ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರ ಭಟ್ಟ ಅಂಕಣ – ಅನುಸಂಧಾನ| ಬಡವರ ಸಿಟ್ಟು ಕುರ್ಚಿಗೆ ಪೆಟ್ಟು!

ಹಸಿದವರಿಗೆ ಭಾವನಾತ್ಮಕ ವಿಷಯಗಳಿಗಿಂತ ಹೊಟ್ಟೆಪಾಡು ಬಹಳ ಮುಖ್ಯ
Published 28 ಜೂನ್ 2023, 23:34 IST
Last Updated 28 ಜೂನ್ 2023, 23:34 IST
ಅಕ್ಷರ ಗಾತ್ರ

ವಿಧಾನಸಭೆ ಚುನಾವಣೆ ಎಂಬ ಮಹಾಮಳೆ ಮುಗಿದಿದೆ. ಆದರೆ ಮರದ ಟೊಂಗೆಗಳಿಂದ ಹನಿ ಬೀಳುವುದು ನಿಂತಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿ ಸೋತಿದೆ. ಇಷ್ಟಾದರೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ಏನು ಕಾರಣ, ಬಿಜೆಪಿ ಸೋಲಿಗೆ ಏನೇನು ಕಾರಣ ಎಂಬ ಚರ್ಚೆ ಇನ್ನೂ ಮಗಿದಿಲ್ಲ. ಗ್ಯಾರಂಟಿಗಳ ಭರವಸೆಗೆ ಮರುಳಾಗಿಯೇ ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಫಲಿತಾಂಶವನ್ನು ಗಮನಿಸಿದರೆ, ನಿಜವಾಗಿ ಬಿಜೆಪಿಯನ್ನು ಸೋಲಿಸಿದ್ದು ಬಡವರ ಸಿಟ್ಟು ಎಂಬುದು ಸ್ಪಷ್ಟ. ಕರ್ನಾಟಕದಲ್ಲಿ ಈ ಬಾರಿ ಬಡವರ ಸಿಟ್ಟು ಬಿಜೆಪಿಯ ಅಧಿಕಾರದ ಕುರ್ಚಿಗೆ ಬಲವಾದ ಪೆಟ್ಟು ಕೊಟ್ಟಿದ್ದು ನಿಜ.

ರವೀಂದ್ರ ಭಟ್ಟ
ರವೀಂದ್ರ ಭಟ್ಟ

ಅತಿಯಾದರೆ ಅಮೃತವೂ ವಿಷ ಎಂಬ ಮಾತೊಂದಿದೆ. ಅದು ಬಿಜೆಪಿಯ ಪಾಲಿಗೆ ನಿಜವಾಗಿದೆ. ಕರ್ನಾಟಕ ವಿಧಾನಸಭೆಯ ಚುನಾವಣಾ ಫಲಿತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ದಲಿತರು ಮತ್ತು ಮುಸ್ಲಿಮರು ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ಬೆಂಬಲಿಸಿದಂತೆ ಕಾಣುತ್ತದೆ. ಮುಸ್ಲಿಮರಿಗೆ ಅಭದ್ರತೆ ಸೃಷ್ಟಿಯಾಗಿತ್ತು. ಹಿಜಾಬ್, ಹಲಾಲ್, ಆಜಾನ್‌ನಂತಹ ವಿವಾದಗಳ ಜೊತೆಗೆ ವ್ಯಾಪಾರಕ್ಕೂ ತೊಂದರೆ ಕೊಡುವ ಪ್ರಯತ್ನಗಳು ನಡೆದವು. ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶವಿಲ್ಲ ಎಂಬ ಅಭಿಯಾನ ನಿರಂತರವಾಗಿ ಸಾಗಿತು. ಬಿಜೆಪಿ ನೇತೃತ್ವದ ಸರ್ಕಾರವೇ ಮುಂದುವರಿದರೆ ತಮ್ಮ ಬದುಕನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುತ್ತದೆ ಎಂಬ ಭಯ ಅವರನ್ನು ಕಾಡತೊಡಗಿತು. ಬಿಜೆಪಿ ವಿರುದ್ಧ ಗೆಲ್ಲುವ ಪಕ್ಷವೊಂದು ಅವರಿಗೆ ಬೇಕಾಗಿತ್ತು. ಕರ್ನಾಟಕದಲ್ಲಿ ಸಹಜವಾಗಿಯೇ ಅದು ಕಾಂಗ್ರೆಸ್ ಪಕ್ಷವಾಗಿತ್ತು.

ದಲಿತರಲ್ಲಿಯೂ ಇಂತಹದೇ ಭಯ ಇತ್ತು. ಸಂವಿಧಾನವನ್ನು ಬದಲು ಮಾಡುವ, ಮೀಸಲಾತಿಯನ್ನು ಕಿತ್ತುಕೊಳ್ಳುವ ಆತಂಕ ಅವರನ್ನು ಕಾಡತೊಡಗಿತ್ತು. ಜೊತೆಗೆ ಅಕ್ಕಿ, ಸಬ್ಸಿಡಿ ಸೇರಿದಂತೆ ಇತರ ಸೌಲಭ್ಯಕ್ಕೂ ಕತ್ತರಿಬಿತ್ತು. ಅದಕ್ಕಾಗಿ ಅವರೂ ಸಂಪೂರ್ಣವಾಗಿ ಕಾಂಗ್ರೆಸ್‌ನತ್ತ ವಾಲಿದರು. ಇದರ ಜೊತೆಗೆ ಎಲ್ಲ ಜಾತಿಗಳ ಬಡವರಿಗೂ ಬದುಕು ಬರ್ಬರವಾಗಿತ್ತು. ಬೆಲೆ ಏರಿಕೆ ವಿಪರೀತವಾಗಿತ್ತು. ನಿರುದ್ಯೋಗದ ಪ್ರಮಾಣ ಹೆಚ್ಚಾಗಿತ್ತು. ಸೌಲಭ್ಯಗಳು ಕಡಿತಗೊಂಡಿದ್ದವು. ಆ ಕಾರಣಕ್ಕಾಗಿಯೇ ಚುನಾವಣೆ ದಿನಾಂಕ ಪ್ರಕಟವಾಗುವುದಕ್ಕೆ ಮೊದಲೇ ರಾಜ್ಯದ ಜನರು ಬಿಜೆಪಿಯನ್ನು ಸೋಲಿಸುವ ತೀರ್ಮಾನ ಮಾಡಿಯಾಗಿತ್ತು. ಕಾಂಗ್ರೆಸ್‌ನ ಗ್ಯಾರಂಟಿಗಳು ಆ ಪಕ್ಷದ ಜಯದ ಓಟಕ್ಕೆ ವೇಗವನ್ನು ತಂದುಕೊಟ್ಟವೇ ವಿನಾ ಬಿಜೆಪಿ ಸೋಲಿಗೆ ಮೊದಲೇ ಮುಹೂರ್ತ ನಿಗದಿಯಾಗಿತ್ತು.

ನೂರು ರಾಮಮಂದಿರಗಳನ್ನು ಕಟ್ಟಿ. ಸಾವಿರ ಪ್ರತಿಮೆಗಳನ್ನು ನಿರ್ಮಾಣ ಮಾಡಿ. ಭಾವನಾತ್ಮಕವಾಗಿ ಯಾವುದೇ ಹೊಸ ಹೊಸ ವಿಷಯಗಳನ್ನು ತೇಲಿಬಿಡಿ. ಪ್ರಜೆಗಳಿಗೆ ಮುಖ್ಯವಾಗುವುದು ಹೊಟ್ಟೆಪಾಡೇ ವಿನಾ ಮತ್ಯಾವುದೇ ವಿಷಯಗಳಲ್ಲ. ‘ಪೆಟ್ರೋಲ್ ಬೆಲೆ ಇನ್ನೂರು ರೂಪಾಯಿ ಆದರೂ ಪರವಾಗಿಲ್ಲ. ನನ್ನ ಮತ ಮೋದಿಗೆ’ ಎಂದು ಹೇಳುತ್ತಿದ್ದವರೂ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ. ‘ಗ್ಯಾರಂಟಿ ಯೋಜನೆಗಳಿಗೆ ಹಣ ಎಲ್ಲಿಂದ ತರುತ್ತೀರಿ? ರಾಜ್ಯವನ್ನು ಸಂಪೂರ್ಣ ದಿವಾಳಿ ಮಾಡುತ್ತೀರಿ. ಕರ್ನಾಟಕವೂ ಇನ್ನೊಂದು ಶ್ರೀಲಂಕಾ ಮತ್ತೊಂದು ಪಾಕಿಸ್ತಾನವಾಗುತ್ತದೆ. ಎಚ್ಚರ, ಎಚ್ಚರ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಯ ಸರಣಿಯನ್ನೇ ಬಿಟ್ಟರೂ ಜನ ಮಾತ್ರ ವಿಚಲಿತರಾಗಲಿಲ್ಲ.

ಬಡವರ ಸಿಟ್ಟು ಬರೀ ಕರ್ನಾಟಕದ ವಿಧಾನಸಭಾ ಚುನಾವಣೆಗೆ ಸೀಮಿತವಾದ ಹಾಗೆ ಕಾಣುತ್ತಿಲ್ಲ. ದೇಶದಲ್ಲಿ ವರ್ಷಾಂತ್ಯದೊಳಗೆ ನಡೆಯುವ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೂ ಇದು ವ್ಯಾಪಿಸುವ ಲಕ್ಷಣ ಕಾಣುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಗೂ ಬಡವರ ಸಿಟ್ಟು ವ್ಯಾಪಕವಾಗಿಯೇ ಏಟು ಕೊಡುವ ಸಾಧ್ಯತೆ ಇದೆ.

ಭಾರತದ ಜನರಿಗೆ ಬೇಕಾಗಿರುವುದು ಕಣ್ಣೀರು ಒರೆಸುವ ನಾಯಕನೇ ವಿನಾ ಕಣ್ಣೀರು ಮರೆಸುವ ನಾಯಕನಲ್ಲ (ಕುಸ್ತಿಪಟುಗಳ ಪ್ರತಿಭಟನೆ, ಮಣಿಪುರ ಹಿಂಸೆ ನೆನಪಿಸಿಕೊಳ್ಳಿ). ಪ್ರೀತಿ ಹಂಚುವ ನಾಯಕನೇ ಬೇಕು, ದ್ವೇಷ ಹಂಚುವ ನಾಯಕನಲ್ಲ. ಮಾತಿನಲ್ಲಿ ಅರಮನೆ ಕಟ್ಟುವ ಮೇಧಾವಿಗಿಂತ ಮೌನದಲ್ಲಿಯೇ ಮಮತೆ ತೋರುವ ನಾಯಕ ಬೇಕು. ಮಂದಿರ ಕಟ್ಟುವೆನೆಂಬ ಮದಿರೆ ಉಣಿಸುವ ನಾಯಕತ್ವಕ್ಕಿಂತ ಮನುಜರ ಉದರದಲ್ಲಿ ತುತ್ತಿನರಮನೆ ಕಟ್ಟುವ ನಾಯಕತ್ವ ಬೇಕು. ಏಕರೂಪ ನಾಗರಿಕ ಸಂಹಿತೆಗಿಂತ ಎಲ್ಲರನ್ನೂ ಏಕರೂಪದಲ್ಲಿ ನಡೆಸಿಕೊಂಡು ಹೋಗುವ, ಕೈಹಿಡಿದು ಮೇಲೆತ್ತುವ ನಾಯಕತ್ವ ಬೇಕು. ಅಯೋಧ್ಯಾ ರಥಯಾತ್ರೆ ಆಯ್ತು, ರಾಮಮಂದಿರ ಆಯ್ತು, ಮುಸ್ಲಿಂ ದ್ವೇಷ ಆಯ್ತು, ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್ ಆಯ್ತು, ಕಾಶ್ಮೀರದ ವಿಷಯ ಆಯ್ತು, ತ್ರಿವಳಿ ತಲಾಖ್ ಆಯ್ತು, ಈಗ ಏಕರೂಪದ ನಾಗರಿಕ ಸಂಹಿತೆ ಎಂಬ ಭೂತ ಹೊರಬಂದಿದೆ. ಎಲ್ಲವನ್ನೂ ಮರೆಸಲು ಅವರು ಪ್ರಯತ್ನಿಸಬಹುದು. ಆದರೆ ಹೊಟ್ಟೆಪಾಡು ಯಾವುದನ್ನೂ ಮರೆಸುವುದಿಲ್ಲ.

ಅಮೆರಿಕ ಮತ್ತು ಈಜಿಪ್ಟ್‌ಗಳಿಗೆ ಆರು ದಿನ ಪ್ರವಾಸ ಹೋಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವಾಪಸು ಬಂದ ತಕ್ಷಣ ‘ದೇಶದಲ್ಲಿ ಏನಾಗುತ್ತಿದೆ?’ ಎಂದು ಕೇಳಿದರು. ಅದಕ್ಕೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ‘ದೇಶ ಸಂತೋಷದಿಂದ ಇದೆ’ ಎಂದು ಉತ್ತರಿಸಿದರು. ‘ಭಾರತ ಪ್ರಕಾಶಿಸುತ್ತಿದೆ’ ಎಂದು ಹೇಳುತ್ತಿರುವಾಗಲೇ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವನ್ನು ದೇಶದ ಜನ ಕತ್ತಲೆಯ ಕೂಪಕ್ಕೆ ತಳ್ಳಿದರು. ದೇಶ ಸಂತೋಷದಿಂದ ಇದೆ ಎಂದು ಹೇಳುತ್ತಿರುವ ಈಗಿನ ಸರ್ಕಾರಕ್ಕೂ ಅಂತಹದೇ ಸ್ಥಿತಿ ಬಂದರೆ ಅಚ್ಚರಿಯಿಲ್ಲ. ಒಂದು ಕಾಲದಲ್ಲಿ ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ ಎಂದು ಹೇಳಲಾಗುತ್ತಿತ್ತು. ಈಗಲೂ ಅದೇ ಸ್ಥಿತಿ ಇದೆ. ಭಾರತ ಎಂದರೆ ಮೋದಿ, ಮೋದಿ ಎಂದರೆ ಭಾರತ ಎಂದೇ ಭಜನೆ ಮಾಡಲಾಗುತ್ತಿದೆ. ಇಂದಿರಾ ಎಂದರೆ ಇಂಡಿಯಾ ಎಂದು ಹೇಳುತ್ತಿದ್ದ ಕಾಂಗ್ರೆಸ್ ಪಕ್ಷ ಕೂಡ ಸೋತು ಸೊರಗಿತು. ಈಗಿನವರಿಗೂ ಈ ಇತಿಹಾಸ ತಿಳಿದಿದ್ದರೆ ಒಳಿತು. ಇಲ್ಲವಾದರೆ ಇವರೂ ಇತಿಹಾಸದ ಪುಟದಲ್ಲಿ ಸೇರಬಹುದು.

ಅಮೆರಿಕ ಪ್ರವಾಸಕ್ಕೆ ಹೋಗುವ ಮುನ್ನ ಮೋದಿ ಅವರು ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡಿದರು. ಆ ಕಾಲಕ್ಕೆ ಅತ್ಯಂತ ಪ್ರಭಾವಿ ನಾಯಕರಾಗಿದ್ದ ಇಂದಿರಾ ಗಾಂಧಿ 1977ರ ಚುನಾವಣೆಯಲ್ಲಿ ಸೋಲಬೇಕಾಯಿತು. ಆಗಿನ ಕಾಲದಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಒಂದು ಕತ್ತೆಯನ್ನು ನಿಲ್ಲಿಸಿದರೂ ಗೆಲ್ಲುತ್ತದೆ ಎಂಬ ಮಾತು ಇತ್ತು. ಈಗಲೂ ಹಾಗೆಯೇ ಮೋದಿ ಹೆಸರಿನಿಂದಲೇ ಗೆಲುವು ಸಿಗುತ್ತದೆ ಎಂಬ ಭಾವನೆ ಕೆಲವರಲ್ಲಿ ಇದೆ. 1977ರಲ್ಲಿಯೂ ಇಂದಿರಾ ಗಾಂಧಿಗೆ ಪರ್ಯಾಯವಾಗಬಲ್ಲ ಇನ್ನೊಬ್ಬ ಪ್ರಭಾವಿ ನಾಯಕನಿರಲಿಲ್ಲ. ವಿರೋಧ ಪಕ್ಷಗಳು ಒಂದಾಗುವ ಭರವಸೆ ಇರಲಿಲ್ಲ. ಆದರೂ ಉತ್ತರ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ದೂಳೀಪಟವಾಯಿತು. ಅಂದರೆ ಯಾವುದೇ ಪಕ್ಷವನ್ನು ಸೋಲಿಸುವುದಕ್ಕಾಗಿ ಭಾರತದ ಜನ ಇನ್ನೊಂದು ಪಕ್ಷದ ನಾಯಕತ್ವವನ್ನು ನೋಡುವುದಿಲ್ಲ. ‘ಈ ಪಕ್ಷ ಸೋಲಬೇಕು ಅಷ್ಟೆ’ ಎಂದು ನಿರ್ಧರಿಸುತ್ತಾರೆ. ಅವಕಾಶ ಮತ್ತು ಪರಿಸ್ಥಿತಿ ಹೊಸ ನಾಯಕತ್ವವನ್ನು ಹುಟ್ಟುಹಾಕುತ್ತದೆ.

ದೇಶದಲ್ಲಿ ಈಗಲೂ ಅಂತಹದೇ ಸ್ಥಿತಿ ಇದೆ. ವಿರೋಧ ಪಕ್ಷಗಳು ಒಂದಾಗುವುದಿಲ್ಲ, ಮೋದಿಗೆ ಪರ್ಯಾಯವಾಗಬಲ್ಲ ಇನ್ನೊಬ್ಬ ನಾಯಕ ಇಲ್ಲ ಎಂದು ಬಿಜೆಪಿ ಹೇಳುತ್ತಿದೆ. ಮೇಲ್ನೋಟಕ್ಕೆ ಇದು ಸತ್ಯವೂ ಹೌದು. ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯೆನ್ನುವುದು ಖಾತರಿಯಾದರೆ ಬಡವರು ಹೊಸ ನಾಯಕನನ್ನು ಹುಟ್ಟುಹಾಕುತ್ತಾರೆ. ಪೆಟ್ಟೂ ಕೊಡುತ್ತಾರೆ. ಇದು ಅವರ ವಿಷಯದಲ್ಲೂ ಹೌದು, ಇವರ ವಿಷಯದಲ್ಲೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT