ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ | ಇಸವಿ ಬದಲಾದರೂ ಮನಃಸ್ಥಿತಿ ಬದಲಾಗದು!

ಹಸಿದವರಿಗೆ ಅನ್ನ ಹಂಚಲು ಹೊರಟಾಗ ಕ್ಯಾತೆ ತೆಗೆಯುವ ಮಂದಿ ಆಗಲೂ ಇದ್ದರು, ಈಗಲೂ ಇದ್ದಾರೆ
Published 29 ನವೆಂಬರ್ 2023, 0:21 IST
Last Updated 29 ನವೆಂಬರ್ 2023, 0:21 IST
ಅಕ್ಷರ ಗಾತ್ರ

ಇಸವಿ ಬದಲಾಗಿದೆ. ಆದರೆ ಮನಃಸ್ಥಿತಿ ಬದಲಾಗಿಲ್ಲ. 1972ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ಕೊಡಲು ಮುಂದಾದಾಗಲೂ ಲಿಂಗಾಯತರು, ಒಕ್ಕಲಿಗರು, ಬ್ರಾಹ್ಮಣರು ವಿರೋಧ ವ್ಯಕ್ತಪಡಿಸಿದ್ದರು. ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಪ್ರಯತ್ನಕ್ಕೆ ಮುಂದಾದಾಗಲೂ ಅದೇ ಸಮುದಾಯಗಳಿಂದ ಹೋರಾಟದ ಎಚ್ಚರಿಕೆ ಹೊರಬಿದ್ದಿದೆ. ಎಷ್ಟೇ ವಿರೋಧ ಬಂದರೂ ದೇವರಾಜ ಅರಸು ಇಟ್ಟ ಹೆಜ್ಜೆ ಹಿಂದಿಡಲಿಲ್ಲ. ಸಿದ್ದರಾಮಯ್ಯ ಏನು ಮಾಡುತ್ತಾರೆ?  

ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಇದ್ದ ಅವಕಾಶವನ್ನು ಅವರು ಕೈಚೆಲ್ಲಿದ್ದರು. ಈಗ ಅವರಿಗೆ ಮತ್ತೆ ಅವಕಾಶ ಸಿಕ್ಕಿದೆ. ಬಳಸುವ ಛಲ ತೋರಬೇಕು ಅಷ್ಟೆ. 1972ರಲ್ಲಿ ಎಲ್.ಜಿ.ಹಾವನೂರ್ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚನೆಯಾದಾಗಲೂ ಈಗ ಇರುವಂತಹ ರಾಜಕೀಯ ಪರಿಸ್ಥಿತಿಯೇ ಇತ್ತು. ಸಾಮಾಜಿಕ ಪರಿಸ್ಥಿತಿಯೂ ಬಹುತೇಕ ಹಾಗೆಯೇ ಇದೆ.   

ಅಂದಿನ ದಿನಗಳನ್ನು ಒಮ್ಮೆ ಮೆಲುಕು ಹಾಕೋಣ. ಎಲ್.ಜಿ.ಹಾವನೂರ್ ಇನ್ನೂ ವಿದ್ಯಾರ್ಥಿ ದೆಸೆಯಲ್ಲಿ ಇದ್ದ ಕಾಲ. ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಅವರು ಓದುತ್ತಿದ್ದರು. ಆಗ ಹಾಸ್ಟೆಲ್‌ನಲ್ಲಿ ಊಟ ನೀಡುವ ಪದ್ಧತಿ ಹೇಗಿತ್ತೆಂದರೆ, ಮೊದಲು ಬ್ರಾಹ್ಮಣರು ಮತ್ತು ಲಿಂಗಾಯತರಿಗೆ ಊಟ, ನಂತರ ಇತರ ವರ್ಗಗಳಿಗೆ. ಒಂದು ದಿನ ಅತ್ಯಂತ ಹಸಿವಿನಿಂದ ಬಳಲಿದ್ದ ಹಾವನೂರ್ ಮೊದಲು ಊಟ ಕೇಳಿದರು. ಅಡುಗೆಯವರು ಊಟ ಕೊಡಲು ನಿರಾಕರಿಸಿದರು. ಆದರೂ ಹಾವನೂರ್ ಊಟ ಪಡೆದುಕೊಂಡರು. ಇದನ್ನು ಕಂಡು ಕುಪಿತರಾದ ಕೆಲವರು ಅಡುಗೆ ಭಟ್ಟರನ್ನು ಬಡಿದರು. ಕಟ್ಟುಮಸ್ತಾದ ದೇಹ ಹೊಂದಿದ್ದ ಹಾವನೂರ್‌, ಅಡುಗೆಯವರನ್ನು ಬಿಡಿಸಿದರು. 

ಈಗ ಯಾವುದಾದರೂ ಹಾಸ್ಟೆಲ್‌ನಲ್ಲಿ ಮೊದಲು ಬ್ರಾಹ್ಮಣರಿಗೆ, ಲಿಂಗಾಯತರಿಗೆ ಊಟ ಎಂಬ ಕಾನೂನು ಮಾಡಿದರೆ ಅದನ್ನು ಬ್ರಾಹ್ಮಣರು, ಲಿಂಗಾಯತರೂ ಬಹಿರಂಗವಾಗಿ ವಿರೋಧ ಮಾಡುತ್ತಾರೆ. ಪರಿಸ್ಥಿತಿ ಅಷ್ಟರ ಮಟ್ಟಿಗೆ ಸುಧಾರಿಸಿದೆ. ಆದರೂ ಪಾಲನ್ನು ಹಂಚುವ ವಿಷಯ ಬಂದರೆ, ಈಗಲೂ ಪ್ರಬಲ ಜಾತಿ ಎಂದು ಗುರುತಿಸಿಕೊಂಡವರ ಮನಃಸ್ಥಿತಿ ಬದಲಾಗಿಲ್ಲ. ಅದಕ್ಕಾಗಿಯೇ ಈಗಲೂ ಜಾತಿ ಜನಗಣತಿಯ ವಿಷಯ ಬಂದರೆ ಪ್ರಬಲ ಜಾತಿಗಳ ಜನ ಬೆಚ್ಚಿಬೀಳುತ್ತಾರೆ. ಒಮ್ಮೆಲೇ ಹೋರಾಟದ ಮಾತನಾಡುತ್ತಾರೆ. ಅವರಿಗೆ ಈಗಲೂ ಹಸಿದವರಿಗೆ ಅನ್ನ ಕೊಡಬೇಕಾಗುತ್ತದಲ್ಲ ಎನ್ನುವುದ ಕ್ಕಿಂತ ತಮ್ಮ ಪಾಲು ಕಡಿಮೆಯಾಗುತ್ತದಲ್ಲ ಎಂಬ ಭಯ. ಆದರೆ ನಿಜವಾಗಿ ಜಾತಿ ಜನಗಣತಿಯ ಉದ್ದೇಶ ಯಾರ ಪಾಲನ್ನೂ ಕಸಿಯುವುದಲ್ಲ, ಪಾಲು ಸಿಗದೇ ಇದ್ದವರಿಗೆ ನ್ಯಾಯಯುತವಾದ ಪಾಲನ್ನು ನೀಡುವುದು ಎನ್ನುವುದನ್ನು ಅವರು ನಂಬಲು ತಯಾರಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಆಡಳಿತಗಾರರಿಗೆ ಸಾಧ್ಯವಾಗುತ್ತಲೂ ಇಲ್ಲ.

ಬಿಹಾರದಲ್ಲಿ ಜಾತಿ ಜನಗಣತಿಯ ಮಾಹಿತಿ ಪ್ರಕಟವಾಗುತ್ತಿದ್ದಂತೆ ಇಡೀ ದೇಶದಲ್ಲಿ ಸಂಚಲನ ಉಂಟಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಜಾತಿ ಗಣತಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ಜಾತಿ ಜನಗಣತಿ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕದಲ್ಲಿ ಈಗಾಗಲೇ ಕಾಂತರಾಜ ನೇತೃತ್ವದ ಸಮಿತಿ ನಡೆಸಿದ ಸಮೀಕ್ಷೆಯ ವರದಿ ಬಹಿರಂಗಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಈ ವರದಿ 8–10 ವರ್ಷಗಳಷ್ಟು ಹಳೆಯದು. ಈಗ ಅದನ್ನು ಪರಿಗಣಿಸುವುದು ಬೇಡ, ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು ಎಂಬ ಬೇಡಿಕೆಯೂ ಇದೆ.

ವೈಜ್ಞಾನಿಕ ಸಮೀಕ್ಷೆ ಯಾವುದು ಎನ್ನುವುದರ ಬಗ್ಗೆ ಕೂಡ ಭಿನ್ನಮತ ಇದೆ. ತಮಗೆ ಲಾಭವಾದರೆ ವೈಜ್ಞಾನಿಕ, ಇಲ್ಲವಾದರೆ ಅವೈಜ್ಞಾನಿಕ ಎಂಬ ನಡವಳಿಕೆಯೂ ಕಾಣುತ್ತಿದೆ. ಅತ್ಯಂತ ಶೀಘ್ರವಾಗಿ ವೈಜ್ಞಾನಿಕವಾಗಿ ವರದಿ ಸಿದ್ಧಪಡಿಸಬಹುದು ಎನ್ನುವುದನ್ನು ಅರಸು ಮತ್ತು ಹಾವನೂರ್ ತೋರಿಸಿಕೊಟ್ಟಿದ್ದಾರೆ. 1972ರ ಮಾರ್ಚ್ ತಿಂಗಳಿನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅರಸು ಅವರು 1972ರ ಜುಲೈ 18ರಂದು ಎಲ್.ಜಿ.ಹಾವನೂರ್ ಅಧ್ಯಕ್ಷತೆಯಲ್ಲಿ ಕರ್ನಾಟಕದ ಪ್ರಥಮ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿದರು. 1975ರ ನ. 19ರಂದು ಹಾವನೂರ್ ತಮ್ಮ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರು.

2013ರಲ್ಲಿ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ ಅವರು ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯ ಮೂಲಪ್ರತಿ ಕಾಣೆಯಾಗಿದೆ ಎಂಬ ಪುಕಾರು ಈಗ ಎದ್ದಿದೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಕಾಣೆಯಾಗುತ್ತಿರುವುದು ಇದೇ ಮೊದಲಲ್ಲ. ಹಾವನೂರ್ ಅವರು ವರದಿ ಸಿದ್ಧಪಡಿಸುತ್ತಿದ್ದಾಗಲೂ ಕಡತಗಳು ಕಾಣೆಯಾಗಿದ್ದವು. ಹಾವನೂರ್ ಅವರು 193 ಗ್ರಾಮಗಳು ಮತ್ತು 185 ನಗರ ಪ್ರದೇಶಗಳನ್ನು ಅಲೆದು ಮಾಹಿತಿ ಕಲೆಹಾಕಿದ್ದರು. ತಳ ಸಮುದಾಯಗಳ ಬಗ್ಗೆ ಮೂರು ವರ್ಷಗಳು ಅಧ್ಯಯನ ನಡೆಸಿದ್ದರು. ಹಾವನೂರ್ ವರದಿ ಜಾರಿಗೆ ಬಂದರೆ ಏನಾಗುತ್ತದೆ ಎಂಬ ವಾಸನೆಯನ್ನು ಹಿಡಿದ ಕೆಲವರು, ಅಂತಿಮ ವರದಿಯು ಸಿದ್ಧತೆಯ ಹಂತದಲ್ಲಿ ಇದ್ದಾಗಲೇ ಅದರ ಮಾಹಿತಿಯನ್ನು ಬಹಿರಂಗ ಮಾಡಿಬಿಟ್ಟರು. ಜೊತೆಗೆ ಅವರು ಸಂಗ್ರಹಿಸಿದ ಮಾಹಿತಿಯ ಕಡತಗಳನ್ನು ಕದ್ದುಬಿಟ್ಟಿದ್ದರು. ಈಗಲೂ ಇತಿಹಾಸ ಮರುಕಳಿಸಿದೆ ನೋಡಿ.

ಕಾಂತರಾಜ ಸಮಿತಿ ವರದಿಯ ಮಾಹಿತಿ ಬಹಿರಂಗ ವಾಗಿದೆ. ಮಾಹಿತಿಯ ಮೂಲಪ್ರತಿಯ ಕಳ್ಳತನವೂ ಆಗಿದೆ. ಇದರ ಅರ್ಥ ಇಷ್ಟೆ. ಆಹಾರ ಹಂಚುವ ಪ್ರಶ್ನೆ ಬಂದಾಗಲೆಲ್ಲಾ ಆಹಾರದ ತಟ್ಟೆಯನ್ನೇ ಕಾಣೆ ಮಾಡುವ ಶೂರರು ಆಗಲೂ ಇದ್ದರು, ಈಗಲೂ ಇದ್ದಾರೆ.

ಮಾಹಿತಿ ಬಹಿರಂಗವಾಗಿದೆ, ಕಡತಗಳು ಕಾಣೆಯಾಗಿವೆ ಎಂದು ಹಾವನೂರ್‌ ಸುಮ್ಮನೆ ಕೂರಲಿಲ್ಲ. ಮತ್ತೆ ಆರು ತಿಂಗಳು ಶ್ರಮಪಟ್ಟು ವರದಿಯನ್ನು ಸಿದ್ಧಪಡಿಸಿ ಅವರು ಸರ್ಕಾರಕ್ಕೆ ನೀಡಿದರು. ಅರಸು ಕೂಡ ವರದಿಯನ್ನು ಸ್ವೀಕರಿಸಿದರು. ಜಾರಿಗೂ ತಂದರು. ಈಗಲೂ ಕಾಂತರಾಜ ಸಮಿತಿಯ ವರದಿ ಸಿದ್ಧ ಇದೆ. ಅದರಲ್ಲಿ ಲೋಪದೋಷಗಳಿದ್ದರೆ ಸರಿಪಡಿಸಿ ಸರ್ಕಾರಕ್ಕೆ ಪಕ್ಕಾ ವರದಿ ನೀಡುವುದಾಗಿ ಈಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಜಯಪ್ರಕಾಶ ಹೆಗ್ಡೆ ಹೇಳಿದ್ದಾರೆ. ವರದಿ ತರಿಸಿಕೊಂಡು ಜಾರಿಗೊಳಿಸುವ ಬದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೋರಿಸಬೇಕಿದೆ.

ಔಷಧಿ ಕುಡಿಸುವಾಗ ಮಕ್ಕಳು ಹಟ ಮಾಡುವುದು, ಪ್ರತಿಭಟಿಸುವುದು ಸಹಜ. ಆದರೂ ತಾಯಿ ಮನವೊಲಿಸಿ ಔಷಧಿ ಕುಡಿಸುತ್ತಾಳೆ. ಯಾಕೆಂದರೆ ಅವಳಿಗೆ ಮಗುವಿನ ಆರೋಗ್ಯವೇ ಮುಖ್ಯ. ಸಮಸಮಾಜ ಸೃಷ್ಟಿಗೆ ಸಮಪಾಲು ವಿತರಣೆಯ ಔಷಧಿಯನ್ನು ಬಲವಂತವಾಗಿಯಾದರೂ ಕುಡಿಸಲೇಬೇಕು.

ಹಾವನೂರ್‌ ಸಮಿತಿಯ ವರದಿ ಪ್ರಕಟವಾದಾಗ, ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದ ಜೆ.ಬಿ.ಮಲ್ಲಾರಾಧ್ಯರ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಅದಕ್ಕೆ ಒಕ್ಕಲಿಗರು, ಬ್ರಾಹ್ಮಣರು ಬೆಂಬಲ ನೀಡಿದ್ದರು. ಈಗಲೂ ಜಾತಿ ಗಣತಿ ವರದಿ ಬಹಿರಂಗಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಒಕ್ಕಲಿಗರೂ ಬ್ರಾಹ್ಮಣರೂ ಅದಕ್ಕೆ ಜೊತೆಯಾಗಿದ್ದಾರೆ.

‘ಕೈಗೆ ಒಂದು ಲೋಟ ನೀರು ಕೊಟ್ಟು ಇದನ್ನು ದಾಹ ಇರುವವರಿಗೆ ಕೊಟ್ಟು ಬನ್ನಿ ಎಂದರೆ ನಮ್ಮ ಪಕ್ಷದವರಿಗೆ, ನಮ್ಮ ಜಾತಿಯವರಿಗೆ ಎಂದು ಹುಡುಕಿ ಕೊಡಬಾರದು. ಅದು ರಾಜಧರ್ಮಕ್ಕೆ ವಿರುದ್ಧ. ಜನತಂತ್ರಕ್ಕೆ ಅಪಚಾರ. ಕುಡಿಯುವ ನೀರಿಗೆ, ಉರಿಯುವ ದೀಪಕ್ಕೆ, ತಿರುಗುವ ರಸ್ತೆಗೆ, ಓದುವ ಶಾಲೆಗೆ, ರೋಗಿಯ ಚಿಕಿತ್ಸೆಗೆ ಜಾತಿ, ಧರ್ಮ, ಜನಾಂಗ, ಭಾಷೆಯ ಹೆಸರಿನಲ್ಲಿ ರಾಜಕಾರಣ ಮಾಡುವುದು ಜನದ್ರೋಹ. ಎಲ್ಲ ವಿಷಯಗಳಲ್ಲೂ ರಾಜಕಾರಣ ಮಾಡುವುದು ಅಪಾಯಕಾರಿ’ ಎಂದು ದೇವರಾಜ ಅರಸು ಹೇಳುತ್ತಿದ್ದರು. ಅದನ್ನು ಈಗ ನಮ್ಮ ಆಡಳಿತಗಾರರು ನೆನಪಿಸಿಕೊಳ್ಳಬೇಕಷ್ಟೆ. ಆಡಳಿತದಲ್ಲಿ ಇದ್ದವರು ಆಗ ಬದ್ಧರಾಗಿದ್ದರು. ಈಗ ಆಡಳಿತದಲ್ಲಿ ಇರುವವರು ಬದಲಾಗಬಾರದು. ಆಗ ಅರಸು ಇದ್ದರು. ಈಗ ಅವರಿಲ್ಲ ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT