ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಸೃಷ್ಟಿ ಶೈಲದ ಶಿಖರ

Last Updated 19 ಆಗಸ್ಟ್ 2020, 21:20 IST
ಅಕ್ಷರ ಗಾತ್ರ

ಎಷ್ಟು ಬಗೆ ಯಂತ್ರಗಳೊಳೆಷ್ಟು ರಸಮಿಶ್ರದಿಂ |
ದೆಷ್ಟಾದಿಭೂತಗಳು ಪರಿಪಾಕವೊಂದಿ ||
ಒಟ್ಟು ಸೇರಿಹವು ನರನೆಂಬ ಸಿದ್ಧಿಯೊಳವನು |
ಸೃಷ್ಟಿ ಶೈಲದ ಶಿಖರ – ಮಂಕುತಿಮ್ಮ || 325 ||

ಪದ-ಅರ್ಥ: ಯಂತ್ರಗಳೊಳೆಷ್ಟು=ಯಂತ್ರಗಳೊಳು+ಎಷ್ಟು, ರಸಮಿಶ್ರದಿಂದೆಷ್ಟಾದಿ ಭೂತಗಳು=ರಸಮಿಶ್ರದಿಂದೆ+ಎಷ್ಟು+ಆದಿಭೂತಗಳು, ಸಿದ್ಧಿಯೊಳವನು=ಸಿದ್ಧಿಯೊಳು+ಅವನು, ಸೃಷ್ಟಿ ಶೈಲದ=ಸೃಷ್ಟಿಯೆಂಬ ಬೆಟ್ಟದ.

ವಾಚ್ಯಾರ್ಥ: ಮನುಷ್ಯನೆಂಬುವನು ಈ ಸೃಷ್ಟಿಯೆಂದ ಪರ್ವತದ ಶಿಖರ. ಯಾಕೆಂದರೆ ಎಷ್ಟು ಬಗೆಯ ಯಂತ್ರಗಳು ಅದೆಷ್ಟು ರಸಗಳನ್ನು ಮಿಶ್ರಮಾಡಿ, ಎಷ್ಟು ಆದಿಭೂತಗಳಿಂದ ಪರಿಪಾಕ ಹೊಂದಿ, ಅವನಲ್ಲಿ ಸೇರಿ ಅವನನ್ನು ಸಿದ್ಧಮಾಡಿವೆ.

ವಿವರಣೆ: ನಮ್ಮ ಭಾರತೀಯ ಪರಂಪರೆಯಲ್ಲಿ ಎಂಭತ್ನಾಲ್ಕು ಲಕ್ಷ ಜೀವರಾಶಿಗಳಿವೆ ಎಂದು ನಂಬುತ್ತೇವೆ. ಅವೆಷ್ಟು ಜೀವಗಳು! ವಿಜ್ಞಾನಿಗಳು ಹೇಳುವ ಹಾಗೆ ಭೂಮಿಯಲ್ಲಿ ಜೀವ ಉಗಮಿಸಿದ್ದು ನಾಲ್ಕು ಬಿಲಿಯನ್ ವರ್ಷಗಳ ಹಿಂದೆ! ಅದಕ್ಕಿಂತ ಎಷ್ಟೋ ಕೋಟಿ, ಕೋಟಿ ವರ್ಷಗಳ ಮೊದಲು ಭೂಮಿಯ ಸೃಷ್ಟಿಯಾಯಿತು. ಆಗ ಬೃಹತ್ ಆಕಾಶಕಾಯಗಳು ಒಂದಕ್ಕೊಂದು ಅಪ್ಪಳಿಸುತ್ತಿದ್ದವು. ಹೀಗೆ ಅನೇಕ ಆಕಾಶಕಾಯಗಳು ಭೂಮಿಯನ್ನು ಅಪ್ಪಳಿಸಿದಾಗ ಭಾರಿ ಪ್ರಮಾಣದ ಕುಳಿಗಳಾದವು. ಅವುಗಳಲ್ಲಿ ನೀರು ನಿಂತಿತು. ಅಲ್ಲಿ ಜೀವದ ಉಗಮಕ್ಕೆ ಬೇಕಾದ ರಾಸಾಯನಿಕ ವಸ್ತುಗಳಿದ್ದುವಂತೆ. ಈ ರಾಸಾಯನಿಕ ವಸ್ತುಗಳೇ ಜೀವದ ಉಗಮಕ್ಕೆ ಕಾರಣವಾದವು.

ಜೀವಂತ ವಸ್ತುವಿನ ವೈಜ್ಞಾನಿಕ ಅಧ್ಯಯನವೇ ಜೀವವಿಜ್ಞಾನ. ಜೀವಸೃಷ್ಟಿ ಎಂಬ ಕೌತುಕದ ಬಗ್ಗೆ ಜೀವರಸಾಯನ ವಿಜ್ಞಾನಿಗಳು ಸಂಶೋಧನೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಎಲ್ಲ ಜೀವಂತವಸ್ತುಗಳೂ ತೀರ ಪುಟ್ಟ ಪುಟ್ಟ ಕೋಶಗಳೆಂಬ ಘಟಕಗಳಿಂದ ರಚಿತವಾಗಿವೆ. ಒಂದೊಂದು ಕೋಶವೂ ಒಂದು ಸಂಕೀರ್ಣವಾದ ರಾಸಾಯನಿಕ ಕಾರ್ಖಾನೆ. ಅಲ್ಲಿ ನಡೆಯುವ, ನಡೆದ ರಾಸಾಯನಿಕ ಕ್ರಿಯೆಗಳನ್ನು ಗುರುತಿಸಲು, ಇಂದಿಗೂ, ಅತ್ಯಂತ ಮುಂದುವರೆದ ವಿಜ್ಞಾನಕ್ಕೂ ಸಾಧ್ಯವಾಗಿಲ್ಲ.

ಅದೆಷ್ಟು ರಸಗಳು ಮಿಶ್ರವಾದುವೋ, ಅದೆಷ್ಟು ನೈಸರ್ಗಿಕ ಆದಿಭೂತಗಳು ಅದರ ಬೆಳವಣಿಗೆಗೆ ಕಾರಣವಾದುವೋ ತಿಳಿಯಲಸಾಧ್ಯ. ಹಾಗೆ ಸೃಷ್ಟಿಯಾದ ಜೀವ, ಶತಶತಮಾನಗಳ ಹಂತದಲ್ಲಿ ನಿಧಾನಕ್ಕೆ ಬದಲಾಗುತ್ತ, ಹೆಚ್ಚು ಪೂರ್ಣವಾಗುತ್ತ ಬೆಳೆಯಿತು. ಈ ವಿಕಾಸವಂತೂ ಎಂದಿಗೂ ಚರ್ಚಿಸಿ ಮುಗಿಯದ ಸರಕು. ಈ ಜೀವವಿಕಾಸದ ಇಂದಿನ ಕೊನೆಯ ಹಂತ ಮನುಷ್ಯ. ಬಿಲಿಯಾಂತರ ವರ್ಷಗಳ ಕಾಲ ಆದ ಬದಲಾವಣೆ, ರಾಸಾಯನಿಕ ಕ್ರಿಯೆಗಳು, ಆದಿಭೂತಗಳ ಪರಿಣಾಮ, ಇವೆಲ್ಲ ಸೇರಿ ಮನುಷ್ಯ ಇಂದು ಜೀವಸೃಷ್ಟಿಯ ಶಿಖರವಾಗಿ ನಿಂತಿದ್ದಾನೆ.

ಇಷ್ಟಾದರೂ ಅವನ ದೇಹರಚನೆ ಸರಿಯಾಗಿ ಅರ್ಥವಾಗಿದೆಯೇ? ಇಷ್ಟು ಮುಂದುವರೆದ ಜೀವಶಾಸ್ತ್ರಕ್ಕೆ ಒಂದು ಹನಿ ರಕ್ತ, ಒಂದು ಹನಿ ವೀರ್ಯವನ್ನು ಪ್ರಯೋಗ ಶಾಲೆಗಳಲ್ಲಿ ಸೃಷ್ಟಿಸಲು ಆಗಿಲ್ಲ. ಅದನ್ನು ದೇಹ ಸುಲಭವಾಗಿ, ಅಪ್ರಯತ್ನವಾಗಿ ಮಾಡುತ್ತದೆ. ದೇಹಶಾಸ್ತ್ರಜ್ಞರು ಹೇಳುವಂತೆ, ಮನುಷ್ಯ ದೇಹದಲ್ಲಿ ಆಗುವ ಪ್ರಕ್ರಿಯೆಗಳನ್ನು, ವಿವಿಧ ಅಂಗಾಗಗಳು ಪರಸ್ಪರ ಸಂಯೋಜಿಸಿ ಮಾಡುವ ಕಾರ್ಯಗಳನ್ನು ಪ್ರತಿಶತ ಐವತ್ತರಷ್ಟೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟು ಸಂಕೀರ್ಣವಾದದ್ದು ಮನುಷ್ಯ ದೇಹ. ಅದಕ್ಕೆ ಕಗ್ಗ ಇದನ್ನು ಸೃಷ್ಟಿಶೈಲದ ಶಿಖರ ಎನ್ನುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT