ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳ ಲೇಖನ ಪ್ರೀತಿ!

ಲೇಖಕ– ರಾಜಕಾರಣಿಗಳ ದಿಢೀರ್ ಉದ್ಭವಕ್ಕೆ ಕಾರಣ ಏನಿರಬಹುದು? ಆಗಬೇಕಿದೆ ಸಂಶೋಧನೆ
Last Updated 26 ಆಗಸ್ಟ್ 2020, 17:35 IST
ಅಕ್ಷರ ಗಾತ್ರ
ADVERTISEMENT
""

ಇದು, ಪಶ್ಚಿಮ ಬಂಗಾಳದ ಖ್ಯಾತ ಪತ್ರಕರ್ತ ರಮಾನಂದ ಚಟರ್ಜಿ ಅವರ ಬದುಕಿನಲ್ಲಿ ನಡೆದ ಘಟನೆ. ಚಟರ್ಜಿ ಅವರು ಕೋಲ್ಕತ್ತದ ಬಂಗಾಳಿ ಪತ್ರಿಕೆ ‘ಪ್ರವಾಸಿ’ ಹಾಗೂ ಇಂಗ್ಲಿಷ್ ಪತ್ರಿಕೆ ‘ಮಾಡರ್ನ್ ರಿವ್ಯೂ’ ಸಂಪಾದಕರಾಗಿದ್ದರು. ಪತ್ರಿಕೆ ಮತ್ತು ಪತ್ರಕರ್ತನ ಘನತೆ ವಿಷಯದಲ್ಲಿ ಎಂದೂ ರಾಜಿ ಮಾಡಿಕೊಳ್ಳದವರು ಅವರು. ಒಮ್ಮೆ ಅವರು ಕಾಶಿಗೆ ಹೋಗಿದ್ದರು. ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ ನದಿಯಲ್ಲಿ ಬಿದ್ದರು. ಸ್ಥೂಲಕಾಯರಾಗಿದ್ದ ಅವರಿಗೆ ತಕ್ಷಣ ಏಳಲು ಆಗಲಿಲ್ಲ. ನೀರಿನ ಸೆಳವಿನಲ್ಲಿ ಸ್ವಲ್ಪ ತೇಲಿಕೊಂಡು ಹೋದರು. ಅವರು ಮುಳುಗುತ್ತಿದ್ದುದನ್ನು ನೋಡಿದ ಜನು ಕೂಗಿಕೊಳ್ಳಲಾರಂಭಿಸಿದರು. ತಕ್ಷಣವೇ ಯುವಕನೊಬ್ಬ ನದಿಗೆ ಹಾರಿ ಚಟರ್ಜಿ ಅವರನ್ನು ರಕ್ಷಿಸಿದ.

ಸುಧಾರಿಸಿಕೊಂಡ ಚಟರ್ಜಿ ಅವರು ಆ ಯುವಕನ ಉಪಕಾರಕ್ಕೆ ಧನ್ಯವಾದ ಹೇಳಿ, ತಮ್ಮ ವಿಸಿಟಿಂಗ್ ಕಾರ್ಡ್ ಕೊಟ್ಟು ಕೋಲ್ಕತ್ತಕ್ಕೆ ಬಂದಾಗ ಆತಿಥ್ಯ ಸ್ವೀಕರಿಸುವಂತೆ ಮನವಿ ಮಾಡಿದರು. ಯುವಕ ಅದಕ್ಕೆ ಒಪ್ಪಿಕೊಂಡ. ಸುಮಾರು ಎರಡು ವರ್ಷದ ನಂತರ ಆ ಯುವಕಕೋಲ್ಕತ್ತದಲ್ಲಿ ಪತ್ರಿಕಾ ಕಚೇರಿಗೆ ಹೋಗಿ ಚಟರ್ಜಿ ಅವರನ್ನು ಕಂಡ. ಚಟರ್ಜಿ ಅವರು ಆತನನ್ನು ಆದರದಿಂದ ಸ್ವಾಗತಿಸಿ ಸತ್ಕರಿಸಿದರು. ನಂತರ ಆ ಯುವಕ ತನ್ನ ಜೇಬಿನಿಂದ 3–4 ಹಾಳೆಗಳನ್ನು ತೆಗೆದು ‘ಸರ್, ನಾನು ಕೆಲವು ಕವಿತೆಗಳನ್ನು ಬರೆದಿದ್ದೇನೆ. ಅವುಗಳನ್ನು ‘ಪ್ರವಾಸಿ’ ಪತ್ರಿಕೆಯಲ್ಲಿ ಪ್ರಕಟಿಸಿ’ ಎಂದು ವಿನಂತಿಸಿದ.

ಚಟರ್ಜಿ ಅವರು ಎಲ್ಲ ಕವಿತೆಗಳನ್ನು ಓದಿದರು. ಎರಡು– ಮೂರು ಬಾರಿ ಓದಿದರು. ನಂತರ ‘ಈ ಕವಿತೆಗಳು ನಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವುದಕ್ಕೆ ಯೋಗ್ಯವಾಗಿಲ್ಲ. ಇನ್ನೂ ಸ್ವಲ್ಪ ಪ್ರಯತ್ನಪಡು. ಒಳ್ಳೆಯ ಕವಿತೆ ಬರೆದರೆ ನೋಡೋಣ’ ಎಂದರು. ಆದರೂ ಆ ಯುವಕನ ಮುಖದಲ್ಲಿ ಬೇಡಿಕೆಯ ಛಾಯೆ ಇತ್ತು. ‘ನಿನಗೆ ಬೇಸರವಾಗಿರಬಹುದು. ಆದರೆ ಈ ಕವಿತೆಗಳನ್ನು ನಾನು ಪ್ರಕಟಿಸಲಾರೆ. ನೀನು ಬೇಕಾದರೆ ನನ್ನನ್ನು ಮತ್ತೆ ಗಂಗೆಯಲ್ಲಿ ಮುಳುಗಿಸಿಬಿಡು’ ಎಂದು ಚಟರ್ಜಿ ನಕ್ಕರು. ಆ ಯುವಕನೂ ನಕ್ಕು ಹಗುರಾದ.

ಸದ್ಯಕ್ಕೆ ಕನ್ನಡ ಪತ್ರಿಕಾ ಸಂಪಾದಕರು ಹೀಗೆ ನಕ್ಕು ಹಗುರಾಗುವ ಸ್ಥಿತಿಯಲ್ಲಿ ಇಲ್ಲ. ಯಾಕೆಂದರೆ ಈಗ ಸಂಪಾದಕರ ಮೇಲೆ ಒತ್ತಡ ಹಾಕುತ್ತಿರುವವರು ಮುಖ್ಯಮಂತ್ರಿ, ಅವರ ಸಚಿವ ಸಂಪುಟದ ಸಹೋದ್ಯೋಗಿಗಳು, ಶಾಸಕರು. ನೀವು ಗಮನಿಸಿರಬಹುದು. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಯೂ ಸೇರಿದಂತೆ ಸಚಿವರು ಮತ್ತು ಶಾಸಕರಿಗೆ ಲೇಖನ ಬರೆಯುವ ಹವ್ಯಾಸ ಹೆಚ್ಚಾಗಿದೆ. ಚಟರ್ಜಿ ಅವರು ಹೇಳಿದ ಹಾಗೆ ಹೇಳಿದರೆ ಇವರು ನಕ್ಕು ಹಗುರಾಗಲು ತಯಾರಿಲ್ಲ.

ಮೊದಲೆಲ್ಲಾ ರಾಜಕಾರಣಿಗಳು ತಮ್ಮ ಹೇಳಿಕೆ ಬರಲಿ, ತಮ್ಮ ಸಂದರ್ಶನವೊಂದು ಬರಲಿ ಎಂದು ಬಯಸುತ್ತಿದ್ದರು. ಅದಕ್ಕಾಗಿ ಪತ್ರಿಕಾ ಸಂಪಾದಕರ ಮೇಲೆ ಒತ್ತಡ ಹೇರುತ್ತಿದ್ದರು. ಈಗ ಹಾಗಲ್ಲ. ಅವರ ಹೆಸರಿನಲ್ಲಿ ಲೇಖನಗಳು ಪತ್ರಿಕಾ ಕಚೇರಿಗೆ ಬಂದು ಬೀಳುತ್ತವೆ. ಅವುಗಳನ್ನು ಪ್ರಕಟಿಸಬೇಕು ಎಂಬ ಒತ್ತಾಯವೂ ಸಾಕಷ್ಟಿ ರುತ್ತದೆ. ಹಬ್ಬ, ದಿನಾಚರಣೆ, ವಾರ್ಷಿಕೋತ್ಸವ ಹೀಗೆ ಕಾರಣ ಏನಿದ್ದರೂ ತಮ್ಮದೊಂದು ಲೇಖನ ಇರಲಿ ಎಂದು ಬಯಸುವ ರಾಜಕಾರಣಿಗಳು ಸಾಕಷ್ಟಿದ್ದಾರೆ. ಅವರ ಸಂಖ್ಯೆ ಹೆಚ್ಚಾಗುತ್ತಿದೆ. ಕರ್ನಾಟಕದ ರಾಜಕೀಯ ರಂಗದಲ್ಲಿ ಹೀಗೆ ಲೇಖಕ–ರಾಜಕಾರಣಿಗಳ ದಿಢೀರ್ ಉದ್ಭವಕ್ಕೆ ಕಾರಣ ಏನೆಂದು ಸಂಶೋಧನೆ ನಡೆಸುವ ಅಗತ್ಯವಂತೂ ಇದೆ.

ರಾಜಕಾರಣಿಯೊಬ್ಬ ಲೇಖನ ಬರೆಯಬಾರದು ಎಂದೇನೂ ಇಲ್ಲ. ಬರಹಗಾರನೊಬ್ಬ ರಾಜಕಾರಣಿಯಾಗುವುದು ಅಥವಾ ರಾಜಕಾರಣಿಯೊಬ್ಬ ಬರಹಗಾರನೂ ಆಗುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದು. ರಾಜಕಾರಣಿ ಯೊಬ್ಬನಿಗೆ ಸಾಂಸ್ಕೃತಿಕ ಲೋಕದ ನಂಟಿದ್ದರೆ, ಸೃಜನಶೀಲತೆಯ ಒರತೆ ಇದ್ದರೆ ಆತ ಪ್ರಜೆಗಳಿಗೆ ಒಂದಿಷ್ಟು ಒಳ್ಳೆಯದನ್ನು ಮಾಡಬಲ್ಲ. ಒಳ್ಳೆಯದನ್ನು ಮಾಡದೇ ಇದ್ದರೂ ಕೆಟ್ಟದ್ದನ್ನು ಮಾಡಲು ಅಂಜುತ್ತಾನೆ ಎಂಬುದೊಂದು ನಂಬಿಕೆ. ಆದರೆ ತನ್ನ ರಾಜಕೀಯ ಜೀವನದಲ್ಲಿ ಎಂದೂ ಒಂದು ಅಕ್ಷರವನ್ನೂ ಬರೆಯದ ರಾಜಕಾರಣಿಯೊಬ್ಬ ಇದ್ದಕ್ಕಿದ್ದಂತೆ ಲೇಖಕನ ವೇಷ ಧರಿಸಿಬಿಟ್ಟರೆ ಮತದಾರರಿಗೂ ಅಚ್ಚರಿ. ಸಂಪಾದಕರಿಗೆ ಸಂಕಟ. ಸಚಿವರ ಲೇಖನವನ್ನು ನೋಡಿ ಅವರ ಅಭಿಮಾನಿಗಳೇನೋ ಸಂತೋಷಪಡಬಹುದು. ‘ಘೋಸ್ಟ್’ ಲೇಖಕರು ಮುಸಿಮುಸಿ ನಗಬಹುದು. ಆದರೆ ನಿಜವಾದ ಓದುಗರು ಮತ್ತು ಸಂಪಾದಕರ ಗತಿ?

ರಾಜಕಾರಣಿಗಳು ಬರಹಗಾರರಾಗಿದ್ದ ಉದಾಹರಣೆ ಗಳು ನಮ್ಮಲ್ಲಿ ಸಾಕಷ್ಟು ಇವೆ. ಈಗಲೂ ಕೆಲವು ರಾಷ್ಟ್ರ ಮಟ್ಟದ ಮತ್ತು ರಾಜ್ಯ ಮಟ್ಟದ ರಾಜಕಾರಣಿಗಳು ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ದಲ್ಲಿಯೂ ರಾಜಕಾರಣಿಗಳು ಬರವಣಿಗೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಎಂ.ಡಿ. ನಂಜುಂಡಸ್ವಾಮಿ, ಎಂ.ಪಿ.ಪ್ರಕಾಶ್, ಎ.ಕೆ.ಸುಬ್ಬಯ್ಯ, ಬಿ.ಟಿ.ಲಲಿತಾ ನಾಯಕ್‌ ಅಂತಹವರಿಗೆ ಬರವಣಿಗೆ ಸಿದ್ಧಿಸಿತ್ತು. ಸಮಾಜವಾದಿ ಹಿನ್ನೆಲೆಯಿಂದ ಬಂದವರಿಗೆ ಓದು, ಬರವಣಿಗೆಯ ಬಗ್ಗೆ ಬಹಳಷ್ಟು ಆಸಕ್ತಿ ಇತ್ತು. ನಮ್ಮ ಮುಖ್ಯಮಂತ್ರಿಗಳಲ್ಲಿ ಹಲವರು ಕಲೆ, ಸಾಹಿತ್ಯ, ಸಂಸ್ಕೃತಿ ಬಗ್ಗೆ ಆಸಕ್ತಿ ಹೊಂದಿದ್ದರು. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಎಚ್‌. ಪಟೇಲ್‌, ಎಸ್‌. ಬಂಗಾರಪ್ಪ, ಎಸ್‌.ಎಂ. ಕೃಷ್ಣ ಮುಂತಾದವರನ್ನು ಈ ಸಾಲಿಗೆ ಸೇರಿಸಬಹುದು. ಎಂ.ವೈ. ಘೋರ್ಪಡೆ ಅವರು ಫೋಟೊಗ್ರಫಿಯಲ್ಲಿ ಛಾಪು ಮೂಡಿಸಿದವರು. ಇವರಲ್ಲಿ ಕೆಲವರು ಲೇಖನಗಳನ್ನು ಸಹ ಬರೆದಿದ್ದಾರೆ.

ವೀರಪ್ಪ ಮೊಯಿಲಿ, ಎಚ್.ಕೆ.ಪಾಟೀಲ್, ಸಿ.ನಾರಾಯಣಸ್ವಾಮಿ, ವೈ.ಎಸ್.ವಿ.ದತ್ತ, ಬಿ.ಎಲ್.ಶಂಕರ್, ಸುರೇಶ ಕುಮಾರ್, ಪ್ರೊ. ಬಿ.ಕೆ.ಚಂದ್ರಶೇಖರ್, ಡಾ. ಸುಧಾಕರ್, ಎಚ್.ವಿಶ್ವನಾಥ್, ಬಿ.ಎ.ಹಸನಬ್ಬ,ಖಾಜಿ ಅರ್ಷದ್ ಅಲಿ ಮುಂತಾದವರು ಬರವಣಿಗೆಯತ್ತ ಒಲವು ಉಳಿಸಿಕೊಂಡಿದ್ದಾರೆ. ವರ್ತಮಾನದ ವಿದ್ಯಮಾನಗಳಿಗೆ ಆಗಾಗ ಸ್ಪಂದಿಸುತ್ತಾರೆ.

ರವೀಂದ್ರ ಭಟ್ಟ

ಶಾಂತವೇರಿ ಗೋಪಾಲಗೌಡ, ಕೆ.ಎಚ್.ರಂಗನಾಥ್, ಬಿ.ರಾಚಯ್ಯ, ಎಚ್.ಎನ್.ನಂಜೇಗೌಡ ಮುಂತಾದವರಿಗೆ ಉತ್ತಮ ವಿಶ್ಲೇಷಣಾ ಪ್ರತಿಭೆ ಇತ್ತು. ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಬಹಳಷ್ಟು ತಿಳಿವಳಿಕೆ ಹೊಂದಿದ್ದರು. ಎಚ್‌.ಡಿ. ದೇವೇಗೌಡ, ಸಿದ್ದರಾಮಯ್ಯ, ಡಿ.ಬಿ. ಚಂದ್ರೇ ಗೌಡ ಅವರೂ ಇದೇ ಸಾಲಿಗೆ ಸೇರಿದವರು.ರಮೇಶ ಕುಮಾರ್ ಸಾಕಷ್ಟು ಓದಿಕೊಂಡಿದ್ದಾರೆ. ಭಾಷಣ ಕಲೆಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಲೋಕದ ನಂಟಿದೆ. ಇಂತಹವರು ಬರೆದರೆ ಓದುಗರಿಗೆ ಅನುಮಾನ ಮೂಡದು.

ಚಳವಳಿ, ಹೋರಾಟಗಳಿಂದ ರಾಜಕೀಯಕ್ಕೆ ಬಂದವರಿಗೆ ಸ್ವಲ್ಪವಾದರೂ ಸಾಂಸ್ಕೃತಿಕ ಆಸಕ್ತಿ ಇತ್ತು. ಈಗ ರಾಜಕೀಯಕ್ಕೆ ಬರುವವರು ಬೇರೆಯದೇ ಹೋರಾಟದಿಂದ ಬಂದವರು. ಹಣ ತೊಡಗಿಸಿ ಹಣ ದುಡಿಯಲು ಬಂದವರು. ಹಾಗಾಗಿ ಅವರಿಂದ ಅಂತಹದ್ದನ್ನು ನಿರೀಕ್ಷಿಸುವಂತೆಯೇ ಇಲ್ಲ. ಈಗಂತೂ ಬರವಣಿಗೆ ಪ್ರಕಟವಾಗಲು ಪತ್ರಿಕೆಯೇ ಆಗಬೇಕು ಎಂದೇನೂ ಇಲ್ಲ. ಸಾಮಾಜಿಕ ಜಾಲತಾಣ ಎಲ್ಲರಿಗೂ ಬರವಣಿಗೆಯ ಅವಕಾಶವನ್ನು ಕಲ್ಪಿಸಿದೆ. ಯಾರು ಏನು ಬೇಕಾದರೂ ಎಷ್ಟು ಬೇಕಾದರೂ ಬರೆಯಬಹುದು. ಆದರೂ ಪತ್ರಿಕೆಗಳಲ್ಲಿ ಲೇಖನ ಬರಬೇಕು ಎಂಬ ಬಯಕೆ ಹಲವರಲ್ಲಿ ದಿನೇದಿನೇ ಹೆಚ್ಚುತ್ತಿದೆ.

ಇತ್ತೀಚೆಗೆ ಹಿರಿಯ ಸಚಿವರೊಬ್ಬರ ಪರವಾಗಿ ಅವರ ಆಪ್ತರೊಬ್ಬರು ಕರೆ ಮಾಡಿ ಲೇಖನವೊಂದನ್ನು ಕಳಿಸುವುದಾಗಿ ಹೇಳಿದರು. ‘ಸುಮ್ಮನೆ ನಿಮ್ಮ ಖಾತೆಯ ಬಗ್ಗೆ, ಕನಸುಗಳ ಬಗ್ಗೆ ಬರೆಯುವುದಕ್ಕಿಂತ ರಾಜ್ಯ ಈಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬರೆದರೆ
ಚೆನ್ನಾಗಿರುತ್ತದೆ’ ಎಂದು ನಾನು ಸಲಹೆ ಮಾಡಿದೆ. ಅದರಂತೆ ಅವರು ಒಂದು ಗಂಭೀರವಾದ ಲೇಖನವನ್ನು ಬರೆದು ಕಳಿಸಿದರು. ಮಾರನೇ ದಿನವೇ ಮತ್ತೆ ಕರೆ ಮಾಡಿ ‘ದಯವಿಟ್ಟು ಆ ಲೇಖನ ಪ್ರಕಟಿಸಬೇಡಿ’ ಎಂದು ವಿನಂತಿಸಿದರು.

‘ಯಾಕೆ, ಏನಾಯ್ತು?’ ಎಂದು ಕೇಳಿದೆ. ‘ಸಾಹೇಬರ ಪುತ್ರ ಆ ಲೇಖನವನ್ನು ಓದಿ, ಇದನ್ನು ಪ್ರಕಟಣೆಗೆ ಕಳಿಸಬೇಡಿ, ಅಪ್ಪ ಇಂತಹ ಲೇಖನ ಬರೆಯಲು ಸಾಧ್ಯ ಇಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ, ಅವರ ಹೆಸರಿನಲ್ಲಿ ಈ ಲೇಖನ ಪ್ರಕಟವಾದರೆ ಅಪ್ಪನ ಬಗ್ಗೆ
ಜನ ಏನಂದುಕೊಂಡಾರು ಎಂದು ಕೇಳಿದರು. ಅದಕ್ಕೆ ಲೇಖನ ಬೇಡ ಸರ್’ ಎಂದರು. ಲೇಖನ ಬರೆಸುವ, ಲೇಖನ ಬರೆಯುವ ಹುಮ್ಮಸ್ಸು ಇರುವ ಎಲ್ಲ ರಾಜಕಾರಣಿಗಳಿಗೆ ಇಷ್ಟಾದರೂ ಸೂಕ್ಷ್ಮತೆ ಇದ್ದರೆ ಅದು ಓದುಗರ ಪುಣ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT