ಭಾನುವಾರ, ಜುಲೈ 25, 2021
25 °C

ಬೆರಗಿನ ಬೆಳಕು | ಸತ್ಯ-ಸುಳ್ಳುಗಳ ಮಿಶ್ರಣ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಹಟವಾದಕೆಡೆಯೆಲ್ಲಿ ಮನುಜ ಪ್ರಪಂಚದಲಿ? |

ಸಟೆಯೆಷ್ಟೊ ದಿಟವೆಷ್ಟೊ ಬೆರೆತಿರುವುವಿಲ್ಲಿ ||
ಪಟುವಾಗಿ ನಿಲಲಹುದೆ ಮಣಲೊಳೆಸಗಿದ ಗೋಡೆ?|
ಕಟುತೆ ಸಲ್ಲದು ಜಗಕೆ – ಮಂಕುತಿಮ್ಮ || 299 ||

ಪದ-ಅರ್ಥ: ಹಟವಾದಕೆಡೆಯೆಲ್ಲಿ=ಹಟವಾದಕೆ+ಎಡೆಯೆಲ್ಲಿ, ಸಟೆಯೆಷ್ಟೊ=ಸಟೆ(ಸುಳ್ಳು)+ಎಷ್ಟೊ, ದಿಟವೆಷ್ಟ್ಟೊ=ದಿಟ(ಸತ್ಯ)+ಎಷ್ಟೊ, ಪಟುವಾಗಿ=ಗಟ್ಟಿಯಾಗಿ, ಮಣಲೊಳೆಸಗಿದ=ಮಣಲೊಳು(ಮಣ್ಣಿನಲ್ಲಿ)+ಎಸಗಿದ(ಕಟ್ಟಿದ), ಕಟುತೆ=ಖಂಡಿತವಾದ.

ವಾಚ್ಯಾರ್ಥ: ಖಂಡಿತವಾದಕ್ಕೆ ಮನುಷ್ಯ ಪ್ರಪಂಚದಲ್ಲಿ ಸ್ಥಾನವಿದೆಯೆ? ಇಲ್ಲಿ ಎಷ್ಟೋ ಸುಳ್ಳುಗಳು, ಸತ್ಯಗಳು ಬೆರೆತಿವೆ. ಮಣ್ಣಿನಲ್ಲಿ ಕಟ್ಟಿದ ಗೋಡೆ ಭದ್ರವಾಗಿ ನಿಂತೀತೆ? ಜಗತ್ತಿನಲ್ಲಿ ಖಂಡಿತವಾದ ಸಲ್ಲದು.

ವಿವರಣೆ: ಈ ಮನುಷ್ಯ ಪ್ರಪಂಚದಲ್ಲಿ ಯಾವುದನ್ನೂ ಹೀಗೆಯೇ ಎಂದು ಹೇಳುವಂತಿಲ್ಲ. ನಾವು ಯಾವುದನ್ನು ಸತ್ಯ ಎಂದು ಭಾವಿಸಿ ನಡೆಯುತ್ತಿದ್ದೇವೋ ಅದು ಏಕಾಏಕಿ ಸುಳ್ಳು ಎಂದರೆ ಹೇಗಾಗುತ್ತದೆ? ಅಥವಾ ಯಾವುದು ಇಲ್ಲ ಎಂದುಕೊಂಡಿದ್ದು ಇದೆಯೆಂದು ಆದರೆ? ಇದನ್ನೇ ಭ್ರಾಂತಿ ಅಥವಾ ಭ್ರಮೆ ಎನ್ನುವುದು. ಪ್ರಪಂಚದಲ್ಲಿ ಇಂಥ ಭ್ರಾಂತಿ ಎಲ್ಲೆಲ್ಲೂ ಕಾಣುತ್ತದೆ.

ಕಣ್ಣು ತೆರೆದಾಗ ಮುಂದಿದ್ದ ಮಗು ಕಾಣುತ್ತದೆ, ಅದರ ದೇಹ ಕಾಣುತ್ತದೆ. ಅದರ ನಗೆ, ಆಟ ಮನಕ್ಕೆ ಮುದಕೊಡುತ್ತದೆ. ಆದರೆ ಅದರ ಚಲನಶೀಲತೆಗೆ ಕಾರಣವಾಗಿರುವ ಒಳಗಿರುವ ಪ್ರಾಣಸ್ಪಂದನ ಕಾಣುವುದಿಲ್ಲ. ಆ ಪ್ರಾಣಸ್ಪಂದನವಿಲ್ಲದೆ ಮಗುವೇ ಇಲ್ಲ. ನಾನು ಯಾವುದನ್ನು ನಿಜವೆಂದು ಒಪ್ಪುತ್ತೇನೋ ಅದು ನಿಜವಲ್ಲ. ನನ್ನ ಕಣ್ಣಿಗೆ ಕಾಣದ್ದು ನಿಜವೆಂದು ತೋರುತ್ತದೆ.

ನನ್ನ ಮುಂದೆ ಕುಳಿತಿರುವವರು ಮಾತನಾಡುತ್ತಾರೆ. ಅದು ನನ್ನ ಕಿವಿಗೆ ಕೇಳಿಸುತ್ತದೆ. ಅದು ಶಬ್ದ ಮಾತ್ರ. ಕಿವಿಗೆ ಮಾತು ಅರ್ಥವಾಗುವುದಿಲ್ಲ. ಆ ಮಾತು ಅಂತರಂಗಕ್ಕೆ ಇಳಿದಾಗ ಅರ್ಥ ಹೊಳೆಯುತ್ತವೆ. ‘ನಾನು ಆ ಮಾತನ್ನು ಕಿವಿಯಾರೆ ಕೇಳಿದೆ’ ಎನ್ನುತ್ತೇವೆ. ಕಿವಿ ಕೇಳಿದ್ದು ಶಬ್ದ ಮಾತ್ರ. ಅಂತಃಕರಣ ಆ ಶಬ್ಧ ಅರ್ಥವಾಗಿಸುತ್ತದೆ. ಹೀಗೆ ನಮಗೆ ಎರಡು ದೃಷ್ಟಿಗಳುಂಟು. ಒಂದು ಬಾಹ್ಯದೃಷ್ಟಿ. ಅದು ಕೇವಲ ಸ್ಥೂಲರೂಪಗಳನ್ನು ಕಾಣುವುದು. ಮತ್ತೊಂದು ಅಂತರ್‌ದೃಷ್ಟಿ. ಅದು ಹೊರಗಣ ಸ್ಥೂಲರೂಪಗಳಿಗೆ ಅರ್ಥಗಳನ್ನು ಕಲ್ಪಿಸುತ್ತದೆ. ಹಾಗಾದರೆ ಯಾವುದು ಸತ್ಯ? ಈ ಭೇದಗಳಲ್ಲಿ ಅಭೇದವನ್ನು ಕಾಣುವವರು ದಾರ್ಶನಿಕರು. ಅವರು ಸ್ಥೂಲ, ಸೂಕ್ಷ್ಮಗಳನ್ನು ದಾಟಿ ಪ್ರಜ್ಞಾ ಪ್ರಪಂಚದಲ್ಲಿರುವವರು. ಈ ದ್ವಂದ್ವಕ್ಕೆ ಮುಕ್ತಿ ಹೇಗೆನ್ನುವುದನ್ನು ಅಲ್ಲಮಪ್ರಭು ಹೇಳುವ ರೀತಿ ಅದ್ಭುತ.
ಕಂಡುದ ಹಿಡಿಯಲೊಲ್ಲದೆ
ಕಾಣದುದನರಸಿ ಹಿಡಿದಿಹೆನೆಂದಡೆ
ಸಿಕ್ಕದೆಂಬ ಬಳಲಿಕೆಯ ನೋಡಾ!
ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ.

ನಾವು ಬಹಳಷ್ಟು ಜನ ಆ ಪ್ರಜ್ಞಾಸ್ಥಿತಿಗೆ ಹೋಗಲು ಸಾಧ್ಯವಿಲ್ಲದ್ದರಿಂದ ಪ್ರಪಂಚದಲ್ಲಿ ದ್ವಂದ್ವವನ್ನು ಕಾಣುವುದೇ ನಮ್ಮ ಗತಿ. ಈ ಕಗ್ಗ ಅದನ್ನು ಸ್ಪಷ್ಟಪಡಿಸುತ್ತದೆ. ಪ್ರಪಂಚದಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂಬುದು ತಿಳಿಯಲಾರದ ಹಾಗೆ ಹೆಣೆದುಕೊಂಡಿವೆ. ಅದಕ್ಕೆ ನಾನು ಕಂಡಿದ್ದೇ, ಕೇಳಿದ್ದೇ, ಹೇಳಿದ್ದೇ ಸತ್ಯ ಎಂಬ ಹಟ ಬೇಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು