ಸೋಮವಾರ, ಏಪ್ರಿಲ್ 6, 2020
19 °C

ಉಲ್ಲಾಸದ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಒಲ್ಲೆನೆನದಿರು ಬಾಳನ್, ಬಲವದೇನೆನ್ನದಿರು |
ಉಲ್ಲಾಸಕೆಡೆಮಾಡು ನಿನ್ನಿನಾದನಿತು ||
ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ |
ಎಲ್ಲಕಂ ಸಿದ್ಧನಿರು – ಮಂಕುತಿಮ್ಮ || 258 |

ಪದ-ಅರ್ಥ: ಒಲ್ಲೆನೆನದಿರು=ಒಲ್ಲೆನು+ಎನದಿರು, ಒಲವದೇನೆನ್ನದಿರು=ಒಲವು+ಅದೇನು+ಎನ್ನದಿರು, ನಿನ್ನಿನಾದನಿತು=ನಿನ್ನಿಂ(ನಿನ್ನಿಂದ)+ಆದನಿತು(ಆದಷ್ಟು)

ವಾಚ್ಯಾರ್ಥ: ಬಾಳನ್ನು ಬೇಡವೆನ್ನದಿರು, ಪ್ರೀತಿ, ಒಲವುಗಳನ್ನು ನಿರಾಕರಿಸಬೇಡ. ಬದುಕಿನಲ್ಲಿ ಉಲ್ಲಾಸವನ್ನು ತುಂಬಿಕೊ. ನಿನ್ನಿಂದ ಆದಮಟ್ಟಿಗೆ, ಎದೆಯನ್ನು ಗಟ್ಟಿಮಾಡಿಕೊಂಡು ಅನ್ಯಾಯಗಳನ್ನು ಎದುರಿಸು. ಎಲ್ಲದಕ್ಕೂ ಸಿದ್ಧನಿರು.

ವಿವರಣೆ: ನಮಗೆ ಈ ಮನುಷ್ಯ ಬದುಕು ಬಂದಿದ್ದು ಸುಲಭವಾಗಿಯೇನಲ್ಲ. ಮಿಲಿಯಾಂತರ ವರ್ಷಗಳ ಹಿಂದೆ ಏಕಾಣು ಜೀವಿಯಾದದ್ದು ಬದಲಾಗುತ್ತ ಈ ರೂಪಕ್ಕೆ ಬಂದಿದ್ದು ಒಂದು ವಿಸ್ಮಯ. ಅದಲ್ಲದೆ ಈ ಜೀವ ಹುಟ್ಟಿಬರಬೇಕಾದರೆ ಅದೆಷ್ಟು ಸಿದ್ಧತೆಗಳನ್ನು ಪ್ರಕೃತಿ ಮಾಡಿಕೊಳ್ಳುತ್ತದೆ! ಯಾವ ಯಾವುದೋ ರಸಧಾತುಗಳು ಮನುಷ್ಯ ದೇಹದಲ್ಲಿ ಸೇರಿಕೊಂಡು, ಯಾವ ಯಾವುದೋ ಪ್ರಚೋದನೆಗಳನ್ನು ನೀಡಿದಾಗ ಜೀವವೆಂಬ ವಸ್ತು ಹುಟ್ಟುತ್ತದೆ. ಅಂಥ ವಿಶೇಷವಾದ ಬದುಕನ್ನು ಬೇಡವೆನ್ನುವುದು, ಉದಾಸೀನ ಮಾಡುವುದು ಬುದ್ಧಿವಂತಿಕೆಯ ಲಕ್ಷಣವಲ್ಲ ಮತ್ತು ಇದು ಸೃಷ್ಟಿಕರ್ತನಿಗೆ ಮಾಡುವ ಅಪಚಾರ.

ಈ ಮನುಷ್ಯ ಬದುಕಿನ ಮೂಲಸಾಮಗ್ರಿ, ತಳಹದಿಯೇ ಪ್ರೇಮ, ಪ್ರೀತಿ. ಅವಿಲ್ಲದ ಬದುಕು ಅರ್ಥಹೀನ. ಪ್ರೀತಿಯ, ಒಲವಿನ ಸಂಬಂಧಗಳಿಲ್ಲದಿದ್ದರೆ ಕುಟುಂಬ ವ್ಯವಸ್ಥೆ, ರಾಜ್ಯ, ರಾಷ್ಟ್ರ ವ್ಯವಸ್ಥೆಗಳಿರುವುದು ಸಾಧ್ಯವೇ? ಪ್ರೀತಿ, ಸಂತೋಷಗಳು ಬದುಕಿನಲ್ಲಿ ಬರಬೇಕಾದರೆ ಮನಸ್ಸಿನಲ್ಲಿ ಸದಾ ಉಲ್ಲಾಸವಿರಬೇಕು. ಜೀವನದಲ್ಲಿ ಕಷ್ಟ ನಿಷ್ಠುರಗಳನ್ನು ಅನುಭವಿಸುವ ಜನಕ್ಕೆ ವೈರಾಗ್ಯ ಪ್ರಚಾರಕರ ಗೋಳಿನ ರಾಗ ತುಂಬ ಇಷ್ಟವಾದಂತೆ ತೋರುತ್ತದೆ. ದೇಹವೆಂಬುದು ಒಣಕಟ್ಟಿಗೆ, ಅದಕ್ಕೇಕೆ ಅಲಂಕಾರ? ಹೆಂಡತಿ, ಮಕ್ಕಳು ಇವರೆಲ್ಲ ನನ್ನ ಕರ್ಮಕ್ಕೆ ಬಂದವರು, ಅವರಾರೂ ನನ್ನ ಸಂಗಡ ಬರುವವರಲ್ಲ; ಇಡೀ ಸಂಸಾರವೇ ನೀರಮೇಲಿನ ಗುಳ್ಳೆ, ಯಾವುದೂ ಸ್ಥಿರವಲ್ಲ. ಆದ್ದರಿಂದ ಅದನ್ನು ನಂಬಬೇಡ; ಪ್ರಪಂಚವೇ ಮಾಯೆ, ನಮ್ಮ ಕೈಯಲ್ಲಿ ಏನೂ ಇಲ್ಲ; ಎಲ್ಲವೂ ವಿಧಿನಿಯಮವೇ ಆದ್ದರಿಂದ ನಾನೇನು ಮಾಡಿದರೂ ಅದು ವ್ಯರ್ಥಪ್ರಯತ್ನ; ಎಲ್ಲವನ್ನೂ ದೇವರಮೇಲೆ ಹಾಕಿ ಸುಮ್ಮನಿದ್ದರಾಯಿತು. ಹೀಗೆ ನಮ್ಮ ಅಸಹಾಯಕತೆಯ, ನಿರ್ವೀರ್ಯತೆಯ ಪ್ರಲಾಪ ನಡೆದೇ ಇದೆ. ಬಹಳ ಜನರಿಗೆ ಈ ಗೋಳಿನ ರಾಗ ಅತ್ಯಂತ ಪ್ರಿಯವಾದಂತೆ ಕಾಣುತ್ತದೆ. ಅದಕ್ಕೆ ಸಂಭ್ರಮವಾಗಿ ಜೀವಿಸದೆ, ಪೂರ್ತಿಯಾಗಿ ಆತ್ಮಹತ್ಯೆ ಮಾಡಿಕೊಳ್ಳದೆ ಸದಾಕಾಲ, ‘ಯಾಕೆನ್ನ ಈ ರಾಜ್ಯಕೆಳೆತಂದೆ ಹರಿಯೆ?’ ಎಂದು ಅಳುವುದರಲ್ಲೇ ಬದುಕು ಸವೆದು ಹೋಗುತ್ತಿದೆ, ಯಾವ ಸಾಧನೆಗೂ ಪರಿಶ್ರಮಪಡುವ ಮನಸ್ಥಿತಿ ಕಳೆದುಹೋಗುತ್ತಿದೆ. ಅದಕ್ಕೆ ಈ ಕಗ್ಗ ಹೇಳುತ್ತದೆ, ಸಾಕು ಈ ಗೋಳಾಟ, ಬದುಕನ್ನು ಸಂಭ್ರಮಿಸು, ಒಲವನ್ನು ತುಂಬಿಕೋ. ಇಷ್ಟೇ ಅಲ್ಲ ನಿನ್ನ ಶಕ್ತಿ ಇರುವಷ್ಟು ಮಟ್ಟಿಗೆ ಅನ್ಯಾಯಗಳನ್ನು ತೊಡೆದುಹಾಕಲು ಕೆಚ್ಚೆದೆಯಿಂದ ಹೋರಾಡು. ಅದಕ್ಕಾಗಿ ಏನೆಲ್ಲ ಅಡ್ಡ ಬಂದರೂ ಎದುರಿಸುವ ಕೆಚ್ಚೆದೆಯನ್ನು ಪಡೆ.

ಇದೇ ಕಗ್ಗದ ಸಾರ. ಅರಿವಿಲ್ಲದೆ, ನಮ್ಮ ಒಪ್ಪಿಗೆಯಿಲ್ಲದೆ ಈ ಬದುಕಿಗೆ ಬಂದುಬಿಟ್ಟಿದ್ದೇವೆ. ಹುಟ್ಟುವ ಮುಂದೆ ಅದೆಷ್ಟು ದೀರ್ಘಕಾಲ ಗಾಢ ಕತ್ತಲೆಯಲ್ಲಿದ್ದೆವೊ, ಸತ್ತ ಮೇಲೆ ಎಲ್ಲಿಗೆ ಹೋಗುತ್ತೇವೊ, ಎಷ್ಟು ಕಾಲ ಕತ್ತಲೆಯ ವಾಸವೊ ತಿಳಿದಿಲ್ಲ. ಆದರೆ ಈ ಪುಟ್ಟ ಬದುಕೊಂದು ಕೋಲ್ಮಿಂಚು. ಇರುವುದು ಕ್ಷಣಕಾಲವಾದರೂ ಛಕ್ಕನೆ ಮಿಂಚಬೇಕು, ಹೊಳೆಯಬೇಕು, ಆ ಕ್ಷಣವಾದರೂ ಬೆಳಕು ಚೆಲ್ಲಿ ಮರೆಯಾಗಬೇಕು. ಇರುವ ಕೊಂಚಕಾಲವನ್ನು ಅಳುವುದರಲ್ಲೇ, ನರಳುವುದರಲ್ಲೇ ಕಳೆದರೆ ಭಗವಂತ ನೀಡಿದ ಈ ಬದುಕಿನ ಕಾಣಿಕೆ ವ್ಯರ್ಥವಲ್ಲವೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)