ಭಾನುವಾರ, ಜನವರಿ 26, 2020
28 °C

ಮುಕ್ತಿ ನೀಡದ ಮೋಸ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಇಂದ್ರನಾಗಿದ್ದ. ಆಗ ಒಬ್ಬ ಬ್ರಾಹ್ಮಣ ತರುಣ ಬಿಲ್ಲುವಿದ್ಯೆಯಲ್ಲಿ ಕಲ್ಪನಾತೀತವಾದ ಶಕ್ತಿಯನ್ನು ಸಂಪಾದಿಸಿದ. ಅವನ ಗುರು, ಶಿಷ್ಯನ ಶಕ್ತಿಯನ್ನು ಕಂಡು, ಮೆಚ್ಚಿ ತನ್ನ ಮಗಳನ್ನೇ ಕೊಟ್ಟು ಮದುವೆ ಮಾಡಿದ. ತರುಣ ತನ್ನ ಸುಂದರಿಯಾದ ಪತ್ನಿಯನ್ನು ಕರೆದುಕೊಂಡು ವಾರಾಣಸಿಗೆ ಹೊರಟ. ದಾರಿಯಲ್ಲಿ ಒಂದು ಭಯಂಕರವಾದ ಕಾಡು ಬಂದಿತು. ಜನರು ಬೇಡವೆಂದು ಹೇಳಿದರೂ ಕೇಳದೆ ಆತ ಪತ್ನಿಯೊಂದಿಗೆ ಕಾಡಿನೊಳಗೆ ನುಗ್ಗಿದ. ಒಂದು ಬಲಶಾಲಿಯಾದ ಆನೆ ಅವನತ್ತ ನುಗ್ಗಿ ಬಂದಿತು. ಆತ ಬೆದರದೆ ಆನೆಯ ಕುಂಭಸ್ಥಳಕ್ಕೆ ಬಾಣ ಬಿಟ್ಟ. ಅದು ಕುಂಭಸ್ಥಳವನ್ನು ಸೀಳಿ ಹೊರಗೆ ಹೋಗಿ ಬಿಟ್ಟಿತು. ಆನೆ ಸತ್ತು ಬಿತ್ತು.

ಪತಿ-ಪತ್ನಿ ಮತ್ತೊಂದು ಕಾಡಿನೊಳಗೆ ಹೋದಾಗ ಅಲ್ಲಿ ಐವತ್ತು ಜನ ದರೋಡೆಕೋರರು ತಾವು ಕೊಂದಿದ್ದ ಪ್ರಾಣಿಗಳನ್ನು ಬೇಯಿಸಿ ಅವುಗಳ ಮಾಂಸವನ್ನು ತಿನ್ನುತ್ತ ಕುಳಿತಿದ್ದರು. ಈ ದಂಪತಿಯನ್ನು  ಕಂಡು ಅವರನ್ನು ಲೂಟಿ ಮಾಡಲು ಎದ್ದು ಬಂದರು. ಆದರೆ ಅವರ ನಾಯಕ ಬುದ್ಧಿವಂತ. ತರುಣನ ಅಂಗಸೌಷ್ಠವವನ್ನು ಮತ್ತು ಅವನ ಬಿಲ್ಲನ್ನು ಕಂಡು ತಂಡಕ್ಕೆ ಹೇಳಿದ, “ಆತನನ್ನು ಮುಟ್ಟಬೇಡಿ, ಆತ ಅಸಾಧ್ಯಶೂರ, ನಿಮ್ಮನ್ನು ಕೊಂದುಬಿಡುತ್ತಾನೆ”. ಆದರೂ ಅವರು ಮುಂದೆ ಬಂದಾಗ ತರುಣ ಒಂದೊಂದು ಬಾಣದಿಂದ ಒಬ್ಬೊಬ್ಬರಂತೆ ನಾಯಕನೊಬ್ಬನನ್ನುಳಿದು ಎಲ್ಲರನ್ನೂ ಕೊಂದು ಹಾಕಿದ. ಅವನ ಬಳಿ ಇದ್ದದ್ದೇ ಐವತ್ತು ಬಾಣಗಳು. ಈಗ ಅವೆಲ್ಲ ಮುಗಿದು ಹೋಗಿದ್ದವು. ತಾನು ಈ ಕಳ್ಳರ ನಾಯಕನನ್ನು ಕೊಂದು ಬಿಡಬೇಕೆಂದು ಹೆಂಡತಿಗೆ ಕತ್ತಿಯನ್ನು ಕೊಡಲು ಹೇಳಿದ. ಇದುವರೆಗೂ ನಾಯಕನನ್ನು ಗಮನಿಸುತ್ತಲೇ ಇದ್ದ ತರುಣಿ ಅವನಲ್ಲಿ ಅನುರಕ್ತಳಾದಳು.

ಗಂಡ ಕತ್ತಿಯನ್ನು ಕೊಡ ಹೇಳಿದಾಗ ಆಕೆ ಅದನ್ನು ತಂದು ಇಬ್ಬರ ನಡುವೆ ಹಿಡಿದು ಬರೆ ಗಂಡನಿಗೆ ಬರುವಂತೆ ಮತ್ತು ಕತ್ತಿ ಕಳ್ಳರ ನಾಯಕನಿಗೆ ಸಿಗುವಂತೆ ಮಾಡಿದಳು. ಕ್ಷಣಾರ್ಧದಲ್ಲಿ ಕಳ್ಳರ ನಾಯಕ ಕತ್ತಿಯಿಂದ ತರುಣನ ತಲೆಯನ್ನು ಕತ್ತರಿಸಿಬಿಟ್ಟ. ಆಕೆ ನಾಯಕನಿಗೆ ಹೇಳಿದಳು. “ಅಂತೂ ನನ್ನ ಗಂಡನ ಪೀಡೆ ಕಳೆಯಿತು. ನಾವಿಬ್ಬರೂ ಸುಖವಾಗಿ ಇರೋಣ”. ನಾಯಕ ಯೋಚಿಸಿದ. ಒಂದು ಕ್ಷಣದಲ್ಲೇ ನನಗೆ ಮೋಹಗೊಂಡು ತನ್ನ ಗಂಡನನ್ನೇ ಕೊಲ್ಲಿಸಿದ ಈಕೆ ಮತ್ತೊಬ್ಬನನ್ನು ಮೋಹಿಸಿ ನನ್ನನ್ನು ಕೊಲ್ಲಿಸುವುದು ಖಚಿತ. ಈಕೆಯಿಂದ ತಾನು ಪಾರಾಗಿ ಹೋಗಬೇಕು ಎಂದು ತೀರ್ಮಾನಿಸಿದ.

ಮುಂದೆ ಒಂದು ನದಿ ಬಂದಿತು. ಅದನ್ನು ದಾಟುವುದು ಹೇಗೆ ಎಂದು ಚಿಂತಿಸುವಾಗ ಆಕೆ ಹೇಳಿದಳು, ನನ್ನ ಆಭರಣಗಳನ್ನೆಲ್ಲ ನಿಮ್ಮ ಬಟ್ಟೆಯಲ್ಲಿ ಕಟ್ಟಿಕೊಂಡು ಆ ದಡಕ್ಕೆ ಹೋಗಿ ಇಟ್ಟು ಮರಳಿ ಬಂದು ನನ್ನನ್ನು ಕರೆದುಕೊಂಡು ಹೋಗಿ”. ಆತ ಆಭರಣಗಳನ್ನು ಕಟ್ಟಿಕೊಂಡು ಆ ದಂಡೆಗೆ ಹೋಗಿ, ಅಲ್ಲಿಂದ ತಿರುಗಿಯೂ ನೋಡದೆ ಹೊರಟು ಹೋಗಿಬಿಟ್ಟ. ಗಂಡನನ್ನು ಮತ್ತು ಈಗ ಪ್ರೇಮಿಸಿದವನನ್ನು ಕಳೆದುಕೊಂಡು ಪೆಚ್ಚಾಗಿ ಕೂತಿದ್ದಳು ಈಕೆ. ಆಗ ಅವಳ ಮುಂದೆ ಒಂದು ನರಿ ಬಾಯಲ್ಲಿ ಮಾಂಸದ ತುಂಡನ್ನು ಹಿಡಿದುಕೊಂಡು ಬಂದಿತು. ನೀರಿನಿಂದ ಛಕ್ಕನೇ ಹಾರಿದ ಮೀನು ದಂಡೆಯಲ್ಲಿ ಬಿತ್ತು. ಅದನ್ನು ಪಡೆಯಲು ನರಿ ತನ್ನ ಬಾಯಲ್ಲಿದ್ದ ಮಾಂಸವನ್ನು ಬಿಟ್ಟು ಓಡಿತು. ದಂಡೆಯಲ್ಲಿದ್ದ ಮೀನು ಮತ್ತೆ ಛಂಗನೇ ಹಾರಿ ನೀರಿಗೆ ಹೋಯಿತು.

ನಿರಾಸೆಯಿಂದ ನರಿ ಮಾಂಸದತ್ತ ಬರುವಾಗ ಪಕ್ಷಿಯೊಂದು ಅದನ್ನೆತ್ತಿಕೊಂಡು ಹಾರಿಹೋಯಿತು. ಅದನ್ನು ಕಂಡು ತರುಣಿ. “ಹುಚ್ಚ ನರಿ, ಎರಡನ್ನೂ ಕಳೆದುಕೊಂಡೆಯಲ್ಲ?” ಎಂದು ನಕ್ಕಳು. ಆಗ ನರಿ, “ಅಮ್ಮಾ ನಾನು ಕಳೆದುಕೊಂಡದ್ದು ಕೇವಲ ಮಾಂಸದ ತುಂಡು, ಆದರೆ ನೀನು ಬದುಕನ್ನೇ ಕಳೆದುಕೊಂಡೆಯಲ್ಲ” ಎಂದು ಹೇಳಿ ಓಡಿಹೋಯಿತು. ಆಗ ಆಕೆ, “ಆಯ್ತು, ನಾನು ಗಂಡನನ್ನೇ ಸೇರಿಕೊಳ್ಳುತ್ತೇನೆ” ಎಂದು ನದಿಯಲ್ಲಿ ಹಾರಿ ಪ್ರಾಣ ಬಿಟ್ಟಳು.

ಮೋಸ ಮಾಡುವುದು ಸುಲಭ, ಆದರೆ ಮೋಸದಿಂದ ನಮಗೇ ಆಗುವ ಪರಿಣಾಮವನ್ನು ತಪ್ಪಿಸುವುದು ಅಸಾಧ್ಯ. 

ಪ್ರತಿಕ್ರಿಯಿಸಿ (+)