ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕಣ | ಪ್ರಜಾಪ್ರಭುತ್ವಕ್ಕೆ ಬೇಕು ‘ಸಾರ್ವಜನಿಕ ಪ್ರಜ್ಞೆ’

ಸೆಣಸಾಡಲು ಅಣಿಯಾಗಿರುವ ಜನನಾಯಕರಿಗೆ ಇರುವ ಅದಮ್ಯ ಆಕರ್ಷಣೆಯಾದರೂ ಏನು?
ಅಕ್ಷರ ಗಾತ್ರ

ಸರ್ವರ ಸ್ವಾತಂತ್ರ್ಯ, ಸಮಾನತೆ, ಬಂಧುತ್ವದ ಪ್ರಜಾಪ್ರಭುತ್ವ... ಇವು ಆಡುವಾಗ ಸುಲಭವಾಗಿ, ಅಳವಡಿಸಿ
ಕೊಳ್ಳುವಾಗ ಭಾರವೆನಿಸಿ, ಜೀವಿಸಿದಂತೆಲ್ಲಾ ಹಗೂರಾಗಿ ಬಿಡುಗಡೆಯತ್ತ ಸಾಗಿಸುವ ಜೀವಪರ ಮಂತ್ರಗಳು. ಸಂವಿಧಾನದ ಪೀಠಿಕೆಯಾದ ‘ಭಾರತದ ಜನತೆಯಾದ ನಾವು...’ ಎಂದು ಪ್ರತಿಸಲವೂ ಓದುವಾಗ, ಸಂವಿಧಾನವನ್ನು ಬಗಲಲ್ಲಿ ಹಿಡಿದು ತೋರುಬೆರಳಲ್ಲಿ ನೇರವಾಗಿ ಪ್ರಜಾಪ್ರಭುತ್ವವು ನಡೆಯಬೇಕಾದ ದಾರಿಯನ್ನು ತೋರುವ ಬಾಬಾಸಾಹೇಬರು ಕಣ್ಮುಂದೆ ನಿಂತು, ಆಡುವ ಮಾತಿನ ತೂಕದ ಬಗ್ಗೆ ಎಚ್ಚರಿಸುತ್ತಾರೆ.

ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವವಾಗಿರುವ ‘ಸಾರ್ವಭೌಮ, ಪ್ರಜಾಸತ್ತಾತ್ಮಕ ಸಮಾಜವಾದಿ, ಧರ್ಮನಿರಪೇಕ್ಷ ಗಣರಾಜ್ಯ’ವಾದ ಭಾರತದಲ್ಲೀಗ ಚುನಾವಣೆಯ ಉರಿ ಗ್ಯಾಸ್ ಚೇಂಬರ್ ಆಗಿ ಪ್ರಜಾಪ್ರಭುತ್ವ ಉಸಿರುಗಟ್ಟುತ್ತಿದೆಯೇ ಎಂದುಕೊಳ್ಳುವಾಗ, ಬಾಬಾಸಾಹೇಬರು ಭರವಸೆಯ ಆಕ್ಸಿಜನ್ ಆಗಬಲ್ಲರೆಂಬು ದಕ್ಕೆ ಕೆಳಗಿನ ಎರಡು ಉಲ್ಲೇಖಗಳು ಸಾಕ್ಷಿ.

ನಾಗಪುರದಲ್ಲಿ 1942ರಲ್ಲಿ ‘ದಿ ಆಲ್ ಇಂಡಿಯಾ ಡಿಪ್ರೆಸ್ಡ್‌ ಕ್ಲಾಸಸ್ ಕಾನ್ಫರೆನ್ಸ್’ನಲ್ಲಿ ಮಾತನಾಡಿದ ಸಂದರ್ಭದಲ್ಲಿ ಬಾಬಾಸಾಹೇಬರು, ಭಾರತೀಯರು ಪ್ರಜಾಪ್ರಭುತ್ವದ ಪರವಾಗಿ ನಿಲ್ಲಬೇಕೆಂದು ಕರೆ ನೀಡುತ್ತಾ ಹೇಳಿದ ಮಾತುಗಳಿವು- ‘ಈಗಿನ ನಾಜಿಗಳೊಂದಿಗಿನ ಯುದ್ಧವು ಪ್ರಜಾಪ್ರಭುತ್ವ ಮತ್ತು ಸರ್ವಾಧಿಕಾರದ ನಡುವಿನ ಯುದ್ಧವಾಗಿದೆ. ಇದು ಜನಾಂಗೀಯ ದುರಹಂಕಾರವನ್ನು ಆಧರಿಸಿದ ಅತ್ಯಂತ ಬರ್ಬರ ಸ್ವರೂಪದ, ನಾಶ ಮಾಡಲೇಬೇಕಾಗಿರುವ ಹೇಯ ನಾಜಿ ಸರ್ವಾಧಿಕಾರವಾಗಿದೆ. ಈ ನಾಜಿವಾದವು ಗೆದ್ದರೆ, ಅದು ನಮ್ಮ ಭವಿಷ್ಯಕ್ಕೆ ಎಂತಹ ವಿಪತ್ತನ್ನು ತರಲಿದೆ ಎಂಬುದನ್ನು ನಾವು ಮರೆಯುತ್ತಿದ್ದೇವೆ. ಅದರ ಜನಾಂಗೀಯವಾದವು ಬಹಳ ಮುಖ್ಯವಾಗಿ ಭಾರತೀಯರಿಗೆ ಅಪಾಯಕಾರಿ ಯಾದುದು. ಇದು ಪರಿಸ್ಥಿತಿಯ ಸ್ಪಷ್ಟ ಚಿತ್ರಣವೆಂದಾದರೆ, ಆಗ ನಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಅದೆಂದರೆ, ಮನುಷ್ಯ ಸಂಬಂಧ ಕುರಿತ ಆಡಳಿತ ತತ್ವವಾಗಿ ಈ ಭೂಮಿಯಿಂದ ಪ್ರಜಾಪ್ರಭುತ್ವವು ಮರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ. ನಾವು ಅದನ್ನು ನಂಬುತ್ತೇವೆಂದರೆ ಅದಕ್ಕೆ ನಿಷ್ಠೆಯಿಂದಿರಬೇಕು ಮತ್ತು ನಾವು ಮಾಡುವ ಯಾವುದರಿಂದಲೂ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವದ ತತ್ವಗಳ ಬುಡಮೇಲು ಮಾಡುವ ಪ್ರಜಾಪ್ರಭುತ್ವದ ಶತ್ರುಗಳಿಗೆ ಸಹಾಯವಾಗಕೂಡದು. ಪ್ರಜಾಪ್ರಭುತ್ವ ಉಳಿದರೆ ಅದರ ಫಲವನ್ನು ನಾವು ಖಂಡಿತ ಪಡೆಯುತ್ತೇವೆ. ಪ್ರಜಾಪ್ರಭುತ್ವ ಸತ್ತರೆ ಅದು ನಮ್ಮ ವಿನಾಶ. ಆ ಬಗ್ಗೆ ಅನುಮಾನವೇ ಬೇಡ’.

ಪೂನಾ ಡಿಸ್ಟ್ರಿಕ್ಟ್ ಲಾ ಲೈಬ್ರರಿ ಸದಸ್ಯರಿಗಾಗಿ 1952ರ ಡಿಸೆಂಬರ್‌ 22ರಂದು ಪ್ರಜಾಪ್ರಭುತ್ವ ಕುರಿತ ವಿಷಯ ಮಂಡನೆಯಲ್ಲಿ ಬಾಬಾಸಾಹೇಬರು ‘ಪ್ರಜಾಪ್ರಭುತ್ವ ಎಂದರೆ ಜನರ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ರಕ್ತಪಾತವಿಲ್ಲದೆ ಕ್ರಾಂತಿಕಾರಕ ಬದಲಾವಣೆಗಳನ್ನು ತರುವ ಸರ್ಕಾರದ ಸ್ವರೂಪ ಮತ್ತು ವಿಧಾನವಾಗಿದೆ’ ಎಂದು ವಿವರಿಸಿ, ಅದರ ಯಶಸ್ವಿ ನಿರ್ವಹಣೆಗೆ ಅವಶ್ಯಕ ಸ್ಥಿತಿಗಳ ಕುರಿತು ಹೇಳಿದರು. ಅವೆಂದರೆ:

ಎಲ್ಲಾ ಸವಲತ್ತುಗಳನ್ನು ಹೊಂದಿರುವ ವರ್ಗ ಮತ್ತು ಎಲ್ಲಾ ಹೊರೆಗಳನ್ನು ಹೊರುವ ವರ್ಗಗಳಂತಹ ಕಣ್ಣಿಗೆ ರಾಚುವ ಅಸಮಾನತೆಗಳು ಸಮಾಜದಲ್ಲಿ ಇರಲೇಕೂಡದು. ಪ್ರಜಾಪ್ರಭುತ್ವವು ವಂಶಪಾರಂಪರ್ಯ ಅಧಿಕಾರ ಮತ್ತು ನಿರಂಕುಶ ಅಧಿಕಾರಕ್ಕೆ ವಿರುದ್ಧವಾದುದು. ಪ್ರಜಾಪ್ರಭುತ್ವದಲ್ಲಿ ಯಾರಿಗೂ ಆಳಲು ಯಾವುದೇ ಶಾಶ್ವತ ಅಧಿಕಾರ ಇರುವುದಿಲ್ಲ. ವಿರೋಧ ಪಕ್ಷವನ್ನು ಹೊಂದಿರುವುದು ಬಹಳ ಮುಖ್ಯ. ಸರ್ಕಾರವು ತಾನು ಮಾಡುವ ಪ್ರತಿಯೊಂದು ಕಾರ್ಯವನ್ನೂ ತನ್ನ ಪಕ್ಷಕ್ಕೆ ಸೇರದ ಜನರಿಗೆ ಮನವರಿಕೆ ಮಾಡಬೇಕು. ಕಾನೂನಿನಡಿಯ ಸಮಾನತೆಯ ಜೊತೆಗೆ ಆಡಳಿತದಲ್ಲಿ ಜನರನ್ನು ಸಮಾನತೆಯಿಂದ ನಡೆಸಿಕೊಳ್ಳಬೇಕು.

ಸಂವಿಧಾನದಲ್ಲಿ ಅಡಕವಾಗಿರುವ ಕಾನೂನಾತ್ಮಕ ಸವಲತ್ತುಗಳು ಅಸ್ತಿಪಂಜರವಷ್ಟೇ. ಅದರ ಮಾಂಸ ಇರುವುದು ಸಂವಿಧಾನಾತ್ಮಕ ನೈತಿಕತೆಯಲ್ಲಿ. ಅದನ್ನು ಎಲ್ಲರೂ ಅನುಸರಿಸಬೇಕು. ಪ್ರಜಾಪ್ರಭುತ್ವದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ಬಹುಸಂಖ್ಯಾತರ ದಬ್ಬಾಳಿಕೆ ಇರಕೂಡದು. ಪ್ರಜಾಪ್ರಭುತ್ವಕ್ಕೆ ‘ಸಾರ್ವಜನಿಕ ಪ್ರಜ್ಞೆ’ ಇರಬೇಕು. ಅಂದರೆ, ಯಾರಿಗೇ ಆಗಲಿ ತೊಂದರೆ ಉಂಟುಮಾಡುವ ಪ್ರತೀ ತಪ್ಪಿಗೂ ಕ್ಷೋಭೆಗೊಳ್ಳುವ ಪ್ರಜ್ಞೆ. ಆ ತಪ್ಪಿನಿಂದ ತಾನೇ ತೊಂದರೆಗೊಳಗಾಗದೇ ಹೋದರೂ ತೊಂದರೆಗೊಳಗಾದವರನ್ನು ಅದರಿಂದ ಬಿಡಿಸಲು ಕೈಜೋಡಿಸಲು ಸಿದ್ಧವಾಗುವಂತಹ ಪ್ರಜ್ಞೆ.

ಬಾಬಾಸಾಹೇಬರ ಈ ಮಾತುಗಳ ಹಿನ್ನೆಲೆಯಲ್ಲಿ ಪ್ರಸ್ತುತ ಚುನಾವಣೆಯ ಸಂದರ್ಭವನ್ನು ನೋಡುವಾಗ, ರಾಜಕೀಯ ನಾಯಕರ ಓಡಾಟ, ವಾದ, ವಾಗ್ಯುದ್ಧಗಳಿಗೆ, ಹೆಣೆಯಬೇಕಾದ ತಂತ್ರಗಳಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಾಲದೇನೋ ಎನಿಸುತ್ತದೆ. ವಯಸ್ಸು, ಕಾಯಿಲೆ, ಸಮಯ ಲೆಕ್ಕಿಸದಿರುವ ಅವರ ಹುಮ್ಮಸ್ಸು, ಚೈತನ್ಯ ಕಂಡು ಯಾವ ‘ಮತ್ತಿನ ಮೋಡಿ’ಗೆ ಒಳಗಾಗಿದ್ದಾರೆಂದು ಸೋಜಿಗವಾಗುತ್ತದೆ.

ಚುನಾವಣೆಗೆ ನಿಲ್ಲಲು ಟಿಕೆಟ್‌ ಸಿಗದೆ ಜನಸೇವೆ ಮಾಡಲು ಅವಕಾಶ ತಪ್ಪಿಹೋಯಿತೆಂದು ಗೋಳಾಡು ವವರು, ಕ್ರೋಧಗೊಂಡವರು, ಸೇಡು ತೀರಿಸಿಕೊಳ್ಳಲೆಂದು ಮತ್ತೊಂದು ಕಡೆಗೆ ಜಿಗಿಯುವವರು, ಲಾಟುಗಟ್ಟಲೆ ಸೀರೆ, ಬೆಳ್ಳಿ, ಕುಕ್ಕರ್, ನೋಟುಗಳು, ಬಾಡೂಟ, ತೀರ್ಥಕ್ಷೇತ್ರ ಪ್ರವಾಸದ ಆಯೋಜನೆಗಳು, ದೇವಾಲಯ, ಪ್ರತಿಮೆ, ಸೇತುವೆಗಳ ಅರ್ಪಣೆ, ಪೂಜೆಯ ಪ್ರಸಾದಗಳ ಕಸರತ್ತುಗಳು, ದೇವರ ಫೋಟೊ, ಆಣೆ, ಪ್ರಮಾಣ, ಭಾವುಕ ಮಾತುಗಳನ್ನು ನೋಡುವಾಗ, ಎಷ್ಟೆಲ್ಲ ಜನ ಹಿಂದೆಯೂ ಈಗಲೂ ಮುಗಿಬಿದ್ದು ಜನಸೇವೆಗೆ ಮುಂದಾಗಿದ್ದಾರೆ ಎನಿಸುತ್ತದೆ. ಆದರೂ ಹೊಟ್ಟೆಪಾಡಿಗೆ ರಟ್ಟೆ ನಂಬಿದವರು ಕಾಲನ್ನೇ ನೆಚ್ಚಿ ಕೊರೊನಾ ಸಂದರ್ಭದಲ್ಲಿ ನೂರಾರು ಮೈಲುಗಳು ಯಾಕೆ ನಡೆದರು? ಅಧಿಕೃತ ಗುರುತಿನ ಚೀಟಿ ಇಲ್ಲವೆಂದು ಹೊಟ್ಟೆ ಹಸಿವನ್ನೇ ತಳ್ಳಿಹಾಕಿದ ಸರ್ಕಾರದ ವಿರುದ್ಧ ಉಣ್ಣುವ ಅನ್ನಕ್ಕಾಗಿ ಹೈಕೋರ್ಟ್‌ಗೆ ಮೊರೆ ಹೋಗುವಂತಾಗಿದ್ದು ಏಕೆ? ಊರಲ್ಲೇ ಉಳಿದು ಉಣ್ಣಲು ಎರಡು ಹೊತ್ತಿನ ಅನ್ನ, ತೊಡಲು ಎರಡಾದರೂ ಸೀರೆ, ರವಿಕೆ, ಒಳಲಂಗಗಳನ್ನು ದೊರಕಿಸಿಕೊಡುವ ನೂರು ದಿನಗಳ ಉದ್ಯೋಗ ಖಾತರಿಯ ಅನುದಾನಕ್ಕೆ ಯಾಕೆ ಬಜೆಟ್‍ನಲ್ಲಿ ಕಡಿತ?

ತಮ್ಮ ಜೀವನದ ಅಮೂಲ್ಯ ಕಾಲದಲ್ಲಿ ದುಡಿದು ಆರ್ಥಿಕತೆಗೆ ಬೆನ್ನೆಲುಬಾದವರು ಯಾಕೆ ಪಿಂಚಣಿ ಬೇಕೆಂದು ಮುಪ್ಪಿನಲ್ಲೂ ಧರಣಿ ಕೂತರು? ನಾಲ್ಕು ಸಾವಿರ ರೂಪಾಯಿ ವೇತನ ಹೆಚ್ಚಾಗಬೇಕಾದ ಕಡೆ ಬರೀ ಐನೂರು ಏರಿಸಿದ ಸರ್ಕಾರದ ವಿರುದ್ಧ ಗಾರ್ಮೆಂಟ್ಸ್‌ ಮಹಿಳೆಯರು ಯಾಕೆ ಕೋಪದ ನಿಟ್ಟುಸಿರು ಬಿಡುತ್ತಿದ್ದಾರೆ? ಹೊಟ್ಟೆಗಾಗಿ ಅನ್ನ ಬೆಳೆವವರ ಭೂಮಿಯನ್ನು ಕಸಿಯುತ್ತಿರುವುದರ ವಿರುದ್ಧ ನಮ್ಮ ಭೂಮಿ ನಮಗಿರಲೆಂದು ರೈತರ್‍ಯಾಕೆ ಹೋರಾಡುತ್ತಿದ್ದಾರೆ? ಡಿಜಿಟಲ್ ಹೈಟೆಕ್ ಯುಗದಲ್ಲೂ ಮಲದ ಗುಂಡಿಗೆ ಬಿದ್ದು ಸಾಯುವ ಸಫಾಯಿ ಕರ್ಮಚಾರಿಗಳ್ಯಾಕೆ ಗಮನಕ್ಕೂ ಬೀಳುವುದಿಲ್ಲ? ಮಾಲೂರು ತಾಲ್ಲೂಕೊಂದರಲ್ಲೇ ಒಂದೇ ವಾರದಲ್ಲಿ ದಲಿತರ ಮೇಲೆ ಆರು ದೌರ್ಜನ್ಯ ಪ್ರಕರಣಗಳು ನಡೆದದ್ದು ಮನವನ್ನು ಯಾಕೆ ಕಲಕುವುದಿಲ್ಲ? ದನದ ಮಾಂಸವ ಸಾಗಿಸಲು ಪರವಾನಗಿ ಪಡೆದರೂ ಅಟ್ಟಾಡಿಸಿ ಕೊಂದ ನರಹಂತಕರಿಗೆ ಪರವಾನಗಿ ಹೇಗೆ ಸಿಗುತ್ತದೆ?

ತಪ್ಪಿದ್ದೆಲ್ಲಿ? ಎಡವಿದ್ದೆಲ್ಲಿ? ಮರುಳಾದೆವೆಲ್ಲಿ? ನಿರಾಕರಿಸಿದ್ದು, ಕಡೆಗಣಿಸಿದ್ದು, ಬಿಸಾಕಿದ್ದು, ಧಿಕ್ಕರಿಸಿದ್ದು ಏನನ್ನ ಎಂದು ಪ್ರಜಾಪ್ರಭುತ್ವದ ಕನ್ನಡಿಯಲ್ಲಿ ನೋಡಿಕೊಳ್ಳಬೇಕಿದೆ. ಅಬ್ಬರ ಹೆಚ್ಚಿದಷ್ಟೂ ಮೌನವಾಗಿ, ಉರಿ ಧಗಧಗಿಸಿದಷ್ಟೂ ನೀರ ತಂಪಾಗಿ ಹರಿಯಬೇಕು. ಶತ್ರುವ ಹೊರ ನಿಲ್ಲಿಸಿ ಹೊಡೆದುರುಳಿಸಲು ಹತಾರಗಳ ಸಿದ್ಧ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ಒಳ ಶತ್ರುವ ಮಣಿಸಲು ಹತಾರ ಹುಡುಕಬೇಕಾಗಿದೆ.

ಜನಪರವಾಗಿ ಹೋರಾಡಿದವರು ಇಷ್ಟೂ ಕಾಲ ಆಡಿದ ಮತ್ತು ಹಾಡಿದ ಸಮಾನತೆ, ಸಾಮಾಜಿಕ ನ್ಯಾಯ, ಬಂಧುತ್ವದ ತೂಕ ಅರಿತು, ನರನಾಡಿಗಳಿಗೆ ಇಳಿಸಿ, ಜನರತ್ತ ನಡೆದು, ಮೂಗಿಗೆ ಕವಡೆ ಕಟ್ಟಿ ಎತ್ತು, ಕತ್ತೆಗಳಂತೆ ದುಡಿಯಬೇಕು. ಜನರ ವಿವೇಕ ಮತ್ತು ನಾಡಿಮಿಡಿತಗಳೊಂದಿಗೆ ತತ್ವಸಿದ್ಧಾಂತಗಳ ತಿಕ್ಕಾಟಕ್ಕೆ ಬಿಡಬೇಕು, ನಮ್ಮೊಳಗೇ ಊರಿಕೊಂಡ ಲಿಂಗ, ಲಿಂಗತ್ವ ವರ್ಗ, ಧರ್ಮ, ಜಾತಿ... ಅಂಧತ್ವಗಳ ತಿಣುಕಾಡಿ ಬುಡಮೇಲು ಮಾಡಿ, ತಾನು ಅನ್ಯ ಗೋಡೆ ಒಡೆಯಲು ತನ್ನೊಳಗೆ ಗುದ್ದಾಡಿ, ವಿವೇಕದ ಚೂರಿ ಮಸೆದು ಕೊಬ್ಬು ಕತ್ತರಿಸಿ ಹಗೂರಾಗಬೇಕು. ತೊಟ್ಟಿಲು ತೂಗಲು ಲಾಲಿ ಹಾಡಿ, ಚಟ್ಟಕ್ಕೆ ಹೆಗಲು ನೀಡಿ, ನಡೆಯಲು ಕೈ ಹಿಡಿಯಬೇಕು. ಭಿನ್ನಮತಗಳ ಬೆಸೆವ ಬಂಧುತ್ವವೇ ಪ್ರಜಾಪ್ರಭುತ್ವಕ್ಕೆ ತಳಪಾಯವೆಂದು ಮನಗಾಣಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT