜಾತಿಯ ಮಕ್ಕಳಿಗೆ ಶಿಕ್ಷಣ ನೀಡುವ ಮಠಗಳು ನಮ್ಮಲ್ಲಿ ಇವೆ. ಅವುಗಳ ಬಗ್ಗೆ ಗೌರವ ಸೂಚಿಸುತ್ತಲೇ, ಅಂತಹ ಮಠಗಳ ಜಗದ್ಗುರುಗಳು ತಮ್ಮವನೊಬ್ಬ ಜೈಲಿನಲ್ಲಿ ಇದ್ದಾನೆ ಎಂದು ಅವನನ್ನು ನೋಡಲು ಹೋಗುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನೂ ನಾವು ಯೋಚಿಸಲೇಬೇಕಾಗಿದೆ. ಈ ಪರಿಯನ್ನು ಪ್ರಶ್ನಿಸಬೇಕಾಗಿದೆ.

ಡಿ.ಕೆ.ಶಿವಕುಮಾರ್ ಅವರು ಜೈಲಿಗೆ ಹೋದ ನಂತರ ಒಕ್ಕಲಿಗ ಸಮುದಾಯದವರು ಬಹಳ ದೊಡ್ಡ ಪ್ರತಿಭಟನೆಯನ್ನು ಮಾಡಿದರು. ಈ ಹಿಂದೆ ಯಡಿಯೂರಪ್ಪ ಅವರು ಜೈಲಿಗೆ ಹೋದಾಗಲೂ ಲಿಂಗಾಯತ ಸಮುದಾಯದವರು ಇಂತಹದ್ದೇ ಪ್ರತಿಭಟನೆ ಮಾಡಿದ್ದರು. ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ಪಿ.ಚಿದಂಬರಂ ಅವರನ್ನು ಜೈಲಿನಲ್ಲಿ ಭೇಟಿ ಮಾಡಿ ಧೈರ್ಯ ಹೇಳಿ ಬಂದರು. ಪಕ್ಕದ ಸೆಲ್‌ನಲ್ಲಿಯೇ ಇದ್ದ ಡಿ.ಕೆ.ಶಿವಕುಮಾರ್ ಅವರನ್ನು ಸೋನಿಯಾ ಭೇಟಿ ಮಾಡಲಿಲ್ಲ ಎಂದು ಅವರ ಬೆಂಬಲಿಗರು ಬೇಸರ ಮಾಡಿಕೊಂಡರು. ಕಲ್ಯಾಣ ಕರ್ನಾಟಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಕೆಲವು ಮಠಾಧೀಶರು ‘ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪ ಅವರನ್ನು ಬದಲಾಯಿಸಿದರೆ ಉಗ್ರ ಹೋರಾಟ ನಡೆಸುತ್ತೇವೆ’ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ವಾಲ್ಮೀಕಿ ಸಮುದಾಯದ ಮಠಾಧೀಶರು ಶ್ರೀರಾಮುಲು ಪರವಾಗಿಯೂ ಇಂತಹ ಹೇಳಿಕೆ ನೀಡಿದ್ದಾರೆ. ಇವೆಲ್ಲ ಏನನ್ನು ಸೂಚಿಸುತ್ತವೆ?

ಈಗ ಜೈಲಿಗೆ ಹೋದವರ‍್ಯಾರೂ ಸ್ವಾತಂತ್ರ್ಯ ಹೋರಾಟಗಾರರಲ್ಲ. ಗೇಣಿದಾರರ ಪರ ನಡೆದ ಹೋರಾಟದಲ್ಲಿ ಭಾಗಿಯಾದವರೂ ಅಲ್ಲ. ಗೋಕಾಕ್ ಚಳವಳಿಯಂತೆ ಯಾವುದೇ ಚಳವಳಿಯಲ್ಲಿ ಬಾವುಟ ಹಿಡಿದು ನಡೆದವರೂ ಅಲ್ಲ. ರೈತ ಹೋರಾಟದಲ್ಲಿ ಪಾಲ್ಗೊಂಡವರೂ ಅಲ್ಲ. ಭ್ರಷ್ಟಾಚಾರ ಮತ್ತು ಹಣದ ವ್ಯವಹಾರದಲ್ಲಿ ಭಾಗಿಯಾಗಿ ಜೈಲು ಸೇರಿದವರು. ಅವರನ್ನು ಸಮರ್ಥಿಸಿಕೊಳ್ಳಲು ಅವರಿಗೆ ಸಾವಿರ ಕಾರಣಗಳು ಇರಬಹುದು. ಅದಕ್ಕೆ ನ್ಯಾಯಾಲಯ ಇದೆ. ಅಲ್ಲಿ ಅವರು ವಾದ ಮಾಡಿ ಕಾನೂನು ರೀತಿಯಲ್ಲಿ ಗೆದ್ದು ಬರಲಿ. ಅದಕ್ಕೆ ಯಾರ ತಕರಾರೂ ಇಲ್ಲ. ಆದರೆ ಅದಕ್ಕೆ ಜಾತಿಯನ್ನು ಬಳಸಿಕೊಳ್ಳುವುದು ತಪ್ಪು. ಜಾತಿಯ ಮುಖಂಡರು ಸಮರ್ಥಿಸಿಕೊಳ್ಳುವುದೂ ತಪ್ಪು. ಈ ಬಂಧನದಲ್ಲಿ ರಾಜಕೀಯ ಇಲ್ಲ ಎಂದಲ್ಲ. ರಾಜಕೀಯ ಇದೆ. ಅದನ್ನು ರಾಜಕೀಯವಾಗಿಯೇ ಎದುರಿಸಬೇಕೇ ವಿನಾ ಜಾತಿ ಎನ್ನುವುದು ಗುರಾಣಿಯಾಗಬಾರದು. ಕಾನೂನು ಎಲ್ಲರಿಗೂ ಒಂದೇ ಆಗಬೇಕು. ಕಾನೂನು ಜಾರಿ ಮಾಡುವವರೂ ಇದನ್ನು ಅರ್ಥ ಮಾಡಿಕೊಳ್ಳಬೇಕು.

ಗೋಪಾಲಗೌಡರು ಕಾಗೋಡು ಸತ್ಯಾಗ್ರಹ ನಡೆಸುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬಂದು ಅವರನ್ನು ಹೀಯಾಳಿಸುತ್ತಾನೆ. ‘ನಿಮಗೆಲ್ಲಾ ಹೊಟ್ಟೆಗೆ ಹಿಟ್ಟಿಲ್ಲ. ಜೈಲಿನಲ್ಲಿ ಇದ್ದರೆ ಚೆನ್ನಾಗಿ ಊಟ ಹಾಕುತ್ತಾರೆ ಎಂದು ಗಲಾಟೆ ಮಾಡಿ ಜೈಲು ಸೇರುತ್ತೀರಿ’ ಎಂದು ಹೇಳುತ್ತಾನೆ. ಆಗ ಗೋಪಾಲಗೌಡರು ಗೇಣಿದಾರರ ಪರವಾದ ಮಾತುಗಳನ್ನು ಆಡಿ ‘ನಿಮಗೂ ಊಟ ಹಾಕುವ ಶಕ್ತಿ ಇದೆ’ ಎಂದು ಹೇಳಿ ಕಳಿಸುತ್ತಾರೆ. ಆದರೆ ಆ ಚಳವಳಿಯಲ್ಲಿ ಭಾಗವಹಿಸಿದ್ದ ಬಹಳಷ್ಟು ಮಂದಿ ಬಡವರೇ ಆಗಿದ್ದರು. ಅವರನ್ನು ಜೈಲಿನಲ್ಲಿ ಮಾತನಾಡಿಸಲು, ಧೈರ್ಯ ಹೇಳಲು ಯಾವ ರಾಜಕಾರಣಿಯೂ ಹೋಗಿರಲಿಲ್ಲ. ಜಗದ್ಗುರುಗಳ ಸುಳಿವೇ ಇರಲಿಲ್ಲ.

ರಾಜೀವ್‌ ಗಾಂಧಿ ಅವರು ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಸ್ಥಾನದಿಂದ ವಿಮಾನ ನಿಲ್ದಾಣದಲ್ಲಿಯೇ ಕಿತ್ತು ಹಾಕಿದಾಗ, ಇಂದಿರಾ ಗಾಂಧಿ ಹಾಗೂ ನಿಜಲಿಂಗಪ್ಪ ಅವರ ನಡುವೆ ರಾಜಕೀಯ ಸಂಘರ್ಷ ತಲೆದೋರಿದಾಗಲೂ ಇಂತಹ ಪ್ರಸಂಗಗಳು ಎದುರಾಗಿರಲಿಲ್ಲ. ಅವರ ಜಾತಿಯವರು ಬೀದಿಗೆ ಇಳಿದಿರಲಿಲ್ಲ. ರಾಜಕೀಯದಲ್ಲಿ ಜಾತಿ ಎನ್ನುವುದು ಈಗ ಬಹಳ ಮುಖ್ಯವಾಗಿದೆ. ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ, ಸಚಿವ ಸಂಪುಟದಲ್ಲಿ ಸ್ಥಾನ ನೀಡುವಾಗ, ಉದ್ಯೋಗ ಕೊಡುವಾಗ, ಅಧಿಕಾರಿಗಳನ್ನು ವರ್ಗಾವಣೆ ಮಾಡುವಾಗ, ಕುಲಪತಿಗಳನ್ನು ನೇಮಕ ಮಾಡುವಾಗ ಜಾತಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಎಲ್ಲ ಕಡೆಯೂ ಅವರು ತಪ್ಪು ಮಾಡಿದಾಗ, ಕಾನೂನಿನ ಕುಣಿಕೆ ಬಿಗಿಯಾದಾಗ ಅವರಿಗೆಲ್ಲಾ ಜಾತಿ ನೆನಪಾಗಿ ಬಿಡುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ಈಗ ಜಾತಿ ಎನ್ನುವುದು ಮುಖ್ಯವಾಗಿಬಿಟ್ಟಿದೆ. ಆದರೆ ಕಳ್ಳರನ್ನು ರಕ್ಷಿಸಿಕೊಳ್ಳಲೂ ಅದು ಗುರಾಣಿ ಆಗಿಬಿಟ್ಟರೆ ಹೇಗೆ ಸ್ವಾಮಿ?

ದಿನಕರ ದೇಸಾಯಿ ತಮ್ಮ ಚುಟುಕದಲ್ಲಿ ಹೀಗೆ ಹೇಳುತ್ತಾರೆ. ‘ಅಲಲ! ಕೇಳೋ, ಮಗನೆ, ಪೌರುಷದ ಸುದ್ದಿ, ಎಷ್ಟು ಮಂದಿಗೆ ಉಂಟು ಈ ತರದ ಬುದ್ಧಿ? ಹತ್ತು ವರುಷದ ಹಿಂದೆ ಇತ್ತು ಲಂಗೋಟಿ, ಈ ಹೊತ್ತು ನೋಡಿದರೆ ಬರಿ ಹತ್ತು ಕೋಟಿ’. ಹೀಗಿರುವ ಮುಖಂಡರನ್ನು ಸಮರ್ಥಿಸಿಕೊಳ್ಳಲು ನಾವು ಮುಂದಾಗಬೇಕೇ ಎನ್ನುವುದು ಈಗಿರುವ ಪ್ರಶ್ನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು