ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಮಾಗಿದಂತೆ ದೈವಕೃಪೆ

Last Updated 24 ನವೆಂಬರ್ 2021, 20:56 IST
ಅಕ್ಷರ ಗಾತ್ರ

ದೈವಕೃಪೆಯೆನುವುದೇಂ? ಪರಸತ್ತ್ವನವವೃಷ್ಟಿ|
ಜೀವಗುಣ ಪಕ್ವಪಟ್ಟಂತದರ ವೇಗ||
ಭಾವ ಚೋದನೆಗಳಲಿ ಬಾಹ್ಯಸಾಧನೆಗಳಲಿ|
ತೀವಿ ದೊರೆಕೊಳುವುದದು – ಮಂಕುತಿಮ್ಮ ||505||

ಪದ-ಅರ್ಥ: ದೈವಕೃಪೆಯೆನುವುದೇಂ=ದೈವಕೃಪೆ+ ಎನುವುದು (ಎನ್ನುವುದು)+ ಏಂ (ಏನು), ಪರಸತ್ವನವವೃಷ್ಟಿ= ಪರಸತ್ವ+ ನವವೃಷ್ಟಿ (ನಿತ್ಯ ನೂತನವಾದ
ಕೃಪಾವರ್ಷ), ಪಕ್ವಪಟ್ಟಂತದರ= ಪಕ್ವಪಟ್ಟಂತೆ (ಪಕ್ವವಾದಂತೆ)+ ಅದರ, ಚೋದನೆ= ಪ್ರೇರಣೆ, ತೀವಿ= ತುಂಬಿ

ವಾಚ್ಯಾರ್ಥ:ದೈವಕೃಪೆಎಂಬುದು ಏನು? ಅದು ದೈವ ಸದಾಕಾಲ ಹೊಸಹೊಸತಾಗಿ ಸುರಿಸುವ ಕೃಪಾ ವರ್ಷ. ಜೀವಿಯ ಗುಣ ಪಕ್ವವಾದಂತೆ ಕೃಪೆಯ ತೀವ್ರತೆ. ಅದು ವ್ಯಕ್ತಿಯನ್ನು ಭಾವಪ್ರಕಾಶದಲ್ಲಿ, ಲೋಕಸಾಧನೆಗಳಲ್ಲಿ ಮೈತುಂಬಿ ಬೆಳೆಸುತ್ತದೆ.

ವಿವರಣೆ: ಗುರುದೇವ ರವೀಂದ್ರನಾಥ ಠಾಕೂರರ ತಂದೆ ದೇವೇಂದ್ರನಾಥ್ ಠಾಕೂರರು ತತ್ವಜ್ಞಾನಿಯಾಗಿದ್ದವರು. ಒಂದು ದಿನ ಅವರ ಸ್ನೇಹಿತರು ರವೀಂದ್ರನಾಥರ ಮನೆಗೆ ಬಂದರು. ಬಾಗಿಲನ್ನು ತೆಗೆದು ಹೊರಬಂದ ರವೀಂದ್ರನಾಥರನ್ನೇ ದಿಟ್ಟಿಸಿ ನೋಡಿ, ‘ನೀವು ಭಗವಂತನ ಬಗ್ಗೆ, ಅವನ ಕೃಪೆಯ ಬಗ್ಗೆ ಮಾತನಾಡುತ್ತೀರಿ. ಅದಕ್ಕೇ ನಿಮ್ಮನ್ನು ನೋಡಲು ಬಂದೆ. ಈಗ ನಿಮ್ಮ ಕಣ್ಣುಗಳನ್ನು ನೋಡಿದರೆ ನಿಮಗೆ ಭಗವಂತನ ದರ್ಶನವಾದಂತಿಲ್ಲ. ಅದಕ್ಕೆ ನಿಜವಾಗಿಯೂ ಪ್ರಯತ್ನ ಮಾಡಿ’ ಎಂದು ಹೇಳಿ ಹೊರಟು ಹೋದರು. ರವೀಂದ್ರರಿಗೆ ಈ ವಿಚಾರ ಕೊರೆಯತೊಡಗಿತು. ಮರುದಿನ ಬೆಳಿಗ್ಗೆ ವಾಯುವಿಹಾರಕ್ಕೆ ಕೊಳದ ಕಡೆಗೆ ಹೊರಟರು. ಹಿಂದಿನ ರಾತ್ರಿ ಚೆನ್ನಾಗಿ ಮಳೆಯಾಗಿದೆ. ರಸ್ತೆಯಲ್ಲಿದ್ದ ಪುಟ್ಟ ಪುಟ್ಟ ಹೊಂಡಗಳಲ್ಲಿ ನೀರು ತುಂಬಿದೆ. ಆ ಕ್ಷಣ ಸೂರ್ಯ ಮೇಲೆ ಬಂದ. ಅವನ ಕಿರಣಗಳು ಪ್ರತಿಯೊಂದು ಹೊಂಡದ ನೀರಿನಲ್ಲಿ ಪ್ರತಿಫಲಿಸಿ, ಫಳ್ಳನೆ ಹೊಳೆದವು. ರವೀಂದ್ರರಿಗೆ ಕಂಡದ್ದು ನೂರಾರು ಸೂರ್ಯಬಿಂಬಗಳು! ಇದ್ದದ್ದು ಒಬ್ಬ ಸೂರ್ಯ, ಕಂಡದ್ದು ನೂರಾರು. ಆ ಕ್ಷಣದಲ್ಲೇ ಅವರಿಗೆ ಈಶಾವಾಸ್ಯದ ಮಾತು, ‘ಈಶಾವಾಸ್ಯಮಿದಗಂ ಸರ್ವಂ’ ಎಂಬುದು ಹೊಳೆಯಿತು!

ಒಬ್ಬ ಭಗವಂತ ಎಲ್ಲರ ಹೃದಯಗಳಲ್ಲಿ ಮಿಡಿಯುತ್ತಾನೆ ಎಂಬುದು ತಿಳಿದು ಮನಸ್ಸು ಅವರ್ಣನೀಯವಾದ ಶಾಂತಿಯನ್ನು ಪಡೆಯಿತು. ಇವರೇ ಮರುದಿನ ತಂದೆಯ ಸ್ನೇಹಿತರ ಮನೆಗೆ ಹೋದಾಗ ಅವರು ಇವರನ್ನು ನೋಡಿ, ‘ಹೌದು, ಈಗ ನಿಮಗೆ ದರ್ಶನವಾಗಿದೆ’ ಎಂದರಂತೆ! ಅದಕ್ಕೇ ಗುರುದೇವ ಹೇಳುತ್ತಾರೆ, ‘ನಮ್ಮ ಮನಸ್ಸು ಪಕ್ವವಾಗಿ, ಸಿದ್ಧವಾಗಿದ್ದಾಗ ಭಗವಂತನ ಕರುಣೆ ಹರಿದು ಬರುತ್ತದೆ’ ಹಾಗಾಗಿಯೇ ತಮ್ಮ ಗೀತಾಂಜಲಿಯಲ್ಲಿ, ‘ಭಗವಂತ, ನನ್ನ ಬದುಕಿನ ವೀಣೆಯ ತಂತಿಗಳನ್ನು ಹದಗೊಳಿಸಿ ಇಟ್ಟಿದ್ದೇನೆ. ನಿನ್ನ ಕೃಪೆಯ ತಂಗಾಳಿಯಿಂದ ಅವುಗಳನ್ನು ಕದಲಿಸಿ ಅಮೃತೋಪಮವಾದ ಸಂಗೀತವನ್ನು ಹೊರಡಿಸು’ ಎನ್ನುತ್ತಾರೆ. ಹಾಗೆಂದರೆ, ನಮ್ಮ ಬದುಕು ಹದಗೊಂಡಷ್ಟು, ಪಾಕಗೊಂಡಷ್ಟು ಭಗವಂತನ ಕೃಪೆ ಇಳಿದುಬರುತ್ತದೆ. ಪಾತ್ರೆ ಶುದ್ಧವಾಗಿದ್ದರೆ ಒಳ್ಳೆಯ ವಸ್ತುವನ್ನು ಹಿಡಿದೀತು. ಕಗ್ಗ ಅದನ್ನು ಸುಂದರವಾಗಿ ವರ್ಣಿಸುತ್ತದೆ.ದೈವಕೃಪೆಎನ್ನುವುದು, ಪರಸತ್ವ ಸದಾಕಾಲ, ನಿತ್ಯ ನೂತನವಾಗಿ ಸುರಿಸುವ ಕೃಪಾಧಾರೆ. ಆ ಧಾರೆ ನಮ್ಮೆಡೆಗೆ ಹರಿದು ಬರುವ ವೇಗ ನಮ್ಮ ಬದುಕು ಪಕ್ವವಾದಂತೆ ಹೆಚ್ಚಾಗುತ್ತದೆ. ಬದುಕು ಹೆಚ್ಚು ಪರಿಶುದ್ಧವಾದಂತೆ, ಆ ದೈವ ಕೃಪೆ ನಮ್ಮ ಭಾವಚರ್ಯೆಗಳಲ್ಲಿ, ಬಾಹ್ಯ-ಚರ್ಯೆಗಳಲ್ಲಿ ತುಂಬಿಕೊಂಡು ಬೆಳೆಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT