ಶನಿವಾರ, ಏಪ್ರಿಲ್ 17, 2021
31 °C

ಕಾಲಕ್ಕೆ ರಾಜನೇ ಕಾರಣ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬಹಳ ಹಿಂದೆ ಕುರು ರಾಜ್ಯದಲ್ಲಿ ಚಕ್ರವರ್ತಿ ಧನಂಜಯ ರಾಜ್ಯಭಾರಮಾಡುವಾಗ ಬೋಧಿಸತ್ವ ಅವನ ಪಟ್ಟಮಹಿಷಿಯ ಗರ್ಭದಲ್ಲಿ ಜೇಷ್ಠ ಪುತ್ರನಾಗಿ ಜನಿಸಿದ. ತಕ್ಕಶಿಲೆಗೆ ಹೋಗಿ ಅಪಾರ ಜ್ಞಾನ ಸಂಪಾದನೆ ಮಾಡಿಕೊಂಡು ಮರಳಿ ಬಂದು, ತಂದೆ ಕಾಲವಾದ ಮೇಲೆ ತಾನೇ ರಾಜನಾದ. ಅವನು ಅತ್ಯಂತ ಧರ್ಮದಿಂದ ರಾಜ್ಯದ ಪಾಲನೆ ಮಾಡುತ್ತಿದ್ದ. ಆ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆಯಾಗಿ ದೇಶ ತುಂಬ ಸುಭಿಕ್ಷವಾಗಿತ್ತು.

ಪಕ್ಕದ ಕಳಿಂಗ ರಾಷ್ಟ್ರವನ್ನು ಕಾಳಿಂಗರಾಜ ಆಳುತ್ತಿದ್ದ. ಒಂದು ಬಾರಿ ಅವನ ದೇಶದಲ್ಲಿ ಬರಗಾಲ ಬಿತ್ತು. ಅದೆಷ್ಟು ತೀವ್ರವಾಗಿತ್ತೆಂದರೆ ಊಟಕ್ಕೆ ಮಾತ್ರವಲ್ಲ ಕುಡಿಯುವ ನೀರಿಗೂ ಜನ ಹೊಡೆದಾಡಿಕೊಳ್ಳುವಂತಾಗಿತ್ತು. ರೋಗಗಳು ಹರಡತೊಡಗಿದವು, ಜನ ಕಂಗಾಲಾದರು. ದೇಶವಾಸಿಗಳೆಲ್ಲ ಬಂದು ರಾಜನ ಅರಮನೆಯ ಮುಂದೆ ನಿಂತು ಗಲಾಟೆ ಮಾಡತೊಡಗಿದರು. ರಾಜ ಬಂದಾಗ ಅವನಿಗೆ ತಮ್ಮ ಕಷ್ಟವನ್ನು ಹೇಳಿಕೊಂಡರು, ‘ರಾಜಾ, ದೇಶದಲ್ಲಿ ಬರಗಾಲ, ರೋಗಭೀತಿಗಳು ನಮ್ಮನ್ನೆಲ್ಲ ಕಾಡುತ್ತಿವೆ. ದಯವಿಟ್ಟು ಮಳೆ ಬರುವಂತೆ ಮಾಡು. ನಿಮ್ಮ ತಂದೆ ರಾಜ್ಯಭಾರಮಾಡುವಾಗ ಪ್ರತಿವರ್ಷ ತಪ್ಪದೆ ಮಳೆಯಾಗುತ್ತಿತ್ತು’. ರಾಜ ಕೇಳಿದ, ‘ನಮ್ಮ ತಂದೆ ಏನು ಮಾಡುತ್ತಿದ್ದರು?’ ಒಬ್ಬ ಹಿರಿಯ ಹೇಳಿದ, ‘ಮಳೆ ಬೀಳದಿದ್ದಾಗ ಬಡವರಿಗೆ ದಾನ ಮಾಡಿ, ಶೀಲಗ್ರಹಣಮಾಡಿ, ಗ್ರಾಮವಾಸಕ್ಕೆ ಬಂದು ಹುಲ್ಲಿನ ಹಾಸಿಗೆಯ ಮೇಲೆ ಮಲಗುತ್ತಿದ್ದರು. ಆಗ ಮಳೆ ಬರುತ್ತಿತ್ತು’.

ರಾಜ ಅವರು ಹೇಳಿದಂತೆಯೇ ಮಾಡಿದ. ಆದರೆ ಮಳೆಯಾಗಲಿಲ್ಲ, ರೋಗಗಳು ಹೆಚ್ಚಾದವು. ರಾಜನ ಮಂತ್ರಿ ಹೇಳಿದ, ‘ಪ್ರಭೂ, ಪಕ್ಕದ ಕುರುರಾಜ್ಯದಲ್ಲಿ ಸದಾ ಸೌಭಾಗ್ಯವಿದೆ, ಮಳೆ, ಬೆಳೆ ಚೆನ್ನಾಗಿದೆ. ಬಹಳ ಜನ ಹೇಳುತ್ತಾರೆ, ರಾಜನಿಗೆ ಈ ಕೃಪೆ ದೊರೆತದ್ದು ಅವನ ಬಳಿ ಇರುವ ಮಾಂಗಳೀಕ ಆನೆಯಿಂದ. ಅದನ್ನು ತಂದರೆ ನಮ್ಮಲ್ಲೂ ಸುಭಿಕ್ಷವಾಗಬಹುದು’. ರಾಜ ಚಿಂತಿಸಿದ ಆ ಆನೆಯನ್ನು ತರುವುದು ಹೇಗೆ? ಕುರುರಾಜ್ಯ ಚಕ್ರವರ್ತಿ ತುಂಬ ಬಲಿಷ್ಠ, ಅವನನ್ನು ಸೋಲಿಸುವುದು ಅಸಾಧ್ಯ. ಅದಕ್ಕೆ ಮಂತ್ರಿ ಹೇಳಿದ, ‘ರಾಜಾ, ಕುರುರಾಜ ತುಂಬ ಧರ್ಮಿಷ್ಠ. ಯಾರು ಏನು ಕೇಳಿದರೂ ಕೊಟ್ಟು ಬಿಡುತ್ತಾನೆ. ಅದಕ್ಕೆ ನಮ್ಮ ದೇಶದ ಕೆಲವು ಪಂಡಿತರನ್ನು ಅಲ್ಲಿಗೆ ಕಳುಹಿಸಿ ಆನೆಯನ್ನು ದಾನಕೊಡುವಂತೆ ಬೇಡಿ ಎನ್ನೋಣ. ಅವನು ಖಂಡಿತವಾಗಿಯೂ ಕೊಡುತ್ತಾನೆ’.

ಮರುದಿನವೇ ಹತ್ತು ಜನ ಪಂಡಿತರು ಕುರುರಾಜ್ಯಕ್ಕೆ ಹೋಗಿ ರಾಜನನ್ನು ಕಂಡು ಆನೆಯನ್ನು ದಾನವಾಗಿ ಬೇಡಿದರು. ರಾಜನಿಗೆ ಆಶ್ಚರ್ಯ. ‘ನಿಮಗೆ ಆನೆ ಏಕೆ ಬೇಕು?’ ಎಂದು ಕೇಳಿದ. ಅವರು ಪ್ರಾಮಾಣಿಕವಾಗಿ ತಮ್ಮ ದೇಶದ ಬರಗಾಲವನ್ನು ಎದುರಿಸಲು ಮಂಗಳಕರವಾದ ಆನೆ ಬೇಕು ಎಂದರು. ಆಗ ರಾಜ ನಕ್ಕು ಹೇಳಿದ, ‘ದಯವಿಟ್ಟು ನಮ್ಮ ದೇಶದ ರಾಜಮಾತೆ, ಪಟ್ಟಮಹಿಷಿ, ಯುವರಾಜ, ಪುರೋಹಿತ, ಭೂಮಾಪನಾಧಿಕಾರಿ, ಸಾರಥಿ, ಶ್ರೇಷ್ಠಿ, ದ್ರೋಣಮಾಪಕ, ದ್ವಾರಪಾಲಕ ಮತ್ತು ನಗರದ ಸುಂದರ ವೇಶ್ಯೆ ಇವರನ್ನು ಭೇಟಿಯಾಗಿ, ಅವರಿಂದ ವಿಷಯ ತಿಳಿದು ಬನ್ನಿ, ಆಮೇಲೆ ನಿಮಗೆ ಆನೆಯನ್ನು ಕೊಡುತ್ತೇನೆ’ – ರಾಜ ಹೇಳಿದಂತೆ ಅವರೆಲ್ಲರನ್ನೂ ಕಂಡು ಮಾತನಾಡಿಸಿ ಬಂದ ಪಂಡಿತರು ಬೆರಗಾಗಿ ಹೋದರು. ಈ ಹತ್ತು ಜನರೂ ಧರ್ಮವನ್ನು ತಪ್ಪದೇ ಪಾಲಿಸುತ್ತಿದ್ದರು. ಎಲ್ಲರೂ ನೀಡಿದ್ದು ಒಂದೇ ಕಾರಣ, ‘ರಾಜ ಸಂಪೂರ್ಣವಾಗಿ ಧರ್ಮಿಷ್ಠನಾದ್ದರಿಂದ ನಾವೂ ಹಾಗೆಯೇ ಇರಬೇಕಾಗುತ್ತದೆ’. ರಾಜನನ್ನು ಪಂಡಿತರು ಕಂಡಾಗ ಹೇಳಿದ, ‘ಮಳೆ, ಬೆಳೆಗೆ ಆನೆ ಕಾರಣವಲ್ಲ. ರಾಜ ದೇಶದ ಎಲ್ಲರಿಗಿಂತ ಹೆಚ್ಚು ಕಠಿಣವಾಗಿ ಧರ್ಮವನ್ನು ಪಾಲಿಸಬೇಕು. ಅವನು ಹಾಗಿದ್ದರೆ ರಾಷ್ಟ್ರದ ಎಲ್ಲರೂ, ಎಲ್ಲ ಸ್ತರದ ಜನರೂ ಧರ್ಮದಿಂದಿರುತ್ತಾರೆ. ಆಗ ದೇವತೆಗಳು ತೃಪ್ತಿಯಿಂದ ಕೇಳಿದ್ದನ್ನು ನೀಡುತ್ತಾರೆ’. ಪಂಡಿತರಿಗೆ ಉತ್ತರ ದೊರೆತಿತ್ತು. ಮರಳಿ ಬಂದು ರಾಜನಿಗೆ ವಿಷಯ ತಿಳಿಸಿದಾಗ ಅವನೂ ಧರ್ಮಿಷ್ಠನಾದನಂತೆ. ಕಳಿಂಗ ರಾಜ್ಯವೂ ಸುಭಿಕ್ಷವಾಯಿತು.

‘ರಾಜಾ ಕಾಲಸ್ಯ ಕಾರಣಂ’ ಎನ್ನುವಂತೆ ರಾಜನಾಗಲಿ, ನಾಯಕರಾಗಲಿ ರಾಜಧರ್ಮವನ್ನು ಪಾಲಿಸದಿದ್ದಾಗ ಇಡೀ ರಾಜ್ಯ ಸಂಕಟಕ್ಕೆ ಈಡಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.