‘ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ’ ಎಂದು ಪುರಂದರ ದಾಸರು ಹೇಳಿದರು. ಅಧ್ಯಾತ್ಮ ಸಾಧನೆಗೆ ನಾಮದ ಬಲವೊಂದಿದ್ದರೆ ಸಾಕಾಗಬಹುದು. ಆದರೆ ದೇಶವನ್ನು ಆಳಲು ನಾಮದ ಬಲ ಸಾಕಾಗುವುದಿಲ್ಲ ಎಂಬ ಅರಿವು ನಮ್ಮ ಪ್ರಧಾನಿಗೆ ಈಗ ಆಗಿರಬಹುದು.

ಪ್ರಧಾನಿ ನರೇಂದ್ರ ಮೋದಿ ಅವರು 2014ರಲ್ಲಿ ನಾಮದ ಬಲದಿಂದಲೇ ಅಧಿಕಾರದ ಗದ್ದುಗೆಯನ್ನು ಏರಿದರು. ಅದು ನಮೋ ನಾಮವಾಗಿರಬಹುದು, ರಾಮನಾಮವಾಗಿರಬಹುದು. ಅಂತೂ ನಾಮದ ಬಲ ಗಟ್ಟಿಯಾಗಿತ್ತು. 2019ರಲ್ಲಿಯೂ ನಾಮದ ಬಲ ಕೈಕೊಡಲಿಲ್ಲ. ನಂತರ ನಡೆದ ಬೇರೆ ಬೇರೆ ರಾಜ್ಯಗಳ ಚುನಾವಣೆಯಲ್ಲಿಯೂ ‘ನಮೋ ನಮೋ’ ಬಲ ಸಾಕಷ್ಟು ಕೆಲಸವನ್ನೇ ಮಾಡಿತು. ಆದರೆ ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ನಾಮದ ಬಲ ಹೆಚ್ಚು ಕೆಲಸ ಮಾಡಲಿಲ್ಲ. ಕೊರೊನಾ ಕಾಲದ ಸಂಕಷ್ಟ ಸಮಯದಲ್ಲಿ ನಾಮದ ಬಲ ಇನ್ನಷ್ಟು ದುರ್ಬಲವಾಗತೊಡಗಿದೆ. ರಾಮನಾಮವೂ ಫಲ ನೀಡಲಿಲ್ಲ. ನಮೋ ನಮೋ ಕೂಡ ಜಯ ತಂದುಕೊಡಲಿಲ್ಲ.

ಒಂದು ಕಾಲದಲ್ಲಿ ಇಂದಿರಾ ಕಾಂಗ್ರೆಸ್‌ನಿಂದ ಕತ್ತೆಯನ್ನು ನಿಲ್ಲಿಸಿದರೂ ಗೆಲ್ಲುತ್ತದೆ ಎಂಬ ಮಾತಿತ್ತು. ಆದರೆ ಈಗ ಕಾಂಗ್ರೆಸ್ ಕತೆ ಏನಾಗಿದೆ? ಇತಿಹಾಸ ಮರುಕಳಿಸುವ ಎಲ್ಲ ಸೂಚನೆಗಳೂ ಈಗ ಕಾಣುತ್ತಿವೆ. ಇತಿಹಾಸ ತಿಳಿಯದವ ಇತಿಹಾಸವನ್ನು ಸೃಷ್ಟಿಸಲಾರ ಎನ್ನುತ್ತಾರೆ. ಇತಿಹಾಸದ ಸಾಹಿತ್ಯ ಬದಲಾಯಿಸಿದರೆ ಇತಿಹಾಸ ಸೃಷ್ಟಿಯಾಗುವುದಿಲ್ಲ ಎಂಬುದೂ ಈಗ ನಿಜವಾಗತೊಡಗಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ, ಅದರಲ್ಲೂ ಮುಖ್ಯವಾಗಿ ಪಶ್ಚಿಮ ಬಂಗಾಳದ ಫಲಿತಾಂಶ ಹೊರಬಿದ್ದ ನಂತರ ಬಿಜೆಪಿಗೆ ಸಾಕಷ್ಟು ಛಡಿ ಏಟಿನ ಅನುಭವ ಆಗತೊಡಗಿದೆ. ಅದಕ್ಕಾಗಿಯೇ ಈಗ ಮುಂದಿನ ದಿನಗಳಲ್ಲಿ ಬರುವ ಚುನಾವಣೆ ಬಗ್ಗೆ ಬಿಜೆಪಿ ಮತ್ತು ಆರ್‌ಎಸ್ಎಸ್ ತೀವ್ರ ಎಚ್ಚರಿಕೆ ವಹಿಸಿವೆ. ಮೋದಿ, ಯೋಗಿ ನಾಮದ ಬಲವನ್ನು ಉಳಿಸುವ ಕಸರತ್ತು ಆರಂಭವಾಗಿದೆ.

ವಾಟ್ಸ್ಆ್ಯಪ್‌ನಲ್ಲಿ ಇತ್ತೀಚೆಗೆ ಒಂದು ಸಂದೇಶ ಹರಿದಾಡುತ್ತಿತ್ತು– ಗಂಗಾ ನದಿಯಲ್ಲಿ ತೇಲುತ್ತಿರುವ ಶವಗಳಲ್ಲಿ ಒಂದು ಶವ ತನ್ನನ್ನು ತಿನ್ನಲು ಬಂದ ಪ್ರಾಣಿಗೆ ಹೇಳಿತಂತೆ ‘ನನ್ನ ದೇಹದ ಎಲ್ಲ ಭಾಗಗಳನ್ನೂ ತಿನ್ನು. ಆದರೆ ಕಣ್ಣುಗಳನ್ನು ತಿನ್ನಬೇಡ. ಯಾಕೆಂದರೆ ನಾನು ಅಚ್ಛೇ ದಿನ್ ನೋಡಬೇಕು’ ಎಂದು– ಇದನ್ನು ಬರೆದವರು ಯಾರು ಎಂದು ಇನ್ನೂ ಹುಡುಕುವ ಕೆಲಸ ಆರಂಭಿಸಿಲ್ಲ. ಮುಂದೆ ಆರಂಭವಾಗಬಹುದು. ಯಾಕೆಂದರೆ ‘ಕೊರೊನಾ ವ್ಯಾಕ್ಸಿನ್ ವಿದೇಶಕ್ಕೆ ಯಾಕೆ ರಫ್ತು ಮಾಡಿದಿರಿ’ ಎಂದು ದೆಹಲಿಯಲ್ಲಿ ಭಿತ್ತಿಪತ್ರ ಅಂಟಿಸಿದವರ ಮೇಲೆ ಮೊಕದ್ದಮೆ ಹೂಡಲಾಗಿದೆ. 25 ಮಂದಿಯನ್ನು ಬಂಧಿಸಲಾಗಿದೆ. ಇವೆಲ್ಲ ನಾಮಬಲ ದಿಢೀರ್ ಕುಸಿತದ ಪರಿಣಾಮಗಳು. ಇಂತಹ ಪ್ರಯತ್ನಗಳು ನಾಮಬಲವನ್ನು ಇನ್ನಷ್ಟು ಪಾತಾಳಕ್ಕೆ ತಳ್ಳಬಹುದು.

ಕೊರೊನಾ ಮೊದಲ ಅಲೆಯಲ್ಲಿ ಅವರ ನಾಮದ ಬಲ ಎಷ್ಟಿತ್ತೆಂದರೆ, ಅವರು ಚಪ್ಪಾಳೆ ಹೊಡೆಯಿರಿ ಎಂದರೆ ಜನರು ಚಪ್ಪಾಳೆ ಹೊಡೆದರು. ಗಂಟೆ ಹೊಡೆಯಿರಿ ಎಂದರೆ ಗಂಟೆ ಹೊಡೆದರು. ದೀಪ ಹಚ್ಚಿ ಎಂದರೆ ದೀಪ ಹಚ್ಚಿದರು. ಮನೆಯಲ್ಲಿಯೇ ಇರಿ ಎಂದರೆ ಜನರು ಬಹುತೇಕ ಮನೆಯಲ್ಲಿಯೇ ಇದ್ದರು. ‘ಮೋದಿ ಏನು ಹೇಳಿದರೂ ಮಾಡುತ್ತೇವೆ. ಅವರು ಏನೇ ಮಾಡಿದರೂ ಅದು ದೇಶದ ಒಳಿತಿಗಾಗಿ. ಅದಕ್ಕಾಗಿ ಅವರ ಜೊತೆಗೆ ಇರುತ್ತೇವೆ’ ಎಂದು ಹೇಳುತ್ತಿದ್ದವರು ಈಗ ಕೊಂಚ ಬದಲಾಗಿದ್ದಾರೆ. ‘ಅಯ್ಯೋ ನೀವೇ ಹೀಗೇಕೆ ಮಾಡಿದಿರಿ’ ಎಂದು ಕೇಳುತ್ತಿದ್ದಾರೆ. ಮೊದಲ ಬಾರಿಯ ಲಾಕ್‌ಡೌನ್‌ನಿಂದ ಭಾರಿ ಪ್ರಮಾಣದ ಕೂಲಿ ಕಾರ್ಮಿಕರು ಸಂಕಷ್ಟ ಅನುಭವಿಸಿದರೂ ನಾಮಬಲದಲ್ಲಿ ಅದು ನಗಣ್ಯವೇ ಆಯಿತು. ಆದರೆ ಈಗ ಎರಡನೇ ಅಲೆಯಲ್ಲಿ ಅದೆಲ್ಲ ತಲೆಕೆಳಗಾಗಿದೆ. ಕೈಮುಗಿಯಿರಿ, ಚಪ್ಪಾಳೆ ಹೊಡೆಯಿರಿ, ಗಂಟೆ ಹೊಡೆಯಿರಿ, ದೀಪ ಹಚ್ಚಿ ಎಂದು ಹೇಳುವ ಧೈರ್ಯ ಅವರಿಗೂ ಇಲ್ಲ. ಹಾಗಂತ ಕರೆ ಕೊಟ್ಟರೆ ಅದನ್ನು ಕಣ್ಣು ಮುಚ್ಚಿ ಪಾಲಿಸುವ ಮನಃಸ್ಥಿತಿಯಲ್ಲಿ ಮತದಾರರೂ ಇಲ್ಲ.

ಮೊದಲ ಅಲೆಯ ಕೊರೊನಾಕ್ಕೂ ಎರಡನೇ ಅಲೆಯ ಕೊರೊನಾಕ್ಕೂ ವ್ಯತ್ಯಾಸ ಇದೆ. ವೈರಸ್ ರೂಪಾಂತರವಾದ ಮೇಲೆ ಅದಕ್ಕೆ ಔಷಧಿಯೂ ರೂಪಾಂತರಗೊಳ್ಳಬೇಕಿತ್ತು. ಎರಡನೇ ಅಲೆಯನ್ನು ನಿಯಂತ್ರಿಸಲು ಕೈಗೊಳ್ಳುವ ಕಾರ್ಯತಂತ್ರ ಕೂಡ ಬದಲಾಗಬೇಕಿತ್ತು. ಮೊದಲಿನ ಕೊರೊನಾಕ್ಕೆ ಕೊಟ್ಟ ಔಷಧಿಯನ್ನೇ ರೂಪಾಂತರಿ ಕೊರೊನಾಕ್ಕೂ ಕೊಟ್ಟರೆ ಅದು ಕಡಿಮೆಯಾಗುವುದಿಲ್ಲ. ಮೊದಲ ಅಲೆಯಲ್ಲಿ ಲಾಕ್‌ಡೌನ್ ಪರಿಣಾಮಕಾರಿಯಾಗಿರಬಹುದು. ಆದರೆ ಎರಡನೇ ಅವಧಿಯಲ್ಲಿ ಅದು ಪರಿಣಾಮಕಾರಿಯಾಗಿಲ್ಲ ಎನ್ನುವುದು ಗೊತ್ತಾಗಿದೆ. ಕೊರೊನಾ ಸರಣಿ ಮುರಿಯಲು ಲಾಕ್‌ಡೌನ್ ಒಂದೇ ಮಾರ್ಗ ಅಲ್ಲ ಎನ್ನುವುದೂ ಈಗ ಗೊತ್ತಾಗಿದೆ.

ಮೊದಲ ಅಲೆಯಲ್ಲಿ ಮಾಸ್ಕ್ ಸಾಕಾಗಿತ್ತು. ಈಗ ನಿರಂತರ ಮಾಸ್ಕ್ ಧರಿಸುವುದರಿಂದ ಅನ್ಯ ರೋಗಗಳು ಬರುತ್ತವೆ ಎನ್ನುವುದು ತಿಳಿದಿದೆ. ಅದೇ ರೀತಿ ದೀರ್ಘಕಾಲದ ಲಾಕ್‌ಡೌನ್ ಕೂಡ ಸಾಮಾಜಿಕವಾಗಿ ಹೊಸ ಹೊಸ ರೋಗಗಳನ್ನು ತರುತ್ತದೆ. ಹಸಿವು ಹೆಚ್ಚಿದಷ್ಟೂ ತಿರಸ್ಕಾರ ಹೆಚ್ಚಾಗುತ್ತದೆ ಎಂಬ ಸಾಮಾನ್ಯ ಜ್ಞಾನ ನಮ್ಮನ್ನು ಆಳುವವರಿಗೆ ಇರಬೇಕಿತ್ತು.

ಹಾಗಿದ್ದರೆ ಎರಡನೇ ಅಲೆ ಅಥವಾ ಮೂರನೇ ಅಲೆ ತಡೆಯುವ ಉಪಾಯ ಯಾವುದು? ಅದಕ್ಕಿರುವ ಒಂದೇ ಉಪಾಯ ಎಂದರೆ, ಎಲ್ಲರೂ ವ್ಯಾಕ್ಸಿನ್ ಪಡೆಯುವುದು. ಪೋಲಿಯೊ ಲಸಿಕೆ ಹಾಕಿದ ಹಾಗೆ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದೊಂದೇ ಪರಿಹಾರ. ‘ದೇಶದಲ್ಲಿ ವ್ಯಾಕ್ಸಿನ್ ಆಂದೋಲನ ಶುರು ಮಾಡಿದಾಗ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ವ್ಯಾಕ್ಸಿನ್ ಬಗ್ಗೆ ಅಪಪ್ರಚಾರ ನಡೆಸಿದವು. ಅದರಿಂದ ಜನರು ವ್ಯಾಕ್ಸಿನ್ ಪಡೆಯಲು ಮುಂದೆ ಬರಲಿಲ್ಲ. ಸಾಕಷ್ಟು ವ್ಯಾಕ್ಸಿನ್ ನಷ್ಟವಾಯಿತು. ಈಗ ಒಂದೇ ಬಾರಿಗೆ ಎಲ್ಲರೂ ವ್ಯಾಕ್ಸಿನ್ ಕೊಡಿ, ವ್ಯಾಕ್ಸಿನ್ ಕೊಡಿ ಎಂದು ಮುಗಿಬಿದ್ದಿದ್ದಾರೆ. ಎಲ್ಲರಿಗೂ ತಕ್ಷಣವೇ ವ್ಯಾಕ್ಸಿನ್ ಕೊಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ಗೊಂದಲ ಸೃಷ್ಟಿಯಾಗಿದೆ’ ಎಂದು ಬಿಜೆಪಿಗರು ಹೇಳುತ್ತಾರೆ.

ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿ, ಏಕಾಏಕಿ ನೋಟ್ ಬ್ಯಾನ್ ಮಾಡಿದಾಗ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪ್ರಬಲ ವಿರೋಧವನ್ನೇ ಒಡ್ಡಿದ್ದವು. ಆದರೂ ನೋಟ್ ಬ್ಯಾನ್ ಕ್ರಮ ಯಶಸ್ವಿಯಾಯಿತು. ಜನರು ತಮಗೆ ಆದ ತೊಂದರೆಯನ್ನು ಲೆಕ್ಕಿಸದೆ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದರು. ಆಗ ಕೈಕೊಡದ ನಾಮಬಲ ಈಗ ಯಾಕೆ ಕೈಕೊಟ್ಟಿತು? ಜನರು ವ್ಯಾಕ್ಸಿನ್ ತೆಗೆದುಕೊಳ್ಳಲು ಯಾಕೆ ಹಿಂಜರಿದರು? ಆಲೋಚಿಸಬೇಕಾದ ವಿಷಯ.

ಇಡೀ ದೇಶ ಸಂಕಷ್ಟದ ಕಾಲದಲ್ಲಿರುವಾಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಇನ್ನಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿತ್ತು. ಎಲ್ಲ ಪಕ್ಷಗಳಿಗೂ ರಾಜಕೀಯಕ್ಕಿಂತ ಜನರ ಕ್ಷೇಮವೇ ಮುಖ್ಯವಾಗಬೇಕಿತ್ತು. ಜನರ ನೋವಿಗೆ ಸ್ಪಂದಿಸಲು ರಾಜಕೀಯದ ಗಡಿಯನ್ನು ದಾಟಿ ಶ್ರಮಿಸಬೇಕಿತ್ತು. ಇಂತಹ ಸಂದರ್ಭದಲ್ಲಿ ತಾಯಿ ಹೃದಯದ ಆಡಳಿತ ಪಕ್ಷ ಬೇಕು. ಅತ್ತೆ ಅಥವಾ ಸೊಸೆಯಂತೆ ಸದಾ ಕಚ್ಚಾಡುವ ವಿರೋಧ ಪಕ್ಷಗಳೂ ಇರಬಾರದು.

ಸಾಮಾನ್ಯ ಜನರು ಧರ್ಮದ ಗಡಿಯನ್ನು ದಾಟಿ ನೆರವಿನ ಹಸ್ತ ಚಾಚಿದ್ದಾರೆ. ಮುಸ್ಲಿಮರ ಹೆಣಕ್ಕೆ ಹಿಂದೂಗಳು, ಹಿಂದೂಗಳ ಶವಕ್ಕೆ ಮುಸ್ಲಿಮರು ಅಂತ್ಯಸಂಸ್ಕಾರ ಮಾಡಿದ್ದಾರೆ. ಅದೇ ನಮ್ಮ ದೇಶದ ಆತ್ಮ, ಸೌಂದರ್ಯ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಹೆಣದ ಮೇಲೆ ಹೋಳಿಗೆ ತಿನ್ನುವ ಚಟವನ್ನು ಬಿಟ್ಟು ಜನಸೇವೆಗೆ ಮುಂದಾಗದಿದ್ದರೆ ನಾಮ ಬಲ ಹೋದೀತು. ಹಣೆ ಮೇಲೆ ನಾಮ ಮಾತ್ರ ಉಳಿದೀತು. ಜನರೂ ಮೂರು ನಾಮ ಹಾಕಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.