ಬುಧವಾರ, ಏಪ್ರಿಲ್ 1, 2020
19 °C

ಅಂತರೀಕ್ಷಣೆಯ ಯೋಗ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ನಾಟಕದೊಳನುವಿಂದ ಬೆರತದನು ಮೆಚ್ಚೆನಿಸಿ |
ನೋಟಕನುಮಾಗಿ ತಾಂ ನಲಿದು ನಲಿಯಿಸುವಾ ||
ಪಾಠವನು ಕಲಿತವನೆ ಬಾಳನಾಳುವ ಯೋಗಿ |
ಆಟಕಂ ನಯವುಂಟು – ಮಂಕುತಿಮ್ಮ || 255 ||

ಪದ-ಅರ್ಥ: ನಾಟಕದೊಳನುವಿಂದ=ನಾಟಕದೊಳು+ಅನುವಿಂದ(ಸಿದ್ಧತೆಯಿಂದ), ಬೆರೆತದನು=ಬೆರೆತು+ಅದನು, ಮೆಚ್ಚೆನಿಸಿ=ಮೆಚ್ಚು+ಎನಿಸಿ, ನೋಟಕನುಮಾಗಿ=ನೋಟಕನುಂ(ಪ್ರೇಕ್ಷಕ)+ಆಗಿ, ನಯ=ರೀತಿ, ಕ್ರಮ

ವಾಚ್ಯಾರ್ಥ: ಬದುಕಿನ ನಾಟಕದಲ್ಲಿ ಸಿದ್ಧತೆಯಿಂದ ಸೇರಿಕೊಂಡು, ಮೆಚ್ಚುವಂತೆ ನಟಿಸಿ, ಅದಕ್ಕೆ ತಾನು ಪ್ರೇಕ್ಷಕನೂ ಆಗಿ ತಾನೂ ನಲಿದು, ಉಳಿದವರನ್ನು ನಲಿಸುವ ಪಾಠವನ್ನು ಕಲಿತವನೇ ಬಾಳಿನ ಯೋಗಿ. ಈ ಆಟಕ್ಕೂ ಒಂದು ರೀತಿಯಿದೆ.

ವಿವರಣೆ: ನಾಟಕದಲ್ಲಿ ಭಾಗವಹಿಸುವ ಒಬ್ಬ ಒಳ್ಳೆಯ ನಟ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಲು ಸಾಕಷ್ಟು ಶ್ರಮಪಡುತ್ತಾನೆ. ಪಾತ್ರಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾನೆ. ಆ ಸಿದ್ಧತೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಆಗಬೇಕು. ಹಾಗೆ ಆದಾಗ ಮಾತ್ರ ಅವನ ಪಾತ್ರ ಜನಕ್ಕೆ ಮೆಚ್ಚುಗೆಯಾಗುತ್ತದೆ. ಪಾತ್ರ ಮೈ ತುಂಬಿ ಬಂದು ಜನ ಮೆಚ್ಚಿದಾಗ ಅವನಿಗೂ ಸಂತೋಷವಾಗುತ್ತದೆ.

ಇನ್ನೊಂದು ವಿಷಯವೆಂದರೆ ಕಲಾವಿದರಿಗೆ, ನಟರಿಗೆ ನಿಜವಾಗಿಯೂ ಸ್ಫೂರ್ತಿ ನೀಡುವುದು ಯಾವುದು ಗೊತ್ತೇ? ಅದು ಪ್ರೇಕ್ಷಕರ ಚಪ್ಪಾಳೆ ಹಾಗೂ ಮೆಚ್ಚುಗೆ. ಪ್ರೇಕ್ಷಕರು ಹೆಚ್ಚಾದಷ್ಟು ನಟನ ಉಮೇದು ಹೆಚ್ಚುತ್ತದೆ. ಖಾಲಿ ರಂಗಮಂದಿರದಲ್ಲಿ ನಟನೆ ಮಾಡುವುದು ಹಿಂಸೆ. ಯಾರೂ ಇಲ್ಲದಿದ್ದಾಗ ನಟನೆ ಮಾಡುವುದು ಹೇಗೆ? ಯಾರಿಗೋಸ್ಕರ?

ತನ್ನ ನಟನೆಗೆ ತಾನೇ ಪ್ರೇಕ್ಷಕನಾದರೆ ಹೇಗಿರುತ್ತದೆ? ಅದು ಕನ್ನಡಿಯ ಮುಂದಿನ ನಟನೆಯೇ? ಇಲ್ಲ, ಇದು ಆತ್ಮೋದ್ಧಾರಕ ಮಾರ್ಗ. ಇಂತಹ ಅದ್ಭುತ ಆಧ್ಯಾತ್ಮಿಕ ಸತ್ಯವನ್ನು ಈ ಕಗ್ಗ ಎಷ್ಟು ಚೆನ್ನಾಗಿ ಮತ್ತು ಸುಲಭವಾಗಿ ಹೇಳುತ್ತದೆ. ಸಂಭ್ರಮದಿಂದ ನಟಿಸಿ, ಅದನ್ನು ತುಂಬ ಸುಂದರವಾಗಿಸಿ ತನ್ನ ನಟನೆಗೆ ತಾನೇ ಪ್ರೇಕ್ಷಕನಾಗಿ, ತಾನೂ ಸಂತೋಷಪಟ್ಟು, ಎಲ್ಲರನ್ನೂ ಸಂತೋಷಪಡಿಸುವ ಪಾಠವನ್ನು ಕಲಿತವನೇ ಯೋಗಿ ಎನ್ನುತ್ತದೆ. ಇದೆಂಥ ಯೋಗ? ತನ್ನನ್ನು ತಾನೇ ಗಮನಿಸುವ ಯೋಗ. ಅಂತರೀಕ್ಷಣೆಯಿಂದ ತನ್ನಾತ್ಮ ದರ್ಶನವನ್ನು ಮಾಡಿಕೊಳ್ಳುವ ಯೋಗ.

ಮತ್ತೊಬ್ಬರನ್ನು ಮೆಚ್ಚಿಸಲು ಬಯಸದೆ, ಬೇರೆಯವರ ಹೊಗಳಿಕೆಗೆ ಉಬ್ಬದೆ, ಕೇವಲ ತನ್ನ ಮನಸ್ಸನ್ನೇ ಗಮನಿಸುತ್ತ, ತನ್ನ ಹೃದಯಶುದ್ಧಿಯನ್ನು ಮಾಡಿಕೊಳ್ಳುತ್ತ, ತನ್ನ ಊರ್ಧ್ವಮುಖ ಯಾತ್ರೆಯನ್ನು ನೋಡುತ್ತ ತಾನೇ ಸಂತೋಷಪಡುವುದು ಒಂದು ಯೋಗವೇ ಸರಿ. ಇದೊಂದು ನಾಟಕದ ಆಟ. ಅದಕ್ಕೂ ಒಂದು ಕ್ರಮವಿದೆ. ತನ್ನ ಮನಸ್ಸಿನ ಆಟಕ್ಕೆ ತಾನೇ ನೋಟಕನಾಗಿ ಅದನ್ನು ನಿಗ್ರಹಿಸುತ್ತ ಬೆಳೆಸುತ್ತ ಸಂತೋಷಿಸುವುದು ಯೋಗಸಾಧನೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)