ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಠುರಪ್ರಿಯರು

Last Updated 6 ಜನವರಿ 2020, 19:45 IST
ಅಕ್ಷರ ಗಾತ್ರ

ಸೃಷ್ಟಿಯ ವಿಧಾನದಲಿ ಸೊಟ್ಟುಗಳು ನೂರಿಹುವು |
ನೆಟ್ಟಗಿಪೆನ್ ಅವನ್ ಎಂದು ನರರ ಚಿರದೀಕ್ಷೆ ||
ಇಷ್ಟಗಳನನ್ಯೋನ್ಯವವರೇಕೆ ಬಗೆದಿರರು? |
ನಿಷ್ಠುರ ಪ್ರಿಯರವರು – ಮಂಕುತಿಮ್ಮ || 233 ||

ಪದ-ಅರ್ಥ: ನೆಟ್ಟಗಿಪೆನ್=ನೆಟ್ಟಗಾಗಿಸುವೆನು, ಚಿರದೀಕ್ಷೆ=ಶಾಶ್ವತವಾದ ದೀಕ್ಷೆ, ಇಷ್ಟಗಳನನ್ಯೋನ್ಯವವರೇಕೆ = ಇಷ್ಟಗಳ+ಅನನ್ಯೋನ್ಯತೆ(ಅನ್ಯೋನ್ಯತೆ ಇರದಿದ್ದುದು)+ಅವರೇಕೆ, ಬಗೆದಿರರು=ಬಗೆದು + ಇರರು
ವಾಚ್ಯಾರ್ಥ: ಸೃಷ್ಟಿಯ ವ್ಯವಸ್ಥೆಯಲ್ಲಿ ನೂರಾರು ನ್ಯೂನ್ಯತೆಗಳಿವೆ. ಅವುಗಳನ್ನೆಲ್ಲ ಸರಿಮಾಡುತ್ತೇನೆ ಎಂಬುದು ಮನುಷ್ಯನ ಸತತವಾದ ಪ್ರಯತ್ನ. ಇಷ್ಟಗಳಲ್ಲಿ ಅನ್ಯೋನ್ಯತೆಯು ಇರದಿದ್ದುದನ್ನೇಕೆ ಪರಿಗಣಿಸುವುದಿಲ್ಲ? ಇವರು ನಿಷ್ಠುರಪ್ರಿಯರು.

ವಿವರಣೆ: ಪ್ರಪಂಚದ ವ್ಯವಸ್ಥೆಯಲ್ಲಿ ನೂರಾರು ಕೊರತೆಗಳಿವೆ ಎಂದು ಮನುಷ್ಯ ಭಾವಿಸುತ್ತಾನೆ. ಅವು ಅವನ ದೃಷ್ಟಿಯಿಂದ ಕೊರತೆಗಳು. ಅವೆಲ್ಲವುಗಳನ್ನು ಸರಿಮಾಡುತ್ತೇನೆ ಎಂದು ಸತತವಾಗಿ ಪ್ರಯತ್ನಿಸುತ್ತಾನೆ. ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಯತ್ನ ಪ್ರಕೃತಿಯನ್ನು ಸರಿಪಡಿಸುವುದಲ್ಲ, ಅದು ಪ್ರಕೃತಿಯನ್ನು ತನ್ನ ಅನುಕೂಲತೆಗೆ ಹೊಂದಿಸಿಕೊಳ್ಳುವ ಸ್ವಾರ್ಥದ ಪ್ರಯತ್ನ. ಇಳಿಜಾರಿನ ಕಡೆಗೆ ಹರಿದು ಹೋಗುವುದು ನೀರಿನ ಸ್ವಭಾವ. ಆದರೆ ಮನುಷ್ಯ ಅದನ್ನು ತನಗೆ ಬೇಕಾದ ಕಡೆಗೆ ತಿರುಗಿಸಿ, ಅದಕ್ಕೊಂದು ಕಟ್ಟೆ ಕಟ್ಟಿ ಈಗ ಎಲ್ಲವೂ ಸರಿಯಾಯಿತೆಂದು ತೃಪ್ತಿಪಡುತ್ತಾನೆ. ತನ್ನ ಇಷ್ಟಗಳಿಗೆ ಮತ್ತು ನಿಸರ್ಗಕ್ಕೆ ಅನನ್ಯೋನತೆ ಇರುವುದನ್ನು ಗಮನಿಸುವುದಿಲ್ಲ. ಇಲ್ಲಿಯ ಪದವನ್ನು ಗ್ರಹಿಸಬೇಕು. ಅದು ಅನ್ಯೋನ್ಯತೆಯಲ್ಲ, ಅನನ್ಯೋನತೆ. ಅಂದರೆ ಒಂದು ಇನ್ನೊಂದಕ್ಕೆ ಹೊಂದಿಕೆಯಾದಂತಿರುವುದು, ಅದು ವಿರುದ್ಧವಾಗಿರುವುದು.

ಸೃಷ್ಟಿಯ ಸೊಟ್ಟ, ವಿಕಾರಗಳೇ ತನಗೆ ಪ್ರಯೋಜನಕಾರಿ ಎಂಬುದು ಮನುಷ್ಯನಿಗೆ ತಿಳಿಯುವುದಿಲ್ಲವೇ? ಮೇಲ್ನೋಟಕ್ಕೆ ಅವುಗಳು ವಿರೋಧವೆಂದು ತೋರಬಹುದು. ಆದರೆ ಆಳವಾದ, ಸೂಕ್ಷ್ಮಗ್ರಹಣದಿಂದ ಅವೇ ತಮಗೆ ಸಹಾಯಕವೆಂದು ತೋರೀತು. ಮರುಭೂಮಿಯಿಂದ ಏನೂ ಪ್ರಯೋಜನವಿಲ್ಲ ಎಂದುಕೊಂಡಾಗ ತೈಲ ದೊರೆತದ್ದು ಅಲ್ಲಿಯೇ. ಬಿರುಬಿಸಿಲಿನ ಪ್ರದೇಶದಲ್ಲಿ ಸೌರಶಕ್ತಿಯ ಅನ್ವೇಷಣೆಯಾದದ್ದು. ನಿಸರ್ಗದಲ್ಲಿಯ ಅಸಮಾನತೆ ಒಂದು ಕೊರಗೆಂದು ಭಾವಿಸಿದ ಕಾಲವೊಂದಿತ್ತು. ಈಗ ಅದು ಪ್ರಯೋಜನಕಾರಿಯಾಗಿದೆ. ನಮ್ಮ ಐದು ಬೆರಳುಗಳಲ್ಲಿಯೇ ಅಸಮಾನತೆ ಇಲ್ಲವೇ? ಕಿರುಬೆರಳು ಅಶಕ್ತವೆಂದು ಕಂಡರೂ, ಹೆಬ್ಬೆರಳು ತೂರದ ಸ್ಥಳದಲ್ಲಿ ಅದು ನುಗ್ಗಿ ಕಾರ್ಯಮಾಡಬಲ್ಲದು. ಐದೂ ಬೆರಳುಗಳು ಒಂದೇ ಗಾತ್ರದಲ್ಲಿದ್ದರೆ ಕೈಯಿಂದ ಯಾವ ಕೆಲಸವನ್ನು ಮಾಡುವುದು ಕಷ್ಟವಾಗುತ್ತಿತ್ತು. ಆ ಅಸಮಾನತೆ ಅದರ ದೌರ್ಬಲ್ಯವಲ್ಲ, ಅದು ಶಕ್ತಿವರ್ಧಕವಾದದ್ದು. ಅಭೇದಗಳು ಪರಸ್ಪರ ಪೂರಕಗಳು.ಇದನ್ನು ಅರ್ಥಮಾಡಿಕೊಳ್ಳದಿದ್ದರೆ ನಾವು ತಾಳ್ಮೆಯಿಲ್ಲದವರಾಗುತ್ತೇವೆ, ನಿಷ್ಠುರಪ್ರಿಯರಾಗುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT