ಶನಿವಾರ, ಜುಲೈ 24, 2021
21 °C

ಬೆರಗಿನ ಬೆಳಕು | ವಿಕಟ ರಸಿಕನ ಪ್ರಪಂಚ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

prajavani

ಒಟ್ಟಿನಲಿ ತತ್ವವಿದು, ವಿಕಟರಸಿಕನೊ ಧಾತ |

ತೊಟ್ಟಿಲನು ತೂಗುವನು, ಮಗುವ ಜಿಗಟುವನು ||
ಸಿಟ್ಟನ್ ಒಡವುಟ್ಟುಗಳೊಳಾಗಿಪನು, ಸೋಲಿಪನು |
ತುತ್ತು ವಿಕಟಿಗೆ ನಾವು – ಮಂಕುತಿಮ್ಮ || 311 ||

ಪದ-ಅರ್ಥ: ವಿಕಟರಸಿಕ-ಕ್ರೂರತನದಲ್ಲಿ ಸಂತೋಷಪಡುವವನು, ಧಾತ=ಸೃಷ್ಟಿಕರ್ತ, ಒಡವುಟ್ಟುಗಳೊಳಾಗಿಪನು=ಒಡವುಟ್ಟುಗಳೊಳ್ (ಒಡಹುಟ್ಟಿದವರಲ್ಲಿ)+ಆಗಿಪನು,

ವಾಚ್ಯಾರ್ಥ: ಜಗತ್ತಿನ ಒಟ್ಟು ತತ್ವವಿಷ್ಟೆ. ಸೃಷ್ಟಿಕರ್ತ ಕ್ರೂರತನದಲ್ಲಿ ಸಂತೋಷಪಡುವವನು. ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ತೂಗುತ್ತ ಸಂತೋಷಪಡಿಸುತ್ತಲೇ, ಅದನ್ನು ಜಿಗುಟಿ ಅಳಿಸುತ್ತಾನೆ. ಒಡಹುಟ್ಟಿದವರಲ್ಲಿ ಸಿಟ್ಟು, ಮಾತ್ಸರ್ಯಗಳನ್ನಿಟ್ಟು ಸೋಲಿಸುತ್ತಾನೆ. ಇಂಥ ವಿಕಟನಾದವನಿಗೆ ನಾವು ತುತ್ತಾಗಿದ್ದೇವೆ.

ವಿವರಣೆ: ಈ ಸೃಷ್ಟಿಯೇ ಒಂದು ವಿಚಿತ್ರವಾದ ಸಮನ್ವಯ. ಒಂದೆಡೆಗೆ ಸೌಂದರ್ಯದ, ಸಂತೋಷದ, ಆತ್ಮೀಯತೆಯ ಗಣಿ. ಮತ್ತೊಂದೆಡೆಗೆ ಭೀಕರವಾದ, ದುಃಖದ, ದ್ವೇಷದ ಮಡು. ಎರಡೂ ಈ ಪ್ರಪಂಚದಲ್ಲೇ ಇವೆ.

ಶ್ರೀನಗರದ ದಾಲ್ ಸರೋವರದಲ್ಲಿ ನಾವೆಯಲ್ಲಿ ಸಾಗುವಾಗ ದೊರೆಯುವ ಅಪೂರ್ವ ಸಂತೋಷವನ್ನು ವರ್ಣಿಸುವುದು ಅಸಾಧ್ಯ. ಸುತ್ತಲೂ ಕಣ್ಣು ಸೆಳೆಯುವ, ಹಿಮದಿಂದ ಹೊಳೆಯುವ ಪರ್ವತ ಶಿಖರಗಳು, ಮೈಗೆ ಮುದ ನೀಡುವ ತಂಗಾಳಿ, ಫಳಫಳನೆ ಹೊಳೆಯುವ ಮೈಕಾಂತಿಯ ಸುಂದರ ತರುಣ ತರುಣಿಯರು, ರಾಶಿ ರಾಶಿ ಹೂಗಿಡಗಳು, ನಮ್ಮನ್ನು ಮತ್ತಾವುದೋ ಗಂಧರ್ವಲೋಕಕ್ಕೆ ಕರೆದೊಯ್ಯುತ್ತವೆ. ಅಲ್ಲಿಯ ಭಾವಕೋಶದಿಂದ ಕೆಳಗಿಳಿದು ವಾಸ್ತವಕ್ಕೆ ಬಂದರೆ ಅಲ್ಲಿಯ ಜನರ ಬಡತನ ಮುಖಕ್ಕೆ ರಾಚುತ್ತದೆ. ನಾವು ಸ್ವರ್ಗವೆಂದುಕೊಂಡ ತೇಲುವ ಮನೆಗಳಲ್ಲೇ ಹಸಿದ ಹೊಟ್ಟೆಗಳಲ್ಲಿರುವ ಮಕ್ಕಳು, ಅತ್ಯುಗ್ರರ ಬಂದೂಕಿನ ಸದ್ದುಗಳ ನಿರೀಕ್ಷೆಯ ಆತಂಕದಲ್ಲಿ ಕಣ್ಣುಗಳನ್ನು ಮುಚ್ಚದ ವೃದ್ಧರು, ಬದುಕಿಗೊಂದು ದಾರಿ ಕಾಣುವ ಆತುರತೆಯಲ್ಲಿರುವ ತರುಣರು, ಇವೂ ಅಲ್ಲಿಯೇ ಇವೆ.
ನಿಸರ್ಗವನ್ನು ಕಾಣುವುದಾದರೆ ಅತ್ಯಂತ ಸುಂದರವಾದ ವನಸಿರಿ ಇದೆ, ಅದರೊಂದಿಗೆ ಏನೇನೂ ಬೆಳೆಯದ ಮರುಭೂಮಿಯೂ ಇದೆ. ಮನುಷ್ಯರಲ್ಲೂ ಶಾಂತಿದೂತರಾಗಿ ಬಂದ ಬುದ್ಧ, ಮಹಾವೀರ, ಏಸೂಕ್ರಿಸ್ತ ಮತ್ತು ಗಾಂಧೀಜಿಯವರ ಪಡೆಯೇ ಇದೆ. ಅದರಂತೆಯೇ ಮನುಕುಲದ ವೈರಿಗಳಂತಿದ್ದ ಹಿಟ್ಲರ್, ಮುಸ್ಸೊಲಿನಿ, ಸದ್ದಾಂ ಹುಸೇನ್, ಒಸಮಾ-ಬಿನ್-ಲಾಡೆನ್‌ನಂತಹವರ ಸರಪಳಿಯೂ ಇದೆ.

ಇದನ್ನೆಲ್ಲ ಕಂಡ ಸಂವೇದನಾಶೀಲ ಮನಸ್ಸು ಯೋಚಿಸುವುದು ಹೀಗೆ. ಈ ಪ್ರಪಂಚವನ್ನು ಸೃಷ್ಟಿಸಿದ ಭಗವಂತ ಕ್ರೌರ್ಯವನ್ನು ಸಂತೋಷಿಸುವ ವಿಕಟನೇ? ಆತ ವಿಕಟರಸಿಕ. ಒಂದೆಡೆಗೆ ತೊಟ್ಟಿಲಿನಲ್ಲಿದ್ದ ಮಗುವನ್ನು ತೂಗಿ ಸಂತೋಷಪಡಿಸುವಂತೆ ಕಾಣುತ್ತಾನೆ, ಮತ್ತೊಂದೆಡೆಗೆ ಅದನ್ನು ಜಿಗುಟಿ ಅಳುವಂತೆ ಮಾಡಿ ತೃಪ್ತಿ ಪಡುತ್ತಾನೆ. ಒಡಹುಟ್ಟಿದವರಲ್ಲಿ ಇರಬೇಕಾಗಿದ್ದ ಪ್ರೀತಿ, ಅನ್ಯೋನ್ಯತೆಗಳ ಬದಲಾಗಿ ಹೊಟ್ಟೆಕಿಚ್ಚು, ಸಿಟ್ಟುಗಳನ್ನಿಟ್ಟು ಭೇದ ತರುತ್ತಾನೆ. ಅವನ ವಿಕಟಹಾಸಕ್ಕೆ ನಾವು ಗುರಿಯಾಗಿದ್ದೇವೆ ಎಂದೆನಿಸುವುದಿಲ್ಲವೇ? ಆದರೆ ಕಗ್ಗದ ಆಶಯ, ಪ್ರಪಂಚ ಇರುವುದು ಹೀಗೆಯೇ. ಅದು ಶ್ರೇಷ್ಠ, ಕನಿಷ್ಠಗಳ, ಸುಖ-ದುಃಖಗಳ, ಪ್ರೀತಿ–ಮಾತ್ಸರ್ಯಗಳ ಗೂಡು. ಎರಡೂ ಇಲ್ಲಿಯೇ ಇವೆ. ಅವುಗಳನ್ನರಿತು ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದು ನಮ್ಮ ಬದುಕಿನ ಉದ್ದೇಶ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು