ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಸಂಧಾನ | ಮತಭ್ರಾಂತಿ ಬಿಟ್ಟು ಹೊರಬನ್ನಿ!

ಕುವೆಂಪು ಅವರ ‘ವಿಚಾರಕ್ರಾಂತಿಗೆ ಆಹ್ವಾನ’ ಭಾಷಣಕ್ಕೆ ಸುವರ್ಣ ಸಂಭ್ರಮ
Published 27 ಫೆಬ್ರುವರಿ 2024, 23:30 IST
Last Updated 27 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

‘ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣ ಒಂದೆಯೆ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ಅದಕ್ಕಿಂತಲೂ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ! ಅದು ಒಂದು ಅಮೂರ್ತ ವಸ್ತು, ಅದು ಹಾಕಿಕೊಂಡಿರುವ ವೇಷದಿಂದ ತುಂಬ ಸಾಧು ಮತ್ತು ಪೂಜ್ಯ ಎಂಬಂತೆ ತೋರುತ್ತದೆ. ಅದು ಭಾವರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯಪ್ರವೇಶ ಮಾಡಿ ನಮ್ಮನ್ನು ಆಕ್ರಮಿಸುತ್ತದೆ. ಮತ್ತು ನಮ್ಮಲ್ಲಿ ನಿಜವಾಗಿಯೂ ಇರುವ ಒಂದು ಅನಿರ್ವಚನೀಯ- ಅತ್ಯಂತ ಅಂತರತಮ- ಸತ್ಯಸ್ಯ ಸತ್ಯವಾದ ಸನಾತನ ತತ್ತ್ವಕ್ಕೆ (ಅದನ್ನು ಅಧ್ಯಾತ್ಮ ಎಂದು ಹೆಸರಿಸುತ್ತೇವೆ) ಅದು ತನ್ನ ಬಾಂಧವ್ಯವನ್ನು ಘೋಷಿಸುತ್ತಾ ಬಂದಿರುವುದರಿಂದಲೂ ಮತ್ತು ಅದನ್ನೆ ತಾನು ಪೋಷಿಸುತ್ತಿರುವುದಾಗಿ ಹೇಳುತ್ತಲೂ ಇರುವುದರಿಂದಲೂ ಅದರ ಪ್ರಚ್ಛನ್ನ ವಂಚನೆಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದೂ ಕಷ್ಟಸಾಧ್ಯವಾಗಿದೆ.ಅದರ ಹೆಸರು ‘ಮತ’! ಈ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನು ಮುಂದೆಯಾದರೂ ನೀವು ಅಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ
ಸಮಾಜವಾದವಾಗಲಿ ಸಮಾನತಾಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ’.

8.12.1974ರಂದು ನಡೆದ ಬೆಂಗಳೂರು ವಿಶ್ವವಿದ್ಯಾಲಯದ ಹತ್ತನೇ ಘಟಿಕೋತ್ಸವದಲ್ಲಿ ಕುವೆಂಪು ಅವರು ಮಾಡಿದ ಭಾಷಣದ ಒಂದು ತುಣುಕು ಇದು. ಈ ಭಾಷಣ ‘ವಿಚಾರ ಕ್ರಾಂತಿಗೆ ಆಹ್ವಾನ’ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿದೆ. 50 ವರ್ಷಗಳ ಹಿಂದೆ ಕುವೆಂಪು ಮಾಡಿದ ಭಾಷಣ ಈಗಿನ ನಮ್ಮ ದೇಶದ ಪರಿಸ್ಥಿತಿಗೆ ಎಷ್ಟೊಂದು ಪ್ರಸ್ತುತವಾಗಿದೆ ಎಂದರೆ, ಇಂದಿನ ಪರಿಸ್ಥಿತಿಯನ್ನು ನೋಡಿಯೇ ಅವರು ಹೀಗೆ ಹೇಳಿದಂತಿದೆ. ಈಗ ಅವರು ಬದುಕಿದ್ದರೆ ಇನ್ನಷ್ಟು ಕಟುವಾಗಿಹೇಳುತ್ತಿದ್ದರೇನೊ?  ಈ ಭಾಷಣಕ್ಕಿಂತ 40 ವರ್ಷಗಳ ಮುಂಚೆಯೇ ಅವರು ತಮ್ಮ ಕವನವೊಂದರಲ್ಲಿ ‘ಗುಡಿ ಚರ್ಚು, ಮಸಜೀದಿಗಳನ್ನು ಬಿಟ್ಟು ಹೊರಬನ್ನಿ’ ಎಂದು ಕರೆ ನೀಡಿದ್ದರು. ಅದೇ ಕವನದಲ್ಲಿಯೇ ಅವರು ‘ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ, ಮತಿಯಿಂದ ದುಡಿಯಿರೈ ಲೋಕಹಿತಕೆ’ ಎಂದು ಬುದ್ಧಿಮಾತು ಹೇಳಿದ್ದರು. ವಿಚಾರ ಕ್ರಾಂತಿಗೆ ಆಹ್ವಾನ ಎಂಬ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದ ಅವರು, ‘ಇದು ನಿಮ್ಮ ಮುಂದಣ ಮಾರ್ಗದರ್ಶಕ ಮಂತ್ರದೀಪವಾಗಿ ನಿಮಗೆ ದಾರಿ ತೋರಿ ನಡೆಸಲಿ’ ಎಂದು ಹಾರೈಸಿದ್ದರು. ದೇಶ ಈಗ ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿರುವಾಗ ಭಾರತದ ಎಲ್ಲ ಮತದಾರರಿಗೂ ಇದೊಂದು ಮಂತ್ರದೀಪ.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದಾಗ, ಮಂದಿರ ನಿರ್ಮಾಣವಾಗಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯಾದಾಗ ಇಡೀ ದೇಶದಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗಿತ್ತು. ಭಾರತವನ್ನು ಶತಾಯಗತಾಯ ಹಿಂದೂ ದೇಶ ಮಾಡುತ್ತೇವೆ ಎಂದು ಕೆಲವರು ಪಣ ತೊಟ್ಟಿದ್ದಾರೆ. ಮುಸ್ಲಿಂ ಸಮುದಾಯದ ಬಗ್ಗೆ ದ್ವೇಷ ಮಿತಿಮೀರಿದೆ. ಇಂತಹ ಸಂದರ್ಭದಲ್ಲಿ, ಕುವೆಂಪು ಅವರ ಮೇಲಿನ ಮಾತುಗಳನ್ನು ಪ್ರತಿಯೊಬ್ಬ ಮತದಾರನೂ ಮನನ ಮಾಡಿಕೊಳ್ಳಬೇಕಿರುವುದು ಇಂದಿನ ತುರ್ತು.

ಚುನಾವಣೆ ಹೊಸ್ತಿಲಿನಲ್ಲಿಯೇ ಪ್ರಧಾನಿ ಅವರು ಸಮುದ್ರದಾಳಕ್ಕೆ ಜಿಗಿದು ಧ್ಯಾನಸ್ಥರಾಗಿ ಸ್ಕೂಬಾ ಡೈವಿಂಗ್ ಸಾಹಸ ಮಾಡಿದಾಗಲೂ ನಮಗೆ ಕುವೆಂಪು ಮಾತುಗಳು ಜ್ಞಾಪಕಕ್ಕೆ ಬರಲೇಬೇಕು. ಪ್ರಧಾನಿ ಮಾತ್ರವಲ್ಲ, ಎಲ್ಲ ಪಕ್ಷದ ಮುಖಂಡರೂ ಈ ಕಾಲದಲ್ಲಿ ದೇವಸ್ಥಾನಗಳತ್ತ, ಮಸೀದಿಗಳತ್ತ, ಚರ್ಚ್‌ಗಳತ್ತ ಸಾಗುತ್ತಿದ್ದಾರೆ. ಇದರ ಮರ್ಮವನ್ನು ಅರಿಯಲೇಬೇಕು. ‘ಮತ’ ಬಿತ್ತಿ ‘ಮತ’ ಬೆಳೆಯಲು ಹೊರಟಿರುವ ಈ ಸಂದರ್ಭದಲ್ಲಿ ಕುವೆಂಪು ಅವರನ್ನು ನಾವು ಮರೆಯಲೇಬಾರದು.

‘ನಮಗೆ ಬೇಕಾಗಿರುವ ಶಿಕ್ಷಣದ ಸ್ವರೂಪ, ರಾಷ್ಟ್ರೀಯ ಶಿಕ್ಷಣೋದ್ದೇಶ, ದೇಶಭಾಷಾ ಶಿಕ್ಷಣ ಮಾಧ್ಯಮ, ಅಧಿಕಾರ ಮತ್ತು ಆಡಳಿತದ ವಿಕೇಂದ್ರೀಕರಣ, ಗ್ರಾಮಸ್ವರಾಜ್ಯ, ನಿರುದ್ಯೋಗ, ಅಭಾವ ಪೀಡೆ, ಬೆಲೆ ಏರಿಕೆ ಇತ್ಯಾದಿ ಪ್ರಚಲಿತ ಬಿಸಿಬಿಸಿ ಸಮಸ್ಯೆಗಳಾವುವನ್ನೂ ನಾನು ಪ್ರಸ್ತಾಪಿಸಿಲ್ಲ. ಏಕೆಂದರೆ, ಅವುಗಳಿಗಿರುವ ಕಾರಣಗಳೆಲ್ಲ ಜನ್ಯಅನಿಷ್ಟ ವರ್ಗಕ್ಕೆ ಸೇರುತ್ತವೆ. ಆ ಉಪಕಾರಣಗಳಿಗೆಲ್ಲ ಮುಖ್ಯ ಜನಕಕಾರಣಗಳೆಂದರೆ ನಾನು ಮೇಲೆ ಪ್ರಸ್ತಾಪಿಸಿರುವ ಆ ಎರಡು: ಮತಭಾವನೆ ಪ್ರಚೋದಿಸಿರುವ ಜಾತಿಭೇದ ಬುದ್ಧಿ ಮತ್ತು ಚುನಾವಣೆ ಅನುಸರಿಸುತ್ತಿರುವ ಕುಟಿಲ ಕುನೀತಿ. ಆ ಎರಡು ಜನಕಅನಿಷ್ಟಗಳನ್ನೂ ನೀವು ತೊಲಗಿಸಿದರೆ ಉಳಿದ ಎಲ್ಲ ಜನ್ಯ ಅನಿಷ್ಟಗಳನ್ನೂ ಬಹುಬೇಗನೆ ತೊಲಗಿಸಲು ನೀವು ಖಂಡಿತವಾಗಿಯೂ ಸಮರ್ಥರಾಗುತ್ತೀರಿ’ ಎಂದೂ ಕುವೆಂಪು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದು ಕೂಡ ಇಂದಿನ ಪರಿಸ್ಥಿತಿಗೆ ತಕ್ಕನಾಗಿಯೇ ಇದೆ. ಈಗಲಾದರೂ ನಾವು ಆ ಎರಡು ಅನಿಷ್ಟಗಳನ್ನು ತೊಲಗಿಸುವ ಕೆಲಸಕ್ಕೆ ಮುಂದಾಗಬೇಕು.

ವಿಚಾರ ಕ್ರಾಂತಿಗೆ ಆಹ್ವಾನ ಭಾಷಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿಯೇ ಕುವೆಂಪು ಅವರಿಗೆ ಗೌರವ ಸಲ್ಲಿಸುವ ಸುವರ್ಣ ಅವಕಾಶವನ್ನು ರಾಜ್ಯ ಸರ್ಕಾರ ಕಳೆದುಕೊಂಡಿತು. ವಸತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ದ್ವಾರಗಳಲ್ಲಿ ‘ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬಾ’ ಎಂಬ ಘೋಷವಾಕ್ಯವನ್ನು ಬದಲಾಯಿಸಿ ‘ಜ್ಞಾನ ದೇಗುಲವಿದು, ಧೈರ್ಯವಾಗಿ ಪ್ರಶ್ನಿಸಿ’ ಎಂದು ಬದಲಾಯಿಸಲಾಗಿತ್ತು. ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎನ್ನುವುದು ಕುವೆಂಪು ಅವರ ಮಾತು. ಅದನ್ನು ಬದಲಾಯಿಸಿ ರಾಜ್ಯ ಸರ್ಕಾರ ಕುವೆಂಪು ಅವರಿಗೆ ಅವಮಾನ ಮಾಡುತ್ತಿದೆ ಎಂದು ವಿರೋಧ ಪಕ್ಷಗಳು ಹುಯಿಲೆಬ್ಬಿಸಿದವು. ಆದರೆ ಈ ಮಾತು ಕುವೆಂಪು ಹೇಳಿದ್ದಲ್ಲ. ಬದಲಿಗೆ ‘ಧೈರ್ಯದಿಂದ ಪ್ರಶ್ನಿಸಿ’ ಎನ್ನುವುದೇ ಕುವೆಂಪು ಅವರ ವಿಚಾರಧಾರೆಯಾಗಿತ್ತು. ಆ ಘೋಷವಾಕ್ಯವನ್ನು ಉಳಿಸಿಕೊಳ್ಳುವ ಧೈರ್ಯವನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕಿತ್ತು. ಅದೇ ನಿಜವಾಗಿ ಕುವೆಂಪು ಅವರಿಗೆ ಸಲ್ಲಿಸುವ ಗೌರವವಾಗುತ್ತಿತ್ತು. ಇದೆಲ್ಲ ಗೊತ್ತಿದ್ದೂ ರಾಜ್ಯ ಸರ್ಕಾರ ಹಳೆಯ ಘೋಷವಾಕ್ಯಕ್ಕೇ ಅಂಟಿಕೊಂಡಿತು.

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಅವರ ಟಿಪ್ಪಣಿ ಆಧರಿಸಿ ಫೆ.15ರಂದು ಸುತ್ತೋಲೆ ಹೊರಡಿ
ಸಿದ್ದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕರು, ‘ರಾಷ್ಟ್ರೀಯ ಹಬ್ಬಗಳನ್ನು ಬಿಟ್ಟು ಯಾವುದೇ ಧಾರ್ಮಿಕ ಹಬ್ಬಗಳನ್ನು (ಯುಗಾದಿ, ರಂಜಾನ್, ಕ್ರಿಸ್‌ಮಸ್‌, ಈದ್ ಮಿಲಾದ್, ಸಂಕ್ರಾಂತಿ ಇತ್ಯಾದಿ) ಆಚರಿಸಿದರೆ ಸಂಸ್ಥೆಯ ಪ್ರಾಂಶುಪಾಲರು ಮತ್ತು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು. ಈ ಸುತ್ತೋಲೆಯನ್ನು ಅದೇ ದಿನ ಸಂಜೆಯೇ ವಾಪಸ್‌ ಪಡೆಯಲಾಯಿತು. ನಿಜವಾಗಿ ಈ ಆದೇಶವನ್ನು ರಾಜ್ಯ ಸರ್ಕಾರ ಎಲ್ಲ ಇಲಾಖೆಗಳಿಗೂ ವಿಸ್ತರಿಸ
ಬೇಕಿತ್ತು. ಹಾಗೆ ಮಾಡಿದ್ದರೆ ಅದು ರಾಷ್ಟ್ರಕವಿ ಕುವೆಂಪು ಅವರಿಗೆ ನೀಡಿದ ಗೌರವವಾಗುತ್ತಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಇಂತಹ ಕ್ರಾಂತಿಕಾರಕ ನಿರ್ಧಾರ ಕೈಗೊಳ್ಳುವುದಕ್ಕೆ ಹಿಂಜರಿಯಿತು. ವಿಧಾನಮಂಡಲದಲ್ಲಿ ಈ ಆದೇಶವನ್ನು ಸಮರ್ಥಿಸಿಕೊಳ್ಳಲೂ ಮುಂದಾಗದಿರುವುದರಿಂದ, ‘ಸಂತೆಯಲ್ಲಿ ನಿಂತು ಅಂಜುವುದೇಕೆ ಸಿದ್ದರಾಮಯ್ಯ’ ಎಂದು ಕೇಳುವಂತಾಗಿದೆ.

ಮತಭ್ರಾಂತಿ, ಕುಟಿಲ ಕುನೀತಿ ವಿಷಯದಲ್ಲಿ ಅವರು ಹೆಚ್ಚು, ಇವರು ಕಮ್ಮಿ ಎನ್ನುವ ಹಾಗಿಲ್ಲ. ಇದೇ ಮಾತನ್ನು ಕುವೆಂಪು ತಮ್ಮ ಭಾಷಣದಲ್ಲಿ ‘ಉಗ್ರ ಕ್ರಾಂತಿಯಿಂದಲಾದರೂ ನೀವು ಚುನಾವಣೆಯನ್ನು ಸಾತ್ವಿಕ ಮಾರ್ಗಕ್ಕೆ ತಿರುಗಿಸದಿದ್ದರೆ ಸ್ವಾರ್ಥಿಗಳೂ, ಸಮಯಸಾಧಕರೂ, ಗೂಂಡಾಗಳೂ, ಕಳ್ಳಸಂತೆಕೋರರೂ, ಕಳ್ಳಸಾಗಣೆಯ ಖದೀಮರೂ, ಚಾರಿತ್ರ್ಯಹೀನರೂ ಪ್ರಜಾಸತ್ತೆಯ ಹುಸಿ ಹೆಸರಿನ ಹಿಂದೆ ಪ್ರಚ್ಛನ್ನ ಸರ್ವಾಧಿಕಾರ ನಡೆಸುತ್ತಾರೆ’ ಎಂದು ಹೇಳುತ್ತಾರೆ. ಕುವೆಂಪು ಅವರ ಈ ಮಾತುಗಳು ಈಗಲಾದರೂ ನಮ್ಮ ಎಲ್ಲ ಮತದಾರರ ಎದೆಗೆ ಅಕ್ಷರಶಃ ಬೀಳಬೇಕು. ಇದು ಎದೆಗೆ ಬಿದ್ದ ಅಕ್ಷರವೂ ಆಗಬೇಕು, ಭೂಮಿಗೆ ಬಿದ್ದ ಬೀಜವೂ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT