ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನುಸಂಧಾನ: ಮುಳ್ಳಿನ ಮಂಚದ ಮೇಲೆ ಮಣ್ಣಿನ ಮಗ!

ಮಹಾಭಾರತದ ಭೀಷ್ಮ ಎದುರಿಸಿದ ಸಂಕಟವೇ ಇವರಿಗೂ ಎದುರಾಗಿರಬಹುದೆ?
Published 28 ಜೂನ್ 2024, 1:01 IST
Last Updated 28 ಜೂನ್ 2024, 1:01 IST
ಅಕ್ಷರ ಗಾತ್ರ

ಮಹಾಭಾರತದ ಭೀಷ್ಮಾಚಾರ್ಯರಿಗೆ ತಮ್ಮ ಮೊಮ್ಮಕ್ಕಳಾದ ಕೌರವರು ಕೆಟ್ಟವರು ಎನ್ನುವುದು ಗೊತ್ತಿತ್ತು. ಅವರಿಗೆ ದುರ್ಜನರ ಸಹವಾಸ ಇದೆ ಎನ್ನುವುದೂ ತಿಳಿದಿತ್ತು. ಹಿರಿಯರು ಸಿದ್ಧಪಡಿಸಿದ್ದ ಸಿಂಹಾಸನದ ಮೇಲೆ ಕುಳಿತು ದೌಲತ್ತು ನಡೆಸುತ್ತಿದ್ದಾರೆ ಎಂಬ ಅರಿವೂ ಇತ್ತು. ಕೌರವರು ಯಾರ ಮಾತನ್ನೂ ಕೇಳದೆ ದ್ರೌಪದಿಯ ವಸ್ತ್ರಾಪಹರಣ ನಡೆಸಿದುದನ್ನು ಕಣ್ಣಾರೆ ನೋಡಿದ್ದರು. ಆದರೂ ಕೊನೆಗಾಲದಲ್ಲಿ ಭೀಷ್ಮಾಚಾರ್ಯರು ಕೌರವರ ಪರವಾಗಿಯೇ ಹೋರಾಡಿದರು. ಸೇನಾಧಿಪತ್ಯವನ್ನೂ ವಹಿಸಿಕೊಂಡರು. ಗೆಲುವು ಅವರಿಗೆ ಒಲಿಯಲಿಲ್ಲ. ಕುರುಕ್ಷೇತ್ರದಲ್ಲಿ ಅವರು ಮುಳ್ಳಿನ ಮಂಚದ ಮೇಲೆ ಮಲಗುವಂತಾಯಿತು.

ಕರ್ನಾಟಕ ರಾಜಕೀಯದ ಭೀಷ್ಮ ಎಚ್.ಡಿ. ದೇವೇಗೌಡರಿಗೂ ಈಗ ಅಂತಹದೇ ಸ್ಥಿತಿ ಬಂದೊದಗಿದೆ. ಇಬ್ಬರು ಮೊಮ್ಮಕ್ಕಳು ಜೈಲುಪಾಲಾಗಿದ್ದಾರೆ. ಒಬ್ಬ ಮಗ ಜೈಲಿಗೆ ಹೋಗಿ ಬಂದು ಜಾಮೀನಿನ ಮೇಲಿದ್ದಾರೆ. ಸೊಸೆ ಜೈಲಿಗೆ ಹೋಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದಾರೆ. ಇನ್ನೊಬ್ಬ ಮಗ ಕೇಂದ್ರ ಸಚಿವರಾಗಿದ್ದರೂ ಆ ಸಂಭ್ರಮವನ್ನು ಆಚರಿಸುವ ಮನಃಸ್ಥಿತಿಯಲ್ಲಿ ಅವರಿಲ್ಲ. 91 ವರ್ಷ ವಯಸ್ಸಿನ ಈ ಅಜ್ಜನ ದೇಹ ಮತ್ತು ಮನಸ್ಸು ಈಗ ಮೊನಚಾದ ಮುಳ್ಳುಗಳಿಂದ ಗಾಸಿಗೊಳಗಾಗಿದೆ. 

ಮೊಮ್ಮಕ್ಕಳ ನಡತೆಯ ಬಗ್ಗೆ ಅವರಿಗೆ ಗೊತ್ತಿರಲಿಲ್ಲ ಎಂದು ಕುಟುಂಬದವರು ಹೇಳುತ್ತಾರೆ. ಎಲ್ಲ ಗೊತ್ತಿದ್ದೂ ಹಾಸನ ಲೋಕಸಭಾ ಚುನಾವಣೆಯಲ್ಲಿ ಮೊಮ್ಮಗನನ್ನು ಗೆಲ್ಲಿಸಲು ಅವರು ಸೇನಾಧಿಪತ್ಯವನ್ನು ವಹಿಸಿಕೊಂಡಿದ್ದರು ಎಂದು ವಿರೋಧಿಗಳು ಹೇಳುತ್ತಾರೆ. ವಿಷಯ ಏನೇ ಇದ್ದರೂ ಅವರು ಮೊಮ್ಮಗನ ಗೆಲುವಿಗಾಗಿ ಹೋರಾಡಿದ್ದು ನಿಜ. ಮೊಮ್ಮಗ ಯುದ್ಧದಲ್ಲಿ ಸೋತಿದ್ದೂ ನಿಜ. ತನ್ನ ಅಟಾಟೋಪದಿಂದ ಈಗ ಜೈಲುಪಾಲಾಗಿದ್ದೂ ನಿಜ.

ಮಹಾಭಾರತದ ಭೀಷ್ಮಾಚಾರ್ಯರು ತಮ್ಮ ನಿಷ್ಠೆ ಏನಿದ್ದರೂ ಸಿಂಹಾಸನಕ್ಕೆ, ಏನೇ ಇದ್ದರೂ ತಾವು ಸಿಂಹಾಸನ ರಕ್ಷಣೆ ಕಾಯಕದಿಂದ ಹಿಂದೆ ಸರಿಯುವುದಿಲ್ಲ ಎನ್ನುತ್ತಾರೆ. ಅದೇ ರೀತಿ ದೇವೇಗೌಡರೂ ತಮ್ಮ ನಿಷ್ಠೆ ಪಕ್ಷಕ್ಕೆ ಎಂದು ಘೋಷಿಸಿಕೊಂಡವರು. ಪಕ್ಷ ನಿಷ್ಠೆಯಿಂದ ಎಂದೂ ಹಿಂದೆ ಸರಿದವರಲ್ಲ. ಪಕ್ಷ ಎಂದರೆ ಅವರ ಕುಟುಂಬ ಮಾತ್ರವೆಂದು ವ್ಯಂಗ್ಯವಾಡುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಆದರೂ ದೇವೇಗೌಡರ ಇಚ್ಛಾಶಕ್ತಿಯನ್ನು, ಈ ಇಳಿವಯಸ್ಸಿನಲ್ಲಿಯೂ ಹೋರಾಡುವ ಛಲವನ್ನು ಮೆಚ್ಚದೇ ಇರಲು ಸಾಧ್ಯವಿಲ್ಲ. ಫೀನಿಕ್ಸ್ ಪಕ್ಷಿಯಂತೆ ಪುಟಿದೆದ್ದು ಬರುವೆ ಎಂದು ಅವರೊಮ್ಮೆ ಹೇಳಿದ್ದರು. ಹೀಗೆ ಪುಟಿದೆದ್ದು ಬರುವುದು ಅವರ ಜಾಯಮಾನವೇ ಆಗಿತ್ತು. ಆದರೆ ಈಗ ಅವರು ಮೊಮ್ಮಕ್ಕಳ ಕಾರಣಕ್ಕೆ ಈ ನೋವು ಉಣ್ಣುವುದನ್ನು ನೋಡಿದರೆ ಎಂತಹವರಿಗೂ ಕರುಳು ಚುರುಕ್ ಎನ್ನದೇ ಇರದು.

ದೇವೇಗೌಡರ ಮಕ್ಕಳಿಗೆ, ಮೊಮ್ಮಕ್ಕಳಿಗೆ ರಾಜಕೀಯದ ಹಾದಿ ಸುಗಮವಾಗಿರಬಹುದು. ಆದರೆ ದೇವೇಗೌಡರಿಗೆ ಅದು ಕಠಿಣವಾದ ಹಾದಿಯಾಗಿತ್ತು. ರೈಲು ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಹುಡುಗನೊಬ್ಬ ಪ್ರಧಾನಿ ಹುದ್ದೆಗೆ ಏರಿದ್ದು ಮಹಾ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೇಳಲಾಗುತ್ತದೆ. ಅದು ನಿಜವೂ ಹೌದು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಎಂಬ ಕುಗ್ರಾಮದಿಂದ ಬಂದ ದೇವೇಗೌಡರು ಪ್ರಧಾನಿ ಸ್ಥಾನಕ್ಕೆ ಏರಿದ್ದು ಕೂಡ ಬಹುದೊಡ್ಡ ಸಾಧನೆಯೆ.

ನಿರ್ದಿಷ್ಟ ರಾಜಕೀಯ ಸಿದ್ಧಾಂತವನ್ನು ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದ ಕೋಟ್ಯಂತರ ಕಾರ್ಯಕರ್ತರ ಪಡೆಯೇನೂ ಅವರ ಬೆನ್ನಿಗೆ ಇರಲಿಲ್ಲ. ಬಡತನದ ರೇಖೆಯನ್ನು ದಾಟಲಾಗದಂತಹ ಆರ್ಥಿಕ ಪರಿಸ್ಥಿತಿ ಇತ್ತು. ಇಂತಹ ರೈತನೊಬ್ಬನ ಮಗ ದೇಶದ ಅತ್ಯುನ್ನತ ಹುದ್ದೆಗೆ ಏರಿದ ರೀತಿ ಅತ್ಯಂತ ರೋಚಕ. ಭಾರತೀಯ ರಾಜಕೀಯ ರಂಗದಲ್ಲಿ ಪ್ರತಿಯೊಬ್ಬ ರಾಜಕಾರಣಿಯ ಅತ್ಯುನ್ನತ ಕನಸು ಎಂದರೆ ಅದು ಪ್ರಧಾನಿ ಹುದ್ದೆ. ಡಿಪ್ಲೊಮಾ ಪದವೀಧರರಾಗಿ ಜೀವನ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಸಣ್ಣಪುಟ್ಟ ಗುತ್ತಿಗೆ ಕಾಯಕವನ್ನು ಮಾಡುತ್ತಿದ್ದ ವ್ಯಕ್ತಿಯೊಬ್ಬ ದೇಶದ ಅತ್ಯುನ್ನತ ಪದವಿಗೇರಿದ್ದು ವಿಸ್ಮಯ. ಒಂದೊಂದೇ ಇಟ್ಟಿಗೆಯನ್ನು ಜೋಡಿಸಿ ಕಟ್ಟಿದ ಮಹಲನ್ನು ತನ್ನ ಮಕ್ಕಳು, ಮೊಮ್ಮಕ್ಕಳೇ ಪುಡಿಗಟ್ಟಿದರೆ ಆಗುವ ನೋವು ಯಾವ ಶತ್ರುವಿಗೂ ಬೇಡ.

ಹೊಳೆನರಸೀಪುರದ ಆಂಜನೇಯ ಕೊ–ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ, ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ರಾಜಕೀಯ ಆರಂಭಿಸಿದ ದೇವೇಗೌಡರಿಗೆ ಸ್ವಾತಂತ್ರ್ಯ ಹೋರಾಟಗಾರ ಎ.ಜಿ.ರಾಮಚಂದ್ರ ರಾವ್ ಅವರೇ ಗುರುಗಳು. 1962ರಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿಲ್ಲ ಎಂದು ಹೊಳೆನರಸೀಪುರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದವರು ಅವರು. ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಿಂದಲೇ ಆರಂಭಿಸಿದರೂ ನಂತರ ತಮ್ಮ ಬದುಕಿನ ಬಹುತೇಕ ಭಾಗ ಕಾಂಗ್ರೆಸ್ ವಿರೋಧಿ ರಾಜಕೀಯವನ್ನೇ ಮಾಡುತ್ತಾ ಬಂದ ದೇವೇಗೌಡರು ಹೋರಾಟದ ಮನೋಭಾವವನ್ನು ಎಂದಿಗೂ ಬಿಟ್ಟುಕೊಟ್ಟವರಲ್ಲ. 

1969ರಲ್ಲಿ ಕಾಂಗ್ರೆಸ್ ಪಕ್ಷ ಹೋಳಾದಾಗ ದೇವೇಗೌಡರು ಆಯ್ಕೆ ಮಾಡಿಕೊಂಡಿದ್ದು
ನಿಜಲಿಂಗಪ್ಪನವರ ಸಂಸ್ಥಾ ಕಾಂಗ್ರೆಸ್ ಪಕ್ಷವನ್ನು. 1972ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ದೇವೇಗೌಡರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 18 ತಿಂಗಳು ಸೆರೆವಾಸವನ್ನೂ
ಅನುಭವಿಸಿದ್ದರು. ನಂತರ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಅವರು ಮುಖ್ಯಮಂತ್ರಿ ಗಾದಿಯ ಹತ್ತಿರಕ್ಕೆ ಹೋಗಿದ್ದರೂ ಏರಲು ಸಾಧ್ಯವಾಗಿರಲಿಲ್ಲ. 1962ರಿಂದ 1985ರವರೆಗೆ ‘ಸೋಲಿಲ್ಲದ ಸರದಾರ’ರಾಗಿದ್ದ ಅವರು, 1989ರಲ್ಲಿ ಮೊದಲ ಬಾರಿಗೆ ಸೋತರು. ಹರಿದು ಹಂಚಿಹೋಗಿದ್ದ ಜನತಾ ಪರಿವಾರವನ್ನು ಒಟ್ಟು ಸೇರಿಸಿ 1994ರ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದರು.
ನಂತರ 1996ರಲ್ಲಿ ಪ್ರಧಾನಿಯೂ ಆದರು. ಮುಖ್ಯಮಂತ್ರಿಯಾಗಿಯೂ ಪ್ರಧಾನಿಯಾಗಿಯೂ ಅವಧಿ ಪೂರೈಸದಿದ್ದರೂ ಅವರು ರಾಜಕೀಯ ರಂಗದಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. 

ದೇವೇಗೌಡರನ್ನು ರಾಜಕೀಯವಾಗಿ ವಿರೋಧಿಸುವವರು ಬಹಳ ಜನ ಇರಬಹುದು. ಅವರ ಎಲ್ಲ ಹೋರಾಟಗಳನ್ನು ಒಪ್ಪದೇ ಇರಬಹುದು. ಕುಟುಂಬದ ಬಗ್ಗೆ ಅವರ ಅತಿಯಾದ ಪ್ರೀತಿ ನಮಗೆ ಬೇಸರ ತರಿಸಬಹುದು. ಆದರೆ ಅವರ ಹೋರಾಟ, ರಾಜ್ಯದ ಕುರಿತ ಅವರ ದೃಢವಾದ ನಿಲುವು, ನೀರಾವರಿ ವಿಷಯದಲ್ಲಿನ ಅವರ ಜ್ಞಾನ, ರೈತಪರ ಕಾಳಜಿ, ಕರ್ನಾಟಕಕ್ಕೆ ಒಳಿತು ಮಾಡಬೇಕು ಎಂಬ ಅವರ ಮನೋಭಿಲಾಷೆಯನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಅವರ ನೈತಿಕತೆಯನ್ನು ಪ್ರಶ್ನಿಸುವ ಧೈರ್ಯ ಯಾರಿಗೂ ಇಲ್ಲ. ಶುದ್ಧ ಸಾಂಸಾರಿಕ ಜೀವನ ನಡೆಸಿದವರು. ರಾಜಕೀಯವಾಗಿ ಎಷ್ಟೇ ಮೇಲಕ್ಕೆ ಏರಿದರೂ ತಮ್ಮ ನಡತೆ ತಪ್ಪಿದವರಲ್ಲ.

ರಾಜಕೀಯವಾಗಿ ಒಂದು ಪಕ್ಷ ಅಥವಾ ವ್ಯಕ್ತಿ ಸೋಲುವುದು ಸಹಜ. ಸ್ವತಂತ್ರ ಭಾರತದಲ್ಲಿ ಎಷ್ಟೋ ರಾಜಕೀಯ ಪಕ್ಷಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಮೆರೆದ ಮಾಯಾವತಿ ನೇತೃತ್ವದ ಬಿಎಸ್‌ಪಿ ಈಗ ಆ ರಾಜ್ಯದಲ್ಲಿ ಶಕ್ತಿ ಕಳೆದುಕೊಂಡಿದೆ. ಮುಂದೊಂದು ದಿನ ಅದು ಮತ್ತೆ ಎದ್ದು ನಿಲ್ಲಬಹುದು. ಆದರೆ ನೈತಿಕವಾಗಿಯೇ ಸೋತುಹೋದರೆ ಯಾವುದೇ ಪಕ್ಷ ಅಥವಾ ನಾಯಕ ಎದ್ದು ನಿಲ್ಲುವುದು ಕಷ್ಟ. ದೇವೇಗೌಡರು ಈಗ ಅಂತಹ ಆಘಾತಕ್ಕೆ ಒಳಗಾಗಿದ್ದಾರೆ. ಬದುಕಿನ ಸಂಧ್ಯಾಕಾಲದಲ್ಲಿ ಇರುವ ಅವರಿಗೆ ಅವರ ಕುಟುಂಬದವರಿಂದಲೇ ಇಂತಹ ಸ್ಥಿತಿ ಬರಬಾರದಾಗಿತ್ತು.

ಮಹಾಭಾರತದ ಭೀಷ್ಮ ಕಡೆಗಾಲದಲ್ಲಿ ಕೆಟ್ಟವರ ಪರವಾಗಿಯೇ ಹೋರಾಡಿದರು ನಿಜ. ಆದರೂ ಮಹಾಭಾರತದಲ್ಲಿ ಅವರದ್ದು ಪ್ರಮುಖ ಪಾತ್ರ. ಈಗಲೂ ಯಾವುದೇ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದವರನ್ನು ಭೀಷ್ಮ ಎಂದೇ ಗುರುತಿಸಲಾಗುತ್ತದೆ. ಮಹಾಭಾರತ ನೆನಪಿನಲ್ಲಿ ಇರುವಷ್ಟು ಕಾಲ ಕೂಡ ಭೀಷ್ಮ ನೆನಪಿನಲ್ಲಿ ಇರುತ್ತಾರೆ. ಅದೇ ರೀತಿ ದೇವೇಗೌಡರ ಸಂಧ್ಯಾಕಾಲದಲ್ಲಿ
ಏನೇನೋ ಘಟನೆಗಳು ನಡೆದಿರಬಹುದು. ಆದರೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅವರ ಹೆಸರು ಚಿರಸ್ಥಾಯಿ. ಈಗಷ್ಟೇ 91ನೇ ಹುಟ್ಟುಹಬ್ಬ ಆಚರಿಸಿ ಕೊಂಡಿರುವ ಅವರು ನಂಬಿದ್ದು ರೈತರ ಕಲ್ಯಾಣ. ರೈತಹಿತಕ್ಕೆ ನಡೆಸಿದ ಸಂಘರ್ಷದ ಹೋರಾಟವೂ ಅನುಕರಣೀಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT