ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ದೈವದ ಮೋಸದಾಟ

Last Updated 19 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು |
ಘಾಸಿ ನೀಂಬಿಡುತ ಬಾಯ್ಬಿಡಲೋರೆ ನೋಡಿ ||
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ |
ಮೋಸದಾಟವೊ ದೈವ – ಮಂಕುತಿಮ್ಮ || 356 ||

ಪದ-ಅರ್ಥ: ತನ್ನೆಡೆಗೆಳೆದು=ತನ್ನೆಡೆಗೆ+
ಎಳೆದು, ಬಾಯ್ಬಿಡಲೋರೆ=ಬಾಯ್ಬಿಡಲು(ಬಾಯಿ ಬಿಡಲು)+ಓರೆ, ಕಾಲನೆಡವಿಸಿ=ಕಾಲನು+
ಎಡವಿಸಿ.

ವಾಚ್ಯಾರ್ಥ: ಆಸೆಯ ಬಲೆಯನ್ನು ಹರಡಿ, ಮನುಷ್ಯನನ್ನು ತನ್ನೆಡೆಗೆ ಸೆಳೆದುಕೊಂಡು, ಅವನನ್ನು ಹೈರಾಣ ಮಾಡಿ, ಆತ ಬಾಯಿಬಿಟ್ಟಾಗ ಅವನೆಡೆಗೆ ಓರೆನೋಟ ನೋಡಿ, ಸಮಾಧಾನ ಮಾಡುವಂತೆ ಮೈಸವರಿ, ಅದೇ ಕಾಲಕ್ಕೆ ಅವನ ಕಾಲು ಎಡವುವಂತೆ ಮಾಡಿ, ಗುಟ್ಟಿನಲ್ಲಿ ನಕ್ಕು, ಸಂತೋಷಪಡುವ ಮೋಸದಾಟ ದೈವದ್ದು.

ವಿವರಣೆ: ಇದು ದೈವದ ಶಕ್ತಿಯನ್ನು, ಅದರ ಅಪರಿಹಾರ್ಯತೆಯನ್ನು ತಿಳಿಸುವ ಮತ್ತೊಂದು ಚೌಪದಿ. ದೈವದ ಮೋಸದಾಟಕ್ಕೆ, ಆಸೆ, ಕಣ್ಣ ಮುಂದೆ ಬರುವ ಆಕರ್ಷಕವಾದ ಗಜ್ಜರಿ ಇದ್ದಂತೆ. ಆಸೆಯ ಸೆಳೆತಕ್ಕೆ ಸಿಕ್ಕವನು ಪಡಬಾರದ ಪಾಡನ್ನು ಪಡುತ್ತಾನೆ. ಆಸೆಗೆ ಸಿಲುಕದಿದ್ದವನು ದೈವದ ಆಟಕ್ಕೆ ಸಿಕ್ಕಿ ಹಾಕಿಕೊಳ್ಳಲಾರ. ಅದಕ್ಕೆಂದೇ ಬುದ್ಧ ಸಾರಿದ, ‘ಆಸೆಯೇ ದುಃಖಕ್ಕೆ ಮೂಲ ಕಾರಣ’. ದೈವ ತಾನಾಗಿಯೇ ನಮ್ಮನ್ನು ಮೋಸಗೊಳಿಸುವುದಿಲ್ಲ. ನಾವೇ ಆಸೆಯ ಬಲೆಗೆ ಸಿಲುಕಿ ಒದ್ದಾಡಿ ದೈವವನ್ನು ಆಕ್ಷೇಪಿಸುತ್ತೇವೆ. ಈ ಆಸೆಯ ಮಾಯೆಯನ್ನು ದಾಟುವುದು ಬಹಳ ಕಷ್ಟ.

ಕನ್ನಡದ ಮಹಾಕವಿ ಜನ್ನನ ‘ಯಶೋಧರ ಚರಿತ’ ಮಹಾಕಾವ್ಯದಲ್ಲಿ ಬರುವ ಅಮೃತಮತಿ ಮತ್ತು ಅಷ್ಟಾವಕ್ರರ ಪ್ರಣಯ ಪ್ರಸಂಗ, ಆಸೆ ಎಂಥ ಪಾಪಕಾರ್ಯಗಳನ್ನು ಮಾಡಿಸಿ ನರಳಿಸುತ್ತದೆ ಎಂಬುದನ್ನು ತೋರುತ್ತದೆ. ಯಶೋಧರ ಸದ್ಗುಣಿ ರಾಜ. ಅಮೃತಮತಿ ಅವನ ಹೆಂಡತಿ, ಅಪರೂಪದ ಸುಂದರಿ. ತನ್ನನ್ನು ಅಷ್ಟು ಪ್ರೀತಿಸುವ ಗಂಡನನ್ನು ಮರೆತು, ಗೂನಿ, ಕುರೂಪಿಯಾದ, ಅಷ್ಟಾವಕ್ರನೆಂಬ ಮಾವುತನ ಮೋಹಕ್ಕೆ ಬೀಳುತ್ತಾಳೆ. ಅವನೋ ಮಹಾಕ್ರೂರಿ, ಒರಟ. ರಾತ್ರಿ ಪಾನಮತ್ತನಾಗಿ ಹಾಡುವ ಅಷ್ಟಾವಕ್ರನನ್ನು ಸೇರಲು, ರಾಜನನ್ನು ವಂಚಿಸಿ, ಅವನ ಗುಡಿಸಲಿಗೆ ಹೋಗತೊಡಗುತ್ತಾಳೆ. ಒಂದು ದಿನ ರಾಜ ಸಂಶಯದಿಂದ ಅವಳ ಬೆನ್ನಟ್ಟಿ ಹೋಗುತ್ತಾನೆ. ಕುಡಿದು ಉನ್ನತ್ತನಾದ ಅಷ್ಟಾವಕ್ರ, ರಾಣಿ ತಡವಾಗಿ ಬಂದಳೆಂದು ಕಾಲಿನಿಂದ ಒದ್ದು, ಹಿಂಸೆ ಕೊಡುತ್ತಾನೆ, ಬಾಯಿಗೆ ಬಂದಂತೆ ತೆಗಳುತ್ತಾನೆ. ಅಮೃತಮತಿ ಅವನನ್ನು ಓಲೈಸಲು ಹೆಣಗುತ್ತಾಳೆ. ಇದೇನು ಕರ್ಮ? ರಾಣಿಯಾಗಿ, ತನ್ನನ್ನು ಅತ್ಯಂತ ಪ್ರೀತಿಸುವ ಗಂಡನ ಪ್ರೇಮವನ್ನು ಮರೆತು ಅಂಥ ನೀಚನೊಡನೆ ಹೋಗಿ ಒದ್ದಾಡುವುದು ದೈವವೆ? ಮೂರ್ಖತನವೆ? ಆಕಸ್ಮಿಕದ ಸೆಳೆತವೆ?

ಕಗ್ಗ ಅದನ್ನು ದೈವದ ರೂಪದಲ್ಲಿ ಕಾಣುತ್ತದೆ. ಯಾವ ಕ್ಷಣದಲ್ಲಿ. ಯಾವ ರೂಪದಿಂದ ಆಸೆ ನಮ್ಮನ್ನು ಸೆಳೆದೀತು ಎಂಬುದನ್ನು ಹೇಳುವುದು ಕಷ್ಟ. ಅದರ ಬಲೆಗೆ ಬಿದ್ದ ಮನುಷ್ಯ ಕೆಸರಿನ ಹೊಂಡಕ್ಕೆ ಸಿಕ್ಕ ಪ್ರಾಣಿಯ ಹಾಗೆ ಒಳಗೊಳಗೇ ಸೇರುತ್ತ ಹೋಗುತ್ತಾನೆ. ಅವನ ಕಷ್ಟವನ್ನು, ಮೂರ್ಖತನವನ್ನು ಕಂಡು ದೈವ ನಗುತ್ತದೆ. ಸಂಕಟಪಡುವ ಮನುಷ್ಯನಿಗೆ ಅದು ಮೋಸದಾಟ ಎನ್ನಿಸುತ್ತದೆ. ಆದರೆ ನೈಜವಾಗಿ ಅದು ಅವನು ಆಸೆಗೆ ಬಲಿಯಾಗಿ ಪಡೆದ ಶಿಕ್ಷೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT