ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು| ರಾಜನ ನಡತೆ

Last Updated 2 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹಿಂದೆ ಕಾಂಪಿಲ್ಯ ರಾಷ್ಟ್ರದಲ್ಲಿ, ಪಾಂಚಾಲನಗರದಲ್ಲಿ ಪಾಂಚಾಲನೆಂಬ ರಾಜನಿದ್ದ. ಆತ ಅಧರ್ಮದಿಂದ ಅನುಚಿತವಾದ ಕಾರ್ಯಗಳನ್ನು ಮಾಡುತ್ತ ಸ್ವಾರ್ಥಿಯಾಗಿದ್ದ. ರಾಜನೇ ಹಾಗಾದ ಮೇಲೆ ಮಂತ್ರಿಗಳು, ಅಧಿಕಾರಿಗಳು, ನೌಕರರು, ಸೇವಕರು ಎಲ್ಲರೂ ಅಧರ್ಮಿಗಳಾಗಿ ಪ್ರಜೆಗಳನ್ನು ತೆರಿಗೆಗಾಗಿ ಪೀಡಿಸಿ ಅವರ ಮೇಲೆ ದಬ್ಬಾಳಿಕೆ, ಅತ್ಯಾಚಾರಗಳನ್ನು ಮಾಡಿ ಭಯ ಹುಟ್ಟಿಸಿದ್ದರು. ಹೀಗಾಗಿ ಊರ ಜನರೆಲ್ಲ ಮನೆಗಳನ್ನು ಖಾಲಿ ಮಾಡಿಕೊಂಡು, ಹೆಂಡತಿ ಮಕ್ಕಳನ್ನು ಕರೆದುಕೊಂಡು ಕಾಡಿಗೆ ಹೋಗಿ ಅಲ್ಲಿ ಕಾಡು ಜನರಂತೆಯೇ ಬಾಳುತ್ತಿದ್ದರು. ರಾಜ ಸೇವಕರ ಭಯದಿಂದ ಬೆಳಗಾಗುತ್ತಲೇ ಮನೆಗಳನ್ನು ತೊರೆದು ಹೋಗುವಾಗ ಮನೆಗಳ ಸುತ್ತ ಮುಳ್ಳುಗಳನ್ನು ಹಾಕಿ ಹೋಗುತ್ತಿದ್ದರು. ಆದರೆ ಕಳ್ಳರು ರಾತ್ರಿಯಲ್ಲಿ ಹಾಗೂ ರಾಜಸೇವಕರು ಹಗಲಿನಲ್ಲಿ ಅವರ ಮನೆಗಳನ್ನು ದೋಚುತ್ತಿದ್ದರು.

ಆ ಕಾಲದಲ್ಲಿ ಬೋಧಿಸತ್ವ ನಗರದ ಹೊರಗಿದ್ದ ತಿಂದುಕ ವೃಕ್ಷದ ಮೇಲೆ ದೇವತೆಯಾಗಿದ್ದ. ರಾಜ ಅವನಿಗಾಗಿ ಪ್ರತಿವರ್ಷ ಸಾವಿರ ಬಲಿಗಳನ್ನು ಕೊಡುತ್ತಿದ್ದ. ಬೋಧಿಸತ್ವ ಯೋಚಿಸಿದ, ‘ಈ ರಾಜ ತುಂಬ ಪ್ರಮಾದಿಯಾಗಿದ್ದಾನೆ, ದುರ್ಮಾರ್ಗಿಯಾಗಿದ್ದಾನೆ. ಆದರೆ ನನ್ನ ಮಟ್ಟಿಗೆ ಒಳ್ಳೆಯವನೇ ಆಗಿದ್ದಾನೆ. ಆದರೂ ಆತನಿಗೆ ಸರಿಯಾಗಿ ಬೋಧೆ ಮಾಡಿ ದೇಶವನ್ನು ಸರಿದಾರಿಗೆ ತರಬೇಕು’. ಅಂದೇ ರಾತ್ರಿ ಪಾಂಚಾಲರಾಜನ ಶಯನಗೃಹಕ್ಕೆ ಹೋಗಿ ಬಾಲಸೂರ್ಯನಂತೆ ನಿಂತುಕೊಂಡು ರಾಜನಿಗೆ ಹೇಳಿದ, ‘ರಾಜಾ, ನೀನು ರಾಜಧರ್ಮವನ್ನು ಪಾಲಿಸುತ್ತಿಲ್ಲ. ನೀನು ಮಾಡುವ ಅಧರ್ಮದಿಂದಾಗಿ ಇಡೀ ದೇಶ ನರಳುತ್ತಿದೆ. ನಿನ್ನ ಅಧಿಕಾರಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಹೀಗೆಯೇ ಮುಂದುವರೆದರೆ ನೀನು ಅವೀಚೀ ನರಕಕ್ಕೆ ಹೋಗುತ್ತೀ’.

ಮರುದಿನ ರಾಜ ತನ್ನ ಪುರೋಹಿತನನ್ನು ಕರೆದುಕೊಂಡು ತನ್ನ ರಾಜ್ಯವನ್ನು ನೋಡಿ ಬರಲು ಮಾರುವೇಷದಲ್ಲಿ ಹೊರಟ. ಅಗ ಒಂದು ಮನೆಯ ಮುಂದೆ ಹಾಕಿದ್ದ ರಾಶಿ ಮುಳ್ಳುಗಳನ್ನು ಮುದುಕನೊಬ್ಬ ತೆಗೆಯುತ್ತಿದ್ದ. ಅವನ ಕಾಲಿಗೊಂದು ದಪ್ಪ ಮುಳ್ಳು ಚುಚ್ಚಿತು. ಆತ ಆಕ್ರೋಶದಿಂದ, ‘ನನಗೆ ಮುಳ್ಳು ಚುಚ್ಚಿದಾಗ ಹೇಗೆ ನೋವಾಯಿತೋ ಹಾಗೆಯೇ ಈ ರಾಜನಿಗೆ ಯುದ್ಧದಲ್ಲಿ ಬಾಣ ಚುಚ್ಚಿ ನೋವಾಗಲಿ’ ಎಂದ. ಆತ ಹಾಗೆ ನಿಂದಿಸಿದ್ದು ಬೋಧಿಸತ್ವನ ಪ್ರೇರಣೆಯಿಂದಲೇ, ‘ಅಲ್ಲಪ್ಪ, ನಿನಗೆ ಕಣ್ಣು ಸರಿಯಾಗಿ ಕಾಣದೆ ಮುಳ್ಳು ತುಳಿದು, ರಾಜನನ್ನೇಕೆ ಶಪಸುತ್ತೀ?’ ಎಂದು ಕೇಳಿದ ರಾಜ. ‘ಅಯ್ಯೋ ಈ ದರಿದ್ರ ರಾಜನಿಂದಾಗಿ ನಾವೆಲ್ಲ ಅಭದ್ರರಾಗಿದ್ದೇವೆ. ಕಳ್ಳರು, ರಾಜಭಟರಿಬ್ಬರೂ ನಮ್ಮನ್ನು ದೋಚುತ್ತಿದ್ದಾರೆ. ಇದಕ್ಕೆಲ್ಲ ಅಧರ್ಮಿ ರಾಜನೇ ಕಾರಣ’ ಎಂದ ಮುದುಕ. ಇದೇ ರೀತಿ ತನ್ನ ಇಬ್ಬರು ಹೆಣ್ಣುಮಕ್ಕಳ ಭದ್ರತೆಗೆ ಚಿಂತಿಸಿದ ತಾಯಿ, ಕಷ್ಟಪಡುತ್ತಿದ್ದ ರೈತ, ಎಲ್ಲರೂ ರಾಜನಿಗೆ ಶಾಪ ಹಾಕುತ್ತಿದ್ದರು. ಇನ್ನೊಂದು ಮನೆಯ ಮುಂದೆ ರಾಜಭಟರು ಚರ್ಮ ಬೇಕೆಂದು ಎಳೆಕರುವನ್ನು ಕೊಂದು, ಚರ್ಮವನ್ನು ಸುಲಿಯುತ್ತಿದ್ದರು. ಪಾಪ! ಹಸು ಪುತ್ರಶೋಕವನ್ನು ತಾಳದೆ ಕಣ್ಣೀರು ಸುರಿಸುತ್ತ ನಿಂತಿತ್ತು. ಅದೂ ಕೂಡ ರಾಜನಿಗೆ ಶಾಪಕೊಟ್ಟಂತೆ ಭಾಸವಾಯಿತು. ರಾಜನ ಕಣ್ಣು ತೆರೆಯಿತು.

ಒಬ್ಬ ರಾಜ ಅನಾಚಾರಿಯಾದರೆ, ಅಧರ್ಮಿಯಾದರೆ, ಇಡೀ ದೇಶ ಕಂಗೆಡುತ್ತದೆ. ರಾಜಾ ಕಾಲಸ್ಯ ಕಾರಣಂ. ರಾಜನ ನಡತೆಯಿಂದಲೇ ದೇಶಕ್ಕೆ ಸುಖ ಅಥವಾ ದುಃಖ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT