ಬುಧವಾರ, ಜನವರಿ 22, 2020
18 °C

ಭಗವಂತನ ಮಹಿಮೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಒಡೆಯನಾವೆಡೆಸಾರ್ದನೆಂದು ಪದವಾಸನೆಯ |

‌ತಡಕಿ ಮೂಸುತ ಶುನಕನಲೆದಾಡುವಂತೆ ||

ಬಡಜಗವನೊಳಿತಕೆಂದತ್ತಿತ್ತ ಪುಡುಕಿಸುವ |

ಬೆಡಗು ಶಿವನೊಡವೆಯದೊ – ಮಂಕುತಿಮ್ಮ || 223 ||

ಪದ-ಅರ್ಥ: ಒಡೆಯನಾವೆಡೆ=ಒಡೆಯನು+ಆವೆಡೆ (ಯಾವ ಸ್ಥಳಕ್ಕೆ)+ಸಾರ್ದನೆಂದು=ಹೋದನೆಂದು, ಶುನಕ=ನಾಯಿ, ಬಡಜಗವನೊಳಿತಕೆಂದತ್ತಿತ್ತ=ಬಡಜಗವನು+ಒಳಿತಕೆ+ಎಂದು+ಅತ್ತಿತ್ತ, ಪುಡುಕಿಸುವ=ಹುಡುಕಾಡಿಸುವ

ವಾಚ್ಯಾರ್ಥ: ಯಜಮಾನ ಎಲ್ಲಿಯೋ ಹೋದನೆಂದು ಅವನ ಹೆಜ್ಜೆಯ ವಾಸನೆಯನ್ನು ಹುಡುಕಿ, ಮೂಸುತ್ತ ನಾಯಿ ಅಲೆದಾಡುವಂತೆ, ಈ ಬಡಜಗತ್ತಿನಲ್ಲಿ ಒಳ್ಳೆಯದನ್ನು ಅರಸುತ್ತ, ಹುಡುಕಾಡಿಸುವ ಆಶ್ಚರ್ಯ ಶಿವನ ಮಹಿಮೆಯದು.

ವಿವರಣೆ: ಸೂಫೀ ಪರಂಪರೆಯಲ್ಲಿ ಜಲಾಲುದ್ದೀನ್‍ ರೂಮಿ ಬಹು ದೊಡ್ಡ ಹೆಸರು. ಅತನ ಮಹತ್ವದ ಕವನವೊಂದು ಹೀಗಿದೆ: 

ನಾನು ಹಿಂದೂ ದೇವಸ್ಥಾನಕ್ಕೆ ಹೋದೆ; ಅತ್ಯಂತ ಹಳೆಯ ಬೌದ್ಧರ ಪಗೋಡಾಗಳಿಗೆ ಹೋದೆ, ಅಲ್ಲಿ ಎಲ್ಲಿಯೂ ಅವನಿರುವ ಲಕ್ಷಣ ಕಾಣಲಿಲ್ಲ,

ನಾನು ಹೇರತ್‍ನ ಎತ್ತರದ ಪ್ರದೇಶಗಳಲ್ಲಿ ಸುತ್ತಾಡಿದೆ, ಕಂದಹಾರಕ್ಕೆ ಹೋದೆ, ಅವನು ಎತ್ತರದ ಪ್ರದೇಶಗಳಲ್ಲಿ ಇರಲಿಲ್ಲ, ಕೆಳಗಿನ ಕಣಿವೆಗಳಲ್ಲೂ ಕಾಣಲಿಲ್ಲ. ನಾನು ಪ್ರಯತ್ನ ಬಿಡದೆ ಅದ್ಭುತವಾದ ಕಾಪ್ ಪರ್ವತಗಳ ಶಿಖರಗಳನ್ನೇರಿದೆ,ಅಲ್ಲಿ ಅವನು ಕಾಣಲೇ ಇಲ್ಲ. ಅಲ್ಲಿ ಕೇವಲ ನಾನು ಕಲ್ಪನೆಗಳಲ್ಲಿ ಮಾತ್ರ ಕೇಳಿದ್ದ ಅಂಕಾ ಪಕ್ಷಿಗಳು ಕಂಡವು.

ಅಲ್ಲಿಂದ ನಾನು ಮೆಕ್ಕಾದ ಕಾಬಾಕ್ಕೆ ಬಂದೆ, ಅವನು ಅಲ್ಲಿಯೂ ಇಲ್ಲ.

ಹಾಗಾದರೆ ಅವನು ಎಲ್ಲಿದ್ದಾನೆ ಎಂದು ಜಗತ್ ಪ್ರಸಿದ್ಧ ದಾರ್ಶನಿಕನನ್ನು ಕೇಳಿದೆ. ಆ ದಾರ್ಶನಿಕನ ದರ್ಶನಕ್ಕೇ ಅವನು ಸಿಗಲಿಲ್ಲ.

ಕೊನೆಗೆ ನಾನು ಕ್ಷಣಕಾಲ ನಿಂತು, ಸುಧಾರಿಸಿಕೊಂಡು ನನ್ನ ಹೃದಯದೊಳಗೇ ನೋಡಿದೆ.

ಆಹಾ! ಅವನು ಅಲ್ಲಿಯೇ ಇದ್ದಾನೆ.

ತನ್ನದೇ ಸ್ಥಳದಲ್ಲಿ ವಿರಾಜಮಾನನಾಗಿದ್ದಾನೆ

ಅವನನ್ನು ನಾನು ಕಂಡೆ

ಅವನು ಮತ್ತಾವ ಸ್ಥಳದಲ್ಲಿಯೂ ಇಲ್ಲ.

ಇದೊಂದು ಅದ್ಭುತ ಕವಿತೆ. ಮನುಷ್ಯ ದೇವರನ್ನು, ಸೊಬಗನ್ನು, ಸೌಂದರ್ಯವನ್ನು, ಒಳಿತನ್ನು ಅರಸಿ ಪ್ರಪಂಚದ ಮೂಲೆ ಮೂಲೆಗೆ ಅಲೆಯುತ್ತಾನೆ, ಎಲ್ಲಿಯೂ ಅದನ್ನು ಕಾಣದೆ ಒದ್ದಾಡುತ್ತಾನೆ. ಆದರೆ ಕೊನೆಗೆ ಅರ್ಥವಾಗುವುದೇನೆಂದರೆ ತಾನು ಅರಸಿ, ಹುಡುಕುತ್ತಿರುವ ಆ ವಸ್ತು, ಭಾವನೆ, ಸಂತೋಷ ತನ್ನ ಹೃದಯದಲ್ಲೇ ಇದೆ, ಹೊರಗೆ ಅರಸುವುದು ವ್ಯರ್ಥ.

ಇದನ್ನು ಕಗ್ಗ ಹೇಳುವ ಬಗೆ ಎಷ್ಟು ಸುಂದರವಾದದ್ದು! ತನ್ನ ಯಜಮಾನ ಎಲ್ಲಿಯೋ ಹೋದನೆಂದು ಭಯಪಟ್ಟ ನಾಯಿ ಅವನನ್ನು ಹುಡುಕುವುದಕ್ಕೆ ಅವನ ಪಾದದ ವಾಸನೆಯನ್ನೇ ಮೂಸಿ, ಹುಡುಕುತ್ತ ಅಲೆದಾಡುವಂತೆ ಮನುಷ್ಯ ಈ ಹೊರಜಗತ್ತಿನಲ್ಲಿ ಅತ್ತಿತ್ತ ಧಾವಿಸುತ್ತ ಸಂತೋಷವನ್ನು ಹುಡುಕಾಡುತ್ತಾನೆ. ಅವನಿಗೆ ಆ ಬಡಜಗತ್ತಿನಲ್ಲಿ ಅದು ದೊರಕದು. ಯಾಕೆಂದರೆ ಅದು ಇರುವುದು ಅವನ ಹೃದಯದಲ್ಲೇ, ಹೊರಗಿಲ್ಲ. ಹೀಗೆ ಹೃದಯದಲ್ಲೇ ಸಂತೋಷದ ಬುಗ್ಗೆಯನ್ನಿಟ್ಟುಕೊಂಡೂ ಅದನ್ನು ಹೊರಗೇ ಹುಡುಕುವಂತೆ ಮಾಡುವುದು ಭಗವಂತನ ಆಶ್ಚರ್ಯಕರವಾದ ಮಹಿಮೆ.

ಪ್ರತಿಕ್ರಿಯಿಸಿ (+)