ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ: ಚುನಾವಣಾ ಸಂತೆಯಲ್ಲಿ ನಿಂತ ಮತದಾರ

ಅಬ್ಬರದ ಪ್ರಚಾರದಲ್ಲಿ ಕಿವಿಗೆ ಬೀಳದ ಸಂವಿಧಾನದ ಆಶಯ
Published 7 ಮೇ 2023, 19:34 IST
Last Updated 7 ಮೇ 2023, 19:34 IST
ಅಕ್ಷರ ಗಾತ್ರ

‘ಕಬೀರ್ ಖಡಾ ಬಜಾರ್ ಮೆ’ ಎನ್ನುವುದು ಹಿಂದಿಯ ಖ್ಯಾತ ಸಾಹಿತಿ ಭೀಷ್ಮ ಸಾಹನಿ ಅವರ ಪ್ರಮುಖ ನಾಟಕ. ಅದು ಕನ್ನಡದಲ್ಲಿ ‘ಸಂತೆಯಲ್ಲಿ ನಿಂತ ಕಬೀರ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಚಲನಚಿತ್ರವಾಗಿಯೂ ತೆರೆಗೆ ಬಂದಿದೆ. ಮನುಷ್ಯ ಮನುಷ್ಯನ ಸಂಬಂಧವನ್ನು ಹೇಳುವ ಕತೆ ಅದು. ಧರ್ಮ ರಕ್ಷಣೆಗಿಂತ ಮಾನವೀಯತೆಯ ರಕ್ಷಣೆ ಮುಖ್ಯ ಎಂಬ ಸಂದೇಶವನ್ನು ಸಾರುವ ಕತೆ ಅದು. ಇಡೀ ನಾಟಕ ಜೀವಪರವಾಗಿ ನಿಲ್ಲುತ್ತದೆ. ಧರ್ಮ ರಕ್ಷಣೆಗೆ ನಿಂತವರ ನಡುವೆ ಕಬೀರ ಸಂತೆಯಲ್ಲಿ ನಿಂತುಬಿಡುತ್ತಾನೆ. ಅದೇ ರೀತಿ ಕರ್ನಾಟಕದ ಇಂದಿನ ಚುನಾವಣಾ ಪ್ರಚಾರದ ಭರಾಟೆಯನ್ನು ನೋಡಿದರೆ, ರಾಜಕಾರಣಿಗಳೆಲ್ಲರೂ ಧರ್ಮ ರಕ್ಷಣೆಗೆ ನಿಂತಂತೆ ಕಾಣುತ್ತಿದೆ. ಮತದಾರರು ಚುನಾವಣಾ ಸಂತೆಯಲ್ಲಿ ಬರಿಗೈಯಲ್ಲಿ ನಿಂತಂತೆಯೇ ಭಾಸವಾಗುತ್ತಿದೆ.

ವಿಧಾನಸಭಾ ಚುನಾವಣೆಯ ಪ್ರಚಾರದ ಭರಾಟೆಯನ್ನು ಒಮ್ಮೆ ನೋಡಿ. ಒಬ್ಬ ನಾಯಕ, ರಾಮನಗರದಲ್ಲಿ ಅಯೋಧ್ಯಾ ಮಾದರಿಯ ರಾಮಮಂದಿರ ಕಟ್ಟುವುದಾಗಿ ಹೇಳುತ್ತಾರೆ. ಇನ್ನೊಂದು ಪಕ್ಷದ ನಾಯಕ, ರಾಜ್ಯದಲ್ಲಿ ಆಂಜನೇಯನ ನೂರು ದೇವಸ್ಥಾನಗಳನ್ನು ಕಟ್ಟುವುದಾಗಿ ಭರವಸೆ ನೀಡುತ್ತಾರೆ. ಪ್ರಧಾನಿ ರೋಡ್ ಶೋದಲ್ಲಿಯೂ ಹನುಮನ ಜಪವೇ ನಡೆಯುತ್ತದೆ. ಭಜರಂಗಿ ಜೈಕಾರ ಮೊಳಗುತ್ತದೆ. ಇದನ್ನೆಲ್ಲಾ ನೋಡಿದರೆ, ನಾವು ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿದ್ದೇವಾ ಅಥವಾ ಧಾರ್ಮಿಕ ಪರಿಷತ್ ಚುನಾವಣೆಗೆ ಸಿದ್ಧವಾಗುತ್ತಿದ್ದೇವಾ ಎಂಬ ಅನುಮಾನ ಕಾಡುತ್ತದೆ. ವಿಧಾನಸೌಧದ ಹೆಬ್ಬಾಗಿಲಿನ ಮೇಲೆ ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬ ಫಲಕ ಹಾಕಿದ್ದೇವೆ. ಆದರೆ ಈಗ ನಡೆಯುತ್ತಿರುವ ಚುನಾವಣೆಯ ಪ್ರಚಾರದ ಭರಾಟೆ ನೋಡಿದರೆ, ‘ದೇವರ ಕೆಲಸ ಸರ್ಕಾರದ ಕೆಲಸ’ ಎಂದು ಮಾಡಲು ಹೊರಟಂತೆ ಕಾಣುತ್ತಿದೆ.

ಸಂತೆಯಲ್ಲಿ ನಿಂತ ಕಬೀರನ ಕತೆ ಮನೋಜ್ಞವಾಗಿದೆ. 14 ಅಥವಾ 15ನೇ ಶತಮಾನದಲ್ಲಿ ಕಾಶಿಯಲ್ಲಿ ನಡೆಯುವ ಕತೆ ಅದು. ಮುಸ್ಲಿಂ ಹಾಗೂ ಹಿಂದೂ ಸಮುದಾಯದ ಹಲವು ಪಂಗಡಗಳ ಢಾಂಬಿಕತೆಯನ್ನು ಬಯಲು ಮಾಡುತ್ತದೆ. ಹಿಂದೂ ದೊರೆ, ಮುಸ್ಲಿಂ ಕೊತ್ವಾಲ ಮತ್ತು ದೆಹಲಿಯಿಂದ ರಾಜ್ಯಭಾರ ಮಾಡುವ ಸಿಕಂದರ್ ಲೋಧಿ ಎಲ್ಲರೂ ಧರ್ಮ ರಕ್ಷಕರೇ ವಿನಾ ಮನುಷ್ಯ ರಕ್ಷಕರಲ್ಲ. ಮನುಷ್ಯ ಮನುಷ್ಯರ ನಡುವಿನ ಸಂಬಂಧವನ್ನು ಗಟ್ಟಿ ಮಾಡುವವರೂ ಅಲ್ಲ. ಮಾನವೀಯತೆಯನ್ನು ಬೆಂಬಲಿಸುವವರೂ ಅಲ್ಲ ಎನ್ನುವುದನ್ನು ಅತ್ಯಂತ ಪ್ರಭಾವಿಯಾಗಿ ಈ ನಾಟಕ ಹೇಳುತ್ತದೆ.

ಕರ್ನಾಟಕದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಮಾತುಗಳನ್ನು ಕೇಳುತ್ತಿದ್ದರೆ, ಇವರೂ ಧರ್ಮ ರಕ್ಷಕರಂತೆಯೇ ಕಾಣುತ್ತಿದ್ದಾರೆ. ಯಾರು ಕೂಡ ಮತದಾರರನ್ನಾಗಲಿ, ರಾಜ್ಯವನ್ನಾಗಲಿ, ದೇಶವನ್ನಾಗಲಿ, ಸೌಹಾರ್ದವನ್ನಾಗಲಿ, ಸಂವಿಧಾನವನ್ನಾಗಲಿ ರಕ್ಷಣೆ ಮಾಡುತ್ತಿದ್ದಾರೆ ಎಂದು ಅನ್ನಿಸುವುದೇ ಇಲ್ಲ. ನಮ್ಮ ರಾಜಕೀಯ ನಾಯಕರ ಬಹುತೇಕ ಮಾತುಗಳು ಸಂವಿಧಾನ ವಿರೋಧಿಯಾಗಿವೆ. ಆದರೂ ಎಗ್ಗಿಲ್ಲದೆ ಅವರು ಮಾತನಾಡುತ್ತಲೇ ಇದ್ದಾರೆ. ಇಲ್ಲಿಯೂ ಹಾಗೆ, ಮುಖ್ಯಮಂತ್ರಿ, ದೇಶದ ಪ್ರಧಾನಿ ಎಲ್ಲರೂ ಧರ್ಮ ರಕ್ಷಣೆಗೇ ನಿಂತುಬಿಟ್ಟಿದ್ದಾರೆ. ರಾಜಧರ್ಮ ಎಂದರೆ ಅದು ಹಿಂದೂ ಧರ್ಮವೂ ಅಲ್ಲ, ಮುಸ್ಲಿಂ ಧರ್ಮವೂ ಅಲ್ಲ. ಇಷ್ಟು ಸಣ್ಣ ವಿಷಯ ನಮ್ಮ ಮುಖಂಡರಿಗೆ ಗೊತ್ತಾಗುತ್ತಿಲ್ಲವಲ್ಲ ಎಂಬ ಹತಾಶೆಯಲ್ಲಿ ಮತದಾರನಿದ್ದಾನೆ.

ಚುನಾವಣಾ ಕಣ ಎನ್ನುವುದೂ ಮಾರುಕಟ್ಟೆಯಂತೆಯೇ ಆಗಿದೆ. ಎಲ್ಲರೂ ಇಲ್ಲಿ ಕೊಡುವ ಮಾತುಗಳನ್ನೇ ಹೇಳುತ್ತಿದ್ದಾರೆ. ಸ್ವರ್ಗವನ್ನೇ ಧರೆಗಿಳಿಸುವ ಮಾತುಗಳೂ ಕೇಳುತ್ತಿವೆ. ರಾಜಕೀಯ ನಾಯಕರ ಮಾತುಗಳು ಎಷ್ಟು ಕರ್ಕಶವಾಗಿವೆ ಎಂದರೆ, ಮತದಾರರಿಗೆ ಯಾವುದನ್ನು ಕೇಳಿಸಿಕೊಳ್ಳಬೇಕು ಯಾವುದನ್ನು ಬಿಡಬೇಕು ಎನ್ನುವುದೇ ಅರ್ಥವಾಗದ ಸ್ಥಿತಿ ಇದೆ. ಮುಖಂಡರ ಭಾಷಣಗಳಲ್ಲಿ ನಮ್ಮ ಹಿತ ಏನಿದೆ ಎಂದು ಹೆಕ್ಕಿ ತೆಗೆಯುವುದು ಕೂಡ ಮತದಾರನಿಗೆ ಕಷ್ಟವಾಗುತ್ತಿದೆ. ಮಾತುಗಳ ಆರ್ಭಟ ಅಷ್ಟು ಜೋರಾಗಿದೆ. ಪರಿಸ್ಥಿತಿ ಹೇಗಿದೆ ಎಂದರೆ, ಮತದಾರರು ಕಿವಿ ಮುಚ್ಚಿಕೊಳ್ಳುವುದೇ ಲೇಸು ಎಂದು ಭಾವಿಸುವಂತಿದೆ.

ನಮ್ಮದು ಹಿಂದೂ ದೇಶ, ನಾವು ಹಿಂದೂಗಳನ್ನು ರಕ್ಷಣೆ ಮಾಡುವುದಕ್ಕಾಗಿಯೇ ಬಂದಿದ್ದೇವೆ, ಹಿಂದೂಗಳ ರಕ್ಷಣೆಯೇ ನಮ್ಮ ಗುರಿ. ಹಿಂದುತ್ವದ ಆಧಾರದಲ್ಲಿಯೇ ಚುನಾವಣೆ ನಡೆಸುತ್ತೇವೆ, ಹಿಂದೂಗಳ ಒಳಿತಿಗಾಗಿ ನಾವು ಏನನ್ನು ಮಾಡಲೂ ಸಿದ್ಧ ಎಂದು ಒಂದು ಪಕ್ಷದ ನಾಯಕರು ಹೇಳುತ್ತಾರೆ. ಅಲ್ಲದೆ, ಇನ್ನೊಂದು ಪಕ್ಷ ಮುಸ್ಲಿಂ ಬೆಂಬಲಿಗರ ಪಕ್ಷ, ಆ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದೂಗಳ ನಾಶವಾಗುತ್ತದೆ, ದೇವಾಲಯಗಳು ಬಾಗಿಲು ಮುಚ್ಚುತ್ತವೆ, ಹಿಂದೂ ದೇವಾಲಯಗಳ ಆದಾಯವನ್ನು ಸ್ವಂತ ಮಾಡಿಕೊಳ್ಳುತ್ತಾರೆ, ರಾಜ್ಯದ ಎಲ್ಲ ಭಾಗಗಳಲ್ಲಿಯೂ ಮಸೀದಿಗಳು ತಲೆ ಎತ್ತುತ್ತವೆ, ಮುಸ್ಲಿಮರು ಹಿಂಸಾಚಾರಕ್ಕೆ ಇಳಿಯುತ್ತಾರೆ, ಇಡೀ ರಾಜ್ಯ, ದೇಶ ಮುಸ್ಲಿಂಮಯವಾಗುತ್ತದೆ ಎಂಬ ಬೆದರಿಕೆಯನ್ನೂ ಒಡ್ಡುತ್ತಾರೆ.

ಹೌದು, ಜಾನುವಾರು ಹತ್ಯೆ ನಿಷೇಧ ಕಾಯ್ದೆಯನ್ನು ವಾಪಸು ತೆಗೆದುಕೊಳ್ಳುತ್ತೇವೆ, ಬಜರಂಗದಳವನ್ನು ನಿಷೇಧ ಮಾಡುತ್ತೇವೆ, ಮತಾಂತರ ನಿಷೇಧ ಕಾಯ್ದೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಇನ್ನೊಂದು ಪಕ್ಷದವರು ಹೇಳುತ್ತಾರೆ. ಮತ್ತೊಂದು ಪಕ್ಷ ಕೂಡ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಎಲ್ಲರೂ ಇಲ್ಲಿ ಧರ್ಮ ರಕ್ಷಣೆಗೇ ನಿಂತುಬಿಟ್ಟಿದ್ದಾರೆ. ಅಸಲಿ ಮತದಾರರ ರಕ್ಷಣೆಯ ಪಾಡೇನು? ಧರ್ಮದ ಹೆಸರಿನಲ್ಲಿ ಮತ ಯಾಚನೆ ಸಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದರೂ ಯಾವ ಹಿಡಿತವೂ ಇಲ್ಲ. ಬಹುತೇಕ ನಾಯಕರು ಧರ್ಮದ ಹೆಸರಿನಲ್ಲಿಯೇ ಮತ ಕೇಳುತ್ತಿದ್ದಾರೆ. ಕೆಲವು ಮುಖಂಡರು ಮುಸ್ಲಿಂ ಧರ್ಮದವರ ಮತವೇ ಬೇಡ ಎಂದು ಬಹಿರಂಗವಾಗಿಯೇ ಹೇಳುತ್ತಾರೆ.

ಲಿಂಗಾಯತ ಮುಖ್ಯಮಂತ್ರಿ ಎಂಬ ವಿಷಯದಿಂದಲೇ ಎಲ್ಲವೂ ಆರಂಭವಾಯಿತು. ಲಿಂಗಾಯತರನ್ನು ಮುಖ್ಯಮಂತ್ರಿ ಮಾಡಿ ನೋಡುವಾ ಎಂದು ಒಬ್ಬರು ಸವಾಲು ಹಾಕಿದರೆ, ಇನ್ನೊಬ್ಬರು, ದಲಿತರನ್ನು ಮುಖ್ಯಮಂತ್ರಿ ಮಾಡಿ ಎಂದರು. ಮತ್ತೊಬ್ಬರು, ಮುಸ್ಲಿಂ ಸಮುದಾಯದವರನ್ನು ಮುಖ್ಯಮಂತ್ರಿ ಮಾಡಿ ಎಂದು ಸವಾಲು ಹಾಕಿದರು. ಇವೆಲ್ಲಾ ಸಂವಿಧಾನ ವಿರೋಧಿ ಮಾತುಗಳು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲ ಧರ್ಮಗಳ, ಎಲ್ಲ ಜನಾಂಗಗಳ ಹಿತ ಕಾಯುವ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು. ಆತ ದಕ್ಷ ಆಡಳಿತಗಾರನಾಗಿರಬೇಕು. ರಾಜ್ಯದ ಆಗುಹೋಗುಗಳ ಬಗ್ಗೆ ಆತನಿಗೆ ಪ್ರಜ್ಞೆ ಇರಬೇಕು. ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ತೆಗೆದುಕೊಂಡು ಹೋಗಬೇಕು. ಅಂತಹ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು. ಆದರೆ ನಮ್ಮ ನಾಯಕರೊಬ್ಬರು ‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅಭಿವೃದ್ಧಿ ಎನ್ನುವುದು ತನ್ನಿಂದ ತಾನೆ ನಡೆಯುತ್ತದೆ. ಆದರೆ ನಾವು ಹುಟ್ಟಿದ ಧರ್ಮವನ್ನು ರಕ್ಷಿಸುವ ಕೆಲಸ ಮಾಡಬೇಕು’ ಎಂದು ಅಪ್ಪಣೆ ಕೊಡಸಿಬಿಟ್ಟಿದ್ದಾರೆ. ಹೀಗೆ ಮಾತನಾಡುವುದು ಸಂವಿಧಾನ ವಿರೋಧಿಯಾಗುತ್ತದೆ ಎಂದು ಹೇಳಿದರೆ, ‘ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ನಾವು ಬಂದಿದ್ದೇವೆ’ ಎಂದೂ ಹೇಳುತ್ತಾರೆ ಅವರು.

‘ಹಿಂದೂ ಸಂಸ್ಕೃತಿಯನ್ನು ಉಳಿಸುವ, ಬೆಳೆಸುವ ದಿಸೆಯಲ್ಲಿ ರಾಜ್ಯದ ಡಬಲ್ ಎಂಜಿನ್ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ದೇವಾಲಯಗಳ ಕಾರಿಡಾರ್ ನಿರ್ಮಾಣಕ್ಕೆ ನಿರ್ಧಾರ, ದೇವಾಲಯಗಳ ರಕ್ಷಣೆಗೆ ಕಾನೂನು, ಪೂಜಾರಿಗಳ ವೇತನದಲ್ಲಿ ದಾಖಲೆ ಹೆಚ್ಚಳ, ಗೋಶಾಲೆಗಳ ನಿರ್ಮಾಣದಂತಹವು ಹಿಂದೂ ಧರ್ಮ ರಕ್ಷಣೆಗೆ ನಮ್ಮ ಸರ್ಕಾರ ಕೈಗೊಂಡ ಕ್ರಮಗಳು. ಅದಕ್ಕಾಗಿ ನಮಗೆ ಮತ ಹಾಕಿ’ ಎಂದು ಸ್ವತಃ ಮುಖ್ಯಮಂತ್ರಿ ಅವರೇ ಕೇಳಿಕೊಳ್ಳುತ್ತಿದ್ದಾರೆ.  ಕೆಲವು ಮಾಧ್ಯಮಗಳು ಕೂಡ ಧರ್ಮ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿವೆ. ಧರ್ಮವನ್ನು ರಕ್ಷಿಸುತ್ತೇನೆ ಎಂದು ಹೇಳುವ ಅಭ್ಯರ್ಥಿಗಳ ಪರವಾಗಿಯೇ ಮಾಧ್ಯಮದವರೂ ಮಾತನಾಡುತ್ತಿದ್ದಾರೆ. ಚರ್ಚೆ ಮಾಡುತ್ತಾರೆ. ಫರ್ಮಾನು ಹೊರಡಿಸುತ್ತಾರೆ. ತೀರ್ಪು ಕೊಡುತ್ತಾರೆ. ಗೆಲ್ಲಿಸಿಯೇ ಬಿಟ್ಟಿದ್ದೇವೆ ಎಂಬಂತೆ ಸಮೀಕ್ಷೆಯ ಫಲಿತಾಂಶ ಪ್ರಕಟಿಸುತ್ತಾರೆ.

ಧರ್ಮ ರಕ್ಷಣೆಯ ಭರಾಟೆಯಲ್ಲಿ ಮನುಷ್ಯ ರಕ್ಷಣೆಯ ವಿಷಯ ಗೌಣವಾಗಿದೆ. ನಮಗೆ ಈಗ ಬೇಕಿರುವುದು ದೇವಮಾನವನಲ್ಲ. ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುವ ಅಪ್ಪಟ ಮನುಷ್ಯ. ಈ ಗೌಜಿಯಲ್ಲಿ ಅವನನ್ನು ಹುಡುಕುವುದು ಹೇಗೆ? ಕರೆದರೆ ಬಂದಾನೆಯೇ ಅವನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT