ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವು ಹೊಸಬರಲ್ಲ

Last Updated 10 ಮೇ 2019, 20:15 IST
ಅಕ್ಷರ ಗಾತ್ರ

ರಾಮನಡಿಯಿಟ್ಟ ನೆಲ, ಭೀಮನುಸುರಿದ ಗಾಳಿ |

ವ್ಯೋಮದೆ ಭಗೀರಥಂ ತಂದ ಸುರತಟಿನಿ ||

ಸೋಮನಂ ಪೆತ್ತ ಕಡಲೀ ಪುರಾತನಗಳಿರೆ |

ನಾಮೆಂತು ಹೊಸಬರೆಲೊ – ಮಂಕುತಿಮ್ಮ || 130 ||

ಶಬ್ದಾರ್ಥ: ವ್ಯೋಮದೆ=ಆಕಾಶದಿಂದ, ಸುರತಟಿನಿ=ದೇವನದಿ(ಗಂಗೆ), ಸೋಮ=ಚಂದ್ರ, ಪೆತ್ತ=ಹೆತ್ತ

ವಾಚ್ಯಾರ್ಥ: ಇದೇ ರಾಮ ಪಾದಗಳನ್ನಿಟ್ಟ ನೆಲ, ಇದೇ ಭೀಮ ಉಸುರಾಡಿಸಿದ ಗಾಳಿ, ಈ ಗಂಗೆಯನ್ನೇ ಭಗೀರಥ ನೆಲಕ್ಕೆ ತಂದದ್ದು, ಇದೇ ಕಡಲಿನಿಂದಲೇ ಚಂದ್ರ ಬಂದದ್ದು. ಈ ಎಲ್ಲ ಇಲ್ಲಿಯೇ ಇರುವಾಗ, ನಾವು ಹೇಗೆ ಹೊಸಬರಾದೇವು ?

ವಿವರಣೆ: ವಿಜ್ಞಾನ ನಮಗೆ ದಿನದಿನವೂ ಹೊಸ ವಿಷಯಗಳನ್ನು ತಂದಿಡುತ್ತದೆ. ಅದರಲ್ಲಿ ಒಂದೆಂದರೆ ನಾವು ಈ ವಿಶ್ವದಲ್ಲಿ ಏನೂ ಅಲ್ಲ. ವಿಜ್ಞಾನಿಗಳು ಹೇಳುವಂತೆ ಈ ಪ್ರಪಂಚ ಸುಮಾರು ಹದಿಮೂರು ಶತಕೋಟಿ ವರ್ಷಗಳಿಗಿಂತ ಹಳೆಯದಾದದ್ದು. ಅದು ಎಷ್ಟು ದೊಡ್ಡದೆಂದರೆ ನಮ್ಮ ಸೂರ್ಯನ ಪರಿವಾರವೆಲ್ಲ ನಿಕೃಷ್ಟವಾದದ್ದು, ಒಂದು ದೂಳಿಕಣದಷ್ಟು ಗಮನಾರ್ಹವಾದದ್ದಲ್ಲ. ಆದ್ದರಿಂದ ಅನಂತವಾದ ವಿಶ್ವದಲ್ಲಿ ಒಬ್ಬ ಮನುಷ್ಯ ತನ್ನ ಆಯುಷ್ಯದಲ್ಲಿ ಕಳೆಯುವ ಸಮಯವನ್ನು ಏನೆಂದು ಹೇಳುವುದು? ಇಂಥ ವಿಶ್ವದಲ್ಲಿ ನಮ್ಮ ಸ್ಥಾನ ಯಾವುದು?

ಇಂಥ ಚಿಂತನೆಗಳಿಗೆ ಈ ಕಗ್ಗ ತುಂಬ ಸಾಂತ್ವನ ನೀಡುತ್ತದೆ. ಒಬ್ಬ ಮನುಷ್ಯನ ಜೀವಿತಾವಧಿ ನಿರ್ಲಕ್ಷ್ಯ ಮಾಡುವಷ್ಟು ಚಿಕ್ಕದಾಗಿರಬಹುದು. ಆದರೆ ಮನುಜಕುಲ ಮಾಡಿದ ಸಾಧನೆ ದೀರ್ಘವಾದದ್ದು. ಅದೊಂದು ಪರಂಪರೆಯಾಗಿ, ಇತಿಹಾಸವಾಗಿ, ನಮಗೆ ಮಾರ್ಗದರ್ಶಕವಾಗಿ ನಿಂತಿದೆ. ತ್ರೇತಾಯುಗದ ರಾಮ ಅಡ್ಡಾಡಿದ್ದೂ ಇದೇ ನೆಲ. ಇದೇ ನಮ್ಮ ಹಂಪಿಯಲ್ಲಿ ನಮ್ಮ ಆಂಜನೆಯನೊಡನೆ ಕಾಲ ಕಳೆದದ್ದು, ಶಬರಿಗೆ ಆತಿಥ್ಯದ ಭಾಗ್ಯ ನೀಡಿದ್ದು ನಮ್ಮ ನೆಲದಲ್ಲೇ. ದ್ವಾಪರದ ಭೀಮ ಬದುಕಿದ್ದೂ ಇದೇ ನೆಲದ ಮೇಲೆ. ಕುರುಕ್ಷೇತ್ರದ ನೆಲದಲ್ಲಿ ಅವನ ಸಾಹಸಗಾಥೆ ಇತಿಹಾಸವಾಗಿದೆ. ರಾಮನಿಗಿಂತ ಹಿಂದಿದ್ದ ಭಗೀರಥ ತನ್ನ ಅನನ್ಯವಾದ ಛಲದಿಂದ, ಸಾಹಸದಿಂದ ನೆಲಕ್ಕೆ ಇಳಿಸಿದ ಗಂಗೆ ಇನ್ನೂ ಹರಿಯುತ್ತಿದ್ದಾಳೆ. ಮಥನ ಕಾಲದಲ್ಲಿ ಚಂದ್ರ ಹುಟ್ಟಿದ್ದೇ ನಮ್ಮ ಸಮುದ್ರದಲ್ಲಿ.

ಅನಾದಿಕಾಲದಿಂದಲೂ ಇದ್ದ ಈ ಭೂಮಿಯ ಮೇಲೆಯೇ ನಾವೂ ಇರುವುದು ಮತ್ತು ಅದೇ ಜಲವನ್ನು ಕುಡಿಯುವುದು. ಅಂದಿನ ವಸ್ತುಗಳೇ ಇಂದೂ ನಮ್ಮೊಂದಿಗೆ ಇದ್ದಾಗ ನಾವು ಹೊಸಬರು ಹೇಗಾಗುತ್ತೇವೆ? ದೈಹಿಕವಾಗಿ ನಾವೆಷ್ಟು ಕುಬ್ಜರಾದರೂ ಇತಿಹಾಸದಲ್ಲಿ ನಮ್ಮದೊಂದು ಪುಟ್ಟ ಪಾತ್ರವಿದೆ.

ಇದನ್ನು ಅಧ್ಯಾತ್ಮದ ದೃಷ್ಟಿಯಿಂದ ಶ್ರೀ ಕೃಷ್ಣ ಕಾಣುತ್ತಾನೆ. ಗೀತೆಯ ನಾಲ್ಕನೇ ಅಧ್ಯಾಯ ಮೊದಲ ಶ್ಲೋಕದಲ್ಲಿ ಕೃಷ್ಣ ತಾನು ಯೋಗವನ್ನು ವೈವಸ್ಪತನಿಗೆ ಹೇಳಿದೆ ಎನ್ನುತ್ತಾನೆ.

‘ಇಮಂ ವಿವಸ್ಪತೇ ಯೋಗಂ ಪ್ರೋಕ್ತವಾನಹಮವ್ಯಯಮ್ |

ವಿವಸ್ಪಾನ್ ಮನವೇ ಪ್ರಾಹ ಮನುರಿಕ್ಷ್ಪಾಕವೇs ಬ್ರವೀತ್ ||

‘ನಾನು ಈ ಸನಾತನವಾದ ಯೋಗಶಾಸ್ತ್ರವನ್ನು ವಿವಸ್ಪತನಿಗೆ ಹೇಳಿದೆ. ಅವನು ಅದನ್ನು ಮನುವಿಗೆ ತಿಳಿಸಿದ ನಂತರ ಮನು ಅದನ್ನು ಇಕ್ಷ್ಪಾಕುವಿಗೆ ಬೋಧಿಸಿದ’.

ಈ ಮಾತನ್ನು ಕೇಳಿ, ‘ವಿವಸ್ಪತ ಹುಟ್ಟಿದ್ದು ಯಾವ ಕಾಲದಲ್ಲಿ? ನೀನು ನಮ್ಮೊಡನೆ ಇರುವವನು. ಹಿಂದೆ ಎಂದೋ ಇದ್ದವನಿಗೆ ನೀನು ಹೇಗೆ ಉಪದೇಶಿಸಿದೆ ಎಂದು ಕೇಳಿದಾಗ ಕೃಷ್ಣ, ‘ಅರ್ಜುನ ನಾನೂ, ನೀನೂ ಇಂದಿನವರಲ್ಲ, ಮೊದಲಿನಿಂದಲೂ ಇರುವವರೇ, ನಿನಗೆ ಪೂರ್ವಜನ್ಮಗಳು ಮರೆತು ಹೋಗಿವೆ ಆದರೆ ನನಗೆ ಅವೆಲ್ಲ ಜ್ಞಾಪಕದಲ್ಲಿವೆ’ ಎನ್ನುತ್ತಾನೆ. ಹಾಗೆಂದರೆ ಯಾವ ಜೀವವೂ ತಾತ್ಕಾಲಿಕವಾಗಿ ಬಂದು ಹೋಗುವುದಿಲ್ಲ. ಬದಲಾಗಿ ಪುನಃ ಪುನಃ ಬಂದು ಇತಿಹಾಸಕ್ಕೆ ವರ್ತಮಾನದ ಲೇಪ ಕೊಡುವಂಥದ್ದು. ಅಂತೆಯೇ ನಾವು ಈ ಜಗತ್ತಿಗೆ ಹೊಸಬರಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT