ಸೋಮವಾರ, ಏಪ್ರಿಲ್ 6, 2020
19 °C

ಬೆರಗಿನ ಬೆಳಕು: ದಾನದ ಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿರುವಾಗ ಬೋಧಿಸತ್ವ ಅತ್ಯಂತ ದರಿದ್ರನಾಗಿ ಹುಟ್ಟಿದ್ದ. ದೊಡ್ಡವನಾದ ಶ್ರೇಷ್ಠಿಯೊಬ್ಬನ ಕಡೆಗೆ ಕೂಲಿ ಮಾಡುತ್ತ ಬದುಕು ಸಾಗಿಸುತ್ತಿದ್ದ.

ಒಂದು ದಿನ ಕೆಲಸಕ್ಕೆ ಹೊರಡುವಾಗ ಮಧ್ಯಾಹ್ನದ ಊಟಕ್ಕೆಂದು ಅನ್ನದ ನಾಲ್ಕು ಉಂಡೆಗಳನ್ನು ಮಾಡಿಕೊಂಡು ಚೀಲದಲ್ಲಿ ಹಾಕಿಕೊಂಡಿದ್ದ. ದಾರಿಯಲ್ಲಿ ನಾಲ್ಕು ಜನ ಪ್ರತ್ಯೇಕ ಬುದ್ಧರು ಎದುರಾದರು. ಅವರು ಭಿಕ್ಷೆಗೆ ಹೋಗು.ವುದನ್ನು ತಿಳಿದು, ‘ಭಂತೇ, ತಾವು ಒಪ್ಪುವುದಾದರೆ ನನ್ನ ಬಳಿ ಇದ್ದ ನಾಲ್ಕು ಅನ್ನದ ಉಂಡೆಗಳನ್ನು ತಾವು
ಸ್ವೀಕರಿಸಬಹುದು’ ಎಂದು ಕೇಳಿದ. ಅವರು ಒಪ್ಪಿದಾಗ ಅಲ್ಲಿಯೇ ನೆಲವನ್ನು ಶುದ್ಧಮಾಡಿ, ಅದರ ಮೇಲೆ ಹಸಿರು ಎಲೆಗಳನ್ನು ಹಾಸಿ, ಅವರನ್ನು ಕೂಡ್ರಿಸಿ ಭಿಕ್ಷೆಯನ್ನು ನೀಡಿದ. ಅವರು ಅವನನ್ನು ಆಶೀರ್ವದಿಸಿ ಹೊರಟರು.

ಮುಂದೆ ಬೋಧಿಸತ್ವ ತನ್ನ ಕರ್ಮ ಸವೆಯುವವರೆಗೆ ಬದುಕಿದ್ದು ನಂತರ ತೀರಿಕೊಂಡ. ಮರುಹುಟ್ಟಿನಲ್ಲಿ ಆತ ವಾರಾಣಸಿಯ ರಾಜನ ಮಗನಾಗಿ ಹುಟ್ಟಿದ. ತಕ್ಷಶಿಲೆಗೆ ಹೋಗಿ ಅತ್ಯುತ್ತಮ ಶಿಕ್ಷಣ ಪಡೆದು ಬಂದ. ತಂದೆಯ ಕಾಲಾನಂತರ ತಾನೇ ರಾಜನಾದ. ಒಂದು ದಿನ ತನ್ನ ದರ್ಬಾರಿನಲ್ಲಿ ಕುಳಿತು ಅದರ ವೈಭವವನ್ನು ಗಮನಿಸುತ್ತಿದ್ದ. ತನ್ನದು ಶ್ವೇತಛತ್ರದಿಂದ ಅಲಂಕೃತವಾದ ಬಂಗಾರದ ಸಿಂಹಾಸನ, ಎಡಗಡೆಗೆ ಸಾಲಾಗಿ ಕುಳಿತ ಅಮಾತ್ಯರ ಸಾಲು, ಇನ್ನೊಂದೆಡೆಗೆ ಶಾಸ್ತ್ರಗಳನ್ನು ಓದಿಕೊಂಡ ಪಂಡಿತರು, ಎದುರಿಗೆ ಕಾಣಿಕೆಗಳನ್ನು ಹಿಡಿದುಕೊಂಡು ನಿಂತಿದ್ದ ಅತ್ಯಂತ ಸುಂದರಿಯರಾದ ನೃತ್ಯಗಾತಿಯರು. ಈ ನಯನ ಮನೋಹರವಾದ ವೈಭವವನ್ನು ನೋಡುತ್ತಿರುವಾಗ ಅವನಿಗೆ ತನ್ನ ಹಿಂದಿನ ಜನ್ಮದ ಸ್ಮರಣೆಯಾಯಿತು. ತಾನು ಪ್ರತ್ಯೇಕ ಬುದ್ಧರಿಗೆ, ತನಗಾಗಿ ಇಟ್ಟುಕೊಂಡಿದ್ದ ಆಹಾರವನ್ನು ನೀಡಿದ್ದು, ಅವರು ಆಶೀರ್ವದಿಸಿದ್ದು ಇವೆಲ್ಲ ಕನ್ನಡಿಯಲ್ಲಿ ಕಂಡಂತೆ ಸ್ಪಷ್ಟವಾಗಿ ಕಂಡವು. ತಾನು ನೀಡಿದ ಅಲ್ಪದಾನವೇ ತನಗೆ ಈ ಸಮೃದ್ಧಿಯನ್ನು ತಂದುಕೊಟ್ಟಿದ್ದು ಎಂದು ಹೊಳೆಯಿತು. ಆತ ಅತ್ಯಂತ ಕೃತಜ್ಞತೆಯಿಂದ ತಲೆಬಾಗಿದ. ನಂತರ ಒಂದು ಪದ್ಯವನ್ನು ರಚಿಸಿ, ಅದರಲ್ಲಿ ದಾನದ ಮಹತ್ವವನ್ನು ಕೊಂಡಾಡಿದ. ಒಂದು ರೀತಿಯಲ್ಲಿ ಆ ಪದ್ಯ ರಾಷ್ಟ್ರಗೀತೆಯೇ ಆಯಿತು.

ಒಂದು ದಿನ ಈ ಹಾಡನ್ನು ಕೇಳುವಾಗ ರಾಜ ಭಾವೋದ್ವೇಗಕ್ಕೆ ಒಳಗಾದ. ಅದನ್ನು ಕಂಡ ರಾಣಿ, ‘ಪ್ರಭೂ, ಈ ಹಾಡನ್ನು ಕೇಳಿದಾಗೆಲ್ಲ ನಿಮಗೆ ಹೀಗೆ ಭಾವವೇಶವಾಗುತ್ತಲ್ಲ, ಏಕೆ? ಇದರ ಹಿಂದೆ ಏನಾದರೂ ವಿಶೇಷ ಇದೆಯೇ?’ ಎಂದಳು. ಆಗ ರಾಜ ತನ್ನ ಹಿಂದಿನ ಜನ್ಮದ ಪ್ರಸಂಗವನ್ನು ಹೇಳಿ, ಆ ದಾನದ ಮಹಿಮೆಯಿಂದಲೇ ತನಗೆ ಈ ಸೌಭಾಗ್ಯ ದೊರಕಿದ್ದು ಎಂದು ಹೇಳಿದ. ಆಗ ರಾಣಿಯೂ ಹೇಳಿದಳು, ‘ನನಗೂ ಈಗ ನೆನಪಾಯಿತು, ನಾನೂ ಹಿಂದಿನ ಜನ್ಮದಲ್ಲಿ ಕ್ಷತ್ರಿಯನ ಮನೆಯಲ್ಲಿ ಸೇವಕಿಯಾಗಿದ್ದೆ. ಒಂದು ದಿನ ಊಟ ಮಾಡಲು ಕುಳಿತಿದ್ದಾಗ ಅಲ್ಲಿಗೆ ಬಂದ ಭಿಕ್ಷುವಿಗೆ ನನ್ನ ಊಟವನ್ನು ನೀಡಿ ಉಪವಾಸವಿದ್ದೆ. ಈಗ ನನಗೆ ದೊರೆತದ್ದು ಅದರ ಫಲ’.

ಹಿಂದಿನ ಜನ್ಮದಲ್ಲಿ ನಾವು ಏನಾಗಿದ್ದೆವೋ, ಏನು ಮಾಡಿದೆವೋ ತಿಳಿಯದು. ಅಂತೆಯೇ ಮುಂದಿನ ಜನ್ಮವಿದೆಯೋ ಇಲ್ಲವೋ, ಇದ್ದರೆ ಏನಾಗುತ್ತೇವೆ ಎಂಬುದು ಗೊತ್ತಿಲ್ಲ. ಆದರೆ ನಾವು ಮಾಡಿದ ಒಳ್ಳೆಯ ಕಾರ್ಯ, ದಾನ ಈ ಜನ್ಮದಲ್ಲೇ ಪ್ರತಿಫಲ ನೀಡುತ್ತದೆಂಬುದು ಮಾತ್ರ ಸತ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)